‘ಮಣಿಬಾಲೆ’ ಪುಸ್ತಕ ಸಂವಾದ ಫೋಟೋ ಆಲ್ಬಂ…

‘ಮಣಿಬಾಲೆ’ ಪುಸ್ತಕ ಸಂವಾದಕ್ಕೆ ಬಂದು ಕೃತಿಯ ಹತ್ತುಹಲವು ಬಗೆಯನ್ನು ಬಗೆದು ತೋರಿದ ಎಲ್ಲ ಸ್ನೇಹಿತರಿಗೂ ಪ್ರೀತಿಯ ವಂದನೆ –
ಗಂಡು ಹೆಣ್ಣಿನ ಸಂಬಂಧದ ವಿಷಮತೆಗಳು, ದುರಂತಗಳು, ಗಂಡು ಹೆಣ್ಣನ್ನು ಹುರಿದು ಮುಕ್ಕಲು ಹುಡುಕುವ ನೂರಾರು ದಾರಿಗಳು ಇವುಗಳನ್ನು ಅಜ್ಜಿಯ ಕಣ್ಣಿನಿಂದ ನೋಡುತ್ತಲೆ ಮಣಿಬಾಲೆ ಬಾಲೆತನವನ್ನು ಉಳಿಸಿಕೊಂಡೂ ಅಜ್ಜಿಯ ಪ್ರಬುದ್ಧತೆಯನ್ನೂ ಪಡೆಯುತ್ತಾ ಹೋಗುತ್ತಾಳೆ.

ಸರಿತಪ್ಪುಗಳ ತಕ್ಕಡಿಯಲ್ಲಿತೂಗಲಾಗದ ಸನ್ನಿವೆಶಗಳಲ್ಲಿ ಹೆಣ್ಣನ್ನು ಮಾತ್ರ ಅನಾಯಾಸವಾಗಿ ಸಮುದಾಯ ತಪ್ಪಿತಸ್ಥಳ ಜಾಗದಲ್ಲಿ ಕೂರಿಸುವುದನ್ನು ಬದುಕಿನುದ್ದಕ್ಕೂ ಕಂಡರೂ ಅಜ್ಜಿಗೆ ಬದುಕಿನ ಮೇಲಾಗಲೀ ಹೆಣ್ಣುಜನ್ಮದ ಬಗೆಗಾಗಲೀ ಕಿಂಚಿತ್ತೂ ಬೇಸರವಿಲ್ಲ, ಸಿನಿಕತನವಿಲ್ಲ.ಈ ಅಂಶದಿಂದಲೇ ಈ ಕೄತಿಯ ನಿಜವಾದ ಶಕ್ತಿಯ ಅರಿವು ಓದುಗರಿಗಾಗುತ್ತದೆ. ಹೆಣ್ಣಿನ ವಿಶ್ವಾಸದ ಮೂಲ, ತನ್ನ ಪಾತ್ರದ ಅನಿವಾರ್ಯತೆ, ಮಹತ್ವವನ್ನು ತನಗೆ ತಾನೇ ಅರಿತಿರುವುದರಲ್ಲಿದೆ.

ಕಾದಂಬರಿಯಲ್ಲಿ ಅಡಿಗೆ ಮನೆ, ಅಡುಗೆ, ಹಬ್ಬ ಹರಿದಿನಗಳು, ಮದುವೆ ಮುಂಜಿಗಳು, ನಾಯಕ ನಾಯಕಿಯರ ಪಾತ್ರ ವಹಿಸುತ್ತಾ ಹೋಗುತ್ತವೆ. ಗಂಡಿನ ಹೊರಲೋಕ, ಅವನ ಕೄಷಿ, ದುಡಿಮೆ, ಅಧಿಕಾರ ಇವೆಲ್ಲದರಷ್ಟೇ ಅಥವಾ ಇವುಗಳಿಗಿಂತಲೂ ಮೂಲಭೂತವಾಗಿ ಅಡಿಗೆ ಮನೆಯಿದೆ ಎನ್ನುವ ಸತ್ಯದ ವಕ್ತಾರರಾಗಿ, ಪ್ರತಿನಿಧಿಗಳೂ , ಪ್ರತಿಪಾದಕರೂ ಆಗಿದ್ದಾರೆ ಈ ಕೃತಿಯ ಸ್ತ್ರೀ ಪಾತ್ರಗಳು. ಗಂಡು, ಗಂಡಾಳಿಕೆ ಅಧಿಕೄತವಾಗಿ ಒಪ್ಪದಿದ್ದರೂ ಹೆಣ್ಣು ಮನೆಯ ಕೇಂದ್ರ ಎನ್ನುವ ಅರಿವು ಈ ಹೆಣ್ಣುಮಕ್ಕಳಲ್ಲಿ ತುಂಬುವ ಆತ್ಮವಿಶ್ವಾಸ ಅಗಾಧವಾದುದು. ತಮ್ಮ ಕಾರ್ಯ ನಿರ್ವಹಣೆ ಮತ್ತು ಮೌನದಲ್ಲೇ ಇಲ್ಲಿನ ಹೆಣ್ಣುಮಕ್ಕಳು ಸ್ತ್ರೀಲೋಕವೊಂದನ್ನು ಅದ್ಭುತವಾಗಿ ಕಟ್ಟುತ್ತಾ ಹೋಗುತ್ತಾರೆ.

ಮೂರ್ತ ಕದನವಿಲ್ಲದೆಯೇ ಕದನವೊಂದನ್ನು ಇವರು ಕಾದಿ ಗೆಲ್ಲುವ ಕಡೆಗೆ ಚಲಿಸುತ್ತಾ ಹೋಗುತ್ತಾರೆ.ಹಾಗೆಂದು ಇದು ಹೆಣ್ಣಿನ ವೈಭವೀಕರಣವೆ ಎಂದರೆ ಅಲ್ಲವೇ ಅಲ್ಲ. ಅಳುಮುಂಜಿಯರಲ್ಲದ, ಸ್ವಮರುಕವಿಲ್ಲದ , ತನ್ನ ಬದುಕಿನ ಬಗ್ಗೆ ಹೆಚ್ಚೇನೂ ಹಳಹಳಿಕೆಯಿಲ್ಲದೆ, ಇದು ತನ್ನ ಲೋಕ ಎನ್ನುವ ವಾಂಛೆಯಲ್ಲಿ ಬದುಕಿಗೂ ಸಂಸಾರಕ್ಕೂ ಆತುಕೊಂಡ ಇಲ್ಲಿನ ಮಹಿಳೆಯರು ಶಕ್ತಿವಂತರಾಗಿಯೇ ಕಾಣಿಸುತ್ತಾರೆ. ಸೋತೆನೆನ್ನದೆ, ಉಸ್ಸೆನ್ನದೆ ಕೆಲಸ ಮಾಡುವ ಈ ಹೆಣ್ಣುಮಕ್ಕಳು ಕರಾರಿಗೆ. ಗಂಡಿನ ಜೀತಕ್ಕೆ ಮಾಡುವವರಂತೆ ಕಾಣಿಸದೆ, ತಾನಿಲ್ಲದೆ ನಡೆಯದ ಈಮನೆಯನ್ನು ನಾನು ಕಟ್ಟಿ ನಿಲ್ಲಿಸಿದ್ದೇನೆ ಎನ್ನುವ ಧರ್ತಿಯಲ್ಲಿ ಬದುಕು ಸಾಗಿಸುತ್ತಾರೆ. ಹೆಣ್ಣಿಗೆ ಅಗತ್ಯವಾಗಿ ಬೇಕಾಗಿರುವುದೇ ಈ ಸ್ವಪ್ರೀತಿ, ಸ್ವಗೌರವ. ಲೋಕ ಒಪ್ಪದಿದ್ದರೆ ಏನಂತೆ ಎಂದು ಲೋಕವನ್ನೇ ತುಸು ಕಡೆಗಣ್ಣಿನಲ್ಲಿಯೂ ಇಲ್ಲಿನ ಪಾತ್ರಗಳು ನೋಡುತ್ತವೆ.
-ಆಶಾದೇವಿ

ಕೇಂದ್ರ ಪಾತ್ರವಿಲ್ಲದೆಯೂ ಮಣಿಬಾಲೆ ಗೆದ್ದಿದೆ .ಖಾಲಿದ್ ಹುಸೈನಿ ಯವರ ಮೌಂಟೆನ್ ಎಕೋಡ್..ಕಾದಂಬರಿಯಲ್ಲೂ ಕೇಂದ್ರ ಪಾತ್ರವಿಲ್ಲ,ಅದು ಹಲವು ಅನುಭವಗಳ ಕಥನ.ಈ ಹೊತ್ತು ಜಗತ್ಪ್ರಸಿದ್ಧ ಕೃತಿ.
-ಸಿ . ಹೆಚ್ . ಭಾಗ್ಯ

ಒಕ್ಕಲುತನ ದ ಬದುಕಿನೊಳಗೆ ಕರೆದುಕೊಂಡು ಹೋದ ಮಣಿಬಾಲೆಗೆ ಮುದ್ದುಗಳು. ಮಣಿಬಾಲೆ ಅವೈದಿಕ ಅಥವಾ ಅಪ್ಪಟ ಶ್ರಮ ಸಂಸ್ಕೃತಿಯ ಅರಿವಿನೊಳಗೆ ಒಡಮೂಡಿದೆ . ಹೆಣ್ಣುಗಂಡಿನ ಲೈಂಗಿಕತೆಯನ್ನು ವಿವರವಾಗಿ ಚಿತ್ರಿಸಿದ್ದರೂ ಅಶ್ಲೀಲತೆಯನ್ನು ಮೀರಿದ ನೈತಿಕತೆಯಿದೆ
-ದು . ಸರಸ್ವತಿ

ಇಡೀ ಕೃತಿಯುದ್ದಕ್ಕೂ ತಾತ್ವಿಕತೆ ಎಂಬುದು ತಾನಾಗಿ ಮೈಗೂಡಿದೆ.
-ಬಿ. ಆರ್. ರವಿಕಾಂತೇಗೌಡ

ಹಿತ್ತಲಲ್ಲಿ ಕಾಣಸಿಗುತಿದ್ದ ಸ್ತ್ರೀ ಪಾತ್ರಗಳು ಈ ಕೃತಿಯ
ಜಗುಲಿಯಲ್ಲಿ ಕಾಣಸಿಗುವುದು ಇಲ್ಲಿಯ ವಿಶೇಷ.
-ವೆಂಕಟೇಶ್ ನೆಲಕುಂಟೆ

ಹೆಣ್ಣು ಮಕ್ಕಳು ಯಾಕೆ ಮಹಾಕಾವ್ಯ ಬರೆಯುವುದಿಲ್ಲ ಅಂತ ವಿದ್ಯಾರ್ಥಿಗಳು ಕೇಳಿದಾಗ ಅವರು ಮಹಾಕಾವ್ಯ ಬದುಕುತ್ತಾರೆ ಅಂತ ಹೇಳಿದೆ.ಮಣಿಬಾಲೆಯ ಹೆಣ್ಣುಗಳು ಮಹಾಕಾವ್ಯ ಬದುಕಿದವರು.ಅವರ ಬದುಕಿನ ವಿಸ್ತಾರ,ಆಳ ಅದನ್ನು ಹಿಡಿದಿಡಲು ಬಳಸಿರುವ ತಂತ್ರ ನಿಜಕ್ಕೂ ವಿಸ್ಮಯ….
-ಸುಜಾತಾ ಲಕ್ಷ್ಮೀಪುರ.

ಹಳ್ಳಿಗಳು ನನ್ನ ಪಾಲಿಗೆ ಗಾಯಗಳು. ಅದನ್ನು ಆಪ್ತವಾಗಿ ನೋಡಲಾರೆ.ಮಣಿಬಾಲೆ ಓದಲು ಆಗಿಲ್ಲ.ಸುಜಾತಾ ಅವರು ಒಂದು ತಾಯ್ತನದ ಭಾವದಲಿ ತಾವು ಕಂಡ ಹಳ್ಳಿಯನ್ನು ಹಿಡಿದಿಟ್ಟಿದ್ದಾರೆ ಅನ್ನಿಸಿತು.
ಹುಲಿಕುಂಟೆ ಮೂರ್ತಿ

ಇಲ್ಲಿಯ ಪಾತ್ರ ಹಾಗೂ ಸನ್ನಿವೇಶಗಳು ತಂತಾನೇ
ಒಂದು ನಾಟಕರಂಗವನ್ನು ಸೃಷ್ಟಿಸಿಕೊಂಡಂತೆ ಕಾಣಿಸಿಕೊಳ್ಳುತ್ತವೆ
-ಲವಕುಮಾರ್

ಹಳ್ಳಿಯನ್ನು ಕಟ್ಟಿಕೊಡುವಾಗ ಸುಜಾತಾ ಅವರ ಭಾವಲೋಕ ಪ್ರಧಾನವಾಗಿರವಂತೆ ಅನ್ನಿಸಿತು .
-ಶ್ವೇತಾ ದೇವು

ಗಂಡುಗಳು ತೋರುತ್ತಿದ್ದ ಹೆಂಣುಲೋಕವನ್ನು ಒತ್ತರಿಸಿ ಹೆಣ್ಣುಗಳ ಲೋಕವಿದು ಎಂದು ಹೆಣ್ಣೇ ಬೊಟ್ಟುಮಾಡಿ ತೋರಿದಂತಿದೆ.
-ದೇವು

ಕಾದಂಬರಿ ಓದುವಾಗ ನನ್ನ ನೆಲದಲ್ಲೇ ಓಡಾಡಿದಂತೆ , ನನ್ನೂರಿನ ಪಾತ್ರಗಳೇ ಸುತ್ತುವರೆದಂತೆ ಕಂಡವು
-ದಯಾ ಗಂಗನಘಟ್ಟ

ಕಾದಂಬರಿ ಇಷ್ಟವಾಯಿತು –ಮಮತಾ

ನಾನು ಕಾದಂಬರಿ ಓದಿದ ಮೇಲೆ ಮಾತನಾಡುವೆ ಎಂದವರು ಉಮಾಪತಿ ಹಾಗೂ ನಾಗೇಗೌಡ ಕಿಲಾರ, ಸಂವಾದವನ್ನು ಸಂಭಾಳಿಸಿದವರು ರಾಜೇಂದ್ರ ಪ್ರಸಾದ್. ಪ್ರಕಾಶಕರು.

‍ಲೇಖಕರು Admin

November 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: