ಮಕ್ಕಳ ಹಕ್ಕುಗಳಿಗಾಗಿ ಶಾಸಕರು..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

| ಕಳೆದ ಸಂಚಿಕೆಯಿಂದ |

‘ಭಾರತದ ಮಕ್ಕಳು ಆರೋಗ್ಯದಿಂದ ಸುರಕ್ಷಿತವಾಗಿದ್ದರೆ ಖಂಡಿತಾ ಭಾರತ ಬೆಳಗುತ್ತದೆ’ ಯುನಿಸೆಫ್‌ನ ಕರ್ನಾಟಕ, ತೆಲಂಗಣಾ ಮತ್ತು ಆಂಧ್ರಪ್ರದೇಶದ ಮುಖ್ಯಸ್ಥೆ ಮೀಟಲ್‌ ರಷ್ದಿಯಾ ಹೇಳುತ್ತಿದ್ದರು. ‘ಭಾರತದ ಏಳ್ಗೆಯೆಂದರೆ ಕೇವಲ ಆರ್ಥಿಕ ಬೆಳವಣಿಗೆ, ಮಿಲಿಟರಿಯಲ್ಲಿ ಮೇಲ್ಗೈ ಮತ್ತು ಚಂದ್ರನನ್ನು ಮುಟ್ಟುವುದಷ್ಟೇ ಅಲ್ಲ, ಮಕ್ಕಳ ಬದುಕಿನ ಎಲ್ಲ ಮಗ್ಗಲುಗಳನ್ನು ಮುಟ್ಟುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸರ್ಕಾರ ಮತ್ತು ಸಾರ್ವಜನಿಕರು ಮಾಡುವ ಯತ್ನವೇ ಇಲ್ಲಿ ನಿರ್ಣಾಯಕ. ಈಗ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು, ಎಲ್ಲ ಮಕ್ಕಳಿಗೆ ಅತ್ಯುತ್ತಮವಾದ ಸೇವೆ ಮತ್ತು ಅವಕಾಶಗಳನ್ನು ಒದಗಿಸಲು ಎಲ್ಲ ಸರ್ಕಾರಗಳು ಗರಿಷ್ಟ ಪ್ರಯತ್ನ ಮಾಡಲೇಬೇಕಿದೆ. ಅದಕ್ಕಾಗಿ ಜನಪ್ರತಿನಿಧಿಗಳಾದ ಶಾಸಕರು ತೆಗೆದುಕೊಳ್ಳುತ್ತಿರುವ ನಿರ್ಧಾರ ಮತ್ತು ಮಕ್ಕಳ ಪರವಾಗಿ ಭಾರತದ ಪ್ರಾಂತೀಯ ರಾಜ್ಯಗಳ ವಿಧಾನಮಂಡಲಗಳಲ್ಲಿ ದನಿಯೆತ್ತಲು ಮುಂದಾಗಿರುವುದು ಅತ್ಯಂತ ಪ್ರಶಂಸನೀಯ. ನಿಮಗೆ ಯುನಿಸೆಫ್‌ನ ಬೆಂಬಲ ಸದಾ ಕಾಲಕ್ಕೂ ಇರುತ್ತದೆ’ ಎಂದು ಮೀಟಲ್‌ ರಷ್ದಿಯಾ ಹೇಳಿದಾಗ ಮಕ್ಕಳ ಪರವಾಗಿ ಚರ್ಚೆ ಮಾಡಲು ಸೇರಿದ್ದ ಉತ್ಸಾಹೀ ಶಾಸಕರು ಕರತಾಡನ ಮಾಡಿದರು. 

ಮಕ್ಕಳ ಹಕ್ಕುಗಳ ದೃಷ್ಟಿಕೋನವಿಟ್ಟುಕೊಂಡು ಮಕ್ಕಳ ಪರಿಸ್ಥಿತಿ ಕುರಿತು ಮುಕ್ತ ಮಾತುಕತೆಯನ್ನು ವಿಧಾನಮಂಡಲದಲ್ಲಿ ಆರಂಭಿಸಿದಾಗ ರಾಷ್ಟ್ರದಾದ್ಯಂತ ಮಕ್ಕಳ ಹಕ್ಕುಗಳನ್ನು ಕುರಿತು ಕೆಲಸ ಮಾಡುವವರ ಮಧ್ಯ ಇದು ಮತ್ತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ ಚರ್ಚೆಗೆ ಬಂದಿತ್ತು. ವಿಶ್ವಸಂಸ್ಥೆಯ ಅಂಗವಾದ ಯುನಿಸೆಫ್‌ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ ಮತ್ತು ಇಂತಹದೊಂದು ಕಲ್ಪನೆಯನ್ನು ಮುಂದಿಟ್ಟ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವನ್ನು ಅಭಿನಂದಿಸಿತ್ತು.

ಈ ಹಿನ್ನೆಲೆಯಲ್ಲಿ ನಿಗಾ ಕೇಂದ್ರ ಶಾಸಕರ ವೇದಿಕೆ ಮತ್ತು ವಿಧಾನ ಮಂಡಲದ ಎದುರು ಒಂದು ವಿಶಿಷ್ಟವಾದ ಚಿಂತನೆಯನ್ನು ತಂದಿತು. ‘ಮಕ್ಕಳ ಹಕ್ಕುಗಳನ್ನು ಕುರಿತು ದಕ್ಷಿಣ ಭಾರತದ ರಾಜ್ಯಗಳ ಶಾಸಕರ ಸಮ್ಮೇಳನ’. ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಂದ ಶಾಸಕರನ್ನು ಆಹ್ವಾನಿಸಿ, ಶಾಸಕರು ಮಕ್ಕಳನ್ನು ಮತ್ತು ಮಕ್ಕಳ ಹಕ್ಕುಗಳನ್ನು ಕುರಿತು ಸೂಕ್ಷ್ಮಗೊಳಿಸಬೇಕು. 

ಇಷ್ಟೆಲ್ಲಾ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಪರವಾಗಿ ನಾನು ಮುಂದಿಟ್ಟಿದ್ದು ಆಗ್ಗೆ ವಿಧಾನ ಪರಿಷತ್ತಿನ ಸದಸ್ಯರೂ, ಮತ್ತು ಅವರು ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿದ್ದು, ಶಾಸಕರ ವೇದಿಕೆಯ ಸಂಚಾಲಕರಾಗಿದ್ದ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌  ಮತ್ತು ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿದ್ದ ಹಾಗೂ ಶಾಸಕರ ವೇದಿಕೆಯ ಸಹ ಸಂಚಾಲಕರಾಗಿದ್ದ ಐವಾನ್‌ ಡಿʼಸೌಜಾ ಅವರೆದುರು (೨೦೧೭ ಏಪ್ರಿಲ್‌). ಅವರಿಬ್ಬರಿಗೆ ಈ ಕಲ್ಪನೆ ಮತ್ತು ಆಯೋಜನೆ ಬಹಳ ಮುಖ್ಯ ಅನಿಸಿತು.     

ದೊಡ್ಡ ಕಲ್ಪನೆ. ಶಾಸಕರು ರಾಜ್ಯಗಳನ್ನು ಪ್ರತಿನಿಧಿಸಿ ಬರಬೇಕೆಂದರೆ ಅದಕ್ಕೆ ಬಹುದೊಡ್ಡ ವಿಧಿವಿಧಾನಗಳಿರುತ್ತವೆ. ಅವರಿಗೆ ಆಹ್ವಾನ ರಾಜ್ಯದ ಸರ್ಕಾರದ ವತಿಯಿಂದ ಹೋಗಬೇಕಾಗುತ್ತದೆ. ಹಾಗೆ ಬಂದವರನ್ನು ರಾಜ್ಯದ ಅತಿಥಿಗಳೆಂದು ಪರಿಗಣಿಸಿ ಅದಕ್ಕೆ ತಕ್ಕ ಏರ್ಪಾಟುಗಳನ್ನು ಮಾಡಬೇಕಾಗುತ್ತದೆ. 

ನಾನು ಬಹಳ ಸರಳವಾಗಿ ಯೋಚಿಸುತ್ತಿದ್ದೆ. ಕರ್ನಾಟಕದ ಶಾಸಕರು ಮಕ್ಕಳನ್ನು ಕುರಿತು ಸೂಕ್ಷ್ಮಗೊಂಡಿದ್ದಾರೆ, ಹೀಗಾಗಿ ಅಕ್ಕಪಕ್ಕದ ರಾಜ್ಯದ ಶಾಸಕರು ಕೂಡಾ ಇದೇ ರೀತಿ ಪ್ರಯತ್ನ ಪಟ್ಟರೆ ಅಂತರ ರಾಜ್ಯಗಳ ನಡುವೆ ಮಕ್ಕಳನ್ನು ಕುರಿತು ಒಪ್ಪಂದಗಳು ಆಗುತ್ತವೆ, ಆಗ ಬಾಲಕಾರ್ಮಿಕರು, ಮಕ್ಕಳ ಸಾಗಣೆ, ಮಾರಾಟ ತಡೆ, ಬಾಲ್ಯವಿವಾಹ, ಶಿಕ್ಷಣ ಇತ್ಯಾದಿ ಕುರಿತು ಹಂತ ಹಂತವಾಗಿ ರಾಜ್ಯಗಳ ನಡುವೆ ಮುಕ್ತ ಮಾತುಕತೆಗೆ ಅವಕಾಶಗಳು ಆಗುತ್ತವೆ (ದೊಡ್ಡವೂ ಸಾಧ್ಯಾಸಾಧ್ಯತೆಗಳಿಗೆ ಪ್ರಶ್ನೆಯೊಡ್ಡುವಂತಹದ್ದು…) ಇದೊಂದು ಸರಳವಾದ ಸಭೆ ಎಂದು. 

ಕಲ್ಪನೆಗೆ ಬಲವಿದ್ದರೆ, ಅರ್ಥವಿದ್ದರೆ ಯಾಕೆ ಆಗಬಾರದು, ಪ್ರಯತ್ನಿಸೋಣ ಎಂದ ಗಣೇಶ್‌ ಕಾರ್ಣಿಕ್‌ ಮತ್ತು ಐವಾನ್‌ ಡಿʼಸೌಜಾ ಅವರು ಈ ಕುರಿತು ಒಂದು ‘ಪರಿಕಲ್ಪನೆ ಟಿಪ್ಪಣಿ’ ಬರೆಯಲು ಹೇಳಿದರು. ನನ್ನ ಸಹೋದ್ಯೋಗಿ ಸತೀಶ್‌ ಮತ್ತು ನಾನು ಸೇರಿ ಬರಹ ಸಿದ್ಧ ಮಾಡಿಕೊಂಡು ಈ ಇಬ್ಬರೊಡನೆ ವಿಧಾನ ಪರಿಷತ್ತಿನ ಅಂದಿನ ಸಭಾಧ್ಯಕ್ಷರಾಗಿದ್ದ ಡಿ.ಎಚ್.‌ ಶಂಕರಮೂರ್ತಿಯವರನ್ನು ಭೇಟಿ ಮಾಡಿದೆವು. ಅಷ್ಟು ಹೊತ್ತಿಗೆ ವಿಧಾನ ಪರಿಷತ್ತಿನಲ್ಲಿ ಎರೆಡು ಬಾರಿ ‘ಮಕ್ಕಳ ಹಕ್ಕುಗಳ ವಿಚಾರಗಳ ಬಗ್ಗೆ ವಿಶೇಷ ಅಧಿವೇಶನ’ಗಳನ್ನು ನಡೆಸಿ ಮಕ್ಕಳ ಸ್ನೇಹಿ ಎಂದೇ ಹೆಸರಾಗಿದ್ದ ಶಂಕರ ಮೂರ್ತಿಯವರಿಗೆ ಈ ಪರಿಕಲ್ಪನೆ ಹಿಡಿಸಿತು.

ಇಂತಹದನ್ನು ನಡೆಸಲು ಇರುವ ವಿಧಿವಿಧಾನಗಳೇನು ಎಂದು ತಿಳಿದುಕೊಳ್ಳಲು ಅವರು ತಕ್ಷಣವೇ ವಿಧಾನಪರಿಷತ್ತಿನ ಕಾರ್ಯದರ್ಶಿಗಳಾದ ಮಹಾಲಕ್ಷ್ಮಿ ಅವರನ್ನು ಕರೆದರು. ಮುಂದಿನ ವಾರದಲ್ಲಿ ನಡೆದ ಎರಡು ಸಭೆಗಳ ನಂತರ ಇಡೀ ಯೋಜನೆಯ ನೀಲ ನಕ್ಷೆ ತಯ್ಯಾರಿಸಲು ಅವರ ಕಛೇರಿಯ ಮುಖ್ಯಸ್ಥರು, ಶಾಸಕರ ವೇದಿಕೆ ಮತ್ತು ನಿಗಾ ಕೇಂದ್ರದ ನಮ್ಮನ್ನು ಒಳಗೊಂಡ ಸಮಿತಿ ತಯ್ಯಾರಾಯಿತು. 

ಮುಂದಿನದೆಲ್ಲವೂ ಸರಸರ ನಡೆದ ಚಟುವಟಿಕೆಗಳು. ಯುನಿಸೆಫ್‌ಗೆ ಇಂತಹದೊಂದು ಕಲ್ಪನೆ ಮತ್ತು ಅದನ್ನು ನಡೆಸುವ ಸಾಧ್ಯತೆ ಕುರಿತು ಹೇಳಿದಾಗ ಅಲ್ಲಿಂದ ಧನಾತ್ಮಕವೂ ಪ್ರೋತ್ಸಾಹದಾಯಕವೂ ಆದ ಸಂದೇಶ ಬಂದಿತು. ಶಾಸನ ಸಭೆಗಳಲ್ಲಿ ಮಕ್ಕಳನ್ನು ಕುರಿತು ಚರ್ಚೆ ನಡೆಯುತ್ತದೆಯೋ ಇಲ್ಲವೋ ಎಂದು ಪರಿಶೀಲಿಸುವ ಮತ್ತು ರಾಜಕೀಯ ಪಕ್ಷಗಳಿಗೆ ಮಕ್ಕಳ ಹಕ್ಕುಗಳನ್ನು ಕುರಿತು ಸೂಕ್ಷ್ಮಗೊಳಿಸುವ ಕೆಲಸ, ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆಯನ್ನು ಸೃಜಿಸಿದ್ದು, ಈಗ ದಕ್ಷಿಣ ಭಾರತದ ರಾಜ್ಯಗಳ ಶಾಸಕರನ್ನು ಒಂದೇ ವೇದಿಕೆಗೆ ಆಹ್ವಾನಿಸಿ ಮಕ್ಕಳ ಸ್ಥಿತಿಗತಿಯನ್ನು ಚರ್ಚಿಸುವ ವಿಶಾಲ ಅವಕಾಶದ ಕಲ್ಪನೆಗೆ ತೆರೆದುಕೊಂಡಿರುವ ಪ್ರಯೋಗ. ಆದರೆ ಶಾಸಕರು ಇಂತಹದಕ್ಕೆಲ್ಲಾ ಬರುತ್ತಾರಾ ಎನ್ನುವ ಅನುಮಾನಗಳು ಇಲ್ಲದಿರಲಿಲ್ಲ.

ಸುಮ್ಮನೆ ಇಂತಹ ಸಹವಾಸಗಳಿಗೆ ಹೋಗಬೇಡಿ ಎಂದು ಹಲವರು (ಅಧಿಕಾರಿಗಳಿಂದ ಹಿಡಿದು, ಸ್ವಯಂಸೇವಾ ಸಂಘಟನೆಗಳವರು, ಇತ್ಯಾದಿ) ಉಚಿತವಾಗಿ ಸಲಹೆ ಕೊಟ್ಟಿದ್ದೂ ಆಯಿತು. ಬಹಳ ಮುಖ್ಯವಾಗಿ ಇಡೀ ಕಾರ್ಯಕ್ರಮಕ್ಕೆ ತಗಲುವ ವೆಚ್ಚ ಭರಿಸುವವರು ಯಾರು ಎಂಬುದಂತೂ ದೊಡ್ಡದಾಗಿ ಎದುರಾಯಿತು.

ಮತ್ತೆ ಸಮಾಲೋಚನೆಗಳು. ಈ ಬಾರಿ ಯುನಿಸೆಫ್‌ನ ಪ್ರಸೂನ್‌ ಸೇನ್‌ ನಮ್ಮೊಡನೆ ಸೇರಿದರು. ಶಂಕರಮೂರ್ತಿಯವರು ಎಲ್ಲವನ್ನೂ ಆಲಿಸಿ, ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಶಾಸಕರು ಮತ್ತು ಅಧಿಕಾರಿಗಳಿಗೆ ವಸತಿ, ಊಟ, ಸಭಾಂಗಣದ ವ್ಯವಸ್ಥೆ ತಮ್ಮದು. ಅತಿಥಿಗಳನ್ನು ವಿಮಾನ ನಿಲ್ದಾಣದಿಂದ ಕರೆತರಲು ವಿಧಾನಸೌಧದ ಆತಿಥ್ಯ ವಿಭಾಗದವರು ಏರ್ಪಾಡು ಮಾಡುತ್ತಾರೆ. ಕಾರ್ಯಕ್ರಮದ ಉದ್ಘಾಟನೆಗೆ ಸಂಬಂಧಿತ ಮಂತ್ರಿಗಳನ್ನು ಆಹ್ವಾನಿಸುವ ಜವಾಬ್ದಾರಿ ತಮ್ಮದು ಎಂದು ಮುಂದಾಗಿಯೇ ಹೇಳಿದರು.

ಸಾಮಾನ್ಯವಾಗಿ ರಾಜ್ಯಗಳ ಪ್ರತಿನಿಧಿಗಳಾಗಿ ಬರುವವರು ರಾಜ್ಯ ಸರ್ಕಾರದ ಖರ್ಚಿನಲ್ಲೇ ಬರುತ್ತಾರೆ. ಹೀಗಾಗಿ ಪ್ರಯಾಣದ ವೆಚ್ಚವಿಲ್ಲ. ಇಷ್ಟೂ ಮೀರಿ ಯಾರಿಗಾದರೂ ಬೇಕೇ ಆದರೆ ನಾವೆ ಕೊಡುತ್ತೇವೆ ಎಂದು ದೊಡ್ಡ ಭಾರವನ್ನು ತಮ್ಮ ಮೇಲೆ ತೆಗೆದುಕೊಂಡರು. ನಿಗಾ ಕೇಂದ್ರ ಮತ್ತು ಯುನಿಸೆಫ್‌ನಿಂದ ಆಗಬೇಕಿರುವುದು ಸಭೆಯ ಕಾರ್ಯಕ್ರಮದ ರೂಪುರೇಶೆಯನ್ನು ಸಿದ್ಧಪಡಿಸುವುದು ಹಾಗೂ ಸಭೆಯಲ್ಲಿ ಏನು ಚರ್ಚೆ ಮಾಡಬೇಕು, ಅದಕ್ಕೆ ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಕರೆತರುವುದು, ಬಂದವರಿಗೆ ಮನಕ್ಕೆ ತಗಲುವಂತೆ ಓದುವ ಸಾಮಗ್ರಿಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿ ಎಂದರು.

ಕಾರ್ಯಕ್ರಮ ೧೭ ಸೆಪ್ಟಂಬರ್‌ ೨೦೧೭ರಂದು ನಡೆಸುವುದೆಂದು ನಿರ್ಧಾರವಾಯಿತು. ಆಗಲೇ ಶಂಕರಮೂರ್ತಿಯವರು ಹೇಳಿದ್ದು, ಏಕೆ ಕೇವಲ ದಕ್ಷಿಣ ಭಾರತದ ಐದು ರಾಜ್ಯಗಳು ಎನ್ನುತ್ತೀರಿ, ಪುದುಚೇರಿ, ಗೋವಾ ಮತ್ತು ಮಹಾರಾಷ್ಟ್ರವನ್ನು ಕೂಡಾ ಸೇರಿಸಿಕೊಂಡರೆ ಅದು ಪ್ರಾದೇಶಿಕತೆಯ ಸ್ಪಷ್ಟ ರೂಪವಾಗುತ್ತದೆ ಎಂದರು. ಕಲ್ಪನೆ ಇನ್ನಷ್ಟು ವಿಸ್ತಾರವಾಯಿತು. ಇನ್ನು ವಿವಿಧ ರಾಜ್ಯಗಳ ವಿಧಾನಪರಿಷತ್‌ ಮತ್ತು ವಿಧಾನಸಭೆಗಳ ಸಭಾಧ್ಯಕ್ಷರ ಹೆಸರು, ವಿಳಾಸ, ಇಮೇಲ್‌ ಸಂಗ್ರಹ.

ವಿವಿಧ ರಾಜ್ಯಗಳ ಸ್ವಯಂಸೇವಾ ಸಂಘಟನೆಗಳ ಗೆಳೆಯರೊಂದಿಗೆ, ಯಾವ ಯಾವ ಶಾಸಕರು ಮಕ್ಕಳನ್ನು ಕುರಿತು ಸೂಕ್ಷ್ಮಗೊಂಡಿದ್ದಾರೋ, ಮಕ್ಕಳ ಪರವಾದ ಮಾತುಕತೆಯಲ್ಲಿ ಆಸಕ್ತಿ ತೋರುತ್ತಾರೋ ಅಂತಹವರ ಪಟ್ಟಿ ಹಂಚಿಕೊಳ್ಳಲು ಸಂಪರ್ಕಿಸತೊಡಗಿದೆವು. ಅವರ ಹೆಸರು, ಇಮೇಲ್‌ಗಳು, ವಿಳಾಸಗಳನ್ನು ಸಂಗ್ರಹಿಸಿ ಕಳುಹಿಸುವುದು, ಪತ್ರ ವ್ಯವಹಾರ, ಫೋನ್‌ ಮಾತುಕತೆ ಎಲ್ಲವೂ ಆರಂಭವಾಯಿತು.

ಬಹಳ ಮುಖ್ಯವಾಗಿ ಪ್ರೋಟೋಕಾಲ್‌! ಕೆಲವು ರಾಜ್ಯಗಳಿಂದ ಬಂದ ಉತ್ತರ, ಸಭಾಧ್ಯಕ್ಷರ ಅಧಿಕೃತ ಸಹಿ ಇರುವ ಪತ್ರವೇ ಬರಬೇಕು. ಅದರಲ್ಲಿ ವಸತಿ, ಓಡಾಟದ ವ್ಯವಸ್ಥೆ ಮಾಡುವುದಾಗಿ ಬರೆಯಲೇಬೇಕು ಇತ್ಯಾದಿ ಕಡ್ಡಾಯ ಮಾಡಿದ್ದರು. ಇಷ್ಟರ ಮೇಲೆ ನಾವು ಅಪೇಕ್ಷಿಸಿದ್ದವರು ಬರಲಾಗದು, ಇನ್ಯಾರೋ ತಾವು ಬರಬಹುದೇ ಎಂದು ಕೇಳುವುದು ನಡೆದಿತ್ತು.

ಮಕ್ಕಳ ಹಕ್ಕುಗಳನ್ನು ಕುರಿತು ಶಾಸಕರ ಪ್ರಾದೇಶಿಕ ಸಮ್ಮೇಳನ – ೨೦೧೭

ಆಂಧ್ರಪ್ರದೇಶ, ಗೋವಾ, ಪುದುಚೇರಿ, ತೆಲಂಗಣಾ ಮತ್ತು ಕರ್ನಾಟಕದ ಐವರು ಸಭಾಧ್ಯಕ್ಷರು ಮತ್ತು ಈ ಎಲ್ಲ ರಾಜ್ಯಗಳಿಂದ ಒಟ್ಟು ೩೧ ಶಾಸಕರು ಹಾಗೂ ೩೫ ಅಧಿಕಾರಿಗಳು, ಯುನಿಸೆಫ್‌ನ ನಾಲ್ಕು ಪ್ರಮುಖರು ಹಾಗೂ ೩೦ಕ್ಕೂ ಹೆಚ್ಚು ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು ವಿಧಾನ ಸೌಧದ ಪಕ್ಕದ ವಿಕಾಸ ಸೌಧದಲ್ಲಿ ಸೆಪ್ಟಂಬರ್‌ ೧೪ರಂದು ಇಡೀ ದಿನ ಮಕ್ಕಳ ಪರಿಸ್ಥಿತಿಗಳನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ ಹಿನ್ನೆಲೆಯಲ್ಲಿ ಚರ್ಚೆ ಮಾಡಿದೆವು. ಇಂತಹದೊಂದು ಅಂತರ ರಾಜ್ಯ ಮಟ್ಟದ ಸಮ್ಮೇಳನ ಇದೇ ಮೊದಲನೆಯದು ಎಂದು ಉದ್ಘಾಟನೆ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಕಾನೂನು ಹಾಗೂ ಪಾರ್ಲಿಮೆಂಟರಿ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮತ್ತು ವಿಧಾನಪರಿಷತ್ತಿನ ಸಭಾಧ್ಯಕ್ಷರಾದ ಡಿ.ಎಚ್.‌ ಶಂಕರಮೂರ್ತಿಯವರು ಹೇಳಿದರು.

ಮಕ್ಕಳಿಗೆ ಸಂಬಂಧಿಸಿದ ಆರೋಗ್ಯ, ಅಭಿವೃದ್ಧಿ, ಶಿಕ್ಷಣ, ರಕ್ಷಣೆ ಮತ್ತು ಭಾಗವಹಿಸುವಿಕೆ ಕುರಿತು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದ ಅಂಕಿಅಂಶಗಳನ್ನು ಅಂತರ ರಾಜ್ಯ ತುಲನೆ ಮತ್ತು ವಿವರಣೆಗಳೊಂದಿಗೆ ಒಂದು ಕೈಪಿಡಿಯನ್ನು ಸಿದ್ಧಮಾಡಿದ್ದೆವು. ಅದನ್ನು ಎದುರಿಟ್ಟುಕೊಂಡು ಪ್ರಮುಖ ಸಮಸ್ಯೆಗಳಾದ ಮಕ್ಕಳ ಅಪೌಷ್ಟಿಕತೆ, ಬಾಲ್ಯದಲ್ಲೇ ಮಕ್ಕಳ ಮರಣ, ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಇಳಿತ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಕಲಿಕೆಯಲ್ಲಿನ ನ್ಯೂನತೆ, ಮಕ್ಕಳ ಸಾಗಣೆ, ಬಾಲ್ಯವಿವಾಹ, ಇಂತಹವುಗಳನ್ನು ಕುರಿತು ಆಯಾ ರಾಜ್ಯದ ಪರಿಸ್ಥಿತಿ ಕುರಿತು ಶಾಸಕರು ಮತ್ತು ಸಂಬಂಧಿತ ಸದಸ್ಯರು ಏಕೆ ಗಮನ ಕೊಡಬೇಕಿದೆ ಎಂದು ಸವಿಸ್ತಾರವಾಗಿ ಯುನಿಸೆಫ್‌ನ ಪ್ರತಿನಿಧಿಗಳಾಗಿ ಡಾ. ಶ್ರೀಲಕ್ಷ್ಮೀ ಗುರುರಾಜ್‌ ಮತ್ತು ಡಾ. ದೀಪಕ್‌ ದೇ ಅಂಕಿಅಂಶಗಳು ಮತ್ತು ವಾಸ್ತವಾಂಶಗಳನ್ನು ಎದುರಿಟ್ಟು ವಿವರಿಸಿದರು. ವಿವಿಧ ರಾಜ್ಯಗಳ ಪ್ರತಿನಿಧಿಗಳು ತಮ್ಮ ತಮ್ಮ ರಾಜ್ಯದಲ್ಲಿ ಮಕ್ಕಳ ಪರಿಸ್ಥಿತಿಗಳನ್ನು ಕುರಿತು ಮಾಹಿತಿ ಹಂಚಿಕೊಂಡರು.

ಮಕ್ಕಳನ್ನು ದತ್ತು ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ಕುರಿತು ತೆಲಂಗಣಾ ಮತ್ತು ಆಂಧ್ರಪ್ರದೇಶದ ಶಾಸಕರು ಆತಂಕ ವ್ಯಕ್ತಪಡಿಸಿದರು. ಹೆಣ್ಣುಮಕ್ಕಳ ರಕ್ಷಣೆ ಬಹಳ ಮುಖ್ಯವಾಗಿದ್ದು ಅವರ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಹಾರಾಷ್ಟ್ರಾದ ಶಾಸಕರು ವಿವರಿಸಿದರು. ಮಕ್ಕಳು ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ಮತ್ತು ಅದನ್ನು ತಡೆಗಟ್ಟಲು ಸರ್ಕಾರ ನಡೆಸಬೇಕಿರುವ ಕಾರ್ಯಾಚರಣೆಗಳ ಬಗ್ಗೆ ಗೋವಾದ ಶಾಸಕರು ಕರೆ ಕೊಟ್ಟರು. ಪುದಚೇರಿಯ ಶಾಸಕರು ಹೆಚ್ಚು ಹೆಚ್ಚು ಮಕ್ಕಳು ಒಂದೆಡೆ ಅನಾಥರಾಗುವ ಪರಿಸ್ಥಿತಿಯಲ್ಲಿದ್ದರೆ, ಕಾನೂನಿನೊಡನೆ ಸಂಘರ್ಷಕ್ಕೆ ಬೀಳುವ ಮಕ್ಕಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆಯಲ್ಲ ಎಂದು ಪ್ರಶ್ನಿಸಿದರು.

ಮೂರು ಅಧಿವೇಶನಗಳಲ್ಲಿ ನಡೆದ ಚರ್ಚೆಯ ಕೊನೆಗೆ ಶಾಸಕರು ‘ಬೆಂಗಳೂರು ಘೋಷಣೆ’ ಹೆಸರಿನಲ್ಲಿ ಮಕ್ಕಳನ್ನು ಕುರಿತು ತಮ್ಮ ಬದ್ಧತೆಯನ್ನು ಹೊರಡಿಸಿದರು. ಪ್ರಮುಖವಾಗಿ, ಮಕ್ಕಳ ಹಕ್ಕುಗಳು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಹಿನ್ನೆಲೆಯಲ್ಲಿ ತಮ್ಮ ತಮ್ಮ ರಾಜ್ಯಗಳಲ್ಲಿ ಮಕ್ಕಳ ಕ್ರಿಯಾ ಯೋಜನೆ ತಯಾರಿಸುವುದು, ಅಂತರ ರಾಜ್ಯ ಮಕ್ಕಳ ಸಾಗಣೆ, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕರ ವಿಚಾರಗಳನ್ನು ಪರಸ್ಪರ ಸಹಕಾರದಿಂದ ಪರಿಹರಿಸುವುದು, ಪ್ರತಿಶತ ರೋಗನಿರೋಧಕಗಳನ್ನು ಹಾಕಿಸುವುದಕ್ಕೆ ಬೆಂಬಲಿಸುವುದು, ಸಾರ್ವಜನಿಕರಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಲು ತಾವೇ ಮುಂದಾಗಿ ಆ ಕುರಿತು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚಿಸುವುದೇ ಮೊದಲಾದವು ಒಳಗೊಂಡಿತ್ತು.  

ಸೆಪ್ಟಂಬರ್‌ ೧೪ರ ಹಿಂದುಮುಂದಿನ ದಿನಗಳಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷದ ಸದಸ್ಯರೆಲ್ಲರೂ ಸರ್ಕಾರದ ಕೆಲವು ಧೋರಣೆಗಳನ್ನು ಪ್ರಶ್ನಿಸಿ ಧರಣಿ ನಡೆಸಿದ್ದರು. ಆದರೂ ಗಣೇಶ್‌ ಕಾರ್ಣಿಕ್‌ ಅವರು ಮತ್ತು ಆಡಳಿತ ಪಕ್ಷದ ಐವಾನ್‌ ಡಿʼಸೌಜಾ ಅವರು ತಮ್ಮ ಇಡೀ ಸಮಯವನ್ನು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮೀಸಲಿಟ್ಟಿದ್ದರು. ೨೦೧೯-೨೦೨೦ರಲ್ಲಿ ದಕ್ಷಿಣದ ಯಾವುದಾದರೂ ರಾಜ್ಯದಲ್ಲಿ ಈ ಸಮ್ಮೇಳನದ ಮುಂದುವರೆದ ಚರ್ಚೆ ನಡೆಸಲು ಶಾಸಕರು ನಿರ್ಧರಿಸಿದ್ದರು.

ಮಕ್ಕಳ ಹಕ್ಕುಗಳನ್ನು ಕುರಿತು ಪ್ರಾಂತೀಯ ಶಾಸಕರ ಸಮ್ಮೇಳನದ ಕಲ್ಪನೆ, ಆಯೋಜನೆ, ನಿರ್ವಹಣೆ ನಮ್ಮ ಇಡೀ ತಂಡಕ್ಕೊಂದು ವಿಶಿಷ್ಟ ಅನುಭವ. ಇಂತಹ ಚರ್ಚೆಗಳು ಪ್ರತಿ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ವರ್ಷದಲ್ಲಿ ಒಮ್ಮೆಯಾದರೂ ನಡೆದರೆ ಆಯಾ ಪ್ರದೇಶದಲ್ಲಿ ಮಕ್ಕಳ ಪರಿಸ್ಥಿತಿ ಹೇಗಿದೆ ಎಂದು ಅವಲೋಕನ ಮಾಡಿಕೊಂಡು ಮುನ್ನಡೆಯಲು ಸಾಧ್ಯ ಎಂಬ ನಮ್ಮ ಆಗ್ರಹ ಒಂದಷ್ಟು ಶಾಸಕರ ಮನಸ್ಸಿಗೆ ನಾಟಿತು. 

ಸಮ್ಮೇಳನದ ಕೊನೆಯಲ್ಲಿ ಎಲ್ಲರ ಮನಸ್ಸಿನಲ್ಲಿ ಗುನುಗುನಿಸಿದ ವಿಚಾರ, ಗಣೇಶ್‌ ಕಾರ್ಣಿಕ್‌ ಅವರು ಹೇಳಿದ ಮಾತು: ‘ಶಾಸಕರು ಮಕ್ಕಳನ್ನೂ ಪ್ರತಿನಿಧಿಸುತ್ತಾರೆ’.

‍ಲೇಖಕರು ವಾಸುದೇವ ಶರ್ಮ

April 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: