ಮತ್ತೆ ತೇಜಸ್ವಿ ನೆನಪು

ಗೊರೂರು ಶಿವೇಶ್

ತೇಜಸ್ವಿಯವರು ಬದುಕಿದ್ದರೆ ಸೆಪ್ಟೆಂಬರ್ 8 ಕ್ಕೆ 84 ವರ್ಷ. ಅವರು ನಮ್ಮಿಂದ ಅಗಲಿದ್ದರೂ ಅವರು ಅನನ್ಯ ಪ್ರತಿಭೆ ಜನಮಾನಸದಿಂದ ದೂರವಾಗಿಲ್ಲ ಎಂಬುದಕ್ಕೆ ಮತ್ತೇ ಮತ್ತೇ ಪುನರ್ ಮುದ್ರಣಗೊಳ್ಳುತ್ತಿರುವ ಅವರ ಕೃತಿಗಳು ಸಾಕ್ಷಿಯಾಗಿವೆ.

ಇಪ್ಪತ್ತನೇ ಶತಮಾನದ ಶ್ರೇಷ್ಠ ಕವಿ ಕುವೆಂಪು ತಮ್ಮ ಮಗುವಿನ ಬಗ್ಗೆ ಇದ್ದ ಅಕ್ಕರೆ, ಕನಸುಗಳ ಕುರಿತಾಗಿಯೆ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ‘ಕುಮಾರ ಸಂಭವ’, ಸ್ವಾಗತ ನಿನಗೆಲೆ ಕಂದಯ್ಯ, ತನಯನಿಗೆ, ನಾಮಕಾರಣೋತ್ಸವ ಮುಂತಾದವು ಅವುಗಳಲ್ಲಿ ಒಂದು ಕವಿತೆ ಹೀಗಿದೆ.
‘ಪ್ರೇಮಾಂಗಿನಿಯೆ ನಿನ್ನ
ಕುವರನಾಗಲಿ ಪೂರ್ಣಚಂದ್ರ
ತೇಜಸ್ವಿಃ ಕಾಂತಿ ಶಾಂತಿಯನ್ನಿತ್ತು
ನಲಿಸುವ ರಸ ತಪಸ್ವಿ’
ಇಂಥ ಆಸೆ ಮತ್ತು ಕನಸುಗಳ ಸಾಕರವಾದ ತೇಜಸ್ವಿ ತಂದೆಗಿಂತ ಭಿನ್ನ ಹಾದಿಯನ್ನೆ ತುಳಿದವರು. ತಂದೆ ಕಾಡಿನಿಂದ ನಾಡಿಗೆ ಬಂದರೆ ಇವರು ನಾಡಿಗೆ ಕಾಡಿಗೆ ಹೋದವರು.

ಬಾಲ್ಯ ಕಾಲದ ದಿನಗಳನ್ನು ಗಂಗೋತ್ರಿಯಲ್ಲಿ ಕಳೆದು ನಂತರ ಇಂಟರ್‍ಮಿಡಿಯೇಟ್‍ನಲ್ಲಿ ವಿಜ್ಞಾನ ತೆಗೆದುಕೊಂಡು ವಿಫಲರಾಗಿ ನಂತರ ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಕಡಿದಾಳು ಶಾಮಣ್ಣ, ನಂಜುಂಡಸ್ವಾಮಿ, ಸುಂದರೇಶ್‍ರವರ ಸಂಪರ್ಕಕ್ಕೆ ಬಂದು ಅನೇಕ ಕ್ರಾಂತಿಕಾರಿ ಆಚರಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸೃಜನಶೀಲ ಮನೋಧರ್ಮ, ಫೋಟೋಗ್ರಫಿ, ಸಂಗೀತಜ್ಞಾನ, ಮೀನು ಹಿಡಿಯುವುದು, ಇ-ಕನ್ನಡ ಹೀಗೆ ಇವರ ಆಸಕ್ತಿಯ ಕ್ಷೇತ್ರಗಳು ಅನೇಕ. ಅಂತರ್‍ ಜಾತೀಯ ಜೊತೆಗೆ ತಂದೆಯ ಕನಸಿನ ಮಂತ್ರಮಾಂಗಲ್ಯದ ರೀತಿಯಲ್ಲಿಯೆ ಮಗುವೆ ಆಗುತ್ತಾರೆ.

1957 ರಲ್ಲಿ ಇವರು ಬರೆದ ಮೊದಲ ಕಥೆ ‘ಲಿಂಗ ಬಂದ’ ಪ್ರಜಾವಾಣಿ ಗೀಪಾವಳಿ ಕಥಾ ಪ್ರಶಸ್ತಿಗೆ ಪಾತ್ರವಾಯಿತು. ಆ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರು ತೇಜಸ್ವಿಗೆ ‘You are the best prose’ ಎಂದು ಪತ್ರ ಬರೆದರು. ನಿಸರ್ಗದ ಬಗೆಗಿನ ಗಾಢ ಪ್ರೇಮ, ಅದರ ನಿಗೂಡತೆಯ ಬಗೆಗಿನ ವಿಸ್ಮಯ ಈ ಕೃತಿಯಲ್ಲಿ ಇದೆ. ಅವರ ಮುಂದಿನ ಕೃತಿಗಳಲ್ಲೂ ಸಾಮಾನ್ಯವಾದ ಅಂಶವೆಂದರೆ ಅದು ಪ್ರಕೃತಿಯ ಬಗೆಗಿನ ವಿಸ್ಮಯ. ಜೊತೆಗೆ ಕಥೆಯಲ್ಲಿ ಮಕ್ಕಳಲ್ಲಿ ಮೊಳಕೆಯೊಡೆಯುವ ಭಯದ ಕಲ್ಪನೆ ಸೂಕ್ಷ್ಮವಾಗಿ ಚಿತ್ರಿತವಾಗಿದೆ.

ಒಮ್ಮೆ ಮೋಹಿಯಾಗಿ ಕಂಡ ತೇಜಸ್ವಿ ಮರುಕ್ಷಣವೇ ನಿರ್ಮೋಹಿಯಾಗಿ ಬಿಡುತ್ತಿದ್ದರು. ಸ್ನೇಹಿತರಾದ ರಾಮದಾಸರೊಡನೆ ಕಾವೇರಿ ನದಿ ತಟದಲ್ಲಿ ಮೀನನ್ನು ಹಿಡಿದು ತಂದು ರಾಮದಾಸರ ಪತ್ನಿಗೆ ಅಡುಗೆ ಮಾಡಲು ಹೇಳಿ ಅಡುಗೆಯಾಗುವವರೆಗೆ ಅಲ್ಲಿಯೆ ಇದ್ದ ತೇಜಸ್ವಿ ಊಟದ ಸಮಯಕ್ಕೆ ಸರಿಯಾಗಿ ಕಾಣೆಯಾಗಿದ್ದ ಸ್ನೇಹಿತ ಶ್ರೀರಾಮ್‍ರವರು ನೆನಪಿಸಿಕೊಂಡಿದ್ದಾರೆ. ಅದೇ ರೀತಿ ‘ನವ್ಯ’ ಸಾಹಿತ್ಯ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅದರಿಂದ ಬೇರೆಯಾಗಿ ತನ್ನದೇ ಹಾದಿ ಹಿಡಿದರು. ಆಗ ‘ಅಬಚೂರಿನ ಪೋಸ್ಟ್ ಆಫೀಸ್’ ಕೃತಿಗೆ ಬರೆದ ‘ಹೊಸ ದಿಗಂತದೆಡೆಗೆ’ ಮುನ್ನುಡಿಯಲ್ಲಿ ಅವರನ್ನು ಅಪಾರವಾಗಿ ಪ್ರಭಾವಿಸಿದ ಲೋಹಿಯರವರ ತತ್ವಚಿಂತನೆ ಬಗ್ಗೆ ತಿಳಿಸುತ್ತಾ, ಹೊಸ ದಿಕ್ಕಿನಲ್ಲಿ ಸಾಗಬೇಕಾದ ಅನಿವಾರ್ಯತೆಯನ್ನು ವಿವರಿಸಿದ್ದಾರೆ.

‘ನವ್ಯ ಸಾಹಿತ್ಯ ಸಂಪೂರ್ಣ ನಿಸ್ತೇಜಗೊಂಡಿದೆ. ಬದಲಾಗುತ್ತಿರುವ ಪರಿಸ್ಥಿತಿಗೆ ಪ್ರತಿಸ್ಪಂದಿಸಲು ಅದಕ್ಕೆ ಅಸಾಧ್ಯವಾಗಿದೆ. ಏಕೆಂದರೆ ಮೊದಲನೆಯದಾಗಿ ಯಾಂತ್ರಿಕವಾಗಿರುವ ಅದರ ಸಾಂಕೇತಿಕ ಸಿದ್ದಶೈಲಿ ಮತ್ತು ತಂತ್ರಗಳು, ಎರಡನೆಯದಾಗಿ ಕೇವಲ ಉಪಾಧ್ಯಾಯರಿಂದಲೇ ತುಂಬಿರುವ ಅದರ ಸಾಹಿತಿವರ್ಗ, ಮೂರನೆಯದಾಗಿ ಸಾಹಿತ್ಯದ ಮಟ್ಟಿಗೆ ಸೀಮಿತಗೊಂಡಿರುವ ಅದರ ಕ್ರಾಂತಿಕಾರಕತನ’ ಅವರು ಸೃಷ್ಠಿಸಿದ ಪಾತ್ರ ವಲಯಗಳು ಕೂಡ ಸಮಾಜದ ಕೆಳಸ್ತರದವು. ಪ್ಯಾರ, ಮಂದಣ್ಣ ಮಾರ, ವೆಂಕ್ಟ, ಬಾಬು, ಕರಾಟೆ ಮಂಜ, ಮಾಸ್ತಿ, ಬೈರ ಇತ್ಯಾದಿ. ಅವರ ನಂಬಿಕೆಗಳು ಮತ್ತು ವಿಚಾರಗಳನ್ನು ಕಾಡಿನ ಬಗೆಗಿನ ಅಪಾರ ತಿಳುವಳಿಕೆಯನ್ನು ಯಥಾವತ್ತು ಬಿಂಬಿಸುತ್ತಾ ಸಾಗುತ್ತಾರೆ.

ಜ್ಞಾನದ ಹೆಗಲ ಮೇಲೆ ಪಯಣಿಸುವ ಅಜ್ಞಾನದ ಕುರಿತು ಅವರ ಅನೇಕ ಕಥೆಗಳಲ್ಲಿ ಚರ್ಚಿತವಾಗಿದೆ. ಈ ನಿಟ್ಟಿನಲ್ಲಿ ಅವರ ‘ಅವನತಿ’ ಅವರು ಬರೆದ ಕಥೆಗಳಲ್ಲಿ ಶ್ರೇಷ್ಠ ಕತೆ ಎಂದು ಕೆಲ ವಿಮರ್ಶಕರ ಅಭಿಪ್ರಾಯ. ಅದ್ಭುತ ಶಿಲ್ಪಿ ನೈಪುಣ್ಯ ಹೊಂದಿದ್ದ ಸೂರಾಚಾರಿ, ಊರಿನ ಜನಕ್ಕೆ ಮಾರಿ ಮಸಣಿಗಳನ್ನು ಮಾಡಿಕೊಡಬೇಕಾದ ಅನಿವಾರ್ಯತೆ ಈ ಕೃತಿಯಲ್ಲಿದೆ. ಒಮ್ಮೆ ಸುಂದರವಾಗಿ ಚಿತ್ರಿಸಿದ ಮಾರಿಯ ಶಿಲ್ಪವನ್ನು ಹಿಂತಿರುಗಿಸಿ ಎಲ್ಲರೂ ಹೆದರುವಂತೆ ವಿಕಾರವಾಗಿ ಮಾಡಿಕೊಡಬೇಕೆಂಬ ಹಳ್ಳಿಯ ಜನಕ್ಕೆ ಅವನಲ್ಲಿ ಹುದುಗಿರುವ ಕಲೆಯನ್ನು ಅರ್ಥ ಮಾಡಿಕೊಳ್ಳುವುದಾಗಲಿ ಅಥವಾ ಅಭಿವ್ಯಕ್ತಿ ಮಾಧ್ಯಮವೆಂದು ತಿಳಿದುಕೊಳ್ಳುವುದಾಗಲಿ ಸಾಧ್ಯವಾಗುವುದಿಲ್ಲ. ಇದೇ ಸೂರಾಚಾರಿ, ಸುಬ್ಬಯ್ಯನ ಅತ್ಯದ್ಭುತ ಸುಂದರಿ ಹೆಂಡತಿ ಗೌರಿಯ ಹುಟ್ಟಿದ ಮಕ್ಕಳೆಲ್ಲಾ ಸಾಯ ‘ಮಲೆದೋಸನೇ’ ಎಂದು ನಿರ್ಣಯಿಸಿ ಅರಿಶಿನದ ಕೊಂಬಿನ ಕೆಂಡ ಮಾಡಿ ‘ಮನೇಲಿ ಮೇಲುಗಡೆ ಒಂದು ನೀಲಿನರ ಇರ್ತದೆ ಅದನ್ನು ಸುಟ್ಟು ಅದರೊಳಗಿನ ಹುಳ’ ತೆಗೆಯುವ ಸಲಹೆ ನೀಡಿ ಅದಕ್ಕೆ ಸುಬ್ಬಯ್ಯ ಸಮ್ಮತಿಸುವ ವಿಪರ್ಯಾಸವೂ ಇದೆ.

‘ಸದ್ಯದ ಭಾರತೀಯ ಸಂದರ್ಭದಲ್ಲಿ ಲೋಹಿಯ ಒಬ್ಬರೆ ‘ಒರಿಜಿನಲ್’ ಎಂದೇ ಹೇಳಬಹುದಾದ ತತ್ವ ಮಿಮಾಂಸಕರು. ನನ್ನ ಜೀವನವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ‘ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಬದಲಾಯಿಸಿದ್ದ ಲೋಹಿಯವರ ತತ್ವ ಚಿಂತನೆ’ ಎನ್ನುತ್ತಿದ್ದ ತೇಜಸ್ವಿ ಹೀಗಾಗಿಯೆ ಸಮಕಾಲೀನ ಸಮಸ್ಯೆಗಳಿಗೆ ತಕ್ಷಣದ ಪರಿಹಾರವನ್ನು ತಿಳಿಸುತ್ತಿದ್ದರು.

ಕಾವೇರಿ ನದಿ ನೀರಿನ ಸಮಸ್ಯೆ ಭುಗಿಲೆದ್ದ ಸಂದರ್ಭದಲ್ಲಿ ಅವರು ನೀಡಿದ ಪ್ರತಿಕ್ರಿಯೆ ‘ಆಯಾ ರೈತನ ಜಮೀನಿನ ಮೇಲೆ ಬಿದ್ದ ನೀರು ಆ ಜಮೀನಿಗೆ ಸೇರುವಂತೆ, ಆಯಾ ಪ್ರದೇಶದ ನೀರು ಅವರಿಗೆ ಸೇರಬೇಕು’ ಎಂಬುದಾಗಿತ್ತು. ವಿಮರ್ಶೆ ಕುರಿತ ಅವರ ಅಭಿಪ್ರಾಯ. ‘ಯಾವುದೇ ವಿಮರ್ಶೆಯು ಓದುಗನನ್ನು ತಾನು ವಿಮರ್ಶಿಸುತ್ತಿರುವ ಸೃಜನಶೀಲ ಕೃತಿಗೆ ಅಭಿಮುಖ ಮಾಡಬೇಕು. ಅಂತೆಯೇ ಯಾವುದೇ ಸೃಜನಶೀಲಕೃತಿಯು ಓದುಗನನ್ನು ಹೊಸ ಉತ್ಸಾಹ ಲವಲವಿಕೆಗಳೊಂದಿಗೆ ಜೀವನಾಭಿಮುಖ ಮಾಡಬೇಕು.’

ಜಾಗತೀಕರಣದ ಪ್ರಭಾವ ಕುರಿತಾದ ಅವರ ನುಡಿಗಳು ಹೇಗಿವೆ ‘ಹೊರಗಿನ ಸಂಸ್ಕøತಿಯಿಂದ ಬಂದ ಯಾವುದೇ ಜೀವ ಅಥವಾ ವ್ಯಕ್ತಿ ಅಥವಾ ವಿಚಾರ ಸ್ಥಳೀಯಗೊಳ್ಳದೇ ಹೋದರೆ ಅದು ಒಂದಲ್ಲ ಒಂದು ಹಂತದಲ್ಲಿ ಅಥವಾ ರೂಪದಲ್ಲಿ ‘ಸ್ಥಳೀಯ’ ಸಂಸ್ಕøತಿಯನ್ನು ವಿಭ್ರಮೆಗೆ ಸಿಲುಕಿಸಿ ಅನಾಹುತಗಳಿಗೆಡೆ ಮಾಡುತ್ತದೆ. ಮುಂದುವರಿದ ರಾಷ್ಟ್ರವಾಗಬೇಕೆಂಬ ನಾಗಲೋಟದ ಸ್ಪರ್ಧೆಗಿಳಿದಿರುವ ಭಾರತದ ಹಳ್ಳಿಗಳು ನೋಡಲು ತಣ್ಣಗೆ ನಿದ್ರಿಸುವಂತೆ ಕಂಡರೂ ಒಳಹೊಕ್ಕು ನೋಡಿದರೆ ಭಯಂಕರ ಅಲ್ಲೋಲ ಕಲ್ಲೋಲದ ಹೆದ್ದಾರಿಗಳ ಮೇಲೆ ತುಯ್ದಾಡುತ್ತಿರುವುದು ಕಂಡುಬರುತ್ತದೆ. ಆ ಬಗೆಯ ಅಗಾಧ ಚಟುವಟಿಕೆಗೆ, ಚಡಪಡಿಕೆಗಳಿಗೆ ಪರಂಪರಾಗತ ಜೀವನ ಶೈಲಿಯಿಂದ ವೇಗವಾಗಿ ಬದಲಾಗಲು ಹವಣಿಸುತ್ತಿರುವ ದೇಶವೆ ಪರೋಕ್ಷವಾಗಿ ಮತ್ತು ಅಂತರ್ಗಾಮಿಯಾಗಿ ಪ್ರೇರಣೆ ಎನಿಸುತ್ತದೆ.’

‘ಸಾಂಸ್ಕೃತಿಕ ನಾಯಕತ್ವ’ ‘ಜನಪರ ಹೋರಾಟಗಳು’ ‘ಓರಾಟಗಾರ’ರ ಕೈಗೆ ಸಿಕ್ಕು ಮುಕ್ಕಾಗುತ್ತಿರುವ ಈ ಸಂದರ್ಭ ತೇಜಸ್ವಿಯಂಥ ಮಾರ್ಗದರ್ಶಕರ ನೆನಪು ಮತ್ತೆ ಮತ್ತೆ ಮೂಡುವಂತೆ ಮಾಡುತ್ತಿದೆ.

‍ಲೇಖಕರು Admin

September 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: