ಸವಿತಾ ನಾಗಭೂಷಣ
ಹಿರಿಯ ಕವಯಿತ್ರಿ ಚ ಸರ್ವಮಂಗಳಾ ಅವರಿಗೆ ಗೌರವ ಗ್ರಂಥ ಸಮರ್ಪಣೆ ಸಂಭ್ರಮಕ್ಕೆ ಬರೆದ ಕವಿತೆ
ಕಲ್ಲು, ಮಣ್ಣು, ಮರ,
ಬಿದಿರು, ಬಟ್ಟೆಯ ಬೊಂಬೆಯನ್ನಷ್ಟೇ
ನೋಡಿ ಆಡಿ-ಪಾಡಿದ್ದ ನಾನು
ಹೀಗೊಮ್ಮೆ ಆಕಸ್ಮಿಕವಾಗಿ
ಪಿಂಯ್ಕುಗುಟ್ಟುವ ಬೊಗಸೆಗಣ್ಣಿನ
ಶಾಂತಮುದ್ರೆಯ ಮಂಗಳಾ
ಅವರ ಬೊಂಬೆಯ ಎದುರುಗೊಂಡೆ
ತಲೆ ತುಂಬಾ ಗುಂಗುರು ಕೂದಲು
ತುಟಿ ಹವಳದ ಕುಡಿ
ಕಣ್ಣೋಟ ಸ್ಫಟಿಕದ ಶಲಾಖೆ
ಚೆಂಗುಲಾಬಿ ಮಿದುಕೆನ್ನೆ, ಪುಟ್ಟಬಾಯಿ
ಗಿಲಿಗಿಲಿ ತೂಗುವ ಜುಮುಕಿ ಕಿವಿಯಲ್ಲಿ
ನೀಲಿ ಒಡಲಲ್ಲಿ ಬಿಳಿಬಿಳಿ ಚುಕ್ಕಿ ಫ್ರಾಕ್
ಎತ್ತಿಕೊಂಡರೆ….
ಉಮ್ ಎಂದು ಗಂಟಲಲ್ಲೇ ತೊದಲಿ
ಕೆನ್ನೆಗೆ ಮುತ್ತಿಕ್ಕಿದರೆ ಹಾಲಿನ ಪರಿಮಳ ಸೂಸಿ
ಕಿಲಿಕಿಲಿ ನಕ್ಕು ನನ್ನ ಕೊರಳ
ತಬ್ಬಿಕೊಂಡ ಪರಿಗೆ ಮಾರುಹೋದೆ!
ಎಷ್ಟು ಸರಳ-ವಿರಳ
ಬಲು ಮುದ್ದಾದ ಚೆಂದಾದ
ಜೀವ ಮುಕ್ಕಾಗದಿರುವ
ಮಂಗಳಾ ಅವರ ಬೊಂಬೆ
ಎಷ್ಟೋ ವರುಷಗಳ ಕಾಲ…
ಹೂಂ…ಈಗಲೂ ನನ್ನ ಬಳಿ ಇದೆ
ಕಂಡೂ ಕಾಣದಂತೆ ನನ್ನೆದೆಯಲ್ಲಿ
ಮಂಗಳಾ ಅವರ ಬೊಂಬೆ!
ಮೊನ್ನೆ ಈ ಬೊಂಬೆಯೇ ಕೈಹಿಡಿದು
ಕರೆದುಕೊಂಡು ಹೋಯಿತು…
ಜೋಳದಾಳು ಕಾಡಿನ ಅಮ್ಮನಗುಡ್ಡಕ್ಕೆ
ಕಾಡು ಬಿದಿರುಮೆಳೆ, ಹುತ್ತ, ಹುಲಿ,
ಹಾವಿನ ಕತೆಗೆ ಹಾಲೆರೆಯುತ್ತಾ
ಕರೆದೊಯ್ದಿತು ಗುಡ್ಡದ ನೆತ್ತಿಗೆ
ಮುರುಕು ಜೋಪಡಿಯತ್ತ
ಕೈದೋರಿತು ನೋಡಲ್ಲಿ ಮಾತಂಗಿ….
ಹಚ್ಚಿ ಹಣತೆ ಕಣ್ಣ ಮುಚ್ಚಿ
ತೆರೆಯುವುದರೊಳಗೆ ಹೋಯಿತು….
ಕರಗಿ ಹೋಯಿತು ಅಮ್ಮನ ಗುಡ್ಡದೊಳಗೆ…
0 Comments