ಭೋರೆಂದು ಮಳೆ ಸುರಿವ, ನೆರೆ ನೀರೂ ಹರಿವ ನನ್ನೂರು

ಹೋಗುವೆನು ನಾ.. ಹೋಗುವೆನು ನಾ..

ಎನ್ನುವ ಕವಿತೆಯ ಸಾಲುಗಳನ್ನೇ ಹಿಡಿದು ಇತ್ತೀಚೆಗೆ ಕವಯತ್ರಿ ಎಂ ಆರ್ ಕಮಲ ತಮ್ಮ ಊರಿಗೆ ಹೋಗಿಬಂದರು.

ತಾವು ಬೆಳೆದ ಮನೆ, ಆಟ ಆಡಿದ ಬೀದಿ, ಓದಿದ ಶಾಲೆ, ಸೈಕಲ್ ಕಲಿಸಿದ ಗುರು, ನೀರು ಸೇದಿದ ಭಾವಿ ಎಲ್ಲವನ್ನೂ ಮಾತಾಡಿಸಿಕೊಂಡೇ ಬಂದಿದ್ದರು.

ಅದು ಇಲ್ಲಿದೆ.

ಯಾವುದೇ ಸಾಹಿತಿಯ ಒಳಗಿರುವ ಈ ಊರ ವಾಸನೆ ಅವರ ಸೃಜನಶೀಲತೆಯ ಬಹುಮುಖ್ಯ ಆಸ್ತಿ

ಹಾಗಾಗಿ ನೀವು ನಿಮ್ಮ ಊರಿನ ನೆನಪುಗಳಿದ್ದರೆ ‘ಅವಧಿ’ಗೆ ಕಳಿಸಿಕೊಡಿ.. ಎಂದು ಕೇಳಿದ್ದೆವು.

ಈಗ ಎಸ್ ಪಿ ವಿಜಯಲಕ್ಷ್ಮಿ ತಮ್ಮ ಊರಿನ ನೆನಪುಗಳನ್ನು ಕಟ್ಟಿಕೊಟ್ಟಿದ್ದಾರೆ.

ಅದು ಇಲ್ಲಿದೆ 

ನೀವೂ ನಿಮ್ಮ ಅನುಭವಗಳನ್ನು ಕಳಿಸಿಕೊಡಿ 

[email protected]

ನೆನೆದಷ್ಟೂ ಮಧುರ

ಶ್ಯಾಮಲಾ ಮಾಧವ

ನಮ್ಮೂರು, ಮಂಗಳೂರ ಸೆರಗ ಹಾಸಿದಂತಿರುವ ನೇತ್ರಾವತಿ ನದಿಯಾಚೆಗಿನ ಉಳ್ಳಾಲದತ್ತಣ ಕಡಲಕರೆಯ ಹಳ್ಳಿ- ಸೋಮೇಶ್ವರ ಉಚ್ಚಿಲ.

ಊರ ತೆಂಕು ತುದಿಯಲ್ಲಿ ನಮ್ಮಜ್ಜಿ ಮನೆ, ಗುಡ್ಡೆಮನೆ. ಮನೆಯ ಮರ‍್ದಿಕ್ಕುಗಳಲ್ಲೂ ವಿಶಾಲವಾಗಿ ಹರಡಿದ ಭತ್ತದ ಗದ್ದೆಗಳು. ಬಡಗು ದಿಕ್ಕಿಗೆ ನಮ್ಮ ನೆರೆಯ ಐಸಕುಂಞಯ ( ಆಯಿಶಾ) ವಿಶಾಲ ಹಿತ್ತಿಲು,. ಮೂಡಲಿಗೆ ಮುಖ ಮಾಡಿದ ನಮ್ಮ ಮನೆಯೆದುರು ಕಂಬಳ ಗದ್ದೆ. ಅದರೆದುರಿನಲ್ಲಿ ಹಾದುಹೋಗಿರುವ ಬಂಡಿ ರಸ್ತೆ. ತೆಂಕಲಾಗಿನ ಗದ್ದೆಯಂಚಿನಲ್ಲಿ ಹರಿವ ಹೊಳೆ. ಪಶ್ಚಿಮಕ್ಕೆ ಮನೆಯ ಹಿಂಭಾಗದಲ್ಲಿ ಹಿತ್ತಿಲಿಗೆ ಹೊಂದಿಕೊಂಡೇ ನಮ್ಮ ಗದ್ದೆ. ಅದರ ಆಚೀಚೆ ಸುವಿಶಾಲವಾಗಿ ಹರಡಿದ ಹಲವು ಗದ್ದೆಗಳು. ಅವುಗಳಂಚಿಗೆ ಕೇದಿಗೆ ಹಕ್ಕಲು. ಮತ್ತದರಾಚೆ ಎತ್ತರದ ದಿನ್ನೆಯ ಮೇಲೆ ಹಾದು ಹೋಗಿರುವ ರೈಲು ಹಳಿ. ಹಳಿಯಾಚೆಗೆ ಊರ ತೆಂಕುತುದಿಯಲ್ಲಿ ಬೆಟ್ಟದ ಮೇಲೆ ಕೋಟೆ ವಿಷ್ಣುಮೂರ್ತಿ ದೇವಳ.

ಗುಡ್ಡೆಮನೆ ಹಿತ್ತಿಲಲ್ಲಿ ಬದುಗಳ ಮೇಲೆ ತೆಂಗಿನ ಮರಗಳು; ಬದುಗಳ ನಡುವಣ ಕಿರುತೋಡುಗಳಲಿ ನನ್ನ ಪ್ರೀತಿಯ ಬೆಳ್ದಾವರೆ ಹೂ ಬಳ್ಳಿಗಳು. ಪಡುವಣ ಗದ್ದೆಗಳ ನಡುವೆಯೂ ಹರಿದ ಕಿರುತೋಡುಗಳಲ್ಲಿ ಬೆಳ್ದಾವರೆ ಬಳ್ಳಿ, ಹೂಗಳು. ಗದ್ದೆಗಳ ನಡುವಣ ಕೈತೋಡಿನಲ್ಲಿ ನಮ್ಮ ತೊಡೆ ಮಟ್ಟದ ನೀರು. ಅಂಗಿ ಮೇಲೆತ್ತಿಕೊಂಡು ಆ ತಂಪು ತಂಪು ನೀರನ್ನು ದಾಟುವುದೆಂದರೆ ಮೈಯೆಲ್ಲ ಪುಳಕ. ಹಿತ್ತಿಲ ತೆಂಕುತುದಿಯಲ್ಲೊಂದು ಪಾಳ್ಗೊಳ. ಅದರಲ್ಲಿ ಕೆಂಪು ತಾವರೆ ಹೂಗಳು. ನಮ್ಮ ಗದ್ದೆಯಾಚೆಗಿನ ಹೊಳೆ ಪಕ್ಕದಲ್ಲೂ ಕೆಂದಾವರೆಗಳು ತುಂಬಿದ ಆಳವಾದ ಕೊಳವೊಂದಿದ್ದು, ಕೇದಿಗೆ ಬಲ್ಲೆ, ಹೊನ್ನೆಮರಗಳಿಂದಾವೃತವಾದ ಈ ಕೊಳಕ್ಕೆ ಯಾರೂ ಇಳಿಯುತ್ತಿರಲಿಲ್ಲ.

ಹಿತ್ತಿಲ ತುಂಬಾ ಮಾವು, ಗೇರು ಮರಗಳು. ಚಿಕ್ಕ, ದೊಡ್ಡ ಗಾತ್ರದ ಬಲು ಸಿಹಿಯಾದ ಕಾಟುಮಾವಿನ ಮರಗಳು. ಬೇಕೆಂದಷ್ಟು ತಿನ್ನಲು, ಮೇಲೋಗರಕ್ಕೆ, ಉಪ್ಪಿನಕಾಯಿಗೆ, ಬೇಯಿಸಿ ಉಪ್ಪುನೀರಲ್ಲಿ, ತುಂಬಿಡಲು, – ಬೇಸಿಗೆ ಪೂರ್ತಿ ಮಾವಿನ ಸಮೃಧ್ಧಿ. ಆ ಮಾವಿನ ಮರದಿಂದ ತೂಗುವ ನಮ್ಮ ಉಯ್ಯಾಲೆಗಳು. ವಿಶು ಹಬ್ಬದ ಕಣಿಗೊದಗುವ ನಮ್ಮದೇ ಗೇರು ಮರದ ಯಥೇಷ್ಟ ಹುರಿದ ಗೇರುಬೀಜ, ಮನೆಯಂಗಳದಲ್ಲೇ ಎಡತುದಿಗೆ ಆಳವಿಲ್ಲದ ಪುಟ್ಟ ಬಾವಿ. ಅದಕ್ಕೆ ತಾಗಿ ಕೊಂಡೇ ಬಲದಲ್ಲಿ ,ಪೊಟರೆಗಳುಳ್ಳ ವಿಶಾಲ ಅತ್ತಿಮರ; ಎಡಕ್ಕೆ ಸದಾ ಕಂಪಿನ ಹೂ ಸುರಿಸುವ ಗೋಸಂಪಿಗೆ ಮರಗಳು. ಬಚ್ಚಲು ಮನೆಯ ಹಿಂದೆ ಹಿತ್ತಿಲಂಚಿಗೆ ಸಾಗುವಲ್ಲಿ ದೈತ್ಯಾಕಾರದ ತಾಳೆಮರ. ಯಾರೂ ಹತ್ತಲಾಗದಷ್ಟು ಅಗಲವಿದ್ದ ಈ ತಾಳೆಮರ ಅದೆಷ್ಟು ವರ್ಷಗಳಿಂದ ಅಲ್ಲಿ ನಿಂತಿತ್ತೋ, ಯಾರು ಬಲ್ಲರು? ಮರದ ತುಂಬಾ ತೂಗುವ ಬಯಾ ಪಕ್ಷಿಯ ಗೂಡುಗಳು. ಮರ ಹತ್ತುವ ಪ್ರಶ್ನೆಯೇ ಇರಲಿಲ್ಲವಾದ್ದರಿಂದ ,ಹಣ್ಣಾಗಿ ಉದುರಿ ಬೀಳುವ ಕಿತ್ತಳೆ ಬಣ್ಣದ ನಾರಿನ ತಿರುಳಿನ ಹಣ್ಣುಗಳಷ್ಟೇ ನಮಗೆ ಪ್ರಾಪ್ತಿ. ಮನೆಯೆದುರಿಗೆ ಬಲಕ್ಕೆ ಹಿತ್ತಿಲ ಗೋಡೆಯ ಪಕ್ಕ ಬಲು ದೊಡ್ಡ ಗೇರು ಮರ. ದೊಡ್ಡ ಹಳದಿ ಬಣ್ಣದ ಬಲು ಸಿಹಿಯಾದ ಹಣ್ಣುಗಳು. ವಿಶು ಹಬ್ಬಕ್ಕೆ ಇದೇ ಮರದ ಯಥೇಷ್ಟ ಗೇರು ಬೀಜ.

ಭೋರೆಂದು ಮಳೆ ಸುರಿದು ನೆರೆ ನೀರೂ ಹರಿದು ಬರುವ ಮಳೆಗಾಲದಲ್ಲಿ ನಮ್ಮ ಬಾವಿ ತುಂಬ ನೀರು. ಆದರೆ ಪಕ್ಕದಲ್ಲೇ ಹರಿವ ಹೊಳೆಯ ವರಪ್ರಸಾದವಾಗಿ ಈ ನೀರು ಎಂದೂ ಉಪ್ಪುಪ್ಪು. ಕುಡಿವ ನೀರಿಗೆ ಪಕ್ಕದ ಹಿತ್ತಿಲ ಐಸ ಕುಂಞಯ (ಆಯಿಶಾ) ಮನೆಯ ಬಂಡೆಗಲ್ಲಿನೊರತೆಯ ಸಿಹಿ ಸಿಹಿ ನೀರೇ ಗತಿ. ದೊಡ್ಡರಜೆಯ ಸೆಖೆಗಾಲದಲ್ಲಿ ,ಪುಟ್ಟಮಕ್ಕಳಾಗಿದ್ದ ನಮ್ಮನ್ನು, ಆ ಬಾವಿಯೆದುರಿನ ಕಲ್ಲುಚಪ್ಪಡಿಯ ಮೇಲೆ ಕುಳ್ಳಿರಿಸಿ, ಅಮ್ಮ, ಅತ್ತೆ, ದೊಡ್ಡಮ್ಮಂದಿರು, ಬಾವಿಯ ತಂಪು ತಂಪು ನೀರನ್ನು ಸೇದಿ ಸೇದಿ ತಲೆಗೆ ಹೊಯ್ದು ಮೀಯಿಸುತ್ತಿದ್ದರು. ಐಸ ಕುಂಞ, ಬೆಳ್ಳನೆ ನಗುಮೊಗದ, ಜಿಂಕೆಯAಥ ಸೌಮ್ಯಕಂಗಳ ಮೃದುಮಾತಿನ ಪ್ರಿಯ ಜೀವ. ನಮ್ಮ ಹುಡುಗು ಪಾಳ್ಯದ ಆಟೋಟಗಳು ಅವರ ವಿಶಾಲ ಹಿತ್ತಿಲಲ್ಲೂ ನಡೆಯುವುದಿತ್ತು.

ಮತ್ತೆ ಹಾಗೇ ಐಸ ಕುಂಞಯ ಮನೆಯ ಹೆಂಗಸರ ಬಾಗಿಲ ಜಗಲಿಯೇರಿ, ಅಲ್ಲಿ ಬೀಡಿ ಸುತ್ತುತ್ತಾ ಕುಳಿತಿರುತ್ತಿದ್ದ ಅವಳ ಪಕ್ಕ ಕುಳಿತು, ನಾನೂ ಮಾಡುವೆನೆಂದು ಅದೆಷ್ಟು ಎಲೆಗಳನ್ನು ಹಾಳು ಮಾಡಿದ್ದೆನೋ, ದೇವರೇ ಬಲ್ಲ. ಆದರೆ ಆ ಸೌಮ್ಯಕಂಗಳ ಸಿಹಿ ನಗುವಷ್ಟೇ ಸಿಗುತ್ತಿದ್ದ ಬಳುವಳಿ. ಒಂದು ಕಟುಮಾತನ್ನೂ ಆಡಲರಿಯದ ಐಸಕುಂಞ, ತನ್ನ ಕೊನೆಯ ದಿನಗಳಲ್ಲಿ ಬಾಯಿಯ ಕ್ಯಾನ್ಸರ್‌ನಿಂದ ನರಳಿ ದಿನವೆಣಿಸುತ್ತಿದ್ದಾಗ, ನಾನವಳನ್ನು ಕಾಣ ಹೋಗಿದ್ದೆ. ರಜಾ಼ಕ್, ನಫೀಸಾ, ಸೆಫಿಯಾ, ಬೀಪಾತು ಎಂದು ಅವಳ ಐವರು ಮಕ್ಕಳೂ ತಮ್ಮ ಮಕ್ಕಳೊಡನೆ ಅಲ್ಲಿದ್ದರು. ಹಿತ್ತಿಲು ಭಾಗಶಃ ಮಾರಾಟವಾಗಿ, ಅಲ್ಲಿ ಬೇರೆರಡು ಮನೆಗಳು ಎದ್ದಿದ್ದುವು. ಬಾವಿ, ಪಂಪ್ ಇಡಿಸಿ ಕೊಂಡು, ಕಲುಷಿತವಾದಂತೆ ತೋರುತ್ತಿತ್ತು. ನಫೀಸಾ ಕುಡಿಯಲು ತಂದಿತ್ತ ನೀರೂ ಮೊದಲಿನಂತೆ ಸಿಹಿಯಿರಲಿಲ್ಲ. ಆ ಸಿಹಿಯೊರತೆ, ಬಹುಶಃ ಐಸಕುಂಞಯ ಸಿಹಿ ನಗುವಿನೊಂದಿಗೇ ಮಾಯವಾಯ್ತೇನೋ.

ವರ್ಷಂಪ್ರತಿ, ಎಪ್ರಿಲ್ ತಿಂಗಳ ಇಪ್ಪತ್ತೆರಡು, ಇಪ್ಪತ್ಮೂರಕ್ಕೆ ಉಚ್ಚಿಲ ಕೋಟೆ ವಿಷ್ಣುಮೂರ್ತಿ ಜಾತ್ರೆ. ಮನೆಯ ಪಶ್ಚಿಮಕ್ಕೆ ರೈಲು ಹಳಿಯಾಚೆ, ಸಮುದ್ರತಡಿಯಲ್ಲಿ ಏತ್ತರದ ಬೆಟ್ಟದ ಮೇಲಿನ ದೇವಳದ ಬಿಸಿಲು ಮಹಡಿಯು, ಇತ್ತ ಕೆಳಗಿದ್ದ ನಮ್ಮ ಹಿತ್ತಿಲಿಂದ ನೋಡಿದರೆ ಕಾಣುತ್ತಿತ್ತು, ಹಾಗೆಯೇ, ದೇವಳದ ಆ ಬಿಸಿಲು ಮಹಡಿಯೇರಿ, ಪೂರ್ವಕ್ಕೆ ದಿಟ್ಟಿಸಿದರೆ, ನಮ್ಮ ಅರಸುವ ಕಣ್ಗಳಿಗೆ ಆ ಅಗಾಧ ಹಸಿರಿನ ನಡುವೆ ಕಾಣುತ್ತಿದ್ದುದು ,ನಮ್ಮಜ್ಜಿ ಮನೆಯ ಗೋಡೆಯೊಂದೇ. ಪಶ್ಚಿಮಕ್ಕೆ ಸಮುದ್ರ ನೀಲಿಯ ವೈಶಾಲ್ಯ ದೊಡ್ಡದೋ, ಈ ಪೂರ್ವದ ಹಸಿರ ವೈಶಾಲ್ಯ ದೊಡ್ಡದೋ ಎಂದು ಕೌತುಕವೆನಿಸುತ್ತಿತ್ತು. ಅದೇ ಈಗ ಆ ಬಿಸಿಲು ಮಹಡಿಯೇರಿದರೆ, ಪೂರ್ವಕ್ಕೆ ಆ ಹಸಿರನ್ನು ಸೀಳಿ ಹಲವು ಕಟ್ಟಡಗಳೆದ್ದಿರುವುದು, ಕಂಡು ಬರುತ್ತದೆ. ಮಂಗಳೂರ ದಿಕ್ಕಿನಲ್ಲೂ ದೇರ್ಲಕಟ್ಟೆಯ ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳಾದಿಯಾಗಿ ಎದ್ದು ನಿಂತಿರುವ ಕಟ್ಟಡಗಳು ಪರಿವರ್ತನೆಯ ಚಿತ್ರವನ್ನೇ ನಮ್ಮೆದುರು ತೆರೆದು ತೋರುತ್ತವೆ.

ವರ್ಷಂಪ್ರತಿ ಎಪ್ರಿಲ್ ಇಪ್ಪತ್ತೆರಡು, ಇಪ್ಪತ್ಮೂರಕ್ಕೆ ನಡೆವ ಕೋಟೆ ಜಾತ್ರೆಯ ಸಂದರ್ಭ, “ಅಮರಾ, ಮಧುರಾ, ,ಪ್ರೇಮಾ ನೀ ಬಾ ಬೇಗ ಚಂದ ಮಾಮಾ …’, ‘ ಏ ಮೊಹಬ್ಬತ್ ಜಿ಼ಂದಾಬಾದ್…’ ಮುಂತಾದ ಅಂದಿನ ಚಿತ್ರಗೀತೆಗಳು ಅಲೆಯಲೆಯಾಗಿ ಅಲ್ಲಿಂದ ಹರಿದು ಬರುತ್ತಿದ್ದುವು, ರಜಾದಿನಗಳು ಆರಂಭವಾದೊಡನೆ ಊರು ಸೇರಿಕೊಳ್ಳುತ್ತಿದ್ದ ನಮಗೆ ಜಾತ್ರೆಯ ಸಂಭ್ರಮವAತೂ ಹೇಳ ತೀರದು. ರಾತ್ರಿ ತೂಕಡಿಸುತ್ತಾ ದೇವರ ಬಲಿ ಪೂಜೆ ನೋಡಿ ಹಿಂದಿರುಗುವಾಗ, ಒಂದೆರಡು ಹನಿಯಾದರೂ ಮಳೆ ಸುರಿಯದೆ ಇಲ್ಲ. ಬಲಿಪೂಜೆಯ ಮರುದಿನ ಬಂಟ, ಜುಮಾದಿಯ ನೇಮಕ್ಕೆ ಹಾಗೂ ಸಂತೆ ತಿರುಗಲು ಹೋಗುವಾಗ ದೊಡ್ಡಪ್ಪ ನಮ್ಮೆಲ್ಲರ ಕೈಗೂ ನಾಲ್ಕಾಣೆಯಂತೆ ಕೊಡುತ್ತಿದ್ದರು. ಸಂತೆಯಲ್ಲಿ ಬೊಂಬೆ, ಮೆಣಸುಮಿಠಾಯಿ, ಸುಕುನುಂಡೆ ,ಬಳೆ, ಮಲ್ಲಿಗೆ ಹೂ ಎಂದು ಎಂತಹ ಸಂಭ್ರಮ !

ಜುಮಾದಿಯ ನೇಮದಲ್ಲಿ ಮಾತ್ರ, ಬಂಬೂತನ ಮುಖ ನನ್ನ ದೃಷ್ಟಿಗೆ, ಐಸಕುಂಞಯ ದೊಡ್ಡಮ್ಮ ಮರಿಯತರ ಮುಖದಂತೆಯೇ ಕಂಡು ಭಯ ಹುಟ್ಟಿಸುತ್ತಿತ್ತು. ಅವೇ ಉಂಗುರುAಗುರ ಕಿವಿಯೋಲೆಗಳ ದೊಡ್ಡ ಜೋಲುವ ಕಿವಿಗಳು ;ಕಾಲ ದಪ್ಪ ಅಂದುಗೆಗಳು ,ಭಾರದ ಒಡ್ಯಾಣ ! ಮರಿಯತರನ್ನು ಕಂಡರೆ ಬಂಬೂತನದೇ ನೆನಪು ! ಅದೇ ಐಸ ಕುಂಞ ಎಂದರೆ ಅಷ್ಟೇ ಪ್ರೀತಿ, ಸಲುಗೆ. ಅವಳ ಬಿಳಿ,ಗುಲಾಬಿ ಮೈ ಬಣ್ಣ, ಸೌಮ್ಯ ನೀಲ ಕಂಗಳು, ತಲೆಯ ಹಸಿರು ವಸ್ತ್ರದಿಂದಿಣುಕುವ ಅವಳ ತೆಳು ಅಲೆಗೂದಲು,
ಹಕ್ಕಿತುಪ್ಪಳದಂತಹ ಬೆಳ್ಳನೆ ಮಲ್ ಬಟ್ಟೆಯ, ಕುಚ್ಚು ತೂಗುವ ಸಡಿಲ ಕುಪ್ಪಾಯ ಮತ್ತದರ ಕಸೂತಿಯ ಚಿತ್ತಾರದ ಸೊಗಸು! ಒಳಗಣ ಸೌಂದರ್ಯನಿಧಿಯನ್ನು ಮಸುಕಾಗಿಯಾದರೂ ತೋರುತ್ತಿದ್ದ ಕುಪ್ಪಾಯ!

ಆಗ ನಮ್ಮೂರಲ್ಲಿ ಬುರ್ಖಾ ಎಂಬುದೇ ಇರಲಿಲ್ಲ. ಅದೇ ಈಗ ಎಳೆಯ ಏಳೆಂಟರ ಹರೆಯದ ಮಕ್ಕಳೂ ಶಿರೋವಸ್ತ್ರ ಧರಿಸಿ ಮುಖ ಮಾತ್ರ ಕಾಣುವಂತೆ ಕಾಣಿಸಿಕೊಳ್ಳುವಾಗ ಇದು ನಮ್ಮ ಊರೇ ಎಂದು ವಿಷಾದವೆನಿಸುತ್ತದೆ.

ಗುಡ್ಡೆಮನೆಯ ನಮ್ಮಜ್ಜಿ, ಮೊಮ್ಮಕ್ಕಳಿಗೆ ತಿನಿಸಿದಷ್ಟೂ ತಣಿಯದ ಜೀವ. ಸೋದರತ್ತೆ ಶಾರದತ್ತೆ, ಸದಾ ಹಾಡು ಗುನುಗುತ್ತಾ ಒಳ ಹೊರಗೆ ಅಡ್ಡಾಡುತ್ತಾ ಮನೆಕೆಲಸದಲ್ಲಿ ಮಗ್ನರಾಗಿರುತ್ತಿದ್ದ ಪ್ರಿಯಜೀವ. ಗುಡಿಸುವಾಗ ಸಿಕ್ಕಿದ ಚೂರು ಕಾಗದವನ್ನಾದರೂ ಓದಿಯೇ ತೀರುವ ಶಾರದತ್ತೆಯ ಕೆಲಸ ಮುಗಿಯಿತೆಂದರೆ, ಆ ಕೈಗಳಲ್ಲಿ ಪುಸ್ತಕ ಪ್ರತ್ಯಕ್ಷ. ದೊಡ್ಡಮ್ಮ ಎಳೆ ಶಿಶುವಿನ ಬಟ್ಟೆಗಳನ್ನೊಗೆಯಲು ಹೊಳೆಗೆ ಹೋದಾಗ ನಾವು ಮಕ್ಕಳೂ ಅವರ ಹಿಂದೆ ಹೋಗಿ ಹೊಳೆ ನೀರಲ್ಲಿ ಮನಸೋ ಇಚ್ಛೆ ಆಡುತ್ತಿದ್ದೆವು. ಜುಳು ಜುಳು ಹರಿವ ಸ್ವಚ್ಛ ನೀರಲ್ಲಿ ಕಾಲಿಗೆ ಕಚಗುಳಿ ಇಡುವ ಮೀನಮರಿಗಳು. ಬಿಸಿಲಿಗೆ ನೀರಲ್ಲಿ ಹೊಳೆವ ಹೊಯ್ಗೆ, ನೊರಜುಗಲ್ಲುಗಳು. ಈಗ ಬೆಳೆದ ನಗರೀಕರಣದಲ್ಲಿ ನಮ್ಮೀ ಹೊಳೆ ಕೊಳಚೆಯ ಬೀಡಾಗಿ ಹೃದಯವನ್ನೇ ಕುಗ್ಗಿಸುತ್ತಿದೆ. ಹೊಟೇಲ್‌ಗಳ ತ್ಯಾಜ್ಯ ಈ ನೀರನ್ನು ಕಲುಷಿತಗೊಳಿಸಿ ಪರಿಸರದ ಬಾವಿ ನೀರನ್ನೂ ವಿಷಮಯವಾಗಿಸಿದೆ. ರಸ್ತೆ ಚತುಷ್ಪಥವಾಗುವಲ್ಲಿ ನಡೆದ ಕಾಮಗಾರಿಯಲ್ಲಿ ಮಣ್ಣು, ಸಿಮೆಂಟ್, ಹರಿವ ನೀರಿಗೆ ತಡೆಯಾಗಿ ಆ ಸ್ವಚ್ಛ ಸೌಂದರ್ಯವನ್ನು ಹಾಳುಗೆಡವಿದೆ. ಸುತ್ತಣ ಗದ್ದೆ, ತೋಡುಗಳಲ್ಲಿ ಸೊಗಸಾಗಿ ಕಣ್ಗೆ ಹಬ್ಬವಾಗಿದ್ದ ಬೆಳ್ದಾವರೆ ಹೂಬಳ್ಳಿಗಳೂ ಅಳಿಯುತ್ತಾ, ಪುನಃ ಚಿಗುರುತ್ತಾ ಕಣ್ಣುಮುಚ್ಚಾಲೆ ಆಡುತ್ತಿವೆ.

ರೈಲು ಸಂಕದವರೆಗೆ ಮಾತ್ರ ನಮ್ಮ ನೀರಾಟ; ಈಜಾಟ… ಅಲ್ಲಿಂದ ಮುಂದೆ ಹೊಳೆ ಆಳವಿತ್ತಷ್ಟೇ ಅಲ್ಲ, ದೊಡ್ಡಪ್ಪನ ಮಗ ತುಂಟ ಸುರೇಶಣ್ಣನ ಹಲವು ಭೂತದ ಕಥೆಗಳು ನಮ್ಮ ಸಾಹಸಕ್ಕೆ ಅಡ್ಡಿ ಬರುತ್ತಿದ್ದುವು. ರೈಲು ಸಂಕದ ಅಡ್ಡ ಪಟ್ಟಿಗಳಿಂದ ಪುಟ್ಟ ಮಗುವೊಂದು ಕಾಲುಜಾರಿ ಬಿದ್ದು ಕೆಳಗಿನ ಬಂಡೆಕಲ್ಲಿನಲ್ಲಿ ತಲೆಯೊಡೆದು ಸತ್ತಿದ್ದು , ಸಂಕದ ಮೇಲೆ ನಡೆವವರನ್ನು ಭೂತವಾಗಿ ಕೆಳಗೆಳೆಯುತ್ತದೆ ಎಂಬ ಸುರೇಶಣ್ಣನ ಕಥೆ, ಅಂಥ ಅವರ ಕಟ್ಟುಕಥೆಗಳ ಭಂಡಾರದಲ್ಲೊಂದು !

ಗದ್ದೆಹುಣಿಯಲ್ಲಿ ಯಾರಾದರೂ ಸೂಟೆ ಹೊತ್ತಿಸಿಕೊಂಡು ಹೋಗುತ್ತಿದ್ದರೆ, “ಅಕೋ, ಕೊಳ್ಳಿ ದೆವ್ವ ಹೋಗುತ್ತಿದೆ”, ಎಂದೂ, ರಾತ್ರಿ ದೀಪವಾರಿ ನಾವೆಲ್ಲ ಮಲಗಿರುವಾಗ, ಬಂಡಿರಸ್ತೆಯಲ್ಲಿ ಎತ್ತಿನ ಬಂಡಿಯ ಕೊರಳಗಂಟೆ ಕೇಳಿಸಿದರೆ, “ಅದೋ, ಭಂಡಾರ ಹೋಗುತ್ತಿದೆ’ ಎಂದೂ, ಮನೆಯ ಹಿಂಬದಿಗೆ ಹೋಗಿ ‘ಉಕ್ಕೆವೂ ” ಎಂದು ನರಿಯಂತೆ ಊಳಿಟ್ಟೂ ನಮ್ಮನ್ನು ಬೆದರಿಸಲೆತ್ನಿಸುವ ಸುರೇಶಣ್ಣ. ಮಾವಿನ ಮರಕ್ಕೆ ಹಾಕಿದ ಉಯ್ಯಾಲೆಯಲ್ಲಿ ನಾವು ತೂಗಿಕೊಳ್ಳುತ್ತಿದ್ದರೆ, ಸದ್ದಿಲ್ಲದೆ ಮರ ಹತ್ತಿ ಮೇಲಿನಿಂದ ಹಗ್ಗ ಬಿಚ್ಚಿ ನಾವು ಬಿದ್ದಾಗ ನಗುತ್ತಿದ್ದ ಸುರೇಶಣ್ಣ. ಒಮ್ಮೆ ನಾನು ಹಾಗೆ ಗಿಡದ ಕತ್ತರಿಸಿದ ಕುಟ್ಟಿಯೊಂದರ ಮೇಲೆ ಬಿದ್ದು ಚಡ್ಡಿ ಹರಿದು ಗಾಯವಾದಾಗ, ಸುರೇಶಣ್ಣನಿಗೆ ಬೆಲ್ಯಮ್ಮನಿಂದ ಒಳ್ಳೇ ಪೂಜೆಯಾಗಿತ್ತು. ಕೋಟೆ ಬೆಟ್ಟದ ಮೈಯ ಬಂಡೆಯಲ್ಲಿದ್ದ ಟಿಪ್ಪು ಸುಲ್ತಾನನ ಸುರಂಗದೆದುರು ನಿಂತು ,”ಮೈಸೂರಿಗೆ ಯಾರೆಂದು ಕೇಳಿದ್ದೀರಿ? ” ಎಂದು ಬಯಲಾಟದ ಧಿಗಿಣ ಕುಣಿಯುತ್ತಿದ್ದ ಸುರೇಶಣ್ಣ.

ನಮ್ಮ ಗದ್ದೆಯನ್ನು ಗೇಣಿಗೆ ಮಾಡಿಕೊಂಡಿದ್ದ ಗಂಗಯ್ಯಣ್ಣನೇ ನಮ್ಮಲ್ಲಿ ಕಾಯಿ, ಸೀಯಾಳ ಕೀಳಲು ಬರುತ್ತಿದ್ದುದು. ಗಂಗಯ್ಯಣ್ಣ ಸೀಯಾಳದ ಮರದ ಬಳಿ ತೆರಳುವಾಗ ನಮ್ಮ ಸಂಭ್ರಮ ಹೇಳಿ ತೀರದು. ಮೂರು ದೊಡ್ಡ ಲೋಟ ಸಿಹಿ ಸಿಹಿ ನೀರು ಹಿಡಿವಂತಹ ಕಾಯ್ಗಳು. ಮತ್ತೆ ಬನ್ನಂಗಾಯ್ಗಳು. ಬನ್ನಂಗಾಯಿ ತಿರುಳು ಸೀಳಿ ಎಬ್ಬಿಸಿ, ಓಲೆ ಬೆಲ್ಲದೊಂದಿಗೆ ಬೆಲ್ಯಮ್ಮ ನಮಗೆಲ್ಲ ತಿನಿಸಿದ ಮೇಲೆ, ಊಟಕ್ಕೆ ಹೊಟ್ಟೆಯಲ್ಲಿ ಸ್ಥಳವಾಗ ಬೇಕಾದರೆ ಪುನಃ ನಮ್ಮ ದಂಡಯಾತ್ರೆ ಸುತ್ತಣ ಹಿತ್ತಿಲು, ಗದ್ದೆಗಳಲ್ಲೆಲ್ಲ ಸಾಗ ಬೇಕು. ಮಧ್ಯಾಹ್ನ ಹನ್ನೆರಡು ಗಂಟೆಗೆ ಪಕ್ಕದ ಮಸೀದಿಯ ಬಾಂಙ್ ಹೊರಟಿತೆಂದರೆ “ಬಾಂಙ್ ಹೋಯ್ತು; ಮಕ್ಕಳಿಗೆ ಊಟ ಬಡಿಸಿ”, ಎಂದು ಬೆಲ್ಯಮ್ಮನ ಕರೆಯೂ ಹೊರಡುತ್ತಿತ್ತು.

ಸಂಜೆಯ ಬಾಂಙ್ ಹೊರಟಿತೆಂದರೆ , “ಬಾಂಙ್ ಹೋಯ್ತು; ದೀಪ ಬೆಳಗಿ” ಎನ್ನುತ್ತಿದ್ದರು. ಆಗ ಚಾವಡಿಯ ತೂಗುದೀಪವನ್ನು ಬೆಳಗಲಾಗುತ್ತಿತ್ತು. ಮಸೀದಿಯ ಬಾಂಙ್ ಅಂದಿಗೂ ಇಂದಿಗೂ ನಮ್ಮ ಬೆಲ್ಯಮ್ಮನ ವಾತ್ಸಲ್ಯದೊಂದಿಗೆ ತಳಕು ಹಾಕಿಕೊಂಡಿದೆ. ಅಂತೆಯೇ ಎಂದೆಂದಿಗೂ ನನಗೆ ಪ್ರಿಯವಾಗಿದೆ .

ಮನೆಯ ಸುತ್ತ ಹೊರಜಗಲಿ, ಬಲದಲ್ಲೊಂದು ಮೇಲ್ಜಗಲಿ, ಅಡಿಗೆಮನೆ ಹೊರಮೈಗೆ ಅಗಲವಾದ ಜಗಲಿ. ಈ ಜಗಲಿಯಲ್ಲೇ ನಾವು ಕುಳಿತು ಉಣ್ಣುತ್ತಿದ್ದೆವು. ಪಶ್ಚಿಮದ ಗದ್ದೆಯ ಪೈರಿನ ಮೇಲಿನಿಂದ ಬೀಸಿ ಬರುವ ತಂಗಾಳಿ ಆಪ್ಯಾಯಮಾನವಾಗಿರುತ್ತಿತ್ತು. ಬೆಳ್ದಾವರೆಗಳ ಕಂಪನ್ನೂ ಹೊತ್ತು ತರುತ್ತಿತ್ತು. ಸೆಗಣಿ ಸಾರಿಸಿದ ಮನೆ ಸದಾ ತಂಪಾಗಿದ್ದು, ಸೆಗಣಿ ಸಾರಿಸಿದ ಅಂಗಳದೆದುರಿನ ಎರಡು ಕೋಣೆಗಳ ಕೊಟ್ಳು ನಮ್ಮ ಆಟದ ಪ್ರಿಯ ತಾಣವಷ್ಟೇ ಅಲ್ಲ, ತಿಂಗಳು ತಿಂಗಳು ಕಾಗೆಯಿಂದ ಮುಟ್ಟಿಸಿ ಕೊಳ್ಳುತ್ತಿದ್ದ ಅತ್ತೆ, ದೊಡ್ಡಮ್ಮ, ಚಿಕ್ಕಮ್ಮಂದಿರು ಮಲಗುವ ತಾಣವೂ ಆಗಿತ್ತು. ಹುಲ್ಲಿನ ಮಾಡಿನ ಈ ಕೊಟ್ಳುವಿನಂತೆಯೇ ಅಡಿಗೆ ಮನೆಯೆದುರಿಗೆ ಅಂಗಳದಾಚೆಗಿದ್ದ ಬಚ್ಚಲು ಮನೆಗೆ ಕೂಡಾ ಹುಲ್ಲಿನ ಮಾಡು. ಅಂಗಳದಲ್ಲಿ ಭತ್ತ ಕುಟ್ಟುವ ಗುಳಿಗಳು. ಕೃಷಿ ಕೆಲಸದಲ್ಲಿ ಸಹಾಯಕ್ಕೆ ಬರುತ್ತಿದ್ದ ನಮ್ಮ ಚೆನ್ನಮ್ಮಕ್ಕ ಭತ್ತ ಕುಟ್ಟುತ್ತಿದ್ದರೆ, ಆ ಭಾರದ ಒನಕೆಗೆ ನನ್ನ ಪುಟ್ಟ ಕೈಗಳನ್ನು ಕೂಡಿಸುತ್ತಿದ್ದ, ಅಂತೆಯೇ ಒನಕೆ ಊರುವಾಗ ‘ಉಸ್, ಉಸ್” ಎಂದು ಅನುಕರಿಸುತ್ತಿದ್ದ ನನ್ನ ಮೇಲೆ, ನಮ್ಮೆಲ್ಲರ ಮೇಲೆ ಚೆನ್ನಮಕ್ಕನಿಗೆ ತುಂಬ ಅಕ್ಕರೆ. ನಮ್ಮ ಗುಡ್ಡೆಮನೆಗೇ ಸೇರಿದ ಆಸ್ತಿ, ಕೋಟೆ ದೇವಳದ ಬೆಟ್ಟದ ತಡಿಯಲ್ಲಿದ್ದ, ಮೇಲಿನ ಹಿತ್ತಿಲ ಮನೆಯಲ್ಲಿ ಚೆನ್ನಮ್ಮಕ್ಕನ ವಾಸ. ಗಿಡ, ಮರ, ಪೊದೆಗಳಿಂದ ತುಂಬಿದ ಆ ಹಿತ್ತಿಲಲ್ಲಿ ಗಂಧದ ಮರಗಳೂ ಇದ್ದುವು.

ಮುಂಬೈಯಲ್ಲಿದ್ದ ದೊಡ್ಡ ದೊಡ್ಡಪ್ಪನ ಸಂಸಾರ, ಸೋದರತ್ತೆಯ ಸಂಸಾರ, ನಮ್ಮ ಚಿಕ್ಕಪ್ಪ ಎಂದಾದರೊಮ್ಮೆ ಕುಟುಂಬ ವರ್ಗದ ಮದುವೆಗಳಿದ್ದರೆ ಊರಿಗೆ ಬಂದು ಹೋಗುತ್ತಿದ್ದರು. ಮಂಗಳೂರಿನಿಂದ ಮುಂಬೈಗೆ ಮೂರುದಿನಗಳ ಹಡಗಿನ ಪಯಣ, ಆಗ. ಈ ಹಡಗಿನ ಪಯಣದ ಭಾಗ್ಯ ನನಗಿದ್ದರೆ ಎಷ್ಟು ಚೆನ್ನಿತ್ತು ಎಂದು ನಾನು ಹಂಬಲಿಸಿದ್ದು ಅಷ್ಟಿಷ್ಟಲ್ಲ . ಆದರೆ , ನನ್ನ ಮದುವೆಯಾಗಿ, ನನ್ನ ಮುಂಬೈ ಪಯಣ ಆರಂಭವಾಗುವ ಹೊತ್ತಿಗೆ ಈ ಹಡಗು ಸಂಚಾರ ನಿಂತೇ ಹೋಗಿತ್ತು.

ಸನಿಹ ಬಂಧುಗಳಾದ ಮದುಮಕ್ಕಳಿಗೆ ಔತಣದೇರ್ಪಾಟಂತೂ ನಮ್ಮ ಗುಡ್ಡೆಮನೆಯಲ್ಲಿ ಬಹಳ ಗಡದ್ದಾಗಿರುತ್ತಿತ್ತು. ಭೋಜನದ ಬಳಿಕ, ಮುಂಬೈಯಿಂದ ಬಂದ ಬಂಧುಗಳು, ಹಿತ್ತಿಲಲ್ಲಿ ತೆಂಗಿನ ಮರಗಳಡಿಯಲ್ಲಿ ಚಾಪೆ ಹಾಸಿ ಒರಗಿಕೊಂಡು ಆ ತಂಪುಗಾಳಿಯ ಸುಖವನ್ನು ಸವಿಯುತ್ತಿದ್ದರೆ, ನಾವು ಮಕ್ಕಳೂ ಅವರ ಎಡೆ ಎಡೆಯಲ್ಲಿ ನುಸುಳಿ ಅವರ ಮಾತುಕತೆಯ ಮೋಜನ್ನು ಆಲಿಸಿ ಸವಿಯಲೆತ್ನಿಸುತ್ತಿದ್ದೆವು. ನಗರದಿಂದ ಬರುತ್ತಿದ್ದ ಅಡ್ಕದ ಅತ್ತೆಯ ಮಗ ಯೇಸಣ್ಣ , ಗ್ರಾಮಫೋನ್ ತರುತ್ತಿದ್ದು, ಅದು ನಮ್ಮೆಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು.

ಹಿತ್ತಿಲಂಚಿಗೆ ಗದ್ದೆಯ ಮೇಲೆ ದರೆಗೆ ಅಡ್ಡಲಾಗಿ ಒರಗಿಕೊಂಡಿದ್ದ ತೆಂಗಿನ ಮರವೊಂದಿತ್ತು. ಮಳೆಗಾಲದಲ್ಲಿ ಗದ್ದೆಯಲ್ಲಿ ನೀರು ತುಂಬಿ ಕೊಂಡಾಗ ಆ ಮರದ ಪ್ರತಿಬಿಂಬ ಬೀಸುವ ಗಾಳಿಗೆ ಅಲೆಯಲೆಯಾಗಿ ಆ ನೀರಲ್ಲಿ ಮೂಡುತ್ತಿದ್ದು ಹಾವು ಹರಿದಂತೆ ಕಾಣುತ್ತಿತ್ತು. ನಾವು ಆ ಮರದ ಮೇಲೆ ಒರಗಿಕೊಂಡು ಮುಂದು ಮುಂದಕ್ಕೆ ಹೋಗಿ ಮತ್ತೆ ನೆಟ್ಟಗೆ ಕುಳಿತು ಜೀಕಿ ಕೊಳ್ಳುತ್ತಿದ್ದೆವು. ಈಗ ಆ ಮರ ಇಲ್ಲವಾಗಿ ವರ್ಷಗಳೆಷ್ಟೋ ಸಂದರೂ, ಈಗಲೂ ಅದು ನನ್ನ ಕನಸಲ್ಲಿ ಮೂಡುವುದಿದೆ.

ಮನವರಳಿಸಿ ಮುದನೀಡುವ ಪ್ರಕೃತಿಯ ಮಡಿಲ ಆ ಸುಂದರ ದಿನಗಳು ಮರಳಿ ಬಂದಾವೇ? ಇಲ್ಲ, ಎಂದಿಗೂ ಇಲ್ಲ, ಎನ್ನುವಂತೆ ನನ್ನೂರ ಪರಮಪ್ರಿಯ ರುದ್ರ ರಮ್ಯ ಸಮುದ್ರ ತೀರದ ಬದಲಾದ ನೋಟವೂ ನನ್ನ ಮುಂದೆ ತೆರೆದು ಕೊಂಡಿದೆ. ವಿಶಾಲ ಮರಳ ತೀರವಿದ್ದ, ಹೆದ್ದೆರೆಗಳು ಅಪ್ಪಳಿಸುತ್ತಿದ್ದ, ಚಿಪ್ಪುಗಳನ್ನಾಯುತ್ತಾ ಮರಿಏಡಿಗಳ ಹಿಂದೆ ಓಡುವ ಚಿಣ್ಣರು ಮನಸೋಕ್ತ ಆಡಿ ವಿಹರಿಸುತ್ತಿದ್ದ ತೀರವೀಗ ಬಂಡೆಗಲ್ಲುಗಳ ತಡೆಗೋಡೆಯನ್ನು ಹೊತ್ತು ನಿಂತಿದೆ. ಕರೆಯ ವಿಶಾಲ ಮರಳ ಹಾಸು, ಹಸಿರು ಕುರುಚಲು ಬಳ್ಳಿಗಳು, ಚಕ್ರಗಳಂತೆ ಉರುಳುರುಳಿ ಸಮುದ್ರ ಸೇರುತ್ತಿದ್ದ ಚುಳ್ಳಿಗಳು, ಒತ್ತಾದ ಗಾಳಿ ಮರಗಳು, ಅವುಗಳ ನಡುವೆ ಇದ್ದ ವೃತ್ತಾಕಾರದ ತೋಡುಬಾವಿಗಳು ಎಲ್ಲವೂ ಅದೆಂದೋ ಮಾಯವಾಗಿ ಹೋದುವು. ಅಸಂಖ್ಯ ಕಲ್ಪವೃಕ್ಷಗಳ, ಗಾಳಿಮರಗಳ, ಹಸಿರಿನ ಗದ್ದೆಗಳ, ಹರಿವ ಹೊಳೆಯ, ಸುವಿಶಾಲ ಮರಳಹಾಸಿನ ಕಡಲಕರೆಯ, ಎಲ್ಲರನ್ನೂ ಎಲ್ಲರೂ ಅರಿತಿದ್ದ ಸ್ವರ್ಗಸದೃಶ ನನ್ನೂರು ಮರಳಿ ಸಿಗುವುದೇ?

‍ಲೇಖಕರು avadhi

February 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

 1. Poorvi

  WAH ESHTU SOGASAGI BAREDIDDIRI MADAM. ODTHA ODTHA NANU NIMMORINOLAGE HOGBITTIDDE:-)

  ಪ್ರತಿಕ್ರಿಯೆ
 2. Shyamala Madhav

  ಓದಿ ಮೆಚ್ಚಿ ಸ್ಪಂದಿಸಿದ ಪರಿ ಮನೆ ತುಂಬಿತು. ಪ್ರಕಟಿಸಿದ ಅವಧಿಗೆ ಕೃತಜ್ಞೆ.

  ಪ್ರತಿಕ್ರಿಯೆ
 3. Sharada Shetty

  ಓ ಶ್ಯಾಮಲಾ ಎಂಥ ಸೊಗಸಾದ ಬಾಲ್ಯ ಎಂಥ ಸೊಗಸಾದ ಬರವಣಿಗೆ.

  ಪ್ರತಿಕ್ರಿಯೆ
 4. Susheela S Devadiga

  ತುಂಬಾ ಖುಷಿಯಾಯಿತು ನಿಮ್ಮ ಅನುಭವಗಳನ್ನು ಓದಿ. ನಾನೂ ಬಾಲ್ಯದ ದಿನಗಳನ್ನು ನೆನೆಸಿಕೊಂಡೆ.

  ಪ್ರತಿಕ್ರಿಯೆ
 5. S.P.Vijayalakshmi

  Samudra, gudda, tengina topu, nadi, tore, sanka … naavoo alle odaadi bandantaaytu…Tumbaa chennaagide vivaragalu….

  ಪ್ರತಿಕ್ರಿಯೆ
  • Shyamala Madhav

   ಥ್ಯಾಂಕ್ಯೂ ಸುಶೀಲಾ, ವಿಜಯಲಕ್ಷ್ಮೀ.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: