ಮಧುಕರ್ ಬಳ್ಕೂರು ಸರಣಿ ಕಥೆ 10 – ತೆಂಡೂಲ್ಕರ್ ರೆಕಾರ್ಡ್ ಗಳಿಗಾಗಿ ಆಡುತ್ತಾರೆ ಅನ್ನೊದಕ್ಕೂ ಮೊದಲು…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

10

ತೆಂಡೂಲ್ಕರ್ ರೆಕಾರ್ಡ್ ಗಳಿಗಾಗಿ ಆಡುತ್ತಾರೆ ಅನ್ನೊದಕ್ಕೂ ಮೊದಲು

ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟಿಂಗ್ ನಿಂತಲೂ ಹೆಚ್ಚಾಗಿ ಬೌಲಿಂಗ್ ನಿಂದಲೇ ನಮ್ಮ ಇಂಡಿಯಾವನ್ನು ಹೆಚ್ಚು ಗೆಲ್ಲಿಸಿರಬಹುದು ಅಲ್ವ” ಹಾಗಂತ ಕಾಲೇಜು ದಿನಗಳಲ್ಲಿ ಸ್ನೇಹಿತನೊಬ್ಬ ಕೊಂಕು ತೆಗೆದಿದ್ದ. ಆಗಿನ್ನೂ ಸಚಿನ್ ಆಡುತ್ತಿದ್ದರು. ಬಹುಶಃ ಯಾಕೆ ಈ ಮಾತು ಬಂತೆಂದರೆ ಸಚಿನ್ ಸೆಂಚುರಿ ಹೊಡೆದಾಗಲೆಲ್ಲ ಇಂಡಿಯಾ ಸೋಲುತ್ತಿತ್ತು ಅನ್ನುವ ಮಾತು ಹಲವೆಡೆ ಚಾಲ್ತಿಯಲ್ಲಿತ್ತು. ಆದರೆ ಅಸಲಿ ವಿಷಯವೆನೆಂದರೆ ಸಚಿನ್ ಕೈಗೆ ಚೆಂಡು ಬಂದಾಗಲೆಲ್ಲ ಅವರು ತಂಡಕ್ಕೆ ಆಪದ್ಬಾಂಧವರಾಗುತ್ತಿದ್ದರು ಎನ್ನುವುದು. ಹೌದು, ಆರಂಭಿಕರಾಗಿ ಕಣಕ್ಕಿಳಿದು ಇನ್ನಿಂಗ್ಸ್ ಶುರು ಮಾಡುವಾಗ ಆಪದ್ಬಾಂಧವನಾಗುವ ಪಾತ್ರ ಕಡಿಮೆ ಇರುತ್ತದೆ ಅಂತಾದರೂ ಅವರು ಆಡಿದ ಮ್ಯಾಚ್ ಗಳಿಗೆ ಹಾಗೂ ಅವರ ಬ್ಯಾಟಿಂಗ್ ರೆಕಾರ್ಡ್ ಗಳ ಲೆಕ್ಕಕ್ಕೆ ಮ್ಯಾಚ್ ಗೆದ್ದದ್ದು ತುಲನೆ ಮಾಡಿದರೆ ಬೌಲಿಂಗ್ ನಲ್ಲೆ ಹೆಚ್ಚು ಆಪದ್ಬಂದಾವನಾಗಿ ಗೆಲ್ಲಿಸಿದ್ದು ಕಾಣುತ್ತದೆ.

ಆಗಿನ್ನೂ ಸಚಿನ್ ಆರಂಭಿಕ ಆಟಗಾರರಾಗಿ ಮಾಸ್ಟರ್ ಬ್ಲಾಸ್ಟರ್ ಅಂತೆಲ್ಲಾ ಅನಿಸಿಕೊಂಡಿರಲಿಲ್ಲ. ಸಚಿನ್ ತೆಂಡೂಲ್ಕರ್ ಅಂದರೆ ಟೀನೇಜ್ ಜೀನಿಯಸ್ ಅಂತಿದ್ದ ಕಾಲವದು. ಅದು ನಮ್ಮೆಲ್ಲರ ಸುಂದರ ಬಾಲ್ಯದ ಸಮಯ. ಅದು ಸಚಿನ್ ಕ್ರಿಕೆಟ್ ದೇವರಾಗಿ ಆಗಿ ಬದಲಾದ ಹೀರೋಕಪ್ ನ ಸಮಯ. ಯಾಕೆ ಹೀರೋ ಕಪ್ ಇಂಡಿಯಾಕ್ಕೆ ಹಾಗೂ ಸಚಿನ್ ಗೆ ಮಹತ್ವದ್ದು ಅಂತಂದರೆ ಆಸ್ಟ್ರೇಲಿಯಾದಲ್ಲಿನ ವರ್ಲ್ಡ್ ಕಪ್ ನ ಹೀನಾಯ ಸೋಲಿನ ನಂತರ ಭಾರತ ಗೆದ್ದ ಬಹುದೊಡ್ಡ ಟೂರ್ನಿ ಇದಾಗಿತ್ತು.

ಬಹುಶಃ ಆ ಟೂರ್ನಿಯ ಒಂದು ಗೆಲುವು ಮುಂದೆ ಹಲವಾರು ಟೂರ್ನಿಯನ್ನು ಗೆಲ್ಲುವುದಕ್ಕೆ ದಿಕ್ಸೂಚಿ ಆಯಿತೆಂದೇ ಹೇಳಬೇಕು. ಇನ್ನು ಅಲ್ಲಿಯವರೆಗೆ ಐದನೇ ಕ್ರಮಾಂಕದಲ್ಲಿ ಆಡುತ್ತಿದ್ದ ಸಚಿನ್ ಈ ಟೂರ್ನಿಯ ನಂತರ ಆರಂಭಿಕ ಆಟಗಾರರಾಗಿ ಬದಲಾಗಿ ಆ ದಿಕ್ಸೂಚಿಗೆ ಕಾರಣರಾದರೆಂದೆ ಹೇಳಬಹುದು. ಹಾಗಂತ ಈ ಟೂರ್ನಿಯಲ್ಲಿನ ಅವರ ಬ್ಯಾಟಿಂಗ್ ಫರ್ ಫಾರ್ಮೆನ್ಸೆ ಭಡ್ತಿಗೆ ಕಾರಣವಾಯಿತು ಅಂತಂದುಕೊಂಡರೆ ತಪ್ಪು. ನಿಜಕ್ಕೂ ಇಡೀ ಸಿರೀಸ್ ನಲ್ಲಿ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ನೀಡದಿದ್ದರೂ, ಸೆಮಿಫೈನಲ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಮಾಡಿದ ಕೊನೆ ಓವರ್ ನ ಪ್ರದರ್ಶನ ಅವರ ವೃತ್ತಿ ಬದುಕಿಗೆ ಮಹತ್ವದ ತಿರುವು ನೀಡಿತೆಂಬುದೆ ಸತ್ಯ.

ನಿಜಕ್ಕೂ ಅವರು ಕಳಪೆಯಾಗಿ ಆಡಿದರು ಅನ್ನುವುದಕ್ಕಿಂತಲೂ ಸಿದ್ದು, ಕಾಂಬ್ಳಿ, ಅಜರ್ ಉತ್ತಮ ಫಾರ್ಮ್ ನಲ್ಲಿದ್ದುದರಿಂದ ಐದನೇ ಕ್ರಮಾಂಕದಲ್ಲಿ ಬರುತ್ತಿದ್ದ ಸಚಿನ್ ಗೆ ಹೆಚ್ಚು ಅವಕಾಶ ಸಿಗಲಿಲ್ಲವೆನ್ನುವುದೇ ಮ್ಯಾಟರ್ ಆಗಿತ್ತು. ಬಹುಶಃ ಈ ವಿಷಯವನ್ನೆ ಸೀರಿಯಸ್ ಆಗಿ ಪರಿಗಣಿಸಿ ಯಾವುದೋ ಒಂದು ರೂಪದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಕಾಯುತ್ತಿದ್ದರೆನೋ ಎಂಬಂತೆ ಸಚಿನ್ ಅಂದು ಅಖಾಡಕ್ಕೆ ಇಳಿದಿದ್ದರು. ಬಹುಶಃ ಅಂದು ಅವರು ಮಾಡಿದ ಕೊನೆಯ ಓವರ್ ನ ಜಾದೂವನ್ನು ಇಂಡಿಯಾದ ಯಾವ ಕ್ರಿಕೆಟ್ ಪ್ರೇಮಿಯೂ ಮರೆಯಲಿಕ್ಕಿಲ್ಲ. 

ಸೌತ್ ಆಫ್ರಿಕಾದವರ ಫೀಲ್ಡಿಂಗ್ ಮುಂದೆ ನಾಲ್ಕು ಮಂದಿ ರನೌಟ್ ಆಗಿಯೇ ಪೆವಿಲಿಯನ್ ಸೇರಿದ್ದ ಭಾರತೀಯರು ಗಳಿಸಿದ್ದು ಕೇವಲ193 ರನ್. ಹೇಗೂ ಸೌತ್ ಆಫ್ರಿಕಾದವರು ಸುಲಭದಲ್ಲಿ ಗೆದ್ದು ಬಿಡುತ್ತಾರೆ ಅಂತ ತಿಳಿದವರಿಗೆ ನಂತರ ಶಾಕ್ ನೀಡಿದ್ದು ಭಾರತೀಯರ ಫೀಲ್ಡಿಂಗ್. ಹೌದು, ಸೌತ್ ಆಫ್ರಿಕಾ ದಂತಹ ಟೀಮಿಗೆನೆ ಯಾರೂ ಊಹಿಸಿರದ ರೀತಿಯಲ್ಲಿ ಫೀಲ್ಡಿಂಗ್, ಬೌಲಿಂಗ್ ಮಾಡಿ ಮ್ಯಾಚ್ ಅನ್ನ ಕೊನೆಯ ಓವರ್ ನವರೆಗೂ ತಂದು ನಿಲ್ಲಿಸಿದ ಭಾರತ, ಕೊನೆಯ ಓವರ್ ಗೆ ಆರು ರನ್ನುಗಳ ಅವಶ್ಯಕತೆಯನ್ನ ಇಟ್ಟಿತ್ತು. ಇನ್ನು ಆ ಕೊನೆಯ ಓವರ್ ಅನ್ನ ಯಾರು ಮಾಡಬಹುದು ಅಂತ ಕೋಟ್ಯಂತರ ಭಾರತೀಯರು ಯೋಚಿಸುತ್ತಿರುವಾಗಲೇ ಕ್ಯಾಪ್ಟನ್ ಅಜರ್ ಸಚಿನ್ ಕೈಗೆ ಬಾಲ್ ಅನ್ನ ಇಟ್ಟಿದ್ದರು. ಕಾರಣ ಸಚಿನ್ ಮೇಲಿದ್ದ ನಂಬಿಕೆ.

ಈ ಹಿಂದೆ ವಿಂಡೀಸ್ ಎದುರಿನ ಲೋ ಸ್ಕೋರಿಂಗ್ ಮ್ಯಾಚ್ ಅನ್ನೇ ಟೈ ಮಾಡಿಸಿದ್ದ ಸಚಿನ್ ಮತ್ತೊಮ್ಮೆ ತನ್ನ ಮೇಲೆ ಇಟ್ಟಿದ್ದ ಭರವಸೆಯನ್ನು ಹುಸಿಯಾಗದಂತೆ ನೋಡಿಕೊಂಡರು. ಸೌತ್ ಆಫ್ರಿಕಾಕ್ಕೆ ಬೇಕಾದ ಆರು ರನ್ನುಗಳಿಗೆನೆ ತಿಣುಕಾಡುವಂತೆ ಮಾಡಿದ ಅವರು ಕೇವಲ ಎರಡು ರನ್ ನೀಡಿ ಮೂರು ರನ್ ಗಳಿಂದ ಇಂಡಿಯಾ ಫೈನಲ್ ಗೆ ಹೋಗುವಂತೆ ಮಾಡಿದರು. ಫೈನಲ್ ನಲ್ಲಿ ಕುಂಬ್ಳೆ ವಿಂಡೀಸ್ ಪಾಳೆಯದ ಹೆಡೆಮುರಿ ಕಟ್ಟುವುದರೊಂದಿಗೆ ಇಂಡಿಯಾ ಇತಿಹಾಸ ನಿರ್ಮಿಸಿತಾದರೂ ಸೆಮಿಫೈನಲ್ ನಲ್ಲಿ ಸಚಿನ್ ಮಾಡಿದ ಬೌಲಿಂಗ್ ಕಮಾಲ್ ಕಪ್ ಗೆಲ್ಲುವುದಕ್ಕೆ ಟರ್ನಿಂಗ್ ಪಾಯಿಂಟ್ ಆಗಿದ್ದಂತು ಸುಳ್ಳಲ್ಲ. 

ಅಂದು ನಾಯಕನಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಕ್ಕೋ ಏನೋ ಸಚಿನ್ ಮುಂದೆ ಆರಂಭಿಕನಾಗಿ ಆಡುವ ಇಚ್ಛೆಯನ್ನ ವ್ಯಕ್ತಪಡಿಸಿದಾಗ ನಾಯಕನ ಸಹಿತ ಯಾರಿಂದಲೂ ವಿರೋಧ ವ್ಯಕ್ತವಾಗಲಿಲ್ಲ. ಇದರಿಂದ ಅವರ ಕ್ರಿಕೆಟ್ ಬದುಕಿನ ದಾರಿ ಸುಗಮವಾದಂತಾಯಿತು. ಮುಂದೆ ಈ ನಿರ್ಧಾರವೇ ಅವರ ಕ್ರಿಕೆಟ್ ಕೆರಿಯರ್ ನ ಬಹುದೊಡ್ಡ ಯಶಸ್ಸಿಗೂ ಮೈಲುಗಲ್ಲಾಯಿತು. ಏಕೆಂದರೆ ಸಚಿನ್ ಆರಂಭಿಕರಾಗಿ ಕ್ರಿಸ್ ಗೆ ಇಳಿಯಲು ಶುರುಮಾಡಿದ ಮೇಲೆ ಅವರ ಶತಕಗಳ ಖಾತೆ ಓಪನ್ ಆಗಿತ್ತು. ತನ್ನ ಎಪ್ಪತ್ತೊಂಭತ್ತನೇ ಮ್ಯಾಚ್ ನಲ್ಲಿ ಮೊದಲ ಸೆಂಚುರಿ ಹೊಡೆದ ಸಚಿನ್ ನಂತರ ಹಿಂತಿರುಗಿ ನೋಡದಂತೆ ಸರಣಿಗೊಂದು ಎರಡರಂತೆ ಸೆಂಚುರಿ ಬಾರಿಸುತ್ತಾ ನುಗ್ಗತೊಡಗಿದರು. ಅಲ್ಲಿಂದ ಅವರು ಮುಟ್ಟಿದ್ದೆಲ್ಲಾ ಚಿನ್ನವಾಗಿ ಸಚಿನ್ ಯುಗ ಶುರುವಾಯಿತಂತಲೇ ಅನ್ನಬೇಕು.

ತನ್ನ ಸಹಜವಾದ ಆಕ್ರಮಣಾಕಾರಿ ಶೈಲಿ ಆಟವನ್ನು ಹದಿನೈದು ಓವರ್ ಫೀಲ್ಡಿಂಗ್ ನಿಯಮದಲ್ಲಿ ಚೆನ್ನಾಗಿ ಬಳಸಿಕೊಂಡ ಸಚಿನ್ ಬಹುಬೇಗ ಭಾರತದ ರನ್ ಮೇಶಿನ್ ಎನಿಸಿಕೊಂಡರು. ಇದರಿಂದ ಹೀರೋ ಕಪ್ ನವರೆಗೂ ತನ್ನ ಸರದಿಯ ಬ್ಯಾಟಿಂಗ್ ಗೆ ಕಾಯುತ್ತಿದ್ದ ಸಚಿನ್ ನಂತರ ಆ ಅನುಭವವನ್ನು ತಂಡದ ಉಳಿದ ಆಟಗಾರರಿಗೆ ನೀಡುವಂತಾದರು. ಇದರ ಪರಿಣಾಮ ಸಚಿನ್ ಆಡುತ್ತಿದ್ದ ವೈಖರಿಗೆ ಸಹ ಆಟಗಾರರು ಕೂಡಾ ಪೆವಿಲಿಯನ್ ನಲ್ಲಿ ಕೂತು ಎಂಜಾಯ್ ಮಾಡತೊಡಗಿದರು. ಇದರಿಂದಾಗಿ ಸಚಿನ್ ಕ್ರಿಸ್ ನಲ್ಲಿರೊವರೆಗೂ ಉಳಿದ ಆಟಗಾರರು ನಿಶ್ಚಿಂತೆಯಿಂದ ಇರುವಂತಾಯಿತು.

ಮುಂದೆ ಇದು ಬಹುತೇಕ ಅಭ್ಯಾಸವಾಗಿ ಹೋಗಿ ಸಚಿನ್ ಮೇಲಿನ ಅವಲಂಬನೆ ಹೆಚ್ಚಿದಂತೆ ಕಾಣಿಸಿತು. ಇದಕ್ಕೆ ಸಾಕ್ಷಿಯೆಂಬಂತೆ ಸಚಿನ್ ದೀಢೀರ್ ಔಟಾದ ತಕ್ಷಣ ಉಳಿದ ಆಟಗಾರರು ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಹೆಣಗಾಡಲಾರಂಭಿಸುತ್ತಿದ್ದರು. ಬಹುತೇಕ ಪಂದ್ಯಗಳಲ್ಲಿ ದೊಡ್ಡ ಇನ್ನಿಂಗ್ಸ್ ಆಡಿ ಗೆಲುವಿನ ಅರ್ಧ ಕೆಲಸವೇ ಮುಗಿಸಿರುತ್ತಿದ್ದರೂ ಮ್ಯಾಚ್ ಫಿನಿಶ್ ಮಾಡುವ ಕೆಲಸ ಉಳಿದವರಿಗೆ ಬಿಟ್ಟಾಗ ಪ್ರಾಬ್ಲಂ ಶುರುವಾಗುತ್ತಿತ್ತು. ಹೇಗೂ ಸಚಿನ್ ಇದ್ದಾನೆ ಅನ್ನೊ ಮೈಂಡ್ ಸೆಟ್ ನಲ್ಲೆ ಇರುತ್ತಿದ್ದ ಉಳಿದ ಆಟಗಾರರು ದಿಢೀರ್ ಅಂತ ಆತ ಔಟಾದಾಗ ದಿಕ್ಕು ತೋಚದಂತಾಗುತ್ತಿದ್ದರು. ಇದರಿಂದ ಸಚಿನ್ ಕ್ರಿಸ್ ನಲ್ಲಿರುವವರೆಗಷ್ಟೆ ಮ್ಯಾಚು ಅನ್ನೊ ಮೆಸೆಜ್ ಹೊಯಿತು.

ಎಲ್ಲಿಯವರೆಗೆ ಅಂದರೆ ಬಹಳಷ್ಟು ಮನೆಗಳಲ್ಲಿ ಸಚಿನ್ ಔಟಾಗುತ್ತಿದ್ದಂತೆಯೇ ಟಿವಿಯನ್ನು ಆಫ್ ಮಾಡುತ್ತಿದ್ದರು. ಈ ಕಾರಣಗಳಿಂದ ಸಾಕಷ್ಟು ಬಾರಿ ಸಚಿನ್ ಶತಕ ಬಾರಿಸಿಯೂ ಇಂಡಿಯಾ ಸೋಲುವಂತಾಯಿತು. ಮುಂದೆ ದ್ರಾವಿಡ್, ಯುವರಾಜ್, ಧೋನಿ ಬಂದ ಮೇಲೆ ಈ ಪರಿಸ್ಥಿತಿ ಬದಲಾಯಿತಾದರೂ ಸಚಿನ್ ಮಾತ್ರ ಮ್ಯಾಚ್ ಫಿನಿಶರ್ ಎನಿಸದೆ ಹೋದರು. ಹಾಗಾಗಿ ಸಚಿನ್ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಸಚಿನ್ ಅನ್ನುವ ಮಟ್ಟಿಗೆ ಸಚಿನ್ ಬೆಳೆದರೂ ತಂಡದ ಆಪದ್ಬಾಂಧವನಾಗುವ ವಿಚಾರಕ್ಕೆ ಬಂದರೆ ಅವರ ಬೌಲಿಂಗ್ ನಲ್ಲಿನ ಕೈಚಳಕವೇ ಹೆಚ್ಚು ಗಮನ ಸೆಳೆಯಿತು.

ಇನ್ನು ಸಚಿನರಂತೆ ಬಹಳಷ್ಟು ಮಂದಿ ಪ್ರತಿಭಾವಂತರು ಬಂದು ಹೋಗಿದ್ದರೂ ಅವರು ಏರಿದ ಎತ್ತರವನ್ನು ಬೇರಾರೂ ತಲುಪದಾದರು. ಕಾರಣ ಸಚಿನರೊಳಗಿನ ಮಹತ್ವಾಕಾಂಕ್ಷೆ ಹಾಗೂ ಇಚ್ಚಾಶಕ್ತಿ. ಅವರೊಂತರ ತರಗತಿಯಲ್ಲಿ ಸದಾ ಮೊದಲಿಗನಾಗಿಯೇ ಇರಬೇಕೆನ್ನುವ ವಿದ್ಯಾರ್ಥಿ ಆಗಿದ್ದರು. ಮತ್ತೆ ಈ ಮಹತ್ವಾಕಾಂಕ್ಷೆಯನ್ನು ತಮ್ಮ ವೃತ್ತಿ ಜೀವನದ ಕೊನೆಯವರೆಗೂ ಉಳಿಸಿಕೊಂಡಿದ್ದರು. ಇದೊಂಥರಾ ಹೇಗಾಯಿತೆಂದರೆ ಅವರಿಂದ ತರಗತಿಗೆ, ಶಾಲೆಗೆ ಒಳ್ಳೆಯ ಹೆಸರು ಬಂತೇ ವಿನಃ ಒಟ್ಟಾರೆ ತರಗತಿಯ ರಿಸಲ್ಟ್ ಗೆ ಅವರ ಕೊಡುಗೆ ಪರಿಣಾಮ ಬೀರದಾಯಿತು. ಇದೇ ಕಾರಣಕ್ಕೆ ಏನೋ ಮುಂದೆ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದರೂ ನಾಯಕತ್ವದ ವಿಚಾರದಲ್ಲಿ ಸಚಿನ್ ಮುಗ್ಗರಿಸುವಂತಾಯಿತು.

ಬೇಸಿಕಲಿ ಕಮಿಟ್ ಮೆಂಟ್ ವಿಚಾರದಲ್ಲಿ ತನ್ನಂತೆಯೇ ಬೇರೆಯವರು ಇರಬೇಕೆಂದು ಬಯಸುತ್ತಿದ್ದ ಅವರು ತಾವು ಯೋಚಿಸಿದ ರೀತಿಯಲ್ಲಿಯೇ ಎಲ್ಲವೂ ಸಾಗಬೇಕೆಂದು ಇಚ್ಚಿಸುತ್ತಿದ್ದರು. ಆದರೆ ಹಾಗಾಗದೆ ಇದ್ದಾಗ ಎಲ್ಲೊ ಒಂದು ಕಡೆ ಒತ್ತಡ ಜಾಸ್ತಿಯಾಗಿ ಅದು ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುವಂತಾಗುತ್ತಿತ್ತು. ಒಬ್ಬ ರ್ಯಾಂಕ್ ತೆಗೆಯುವ ವಿದ್ಯಾರ್ಥಿಯೊಬ್ಬ ಬೇರೆ ಸಂಗತಿಗಳ ಮೇಲೆ ಗಮನ ನೀಡಿದರೆ ಹೇಗೆ ತನ್ನ ಅಭ್ಯಾಸದ ಕಡೆಗೆ ಗಮನ ಕಡಿಮೆಯಾಗುತ್ತದೆಯೋ ಹಾಗೆ ಕೊನೆಗೆ ಸಚಿನ್ ಗೂ ಆಯಿತು. ನಾಯಕತ್ವ ತನ್ನ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಅದನ್ನ ತ್ಯಜಿಸಿದರು.

ಮುಂದೆ ಬೇರೆ ವಿಷಯಗಳ ಕಡೆಗೆ ಗಮನ ಕೊಡದೆ ತಾನಾಯಿತು ತನ್ನ ಆಟ ಆಯಿತು ಅಂತ ಬ್ಯಾಟಿಂಗ್ ಕಡೆಗಷ್ಟೆ ಗಮನ ಕೊಟ್ಟರು. ಇದರಿಂದ ತಂಡ ಸೋಲಲಿ ಗೆಲ್ಲಲಿ ತಮ್ಮ ಆಟ ತಮ್ಮದು ಅನ್ನುವ ರೀತಿಯಲ್ಲೆ ಸಚಿನ್ ಸಾಗಿದಂತಾಯಿತು. ಆದರೆ ವಾಸ್ತವದಲ್ಲಿ ಪ್ರತಿಯೊಬ್ಬರೂ ತಮ್ಮತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದರೆ ಅದುವೇ ತಂಡದ ಜವಾಬ್ದಾರಿ ಎನಿಸಿಕೊಳ್ಳುತ್ತದೆ ಎನ್ನುವ ನೀತಿಯನ್ನೇ ಸಚಿನ್ ಪಾಲಿಸುತ್ತಿದ್ದರು. ಆದರೆ ಉಳಿದ ಆಟಗಾರರು ಈ ನೀತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದಾಗ ಇಡೀ ಟೀಮೇ ಸಚಿನ್ ಮೇಲೆ ಅವಲಂಬನೆ ಆದಂತೆ ಕಾಣುತ್ತಿತ್ತು. ಅದೇ ಸಮಯಕ್ಕೆ ಸಚಿನ್ ಇಲ್ಲದ ಇಂಡಿಯಾ ಟೀಮ್ ಸಪ್ಪೆಯಾಗಿಯೇ ತೋರುತ್ತಿತ್ತು. ಈ ಕಾರಣಕ್ಕೆ ಸಚಿನ್ ನಂತಹ ಲೆಜೆಂಡ್ ಪ್ಲೇಯರ್ ಇದ್ದಾಗಲೂ ಅವರು ಏರಿದ ಎತ್ತರಕ್ಕೆ ತಂಡ ಸಾಗದೆ ಹೋಯಿತು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಆಡುತ್ತಿದ್ದ ಸಚಿನ್ ಕೆಲವರ ಕಣ್ಣಿಗೆ ರೆಕಾರ್ಡ್ ಗಳಿಗಷ್ಟೆ ಆಡುವ ರೀತಿಯಲ್ಲಿ  ಕಾಣುವಂತಾದರು.

ಸಚಿನ್ ಸೆಂಚುರಿ ಹೊಡೆದಾಗಲೆಲ್ಲ ಇಂಡಿಯಾ ಸೋಲುತ್ತದೆ ಎನ್ನುವವರು, ಅವರು ಬರೀ ರೆಕಾರ್ಡ್ ಗಳಿಗಷ್ಟೇ ಆಡುತ್ತಾರೆ ಎನ್ನುವವರು ಈ ಎಲ್ಲಾ ವಸ್ತು ಸ್ಥಿತಿಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ತಮ್ಮತಮ್ಮ ಜವಾಬ್ದಾರಿಯನ್ನು ಎಲ್ಲರೂ ಸರಿಯಾಗಿ ನಿಭಾಯಿಸಿದಲ್ಲಿ ಎಲ್ಲವೂ ಸರಿಯಾಗಿರುತ್ತದೆ ಎಂಬ ಸೂತ್ರವನ್ನು ಮುಂದೆ ರಾಹುಲ್ ದ್ರಾವಿಡ್ ಚೆನ್ನಾಗಿ ತಿಳಿದುಕೊಂಡರು. ಪರಿಣಾಮ ತಂಡ ಸಮತೋಲನ ಕಾಯ್ದುಕೊಳ್ಳುವಲ್ಲಿ ಸಫಲವಾಯಿತು.

ಸಚಿನ್ ನ ಆರ್ಭಟಕ್ಕೆ ಕಳೆದುಹೋಗದೆ, ಸಚಿನ್ ಗೆ ಪೈಪೋಟಿ ನೀಡುತ್ತೆನೆಂದು ಹೊರಡದೆ ತಂಡದಲ್ಲಿನ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ಕಂಡುಕೊಂಡ ದ್ರಾವಿಡ್ ಭಾರತದ ಮತ್ತೊಬ್ಬ ಜೀವಂತ ಲೆಜೆಂಡ್ ಆದರು. ಈಗಲೂ ಅಪ್ಪಟ ಟೀಮ್ ಪರ್ಸನ್ ಅಂತ ಉದಾಹರಿಸುವುದಾದರೆ ದ್ರಾವಿಡ್ ಅವರೇ ಮುಂಚೂಣಿಯಲ್ಲೆ ನಿಲ್ಲುತ್ತಾರೆ. ಆದರೆ ಸಚಿನ್ ತೆಂಡೂಲ್ಕರ್ ಅಂದಾಕ್ಷಣ ಕ್ರಿಕೆಟಿಗಾಗಿಯೇ ಧರೆಗಿಳಿದು ಬಂದ ದೇವರ ರೀತಿಯಲ್ಲಿ ಭಾಸವಾಗುತ್ತಾರೆ.

ಯಾಕೆ ಹಾಗೆ ಅನ್ನಿಸುತ್ತಾರೆ ಎಂದರೆ ಗ್ರೇಟ್ ಪ್ಲೇಯರ್ ಗಳು ತಮಗೆ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಳ್ಳುವುದಲ್ಲದೆ ಅದರಿಂದಲೇ ಹೇಗೆ ಅವಕಾಶಗಳನ್ನು ಸೃಷ್ಟಿಸಿಕೊಂಡು ಬೆಳೆಯಬಹುದು ಎಂಬುದನ್ನು ಜಗತ್ತಿಗೆ ತೋರಿಸಿರುತ್ತಾರೆ. ಟಿವಿಯಲ್ಲಿ ಅವರ ಆಟವನ್ನು ನೋಡಿ ಆಸ್ವಾದಿಸಿ ನಂತರ ಅವರು ಸ್ವಾರ್ಥಕ್ಕಾಗಿ ಆಡಿದರು ಅಂತ ಹೇಳುವ ಯುವಕರು ದಯವಿಟ್ಟು ಇದನ್ನು ಅರ್ಥಮಾಡಿಕೊಂಡರೆ ಸಚಿನ್ ನಿಜ ಅರ್ಥದಲ್ಲಿ ಎಲ್ಲರಿಗೂ ಸ್ಪೂರ್ತಿಯಾಗುತ್ತಾರೆ. 

‍ಲೇಖಕರು Admin

July 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: