ದಾಕ್ಷಾಯಣಿ ಮಸೂತಿ
**
ತುಟಿಗೆ ತುಟಿ
ಒತ್ತಿದಾಗ
ಧಗ್ಗನೆ ಹೊತ್ತಿದ
ಬೆಂಕಿ ಆರಲು
ಮತ್ತೆ ಮುತ್ತಿನ
ಕಂದಾಯ ಕೊಡು
ಎಂಬ ನಿನ್ನ ಕಳ್ಳನೋಟವ
ಕಂಡಾಗ
ನಾಭಿಯಲಿ ಸಣ್ಣ ನಡುಕ
ಜೊತೆಗೊಂದಿಷ್ಟು ಪುಳಕ
ಅದೆಷ್ಟು ಚೆಂದ
ನಿನ್ನೊಲವಿನ ಅಮಲು
ಗೊತ್ತಾ?
ಮೊಗೆಮೊಗೆದು
ಒಮ್ಮೆಲೇ
ಕುಡಿದು ಬಿಡುವ
ಬಯಕೆ ಮೂಡಿ
ಮುಗಿದುಬಿಡುವ
ಹೆದರಿಕೆ ಹುಟ್ಟುವಷ್ಟು !
ಇಷ್ಟೀಷ್ಟೇ ಹೀರಿದರೆ
ಬದುಕಿನುದ್ದಕ್ಕೂ
ಇರಬಹುದೆ ಎಂಬ
ದುರಾಸೆ ಮೊಳೆಯುವಷ್ಟು
ಜಗದ ಪರಧಿಯೊಳಗೆ
ಇರುವ
ನಾನು ನೀನು
ಆನು ತಾನುಗಳ
ಮೀರಿ
ಭಾವಪರವಶತೆಯಲಿ
ಉರಿಯಬೇಕು
ನಮ್ಮ ದೇಹಗಳು
ಜೊತೆಗೆ ಆತ್ಮಗಳು
ಒಲವು ಚಿನ್ನದಂತೆ
ಚೊಕ್ಕವಾಗಲೂ
ಚೊಕ್ಕದಲ್ಲೂ ಇರುವ
ಮುಕ್ಕನ್ನು ಅಪ್ಪಿಕೊಳ್ಳಲು
ಆಸೆ ನಿರಾಸೆಗಳ
ಅಲೆಗಳಲ್ಲೂ
ಮೋಹದ ಪೊರೆಯ
ಧರಿಸುತ್ತಾ ತೊರೆಯುತ್ತಾ
ಬದುಕಾಗಲು
ನನ್ನಿಂದ ನೀನು
ನಿನ್ನಿಂದ ನಾನು
ಬಿಡುಗಡೆಗೊಳ್ಳಲು
ಪ್ರೇಮದ ಉರಿಯೊಳಗೆ
ಬಿದ್ದು ಸುಟ್ಟು ಬೂದಿಯಾಗುತ್ತಾ
ಒಲುಮೆಯ ಗಾಳಿಯೊಳಗೆ
ತೇಲಿ ಹೋಗಲು
ಬಂದು ಬಿಡು
ಗೆಳೆಯ ಇಂದಾದರೂ
ಒಲುಮೆಯ ಕುಲುಮೆಯಲಿ
ಬೇಯಲು ಅನ್ನವಾಗಲು..
ವಾವ್…very nice madam