ಮಗ ಮತ್ತು ಗಾಳಿಪಟ…

ಗುಂಡುರಾವ್ ದೇಸಾಯಿ

‘ರಿ ನೀವು ಹೇಳತಿರೊ ಇಲ್ಲೊ… ಇವನ ಕಾಲಗ ಸಾಕು ಸಾಕಾಗಿಬಿಟ್ಟದ… ಒಂದು ಪೇಪರ್ ಉಳಿವಲ್ವು, ರೀಲ್ ದಾರ ಉಳಿವಲ್ವು, ಕಸಬಾರಿಗೆ ಕಡ್ಡಿ ಉಳಿವಲ್ವು…’ ಅನ್ನುತ್ತಿರುವಾಗಲೇ ‘ಅಪ್ಪ ನನ್ನ ಅಂಟು, ಪೆವಿಕಾಲ್, ಟಿಕ್ಸೊಟೇಪ್ ಉಳಿವಲ್ವು’ ಎಂದು ಮಗಳು ಅಮ್ಮನೊಂದಿಗೆ ಧ್ವನಿ ಸೇರಿಸಿದಳು… ಅಷ್ಟರೊಳಗ ‘ಲೋ ಭಾಡ್ಯಾ ನೋಡು ಅಲ್ಲಿ ಮತ್ತೆ ಪೇಪರ್ ತೊಗೊಂಡು ಹೊಂಟನ ಕಮರಾಮ… ಎಂತಹವನ ಹಡೆದಪ’ ಎಂದು ಅವ್ವ ಹಣಿಹಣಿ ಜಜ್ಜಿಕೊಂಡು… ಕೂಗ್ಯಾಡಕತಿದ್ಲು, ಏನೋ ಅವಘಡ ಆಗ್ತಾದ ಅನ್ನೋ ರೀತಿಲಿ. ಓದುತ್ತಾ ಒಳ ಕೋಣೆಯಲ್ಲಿ ಕುಳಿತ ನನಗೆ ಸೂಕ್ಷ್ಮ ಅರ್ಥ ಆಯ್ತು ‘ಇದು ಮಗನ ಗಾಳಿಪಟದ ಕಿತಾಪತಿ….’ ಅಂತ.

ನಾನು ಹೊರಗೆ ಬರುತ್ತಲೆ ‘ಅಲ್ರೀ ನೀವ ಹೇಳಿರಂತ ಗಾಳಿಪಟ ಹಾರೋತನ ಬಿಡಿಬ್ಯಾಡಲೆ… ಮಾಡಲೆ ಅಂತ.. ಎಲ್ಲಾ ಅವ ನಿಮ್ಮ ಕುಮ್ಮಕ್ಕಿನಿಂದ ಹೀಗ ಆಗಕತಾನ… ಬಳಿಯಾಕ ಕಸಬರಿಗಿ ಕಡ್ಡಿ ಇಲ್ಲದಂಗ ಮಾಡ್ಯಾನ’ ಅಂದ್ಲು ಅವರಮ್ಮ…

ಸಮುಂದು ಹೀಗ ಒಂದು ಬರೋತನ ಬಿಡದ ಪ್ರಯತ್ನವಾದಿ.. ಕಲಿಯಬೇಕೆನ್ನುವ ಛಲವಾದಿ. ಕಲಿಕೆಯಲ್ಲಿ ಅವನ ಒಂದು ಹಂತಕ್ಕೆ ಓ.ಕೆ ಇದ್ದರೂ ಇಂತಹ ಕೌಶಲ ಕಲಿಯಲಿಕ್ಕೆ ಅವ ಮುಂದು…ಮಕ್ಕಳು ಮೊಬೈಲ್, ಟಿವಿಯ ಮಧ್ಯ ನೆಲದ ಆಟಗಳನ್ನ ಮರಿತಿರಬೇಕಾದರ ಅವನು ಕಲಿಯುವವುವೆಲ್ಲ ಕಲಿಲಿ ಎಂದ ಪ್ರೀಯಾಗಿ ಬಿಟ್ಟಿರುವೆ… ಗೋಲಿ, ಗಾಲಿ, ಚೀಣಿ-ದಾಂಡು, ಗಿಚ್ಚು ಆಟ, ಲಗೋರಿ, ಕುಂಟುಪಿಲ್ಲಿ, ಪಿರಿಕಿ ಮೊದಲಾದ ಸರಳ ಆಟಗಳನ್ನು ಕಲಿತಾದ ಮೇಲೆ ಒಮ್ಮೆ ದೊಡ್ಡ ಮಕ್ಕಳು ಬುಗುರಿ ಆಡೋದನ್ನ ನೋಡಿ ನನಗೆ ದುಂಬಾಲು ಬಿದ್ದ.

‘ಬಾಲ್ಯದಲ್ಲಿ ನಾವು ಕಟ್ಟಿಗೆ ಬಗರಿಯಲ್ಲಿ ಆಡತಿದ್ವಿ… ಸೋತಾಗ ಅದಕ್ಕ ಗಿಚ್ಚು ಹಾಕಿ ಹಾಳು ಮಾಡುವಾಗ ನಮಗೆ ಹಾಕಿದಷ್ಟು ನೋವಾಗುತ್ತಿದ್ದರೂ ಸ್ಪೋರ್ಟಿವ್ ಆಗಿ ತೆಗೆದುಕೊಳ್ಳತಿದ್ವಿ’ ಎಂದಲ್ಲ ರಂಜನೀಯವಾಗಿ ಹೇಳಿದ್ದೆ ತಪ್ಪಾಯ್ತತೆನೊ ‘ನನಗೂ ಬೇಕು’ ಎಂದು ಹಠ ಬಿದ್ದ.. ಸಿಗಬೇಕೆಲ್ಲಿ ಎಂದಾಗ ಮೊಬೈಲ್‌ನಲ್ಲಿ ಅಮೇಜಾನ್ ನಲ್ಲಿ ತೋರಿಸಿ ‘ಆರ್ಡರ್ ಮಾಡು’ ಎಂದು ದುಂಬಾಲು ಬಿದ್ದು ಮಾಡಿಸಿಕೊಂಡ… ಅದು ಬಂದ ಮೇಲೆ ಆಡಸಬೇಕಲ್ಲ…! ಬುಗುರಿ ಆಟ ಸರಳವಾಗಿ ಬರುವಂತಹದಲ್ಲ… ಜೋಳಿಗೆಯನ್ನು ಸಿದ್ಧಮಾಡಿ.. ರೆಡಿ ಮಾಡಿ ಕೊಟ್ಟೆ… ಆಡಿಸಲು ಪ್ರಾರಂಭಿಸಿದ…

‘ಅಪ್ಪಾ….ಅಪ್ಪಾ ಆಡವಲ್ತು’ ಅಂತ ಒದ್ದಾಡಿದ.
‘ಪ್ರಯತ್ನ ಮಾಡೋ ಬರುತದ’ ಅಂದೆ..
‘ಅಪ್ಪ ಹೆಣ್ಮಕ್ಕಳ ಬುಗುರಿ ಆಡದಂಗ ಆಡುತದ’ ಅಂದ….
‘ಹಾಗಂದ್ರೇನೊ?’ ಅಂತ ಕೇಳಿದೆ ಬೇಕಂತಲೆ..
‘ಕುಂಡಿ ಮೇಲೆ ತಿರುಗುತ್ತಲ್ಲಪ ಅದಕ ಹೆಣ್ಮಕ್ಕಳ ಬುಗುರಿ ಅಂತಾರ’ ಅಂದ..
‘ಭೇಷ್! ಮಗನ’ ಆಟಗಳು, ಬಳಸುವ ಭಾಷೆ ಸರ್ವಕಾಲಿಕ ಅನಕೊಂಡೆ..
‘ಏನು ಭೇಷೊ…. ಏನೊ…? ತಂದಿನ ಕೂತು ಮಗನ್ನ ಹಳ್ಳ ಹಿಡಸ್ತಿದ್ದಾರ.. ಅಪದ್ ಅಪದ್ ನುಡಸಕತಾರ’ ಅಂತ ಬೈಕೊಂತ ಒಳನಡೆದಳು.

ನಾನು ಬುಗುರಿ ಆಡಿಸೋದು ಮರೆತಿದ್ದೆ…ಒಂದೆರಡು ಪ್ರಯತ್ನದ ನಂತರ ಆಡಲು ಆರಂಭಿಸಿತು.. ‘ಅಪ್ಪ ಹೆಂಗ ಗಿಮ್ಮಿ ಗಿಮ್ಮಿ ತಿರುಗುತ್ತ ನೋಡು.. ನಿದ್ದೆ ಮಾಡದಂಗ ಕಾಣತದಪ’ ಎಂದ ‘ಹೌದಪ್ಪ ಅದರ ಏಕಾಗ್ರತೆ, ನಮ್ಮದು ಅದೆ ಸ್ಥಿತಿಯಲ್ಲಿದ್ದಾಗ ಸಾಧ್ಯ’ ಎಂದೆ. ಅವನು ಹತ್ತಾರು ಬಾರಿ ಪ್ರಯತ್ನ ಮಾಡಿ ಸೋತು.. ‘ನೀನಗಷ್ಟ ಯಾಕ ಬರುತ್ತ ನನಗ ಬರವಲ್ತು’ ಎಂದು ಒದ್ದಾಡಿದ ‘ಪ್ರಯತ್ನ ಮಾಡು ಬರುತ್ತದ… ಸೈಕಲ್ ಹೊಡಿಯೊಕೆ ಹಾಗೆ ಬಂತಾ! ಎರಡು ಮೂರು ಸಾರಿ ಬಿದ್ದೆಯಲ್ಲೊ..? ಓದಲು ಒಮ್ಮೆಲೆ ಬಂತಾ! ಕಷ್ಟಪಟ್ಟಿಯಿಲ್ಲೊ?ಹಾಗೆ ಇದು.. ಪ್ರಯತ್ನ ಮಾಡು.. ಟ್ರಿಕ್ ಹೇಳಿ ಕೇಳಿ ಬರುವಂತದಲ್ಲ… ಯತ್ನಿಸಿ ಯತ್ನಿಸಿ ನೋಡು…..ಕಂಡುಕೊಳ್ಳಬೇಕು ತಾನೆ ಬರುತ್ತದ’ ಎಂದೆ…

ಹಲವು ಪ್ರಯತ್ನಗಳಾದ ಮೇಲೆ ಹಾಗೂ ಹೀಗೂ ಒಗೆದು ಒಗೆದು ಕೊನೆಗೆ ಉಲ್ಟಾ ತಿರುಗಿಸಿ ಒಗದು ಕೂಡಲೆ ‘ಅಪ್ಪಾ….ನೋಡು ಸ್ವಾಲ್ಪ ತಿರುಗಕತಿತು’ ಅಂತ ಕುಣಿದಾಡಿದ. ‘ಗುಡ್ ಹೀಗೆ ಮುಂದುವರೆಸು, ಸರಿಯಾಗಿ ಜೋಳಿಗೆ ಸುತ್ತಿ ಬಿಗಿ ಹಿಡಿದು ಬೀಸಿ ಒಗೆದು ನೋಡು ಹೇಗೆ ತಿರುಗುತ್ತದ’ ಎಂದೆ. ‘ಆಯ್ತಪ್ಪ’ ಎಂದು ಅಂಗಳಕ್ಕೆ ಹೋದ ಪ್ರಯತ್ನಿಸಲು.

ಒಂದು ವಾರವಾದ ಮೇಲೆ ‘ಅಪ್ಪ ನೋಡು……ಇಲ್ಲಿ’ ಎಂದು ಕೈಯಲ್ಲ್ಲಿ ತಿರುಗುವ ಬುಗುರಿಯನ್ನು ಹಾಕಿಕೊಂಡು ಬಂದ… ನನಗೆ ಆಶ್ಚರ್ಯ ಮತ್ತು ಖುಷಿ ಎರಡು ಆಯ್ತು. ನನ್ನ ಬಾಲ್ಯದಲ್ಲಿ ನಾನು ಬುಗರಿ ಆಡಿಸಿದ್ದರೂ, ಜೋಳಿಗೆ ಬೀಸಿ ಕೈಯಲ್ಲಿ ಹಾಕಿಕೊಳ್ಳಲು ಸಾಧ್ಯ ಆಗಿರಲಿಲ್ಲ… ‘ನೀನೇನೊ ಹಾಕಿಕೊಂಡಿದ್ದು?’ ಎಂದೆ ‘ಹೌದಪ್ಪ…ನಾನೇ..ಹಾಕಿಕೊಳ್ಳಕ್ಕ ಬರುತ್ತದ’ ಎಂದು ಮುಂದೆಯ ಜೋಳಿಗೆ ಸುತ್ತಿ ಒಗೆದು ಚಾಣಾಕ್ಷತನದಿಂದ ಅಂಗೈಯಲ್ಲಿ ಹಾಕಿಕೊಂಡು ಖುಷಿಪಟ್ಟು ನನ್ನ ಕೈಮೇಲು ಹಾಕಿದ…

ಮಗಳು ‘ನನ್ನ ಕೈಮೇಲೆ ಹಾಕೊ?’ ಎಂದ್ಲು ‘ನೀನು ಚಾಕಲೇಟದ ಕೊಟ್ರಷ್ಟ ಹಾಕತೀನಿ..’ ಎಂದ. ‘ಬರಿ ಲಂಚಕೇಳತನ ಭಂಡ ಇವ ಯಾವಾಗಲೂ…?’ ಎಂದು ಶೆಟಗೊಂಡು ಹೊರಟಾಗ ‘ಬಾರಕ್ಕ…’ ಎಂದು ಜೋಳಿಗೆ ಬೀಸಿ ಹಾಕಿದ… ಖುಷಿಯಿಂದ ಕುಪ್ಪಳಿಸಿದಳು
‘ಅಜ್ಜಿ ನಿನಗ ಕೈ ಬಗರಿ ಹಾಕಲಾ’ ಎಂದಾಗ ‘ಲೋ ನೀನು ಅವನಿಗೆ ಸಲುಗಿ ಕೊಟ್ಟು ಕೊಟ್ಟು ಮರ‍್ಯಾನವ. ಮನೆಯಲ್ಲಿ ಕನ್ನಡಿ ಒಡದಾನ.. ನಿನ್ನೆ ತಲಿ ಒಡದಾನ’ ಎಂದು ಕಂಪ್ಲೇಂಟ್ ಮಾಡಿದ್ಲು ಅಜ್ಜಿ.

‘ಅಪ್ಪ, ಅಜ್ಜಿ ಬರಿ ಸುಳ್ಳ ಹೇಳತಾಳ.ಅಕಿ ಮುಂದ ಹೋಗಿ ಬಿದ್ದದ ಅಷ್ಟ… ಅಷ್ಟಕ್ಕ ಬಡಿತೊ ತಲಿ ಒಡಿತೊ ಅಂತ ನಾಟಕ ಮಾಡತಾಳ…ತೋರಸು ಅಂತ ಹೇಳಪ, ಅಪ್ಪಣ್ಣ ಡಾಕ್ಟರ್‌ನ್ನ ಕರಕೊಂಡು ಬಂದು ಚೂಜಿ ಚುಚ್ಚುಸಿಬಿಡಮ’ ಎಂದ.. ‘ಹೇ…. ಹಾಗೆಲ್ಲ ಮಾತಾಡಬಾರದು ಅಜ್ಜಿ ತಂಟೆಗೆ ಹೋಗದೆ ಆಡು’ ಎಂದು ಸಲಹೆ ನೀಡಿ ಸುಮ್ಮನಾಗಿಸಿದ್ದೆ…ಹೀಗೆ ಇವನದು ಸೀಜನ್‌ವಾಯ್ಸ್ ಪ್ಲೇಯರ್. ಯಾರು ಆಡತಾರ ಮಾಡತಾರ ಅದನ್ನೆಲ್ಲ ಮಾಡಬೇಕು ಹೊಸದನ್ನು ಕಲಿಬೇಕು ಎನ್ನುವ ಹುಚ್ಚು ಸಾಹಸ. ಮೊನ್ನೆ ಗಾಳಿಪಟ ಮಾಡಿಕೊಡು ಅಂದ…ಸಣ್ಣವನಿದ್ದಾಗ ಗಾಳಿಪಟ ಮಾಡಿ ಹಾರಸ್ತಿದ್ವಿ…ಮಾಡೋದು ನೆನಪಿತ್ತು ಆದರ ಈಗ ಸೂತ್ರ ಹಾಕೋದು ಮರೆತುಬಿಟ್ಟಿದ್ದೆ….ಮಗನಿಗೆ ನೀನೆ ಪ್ರಯತ್ನ ಮಾಡೋ ಅಂತ ಹೇಳಿದ್ದೆ… ‘ಅಪ್ಪಾ, ಮನ್ಯಾಗ ಇದ್ದಾಗ ನೀನು ಮೊಬೈಲ್ ಕೊಡು ನಾನು ಯುಟ್ಯೂಬ್ ನಲ್ಲಿ ನೋಡಿ ಮಾಡ್ತಿನಿ’ ಅಂದ… ‘ಆಯ್ತು’ ಅಂದೆ.. ಹೀಗೆ ನಡಿತು…

ನಾನು ಖಾಲಿ ಇದ್ರ ಮೊಬೈಲ್ ಕೇಳಿ ಹಿಡಕೊಂಡು ‘ಹೌ ಟು ಮೇಕ್ ಕೈಟ್’ ಅಂತ ಒದರಾವ. ಯು-ಟ್ಯೂಬ್ ನ್ಯಾಗ ಮಾಹಿತಿ ಬರತಿತ್ತು. ಅದರಂಗ ನೋಡಿ ಮಾಡವ….ಪೇಪರ್ ಕತ್ತರಿಸಿ ಕಸಬರಿಗೆ ಕಡ್ಡಿ ಸೇರಿಸಿ ಅಂಟು ಹಚ್ಚಿ ಬಾಲಗೊಂಸಿನೂ ಚಂದಾಗಿ ಉದ್ದಾಗಿ ಹಚ್ಚಿ… ಮಾಡಿದ ಮೇಲೆ ‘ಬಾರಪ್ಪ ಹಾರಸ್ತೀನಿ ನೋಡು’ ಅಂತ ಮನೆ ಮಾಳಿಗೆ ಕರದೊಯ್ಯದು ಹಾರಸಾಕ ಪ್ರಯತ್ನ ಮಾಡತಿದ್ದ… ಹಾರದೆ ಇದ್ದಾಗ ಸೋತು… ‘ಅಪ್ಪ ಅಪ್ಪ ಇನ್ನೊಂದು ಚಾನ್ಸ್ಪ ಕೆಳಗ ಬಾ ಅನ್ನವ…’ ಓಣಿ ತುಂಬ ಓಡಾಡಿ ಹಾರಸಕ ಎಕ್ಕರಲಾಡವ.. ಗಾಳಿಪಟ ಮಾಡೋದು ಹಾರಸೋಕೆ ಓಡಿ ಓಡಿ ಹೋಗೋದು ವಿಫಲ ಆಗೋದು… ‘ಯಾರನ್ನಾದರೂ ಕೇಳಿ ಸೂತ್ರ ಹಾಕಿಸೋ’ ಅಂದ್ರ ‘ಇಲ್ಲಪ ನಾನು ಸಣ್ಣವನಿದ್ದೀನಿ ಅಂತ ಯಾರೂ ಕೇರ್ ಮಾಡಲ್ಲ… ನಾನೇ ಪ್ರಯತ್ನ ಮಾಡ್ತೀನಿ’ ಅಂತ ಮುಂದುವರೆಸಿದ….ಆದರೂ ಛಲಬಿಡದ ಅವನ ಪ್ರಯತ್ನ ಮುಂದುವರೆದಿತ್ತು.. ಇವನ ಕಾಟಕ್ಕ ಪೇಪರ್, ಅಂಟು, ಕಸಬಾರಿಗೆ, ರೀಲು ಕಾಣದಂಗ, ಸಿಗದಂಗ ಅಜ್ಜಿ ಈಕಿ ಮಾಡಿದ್ರೂ… ನೀರಲ್ಲಿ ಚೆಂಡನ್ನು ಎಷ್ಟೆ ಒಳ ತಳ್ಳಿದರೂ ಮೇಲೆರಿ ಬರುವಂತೆ….ಇವನ ಆಸೆ ಆಗಿತ್ತು…

ಒಂದು ರಾತ್ರಿ ಅಪ್ಪಾ ‘ನಾಳೆ ಲಾಸ್ಟ್ ಚಾನ್ಸ್ ಹೇಗಾದರೂ ಮಾಡಿ ಅಮ್ಮನ ಅಲಮಾರಿಯಿಂದ ರೀಲ್ ದಾರ ಹೆಗರಿಸಿ ಕೊಡು, ಇನ್ನೊಮ್ಮೆ ಹಾರಲಿಕ್ಕ ಅಂದ್ರ ನಾನು ಗಾಳಿಪಟದ ಸುದ್ದಿನ ಎತ್ತಲ್ಲ’ ಎಂದ… ‘ಬೇಡ ಸಮು ಯಾಕ ವೇಸ್ಟ ಮಾಡ್ತಿ…ಅದರ ಬದಲು ಓದು… ಆಗಲಾರದಕ್ಕ ಕೈ ಹಾಕಬಾರದು’ ಅಂದ್ರೂ ‘ಅಪ್ಪಾ…ಪ್ಲೀಜ್…’ ಎಂದು ಅವಲತ್ತುಕೊಂಡಾಗ ಅವನ ಉತ್ಸಾಹಕ್ಕೆ ಮಣಿದು ಆಕಿಗೆ ಗೊತ್ತಾಗದ ಹಾಗೆ ಹಾರಿಸಿಕೊಂಡು ಕೊಟ್ಟೆ…

ಸಂಜೆ ಹೊರಗೆ ಹೋಗಿದ್ದಾಗ ಈಕಿ ಫೋನ್ ಹಚ್ಚಿ ‘ರ‍್ರಿ….ಬೇಗ’ ಎಂದಳು ‘ಏನಾಯ್ತೆ?’ ಎಂದೆ ಗಾಭರಿಯಿಂದ ‘ಏನಿಲ್ಲ ರ‍್ರಿ ಅಷ್ಟ’ ಎಂದು ಫೋನ್ ಕಟ್ ಮಾಡಿದಳು ಆಕಿ ಹಾಗೆ ಕರಿಯುವಳಲ್ಲ… ಸ್ವಲ್ಪ ಭಯದಿಂದ ಓಡೋಡಿ ಬಂದೆ… ಬಾಗಿಲಲ್ಲಿ ಕುಳಿತಿದ್ದ ಅಮ್ಮ ‘ನೋಡಲ್ಲಿ ಮಗ ಏನು ಮಾಡ್ಯಾನ ಮ್ಯಾಲೆ…’ ಎಂದು ಅತ್ತ ಬರಳು ಮಾಡಿ ತೋರಿಸಿದ್ಲು… ಮೇಲೆ ದೌಡಾಯಿಸದೆ… ಈಕಿ. ‘ನೋಡ್ರಲ್ಲಿ ನೋಡ್ರಲ್ಲಿ’ ಎಂದು ಖುಷಿಯಿಂದ ಸಂಭ್ರಮಸ್ತಿದ್ಲು… ‘ಅಪ್ಪ …ನೋಡಲ್ಲಿ… ಸಮು ಎಲ್ಲಿವರೆಗೆ ಗಾಳಿ ಪಟ ಹಾರಿಸ್ಯಾನ’ ಎಂದು ಅವನೊಂದಿಗೆ ದಾರ ಹಿಡಿದು ಸಂಭ್ರಮಿಸುತ್ತಿದ್ಲು. ನಾನು ನೋಡಿದೆ… ಮೇಲೆ… ದೂರದಲ್ಲಿ ಪಟ ಹಾರುತ್ತಿದ್ದು… ಕಿಲೋಮಿಟರ್ ವರೆಗೆ ದೂರ ಸಾಗಿತ್ತು. ಮಗ ‘ಅಪ್ಪಾ ಅಪ್ಪಾ ..ನೋಡಲ್ಲಿ’ ಎಂದು ತೋರಿಸಿದ… ಗೆಲವು ಸಾಧಿಸಿದ ಉತ್ಸಾಹ ಅವನ ಕಂಗಳಲ್ಲಿತ್ತು.

‍ಲೇಖಕರು Admin

November 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: