ಮತ್ತೆ ಹೊಸ ಗೆಳೆಯರ ನೆನಪಿನ ಬುತ್ತಿ..

ಡಾ ವಿನಾಯಕ ಕಮತದ

ನೆನಪುಗಳೆಂದರೆ ಮನುಷ್ಯನ ಬಾಲ್ಯವನ್ನು ಅವನ ಜೀವನದುದ್ದಕ್ಕೂ ಜೀವಂತವಾಗಿಡಲು ದೊರೆತಿರುವ ಅಮೂಲ್ಯ ಶಕ್ತಿ. ಆಯಸ್ಸು ಕಳೆಯುತ್ತ ಹೋದಷ್ಟು ನೆನಪುಗಳು ಕೂಡುತ್ತ ಹೋಗುತ್ತವೆ. ಭಾರವೆಂದುಕೊಂಡವರಿಗೆ ಭಾರವಾಗಿ ಹಗುರವೆಂದುಕೊಂಡವರಿಗೆ ಹಗುರವಾಗಿ ನೋವು ನಲಿವುಗಳ ಜೊತೆಜೊತೆಯಾಗಿ ಹೆಗಲಿಗೆ ಹೆಗಲಾಗಿ ಒಡಲಿಗೆ ನೆಳಲಂತೆ ಹಿಂಬಾಲಿಸುತ್ತವೆ. ನೆಳಲು ಕಂಡು ಅಂಜಿದರೆ ಅದು ಅವರವರ ದೌರ್ಬಲ್ಯವೇ ಸರಿ. ನೆಳಲನ್ನು ನೆರಳಾಗಿಸಿಕೊಂಡಾಗ ವ್ಯಕ್ತಿತ್ವದ ಅನಾವರಣವಾಗುತ್ತದೆ. ಅದು ದಕ್ಕಿದ ಮಾಧ್ಯಮದಲ್ಲಿ ಅರಳಿ ಇತರರ ಮನಸ್ಸಿಗೆ ಸ್ಪಂದಿಸುತ್ತದೆ.

ಎಳೆತನದ ಸೋಲು ಗೆಲುವುಗಳು ಬದುಕಿನ ಅನಿರೀಕ್ಷಿತ ತಿರುವುಗಳನ್ನು ಎದೆಗಾರಿಕೆಯಿಂದ ಎದುರಿಸುವ ಶಕ್ತಿ ತುಂಬುತ್ತವೆ. ಲೇಖಕರಾದ ವೈ. ಜಿ. ಭಗವತಿಯವರು ವಾಸ್ತವಿಕ ಅಂಶಗಳನ್ನೇ ಕಥೆಯಾಗಿಸುವ ಕೌಶಲವನ್ನು ರೂಢಿಸಿಕೊಂಡವರು. ‘ದೇವಮ್ಮನ ಲೋಟ’, ‘ಸುಂದ್ರಮ್ಮಜ್ಜಿಯ ಮೊಮ್ಮಗನಂತೆ’ ಕಥಾ ಸಂಕಲನಗಳು ಇದಕ್ಕೆ ಸಾಕ್ಷಿಯಾಗುತ್ತವೆ. ಇದೀಗ ಅವರು ಮತ್ತೆ ಹೊಸ ಗೆಳೆಯರು ಎಂಬ ಕಾದಂಬರಿಯನ್ನು ಓದುಗರ ಮುಂದಿರಿಸಿದ್ದಾರೆ. ಇದು ನೈಜ ಅನುಭವಗಳನ್ನೂ ಒಳಗೊಂಡಿರುವುದರಿಂದ ಓದುಗರಿಗೆ ಬಹು ಬೇಗ ಆಪ್ತವಾಗುತ್ತದೆ.

ಸ್ನೇಹ ಜೀವಿಗಳಾದ ಭಗವತಿಯವರ ಸ್ವಭಾವವೇ ಅನಿಲನ ಮೂಲಕ ವ್ಯಕ್ತವಾಗಿದೆ ಎಂಬುದು ನನ್ನ ಗ್ರಹಿಕೆಯಾಗಿದೆ. ಧಾರಾವಾಹಿಯಂತೆ ನೈರುತ್ಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಕೃತಿಯನ್ನು ಕಾದಂಬರಿ ಎನ್ನುವುದಕ್ಕಿಂತ ಧಾರಾವಾಹಿ ಎಂದೇ ಕರೆಯುವುದು ಸೂಕ್ತವೆಂಬುದು ನನ್ನ ಓದಿನ ಹರವಿನ ಇತಿಮಿತಿಯಾಗಿದೆ. ಏಕೆಂದರೆ ಪ್ರತಿಯೊಂದು ಭಾಗಗಳನ್ನು ಪ್ರತ್ಯೇಕವಾಗಿಟ್ಟರೂ ಸ್ವತಂತ್ರವಾದ ಅನುಭೂತಿಯನ್ನು ನೀಡುವ ಗುಣ ಈ ಕೃತಿಯಲ್ಲಿರುವ ಭಾಗಗಳಿಗಿದೆ. ಇಪ್ಪತ್ತೊಂದು ಭಾಗಗಳಲ್ಲಿ ತೆರೆದುಕೊಳ್ಳುವ ಕೃತಿಯು ಬಾಲ್ಯದ ಅನುಭವಗಳನ್ನು ನೇಜವಾಗಿ ತೆರೆದಿಡುವಲ್ಲಿ ಯಶಸ್ವಿಯಾಗುತ್ತದೆ.

ಮಕ್ಕಳ ವಿಭಿನ್ನ ವ್ಯಕ್ತಿತ್ವದ ಉದಾಹರಣೆಗಳು ಈ ಕೃತಿಯಲ್ಲಿ ಅನಿಲ, ಶಂಕರ, ಯಲ್ಲಪ್ಪನ ಪಾತ್ರಗಳ ಮೂಲಕ ಅನಾವರಣವಾಗುತ್ತವೆ. ಸೌಮ್ಯ ಸ್ವಭಾವದ ಹಿಂದೆ ಅವನ ಆರ್ಥಿಕ ಬಲ ಶೈಕ್ಷಣಿಕ ಒಲವು ಕಾರಣವಾಗುವ ಹಾಗೆ, ಕೋಪಕ್ಕೆ ದೈಹಿಕ ಬಲ ನಿಧಾನ ಕಲಿಕೆಗಳು ಕಾರಣವಾಗುವುದು ಸಹಜವಾಗಿ ಮೂಡಿಬಂದಿವೆ. ಸುತ್ತ ಮುತ್ತಲ ಪರಿಸರವನ್ನು ಗಮನಿಸುವ ಮಹತ್ವವನ್ನೂ. ಮಕ್ಕಳು ಮತ್ತು ಶಿಕ್ಷಕರ ಮೂಲಕ ಪ್ರತಿಪಾದಿಸುತ್ತಾರೆ.

ಅನಿರೀಕ್ಷಿತವಾಗಿ ಶಾಲೆಯಿಂದ ಶಾಲೆಗೆ ಹೋಗಬೇಕಾದ ಪ್ರಸಂಗಗಳಲ್ಲಿ ಸಹನೆ, ಬುದ್ಧಿ ಚಾತರ‍್ಯದ ಮೂಲಕ ಹೊಂದಾಣಿಕೆಯನ್ನು ಸಾಧಿಸುವ ಗುಣ ಅನಿಲನ ಮೂಲಕ ಸಶಕ್ತವಾಗಿ ಹೊರಹೊಮ್ಮಿದೆ. ಅನಿಲ ಮನೆಗೆಲಸ ಮಾಡದೆ ಇದ್ದರೂ ಉತ್ತರ ಹೇಳುವ ಪ್ರಸಂಗ ಕುತೂಹಲಕರವಾಗಿದ್ದು ಬೋಧಕರನ್ನೇ ದಿಗ್ಭçಮೆಗೆ ಒಳಗಾಗುವಂತೆ ಮಾಡುತ್ತದೆ. ಕಂಠಪಾಠ ಅವೈಜ್ಞಾನಿಕವೆಂಬ ನಿಲುವು ಘಾಡವಿರುವಾಗಲೂ ಕಂಠಪಾಠವೂ ಸಹ ಯುಕ್ತ ಪ್ರಮಾಣದ ಅಗತ್ಯ ಹೊಂದಿದೆ ಎಂಬುದನ್ನಿಲ್ಲಿ ಗಮನಿಸಬಹುದಾಗಿದೆ.

ಅನಿಲನ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚುವುದಕ್ಕೆ ಕಾರಣವಾಗುವ ಶಬರಿಕೊಳ್ಳದ ವರ್ಣನೆ ಸೊಗಸಾಗಿ ಮೂಡಿ ಬಂದಿದೆ. ಮಕ್ಕಳಿಗಾಗಿ ಅಂದು ಮನೆಯವರೆಲ್ಲ ಎಷ್ಟ ಸಮಯ ಹಂಚಿಕೊಳ್ಳುತ್ತಿದ್ದರೆಂಬುದು ನನಗೀ ಸಂದರ್ಭದಲ್ಲಿ ಮುಖ್ಯ ಅನಿಸುತ್ತದೆ. ಹಿರೆಮಣಿಯಾಗಿ ವರ್ಗಕೋಣೆಯ ಕಲಿಕಾ ವಾತಾವರಣವನ್ನು ರಂಗೇರಿಸುವ ಯಲ್ಲಪ್ಪನ ‘ಗರಡಿಮನಿ ಕಲ್ಲು ಕಂಬ’ದ ಪ್ರಸಂಗ ಸೊಗಸಾಗಿ ಮೂಡಿಬಂದಿದೆ. ಸ್ಥಳೀಯ ಇತಿಹಾಸದ ಅಂಶಗಳು ಕೃತಿಯಲ್ಲಿ ಸಾಂದರ್ಭಿಕವಾಗಿ ಬೆರೆತುಕೊಂಡಿರುವುದು ಇಂದಿನ ಮಕ್ಕಳ ಆಸಕ್ತಿಗಳು ಹಳಿ ಬಿಟ್ಟ ರೈಲಿನಂತೆ ರ‍್ರಾಬರ‍್ರಿ ಸಾಗುತ್ತಿರುವುದನ್ನು ಸೂಚ್ಯವಾಗಿ ಕೆಣಕುತ್ತವೆ. ಹಾಗೇ ಕಬಡ್ಡಿ ಪಟು ಶಂಕರನ ತುಂಟತನವೂ ಇಷ್ಟವಾಗುತ್ತದೆ.

ಕೃತಿಯಲ್ಲಿ ಬರುವ ಶಿಕ್ಷಕರ ಪಾತ್ರಗಳನ್ನು ಅತ್ಯಂತ ನೈಜವಾಗಿ ಚಿತ್ರಿಸಿರುವುದು ಶಾಲಾವಾತಾವರಣದ ಸ್ವರೂಪವನ್ನು ಪರಿಚಯಿಸುವಂತೆ ಇದೆ. ಶಿಕ್ಷಕರಲ್ಲಿಯೂ ಸಹ ತಾವು ಬೋಧಿಸುವ ವರ್ಗದಲ್ಲಿ ಜಾಣ ಮಕ್ಕಳಿರಬೇಕೆಂಬ ಮನೋಭಾವವಿರುವುದನ್ನು ನೈಜವಾಗಿ ಹೆಣೆದಿದ್ದಾರೆ.
ಸಗಣಿ ಹಿಡಿವ ನೆಪ ಕಾಲುವೆ ಜಳಕ ಅಪ್ಪನಿಗೆ ತಲುಪುವ ದೂರು. ಮಕ್ಕಳ ಚಲ್ಲಾಟಕ್ಕೆ ತೆರೆ ಬೀಳುವುದು ಬಾಲ್ಯದ ಸಹಜ ವರ್ತನೆಗಳಾಗಿವೆ. ಆಮ್ಲಜನಕವಿದೆಯೇ ಇಲ್ಲವೇ ಎಂದು ದೀಪ ಬಿಟ್ಟು ಹಗೇವನ್ನು ಪರೀಕ್ಷಿಸುತ್ತಿದ್ದ ಪೂರ್ವಿಕರ ಜೀವನ ಅನುಭವ ವಿಜ್ಞಾನದಷ್ಟೇ ಖಚಿತವಾಗಿತ್ತೆಂಬ ಅಂಶ ಇಷ್ಟವಾಗುತ್ತದೆ.

ಚಕ್ಕಡಿ ಪ್ರಯಾಣ ಅದರ ಆನಂದ ಅಜ್ಜನ ಒಡನಾಟ ಹೊಳೆಯಲ್ಲಿ ಮುಳುಗೇಳುವ ಖುಷಿ ಹಿಡಿಸುತ್ತವೆ. ಕೂಡಿ ಅಗಲುವ ಮತ್ತೆ ಕೂಡುವ ಪ್ರಸಂಗಗಳಿಂದಲೇ ಕೂಡಿರುವ ಈ ಕೃತಿಗೆ ಮತ್ತೆ ಹೊಸ ಗೆಳೆಯರು ಎಂಬ ಹೆಸರು ಅನ್ವರ್ತಕವಾಗಿದೆ. ಮೌಲ್ಯಗಳು ಮಕ್ಕಳಲ್ಲಿ ಸಹಜವಾಗಿ ಬರಬೇಕೆಂಬ ವಿಚಾರ ಸಹಜವಾಗಿ ವ್ಯಕ್ತವಾಗಿದೆ. ಇಂಥಹ ಇನ್ನಷ್ಟು ಮೌಲ್ಯಯುತ ಕೃತಿಗಳು ಹೊರಬರಲೆಂದು ಆಶಿಸುತ್ತ ಶುಭ ಕೋರುವೆನು.

‍ಲೇಖಕರು Avadhi

June 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: