ಭುವನೇಶ್ವರಿ ಹೆಗಡೆ ಅಂಕಣ- ನನ್ನ ಚಪ್ಪಲಿಯ ಮೇಲೆಯೇ ಅವನ ಕಣ್ಣು…

15

ನಾನು ಬಸ್ಸಿಂದಿಳಿದು ಧಾವಿಸುವ ನನ್ನ ಕಾಲೇಜಿನ ಎದುರು ಕೂತ ಚಪ್ಪಲಿ ಹೊಲಿಯುವವನಿಗೆ ದಿನವೂ ನನ್ನ ಚಪ್ಪಲಿಯ ಮೇಲೆಯೇ ಕಣ್ಣು. (ಬೆಕ್ಕು ನಿದ್ದಿಸಿದಾಗ ಕನಸಿನಲ್ಲಿ ಮಳೆ ಬಂದರೆ ಆ ಮಳೆಯಲ್ಲಿ ಉದುರುವುದು ಏನಿದ್ದರೂ ಇಲಿಗಳೇಯಂತೆ!) ಬಸ್ಸಿನಿಂದಿಳಿದ ನಾನು ಅವನನ್ನು ಸಂದರ್ಶಿಸದೆ ಮುಂದೆ ಹೋಗುವಂತಿಲ್ಲ ಎಂಬುದು ಅವನಿಗೆ ಗೊತ್ತು. ಮೊದಲನೆಯ ಪೀರಿಯಡ್ಡು ಕ್ಲಾಸು ಇದ್ದಾಗ ಅವನಿಗೆ ಚಪ್ಪಲಿ ಕಳಚಿ ಕೊಟ್ಟು ಅಲ್ಲಿಯೇ ನಿಲ್ಲುವಂತಿಲ್ಲ. ಇದು ಅವನಿಗೂ ಗೊತ್ತು.

ಈ ಹೊಸ ಚಪ್ಪಲಿ ಹಾಕಿಕೊಂಡು ಈಗ ಕ್ಲಾಸಿಗೆ ಹೋಗಿ ಮೇಡಂ. ಆಮೇಲೆ ಬಂದು ತೆಗೆದುಕೊಂಡು ಹೋಗಿ ಎನ್ನುತ್ತಾನೆ ಇಂತಹ ಮೈನರ್ ಅಡ್ಜಸ್ಟ್ ಮೆಂಟ್ ಗಳಿಗಾಗಿಯೇ ಸ್ಟಾಂಡ್ ಬೈ ಚಪ್ಪಲಿಗಳನ್ನು ಇಟ್ಟುಕೊಳ್ಳುವ ಅವನ ವೃತ್ತಿ ಶ್ರದ್ಧೆಯನ್ನು ಎಂದೂ ಮರೆಯಲಾಗುವುದಿಲ್ಲ. ‘ಮಂಗಳೂರಿನ ಮರೆಯಲಾಗದ ಮಹಾನುಭಾವರು’ ಎಂದೇನಾದರೂ ಲಿಸ್ಟ್ ಮಾಡಿದರೆ ಈ ನನ್ನ ನಿತ್ಯ ಪಾದುಕಾ ಪ್ರದಾನ ಮಾಡುವ ಬಂಧುವೇ ಮೊದಲ ಹೆಸರು ಎಂಬುದರಲ್ಲಿ ಸಂಶಯವೇ ಇಲ್ಲ.

ನನ್ನ ಚಪ್ಪಲುಗಳು ಬಸ್ಸಿನ ಎಂತಹ ರಶ್ಶಿನಲ್ಲಿಯೂ ಹರಿಯಬಾರದು ಆ ರೀತಿ ಮಾಡಿದ್ದೇನೆ ಎನ್ನುತ್ತಲೇ ಆತ ನನ್ನ ಚಪ್ಪಲಿಗಳನ್ನು ಎದುರು ಹಿಡಿಯುವ ದೃಶ್ಯ ಕಣ್ಮುಂದೆ ಇದೆ. ಒಂದು ದಿನ ಹೀಗೆ ಆತನಿಗೆ ಹರಿದ ಚಪ್ಪಲಿ ನೀಡಿ ಅವನು ನೀಡಿದ ಹೊಸ ಚಪ್ಪಲಿ ಧರಿಸಿ ಪಾಠ ಮಾಡುತ್ತಿದ್ದೆ. ಹೊರಗೆ ಯಾರೋ ಬಂದು ನಿಂತ ಹಾಗೆ ಅನ್ನಿಸಿತ್ತು. ಪಾಠ ನಿಲ್ಲಿಸಿ ನೋಡುತ್ತೇನೆ ನನ್ನ ಚಪ್ಪಲಿ ಬಂಧು ‘ನನಗೆ ಅರ್ಜೆಂಟಾಗಿ ಕಂಕನಾಡಿಗೆ ಹೋಗಬೇಕಾಗಿದೆ ನಾನಿನ್ನು ನನ್ನ ರಿಪೇರಿ ಅಂಗಡಿ ತೆಗೆಯೋದು ನಾಳೆಯೇ. ನಿಮಗೆ ಚಪ್ಪಲಿ ಬೇಕಾದೀತೇನೋ’ ಎಂದು ತೆಗೆದುಕೊಂಡು ಬಂದೆ. ಇಗೊಳ್ಳಿ ಎನ್ನುತ್ತಾ ರಿಪೇರಿಯಾದ ನನ್ನ ಚಪ್ಪಲಿಗಳನ್ನು ಎದುರಿಗಿರಿಸಿದ.

ಕ್ಲಾಸ್ ರೂಮಿನಲ್ಲಿಯೇ ಚಪ್ಪಲಿ ಬದಲಾಯಿಸಬೇಕಾಯಿತು. ಎಲ್ಲ ವಿದ್ಯಾರ್ಥಿಗಳ ಸಮಕ್ಷಮದಲ್ಲಿ ನನ್ನ ಚಪ್ಪಲಿ ಕಥೆ ಬಯಲಾಯಿತು. ಅಷ್ಟೇ ಅಲ್ಲ ಆತ ಕೈಯಲ್ಲೆರಡು ಚಪ್ಪಲಿಗಳನ್ನು ಜೋತಾಡಿಸಿಕೊಂಡು ಪ್ರತಿ ತರಗತಿಯಲ್ಲಿ ಬಗ್ಗಿ ನೋಡಿ ಪಾಠ ಮಾಡುತ್ತಿರುವವಳು ನಾನು ಹೌದಾ ಎಂದು ಪರಿಶೀಲಿಸಿದ ಸುದ್ದಿ ಸೆಕ್ಯೂರಿಟಿ ಯಿಂದಾಗಿ ಇಡೀ ಕಾಲೇಜಿಗೆ ಹಬ್ಬಿತ್ತು. ಅಂದೇ ಚಪ್ಪಲಿ ಅಂಗಡಿಗೆ ಸಹೋದ್ಯೋಗಿಯೊಬ್ಬರೊಂದಿಗೆ ಹೋಗಿ ಎರಡು ಜತೆ ಚಪ್ಪಲಿ ಖರೀದಿಸಿ ನನ್ನ ಚೇಂಬರಿನ ಕಪಾಟಿನಲ್ಲಿ ಇಟ್ಟೆ.

ಎಲ್ಲ ಸಲವೂ ಬಸ್ಸಿಂದ ಇಳಿಯುವಾಗ ನಮ್ಮ ವಸ್ತುಗಳೇ ಬರಲಾಗದೇ ಮೇಲುಳಿಯುತ್ತವೆ ಎನ್ನಲಾಗದು. ಒಂದುದಿನ ನನ್ನ ತಲೆ ಪಕ್ಕದಾಕೆಯ ತಲೆಗೆ ಹತ್ತಾರು ಸಲ ‘ಡೀಢೀ’ ಕೊಟ್ಟು ‘ಸಾರಿ ‘ಎಂದು ಸಾರಿ ಸಾರಿ ಹೇಳಿದ ಮೇಲೆ ನಾನು ಇಳಿದಾಗ ನನ್ನ ತಲೆಯಲ್ಲಿ ಆಕೆ ಮುಡಿದಿದ್ದ ಮಂಗಳೂರು ಮಲ್ಲಿಗೆಯ ಮೊಳ ಉದ್ದದ ಮಾಲೆ ಹೇರ್ ಪಿನ್ ಸಮೇತ ನನ್ನ ತಲೆಯಲ್ಲಿ ಜೋತಾಡುತ್ತಿತ್ತು! ಮಂಗಳೂರು ಮಲ್ಲಿಗೆಯದು ಲೋಕೋತ್ತರವಾದ ಪರಿಮಳ (ಮಂಗಳೂರಿನ ಸುತ್ತಮುತ್ತಲಿನ ಪ್ರಸಿದ್ಧ ಕ್ಷೇತ್ರಗಳಾದ ಕಟೀಲು ಪೊಳಲಿ ಮೊದಲಾದ ದೇವಿಯರಿಗೆ ಮಲ್ಲಿಗೆ ಹೂವಿನ ಸೇವೆ ಇಂದಿಗೂ ಅತಿ ಶ್ರೇಷ್ಠ ಪೂಜೆ. ಮಾನವರಿಗೂ ದೇವತೆಗಳಿಗೂ ಇಷ್ಟವಾಗುವಂಥ ದಿವ್ಯ ಪರಿಮಳ ಆ ಮಲ್ಲಿಗೆಯದು ಅದನ್ನು ಉಡುಪಿಯ ಬಳಿ ಶಂಕರಪುರ ಎಂಬಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ಮಲ್ಲಿಗೆ ಕೃಷಿಯಲ್ಲಿ ಕ್ರಿಶ್ಚಿಯನ್ ಮಹಿಳೆಯರು ತೊಡಗಿಸಿಕೊಂಡು ಹಿಂದೂ ದೇವರಿಗೆ ಬೇಕಾದ ಮಲ್ಲಿಗೆಯನ್ನು ಪೋಣಿಸಿ ಮಾಲೆ ಕಟ್ಟಿ ಮಾರಾಟ ಮಾಡುತ್ತಾರೆ. ಬಂಗಾರದ ಮಾರುಕಟ್ಟೆ ದರದಂತೆ ಈ ಮಲ್ಲಿಗೆಯ ದರ ನಿತ್ಯವೂ ನಿಷ್ಕರ್ಷೆಯಾಗಿ ಮೇಲೆ ಕೆಳಗೆ ಹೋಗುತ್ತಿರುತ್ತದೆ ಜಾತ್ರೆ, ಕೋಲ, ನಾಗಮಂಡಲಗಳ ಸಂದರ್ಭದಲ್ಲಿ ಈ ಹೂವಿನ ದರ ಬಂಗಾರದ ದರಕ್ಕೆ ಸಮನಾಗಿರುವುದು ಉಂಟು).

ಬಸ್ಸಿಳಿದಾಗ ನನ್ನ ತಲೆಯಲ್ಲಿ ಜೋತಾಡಿಕೊಂಡು ಬಂದ ಈ ಮಲ್ಲಿಗೆ ಮಾಲೆಯ ಪರಿಮಳಕ್ಕೆ ಖುಷಿಯಾದರೂ ಪಾಪ ಮಲ್ಲಿಗೆ ಹೂ ಮುಡಿದ ಹೇರ್ ಪಿನ್ನಿನ ಒಡತಿ ಈಗ ಮುಖ ಎಷ್ಟು ಚಿಕ್ಕದು ಮಾಡಿಕೊಂಡಿದ್ದಾಳೋ ಎಂದು ನೆನಪಾದಾಗ ಅವಳ ಹೇರ್ ಪಿನ್ ನನ್ನ ತಲೆಯನ್ನು ಚುಚ್ಚಿದಂತೆ ಭಾಸವಾಗುತ್ತಿತ್ತು. ಅದಕ್ಕೆ ಸರಿಯಾಗಿ ಕ್ಲಾಸಿನೊಳಗೆ ಹೋಗುತ್ತಿದ್ದಂತೆ ಎದುರು ಬೆಂಚಿನ ಹುಡುಗಿಯರು ಮೇಡಮ್ ಇವತ್ತು ಮಲ್ಲಿಗೆ ಹೂ ಮುಡಿದು ಬಂದಿದ್ದಾರೆ. ವಿಶೇಷ ಏನು ಮೇಡಂ? ಬರ್ತ್ ಡೇ ಏನಾದರೂ ಉಂಟಾ ನಮಗೆಲ್ಲ ಪಾರ್ಟಿ ಇದೆ ತಾನೆ? ಎಂದು ಕೇಳಬೇಕೆ! ಈ ಹೂವಿನ ಮಾಲೆ ಬಸ್ಸಿನಲ್ಲಿ ಸಿಕ್ಕ ಪರ ಶಿರ ಪ್ರಸಾದ ನಾನಾಗಿ ಮುಡಿದದ್ದಲ್ಲ ಎಂದೆಲ್ಲ ವಿವರಣೆ ಕೊಡುವಂತಿದೆಯೇ? ಸುಮ್ಮನೆ ಮುಗುಳ್ನಕ್ಕೆ.

ಮಾರನೇ ದಿನ ತಲೆಗೆ ಡೀ ಕೊಟ್ಟವಳ ಮುಖವನ್ನು ನೆನಪಿಟ್ಟು ಹತ್ತಿರ ಹೋಗಿ ‘ಇಗೊಳ್ಳಿ ನಿಮ್ಮ ಹೇರ್ ಪಿನ್ ನಿನ್ನೆ ನನ್ನ ತಲೆಗೆ ಚುಚ್ಚಿಕೊಂಡು ಬಿಟ್ಟಿತ್ತು’ ಎಂದು ಎದುರು ಹಿಡಿದಾಗ ಆಕೆ ಫಳ್ಳನೆ ನಕ್ಕಳು ಮತ್ತು ಮರುದಿನದಿಂದ ನನ್ನ ಸ್ನೇಹಿತೆಯೇ ಆಗಿಬಿಟ್ಟಳು . ಇದಕ್ಕಿಂತ ಹೆಚ್ಚಿನ ಬೆಲೆಬಾಳುವ ವಸ್ತುಗಳು ನನಗಿನ್ನೂ ತಗಲಿಕೊಂಡು ಬಂದಿಲ್ಲ. ಆದರೆ ಬಸ್ಸಿನ ಸ್ನೇಹಿತೆಯರು ಅನೇಕರು ದೊರಕಿದ್ದು ಅಲ್ಲದೆ ಇಂದಿಗೂ ನನ್ನ ಸ್ನೇಹ ವರ್ತುಲದಲ್ಲಿ ಅವರಿದ್ದಾರೆ. ನಾವು ಸಿಕ್ಕಾಗೆಲ್ಲ ಸಿಟಿಬಸ್ಸಿನ ಇಂಥ ಅನುಭವಗಳನ್ನು ಹೇಳಿಕೊಂಡು ನಗುತ್ತಿರುತ್ತೇವೆ.

ಇನ್ನೊಂದು ದಿನ ನನ್ನ ಸ್ಟಾಪಿನಲ್ಲಿ ನಾನು ಇಳಿಯಲೆಂದು ಬಾಗಿಲ ಕಡೆ ಧಾವಿಸುವ ಸಾಹಸ ಮಾಡುತ್ತಿದ್ದಂತೆ ನನ್ನ ಪಕ್ಕದಲ್ಲಿ ನಿಂತ ಒಂದುಧಡಿಯಾ ಕೃತಿಯು ನನ್ನ ಜೊತೆಗೆ ಜರುಗತೊಡಗಿದೆ. ಎದುರಿನ ಸೀಟೊಂದರಲ್ಲಿ ಕೂತ ಆತನ ಅರ್ಧಾಂಗಿ ಇರಬೇಕು, ‘ಇಂಚಿನ ಅವಸ್ಥೆ ಮಾರಾಯ್ರೇ ಇದು ನಮ್ಮ ಸ್ಟಾಪು ಅಲ್ಲ ನೀವ್ಯಾಕೆ ಇಳಿಯುತಿದ್ದೀರಿ ನಮ್ಮ ಸ್ಟಾಪು ಮುಂದೆ ಅಲ್ಲವೋ’ ಎಂದು ಬೊಬ್ಬೆ ಇಡುತ್ತಿದ್ದಾಳೆ. ನಾನು ಇಳಿಯುತ್ತಿಲ್ಲ ಮಾರಾಯ್ತಿ ಯಾರೋ ನನ್ನನ್ನು ಎಳೆಯುತ್ತಿದ್ದಾರೆ ಅಷ್ಟೆ ಎಂದು ಆತ ಆರ್ತನಾದಗೈಯುತ್ತಿದ್ದಾನೆ.

ಈವಾಗ ನಾನು ಎರಡು ಮೆಟ್ಟಿಲನ್ನೂ ಆತ ಒಂದು ಮೆಟ್ಟಿಲನ್ನೂ ಇಳಿದಾಗಿತ್ತು ! ಬೇಗ ಇಳಿಯಿರಿ ಬೇಗ ಇಳಿಯಿರಿ ಎನ್ನುವ ಕಂಡಕ್ಟರನ ಕಡೆಗೆ ದುರುದುರು ನೋಡುತ್ತಾ ತಡಿಯಪ್ಪಾ ಇಲ್ಲೇನೋ ಮಶ್ಕಿರಿ ಆಗಿದೆ ಎಂದು ಹೇಳಿ ಪರಿಶೀಲಿಸಲಾಗಿ ನನ್ನ ಕೊಡೆಯ ಹಿಡಿಕೆ ಆತನ ಪ್ಯಾಂಟಿನ ಬೆಲ್ಟಿನ ಪಟ್ಟಿಗೆ ಕೊಕ್ಕೆಯಂತೆ ಸಿಕ್ಕಿಕೊಂಡು ಆತನನ್ನು ನನ್ನ ಜತೆ ಎಳೆದು ತರುತ್ತಿದೆ. ಆಗಲಿದ್ದ ಪ್ರಮಾದದ ಅರಿವಾಗಿ ಜೋರಾಗಿ ನನ್ನ ಕೊಡೆಯನ್ನು ಎಳೆದಾಗ ಆತನ ಬೆಲ್ಟಿನ ಪಟ್ಟಿಯ ಭಾಗವೇ ಕಿತ್ತು ಬಂತು. ಸದ್ಯ ತನ್ನ ಗಂಡನನ್ನೇ ಯಾರೋ ಕಿತ್ತು ಕೊಂಡು ಹೋಗುತ್ತಿದ್ದಾರೆ ಎಂಬಂತೆ ಬೊಬ್ಬೆಯಿಡುತ್ತಿದ್ದ ಆತನ ಹೆಂಡತಿಗೆ ಮನೆಗೆ ಹೋದ ಬಳಿಕ ಒಂದಿಷ್ಟು ಹೊಲಿಗೆ ಕೆಲಸಕ್ಕಾಯ್ತು ಎಂಬ ದುಷ್ಟ ಸಮಾಧಾನದಲ್ಲಿ ನಾನು ಬಸ್ಸಿನಿಂದ ಇಳಿದು ಆ ದಿನದ ಮಟ್ಟಿಗೆ ಕಳಚಿಕೊಂಡೆ.

ಬಸ್ಸಿನೊಳಗಿನ ನೂಕುನುಗ್ಗಲು ತಳ್ಳಾಟ ಗುದ್ದಾಟಗಳು ಹೇಗೇ ನಡೆದಿರಲಿ ಅದರ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ, ಚಿಂತೆ ಇಲ್ಲದ ಚಿರ ಉತ್ಸಾಹಿ ಯುವಕರ ದಂಡು ಮಾತ್ರ ತಮ್ಮ ಪಾಡಿಗೆ ತಾವು ಬಸ್ಸಿನ ಎರಡೂ ಬಾಗಿಲಿಗೆ ಜೋತು ಬಿದ್ದು ಪ್ರಯಾಣಿಸುತ್ತಿರುತ್ತಾರೆ. ಬಸ್ಸಿನಿಂದ ಇಳಿಯುವ ಮೆಟ್ಟಿಲಿನ ಮೇಲ್ಗಡೆಯೇ ‘ಇಲ್ಲಿ ಯಾರೂ ಜೋತಾಡಬಾರದು’ ಎಂಬೊಂದು ಬೋರ್ಡನ್ನು ಬರೆಸಿರುತ್ತಾರೆ. ಆದರೆ ಬೆಳಗಿನ ಹೊತ್ತು ಕಾಲೇಜಿಗೆ ಹೋಗಬೇಕಾದ ಯುವಕರ ದಂಡು ಇದೇ ಮೆಟ್ಟಿಲುಗಳ ಮೇಲೆ ಬಸ್ಸಿನ ಹೊರಭಾಗದಲ್ಲಿಯೇ ಮಾನವ ಗೋಪುರವೊಂದನ್ನು ನಿರ್ಮಿಸಿ ಒಬ್ಬರಿಗೊಬ್ಬರು ಜೋತಾ ಡಿಕೊಂಡೇ ಇರುತ್ತಾರೆ. ಅವರ ಕೈಯಲ್ಲಿದ್ದ ಸಿಂಗಲ್ ನೋಟ್ ಬುಕ್ಕುಗಳನ್ನು ಸಾಮಾನ್ಯವಾಗಿ ಬಸ್ಸಿನ ಮೆಟ್ಟಿಲಿಗೆ ತಾಗಿ ಇರುವ ಸೀಟುಗಳನ್ನು ಆಕ್ರಮಿಸಿ ಕೂತ ಯುವತಿಯರು ಹಿಡಿದು ಕೊಳ್ಳಬೇಕಾಗುತ್ತದೆ ಆ ಸಹಾಯಕ್ಕಾಗಿ ಹುಡುಗರು ಹುಡುಗಿಯರ ನಡುವೆ ಮುಗುಳ್ನಗೆಯ ವಿನಿಮಯ ನಡೆಯುವುದೂ ಇರುತ್ತದೆ. ಅವರಲ್ಲಿ ಕೆಲವರು ಕ್ಲಾಸ್ ಮೇಟುಗಳು ಇರುತ್ತಾರಾದ್ದರಿಂದ ಏ ವನಜಾ ಈ ಬುಕ್ಕನ್ನು ಹಿಡಿದುಕೋ ಎಂದು ತನ್ನ ಸ್ನೇಹಿತನ ಬುಕ್ಕನ್ನೂ ಅವಳಿಗೆ ಕೊಡುವುದು ಆ ವನಜಾ ‘ನೋ ಪ್ರಾಬ್ಲೆಮ್’ ಎನ್ನುತ್ತಾ ಅವರೆಲ್ಲರ ಪುಸ್ತಕಗಳನ್ನು ಹಿಡಿದು ಇಳಿದು ಹೋಗುವಾಗ ಅವರವರಿಗೆ ತಲುಪಿಸುವ ಕಾರ್ಯವೂ ನಡೆದಿರುತ್ತದೆ.

ರಭಸದ ಬಸ್ಸು ತಿರುವಿನಲ್ಲಿಯೂ ಅದೇ ವೇಗದಲ್ಲಿ ಧಾವಿಸುವುದರಿಂದ ಈ ಮಾನವಗೋಪುರ ಕೆಲಬಾರಿ ಧರಾಶಾಹಿಯಾಗುವದೂ ಉಂಟು. ಆಗೆಲ್ಲ ಸೀಟಿನ ಮೇಲೆ ಕೂತ ಈ ಹುಡುಗಿಯರು ಓ ಮನೋಜಾ ಎಂದು ಕಿರುಚುವುದೂ ಬಸ್ಸು ಸುಸ್ಥಿತಿಗೆ ಬರುತ್ತಿದ್ದಂತೆ ತಮ್ಮ ಮೈ ಮೇಲಿದ್ದ ಧೂಳು ಕೊಡವಿಕೊಂಡ ಯುವಕರು ಮತ್ತೆ ಬಸ್ಸಿನ ಕಿಟಕಿಯ ಸರಳುಗಳನ್ನು ಹಿಡಿದು ಜೋತಾಡಿಕೊಂಡು ಸಾಗುವುದು ತನ್ನ ಪಾಡಿಗೆ ತಾನು ನಡೆದೇ ಇರುತ್ತದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: