ಮತ್ತೆ ಚಾರ್ಲಿ…..ಮತ್ತೆ ಮತ್ತೆ ಚಾರ್ಲಿ!

ಬಿ ಕೆ ಮೀನಾಕ್ಷಿ

ಮನಸ್ಸಿಗೆ ಅತ್ಯಂತ ಸೂಕ್ಷ್ಮವಾಗಿ ತಟ್ಟುವ, ನೋಡಿದ ಕೂಡಲೇ ನಮ್ಮದೆನ್ನಿಸಿಬಿಡುವ ಕೆಲವೊಂದು ವಸ್ತುವಾಗಬಹುದು, ನೋಟವಾಗಬಹುದು, ದಾರಿಹೋಕರೊಬ್ಬರ ಬವಣೆಯೋ, ಸಂಕಟವೋ ಸಂತಸವೋ ಅದೇನಾದರೂ ಆಗಿರಲಿ ಮನದಲ್ಲಿ ಕುಳಿತುಬಿಟ್ಟರೆ ಅಕ್ಷರಗಳಲ್ಲಿ ಹರಡಿಕೊಳ್ಳಬೆಕೆನಿಸುತ್ತದೆ. ಹಾಗೆ ಚೆಲ್ಲಾಡಿಕೊಂಡಾಗ ಕೆಲವರೊಂದಿಷ್ಟು ಆಯ್ದುಕೊಂಡು, ನನ್ನದೂ ಅದೇ ಭಾವ ಎಂದಾಗ, ಓಹೋ ನಾನೊಬ್ಬಳೇ ಅಲ್ಲ ಜಗತ್ತಿನಲ್ಲಿ ಹೀಗೆ ಯೋಚಿಸುವುದು, ನನ್ನ ಜೊತೆಗೆ ನೂರೆಂಟು ಜನರಿದ್ದಾರೆ ಎಂದಾದಾಗ, ಅಕ್ಷರಗಳು ತಂತಾನೇ ಕೂಡಿಕೊಂಡು ಪದಪುಂಜಗಳಾಗಿ ತೆರೆದುಕೊಂಡು ಖಾಲಿಹಾಳೆಯೊಳಗೆ ಮೈಗೂಡಿ ಕೊಂಡರೆ ಮನಸ್ಸಿಗೆಷ್ಟೋ ಹಿತ. ಹಾಗಾಗಿ ಇಷ್ಟು ದಿನಗಳಾದರೂ ಹಸಿಯಾಗಿಯೇ ಇದ್ದ ಕೆಲವು ಸಂಗತಿಗಳನ್ನು ಬರೆದುಕೊಳ್ಳಬೇಕೆಂದಿದ್ದೇನೆ.

ಚಾರ್ಲಿ ಬಿಡುಗಡೆಯಾಗಿ ವಾರ, ಹತ್ತು ದಿನಗಳಾದ ಮೇಲೆ ನಾವೂ ನೋಡಲು ಹೋದೆವು. ನನ್ನ ಮೊಮ್ಮಗ ಕರೆದುಕೊಂಡು ಹೋದ. ಇದಕ್ಕೆ ಮೊದಲು ಕಳೆದ ವರ್ಷ ಹಾಚಿ ಮತ್ತು ಬೆತೋವೆನ್ ಸಿನಿಮಾಗಳನ್ನು ತೋರಿಸಿದ್ದ. ಆವುಗಳನ್ನು ನೋಡಿ ಮನಸ್ಸು ಕಲಕಿಹೋಗಿತ್ತು. ಅಜ್ಜಿ, ಇನ್ನೊಂದು ನಾಯಿ ಸಿನಿಮಾ ನೋಡ್ತೀಯೇನಜ್ಜಿ?” ಕೀಟಲೆಯೋ, ನನಗೆ ತೋರಿಸಬೇಕೆಂಬ ಕಳಕಳಿಯೋ, ಉತ್ಸಾಹವೋ ಏನೋ ಒಂದು ಒಟ್ಟು ಕೇಳಿದ. ಆಯ್ತು ಕಣೋ ರ‍್ತಿನಿ ಅಂದೆ. ಹೋದೆವು. ಸಿನಿಮಾ ಪ್ರಾರಂಭವಾದಾಗಿನಿ೦ದ ಮುಗಿಯುವವರೆಗೂ ನಾನು ನನ್ನ ಸೆರಗನ್ನು ಕಣ್ಣಿನಿಂದ ಕೆಳಗಿಳಿಸಲಿಲ್ಲ. ಕರ್ಚಿಫ್ ಮರೆತುಹೋಗಿದ್ದೆ. ಸಿನಿಮಾ ಮುಗಿದ ಮೇಲೆ ಕಳೆಗುಂದಿದ ನನ್ನ ಮುಖ ನೋಡಿ,ಅಜ್ಜಿ, ನಿಜವಾಗಲೂ ಅದಕ್ಕೇನು ಕ್ಯಾನ್ಸರ್ ಬರಲ್ಲ ಅಜ್ಜಿ, ಅದು ಸತ್ತುಹೋಗಿಲ್ಲ.’ ಅವನಿಗೆ ತಿಳಿದಂತೆ ಸಮಾಧಾನಿಸಿದ. ಆದರೆ ನನ್ನ ಮನಸ್ಸೇಕೋ ದುಃಖದಿಂದ ಮಡುಗಟ್ಟಿಹೋಗಿತ್ತು.

ನನ್ನ ಮಗ ಚಿಕ್ಕವನಿದ್ದಾಗ ಎಲ್ಲಿ ನಾಯಿಮರಿ ಕಂಡರೂ ಎರಡೂ ಕಂಕುಳಿನಲ್ಲಿ ಎರಡೆರಡು ಮರಿಗಳನ್ನು ಇರುಕಿಕೊಂಡು ಬರುತ್ತಿದ್ದ. ಬೆಕ್ಕುಗಳು, ನಾಯಿಗಳನ್ನು ಎಲ್ಲಿ ಕಂಡರೂ ಬಿಡದೆ ಎತ್ತಿಕೊಂಡು ಬಂದು, ಅಮ್ಮ, ಒಂಚೂರು ಹಾಲು ಕೊಡಮ್ಮ ಬಟ್ಟಲಲ್ಲಿ.’ ಅನ್ನುತ್ತಿದ್ದ. ನಾನು ಬೈದುಕೊಂಡರೂ ಕೊಡುತ್ತಿದ್ದೆ.ಅವೆಲ್ಲಿದ್ದವೋ ಅಲ್ಲೇ ಬಿಟ್ಟುಬಂದರೆ ಸರಿ, ಇಲ್ಲದಿದ್ದರೆ ಅದರಮ್ಮ ಓಡಿಸಿಕೊಂಡು ಬರುತ್ತೆ ನೀನೆಲ್ಲಿ ಕಂಡರೂ.’ ಎಂದು ಹೆದರಿಸುತ್ತಿದ್ದೆ. ಆದರೆ ಅವನು ಬಿಡುತ್ತಿರಲಿಲ್ಲ. ಒಂದುದಿನ ಕ್ರಿಕೆಟ್ ಆಡಲು ಪಾಲಿಟೆಕ್ನಿಕ್ ಫೀಲ್ಡ್ ಗೆ ಹೋದವನು ಒಂದು ಮುದ್ದಾದ ಬೆಕ್ಕಿನಮರಿ ತಂದಿದ್ದ. ನನಗೂ ಇಷ್ಟವಾಗಿ ಅದಕ್ಕೆ ಹಾಲು ಹಾಕಿ ಕಾಪಾಡುತ್ತಿದ್ದೆ. ಅದು ಸೀದಾ ತನ್ನ ಜಾಗ ಬಿಟ್ಟು ಒಳಹೊರಗೆ ಓಡಾಡತೊಡಗಿತು.

ಒಂದು ದಿನ ಹಾಸಿಗೆಯಿಂದ ಎದ್ದು ರಗ್ಗು ಮಡಿಸುತ್ತಿದ್ದೆ. ರಗ್ಗಿನ ಮೇಲೆ ಬೆಚ್ಚಗೆ ಮಲಗಿತ್ತು. ತೆಗೆದುಕೊಂಡು ಹೋಗಿ ಆಚೆ ಬಿಟ್ಟೆ. ಆ ಕೇಡಿ ಬೆಕ್ಕಿನಮರಿ, ರಗ್ಗಿನ ಮೇಲೆ ಕಕ್ಕ ಮಾಡಿತ್ತು. ಅಸಹ್ಯವಾಗಿ , ಇವತ್ತೇ ಇದನ್ನು ಬಿಟ್ಟುಬಂದರೆ ಸರಿ, ಇಲ್ಲದಿದ್ದರೆ ನೋಡು’ ಎಂದು ಹೆದರಿಸಿದರೂ ಅವನು ಅದನ್ನು ಬಿಡಲಿಲ್ಲ. ಒಂದುದಿನ ನಾನು ಶಾಲೆಗೆ ಹೋಗುವಾಗ ಸ್ವಲ್ಪ ಬೇಗ ಹೊರಟು ಆಟೋನಲ್ಲಿ ಬೆಕ್ಕಿನ ಮರಿಯನ್ನೂ ಎತ್ತಿಕೊಂಡು, ಪಾಲಿಟೆಕ್ನಿಕ್ ಹತ್ತಿರ ಬಿಟ್ಟು ಸ್ಕೂಲಿಗೆ ಹೋದೆ.ಎಲ್ಲೋಯ್ತೋ ಕಣೋ ಗೊತ್ತಿಲ್ಲ.’ ಎಂದು ಇವನಿಗೆ ಸುಳ್ಳು ಹೇಳಿದೆ. (ಮನಸ್ಸಿನಲ್ಲಿ ಅಳುಕಿದ್ದರೂ) ಮಂಕಾಗಿ ಅತ್ತೂಕರೆದೂ ಮಾಡಿದ. ಆದರೆ ದಿನವೂ ಬೆಡ್ ಶೀಟ್ ಒಗೆಯಲು ನಾನು ತಯಾರಿರಲಿಲ್ಲ. ಆಗ ವಾಶಿಂಗ್ ಮೆಷೀನೂ ಇರಲಿಲ್ಲ.

ಇನ್ನೇನು ಮಲಗಬೇಕು ಹಿತ್ತಲಿನ ಬಾಗಿಲನ್ನು ವಿವೇಕಾ, ವಿವೇಕಾ ಎಂದು ಯಾರೋ ತಟ್ಟುತ್ತಿದ್ದರು. ಸಿದ್ಧಾರ್ಥನ ಧ್ವನಿ. ಹೋಗಿ ಬಾಗಿಲು ತೆಗೆದೆ. ಆಂಟಿ, ವಿವೇಕನ ಬೆಕ್ಕು, ನಮ್ಮನೆ ಹತ್ತಿರ ಇತ್ತು.’ ಬಾಗಿಲು ತೆಗೆದದ್ದೇ ಛಂಗ್ ಅಂತ ನೆಗೆದು ಅದರ ಮಾಮೂಲಿ ಜಾಗಕ್ಕೆ ಹೋಗಿ ಬಟ್ಟಲು ನೋಡತೊಡಗಿತು. ಇವನು ಅದೆಲ್ಲಿದ್ದನೋ ಓಡಿಬಂದು ಅದನ್ನು ಮುದ್ದಿಸಿ ಹಾಲು ಹಾಕಿ ಕುಡಿಯುವುದನ್ನು ನೋಡುತ್ತಾ ಕುಳಿತನು. ನಾನು ಅವರೆದುದರಿಗೆ ನಗುವಿನ ಸೋಗು ಹಾಕಿ ಸದ್ಯ ಸಿಕ್ತಲ್ಲ, ಎಂದೆ. ಹೋದೆಯಾ ಪಿಶಾಚಿ ಎಂದರೆ ಗವಾಕ್ಷಿಯಲ್ಲಿ ಬಂದಿತ್ತು. ಆಟೋನಲ್ಲಿ ಹೋಗಿ ಹಿತ್ತಲ ಬಾಗಿಲಲ್ಲಿ ಬಂದದ್ದನ್ನು ಇನ್ನೇನು ಮಾಡಲಿ? ನಾಯಿಗಳನ್ನೂ ಹಾಗೇ ತಂದಿಟ್ಟುಕೊಳ್ಳುತ್ತಿದ್ದ. ನಾನು ಹೋಗಿ ಬಿಟ್ಟುಬರುತ್ತಿದ್ದೆ. ಈಗ ಇದನ್ನೆಲ್ಲ ಏಕೆ ಹೇಳಬೇಕಾಯಿತೆಂದರೆ ಆಗ ನಾನೆಷ್ಟು ಕ್ರೂರಿಯಾಗಿ ವರ್ತಿಸಿದೆನಲ್ಲ ಎಂದು. ಆದರೆ ನಾಯಿಗಳನ್ನು ಬೆಕ್ಕುಗಳನ್ನು ಸಾಕಿಕೊಳ್ಳುವ ತಾಳ್ಮೆಯಾಗಲೀ, ಬಿಡುವಾಗಲಿ ನನಗಿರಲಿಲ್ಲ. ಆದರೂ ನಾಲ್ಕುದಿನ ಅವನು ತಂದದ್ದನ್ನು ಇಟ್ಟುಕೊಂಡು ಸಾಕಬಹುದಿತ್ತು. ಅವನ ಮನಸ್ಸಿಗೆ ಸಮಾಧಾನ ನೀಡಬಹುದಿತ್ತು. ಹೇಗೆ ಸಾಕಲಾಗುತ್ತಿತ್ತು? ಎಲ್ಲರೂ ಬೆಳಗ್ಗೆ ಮನೆ ಬಿಟ್ಟರೆ ಬರುತ್ತಿದ್ದುದೇ ಸಂಜೆ. ಆಗ ಇವುಗಳು ಒಂಟಿಯಾಗುತ್ತವಲ್ಲ ಎಂದು ನಾನು ಯೋಚಿಸುತ್ತಿದ್ದೆ. ಬಹುಶಃ ಸಾಕಲಾರದ್ದಕ್ಕೆ ಇದೊಂದು ನೆಪವಿರಬೇಕು. ಆದರೆ ಈಗ ಚಾರ್ಲಿ ನೋಡಿದ ಮೇಲೆ ಆ ಬೀದಿನಾಯಿಗಳಲ್ಲಿ ಒಂದಕ್ಕಾದರೂ ಜೀವನ ಕೊಡಬಹುದಿತ್ತು. ಮನೆಯಲ್ಲಿಟ್ಟುಕೊಂಡು ನಾಲ್ಕುತುತ್ತು ಅನ್ನ ಹಾಕಬಹುದಿತ್ತು ಅನಿಸುತ್ತಿದೆ. ಇರಲಿ ಈಗ ಚಾರ್ಲಿಗೆ ಬರೋಣ.

ಮತ್ತೆ ಇನ್ನೊಂದುಸಾರಿ ಚಾರ್ಲಿಗೆ ಹೋಗೋಣವೇನೋ ?’ ಅಂದೆ. ಅದಕ್ಕೆ ಪೀಜಾ ಬರ್ಗರಿನ ಆಸೆ. ನನಗೆ ಅದನ್ನು ಮತ್ತೊಮ್ಮೆ ಡೀಟೈಲಾಗಿ ನೋಡಬೇಕೆಂಬಾಸೆ. ಹೊರಟೆವು. ಅವನು ಗಂಭೀರವಾಗಿ ಹೇಳಿದ, ಅಜ್ಜಿ, ಕರ್ಚಿಫ್ ತೊಗೋಳಜ್ಜಿ. ಮರೀಬೇಡ.’ ರೇಗಿಸುತ್ತಿದ್ದಾನೆಂದು ಮೆಲ್ಲಗೆ ಹೊಡೆದೆ.ನಿಜಾ ಅಜ್ಜಿ. ಇಲ್ಲಾ ಕಾಟನ್ ಸೀರೆ ಉಟ್ಟುಕೋ.’ ಎಂದ. ಇಬ್ಬರೂ ಹೋದೆವು. ಅಳಲಿಲ್ಲ. ಸಮಾಧಾನವಾಗಿ ನೋಡಿದೆ.
ಹಿಂಸೆಯನ್ನು ಪ್ರಚೋದಿಸುತ್ತಿರುವ ಇಂದಿನ ದಿನಮಾನದ ಸಿನಿಮಾಗಳಲ್ಲಿ, ಸಾರ ಕಳೆದುಕೊಂಡ ಕಥಾವಸ್ತುವಿನಲ್ಲಿ, ಕೇವಲ ಕುಣಿತ, ಹೊಡೆತ, ವೈವಿಧ್ಯಮಯ ರೀತಿಯಲ್ಲಿ ಹಿಂಸೆಗಳನ್ನು ತೋರಿಸಿ, ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿರುವ ಸಿನಿಮಾಗಳಿಗಿಂತ ಇದು ಬಹಳ ವಿಶಿಷ್ಠವೆನಿಸಿತು.

ಒಂದು ಜೀವಕ್ಕಾಗಿ ಇನ್ನೊಂದು ಜೀವದ ತಪಸ್ಸು, ಪರಿತಾಪ, ತಹತಹ, ನಿಟ್ಟುಸಿರುಗಳು ಪ್ರೇಕ್ಷಕರ ಹೃದಯದಲ್ಲೂ ಹಾದು ಹೋಗುವುದಿಲ್ಲ…..ಬದಲಾಗಿ ಮನೆಮಾಡಿಕೊಂಡು ಕಾಡುತ್ತವೆ. ಈ ಚಲನಚಿತ್ರದಲ್ಲಿ ನನಗೆ ಯಾವ ಸನ್ನಿವೇಶಗಳೂ ಉತ್ಪ್ರೇಕ್ಷೆ ಎನಿಸಲಿಲ್ಲ. ಜೀವನದ ಹಾದಿಯಲ್ಲಿ ಇದೆಲ್ಲವನ್ನೂ ನಾವುಗಳೂ ಕಂಡವರೇ! ಆದರೆ ಅದನ್ನು ಹಿಡಿದಿಟ್ಟು ಎಲ್ಲರಿಗೂ ತಲುಪಿಸುವುದಿದೆಯಲ್ಲ ಅದೊಂದು ಮಹಾನ್ ಕಾರ್ಯವೇ ಸರಿ. ಎಲ್ಲವನ್ನೂ ಕಳೆದುಕೊಂಡವನೊಬ್ಬನಿಗೆ ಒಂದು ನಾಯಿ ಎಲ್ಲವೂ ಆಗಿ ಇಡೀ ಅವನ ವ್ಯಕ್ತಿತ್ವವನ್ನೇ ಆವರಿಸಿಕೊಂಡು ಅವನ ಜೀವನವನ್ನೇ ಬದಲಿಸುತ್ತದೆ ಎಂದರೆ ಸಣ್ಣಮಾತಲ್ಲ.

ಚಾರ್ಲಿಯ ಮನೋಭಿಲಾಷೆಗಳು ಮೊದಲೇ ವ್ಯಕ್ತವಾದರೂ ಅದನ್ನು ಅರ್ಥೈಸಿಕೊಳ್ಳದೆ, ಅದು ತನಗೆ ಆಪ್ತವಾದಾಗ ಅದರ ಎಲ್ಲ ಭಾವಗಳೂ ತನ್ನದಾದಾಗ ಅದರ ಎಲ್ಲ ನೋಟಗಳೂ ಇವನವೇ ಆಗಿ ಪರಿವರ್ತನೆಗೊಳ್ಳುವುದಿದೆಯಲ್ಲ….. ನಿಜಕ್ಕೂ ಅದ್ಭುತವೇ ಸರಿ!

ತಂದೆತಾಯಿಯನ್ನು ತೊರೆದು ದೂರ ಹೋಗಿ ಯಾರ ಗೊಡವೆಯೂ ಇಲ್ಲದೆ ಬದುಕುತ್ತಿರುವ ಇಂದಿನ ಜನಾಂಗ, ಯಾರಿಗೆ ಯಾರೊಬ್ಬರ ಆಸೆ ಆಕಾಂಕ್ಷೆಗಳೂ ಬೇಕಿಲ್ಲದ ಮನುಷ್ಯ ಪ್ರಪಂಚದ ಇಂದಿನ ಅಮಾನವೀಯ, ಸಂದಿಗ್ಧ ಪರಿಸ್ಥಿತಿಯಲ್ಲಿ, ಒಂದು ಮೂಕಪ್ರಾಣಿಯ ಆಸೆಗಳನ್ನರಿತು ಅದನ್ನು ತೀರಿಸಲಿಕ್ಕಾಗಿಯೇ ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಕಡೆಗೂ ತನ್ನ ಗುರಿ ಸಾಧಿಸುವಲ್ಲಿ, ಮತ್ತು ತನ್ನನ್ನು ನಂಬಿದ ಚಾರ್ಲಿಯ ಜೀವನದ ಅಂತಿಮ ಕ್ಷಣಗಳನ್ನು ಜೊತೆಗೇ ಇದ್ದು ಅನುಭವಿಸುವ ಕಥಾನಾಯಕನ ಏಳು ಬೀಳುಗಳು ಪ್ರೇಕ್ಷಕನ ಹೃದಯದಲ್ಲಿ ತಲ್ಲಣ ಮೂಡಿಸಿದರೂ, ಕಡೆಗೆ ನೆಮ್ಮದಿಯ ನಿಟ್ಟುಸಿರು ಹೊರಹಾಕುವಂತೆ ಮಾಡುವ ನಿರ್ದೇಶಕರ ಕೌಶಲ್ಯ ಅನನ್ಯ. ಹಿಮದ ರಾಶಿಯಲ್ಲಿ ಮೈಮರೆತು ಹೊರಳಾಡುವ, ಓಡುವ ಚಾರ್ಲಿಗೆ ಮಾಡಿಸುವ ಹಿಮದರ್ಶನ, ಪ್ರೇಕ್ಷಕನನ್ನೂ ಪುಳಕಗೊಳಿಸುತ್ತದೆ.

ಸಂದರ್ಭಕ್ಕೆ ತಕ್ಕಂತ ಅನ್ಯಭಾಷಾ ಗೀತೆಗಳು, ಮನರಂಜನೆಗಿ೦ತಲೂ, ನೋಡುಗನನ್ನು ಒಳಗುದಿಗೆ ತಳ್ಳುತ್ತವೆ.
ಎಲ್ಲ ರೀತಿಯಿಂದಲೂ ಹೊಸತೆರನ ಚಲನಚಿತ್ರವಿದು. ಇಲ್ಲಿ ಇನ್ನೊಂದು ವಿಶೇಷವೆಂದರೆ, ಒಬ್ಬ ಪಶುವೈದ್ಯನಿಗೆ ನಿಜವಾದ ಪ್ರಾಣಿಪ್ರೇಮವಿರಬೇಕೆಂಬುದು. ಡಾಕ್ಟರ್ ಬಹಳ ಚೆನ್ನಾಗಿ ಈ ಪಾತ್ರ ನಿರ್ವಹಿಸಿದ್ದಾರೆ. ಈಗಿನ ಡಬಲ್ ಮೀನಿಂಗ್ ಹಾಸ್ಯಗಳನ್ನು ನೋಡೀ ನೋಡೀ ಬೇಸತ್ತವರಿಗೆ, ಅಲ್ಲಲ್ಲೇ ಚಿಕ್ಕ ಚಿಕ್ಕ ಜೋಕುಗಳು ಮನತಣಿಸಿ ನಗು ಮೂಡಿಸುತ್ತವೆ.

ಇದೊಂದು ಸಂಪೂರ್ಣವಾದ ಭಾವನಾತ್ಮಕ ಚಿತ್ರ. ಪರಿಪಕ್ವ ಕವಿತೆಯಂತಿದೆ. ಇಷ್ಟವಾಗುತ್ತದೆ. ಮನದ ಮೂಲೆಯಲ್ಲಿ ಬಚ್ಚಿಟ್ಟುಕೊಂಡಿದ್ದ, ನಾವು ಮಾಡಿದ ತಪ್ಪುಗಳನ್ನು ಕೆದಕಿ ಹೊರಹಾಕುವಂತೆ ಮಾಡುತ್ತದೆ. ಜನ ಮೆಚ್ಚಿದ್ದಾರೆ ನಿಮ್ಮನ್ನು….ಜೊತೆಗೆ ನೀವು ನೀಡಿದ ಸಂದೇಶವನ್ನು ! ಇದು ಸಮಾಜಕ್ಕೆ ನೀವಿತ್ತ ಕೊಡುಗೆಯೇ ಸರಿ.

‍ಲೇಖಕರು Admin

July 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: