ಮಧುಕರ್ ಬಳ್ಕೂರು ಸರಣಿ ಕಥೆ 12- ಆಗ ಸುಡುಗಾಡು ಕ್ರಿಕೆಟ್.. ಈಗ ಸುಡುಗಾಡು ಮೊಬೈಲು…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

12

ಆಗ ಸುಡುಗಾಡು ಕ್ರಿಕೆಟ್… ಈಗ ಸುಡುಗಾಡು ಮೊಬೈಲು.

“ಅದೇನ್ ರೋಗ ಬಂದಿದೆಯೋ ಈ ಮಕ್ಕಳಿಗೆ… ಏನ್ ಕೈಗೆ ಸಿಗುತ್ತೊ ಅದನ್ನ ತಿರುಗಿಸ್ತಾವಪ್ಪ.. ದಿನ ಬೆಳಗಾದರೆ ಬರೀ ಇದೇ ಆಯಿತ್.. ಹೇಳಿದ್ದು ಒಂದ್ ಕೆಲ್ಸಾನೂ ಮಾಡಲ್ಲ. ಸುಡುಗಾಡು ಕ್ರಿಕೆಟ್ ಅಂಬ್ರ್… ಮಕ್ಕಳ್ ಲಗಾಡಿ ತೆಗಿತಿತ್.. ಕ್ರಿಕೆಟ್ ಏನ್ ಊಟ ಹಾಕುತ್ತಾ..? ಅದೊಂದ್ ಇದ್ರೆ ಸಾಕಪ್ಪ ಈ ಮಕ್ಕಳಿಗೆ… ಊಟ ಬ್ಯಾಡ ನಿದ್ರೆ ಬ್ಯಾಡ….”

ಬಹುಶಃ ಕುಂದಾಪುರದ ಪರಿಸರದಲ್ಲಿ ಯಾವುದಾದರೊಂದು ಮನೆಯಲ್ಲಿ ಇಂತಾದ್ದೊಂದು ಡೈಲಾಗ್ ಕೇಳದ ದಿನವೇ ಆಗಿಲ್ಲವೆನೊ. ಈಗಲೂ ಅಷ್ಟೇ. ಅದೇ ಡೈಲಾಗು. ಆದರೆ ಒಂದೇ ಒಂದು ಬದಲಾವಣೆ ಎಂದರೆ ಸುಡುಗಾಡು ಕ್ರಿಕೆಟ್ ಜಾಗದಲ್ಲಿ ಸುಡುಗಾಡು ಮೊಬೈಲು ಬಂದಿದೆ ಅಷ್ಟೇ. ಆಗ ಬ್ಯಾಟ್ ತಿರಿಸಿದಂತೆ ಮಾಡೋದು. ಈಗ ಬೆರಳಲ್ಲಿ ತಿಕ್ಕೊದು ಅಷ್ಟೇ.

ಆದರೆ ಅದೇ ಎಂಭತ್ತು ತೊಂಭತ್ತರ ದಶಕದಲ್ಲಿ ಹುಟ್ಟಿದ ಮಕ್ಕಳು ಅದರಲ್ಲೂ ಹಳ್ಳಿ ಪರಿಸರದಲ್ಲಿ ಹುಟ್ಟಿದ ಮಕ್ಕಳಿಗೆಲ್ಲ ಈ ಮೇಲಿನ ಬೈಗುಳ ಬಹುತೇಕ ಕಾಮನ್ ಆಗಿತ್ತು. ಏಕೆಂದರೆ ಆಗಷ್ಟೇ ದೂರದರ್ಶನ ಲಗ್ಗೆಯಿಟ್ಟಿದ್ದ ಸಮಯವದು. ಭಾನುವಾರಕ್ಕೊಮ್ಮೆ ಬರುವ ಸಿನಿಮಾ ಆಗೀನ ವಿಕೇಂಡ್ ಮಜಾ ಅಂತೆನಿಸಿದರೆ ಯಾವಗಲೊಮ್ಮೆ ಬರುವ ಕ್ರಿಕೆಟ್ ಮ್ಯಾಚ್ ಗಳು ವರುಷಕ್ಕೆ ಬರೋ ಜಾತ್ರೆಯಂತಿರುತ್ತಿದ್ದವು. ಅದರಲ್ಲೂ ನಾಳೆ ಇಂಡಿಯಾ ಆಡೋ ಮ್ಯಾಚ್ ಇದ್ದರಂತೂ ಅದನ್ನು ನೋಡೊದಕ್ಕೆ ಕಾಯುವ ಪ್ರಿಪರೇಷನ್ ಹಲವು ದಿನಗಳ ಹಿಂದೆಯೇ ನಡೆದಿರುತ್ತಿತ್ತು ಎಂದರೆ ನಂಬಲೇಬೇಕು! ನೆಚ್ಚಿನ ಕ್ರಿಕೆಟಿಗರನ್ನು ಟಿವಿ ಸ್ಕ್ರೀನ್ ನಲ್ಲಿ ನೋಡುವ ಕೂತೂಹಲವೊಂದೇ ನಮ್ಮನ್ನು ಹೀಗೆ ತುದಿಯಂಚಲ್ಲಿ ನಿಲ್ಲಿಸಿರುತ್ತಿತ್ತು ಬಿಟ್ಟರೆ ಬೇರೆನಿರಲಿಲ್ಲ.

ಬಹುಶಃ ಇಷ್ಟೇ ಆಗಿದ್ದರೆ ವಿಷಯ ಗಂಭೀರವಾಗುತ್ತಿರಲಿಲ್ಲ. ಆದರೆ ದಿನವೂ ಕ್ರಿಕೆಟ್ ಆಡುತ್ತಿದ್ದೆವಲ್ಲ. ಹಾಗೆ ಆಡೋದಕ್ಕೂ ಒಂದು ಜೋಷ್, ಸ್ಪೂರ್ತಿ ಅಂತ ಬೇಕಾಗಿರುತ್ತಿತ್ತಲ್ಲ. ಹಾಗಾಗೇ ಟಿವಿಯಲ್ಲಿ ಕ್ರಿಕೆಟ್ ನೋಡುವಾಗ ಆಟಗಾರರೆಲ್ಲ ರೋಲ್ ಮಾಡೆಲ್ ಗಳಾಗಿ ಕಾಣೋರು…! ಹಾಗೆನೆ ಅವರು ದೇಶಕ್ಕಾಗಿ ಆಡುತ್ತಿದ್ದಾರೆಂದರೆ ಅವರಂತಹ ಪುಣ್ಯಾತ್ಮರು ಈ ಭೂಮಿ ಮೇಲೆ ಯಾರು ಇಲ್ಲ ಅಂತೆಲ್ಲಾ ಅನಿಸೋದು ! ಇನ್ನು ಅವರನ್ನೆಲ್ಲಾ ಹತ್ತಿರದಿಂದ ನೋಡುವ ಪ್ರೇಕ್ಷಕರನ್ನು ಕಂಡರಂತೂ ಹೊಟ್ಟೆನೆ ಉರಿಯೋದು..! ಏಕೆಂದರೆ ಪ್ಲೇಯರ್ ಗಳು ಶತಕ ಬಾರಿಸಿದಾಗಲೆಲ್ಲ ಅವರನ್ನು ಅಭಿನಂದಿಸೋದಕ್ಕೆ ಅಂತ ಮೈದಾನಕ್ಕೆ ನುಗ್ಗುತ್ತಿದ್ದರು ನೋಡಿ..! ಆಗೆಲ್ಲ ಅವರಷ್ಟು ಅದೃಷ್ಟವಂತರು ಬೇರಾರು ಇಲ್ಲ ಅಂತೆಲ್ಲ ಅನಿಸೋದು! ಇದನ್ನೆಲ್ಲ ನೋಡಿ ಮುಂದೆನಾದ್ರು ಆದ್ರೆ ಕ್ರಿಕೆಟ್ ಪ್ಲೇಯರ್ರೆ ಆಗಬೇಕು ಅಂತೆಲ್ಲ ಮನಸಿಗೆ ಬರೋದು..! ಒಂದು ಕಡೆ ನೇಮು ಫೇಮು… ಇನ್ನೊಂದು ಕಡೆ ದೇಶಕ್ಕಾಗಿ ಆಡೋ ಸೌಭಾಗ್ಯ. ಹೀಗೆ ಈ ಎಲ್ಲಾ ಕಾರಣಗಳಿಂದ ಮ್ಯಾಚ್ ನೋಡಿ ಕ್ರಿಕೆಟಿಗರನ್ನು ಅನುಕರಿಸಿದಂತೆ ಮಾಡುವುದು..!

ಇದ್ಯಾವ ಮಟ್ಟಿಗೆ ಅಂದರೆ ಪ್ಲೇಯರ್ ಗಳು ಮುಖಕ್ಕೆ ಕ್ರೀಮ್ ಹಚ್ಚಿಕೊಳ್ಳುವಂತೆ ನಾವು ಹಚ್ಚಿಕೊಳ್ಳೊದು! ಅವರು ಚೂಯಿಂಗ್ ಗಮ್ ಅಗಿಯುತ್ತಾ ಆಡುವುದನ್ನು ನೋಡಿ ನಾವು ಕೂಡ ಚೂಯಿಂಗ್ ಗಮ್ ಅಗಿಯುತ್ತಾ ಆಡೋದು! ಹಾಗೆ ತಿಂತಾ ಆಡ್ತಿದ್ರೆ ನಮ್ಮ ಲೆವಲ್ಲೆ ಚೇಂಜಾಗಿದೆ ಅಂತಾ ಅನ್ಕೊಳ್ಳೋದು! ಬಾಟ್ಸ್ ಮನ್ ಆಡೋಕೆ ಮುಂಚೆ ಕ್ರಿಸ್ ಪರೀಕ್ಷೆ ಮಾಡೋ ಹಾಗೆ, ನಾವು ಏನೋ ದೊಡ್ಡ ಕ್ರಿಸ್ ಪರೀಕ್ಷೆ ಮಾಡೋರ ಹಾಗೆ ಮಾಡೋದು! ಇನ್ನು ಶ್ರೀನಾಥ್ ವಿಕೆಟ್ ಕಿತ್ತಾಗ ಹೇಗೆ ಸಂಭ್ರಮಿಸುತ್ತಾನೋ ಹಾಗೆ ಸಂಭ್ರಮಿಸೋದು..!! ಸಚಿನ್ ಸೆಂಚುರಿ ಹೊಡೆದಾಗಲೆಲ್ಲ ಹೇಗೆ ಬ್ಯಾಟ್ ಎತ್ತಿ ಮೇಲೆ ನೋಡುತ್ತಾನೋ ಹಾಗೆ ನಾವು ಬೌಂಡರಿ ಹೊಡೆದಾಗಲೆಲ್ಲ ಬ್ಯಾಟ್ ಎತ್ತಿ ಮೇಲೆ ನೋಡೋದು.!! ಅಜಯ್ ಜಡೇಜಾನಂತೆ ಡೈವ್ ಹೊಡೆಯಲು ಪ್ರಯತ್ನಿಸುವುದು! ಅಜರುದ್ದೀನ್ ನ ಹಾಗೆ ಕಾಲರ್ ಪಟ್ಟಿನ ಮೇಲಕ್ಕೆ ಬಿಟ್ಟುಕೊಂಡಿರೋದು! ಹೀಗೆ ಹೇಳುತ್ತಾ ಹೋದರೆ ಮೆಚ್ಚಿನ ಕ್ರಿಕೆಟ್ ಪ್ಲೇಯರ್ ಗಳ ಸ್ಟೈಲ್ ಗಳೆಲ್ಲ ನಮ್ಮೊಳಗೆ ಆವಾಹನೆಯಾಗಿರೋದು.!

ಆದರೆ ಇವೆಲ್ಲಾ ಆಟ ಮುಗಿದ ಮೇಲೂ ಗೊತ್ತಿಲ್ಲದೆ ನಡೆಯುತ್ತಿತ್ತು ಎಂಬುದು ವಿಚಿತ್ರದ ಸಂಗತಿಯಾಗಿತ್ತು..! ಅದರಲ್ಲೂ ನನಗಂತೂ ಆ ದಿನ ಆಡಲು ಸಿಗದಿದ್ದರೆ ಕೈಗೆ ಸಿಕ್ಕಿದ ಏನೋ ಒಂದರಲ್ಲಿ ನಾಲ್ಕು ಸಲ ಹಂಗಿಂಗೆ ಬ್ಯಾಟ್ ತಿರುಗಿಸಿದಂತೆ ಮಾಡಲೇಬೇಕಿತ್ತು..! ಇಲ್ಲದಿದ್ದರೆ ಅದೆನೋ ಕಳೆದುಕೊಂಡ ಫೀಲ್ ಕಾಡುತ್ತಿತ್ತು! ತೀರಾ ಅವರ ಹಾಗೆಲ್ಲ ದೊಡ್ಡ ಪ್ಲೇಯರ್ ಆಗ್ತೆನೆ ಅನ್ನೊ ಭ್ರಮೆ ಇಲ್ಲದಿದ್ದರೂ ಅವರು ಹೊಡೆಯುವ ಎಲ್ಲಾ ಶಾಟ್ಸ್ ಗಳನ್ನು ಹೊಡೆಯುವ ಪ್ರಯತ್ನ ಮಾಡಬೇಕು ಎನ್ನುವುದು ನನ್ನ ಸಂಕಲ್ಪವಾಗಿತ್ತು. ಇನ್ನು ನಾವಾಡುವ ಮೈದಾನವನ್ನೆ ಇಂಟರ್ ನ್ಯಾಷನಲ್ ರೇಂಜಿಗೆ ಕಲ್ಪಿಸುತ್ತಿದ್ದವನಿಗೆ ಅಲ್ಲಿ ಅವರು ಆಡುವ ಗುಣಮಟ್ಟವನ್ನೆ ನಾವು ಕೂಡ ಅಳವಡಿಸಿಕೊಳ್ಳಬೇಕು ಅನ್ನುವ ಆಲೋಚನೆ ಇತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ ಬ್ಯಾಟಿಂಗ್ ಅಂದರೆ ಸುಮ್ಮನೆ ಹೊಡೆಯೊದಲ್ಲ ಅದೊಂದು ಪ್ರಕಾರದ ಕಲಾವಂತಿಕೆ ಅನ್ನೊದು ನಿಧಾನವಾಗಿ ಅರ್ಥವಾಗತೊಡಗಿತ್ತು.

ಹಾಗಾಗಿ ಕ್ರಿಕೆಟ್ ನೋಡುವಾಗಲೆಲ್ಲ ಆಟಗಾರರ ಬ್ಯಾಟಿಂಗ್ ಅನ್ನ ಡೀಪಾಗಿ ಗಮನಿಸುತ್ತಿದ್ದೆ. ಅದರಲ್ಲೂ ಇಂಡಿಯಾದ ಆಟಗಾರರ ಬ್ಯಾಟಿಂಗ್ ಶೈಲಿಯಂತೂ ಒಬ್ಬೊಬ್ಬರದು ಒಂದೊಂದು ರೀತಿಯಾಗಿದ್ದು ನೋಡೋಕೆ ಹಬ್ಬವಾಗಿರುತ್ತಿತ್ತು. ಬಹುಶಃ ಇಂಡಿಯಾದಷ್ಟು ವೈವಿಧ್ಯಮಯ ಕಲಾತ್ಮಕ ಆಟಾಗಾರರನ್ನು ಬೇರಾವ ದೇಶವೂ ಹೊಂದಿಲ್ಲವೆಂದೆ ಹೇಳಬೇಕು. ಸಚಿನ್, ಸಿಧು, ಗಂಗೂಲಿ, ಅಜರ್, ದ್ರಾವಿಡ್, ಜಡೇಜಾ ಹೀಗೆ ಒಬ್ಬೊಬ್ಬರ ಆಟವನ್ನು ನೋಡೊದೇ ಒಂದೊಂದು ಬಗೆಯ ಸೊಗಸಾಗಿರುತ್ತಿತ್ತು. ಇದೇ ಕಾರಣಕ್ಕೆ ಏನೋ ಟಿವಿಯಲ್ಲಿ ಟೆಸ್ಟ್ ಪಂದ್ಯ ಪ್ರಸಾರವಾಗುತ್ತಿದ್ದರೂ ಗಂಟೆಗಟ್ಟಲೆ ನೋಡುತ್ತಲಿದ್ದೆ. ಎಲ್ಲರಿಗೂ ಟೆಸ್ಟ್ ಮ್ಯಾಚ್ ಬೋರ್ ಹೊಡೆತಿರಬೇಕಾದ್ರೆ ನಾನು ಮಾತ್ರ ಅದರಲ್ಲೆ ತಲ್ಲೀನನಾಗಿರುತ್ತಿದ್ದೆ.

ಕೊನೆಯಲ್ಲಿ ನಮ್ಮ ನೆಚ್ಚಿನ ಆಟಗಾರರ ತರಹ ಅಲ್ಲದಿದ್ದರೂ ಕ್ರಿಕೆಟ್ ನಲ್ಲಿ ಎಷ್ಟು ಪ್ರಕಾರದ ಹೊಡೆತಗಳಿವೆಯೋ ಅಷ್ಟು ಪ್ರಕಾರಗಳನ್ನು ಹೊಡೆಯುವ ಪ್ರಯತ್ನ ಮಾಡುವುದು ಅದನ್ನು ಸಿದ್ದಿಸಿಕೊಳ್ಳುವುದು ನನ್ನ ಇರಾದೆಯಾಗಿತ್ತು. ಈ ಕಾರಣದಿಂದಲೇ ಕೈಗೆ ಸಿಕ್ಕಿದ ಏನನ್ನಾದರೂ ಕವರ್ ಡ್ರೈವ್ ಮಾಡಿದಂತೆ ತಿರುಗಿಸೋದು, ಸ್ಕೈರ್ ಕಟ್ ಹೊಡೆದಂತೆ ಮಾಡೋದು, ಸ್ವೀಪ್ ಮಾಡಿದಂತೆ ಮಾಡೊದೆಲ್ಲ ಆಗಾಗ ನಡೆಯುತ್ತಿತ್ತು. ಇದು ನೋಡುವವರಿಗೆ ವಿಚಿತ್ರವಾಗಿ ಕಂಡರೂ ನನಗೆ ಮಾತ್ರ ಸಿರೀಯಸ್ ವಿಷಯವಾಗಿತ್ತು. ಆದರೆ ಎಷ್ಟೇ ಮೈದಾನದಲ್ಲಿ ಹಾಗೆಲ್ಲ ಆಡಬೇಕೆಂದುಕೊಂಡರೂ ರನ್ ಗಳಿಸುವ ಒತ್ತಡದಲ್ಲಿ ಏನೋ ಒಂದು ಕಣ್ಣು ಮುಚ್ಚಿ ಹೊಡೆದಂತೆ ಮಾಡಿ ಆಟ ಮುಗಿಯುವುದು ಬೇಸರ ತರುತ್ತಿತ್ತು.

ಛೇ.. ನಾನು ಹಾಗೆಲ್ಲ ಆಡಬಾರದಿತ್ತು, ಆ ಬಾಲ್ ಗೆ ಆ ತರಹ ಹೊಡಿಬೇಕಿತ್ತು, ಈ ಬಾಲ್ ಗೆ ಹೀಗೆ ಆಡಬೇಕಿತ್ತು ಅಂತೆಲ್ಲಾ ಆಮೇಲೆ ಅನ್ನಿಸೋದು! ಆದರೆ ಏನ್ಮಾಡೋದು..? ಮನೆಗೆ ಬಂದ್ ಮೇಲೆ ಕೈಗೆ ಏನು ಸಿಕ್ಕತ್ತದೊ ಅದರಲ್ಲಿ ಹೇಗೆಗೆ ಬಾರಿಸಬೇಕೆಂದಿದ್ದೆವೊ ಹಾಗಾಗೆ ಒಂದಷ್ಟು ಬಾರಿಸಿದಂತೆ ಮಾಡಿ ಮುಂದೆ ಆ ತರಾ ಮಾಡಬಾರದು ಅಂತೆಲ್ಲ ಸಂಕಲ್ಪ ಮಾಡಿಕೊಳ್ಳುವುದು…! ಆದರೆ ಹೋಗ್ತಾ ಹೋಗ್ತಾ ಗೊತ್ತಾಗಿದ್ದೆನೆಂದರೆ ನಾವಂದುಕೊಂಡ ರೀತಿಯಲ್ಲಿ ಆಡಬೇಕೆಂದರೆ ಸಮರ್ಥ ಕೋಚ್ ನಿಂದ ಬ್ಯಾಟಿಂಗ್ ಟಿಪ್ಸ್ ಗಳನ್ನು ತಗೊಂಡು ಪ್ರತಿ ನಿತ್ಯ ಪ್ರಾಕ್ಟೀಸ್ ಮಾಡಬೇಕು ಎನ್ನುವುದು. ಆದರೆ ಆಗಿನ ಕಾಲಕ್ಕೆ ಇಷ್ಟು ದೂರಕ್ಕೆ ಯೋಚಿಸೋದು ನನ್ನಂತವನಿಗೆ ಸಾಧ್ಯವಿಲ್ಲದಿದ್ದುದರಿಂದ ಕೈಗೆ ಸಿಕ್ಕಿದ್ದು ತಿರಿಸೋದರಲ್ಲೆ ನನ್ನ ಕತೆ ಮುಗಿದಿರುತ್ತಿತ್ತು.

ಮುಂದೆ ಮನಸಿಗೆ ಬಂದಾಗಲೆಲ್ಲ ಕೈ ತಿರುಗಿಸುದೊಂದು ಚಟವಾಗಿ ಅದೊಂದು ದಿನ ಜಹೀರ್ ಖಾನ್ ತರಹ ಬೌಲ್ ಮಾಡಲು ಹೋಗಿ ಮೇಲಿದ್ದ ಟ್ಯೂಬ್ ಲೈಟ್ ಒಡೆಯುವುದರೊಂದಿಗೆ ಅಮ್ಮನ ಹತ್ರ ಬೈಸಿಕೊಂಡದ್ದು ಆಯಿತು. ಆಗಲೇ ಗೊತ್ತಾಗಿದ್ದು ನಾನು ಲೈಟ್ ಕಂಬದ ತರಹ ಬೆಳೆದಿದ್ದೇನೆ ಎಂದು! ಅಂತೂ ಬಾಲ್ಯದಲ್ಲಿ ಟಿವಿ ನೋಡಿಕೊಂಡು ಶುರುವಾದ ಕೈ ತಿರುಗಿಸುವ ಚಟ ಕೊನೆಗೂ ಮೀಸೆ ಮೂಡುವ ಹೊತ್ತಿಗೆ ಟ್ಯೂಬ್ ಲೈಟ್ ಒಡೆಯುವುದರೊಂದಿಗೆ ಮುಕ್ತಾಯ ಕಂಡಿತು.

ಈ ಮಧ್ಯೆ ಅದೆಷ್ಟು ಬಾರಿ ನಿದ್ದೆ ಕಣ್ಣಲ್ಲಿ ನಡೆದು ಆ ತರಹ ಬ್ಯಾಟ್ ಬೀಸಿದ್ದೇನೋ ಗೊತ್ತಿಲ್ಲ! ಮ್ಯಾಚ್ ನೋಡಿದ ದಿನವಂತೂ ರಾತ್ರಿಯೆಲ್ಲಾ ನಿದ್ದೆಗಣ್ಣಿನಲ್ಲಿ ಕಾಮೆಂಟರಿ ಹೊಡೆಯೋದು ಕೈ ತಿರುಗಿಸಿ ಬೌಲಿಂಗ್ ಮಾಡಿದಂತೆ ಮಾಡೋದೆಲ್ಲ ಮಾಮೂಲಿಯಾಗಿತ್ತು. ಬೆಳಗಾದ ಮೇಲೆ ಈ ವಿಷಯವನ್ನು ಅಕ್ಕನೋ, ಅಣ್ಣನೋ ಹೇಳಿದ ಮೇಲೆನೆ ರಾತ್ರಿಯಲ್ಲಿ ನಾನಾಡಿದ ಆಟಗಳು ಗೊತ್ತಾಗುತ್ತಿತ್ತು. ಬಹುಶಃ ಇದೆಲ್ಲದಕ್ಕೂ ಕಾರಣ, ಯಾವಾಗಲೊಮ್ಮೆ ದೂರದರ್ಶನದಲ್ಲಿ ನೋಡುವ ಮ್ಯಾಚ್ ಗಳು ಹಾಗೂ ಅದನ್ನು ನೋಡಲು ಹಪಾಹಪಿಸುವ ನನ್ನ ಆ ಕಾತರದ ಮನಸ್ಸೆನ್ನಬಹುದು.

ಬಹುಶಃ ಕ್ರಿಕೆಟ್ ಕುರಿತಾಗಿ ಇಷ್ಟೊಂದು ಹಪಾಹಪಿ ಇಟ್ಟುಕೊಂಡು ಫಾಲೋ ಮಾಡುತ್ತಿದ್ದ ಜನರೇಷನ್ ನಮ್ಮದೇ ಇರಬೇಕಾ ಅಂತ ಬಹಳ ಸಲ ಅನ್ನಿಸಿದ್ದಿದೆ. ಕಾರಣ, ಕ್ರಿಕೆಟ್ ಗೆ ಸಂಭಂಧಪಟ್ಟಂತೆ ಮೊದಮೊದಲು ಎನ್ನುವಂತಹ ಸಂಗತಿಗಳಿಗೆ ತೊಂಭತ್ತರ ದಶಕದ ಹುಡುಗರೇ ಹೆಚ್ಚಿಗೆ ಸಾಕ್ಷಿಯಾಗಿದ್ದರಿಂದ ಹೀಗನ್ನಿಸಬಹುದು. ಹೌದು, ಮೊದಮೊದಲ ಸಂಗತಿಗಳು ಯಾವಾಗಲೂ ಪ್ರಿಯವಾಗಿಯೇ ಕಾಡುವುದರಿಂದ ಆ ದಿನಗಳಲ್ಲಿ ಕ್ರಿಕೆಟ್ ಸೇರಿದಂತೆ ಯಾವುದೇ ವಿಷಯಗಳಲ್ಲಿ ಬೇರೆ ಆಯ್ಕೆಗಳಿಲ್ಲದೆ ಇರುವುದರಿಂದ ದೂರದರ್ಶನದಲ್ಲಿ ನೋಡಿದ ಮೊದಮೊದಲ ಅನುಭವಗಳೆ ಹೆಚ್ಚು ಸ್ಮರಣೀಯ ಅನ್ನಿಸಿರಬಹುದು.

ಇನ್ನು ನಮಗೂ ಹಿಂದಿನ ಜನರೇಷನ್ ನವರಿಗೆ ದೂರದರ್ಶನ ನೋಡುವ ಸೌಭಾಗ್ಯವೇ ಬಹಳ ಕಡಿಮೆ ಇದ್ದುದರಿಂದ ಕ್ರಿಕೆಟ್ ಬಗೆಗಿನ ಆ ಮಟ್ಟಿಗಿನ ಏಕ್ಸಾಯಿಟ್ ಮೆಂಟ್ ಇರಲಿಲ್ಲವೆಂದೆ ತಿಳಿಯಬೇಕು. ಆಗೆಲ್ಲ ಹಳ್ಳಿಗಳಲ್ಲಿ ದಿನ ಪತ್ರಿಕೆಗಳನ್ನು ಓದುವವರು, ರೇಡಿಯೋ ಕೇಳುವವರ ಸಂಖ್ಯೆಯೇ ಬಹಳ ಕಡಿಮೆ ಇದ್ದುದರಿಂದ ಕ್ರಿಕೆಟ್ ಕುರಿತಾದ ಕಲ್ಪನೆ, ಕ್ರೇಜ್ ಹುಟ್ಟೋದು ದೂರದ ಮಾತಾಗಿರುತ್ತಿತ್ತು. ಇನ್ನು ಈಗೀನ ಜನರೇಷನ್ ನವರಿಗೆ ಕ್ರಿಕೆಟ್ ಅನ್ನೊದು ಬೇಕೆಂದಾಗಲೆಲ್ಲ ಸಿಗುವ ಸರಕಾಗಿರೊದರಿಂದ ಕ್ರಿಕೆಟ್ ನಲ್ಲಿ ಆ ಮಟ್ಟಿಗಿನ ಏಕ್ಸಾಯಿಟ್ ಮೆಂಟ್ ಇಲ್ಲವೆಂದೆ ತಿಳಿಯಬಹುದು.

ಕ್ರಿಕೆಟ್ ಈಗ ಬರೀ ಕಲಾಪ್ರಕಾರವಾಗಿ ಉಳಿಯದೆ ಒಂದು ಎಂಟರ್ಟೈನ್ಮೆಂಟ್ ಸರಕಾಗಿ ಬದಲಾಗಿರೊದರಿಂದ ಅದನ್ನ ನೋಡುವ ದೃಷ್ಟಿಕೋನ ಅಷ್ಟೇ ಬದಲಾಗಿದೆ ಎನ್ನಬಹುದು. ಈ ಹಿಂದಿನ ಹಾಗೆ ದೂರದರ್ಶನ ಅಂತ ಒಂದೇ ಚಾನಲ್ ಇರದೇ ವಿಪರೀತ ಎನ್ನುವಷ್ಟು ಸ್ಪೋರ್ಟ್ಸ್ ಚಾನಲ್ ಗಳಿರುವುದರಿಂದ ಹಾಗೆಯೇ ಎಲ್ಲರ ಮನೆಯಲ್ಲೂ ಎಲ್ಲರ ಹತ್ರಾನೂ ಟಿವಿ, ಸ್ಮಾರ್ಟ್ ಫೋನ್ ಇರುವುದರಿಂದ, ಯಾರ ಮನೆ ಮುಂದೆ ಕಾಯೋದಾಗಲಿ, ಮನೆಯಲ್ಲೆ ಕ್ರಿಕೆಟ್ ನೋಡುವಾಗ ಯಾರಾದರೂ ಚಾನೆಲ್ ಚೇಂಜ್ ಮಾಡ್ತಾರೆ ಅನ್ನೊ ರಗಳೆಯಾಗಲಿ ಇಲ್ಲವೆನ್ನಬಹುದು. ಕೈಯಲ್ಲೊಂದು ಸ್ಮಾರ್ಟ್ ಫೋನ್ ಅದಕ್ಕೊಂದು ನೆಟ್ ಪ್ಯಾಕ್ ಇದ್ದು ಬಿಟ್ಟರೆ ಕರೆಂಟ್ ಹೋಯಿತು ಎನ್ನುವುದಾಗಲಿ, ಕೆಇಬಿಯವರಿಗೆ ಬೈಯ್ಯುವ ಸೀನಾಗಲಿ ಇಲ್ಲದಿರುವುದರಿಂದ ಸಾಮೂಹಿಕವಾಗಿ ಕ್ರಿಕೆಟ್ ನೋಡುತ್ತಿದ್ದ ಆ ದಿನಗಳ ಫೀಲ್ ಹೊರಟುಹೋಗಿದೆ ಅಂತನ್ನಬಹುದು.

ಇನ್ನು ಗೂಗಲ್ ಗೆ ಅಂತ ಹೋದರೆ ಕ್ರಿಕೆಟ್ ಬಗ್ಗೆ ಬೇಕೆಂದಾಗಲೆಲ್ಲ ಮಾಹಿತಿ ಸಿಗುವುದರಿಂದ, ಮ್ಯಾಚ್ ಬಗ್ಗೆ ಕ್ಷಣಕ್ಷಣಕ್ಕೆ ಅಪ್ಡೇಟ್ ಕೊಡೊದಕ್ಕಂತಾನೆ ಆಪ್ ಗಳಿರೊದರಿಂದ ಮ್ಯಾಚ್ ಮಾರನೇ ದಿನ ಪೇಪರ್ ನೋಡುತ್ತಿದ್ದ ಕೂತೂಹಲದ ದಿನಗಳು ಮರೆಯಾದವು ಅಂತಲೇ ಅನ್ನಬೇಕು. ಇನ್ನು ಯ್ಯೂಟೂಬ್ ನಲ್ಲಂತೂ ಯಾವ ಕಾಲದ ಮ್ಯಾಚ್ ಗಳನ್ನು ಯಾವ ಕ್ಷಣದಲ್ಲಿ ಬೇಕಾದರೂ ನೋಡಬಹುದಾದ್ದರಿಂದ ನೋಡದೆ ಮ್ಯಾಚ್ ಮಿಸ್ ಮಾಡಿಕೊಂಡೆ ಅನ್ನುವ ಆ ಫೀಲಿಂಗ್ ಕಡಿಮೆಯಾಗಿದೆ ಅಂತಲೇ ಅನ್ನಬಹುದು. ಒಟ್ಟಾರೆ ಹೇಳಬೇಕೆಂದರೆ ಕ್ರಿಕೆಟ್ ನೋಡುವ ಆ ಎಮೋಷನ್ ಹೊರಟು ಹೋಗಿ ಅದರಿಂದ ಎಷ್ಟು ವರ್ಕೌಟ್ ಮಾಡಿಕೊಳ್ಳಬಹುದು ಅನ್ನೊ ವಿಚಾರಾನೇ ಮುಖ್ಯವಾಗಿರುವುದರಿಂದ ಅದನ್ನು ನೋಡುವ ಸಂಪೂರ್ಣ ನೆಲೆಗಟ್ಟೆ ಬದಲಾಗಿದೆ ಅಂತಂದುಕೊಳ್ಳಬಹುದು.

ಅಂದು ಇಪ್ಪತ್ತೆರಡು ರೂಪಾಯಿಯ ಟೆನಿಸ್ ಬಾಲ್ ಅನ್ನ ಇಪ್ಪತ್ತೆರಡು ಮಂದಿ ಹುಡುಗರು ಸೇರಿ ತಂದು ಮೈದಾನದಲ್ಲಿ ಆಡುತ್ತಿದ್ದರೆ, ಇಂದು ಅದೇ ಬಾಲ್ ಅನ್ನ ಒಬ್ಬ ತಂದರೂ ಅವನ ಜೊತೆ ಆಡಲಿಕ್ಕೆ ಇಬ್ಬರು ಕೂಡ ಸಿಗದ ಪರಿಸ್ಥಿತಿ ಇದೆ. ಕಾರಣ ಅದೇ ಸುಡುಗಾಡು ಮೊಬೈಲ್. ಈಗ್ ಬಂದೆ, ಇಲ್ಲೆ ಹತ್ತಿರದಲ್ಲಿದೀನಿ, ಯಾರ್ಯಾರು ಬಂದ್ರು, ಇಷ್ಟು ಬೇಗ ಬಂದು ಏನ್ಮಾಡಬೇಕು, ನಂಗೆ ಸ್ವಲ್ಪ ಕೆಲಸ ಇದೆ, ಎಲ್ರೂ ಬಂದ್ ಮೇಲೆ ಕಾಲ್ ಮಾಡು ಬರ್ತಿನಿ ಎಂಬಲ್ಲಿಗೆ ಮೊಬೈಲ್ ನಲ್ಲಿ ಬ್ಯುಸಿ ಆಗಿರುವುದರಿಂದಲೇ ಆ ಬಾಲ್ ತಂದ ಪುಣ್ಯಾತ್ಮನ ಇಂಟರೆಸ್ಟು ಕೂಡ ಅಷ್ಟೇ ಬೇಗ ಟೂಸ್ ಆಗಿರುತ್ತೆ. ಅದೇ ಸೆಲ್ ಫೋನ್ ಇರದ ಆ ದಿನಗಳನ್ನು ನೆನಪಿಸಿಕೊಳ್ಳಿ.

ಆಡುವ ಸಮಯಕ್ಕಿಂತ ಮುಂಚೆನೇ ಬಂದು ನಾ ಮುಂದು ತಾ ಮುಂದು ಅಂತ ಇರುವ ಒಂದು ಬ್ಯಾಟ್ ಗೆ ತಿಣುಕಾಡುತ್ತಿದ್ದ ದಿನಗಳನ್ನು ನೆನೆಸಿಕೊಳ್ಳಿ. ಯಾಕೆ ಹುಡುಗರು ಬ್ಯಾಟ್ ತಿರುಗಿಸಿದ ರೀತಿಯಲ್ಲಿ ಕೈ ತಿರಿಸುತ್ತಾ ಫೀಲ್ ಮಡುತ್ತಿದ್ದರು ಎನ್ನುವುದು ತಿಳಿಯುತ್ತದೆ. ಏಕೆಂದರೆ ಆಗ ಐವತ್ತು ಪೈಸೆನೊ ಒಂದು ರೂಪಾಯಿನೋ ಹಾಕಿ ಎಲ್ಲರೂ ತಂದ ಆ ಬಾಲ್ ಗೆ ಬೆಲೆಯಿತ್ತು. ಬಡಗಿಯವರು ಮಕ್ಕಳು ಆಡಿಕೊಳ್ಳಲಿ ಅಂತ ಪ್ರೀಯಾಗಿ ಮಾಡಿಕೊಟ್ಟ ಆ ಬ್ಯಾಟಿಗೂ ಬೆಲೆ ಇತ್ತು. ಇದ್ದಿದ್ದನ್ನು ಎಲ್ಲರೂ ಹಂಚಿ ಶೇರ್ ಮಾಡಿಕೊಳ್ಳುವ ಸಿಕ್ಕಿದ್ದರಲ್ಲೆ ತೃಪ್ತಿ ಪಡುವ ನಿಷ್ಕಲ್ಮಶ ಮನಸ್ಸುಗಳಿಗೆ ಬೆಲೆ ಕಟ್ಟಲಾರದ ಬೆಲೆ ಇತ್ತು. ಈಗೇನಿದೆ…? ಮೊಬೈಲ್ ಕೈಯಲ್ಲಿದೆ. ಮನಸ್ಸು ಮೊಬೈಲ್ ನಲ್ಲಿದೆ. ಬಾಡಿ ಮಾತ್ರ ಗ್ರೌಂಡ್ ನಲ್ಲಿರುತ್ತೆ ಅಷ್ಟೇ.

| ಇನ್ನು ನಾಳೆಗೆ ।

‍ಲೇಖಕರು Admin

August 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: