ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ‘ರಂಗಾಂತರಂಗ’

ಲಕ್ಷ್ಮೀ ಮಚ್ಚಿನ

ಇಳಂತಿಲ ಸಮೀಪದ ಮೂಡಾಜೆಯ ನನ್ನ ಅಕ್ಕನ ಮನೆಗೆ ಹೋಗುವವ ಅಲ್ಲೇ ಸಮೀಪದ ಅಮ್ಮಣ್ಣಾಯರ ಮನೆಗೂ ಹೋಗಿದ್ದೆ.
ಹಾಗೆ ಹೋದಾಗ ಅವರು ಹೇಳುತ್ತಿದ್ದ ಅವರ ಕಲಾಯಾನದ ಅನುಭವಗಳು ಒಂದೊಂದೂ ಕಥೆಯ ಮಾದರಿಯಲ್ಲಿತ್ತು. ಇದಿಷ್ಟೇ ಅಲ್ಲದೇ ಉಳಿತ್ತಾಯರ ಮನೆಯಲ್ಲೂ ಅನೇಕ ಬಾರಿ ಅವರನ್ನು ಭೇಟಿಯಾದಾಗ ಹತ್ತಾರು ರಸಮಯ ಘಟನೆಗಳನ್ನು, ಕಟು ರಂಗ ವಿಮರ್ಶೆಗಳನ್ನು ಹೇಳಿದ್ದರು.

ಆ ಘಟನೆಗಳನ್ನೇ ಸ್ಮೃತಿ ಪಟಲದಲ್ಲಿ ಇಟ್ಟುಕೊಂಡು ಕೆಲವನ್ನು ದಾಖಲಿಸಿದ್ದೆ. ಅದಾದ ಬಳಿಕ ಯಕ್ಷಗಾನ ಅಕಾಡೆಮಿಯವರು ಮಾತಿನರಮನೆ ಸರಣಿಯಲ್ಲಿ ಸಂದರ್ಶನ ಮಾಡಿದರು. ಅದರಲ್ಲಿ ರಾಧಾಕೃಷ್ಣ ಕಲ್ಚಾರ್, ಆರತಿ ಪಟ್ರಮೆ ಅವರು ಅಮ್ಮಣ್ಣಾಯರನ್ನು ಮಾತಿಗೆಳೆದರು.
ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ. ಎಂ.ಎ. ಹೆಗಡೆ, ಕಲ್ಚಾರ್ ಇದೊಂದು ಪುಸ್ತಕವಾಗಬೇಕೆಂದು ಸಲಹೆ ನೀಡಿದ್ದರು.

ಕೃತಿ ರಚನೆ ಸಂದರ್ಭ ಅನುಭವ ಹಂಚಿಕೊಂಡ ಪುತ್ತೂರು ಶ್ರೀಧರ ಭಂಡಾರಿ, ಪ್ರೋತ್ಸಾಹ ನೀಡಿದ ಪ್ರೊ. ಎಂ.ಎ. ಹೆಗಡೆ ಅವರು ನಮ್ಮನ್ನಗಲಿರುವ ನೋವು ಕೃತಿ ಹೊರಬರುವ ವೇಳೆ ಕಾಡುತ್ತಿದೆ. ಕಲಾವಿದನೊಬ್ಬನ ಬದುಕಿನ ತೀರಾ ವೈಯಕ್ತಿಕ ವಿವರಗಳು ಓದುಗರಿಗೆ ಅನವಶ್ಯ. ಆದರೆ ಕಲಾವಿದ ಬೆಳೆದು ಬಂದು ರೂಪುಗೊಂಡ ಹಿನ್ನೆಲೆಯಲ್ಲಿ ಅವರ ಅನುಭವಗಳು ಸಂಗ್ರಾಹ್ಯವಾಗಿರುತ್ತದೆ.

ಈ ನಿಟ್ಟಿನಲ್ಲಿ ಇಲ್ಲಿ ಅವರ ಕಲೆಯ ಅನುಭವಗಳ ಜತೆಗೆ ಮಿಳಿತವಾದ ವೈಯಕ್ತಿಕ ಅನುಭವಗಳನ್ನು ಮಾತ್ರ ಕಟ್ಟಿಕೊಡಲಾಗಿದೆ. ಉಳಿದಂತೆ ಇತರರಿಗೆ ಮಾರ್ಗದರ್ಶಿಯಾಗಬಲ್ಲ, ಸಮದರ್ಶಿಯಾಗಬಲ್ಲ, ಕಲಾವಲಯದಲ್ಲಿ ಚರ್ಚೆಗೆ ಗ್ರಾಸವಾಗಬಲ್ಲ, ಒಂದಷ್ಟು ಬದಲಾವಣೆಗೆ ಕಾರಣವಾಗಬಲ್ಲ ಘಟನೆಗಳನ್ನು ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬ ಕಲಾವಿದನ ಜತೆಗೂ ಒಳ್ಳೆಯ ಒಡನಾಟ ಇಟ್ಟುಕೊಂಡವರು ಅಮ್ಮಣ್ಣಾಯರು.

ಹಾಗಾಗಿ ಪ್ರತಿಯೊಬ್ಬರಿಗೂ ಅವರ ಕುರಿತು ಸದಭಿಪ್ರಾಯವೇ ಇದೆ. ಆಯ್ಕೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದು, ಕೆಲವರನ್ನು ಬಿಟ್ಟದ್ದು ಎಂಬ ತರ್ಕಕ್ಕೆ ಆಸ್ಪದ ಬರಬಾರದು. ಸ್ಥಳಾವಕಾಶ ಹಾಗೂ ಸಮಯಾವಕಾಶದ ಕಾರಣದಿಂದ ಅನೇಕರನ್ನು ಮಾತನಾಡಿಸಲು ಸಾಧ್ಯವಾಗಲಿಲ್ಲ.
ಆ ನಿಟ್ಟಿನಲ್ಲಿ ಇದು ಅಪರಿಪೂರ್ಣವೇ ಹೌದು. ಮದ್ದಳೆಯ ಮಾಂತ್ರಿಕನ ಅನುಭವದ ಕೊಳದಿಂದ ಆರಿಸಲು ಸಾಧ್ಯವಾದದ್ದು ಇದಿಷ್ಟೇ ಮುತ್ತುಗಳು.

ಅಮ್ಮಣ್ಣಾಯ ಎಂಬ ಹಿಮ್ಮೇಳದ ಮೌಕ್ತಿಕದ ಮೌಲ್ಯ ನಿರ್ಧಾರ ಮಾಡಲು ಒಬ್ಬ ಕಲಾರಸಿಕನಿಗೆ ಇಷ್ಟನ್ನಾದರೂ ಕೊಡಬೇಕಿದ್ದರೆ ಅವರಿಗೆ ಸಾಕಷ್ಟು ತೊಂದರೆ ಕೊಡಲೇಬೇಕಾಯಿತು. ಆದರೆ ಕಾಲವಶದಿಂದ ಅನೇಕ ವಿಚಾರಗಳನ್ನು ಅವರು ನೆನಪಿನಲ್ಲಿರಿಸಿಕೊಂಡಿಲ್ಲ. ಜತೆಗೆ ಮಾತಿಗಿಂತ ಮದ್ದಳೆಯ ನುಡಿತದಲ್ಲೇ ಬಹು ಭಾಗದ ಬದುಕನ್ನೂ ಕರಗಿಸಿದ ಅಮ್ಮಣ್ಣಾಯರ ಎಲ್ಲ ನೋವು – ನಲಿವುಗಳನ್ನೂ ಸೆರೆ ಹಿಡಿಯಲು ಸಾಧ್ಯವಾಗಿಲ್ಲ ಎಂಬ ನೋವು ಕೃತಿಕರ್ತನ ಮನಸ್ಸಿನಲ್ಲಿದ್ದರೂ ಮೇರು ಕಲಾವಿದನೊಬ್ಬನ ಸಾಧನೆಗೆ ಇಷ್ಟಾದರೂ ಬೆಳಕು ಬೀರಲು ಸಾಧ್ಯವಾಗಿರುವ ಕೃತಕೃತ್ಯ ಭಾವದ ಹಿಗ್ಗಂತೂ ಮೂಡಿದೆ.

ಯಕ್ಷಗಾನದ ಪರಂಪರೆಯೇ ಹೊಸ ಚಿಕಿತ್ಸೆಗೆ ಒಳಗಾಗಿರುವ ಕಾಲದಲ್ಲಿ ಪರಂಪರೆಯನ್ನು ರಕ್ಷಿಸಲು ಹೆಣಗಾಡಿದ ಅದೆಷ್ಟೋ ಮಹನೀಯರು ನೇಪಥ್ಯ ಸೇರಿದ್ದಾರೆ. ಅವರ ಬಗೆಗೆ ದಾಖಲಿಸಲಾಗದೆ ದಂತಕಥೆಯಾಗಿರುವ ಕೊರತೆ ಈಗಲೂ ನಮ್ಮನ್ನು ಕಾಡುತ್ತಿದೆ.

ಹಿಮ್ಮೇಳದ ಅನುಭವದ ಕೊಡವಾಗಿರುವ ಸಂಪನ್ನ ಕಲಾವಿದ ಅಮ್ಮಣ್ಣಾಯರು ಶತಮಾನದ ಕಾಲ ಆರೋಗ್ಯದಿಂದ ನಮ್ಮೊಂದಿಗಿರಲಿ, ಒಂದು ಅನನ್ಯ ಪದ್ಧತಿಯ ಕೊನೆಯ ಕೊಂಡಿಯಾಗದೆ ಇನ್ನಷ್ಟು ಗೊಣಸುಗಳನ್ನು ಸೇರಿಸಲು ಕಾರಣೀಭೂತರಾಗಲಿ ಎಂಬ ಮನದಾಶಯ ನಮ್ಮದು.
ಕಲಾಮಾತೆ ಹರಸುತ್ತಾಳೆಂಬ ವಿಶ್ವಾಸವೂ ನಮ್ಮಲ್ಲಿದೆ. ತಾನು ಮಾಡಿದ್ದನ್ನು ಹೇಳಿಕೊಳ್ಳದ, ಇದು ಸಾಧನೆಯೆಂದೂ ಭಾವಿಸದ ಒಬ್ಬ ತಪೋನಿಧಿಯಾಗಿ ಗೋಚರಿಸುವ ಕಲಾವಿದನೊಬ್ಬನಿಗೆ ಪ್ರೀತಿಯಿಂದ ಅಭಿಮಾನದಿಂದ ಅರ್ಪಿಸುವ ಅಕ್ಷರ ನಮನವಾಗಿ ಕಲಾಪ್ರೇಮಿಗಳು ಈ ಕೃತಿಯನ್ನು ಸ್ವೀಕರಿಸಿದರೆ ಬರಹಗಾರ ಧನ್ಯ!

‍ಲೇಖಕರು Admin

October 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: