ಮತ್ತೆ ಮತ್ತೆ ಮೆಲಕು ಹಾಕಲು ಮಜಬೂರ್ ಮಾಡುವ ಪೆಟ್ರಿಕೋರ್!

ಗೋಪಾಲ ತ್ರಾಸಿ

**

ಯುವ ಕವಯಿತ್ರಿ ಚೈತ್ರಾ ಶಿವಯೋಗಿಮಠ ಅವರ ಕವನ ಸಂಕಲನ ‘ಪೆಟ್ರಿಕೋರ್’.

ಈ ಕೃತಿಯನ್ನು ಬೆಂಗಳೂರಿನ ‘ಆತ್ಮಿಕಾ ಪುಸ್ತಕ’ ಪ್ರಕಟಿಸಿದೆ.

ಈ ಕೃತಿಯ ಕುರಿತು ಸಾಹಿತಿ ಗೋಪಾಲ ತ್ರಾಸಿ ಅವರು ಬರೆದ ಬರಹ ಇಲ್ಲಿದೆ.

**

ಪೆಟ್ರಿಕೋರ್ ಅಂದರೆ ಒಣ ಮಣ್ಣ ಮೇಲೆ ಮೊದಲ ಮಳೆ ಬಿದ್ದಾಗ ಹರಡುವ ಘಮಲು. ಈ ಸಂಕಲನದ ಶೀರ್ಷಿಕೆ ನನ್ನೊಂದು ಕವನ ಸಂಕಲನದ
ಶೀರ್ಷಿಕೆ, ‘ಬೇಚಾರ ಶಹರು’ ನೆನಪಿಸಿತು. ಇದೊಂಥರಾ ಮೈಮೇಲೆ ‘ರಿಸ್ಕ್’ ಎಳೆದುಕೊಳ್ಳುವ ಪ್ರಯೋಗಾತ್ಮಕ ಮನಸ್ಥಿತಿ ಅಷ್ಟೆ.

“ಈ ಘಮಲು
ಕೆಲವರಿಗೆ ಆಗಂತುಕ ಮತ್ತು
ಕ್ಷಣಿಕ ಮಾತ್ರ; ನನ್ನಂಥವಳಿಗೆ
ಒಂದು ಶಾಶ್ವತ ಅಮಲು!”

ಇದು ಚೈತ್ರಾ ಶಿವಯೋಗಿಮಠ ಅವರ ಚೊಚ್ಚಲ ಸಂಕಲನದ ಒಟ್ಟು ಭಾವಘಮಲು. ಇಲ್ಲಿನ ಕವಿತೆಗಳ ಭಾವತೀವೃತೆ ಮತ್ತು ತಾಜಾತನ ಎಷ್ಟೆಂದರೆ ಪಳಗಿದ ಕವಿಯ ಹದದ ಸರಿಸಮದಷ್ಟು! ಹೌದು, ಇಲ್ಲಿನ ಅನೇಕ ಕವಿತೆಗಳು ಮತ್ತೆ ಮತ್ತೆ ಓದಲು ಮಜಬೂರ್ ಮಾಡಿದ, ಪ್ರತಿ
ಓದಲ್ಲೂ ಮನಸ್ಸಿಗೆ ತಂಪುಣಿಸಿದವುಗಳು. ಇಲ್ಲಿನ ಕವಿತೆಗಳಲ್ಲಿ ಕ್ಲಿಫ್ ರಿಚರ್ಡ್ಸನ ಮಧುರವಾದ ಹಾಡುಗಳನ್ನು ಕೇಳುವ ಹಿತ!; ಸಂಜೆ ಹೊತ್ತಲ್ಲಿ ಗಝಲ್, ಶೇರ್ ಗಳ ಸವಿಯನ್ನು ಆಸ್ವಾಧಿಸುವ ಸುಖ!; ತುಂಬಿದ ಬಜಾರಿನೊಳಗಡೆ ‘ಮೇರಾ ತೋ ಬಸ್ ಏಕ್ ಹೀ ಗಿರಿಧರ್ ಗೋಪಾಲ್”
ಮೀರಾ ತನ್ಮಯಳಾಗಿ ಕಳೆದು ಹೋಗುವ ಸಂಭ್ರಮ..;

“ಇನ್ನೂ ತಾಳಲಾರೇ
ಜೀವದಾಳದ ದನಿ ಕೇಳಿ ಬಿಡು
ಭಾವಭಕುತಿಯ ಲಿಂಗ ಮಾಡಿ
ಕೊರಳ ಸುತ್ತಿಕೊಂಡ ಶುಭಸೂತ್ರವಾಗಿ
ಎದೆಯ ಇಳಿಜಾರಿಗೆ
ಇಳಿದು ಹೋದ ಶಿವನೇ
ಅಂಗೈಯಲ್ಲಿಟ್ಟುಕೊಂಡ
ಶಿವಲಿಂಗದ ನೆತ್ತಿಯ ಮೇಲೆ
ಕೈಯಿರಿಸಿ ಕಂಪಿಸುತ್ತಿರುವೇ..” (ನೀನಿಲ್ಲದೆ ಮತ್ತಾರಿಲ್ಲವಯ್ಯಾ..
)

ಕವಯಿತ್ರಿ ಚೈತ್ರಾ ಶಿವಯೋಗಿಮಠ

**

ಈಗೀಗ ಹಿತವೆನಿಸುತ್ತಿದೆ ನನಗೆ
ನಿನ್ನ ಸಖ್ಯದಲಿ
ನಿನ್ನ ಪ್ರೇಮದಲಿ
ಇರುಳ ಕೊರಳಲಿ
ನಿನ್ನ ಕನಸಲಿ
ಕಳೆದು ಹೋಗಿ
ಮುದ್ದಾಂ ನಿಶಾಚರಿಯಾಗಿ
ನನ್ನೆಲ್ಲ ಸಿಕ್ಕುಗಳ ಬಲೆಯಿಂದ ಬಿಡಿಸಿಕೊಳ್ಳಲು (ಆತ್ಮ ಸಖ)

ಹೌದು, ಯುಗಗಳಿಂದ ಅಭಿವ್ಯಕ್ತಗೊಳ್ಳುತ್ತಲೇ ಬಂದ ಪ್ರೀತಿ ಪ್ರೇಮ ಪ್ರಣಯ ಭಾವಬಣ್ಣಗಳು ಇಲ್ಲಿ ಭಿನ್ನ ನೆಲೆಯಲ್ಲಿ ರಂಗೇರಿಸಿಕೊಂಡದ್ದನ್ನು ಗಮನಿಸಬಹುದು. ನವನವಿರು ಭಾವಲೋಕದಲ್ಲಿ ಚೈತ್ರಾ ಹೊಸತನದ ಹುಡುಕಾಟದಲ್ಲಿದ್ದಾರೆ. ಪಯಣ ಬಹು ದೂರದ್ದು. ಹೆಚ್ಚೇನು ಹೇಳಿದರೂ ಆ ‘ಹೇಳಿಕೆ’ನೇ ವಾಚಾಳಿಯಾಗುವ ಅಪಾಯ ಇರುವುದರಿಂದ ಕೆಲವು ಕವಿತೆಗಳ ಪಲಕುಗಳನ್ನು ಸಾದರ ಪಡಿಸುವೆ;

“ಹಸುಗೂಸು ತೃಪ್ತಿಯಾಗುವಷ್ಟು
ಎದೆಹಾಲು ಹೀರಿದ ಕಟಬಾಯಿಯಲಿ
ಬೆಳ್ಳಗೆ ತೊಟ್ಟಿಕ್ಕುವ ಸೊದೆಧಾರೆ
ಕಿಟಕಿ ಸರಳುಗಳಿಂದ
ಸಣ್ಣಗೆ ಸೋರುವ ತೆಳು ಬೆಳದಿಂಗಳು” ( ಬೆಳದಿಂಗಳ ಬಯಕೆ)

**

“ಈ ಆತ್ಮಗಳು
ಮುಖಾಮುಖಿಯಾದವು
ಆಕಸ್ಮಿಕವಂತೂ ಅಲ್ಲವೇ ಅಲ್ಲ
ಇದೊಂದು ಅದೃಷ್ಟ !
ಅವ
ಈಗ ನನ್ನ
“ಆತ್ಮಕ್ಕಂಟಿಕೊಂಡ ನಕ್ಷತ್ರ ಕಡಲು” (ಇದೊಂದು ಅದೃಷ್ಟ)

“ಈ ಜಗತ್ತಿನಲ್ಲಿ ಪ್ರಾಂಜಲವಾದ, ಪ್ರಾಮಾಣಿಕವಾದ, ಗಂಭೀರವಾಗಿರುವುದೆಲ್ಲವೂ ಕಷ್ಟವೇ ಅಲ್ಲವೆ? ಒತ್ತಿ ಬರುವ ಕಣ್ಣೀರನ್ನು ಹೆಪ್ಪುಗಟ್ಟಿಸದೆ ಹರಿಯಲು ಬಿಟ್ಟು ನಿರಾಳವಾಗುವಂತೆ ಬರೆಯಲು ಪ್ರಯತ್ನಿಸಿದ್ದೇನೆ. ಹಾಗೆ ನೋಡಿದರೆ ಸಹಜವಾಗಿ, ಪ್ರಾಮಾಣಿಕವಾಗಿ ಸ್ಫುರಿಸುವ ಯಾವ ಭಾವನೆಗಳಿಗೂ ಅಣೆಕಟ್ಟು ಕಟ್ಟದೆ, ಅವುಗಳ ಬಗ್ಗೆ ಯಾವುದೇ ಅನುಮಾನ, ಅಸಡ್ಡೆ, ಕಟ್ಟಳೆಗಳ ಹಂಗಿಲ್ಲದೆ ಪ್ರಾಮಾಣಿಕವಾಗಿ ಬರೆದಿದ್ದೇನೆ..” ಇದು ಚೈತ್ರಾ ಅವರ ಮನದ ಮಾತು.

“ಕೊರಳ ಇಳಿಜಾರಿನಲ್ಲಿ ಸಿಗ್ಗಿಲ್ಲದೆ ಜಾರುತ್ತವೆ
ಹೊಂಬಣ್ಣದ ಕೇಶರಾಶಿ
ಮತ್ತು
ಅವನ ಕಿರುಬೆರಳು!” (ಒಂಟಿಗಣ್ಣಿನ ಮಾಯಾವಿ)

**

“ಏನೂ ಇಲ್ಲದಿರುವಾಗಲೇ
ಅಲ್ಲೇನೋ ಇರುವುದು
ಒಲವ ಸೆಲೆ ಉಕ್ಕುವುದು

ಇರುಳಲ್ಲಿ ಈಗೀಗ ಹೊಸ ಸೂರ್ಯ
ಕ್ಷಿತಿಜದಿಂದ ಏರಿದಂತೆ ಎದೆಮುಗಿಲು

ತೊಗಲಿನ ಬಟ್ಟೆ ತೊಟ್ಟು
ಮಾತಿಗಿಳಿಯುವ ಆತ್ಮಗಳು
ವಿನಾಕಾರಣ ಕಂಪಿಸುವ
ಈ ಕಂಪನ
ಕಾಯುತ್ತೇನೆ…” (ಎದೆ ಮುಗಿಲ ಸೂರ್ಯ)

**

ಪಾಪ
“ಅವಳ ಹೂವೆದೆಯನ್ನು ಅದೆಷ್ಟು
ಕೋಮಲವಾಗಿ ಅರಳಿಸಿ ನರಳಿಸಿ
ಮಾಯವಾಗಿದ್ದಾನೆ
ಮಾಯಾಂಗ!
ಯಾವ ಕಾಲಕ್ಕೂ ಬಿಡಿಸಲಾಗದ
ಸಿಕ್ಕು
ಮನದೊಳಗೆ ಮನದೊಡೆಯನಿದ್ದಾನೆಯೇ?” (ಮಾಯಾಂಗ)

‘ಅಕ್ಕ’ ನಂತೆ ಇಲ್ಲಿ ಆತ್ಮಸಖ ಪ್ರಭುವಿನ ರೂಪದಲ್ಲೂ ಕಾಣ ಸಿಗುವನು. ಅಲ್ಲಲ್ಲಿ ವಚನಕಾರರು, ರೂಮಿ, ಗಿಬ್ರಾನ್ ಮುಂತಾದವರ ಭಾವ ಬಿಂಬ ಸುಳಿದಾಡಿದಂತೆ ಭಾಸವಾಗಲು ಕಾರಣ ಚೈತ್ರಾ ಅವರ ಅನ್ಯ ಭಾಷಾ ಕಾವ್ಯದ ಓದಿನ ಆಸಕ್ತಿ.

ಛಕ್ಕನೆ ಜಿಗಿದು ಬಾ…
ಅಮೃತವೋ ವಿಷವೋ
ಕುಡಿಸಿಬಿಡು
ದೇವಾ….
ನಿನ್ನ ಬಿಟ್ಟು
ಯಾರಿಹರು ಈ ಲೋಕದಲಿ! (ನೀನಿಲ್ಲದೆ ಮತ್ತಾರಿಲ್ಲವಯ್ಯ….)

“ನಿನ್ನ ವಿರಹದಲ್ಲಿ
ಪೂರ್ತಿ ಮುಳುಗಿ ಹೋಗಿರುವಾಗ

ಈಜುವುದನ್ನಾದರೂ
ನನಗೆ ಕಲಿಸಿಕೊಡು ಪ್ರಭುವೇ !” (ಪ್ರೀತಿ)

ಸದ್ಯ ಚೈತ್ರ ಅವರು ಆಚೆ ಈಚೆಗಿನ ಸದ್ದುಗದ್ದಲಕೆ ಕಿವಿಗೊಡದೆ, ತನಗೊಲಿದಂತೆ ಬರೆದಿದ್ದಾರೆ. “ಈ ಲೋಕದಲ್ಲಿ ಹೊಟ್ಟೆ ಹಸಿವಿಗಿಂತ; ಪ್ರೀತಿಗಾಗಿ ಹಸಿದವರೇ ಹೆಚ್ಚು ಹೌದಾ?” ಎಂದು ಉದ್ಗರಿಸುವ ಕವಯಿತ್ರಿ, ‘ಹೊಟ್ಟೆಯ ಹಸಿವು’ ಅದರ ಯಾತನೆ, ಮತ್ತದರ ಸುತ್ತ ಮುತ್ತಲ ಕ್ಷುಧ್ರತೆ ಅರಿಯದವರೇನಲ್ಲ. ನೋಟ ಮರೆಮಾಚಬಹುದು, ನೋಡದೆ ಇರಲು ಸಾಧ್ಯವಿಲ್ಲ ಅಲ್ಲವೇ? “ಆದರೆ ಕಾವ್ಯದ ವ್ಯಾಕರಣ ಅರಿಯದ ನಾನು ಸಂತೆಯೊಳಗಿನ ಧ್ಯಾನದಲ್ಲಿ ಮುಳುಗಿ, ತೇಲಿ, ಭೋರ್ಗರೆದು, ಪ್ರಶಾಂತವಾಗಿ ಹರಿಯುವ ಪ್ರಯತ್ನ ಮಾಡಿದ್ದೇನೆ. ಕೆಲವು ಬಾರಿ ಭಾವ ಇಲ್ಲವಾಗಿ ಭಾವಶೂನ್ಯ ಮಂಪರಿನಲ್ಲಿ ಐಕ್ಯವಾಗಿ ಹೋದಂತೆ ಭಾಸವಾಗಿ ಧುಮ್ಮುಕ್ಕನೆ ಎದ್ದು, ಭ್ರಮೆಯ ಹುಲ್ಲು ಕಡ್ಡಿಗಳಿಂದ ಗೂಡು ಕಟ್ಟಿಕೊಂಡು ಕೂತವಳಿಗೆ ಎಲ್ಲವೂ ಇಲ್ಲಿ ಕಣ್ಕಟ್ಟು ಎಂದೇ ಅನಿಸಿದರೂ, ಸುಮ್ಮನೆ ಧ್ಯಾನಿಸಿ ಧ್ಯಾನಸ್ಥವಾಗಿ ಕಾದು ಕೂತಿದ್ದೇನೆ. ಈ ಕಾವ್ಯ ನನ್ನ ಕಾಪಾಡಿದೆ.” ಇದು ಚೈತ್ರಾ ಅವರ ಕನ್ಫೇಷನ್. ಹೌದು, ಕಾವ್ಯ ಖಂಡಿತ ಚೈತ್ರಾ ಅವರ ಕೈ ಹಿಡಿದಿದೆ. ಹೌದಲ್ಲಾ! ಈ ಕವಿತೆಯಂಥ ಮಾಯಕದ ಲೋಕವೊಂದರಿಂದ ನಾವು ವಂಚಿತರಾದರೆ! ಊಹಿಸಲೂ ಭಯವಾಗುತ್ತದೆ ಅಲ್ಲವಾ! ಈ ಸಂಕಲನದಲ್ಲಿ ಕವಿಯ ಕಾವ್ಯಲಹರಿಯ ಜೊತೆ ಲೇಖಕಿ, ಕಲಾವಿದೆಯಾದ ಚೇತನ ತೀರ್ಥಹಳ್ಳಿಯವರ ಮನಸೆಳೆವ ಚಿತ್ರಗಳ ಜುಗಲ್ಬಂಧಿ ಇವೆ

‍ಲೇಖಕರು Admin MM

September 10, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: