
ನೆಂಪೆ ದೇವರಾಜ್
ನಮ್ಮ ನಡುವಿನ ವಿಧ್ವಾಂಸ ಡಾ.ಜೆ.ಕೆ ರಮೇಶ್, ಆಳದ ಆಲೋಚನೆಯ ಜಿ.ಎಸ್ ರಾಜೇಂದ್ರ, ಶಿಷ್ಯಲೋಕದ ಜೊತೆ ತಾಯ್ತನದ ಸಂಬಂಧ ಹೊಂದಿರುವ ಡಾ.ಬಿ ಗಣಪತಿ, ಚಂದದ ಹಾಡುಗಾರ ಬಿದರುಗೋಡು ಡಾ.ನಾಗೇಶ್ ಮತ್ತು ನಾನು ಮೊನ್ನೆ ಕಡಿದಾಳು ಶಾಮಣ್ಣನವರನ್ನು ನೋಡಲು ಭಗವತಿಕೆರೆಯ ಅವರ ಮನೆಗೆ ಹೋದಾಗ ಕಡಿದಾಳು ಶಾಮಣ್ಣನವರ ಬಾಯಲ್ಲಿ ಬರುತ್ತಿದ್ದ ಒಂದೇ ಪದ. ಅದು ತೇಜಸ್ವಿ!ತೇಜಸ್ವಿ..!ರೈತ ಚಳುವಳಿ, ಅಡಿಕೆ, ಗತಕಾಲದ ಹುಡುಕಾಟ ಮತ್ತು ಇತ್ತೀಚಿನ ಅವರ ಓದಿನ ಬಗ್ಗೆ ಮಾತೆತ್ತಿದಾಗೆಲ್ಲಾ ಅವರ ಧ್ಯಾನ ಮತ್ತು ಹಪಹಪಿಕೆ ಹೋಗುತ್ತಿದ್ದುದೇ ತೇಜಸ್ವಿ ಕಡೆ! ‘ಪೂರ್ಣ ಚಂದ್ರ ತೇಜಸ್ವಿ ತಮ್ಮ ಮನೆಗೆ ಬಂದದ್ದು, ಫೋಟೋಗ್ರಫಿ ಮಾಡಿದ್ದು ‘ ಈ ಎಲ್ಲದರ ಬಗ್ಗೆ ಪ್ರಶ್ನೆ ಎತ್ತತೊಡಗುತ್ತಾರೆ.
ಎಪ್ಪತ್ತರ ದಶಕದ ಆರಂಭದಲ್ಲಿ ಮಲೆನಾಡಿನ ಫಸೆ ಫಸೆಯ ಫಲವತ್ತಾದ ನೆಲದಿಂದ ಬಂದು ನರಿ _ಕರಡಿಗಳ ಉಯುಲುವಿಕೆಯ ಬೆಂಗಾಡಿನ ಬಿರುಕು ಬಿಟ್ಟ ಭಗವತಿಕೆರೆಯ ಭೂ ಒಡೆತನಕ್ಕೆ ಬಂದ ಸಂದರ್ಭವು ಶಾಮಣ್ಣನವರಿಗೆ ಮೊನ್ನೆಯ ಭೇಟಿಯಲ್ಲಿ ಪದೇ ಪದೇ ಕಾಡತೊಡಗುತ್ತದೆ. ಘಮ ಘಮಿಸುವ ಸೆಗಣಿ ಸಾರಿಸಿದ್ದ ನೆಲದ ಮೇಲೆದ್ದ ಮೇಲ್ಛಾವಣಿಯ ಮನೆಯಲ್ಲಿ ಇವರು ಮತ್ತು ತೇಜಸ್ವಿಯವರು ಕಳೆದಿದ್ದ ದಿನಗಳನ್ನು ನೆನಪಿಸುವ ಬಹುಕೋನದ ಆರ್ಧ್ರತೆಯೊಂದು ನಮಗೆಲ್ಲ ತಿವಿಯ ತೊಡಗುತ್ತದೆ.
ಆ ಕಾಲದ ಭಗವತಿ ಕೆರೆಯ ನೆಲಕ್ಕೆ ಬಂದುಳಿದ ರಾಜೀವ ತಾರನಾಥ್, ಲಂಕೇಶ್, ರಾಮದಾಸ್ ಮತ್ತು ತೇಜಸ್ವಿಯವರು ಬಂದು ಹೋಗೀ ಮಾತಾಡಿದ ಅಷ್ಟೂ ಅರ್ಥಗಳನ್ನು ಕಡಿದಾಳು ಶಾಮಣ್ಣನವರು ನಿನ್ನೆಯ ನಮ್ಮ ಭೇಟಿಯ ಅವಧಿಯಲ್ಲಿ ಮನದಟ್ಟು ಮಾಡಲು ಪ್ರಯತ್ನಿಸುತ್ತಿದ್ದ ರೀತಿ ನಿಜಕ್ಕೂ ಹೊಸ ಲೋಕವೊಂದರ ಅನಾವರಣದಂತೆ ತೋರದಿರಲು ಸಾಧ್ಯವೆ? ಎಪ್ಪತ್ತರ ದಶಕದ ಹೊಸ ಹೊಸ ಕನಸುಗಳ ಮೂಲಕ ಹೊಸ ಸಮಾಜವೊಂದರ ಕಟ್ಟುವಿಕೆಗೆ ಭೂಮಿಕೆಯೊಂದರ ಹುಡುಕಾಟದ ಪ್ರಯತ್ನವೆನ್ನದಿರಲು ಸಾಧ್ಯವೆ? ನಾವುಗಳು ನಮ್ಮದೇ ಮಾತುಗಳ ಮೂಲಕ ಸಮಾಜವಾದಿ ಯುವಜನ ಸಭಾದತ್ತ ಹೋಗುತ್ತಿದ್ದೆವು.

ರೈತ ಚಳುವಳಿಯ ಉತ್ಕರ್ಷದ ದಿವ್ಯತೆಯ ದಿನಗಳತ್ತ ಹೋಗುತ್ತಿದ್ದೆವು, ಫೋಟೋಗ್ರಫಿಯ ನವ ನವೀನ ಆವಿಷ್ಕಾರದತ್ತ ಹೋಗುತ್ತಿದ್ದೆವು.ಅಡಿಕೆಗೆ ಬಂದ ಸದರಿ ಬೆಲೆಯತ್ತ ಹೋಗುತ್ತಿದ್ದೆವು ಅಂತೆಯೇ ಶ್ರೀದೇವಕ್ಕ ಮತ್ತು ಅವರ ಪುತ್ರಿ ಚಿ.ಸೌ ಉಲೂಪಿಯವರು ಬಿಸಿ ಬಿಸಿಯಾಗಿ ಆವಿಷ್ಕರಿಸಿದ್ದ ‘ದಿವಿ’ ಹಲಸಿನ ಬೋಂಡಾದ ಬಗ್ಗೆ ಮಾತಾಡುತ್ತಿದ್ದೆವು. ಇಷ್ಟೆಲ್ಲ ಮಾತಾಡಿದಾಗೆಲ್ಲ ಅವರ ಮಾತು ಹೊರಳುತ್ತಿದ್ದದ್ದು ಮತ್ತು ಅರಳುತ್ತಾ ಹೋದದ್ದು ಪೂರ್ಣ ಚಂದ್ರ ತೇಜಸ್ವಿಯವರು ತಮ್ಮ ಮನೆಗೆ ಬಂದಾಗ ತಾವು ಮತ್ತು ತೇಜಸ್ವಿಯವರು ಒಂದಾಗಿ ಫೋಟೋಗ್ರಫಿಗೆ ಸಂಬಂಧಿಸಿದಂತೆ ರಾತ್ರಿ ಹಗಲೆನ್ನದೆ ನಡೆಸಿದ ಸಾಹಸಗಳತ್ತ!
ಸಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಅಷ್ಷೋ ಇಷ್ಷೋ ಪ್ರಮಾಣದಲ್ಲಿ ನಡೆಯುತ್ತಿದ್ದ ಸೋಷಲಿಸ್ಟ್ ಪಕ್ಷದ ಹೋರಾಟಗಳು ಬೇರೆಲ್ಲ ಪ್ರಶ್ನೆಗಳ ಮೂಲಕ ಎದುರಾಗುತ್ತಿದ್ದರೂ ಅದನ್ನೆಲ್ಲ ಲೆಕ್ಕಿಸದೆ ತೇಜಸ್ವಿಯವರು ಮತ್ತು ತಮ್ಮ ನಡುವೆ ನಡೇಯುತ್ತಿದ್ದ ಮಾತುಕತೆಗಳನ್ನು ಹೇಳಲು ಪ್ರಯತ್ನಿಸುತ್ತಿದ್ದರು. ಇದನ್ನೆಲ್ಲ ಗಂಧರ್ವ ಲೋಕವನ್ನು ಮೀರಿಸುವಂತೆ ಸಹಜವಾಗಿ ಕಂಗೊಳಿಸುತ್ತಿದ್ದ ತಮ್ಮ ಮನೆಯಂಗಳದ ಹೂಗಿಡಗಳ ಮೂಲಕ ಹೇಳ ಹೊರಡುತ್ತಿದ್ದರು.
ನಮ್ಮೆಲ್ಲರ ಇರುವಿಕೆಯನ್ನು ಮೀರಿ ಶಾಮಣ್ಣನವರು ಭಿತ್ತರಿಸುತ್ತಿದ್ದ ತೇಜಸ್ವಿಯವರ ನೆನಪು ಸುತ್ತಣದ ಪರಿಸರ ಲೆಕ್ಕಿಸದ ರೀತಿಯಲ್ಲಿ ಮುಂದುವರಿಯುತ್ತಿದ್ದಂತೆ ಗುರುವಾರದ ಸಂಜೆಯು ಹೊಸ ಭರವಸೆಗಳ ಹುಟ್ಟುವಿಕೆಯಾಗಿ ಸೂಕ್ಷ್ಮ ಮನಸ್ಸುಗಳನ್ನು ತಟ್ಟುತ್ತಿತ್ತು.. ಡಾ.ನಾಗೇಶ್ ಮತ್ತು ಉಲೂಪಿಯವರ ಮನ ಸಂತೈಸಬಲ್ಲ ಗಾಯನಗಳು ಕೂಡಾ ನಮ್ಮಿಂದ ಮರೆ ಮಾಚುವಷ್ಟರ ಮಟ್ಟಿಗೆ ಶಾಮಣ್ಣನವರು ಸಮಾಧಾನ ಚಿತ್ತದಿಂದ ರಾಚುತ್ತಿದ್ದ ತೇಜಸ್ವಿ ಮತ್ತು ತಮ್ಮ ನಡುವಿನ ಹತ್ತು ಹಲವಾರು ಸಾಹಸಗಳ ನೆನಪಿಗೆ ಹಾತೊರೆದ ರೀತಿ ಮನಸ್ಸನ್ನು ತಬ್ಬಿಬ್ಬುಗೊಳಿಸುತ್ತಿವಂತಿತ್ತು.

ಎಂಭತ್ತೇಳು ವರುಷಗಳ ಶಾಮಣ್ಣ ಚಳುವಳಿಗಳಿಂದಾಚೆಯ ಸಂಗೀತದ ಮೋಹಕರೋ..ಅಥವಾ ರಾಗಗಳಾಚೆಯ ಚಳುವಳಿಗಳ ಮೋಹಕರೋ ಎಂಬುದು ಬಿಡಿಸಲಾಗದ ಕಗ್ಗಂಟಾಗತೊಡಗಿದರು .ಹಾಡು, ಹಸೆ, ಕೊಳಲು, ಪುಸ್ತಕ ಹಾರ್ಮೋನಿ, ಬಿಳಲು ಗಳು ಮಲೆನಾಡಿನಿಂದ ತಮ್ಮ ಪತ್ನಿ ಶ್ರೀದೇವಿಯವರೊಡಗೂಡಿ ಹೊಳೆ ಹೊನ್ನೂರಿನ ಭಗವತಿಕೆರೆಗೆ ಬಂದಾಗ ಅಲ್ಲಿ ಪಿಕಳಾರ ಕೋಗಿಲೆ, ಗೊರವಂಕ, ಕಾಜಾಣ ಕಾಮಳ್ಳಿಗಳಿರಲಿಲ್ಲ.ಆದರೀಗ ಹಕ್ಕಿಗಳಿಂಚರದ ತುಂಗೆಯ ತಟವೇ ಭಗವತಿಕೆರೆಯ ಶಾಮಣ್ಣನವರ ಮನೆಯ ಸುತ್ತ ನಿರ್ಮಾಣಗೊಂಡಿದೆ.
ಪ್ರೀತಿ, ಪ್ರೇಮದ ನಿಷ್ಕಲ್ಮಶ ಕವಿತೆಯೊಂದು ತೊರೆ ನೊರೆಯ ಜಲಪಾತಲವಾಗಿ ನಾಡಿನ ಕೊಳೆಯನು ತೊಳೆಯುತಿದೆ. ನಾಡಿಗೆ ಶ್ರೀದೇವಕ್ಕ ಶಾಮಣ್ಣನವರ ಮೂಲಕ ಸತ್ಯ ಶೋಧನೆಯ ದಾರಿಯೊಂದು ಗೋಚವಾಗುತಿರುವ ಬಗ್ಗೆ ಇಡೀ ಹೊಸ ಪೀಳಿಗೆ ನೋಡಹತ್ತಿದೆ.ತೇಜಸ್ವಿಯವರ ಬಗ್ಗೆ ಹತ್ತಾರು ಸಲ ಹೇಳಿದ ಶಾಮಣ್ಣನವರ ಹುಡುಕಾಟ ಸತ್ಯದ್ದು. ಮತ್ತು ಬುದ್ದನ ಕಾಲದಿಂದಲೂ ಮುಂದುವರಿದಂತದ್ದು.
ನಮ್ಮನ್ನೆಲ್ಲ ಆರ್ಧ್ರತೆಯ ಭಾವದೊಂದಿಗೆ ಶ್ರೀದೇವಕ್ಕ ಮತ್ತು ಉಲೂಪಿಯವರು ತಮ್ಮ ಮನೆಯಿಂದ ಕಳುಹಿಸಿ ಕೊಡುತ್ತಿದ್ದಾಗಲೂ ತೇಜಸ್ವಿ ಮತ್ತು ತಮ್ಮ ನಡುವೆ ಎಪ್ಪತ್ತರ ದಶಕದಲ್ಲಿ ತಮ್ಮ ಮನೆಯಲ್ಲಿ ನಡೆದಿದ್ದ ಚರ್ಚೆಯೊಂದರ ಬಗ್ಗೆ ಹೇಳುವ ಉತ್ಸಾಹದಲ್ಲಿದ್ದರು.ಆದರದು ಶಾಮಣ್ಣನವರ ನೆನಪಿಗೆ ಬರುತ್ತಿರಲಿಲ್ಲ.
0 ಪ್ರತಿಕ್ರಿಯೆಗಳು