ಭುವನೇಶ್ವರಿ ಹೆಗಡೆ ಅಂಕಣ- ಭುವನಕ್ಕೊಡತಿಯ ಭೂ ಹುಡುಕಾಟ..

20

ನಮ್ಮ ಹಿತಾಸಕ್ತಿಯೇ ಮುಖ್ಯವಾಗಿರುವ ಹಿತಚಿಂತಕರಿಂದ ಸುತ್ತುವರಿಯಲ್ಪಟ್ಟ ನಾವು ಅವರ ಸಲಹೆಗಳನ್ನು ಮನ್ನಿಸದೆ ಇರಲು ಸಾಧ್ಯವೇ? ಕೆಲವರಿಗೆ ಟೈಂಪಾಸ್ ಪುಕ್ಕಟೆ ಸಲಹೆ ಕೊಡುವ ಖಯಾಲಿ. ಎದುರಿಗೆ ಬಂದವರನ್ನು ಅತ್ಯಂತ ಆದರದಿಂದ ಒಂದಲ್ಲ ಒಂದು ಸಲಹೆ ಕೊಟ್ಟೇ ಕಳಿಸುವ ಅಭ್ಯಾಸ ದವರು ಅವರು. ನನಗೂ ಇಂತಹ ಹಿತಚಿಂತಕರು ಇಲ್ಲದೇ ಇಲ್ಲ. 

‘ಆ ಬೆಲ್ಲದ ಅಚ್ಚಿನಂತ ಅಪಾರ್ಟ್ಮೆಂಟಿನಲ್ಲಿ ಎಷ್ಟು ದಿನಾಂತ ಇರ್ತಿರಾ? ಒಂದು ಸೈಟು ತಗೊಂಡು ನೆಲದ ಮೇಲೊಂದು ಮನೆಯಂಥದ್ದು ಕಟ್ಟಿ ಕೊಳ್ಳೋದಪ್ಪ. ಒಂದೊಂದೇ ತೆಂಗಿನ ಗಿಡ ಬಾಳೆ ಗಿಡ ತುಳಸಿ ಗಿಡ ಸಾಂಬಾರ್ ಸೊಪ್ಪು ಲೋಳೆಸರ… ಇಷ್ಟಾದರೂ ಬೆಳೆಸುವಷ್ಟು ಮೆಟ್ಟು ನೆಲ ಇದ್ದರೂ ಆಯಿತು. ಭೂಮಿಯ ಮೇಲೆ ಇದ್ದ ಹಾಗಾಗುತ್ತದೆ. ಆ ಆಕಾಶದಲ್ಲಿ ಬಾಗಿಲು ಹಾಕ್ಕೊಂಡು ಬಾಲ್ಕನಿಯಲ್ಲಿ ಬಗ್ಗಿ ಭೂಮಿ ನೋಡ್ತಾ ಇದ್ರೆ ಅದೊಂದು ಅತಂತ್ರದ ಲೈಫ್ ಅಲ್ಲವೇ ಯೋಚನೆ ಮಾಡಿ ಮೇಡಂ’ ಬಿಟ್ಟೂಬಿಡದೆ ಹೀಗೆ ವರಾತ ಹಚ್ಚಿದವರು ನನ್ನ ಸಹೋದ್ಯೋಗಿ ಹಿತೈಷಿಗಳು.

ವರ್ಷಾನುಗಟ್ಟಲೆಯಿಂದ ಒಬ್ಬರು ಒಂದೇ ಉಪದೇಶ ಮಾಡುತ್ತಿದ್ದರೆ ಒಂದಲ್ಲ ಒಂದು ದಿನ ಆಯ್ತು ಅಂದು ಬಿಡುತ್ತವೋ ಏನೋ. ನಾನು ಹಾಗೆ ಹೂಂಗುಟ್ಟಿದೆನಿರಬೇಕು. ಪವಾಡಪುರುಷರ ಬಾಯಲ್ಲಿ ಓಂಕಾರ ಹೂಂಕಾರಗಳು ಹೊರಟ ತಕ್ಷಣ ಗಣಗಳು ಪ್ರತ್ಯಕ್ಷವಾಗುವ ಹಾಗೆ ನನ್ನ ಹಿಂದೆ ಮುಂದೆ ಎಡಕ್ಕೆ ಬಲಕ್ಕೆ ಸೈಟು ಕೊಡಿಸುವ ಗಣಜನ ಹುಟ್ಟಿಕೊಂಡುಬಿಟ್ಟರು. ಇಷ್ಟು ದಿನ ಎಲ್ಲಿದ್ದವೋ ಒಮ್ಮೆಯಾದರೂ ನನ್ನ ಕಣ್ಣಿಗೆ ಬಿದ್ದಿರದ ವಿವಿಧ ತೂಕದ ವಿನ್ಯಾಸದ ವ್ಯಕ್ತಿಗಳು ಆಕೃತಿಗಳು ಪ್ರತ್ಯಕ್ಷವಾಗಿ ಬಿಟ್ಟವು.

ಕೆಲವರ ಜಾಕೀಟು, ಜರ್ಕಿನ್ನು, ಕೈಕಡಗಗಳ ದಿರಿಸು ನೋಡುತ್ತಲೇ ನನ್ನ ಸ್ವರ ಅಡಗಿಹೋಯಿತು. ‘ಪಾರ್ಟಿ ನಾಟ್ ಎಟ್ ಡಿಸೈ ಡೆಡ್ ಎಂದೋ ಏನೋ ತಮ್ಮ ಬಾಸ್ ಗಳಿಗೆ ಫೋನಿನಲ್ಲಿ ಹೇಳಿ ಜಾಗ ಖಾಲಿ ಮಾಡಿದರು. ಇದ್ದುದರಲ್ಲೇ ಸ್ವಲ್ಪ ಸಭ್ಯ ವೇಷಧಾರಿಗಳ ಬಳಿ ಹೌದು ಸೈಟು ನೋಡೋಣ ಅಂತ ಇದ್ದೇವೆ ಎಂದು ಹೇಳಿದ್ದೇ ತಡ ಪ್ರಶ್ನಾವಳಿಗಳ ಹಾವಳಿ ಶುರುವಾಯಿತು. ‘ನಿಮ್ಮ ಬಜೆಟ್ ಏನು ಯಾವುದಾದರೂ ಏರಿಯಾವೇ ಬೇಕಾ? ಲೋನಾಸೇವಿಂಗ್ಸ್? ವಾಸ್ತುವಾ ವಾಸ್ತವವಾ ದೊಡ್ಡದಾ? ಚಿಕ್ಕದಾದ್ರೆ ಸಾಕಾ?’ ಸೈಟು ಸಂಬಂಧಿ ಪ್ರಶ್ನೆಗಳು ಒಂದೇ ಎರಡೇ ಪ್ರಶ್ನೆಗಳಿಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳದ ಪರೀಕ್ಷಾರ್ಥಿಯ ಹಾಗೆ ಕಂಡ ಕಂಡದಕ್ಕೆಲ್ಲಾ ಗೋಣುಹಾಕಿ ಸಿಕ್ಕಿಹಾಕಿಕೊಂಡೆ. ಲೋನು ಬೇಕಾಗುತ್ತದೆ ಎಂಬ ವಾಕ್ಯ ಹೇಳಲು ಹೊರಟು ಲೋ ಎಂದಷ್ಟೇ ಹೇಳಿದ್ದೆನಿರಬೇಕು. ಮದ್ಯವರ್ತಿಯ ಮೊಬೈಲು ಯಾರಿಗೋ ‘ಲೋನ್ ಪಾರ್ಟಿ ಇದೆ ಬೇಗ ಬಾರಯ್ಯ’ ಎಂದು ಹೇಳಿ ಆಗಿತ್ತು. (ಇನ್ನೆರಡು ಜರ್ಕಿನ್ ಗಳು ಎದುರು ಪ್ರತ್ಯಕ್ಷ!) ಅಂತೂ ಹೋದಲ್ಲಿ ಬಂದಲ್ಲಿ ಭೂಮಿ ಬ್ರೋಕರುಗಳು ಸಂಭ್ರಮಿಸತೊಡಗಿದರು ಸಾಲ ಕೊಡುವವರು ಕಾಲಿಗೆ ತೊಡರು ತೊಡಗಿದರು.

ನನ್ನ ಮನಸ್ಸಿನಲ್ಲಿ ಭೂಮಿಯೆಂದರೆ ಮಲೆನಾಡಿನ ನಮ್ಮ ಹಳ್ಳಿಯ ಅಡಕೆ ತೋಟ ಲೆಕ್ಕಕ್ಕಿಲ್ಲದೇ ಹಸಿರಾಗಿ ಹಬ್ಬಿರುವ ಭೂಮಿ ಬೇಣ ಬೆಟ್ಟ… ಎಂದು. ಅಪ್ಪ ಕಡಿದು ಕೂಡಿಟ್ಟ ಮಕ್ಕಳ ಸುಖದ ಬದುಕಿನ ಸಾಮ್ರಾಜ್ಯವಾದ ಅದೇ ನಿಶ್ಚಲ ರೂಪದ ಭೂತಾಯಿ. ಬಾಲ್ಯವನ್ನು ತುಂಬಿಕೊಂಡಿದ್ದ ಪನ್ನೇರಲೆ ಜಂಬೆ ಮಾವುಗಳಿಂದ ತುಂಬಿದ ತೋಟ. ಮನೆ ಎಂದರೆ ಬೀಗಗಳೇ ಇಲ್ಲದ ಮನೆ ತುಂಬ ಜನ ತುಂಬಿದ್ದ ಬಂಧು ಬಾಂಧವರು ಬಂದು ಹೋಗುವ ಜನ ಆಳು ಕಾಳು ಬೆಕ್ಕು ನಾಯಿ ಎಮ್ಮೆ ದನಗಳಿಂದ ತುಂಬಿರುವ ಹದಿನಾರಂಕಣದ ಮಹಡಿ ಮನೆ. ಅಪ್ಪ ಅಮ್ಮ ಕಟ್ಟಿದ ಮಕ್ಕಳ ಮೊಮ್ಮಕ್ಕಳ ಪಾಲಿಗೆ ನೆರಳಾಗಿದ್ದ ತಂಪು ತಂಪಾದ ಮನೆ. ಈಗ ಕನಸಲ್ಲಿ ಬಂದು ಕರೆಯುವ ಮನೆ.

ಇಲ್ಲೀಗ ಭೂಮಿಯೆಂದರೆ ನಗರಗಳಲ್ಲಿ ಗೇಣು ಗಳಲ್ಲಿ ಬೆರಳುಗಳಲ್ಲಿ ಅಳೆಯುವ ಸೆಂಟು ಸ್ಕ್ವೇರ್ ಫೀಟ್ ಗಳು ಪಾಯಿಂಟುಗಳ ಲೆಕ್ಕದಲ್ಲಿ ಮಾತ್ರಸಿಗುವ ತೆಂಗಿನ ಮರಗಳನ್ನು ಕಡಿದ ಸೈಟ್. ಒಣ ಒಣ ಗೇಣಗಲದ ಭೂಮಿ. ಮನೆ ಎಂದರೆ ಭೂಮಿಯ ಸ್ಪರ್ಶವಿಲ್ಲದ ಆಕಾಶ ಕಾಣಲು ಗೇಣಗಲದ ಬಾಲ್ಕನಿಯಿರುವ ಸದಾ ಬಾಗಿಲು ಹಾಕಿಕೊಂಡಿರುವ ಪಕ್ಕದ ಮನೆಯವರ ಪರಿಚಯವಿಲ್ಲದ ಅಪಾರ್ಟ್ಮೆಂಟುಗಳು. ಮನೆಯೋ ಸೈಟೋ ಅಪಾರ್ಟ್ ಮೆಂಟೋ ಪ್ರಕಾರಾಂತರ ಮಾಡಲು ಸಮಯ ಬೇಕು ಎಂದೆ. ಕೈಕಡಗ ದೊಡೆಯ ಪಕಪಕ ನಗುತ್ತಾ ಪಕ್ಷಾಂತರ ಮಾಡೋರೇ ತಲೆಬಿಸಿ ಮಾಡದೆ ಇವತ್ತು ಈ ಪಕ್ಷ ನಾಳೆ ಆ ಪಕ್ಷ ಅಂತಿರುತ್ತಾರೆ ನೀವು ಒಳ್ಳೆ ಪ್ರಕಾರಾಂತರಕ್ಕೆ ಯೋಚನೆ ಮಾಡ್ಬೇಕು ಅಂತಿದ್ದೀರಿ’ ಅಂದು ಸೊಟ್ಟದಾಗಿ ನಕ್ಕ. 

ಸರಿ ಕಾಲೇಜು ಶುರುವಾಗಿದ್ದೇ ಸೈಟ್ ಸೀಯಿಂಗ್ ಕಾಯಕಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟೆ. ಎಡ ಬಲ ಮುಂದೆ ಹಿಂದೆ ಮಾಹಿತಿದಾರರ ವಿವರ ಗಳನ್ನು ಗುರುತು ಹಾಕಿಕೊಂಡೆ. ಕದ್ರಿ 4ಸೆಂಟು, ಕೋಡಿಕಲ್ 5,… ಏರಿಕೆ ಪ್ರಕಾರ ಪಟ್ಟಿ ಸಿದ್ಧಪಡಿಸಿ ಭಟರನ್ನು ಸಂಪರ್ಕಿಸಿದೆ. ನನಗೆ ಮಾಹಿತಿ ಒದಗಿಸಿದ ಅವರಲ್ಲಿ ಕೆಲವರು ಭೂಮಿ ಬೆಳೆಸುವವರು (ಲ್ಯಾಂಡ್ ಡೆವಲಪರ್ )ಅಂದರೆ ಹತ್ತು ಕ್ಕೆ ಕೊಂಡು ನೂರಕ್ಕೆ ಮಾರಿ ಹಣದ ಬೆಳೆ ಬೆಳೆ ಬೆಳೆಸುವವರು, ಇಡೀ ಗುಡ್ಡವೊಂದನ್ನು ಖರೀದಿಸಿ ಅದನ್ನು ಕೇಕಿನ ಹಾಗೆ ಕತ್ತರಿಸಿ ಮಾರುವ ‘ಮಣ್ಣು ಮಾರಿ’ಗಳು ಲಾರಿಗಳಲ್ಲಿ ಮಣ್ಣು ತುಂಬಿಸುವ ಹಣದ  ದಾರಿ ಕಂಡುಕೊಂಡವರು, ಅಪ್ಪ ಸಾಯುವುದನ್ನೇ ಕಾಯುತ್ತಿದ್ದು ಅಪ್ಪನ ಹೆಸರಲ್ಲಿರುವ ಪಿತ್ರಾರ್ಜಿತ ಆಸ್ತಿಯನ್ನು ಮಾರಿ ಕಾರು ಖರೀದಿಸಿ ಶೋಕಿ ಮಾಡುವ ಪುತ್ರ ರತ್ನಗಳು, ಸೈಟು ಮಾರಿ ಅಪಾರ್ಟ್ ಮೆಂಟ್ ಖರೀದಿಸುವ ಶೋಕಿ ಯವರು , ಹೆಸರಿಗೆ ಹೆಂಡತಿಯ ಸಹಿ ವ್ಯವಹಾರವೆಲ್ಲ ಪತಿರಾಯನದ್ದು….. ಎಷ್ಟು ವೆರೈಟಿ !

ಈ ಎಲ್ಲ ಜನರ ಭೂದಾಹದ ಲಾಭದ ಆಸೆಯ ಪ್ರ್ಯಾಕ್ಟಿಕಲ್ ಲಾಭ ಪಡೆಯುವವರು ಲಾಭದಾಯಕ ಹುದ್ದೆ ಎಂದರೇನೆಂದು ತಿಳಿಯಬಹುದಾದ ಮುದ್ರಾಂಕಿತ ಕೃಪಾಂಕಿತ ಇತ್ಯಾದಿ ನಾಮಾಂಕಿತರು. ಹೊಸದೊಂದು ಭೂಲೋಕದ ಪರಿಚಯವಾದಂತಾಗಿ ಉಬ್ಬಸ ಬರುವಂತಾಯ್ತು. ‘ಭೂ ಮಾರಿ ಗಣ’ವೊಂದು ಎ.ಸಿ ಕಾರಿನ ಲ್ಲಿ ನನ್ನನ್ನು ಕೂಡಿಸಿಕೊಂಡು ಬಿರುಬಿಸಿಲಿನಲ್ಲಿ ನನ್ನ ಸೈಟ್ ಸೀಯಿಂಗ್ ಕಾರ್ಯಕ್ರಮ ಪ್ರಾರಂಭಸಿತು.     ರೊಯ್ಯೆಂದು ಹೈವೇ ದಾಟಿ ಹಾರಿ ಜೋಂಯಿ ಎಂದು ಪ್ರಪಾತಕ್ಕೆ ಇಳಿದು ಗದ್ದೆ ದಾಟಿ ಬಯಲು ಸುತ್ತಿ ಒಂದು ಗುಡ್ಡದ ತಪ್ಪಲಿನಲ್ಲಿ ಹೋಗಿ ನಿಲ್ಲಿಸಿದರು. 

ಇದು ನಮ್ಮ ಲೇ ಔಟ್. ಬಯಲಿನ ಸೈಟು ಗಳೆಲ್ಲ ಬಿಸಿ ಕೇಕಿನ ಹಾಗೆ (ಎಷ್ಟೊಳ್ಳೆ ಹೋಲಿಕೆ ಕತ್ತರಿಸಿಟ್ಟ ಕೇಕಿನ ತುಂಡು ಗಳಂತೆಯೇ ಇರುವ ಸೈಟುಗಳು ಗೋಚರಿಸುತ್ತಿದ್ದವು) ಮಾರಾಟ ಆಗಿಬಿಟ್ಟಿವೆ ನಿಮಗೆ ಆದರೆ ಅವು ಆ ಗುಡ್ಡದ ಮೇಲೆ ಕೊಡುವ ಎಂದರು. ಕತ್ತೆತ್ತಿ ನೋಡುತ್ತೇನೆ ಕಡಿದಾದ ಗುಡ್ಡ ಅದರ ಮೈ ಅಗೆದು ಲಾರಿಗೆ ತುಂಬಿಸುತ್ತಿದ್ದಾರೆ. ಇನ್ನೊಂದು ಕಡೆ ಬಿಳಿಸುಣ್ಣದಿಂದ ಗೆರೆ ಎಳೆದಿದ್ದಾರೆ. ರಸ್ತೆ, ಚಿಕ್ಕ ಸೈಟು ದೊಡ್ಡದು ಎಂದೆಲ್ಲ ವಿವರಿಸುವಾಗ ಭೂಮಧ್ಯರೇಖೆ ಸಮಭಾಜಕ ವೃತ್ತ ಗಳ ಭೂಗೋಳ ಕಲಿತಿದ್ದು ನೆನಪಿಗೆ ಬಂತು. ಆ ಗುಡ್ಡದ ಮೇಲೆ ಹೇಗೆ ಮನೆ ಕಟ್ಟೋದ್ರೀ ಎಂದು ಕೇಳಿಬಿಟ್ಟೆ.

ಮಂಗಳೂರಿನ ಹೃದಯಭಾಗವಾದ ಹಂಪನಕಟ್ಟೆಯ ಟಾಗೋರ್ ಪಾರ್ಕಿನ ಬುಡದ ಮಣ್ಣನ್ನು ಕೆಳಗಿನಿಂದ ಅಗೆದು ಮೇಲಿರುವ ಅಪಾರ್ಟ್ ಮೆಂಟುಗಳ ತಳಪಾಯ ಗೋಡೆ ಕುಸಿಯುವ ಭೀತಿಯಲ್ಲಿರುವುದನ್ನು ಕಣ್ಣಾರೆ ಕಂಡ ನನಗೆ ‘ಪದಕುಸಿಯೇ ನೆಲವಿಹುದೆ’ ಎಂದು ಕೇಳುವಂತಾಯಿತು. ವ್ಯವಹಾರ ಜ್ಞಾನವಿಲ್ಲದ ಕ್ರಿಮಿ ಯೊಂದನ್ನು ನೋಡಿದಂತೆ ನನ್ನತ್ತ ದುರುದುರು ನೋಡಿದ ಗಣ ‘ಅಯ್ಯೋ ಈಗ ಅದು ಗುಡ್ಡದ ಹಾಗೆ ಕಾಣುತ್ತಿದೆ ಮಾರಾಯ್ರೆ ಪಕ್ಕದ ಗುಡ್ಡ ನೋಡಿ ಅದರ ಹಾಗೆ ಅಂತಸ್ತು ಅಂತಸ್ಥಾಗಿ ಕಟ್ ಮಾಡಿ ಕೊಡುತ್ತಾರೆ ನಿಮ್ಮ ಅಂತಸ್ತು ಯಾವುದಾದೀತು?’ ಎಂದು ಕೇಳಿದ.

ತೀರಾ ನಮ್ಮೆದುರೇ ನಿಂತು ನಿಮ್ಮ ಅಂತಸ್ತು ಯಾವುದು ಎಂದು ಕೇಳಿದರೆ ಏನೆಂದು ಉತ್ತರ ಕೊಡುವುದು? ‘ಕೊಂಚವೂ ಲಂಚವಿಲ್ಲದ ಬೆಂಚಪ್ಪ ಗಳನ್ನು ಸಂಬಾಳಿಸಬೇಕಾದ  ಹೆಚ್ಚೆಂದರೆ ಲಾಭದಾಯಕ ಹುದ್ದೆಯ ಅಭ್ಯರ್ಥಿ ಗಳನ್ನು ಸಿದ್ಧಪಡಿಸಿ ಕಳಿಸುವ ಅಧ್ಯಾಪಕ ವೃತ್ತಿಯ ಅಂತಸ್ತು ಕಣಪ್ಪ’ ಎಂದು ಹೇಳಿದರೆ ಆ ಗಣಕ್ಕೆ ಏನನಿಸುತ್ತದೆಯೋ ಎಂದು ಸುಮ್ಮನಾದೆ.

ಸದ್ಯ ಸಮುದ್ರ ತೋರಿಸಿ ಅಗೋ ನೋಡಿ ನಿಮ್ಮ ಸೈಟು ಎನ್ನಲಿಲ್ಲವಲ್ಲ ಹೆಸರೇನೋ ಭುವನಕ್ಕೆ ಈಶ್ವರಿ ಭೂಮಿಗೆ ಒಡತಿ ಎಂದೆಲ್ಲ ಇಟ್ಟರೂ ಹೆಸರಿಗಾದರೂ ಚೂರು ಭೂಮಿ ಇಲ್ಲದ ನನ್ನ ಅಂತಸ್ತಿಗೆ ಸರಿಹೊಂದುವ ಗೇಣಗಲದ ಆದರೂ ಸರಿ ಸೈಟ್ ಎಂಬ ಭೂ ತುಣುಕು ಅದೆಲ್ಲಿದೆಯೋ ಯಾವ ಅಂತರಿಕ್ಷದಲ್ಲಿ ದೆಯೋ ಗುಡ್ಡದ ಮೇಲಿದೆಯೋ ಕೊನೆಗೆ ಸಮುದ್ರದಲ್ಲಿಯೇ ಇದೆಯೋ ಆ ಭೂದೇವಿಗೇ ಗೊತ್ತು ಎನಿಸಿ ಸೈಟಿಗೆ ಕಾಣದ ದರ್ಶನಕ್ಕೆ ಸಿಗದ ಆ ಕಾಲ್ಪನಿಕ ಸೈಟಿಗೆ ನಿಂತಲ್ಲೇ ಕೈಮುಗಿದು ನಡೀರಿ ಹೋಗೋಣ ಎಂದೆ. ಕೈ ಕಡಗ ಕಾರು ಗೇರ್ ಪ್ರವ್ರತ್ತವಾಯಿತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: