ಮತ್ತೂರು ಸುಬ್ಬಣ್ಣ ಕಥೆ – ರಾಂಗ್ ನಂಬರ್

ಮತ್ತೂರು ಸುಬ್ಬಣ್ಣ

ಅಮ್ಮ ಪೋನಿನಲ್ಲಿ ಮಾತಾಡಿ ಮುಗಿಸಿದರು.. ಅಮ್ಮನನ್ನೇ ನೋಡುತ್ತಿದ್ದ ಸನ್ನಿಧಿ ಹೇಳಿದಳು, ‘ಅಮ್ಮ, ನೀನು ಅಪ್ಪನ ಹತ್ತಿರ  ಮಾತನಾಡಿದೆ ಅಲ್ವ? ಅಮ್ಮ, ಅಪ್ಪ ಯಾವಾಗ ಬರ‍್ತಾರಂತೆ?’ ‘ನಮ್ಮ ಸನ್ನಿಧಿಗೆ ಎಲ್ಲ ಅರ್ಥವಾಗುತ್ತೆ.. ಪುಟ್ಟ, ಈ ವಾರಾಂತ್ಯಕ್ಕೆ ಅಪ್ಪ ಬರುತ್ತಾರೆ.’ ‘ಅಮ್ಮ, ಅಪ್ಪ ಹೈದರಾಬಾದಿನಲ್ಲಿ ಯಾಕಿದ್ದಾರೆ? ಇಲ್ಯಾಕೆ ಇಲ್ಲ?’

‘ಅಪ್ಪನದು ಬ್ಯುಸಿನೆಸ್ ಇದೆ ಅಲ್ಲವ? ಅದಕ್ಕೆ ಅಪ್ಪ ಹೈದರಾಬಾದಿನಲ್ಲಿದ್ದಾರೆ. ಸನ್ನಿಧಿಯನ್ನು ಒಳ್ಳೆಯ ಸ್ಕೂಲಲ್ಲಿ ಓದಿಸಬೇಕು. ಅದಕ್ಕೆ ನಾವಿಲ್ಲಿದ್ದೇವೆ.’ ‘ಅಮ್ಮ, ಅಪ್ಪನನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈಗ ನನಗೆ ಅಪ್ಪ ಬೇಕು’ ಎಂದು ಸನ್ನಿಧಿ ಬಾಲ ಹಟ ಮಾಡಿದಳು. ಸನ್ನಿಧಿಯನ್ನು ತಬ್ಬಿಕೊಂಡು ಅಮ್ಮ ಹೇಳಿದರು, ‘ನಾನೂ ಅಷ್ಟೆ ಪುಟ್ಟ. ಅಪ್ಪನಿಗೆ ಬೇಗ ಬರುವಂತೆ ಹೇಳೋಣ. ಅಪ್ಪ ಈ ಬಾರಿ ಬಂದಾಗ ಹೊರಗೆ ಎಲ್ಲಾದರೂ ಸುತ್ತಾಡೋದಕ್ಕೆ ಹೋಗೋಣ.’ ‘ಪ್ರಾಮಿಸ್?’ ‘ಪ್ರಾಮಿಸ್.’

ಸನ್ನಿಧಿ ತನ್ನ ಪುಟ್ಟ ಟೇಬಲ್ಲಿನ ಮೇಲೆ ಏನೋ ಚಿತ್ರ ಬರೆಯುತ್ತಿದ್ದಳು. ಅಮ್ಮ ಪೋನಿನಲ್ಲಿ ಮಾತನಾಡುತ್ತಿದ್ದರು. ಅಮ್ಮ ಮಾತಾಡುವುದೆಲ್ಲ ಕೇಳಿಸುತ್ತಿತ್ತು. ಆ ಕಡೆಯಿಂದ ಮಾತನಾಡುತ್ತಿರುವವರು ಎದಿರು ಮನೆಯ ಕಿರಣ್ ಅಂಕಲ್ ಎಂದು ತಿಳಿಯಿತು. ಆ ಗೃಹ ಸಮುಚ್ಚಯದಲ್ಲಿ ನಾಲ್ಕು ಅಂತಸ್ತಿನ ಮನೆಗಳಿದ್ದವು. ಅಂಕಲ್ ಕಿರಣ್ ಅವರ ಬಾಲ್ಕನಿ ಸನ್ನಿಧಿಯ ಕೋಣೆಯಿಂದ ಕಾಣ ಸುತ್ತಿತ್ತು. ತನ್ನ ಟೇಬಲ್ಲಿನಿಂದ ಎದ್ದು ಬಂದು ಕಿಟಕಿಯ ಬಳಿ ಓಡಿದಳು.

ಅಂಕಲ್ ಕಿರಣ್ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಮಾತನಾಡುತ್ತಿದ್ದರು. ಮತ್ತೆ ಓಡಿಬಂದು ಅಮ್ಮನಿಗೆ ಕಾಣಿಸದಂತೆ ನಿಂತು ಅಮ್ಮನ ಮಾತನ್ನೂ ಕೇಳಿಸಿಕೊಂಡಳು. ಅಂಕಲ್ ಕಿರಣ್ ಜೊತೆಗೇ ಅಮ್ಮ ಮಾತನಾಡುತ್ತಿರುವುದು ಎಂದು ಅವಳಿಗೆ ಖಾತ್ರಿಯಾಯಿತು. ಅಮ್ಮ ಮತ್ತು ಕಿರಣ್ ಅಂಕಲ್ ತುಂಬಾ ಹೊತ್ತು ಮಾತಾಡಿದರು. ಕಿರಣ್ ಅಂಕಲ್ ಎಂದರೆ ಸನ್ನಿಧಿಗೆ ಇಷ್ಟವೇ. ಆಗಾಗ ತುಂಬಾ ಚಾಕೊಲೇಟ್ ತಂದು ಕೊಡ್ತಾರೆ. ಆಫೀಸಿನಿಂದ ವಿಮಾನದಲ್ಲಿ ಅಮೇರಿಕ, ಸಿಂಗಪುರ, ಜರ್ಮನಿಗೆ ಹೋದಾಗ ಅಲ್ಲಿನ ಚಾಕೋಲೇಟು, ಗೊಂಬೆಗಳು, ಫ್ರಾಕುಗಳನ್ನೂ ತಂದುಕೊಟ್ಟಿದ್ದಾರೆ.

ಕಿರಣ್ ಅಂಕಲ್ ಜೊತೆ ಒಮ್ಮೊಮ್ಮೆ ಅವರ ಕಾರಲ್ಲಿ ಮಾಲುಗಳಿಗೆ ಹೋಗಿರುವುದೂ ಉಂಟು. ‘ಕಿರಣ್ ಅಂಕಲ್ ಎಂದರೆ ನನಗೆ ತುಂಬ ಇಷ್ಟ’ ಎಂದುಕೊಂಡಳು ಸನ್ನಿಧಿ. ಜೊತೆಯಲ್ಲೇ ಇನ್ನೊಂದು ಆಲೋಚನೆ ಬಂದಿತು. ಅಮ್ಮ ಅಂಕಲ್ ಜೊತೆ ಇಷ್ಟು ಹೊತ್ತು ಮಾತಾಡೋದಕ್ಕೆ ಏನಿರುತ್ತೆ? ಅಮ್ಮನ ಸ್ನೇಹಿತ ಅಂಕಲ್ ಹೌದು. ಆದರೆ ಅಮ್ಮನಿಗಿಂತ ಚಿಕ್ಕವರು. ನೋಡೋದಕ್ಕೆ ಚೆನ್ನಾಗಿದ್ದಾರೆ.

ಯಾವಾಗಲೂ ಮೈಮೇಲೆ ಸೆಂಟು ಹಾಕಿಕೊಳ್ಳುತ್ತಾರೆ. ತಲೆಯಲ್ಲಿ ಕಪ್ಪು ಗುಂಗರು ಕೂದಲು. ಒಳ್ಳೆ ಶರ್ಟು ಹಾಕಿಕೊಳ್ಳುತ್ತಾರೆ. ಚೆನ್ನಾಗಿ ಮಾತನಾಡುತ್ತಾರೆ. ‘ಅಂಕಲ್ ಕಿರಣ್ ಎಂದರೆ ನನಗೆ ಇಷ್ಟ. ಅಮ್ಮನಿಗೂ ಇಷ್ಟ’ ಎಂದು ಸನ್ನಿಧಿ ತನ್ನಷ್ಟಕ್ಕೆ ತಾನೆ ಹೇಳಿಕೊಂಡಳು. ಅಮ್ಮ ಕೂಡ ಖುಷಿಯಿಂದ ಅಂಕಲ್ ಜೊತೆ ಮಾತಾಡುತ್ತಲೇ ಇದ್ದರು. ಸನ್ನಿಧಿ ತನ್ನ ಡ್ರಾಯಿಂಗ್ ಪುಸ್ತಕ ತೆರೆದಳು. ಏನಾದರೂ ಡ್ರಾಯಿಂಗ್ ಮಾಡೋಣ ಎನ್ನಿಸಿತು. ಶುರು ಮಾಡಿದಳು. ಚಿತ್ರ ಮುಗಿಸಿ ಬಣ್ಣ ತುಂಬಿದಳು.

ಅಮ್ಮ ಪೋನಿನಲ್ಲಿ ಮಾತಾಡುವುದನ್ನು ನಿಲ್ಲಿಸಿದ್ದರು. ಒಂದು ಹಾಡನ್ನು ಗುನುಗಿಕೊಳ್ಳುತ್ತ ಸೋಫಾದ ಸೀಟುಗಳ ಧೂಳನ್ನು ಒರೆಸುತ್ತಿದ್ದರು. ಸನ್ನಿಧಿ ಕಿಟಿಕಿಯಿಂದ ಕಿರಣ್ ಅಂಕಲ್ ಮನೆಯ ಬಾಲ್ಕನಿಯತ್ತ ನೋಡಿದಳು. ಅಂಕಲ್ ಕಾಣಿಸಲಿಲ್ಲ.

ತಾನು ಮಾಡಿದ್ದ ಚಿತ್ರವನ್ನು ಅಮ್ಮನಿಗೆ ಕಾಣಿಸದಂತೆ ಹಿಂದೆ ಹಿಡಿಯುತ್ತ ಸನ್ನಿಧಿ ಓಡಿಬಂದಳು. ‘ಅಮ್ಮ ಅಮ್ಮ  ನೀನೀಗ ಕಿರಣ್ ಅಂಕಲ್ ಜೊತೆ ಮಾತನಾಡಿದೆ. ಅಲ್ಲವ?’ ಅಮ್ಮ ‘ಹೂಂ’ ಎನ್ನುತ್ತ ಆಶ್ಚರ್ಯದಿಂದ ಸನ್ನಿಧಿಯತ್ತ ನೋಡಿದರು. ‘ಕಿರಣ್ ಅಂಕಲ್ ಎಂದರೆ ನನಗೆ ಇಷ್ಟ. ನಿನಗೂ ಇಷ್ಟ ಅಲ್ಲವ ಅಮ್ಮ?’ ಅಮ್ಮ ಮತ್ತೊಮ್ಮೆ ಆಶ್ಚರ್ಯದಿಂದ ಸನ್ನಿಧಿಯತ್ತ ನೋಡಿದರು. ‘ಅಮ್ಮ, ಕಿರಣ್ ಅಂಕಲ್ ಒಬ್ಬರೇ ಇದ್ದಾರಲ್ಲವ? ಅವರ ಮನೆಗೆ ಆ್ಯಂಟಿ ಬಂದಿಲ್ಲ ಅಲ್ಲವ?’ ಅಮ್ಮ ಸನ್ನಿಧಿಯ ಮಾತುಗಳನ್ನು ಕೇಳುತ್ತ ಸೋಫಾದ ಮೇಲೆ ಕುಳಿತರು.

‘ಅಮ್ಮ, ಕಿರಣ್ ಅಂಕಲ್ ನಿನಗಿಂತ ಚಿಕ್ಕವರಲ್ಲವ?’ ‘ಹೂಂ ಹೌದು ಯಾಕೆ?’ ‘ಸುಮ್ಮನೆ ಕೇಳಿದೆ.’ ‘ಹೌದು ಕಿರಣ್ ನನಗಿಂತ ಐದು ವರ್ಷ ಚಿಕ್ಕವರು. ತುಂಬಾ ಓದಿದ್ದಾರೆ. ಒಳ್ಳೆ ಕಂಪನಿಯಲ್ಲಿ ದೊಡ್ಡ ಕೆಲಸ. ಒಳ್ಳೆ ಸಂಬಳ. ಒಳ್ಳೆ ಕಾರು’ ‘ಮತ್ಯಾಕೆ ಕಿರಣ್ ಅಂಕಲ್‌ಗೆ ಅವರ ಫ್ರೆಂಡ್ ಆ್ಯಂಟಿ ಬಂದಿಲ್ಲ?’ ಬರ‍್ತಾರೆ ಬಿಡು. ಏನವಸರ?’ ‘ಅಮ್ಮ ಅಮ್ಮ ನಾನೊಂದು ಚಿತ್ರ ಮಾಡಿದ್ದೇನೆ. ಕಣ್ಣುಮುಚ್ಚು, ನಾ ಹೇಳಿದಾಗ ಕಣ್ಣು ತೆರೆದು ನೋಡಬೇಕು. ಆಯ್ತಾ?’ ಅಮ್ಮ ಕಣ್ಣು ಮುಚ್ಚಿದರು. ಕಣ್ಣು ಬಿಡೆಂದು ಹೇಳುತ್ತ, ಸನ್ನಿಧಿ ತಾನು ಮಾಡಿದ್ದ ಚಿತ್ರವನ್ನು ಅಮ್ಮನಿಗೆ ತೋರಿಸಿದಳು.

‘ಎಷ್ಟು ಚೆನ್ನಾಗಿದೆ!’ ಎಂದರು, ಅಮ್ಮ. ‘ಅಮ್ಮ, ನೀ ಹೇಳು ನಿನಗೆ ಯಾರು ಇಷ್ಟ ಆದರು?’ ಒಂದು ಚಿತ್ರಕ್ಕೆ ತಲೆಯಲ್ಲ ಕಪ್ಪು ಕೂದಲು. ಕೆಂಪು ಬಣ್ಣದ ಟೀ ಶರ್ಟು, ಕಪ್ಪು ಷೂ. ಇನ್ನೊಂದು ಚಿತ್ರದ ವ್ಯಕ್ತಿಯಲ್ಲಿ ತಲೆಯಲ್ಲಿ ಕೂದಲೇ ಇರಲಿಲ್ಲ. ಕಿವಿಯ ಬಳಿ ಒಂದೆರೆಡು ಕೂದಲು ಗಾಳಿಯಲ್ಲಿ ಹಾರುತ್ತಿತ್ತು. ಕಂಬಳಿಮೀಸೆ. ದಪ್ಪ ಕನ್ನಡಕ. ಹೊಟ್ಟೆ ದಪ್ಪ. ಕೋಟು ಷೂ ತೋರಿಸಿದ್ದಳು.

‘ಅಮ್ಮ ನಿನಗೆ ಯಾವುದು ಇಷ್ಟವಾಯಿತು?’ ಅಮ್ಮ ಸಹಜವಾಗಿ ತುಂಬ ಕೂದಲಿನ ಕಪ್ಪು ಕನ್ನಡದ ಯುವಕನ ಚಿತ್ರದ ಮೇಲೆ ಬೊಟ್ಟು ಇಟ್ಟಳು. ‘ನಾನು ಅಂದುಕೊಂಡದ್ದು ನಿಜ ಆಯಿತು.’ ‘ಏನು? ಯಾಕೆ?’ ‘ಇದು ಕಿರಣ್ ಅಂಕಲ್.

ಇನ್ನೊಂದು ಚಿತ್ರ ಅಪ್ಪನದು. ನನಗೆ ಗೊತ್ತಿತ್ತು ನೀನು ಕಿರಣ್ ಅಂಕಲ್ ಚಿತ್ರಾನೇ ಇಷ್ಟ ಪಡೋದು ಅಂತ. ನೀನು ಈಗ ಮಾತನಾಡಿದ್ದು ಕಿರಣ್ ಅಂಕಲ್ ಜೊತೇಗಲ್ಲವೆ? ಆಗಲೇ ನಾನು ಚಿತ್ರ ಮಾಡಿದ್ದು. ಏನು ಮಾತಾಡಿದೆಯಮ್ಮ ಅಷ್ಟುಹೊತ್ತು?’ ಅಮ್ಮ ಸನ್ನಿಧಿಯನ್ನು ಪ್ರಶ್ನಾರ್ಥಕವಾಗಿ ನೋಡಿದರು. ಮಾತಾಡಲಿಲ್ಲ. ‘ಚಿತ್ರ ಚೆನ್ನಾಗಿದೆ ಚೆನ್ನಾಗಿದೆ’ ಎನ್ನುತ್ತ ಸನ್ನಿಧಿಯನ್ನು ಬಾಚಿತಬ್ಬಿ ತಮ್ಮ ಮಡಿಲಲ್ಲಿರಿಸಿ ಕೊಂಡರು.

‘ಅಮ್ಮ ನಾಳೇನೇ ಅಲ್ಲವ ಅಪ್ಪ ಬರೋದು?’ ‘ಹೂಂ, ಹೌದು. ಯಾಕೆ?’ ‘ಮತ್ತೆ ಮತ್ತೆ….’ ‘ಏನು ಹೇಳು ಸನ್ನಿದಿ.’ ‘ಅಪ್ಪ ಬಂದಾಗ ಕಿರಣ್ ಅಂಕಲ್ಲೂ ಮನೆಗೆ ಬರ್ತಾರ, ಅಮ್ಮ?’ ‘ಅಂದರೆ?’ ‘ನನಗೆ ಕಿರಣ್ ಅಂಕಲ್ ಇಷ್ಟ. ಆದರೆ ಅಪ್ಪನಿಗೆ ಇಷ್ಟ ಆಗದೇ ಇದ್ದರೆ?’ ಎಂದು ಸನ್ನಿಧಿ ಅಮ್ಮನತ್ತ ನೋಡಿದಳು. ಅಮ್ಮನಿಗೆ ಏನು ಹೇಳಬೇಕು ಗೊತ್ತಾಗಲಿಲ್ಲ. ತಮ್ಮ ಕೆಲಸದ ನೆವ ಹೇಳುತ್ತ ಅಡುಗೆ ಮನೆಗೆ ಹೋದರು.

ಅಂದು ಭಾನುವಾರ. ಅಪ್ಪ ಹೈದರಾಬಾದಿನಿಂದ ಬರುವದಿನ. ಮೊದಲ ವಿಮಾನಕ್ಕೇ ಬರುತ್ತಾರೆಂದು ಅಮ್ಮ ಹೇಳಿದ್ದರು. ‘ಸನ್ನಿಧಿ, ಅಪ್ಪ ಬರುವ ಹೊತ್ತಾಯಿತು. ವಿಮಾನ ನಿಲ್ದಾಣದಿಂದ, ಟಾಕ್ಸಿಯಲ್ಲಿ ಮನೆಗೆ ಬರುತ್ತಾರೆ. ಬಾ ಗೇಟಿನಲ್ಲಿ ಅಪ್ಪನನ್ನು ಇಳಿಸಿಕೊಂಡು ಬರೋಣ.’ ಸನ್ನಿಧಿಗೆ ಯಾಕೋ ಮನಸ್ಸು ಇದ್ದಂತೆ ಕಾಣಲಿಲ್ಲ.

ಪ್ರತಿಬಾರಿ ಉತ್ಸಾಹದಿಂದ ಪುಟಿಯುತ್ತಿದ್ದ ಸನ್ನಿಧಿಗೆ ಏನಾಯಿತೆಂದು ಅಮ್ಮ ಅಂದು ಕೊಂಡರು. ‘ಸರಿ ನಾನು ಕೆಳಗೆ ಹೋಗಿ ಅಪ್ಪನನ್ನು ಕರೆದುಕೊಂಡು ಬರುತ್ತೇನೆ. ಜೋಕೆ’ ಎನ್ನುತ್ತ ಅಮ್ಮ ಹೊರಟರು. ತನ್ನ ಯೋಚನೆಗಳಲ್ಲೇ ಸನ್ನಿಧಿ ಕಳೆದು ಹೋಗಿದ್ದಳು.

ಅಮ್ಮ ಹೋದನಂತರ ಮೊಬೈಲ್ ರಿಂಗಾಯಿತು. ಅದು ಅಮ್ಮನ ಫೋನಾಗಿತ್ತು. ‘ಓಹೋ ಅಮ್ಮ ಪೋನು ಬಿಟ್ಟುಹೋಗಿದ್ದಾರೆ’ ಎಂದು ಕೊಳ್ಳುತ್ತ ಸನ್ನಿಧಿ ಅಮ್ಮನ ಮೊಬೈಲಿನತ್ತ ಬಂದಳು. ಮೊಬೆಲ್‌ನಲ್ಲಿ ಕಿರಣ್ ಎಂದು ಹೆಸರು ಬರುತ್ತಿತ್ತು ಮೊಬೈಲನ್ನು ಹಿಡಿದು ತನ್ನ ಕೋಣೆಗೆ ಓಡಿದಳು. ಕಿಟಕಿಯಿಂದ ಕಿರಣ್ ಅಂಕಲ್ ಮನೆಯ ಬಾಲ್ಕನಿಯತ್ತ ನೋಡಿದಳು. ಕಿರಣ್ ಅಂಕಲ್ ಕೈಯಲ್ಲಿ ಮೊಬೈಲ್ ಹಿಡಿದ್ದರು. ಸನ್ನಿಧಿ ಮೊಬೈಲಿನ ಕರೆಯನ್ನು ಸ್ವೀಕರಿಸಿ ಸ್ವಲ್ಪ ಎತ್ತರದ ದನಿಯಲ್ಲಿಯೇ ಉತ್ತರಿಸಿದಳು ‘ರಾಂಗ್ ನಂಬರ್’.

‍ಲೇಖಕರು Admin

July 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: