ಮಂಸೋರೆ ಚಿತ್ರ ಇಂದಿನ ತುರ್ತು…

ವಿಮರ್ಶೆ ಎನ್ನುವುದು ಶುದ್ಧ ನಾನ್ಸೆನ್ಸ್!!

ಶರಣು ಹುಲ್ಲೂರು

ವಿಮರ್ಶೆ ಎನ್ನುವುದು ತತಕ್ಷಣಕ್ಕೆ ಹುಟ್ಟುವಂಥದ್ದು ಅಲ್ಲ, ಅದು ಹಾಗೆ ಹುಟ್ಟುವುದೂ ಇಲ್ಲ. ಕಲಾಕೃತಿಯೊಂದು ನೋಡುಗನ ಎದೆಯೊಳಗೆ ಸೃಜಿಸುವ ಭಾವವನ್ನು ಅನುಭವಿಸದೇ ಹೊರಹಾಕಿದಾಗ ಅದು ಕೇವಲ ವಾಂತಿ ಆಗುತ್ತದೆಯೇ ಹೊರತು, ಸಂಕ್ರಾಂತಿ ಆಗಲಾರದು. ‘ವಾಂತಿ’ ಅಜೀರ್ಣ ಕ್ರಿಯೆ, ‘ಸಂಕ್ರಾಂತಿ’ ಪಥವೊಂದರ ಬದಲಾವಣೆಯ ಸಂಕೇತ.

ಸಿನಿಮಾ ನೋಡಿದ ತಕ್ಷಣವೇ ಆ ಕುರಿತು ಬರೆಯುವ, ಕಲೆಯೊಂದನ್ನು ಕಂಡ ತಕ್ಷಣವೇ ಆ ಕುರಿತು ಪ್ರತಿಕ್ರಿಯಿಸುವ, ಕೃತಿಯೊಂದನ್ನು ಓದಿದ ಮರುಕ್ಷಣವೇ ವಿಮರ್ಶಿಸುವ ಕ್ರಿಯೆಯೇ ಶುದ್ಧ ನಾನ್ಸೆನ್ಸ್. ಆ ಕ್ಷಣದ ಭಾವುಕತೆಯನ್ನು ಹೊರಹಾಕಬಹುದೇ, ಹೊರತು ವಿಮರ್ಶೆಯನ್ನಲ್ಲ.
ನಿರ್ದೇಶಕ ಮಂಸೋರೆ ಅವರ ‘ದಿ ಕ್ರಿಟಿಕ್ಸ್’ ಕಿರುಚಿತ್ರವನ್ನು ನೋಡಿದಾಗ ಅನಿಸಿದ್ದಿಷ್ಟು.

ವಿಮರ್ಶೆ ಮೀಮಾಂಸೆಯ ಒಂದೇ ಒಂದು ಪದರ ಸರಿಸಿದಾಗ ಅಲ್ಲಿ, ಒಂದೊಂದ್ಲ ಒಂದು ಆಗುವ ಬದಲು, ಮೂರೂ ಆಗಬಹುದು, ಐದಾಗಿಯೂ ಅಚ್ಚರಿ ಮೂಡಬಹುದು. ಅದು ಸ್ವೀಕರಿಸಿದವನ ಮನಸ್ಥಿತಿ ಅವಲಂಬಿಸಿರುತ್ತದೆ. ಅವನಿಗೆ ಆ ಕೃತಿ ಎಷ್ಟರ ಮಟ್ಟಿಗೆ ದಕ್ಕಿದೆ ಎನ್ನುವ ಆಧಾರದ ಮೇಲೆ ಅಂಕಗಳ ನಿಗಧಿ ಆಗುತ್ತದೆ. ದಕ್ಕುವುದಕ್ಕೆ ಕೃತಿಯನ್ನು ಓದಲೇಬೇಕಿಲ್ಲ. ಈ ಕಿರುಚಿತ್ರದಲ್ಲಿ ಬರುವ ವಿಮರ್ಶಕನಂತೆ ಮಾತಿನಲ್ಲೇ ಮಂಟಪ ಕಟ್ಟಿದರಾಯಿತು.

ಇವತ್ತಿನ ವಿಮರ್ಶೆ ವಾಸ್ತವವೂ ಅದೇ ಆಗಿದೆ. ಲಿಂಗ, ಕಾಮ, ಹಣ, ಯಶಸ್ಸು, ಶ್ರೇಯಸ್ಸು, ಜಾತಿ, ಕೊಡುಕೊಳ್ಳುವಿಕೆಯ ಮೇಲೆ ವಿಮರ್ಶಾಲೋಕ ಕಮಾನು ಕಟ್ಟಿದೆ. ಈ ಎಲ್ಲ ಸೂಕ್ಷ್ಮವನ್ನು ಮಂಸೋರೆ ಅವರು ತಮ್ಮ ಕಿರುಚಿತ್ರದಲ್ಲಿ ಢಾಳವಾಗಿಯೇ ಕಟ್ಟಿಕೊಟ್ಟಿದ್ದಾರೆ.

ರಾಶಿ ರಾಶಿ ಪುಸ್ತಕಗಳ ಮಧ್ಯೆ ವಿಮರ್ಶಕ ಎನ್ನುವ ದೃಶ್ಯವೇ ಆತನು ‘ದೊಡ್ಡ ವಿಮರ್ಶಕ’ ಎನ್ನುವ ಭ್ರಮಾಲೋಕದ ಸಂಕೇತ. ಈ ಹೊತ್ತಿನ ಯುವಕ ಯುವತಿಯರು ಫೇಸ್ ಬುಕ್ ಬರಹಗಾರರು ಆಗಿದ್ದಾರೆ ಎನ್ನುವ ಆತನ ಮಾತೇ, ಈ ಹೊತ್ತಿನ ಕಾಲದ ಮೇಲಿನ ಅವನಿಗಿರುವ ಅಸಹನೆ (ಅಸಹನೆ ವಿಮರ್ಶಕನ ಗುಣವಾಗಬಾರದು). ಸಾಹಿತ್ಯ ಕಮ್ಮಟಕ್ಕೆ ಬರಲು ನನಗೆ ಅಭ್ಯಂತರವಿಲ್ಲ. ಆದರೆ ಗೌರವಧನ ನೋಡ್ಕೊಂಡು ಕೊಡಿ ಎನ್ನುವ ಅವನ ಕೊಡುಕೊಳ್ಳುವಿಕೆಯ ಗುಣ, ವಿಮರ್ಶಾಲೋಕದ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತದೆ.

ವಿಮರ್ಶಕನ ಪರಿಚಯಕ್ಕಿಂತ ಮೊದಲು ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ತೋರಿಸಿ, ಆನಂತರ ಆ ಪಾತ್ರಧಾರಿಯನ್ನು ತೋರಿಸುತ್ತಾರೆ ನಿರ್ದೇಶಕ ಮಂಸೋರೆ. ಈ ಸೂಕ್ಷ್ಮವನ್ನು ಅರಿಯುವುದು ತುಂಬಾ ಕಷ್ಟ ಮತ್ತು ಅಷ್ಟೇ ಅಪಾಯಕಾರಿ. ಅಂಬೇಡ್ಕರ್ ಹೆಸರಿನಲ್ಲಿ ನಡೆಯುತ್ತಿರುವ ಅವಕಾಶವಾದಿತನ ಅಂತಾದರೂ ಅಂದುಕೊಳ್ಳಬಹುದು, ಪ್ರಭಾವಳಿಗೆ ಇಟ್ಟುಕೊಂಡ ಪ್ರತಿಮೆಯೂ ಆಗಬಹುದು.

ಹನ್ನೊಂದು ಚಿಲ್ರೆ ನಿಮಿಷದ ಈ ಕಿರುಚಿತ್ರ ಏನೆಲ್ಲ ಸಾಧ್ಯತೆಗಳನ್ನು ತೆರೆದಿಡುತ್ತಲೇ ನೇರವಾಗಿ ನಮ್ಮಂತಹ ಹುಲುಮಾನವರ ಎದೆಗೆ ತಿವಿದು ಬಿಡುತ್ತದೆ. ವಾರಕ್ಕೆ ಎರಡ್ಮೂರು ಸಿನಿಮಾಗಳ ನೋಡಿ, ಎರಡ್ಮೂರು ಗಂಟೆಯೊಳಗೆ ವಿಮರ್ಶೆ ಹೆಸರಿನಲ್ಲಿ ಅನಿಸಿಕೆ ಬರೆಯುತ್ತೀರಲ್ಲ ಹೇಗೆ ಗುರು? ಎಂದು ಪ್ರಶ್ನೆ ಮಾಡುತ್ತದೆ.

ಪುಸ್ತಕದೊಳಗಿನ ನೋಟು, ಆ ಹುಡುಗಿಯ ನೋಟದೊಳಗಿನ ಘಾಟು ಒಂದೊಂದು ಪ್ರತಿಮೆಗಳೆ. ಅದನ್ನೂ ಹೇಳುವುದಕ್ಕಿಂತ, ಅವುಗಳೊಂದಿಗೆ ನೀವೂ ಸಂಧಿಸಬೇಕು.

‘ದಿ ಕ್ರಿಟಿಕ್ಸ್’ ಅಲಿಯಾಸ್ ‘ವಿಮರ್ಶಕ’ ಕಿರುಚಿತ್ರ ಇವತ್ತಿನ ತುರ್ತು ಅಂತ ಮಂಸೋರೆ ಅವರಿಗೆ ಯಾಕನಿಸಿತೋ ಗೊತ್ತಿಲ್ಲ. ಅವರ ಯಾವ ಸಿನಿಮಾಗಳಿಗೂ ಇಂತಹ ವಿಮರ್ಶೆ ಬಂದಿರಲಿಕ್ಕೆ ಸಾಧ್ಯವೂ ಇಲ್ಲ. ಇದೂ ಕೂಡ ವಿಮರ್ಶೆಗೆ ಇಡಬೇಕಾದ ಅಗತ್ಯ. ಅದನ್ನು ಈ ಕಿರುಚಿತ್ರ ನಿರ್ಮಾಣ ಮಾಡುವ ಮೂಲಕ ಮಾಡಿದ್ದಾರೆ ಕನ್ನಡದ ಸೆನ್ಸಿಬಲ್ ಸಿನಿಮಾಟೋಗ್ರಾಫರ್ ಸತ್ಯಾ ಹೆಗಡೆ.

ವಿಮರ್ಶಕನಾಗಿ ಟಿ.ಎಸ್. ನಾಗಾಭರಣ, ಬರೆಯುವವರನ್ನು ಪ್ರತಿನಿಧಿಸಿರುವ ಉಮಾ ಪಾತ್ರಗಳಾಗಿ ಉಳಿಯುತ್ತಾರೆ. ಬಿ.ಎಂ ಬಸೀರ್ ಬರೆದ ಈ ಕಥೆಯು ಮತ್ತೊಮ್ಮೆ ನೋಡುಗರಿಂದ ಪುನರ್ ವಿಮರ್ಶೆಗೆ ಒಡ್ಡಿಕೊಳ್ಳಲಿ. ಇದನ್ನು ವಿಮರ್ಶೆ ಎಂದು ಓದಿಕೊಳ್ಳದೇ ತತಕ್ಷಣ ಅನಿಸಿಕೆ ಎಂದು ಬದಲಾಯಿಸಿಕೊಳ್ಳಿ ಎಂಬ ವಿನಂತಿಯೊಂದಿಗೆ.

‍ಲೇಖಕರು Admin

January 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: