ಭುವನೇಶ್ವರಿ ಹೆಗಡೆ ಅಂಕಣ- ಇರಲೇ ಹೊರ ಹೋಗಲೇ..

5

ಸರ್ಕಾರಿ ಕಾಲೇಜನ್ನು ಮಂಗಳೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದಾಗ ಸರಕಾರದಿಂದ ನೇಮಕಾತಿ ಪಡೆದ ನಮಗೆಲ್ಲ ಆಯ್ಕೆಯ ಸ್ವಾತಂತ್ರ್ಯ ನೀಡಲಾಗಿತ್ತು. ಕೆಲವು ಪ್ರಾಧ್ಯಾಪಕರು ಸರ್ಕಾರಿ ಸೇವೆಯನ್ನು ಆಯ್ದುಕೊಂಡು ಹೊರನಡೆದರೆ ಹಲವರು ವಿಶ್ವವಿದ್ಯಾನಿಲಯದಡಿಯಲ್ಲೇ ಇರುತ್ತೇವೆಂದು ಬರೆದುಕೊಟ್ಟರು.

ನನ್ನದು ಡೋಲಾಯಮಾನ ಸ್ಥಿತಿ. ಆಗ ನಮ್ಮೂರಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಕಾಲೇಜುಗಳಿರಲಿಲ್ಲ. ‘ಇರಲೇ ಹೊರ ಹೋಗಲೇ’ ದ್ವಂದ್ವದಲ್ಲಿ ತೊಳಲುತ್ತಿದ್ದೆ. ಆಫೀಸಿನಲ್ಲಿ ನಮ್ಮ ಆಯ್ಕೆಯನ್ನು ನಮೂದಿಸಲು  ಒಂದು ಪಟ್ಟಿ ತಯಾರಿಸಿ ಇಡಲಾಗಿತ್ತು ‘ಆಪ್ಟ್ ಇನ್ ಆಪ್ಟ್ ಔಟ್…’ ನಿತ್ಯವೂ ತಿದ್ದುವದು.

ನನ್ನ ಈ ದ್ವಂದ್ವ ನೋಡಲಾರದ ನನ್ನ ಸ್ನೇಹಿತೆಯೊಬ್ಬಳು ಮಂಗಳೂರಿನ ಪ್ರಸಿದ್ಧ ಕಾರಣಿಕ ಸ್ಥಳವೊಂದಕ್ಕೆ ನನ್ನನ್ನು ಕರೆದೊಯ್ದಳು.   ಪೂಜಾರಿಯ ಮೈಮೇಲೆ ಬಂದ ದೈವವೊಂದು ನನ್ನ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿ ‘ಏನಾಗಬೇಕು ಮಗಳೇ ಏನು ನಿನ್ನ ಕಷ್ಟ?’ ಎಂದು ಕೇಳಿತ್ತು. ಸರ್ಕಾರಿ ಕಾಲೇಜುಗಳನ್ನಾಯ್ದುಕೊಳ್ಳಲೋ, ವಿಶ್ವವಿದ್ಯಾಲಯಕ್ಕೆ ಸೇರುವದೋ ಎಂದು ಕೇಳಿದಾಗ ದೈವಕ್ಕೆ ಅರ್ಥವಾಗದೇ ‘ಅದೇನದು ಸಮಸ್ಯೆ ಇನ್ನೊಮ್ಮೆ ಹೇಳು’ ಎಂದಿತು. ನಾನು ಹೇಳಿದೆ ‘ಸರ್ಕಾರ ದೊಡ್ಡ ಸಾಗರ, ವಿಶ್ವವಿದ್ಯಾಲಯ ಸಣ್ಣಸಾಗರ ಯಾವುದು ನನಗೆ ಸೂಕ್ತ?’ ಓ ಹಾಗಾ? ಮುಗುಳ್ನಗುತ್ತಾ ಕೈಯೆತ್ತಿ ‘ಇಲ್ಲೇ ಇರು ಮಗಳೇ ನಾನು ನಿನ್ನನ್ನು ಪೊರೆಯುತ್ತೇನೆ’ ಎಂದಿತು. ಅಲ್ಲಿ ನನಗೆ ದೊರೆತ ಅಭಯವನ್ನೇ ನನ್ನ ಕಾಲೇಜು ನನಗೆ ನೀಡಿ ಮೂವತ್ತೆರಡು ವರ್ಷಗಳ ಕಾಲ ನನ್ನನ್ನು ಪೊರೆಯಿತು.         

ನನ್ನ ಮೂರು ದಶಕಗಳ ಸೇವೆಯಲ್ಲಿ ನಾನು ಒಟ್ಟು ಹತ್ತಕ್ಕೂ ಮಿಕ್ಕು ಪ್ರಾಂಶುಪಾಲರುಗಳ ಜತೆ ಕರ್ತವ್ಯ ನಿರ್ವಹಿಸಿದ್ದೇನೆ. ಒಬ್ಬೊಬ್ಬರದು ಒಂದೊಂದು ಶೈಲಿಯ ಆಡಳಿತ. ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರವಾದಾಗ ಪ್ರಾಂಶುಪಾಲರಾದ ಡಾ.ಶಂಕರನಾರಾಯಣ ಅವರು ಓರ್ವ ಸಾಹಿತ್ಯಾಸಕ್ತ ವ್ಯಕ್ತಿಯಾಗಿದ್ದರು ಹಾಗೂ ಉನ್ನತ ಮೌಲ್ಯಗಳ ಆಡಳಿತವನ್ನು ಪರಿಚಯಿಸಿದ್ದರು. ಅವರ ಮಾರ್ಗದರ್ಶನದಲ್ಲೇ ನನ್ನ ‘ಎಂಥದು ಮಾರಾಯ್ರೆ’ ಎಂಬ ಲಲಿತ ಪ್ರಬಂಧ ಸಂಕಲನವನ್ನು ಕಾಲೇಜಿನಲ್ಲಿಯೇ ಬಿಡುಗಡೆ ಮಾಡಿದೆವು.

ಕಾಲೇಜು ಅಧ್ಯಾಪಕರ ಸಂಘದಿಂದ ಏರ್ಪಾಡಾದ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಉನ್ನತ ಪೊಲೀಸ್ ಅಧಿಕಾರಿಯಾಗಿದ್ದ  ಲಲಿತ ಪ್ರಬಂಧಕಾರರೂ ಆದ  ಡಾ.ಪಿ. ಎಸ್. ರಾಮಾನುಜಮ್ ಅವರನ್ನು ಕರೆಸಿದ್ದೆವು. ವಿಶ್ವವಿದ್ಯಾನಿಲಯದ ಕುಲಸಚಿವರು ಅಧ್ಯಕ್ಷತೆ ವಹಿಸಿ ದಕ್ಷಿಣ ಕನ್ನಡದ ಪ್ರಸಿದ್ಧ ಹಾಸ್ಯ ಸಾಹಿತಿ ಡಾ ಸೀ ಹೊಸಬೆಟ್ಟು ಅವರು ಪುಸ್ತಕ ಪರಿಚಯಿಸಿದರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ನಡೆದ ನನ್ನೀ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅನೇಕ ಸಾಹಿತ್ಯಾಸಕ್ತ ಬಂಧುಗಳನ್ನು ಮಂಗಳೂರಿನಲ್ಲಿ ನನಗೆ ಒದಗಿಸಿಕೊಟ್ಟಿತು. 

ನಮ್ಮ ಕಾಲೇಜು ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಗೊಂಡ ಬಳಿಕ ಹಾಸ್ಯ ಕೃತಿಯೊಂದು ಬಿಡುಗಡೆಯಾಗಿದ್ದು ವಿಶೇಷವಾಗಿತ್ತು. ಎಂಥದು  ಮಾರಾಯ್ರೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನವೂ ದೊರೆತು ಅನೇಕ ಮರುಮುದ್ರಣವನ್ನೂ ಕಂಡಿತು.   

ನಂತರದ ವರುಷಗಳಲ್ಲಿ ನನ್ನ ಸಾಹಿತ್ಯ ಸಾಧನೆಗೆ ನನ್ನೀ ಕಾಲೇಜು ನೆಲೆಯನ್ನೊದಗಿಸಿದ್ದು ಹದಿನೈದಕ್ಕೂ ಮಿಕ್ಕು ಹಾಸ್ಯ ಕೃತಿಗಳನ್ನು ರಚಿಸಿ ಪ್ರಶಸ್ತಿ ಗಳಿಸಿ ಅಮೇರಿಕಾ, ಇಂಗ್ಲೆಂಡ್ ಮೊದಲಾದ ದೇಶಗಳ  ಕನ್ನಡಿಗರ ಆಹ್ವಾನದ ಮೇಲೆ ಅವರ ಖರ್ಚಿನಲ್ಲಿಯೇ ತೆರಳಿ ಕನ್ನಡ ಹಾಸ್ಯ ಸಾಹಿತ್ಯದ ಕುರಿತು ಉಪನ್ಯಾಸ ನೀಡುವಲ್ಲಿಗೆ ನನ್ನನ್ನು ಬೆಳೆಸಿತು. ಕಾಲೇಜಿನ ವಾರ್ಷಿಕ ವರದಿ, ವಿದ್ಯಾರ್ಥಿಗಳ ಸಾಹಿತಿಕ ಬರವಣೆಗೆಯ  ವಾರ್ಶಿಕ ಸಂಕಲನ ‘ಮಂಗಳಗಂಗೆ’ಯ ಸಂಪಾದಕತ್ವ ಇವುಗಳು ನಾನು ಪ್ರೀತಿಯಿಂದ ಮಾಡುತ್ತಿದ್ದ ಚಟುವಟಿಕೆಗಳು. ಇವುಗಳಿಂದಾಗಿ ನಾನು ವಿದ್ಯಾರ್ಥಿಲೋಕದ ಅಕ್ಕರೆಯನ್ನು ಯಥೇಚ್ಛವಾಗಿ ಪಡೆಯುವಂತಾಯಿತು.         

ನಾನು ನಿವೃತ್ತಳಾಗಲು ಕೆಲ ವರ್ಷ ಇರುವಾಗ ಪ್ರಾಂಶುಪಾಲರಾದ ಡಾ.ಉದಯಕುಮಾರ್ ಅವರ ಸಾಹಿತ್ಯಾಸಕ್ತಿ ಹಾಗೂ ಕಾಲೇಜಿಗೆ ಒಳಿತಾಗುವುದಾದರೆ ಏನೇ ಶ್ರಮವಹಿಸಲೂ ಸಿದ್ಧ ಎಂಬ ಅವರ ಉತ್ಸಾಹ ನನಗೆ ಅತ್ಯಂತ ಆಪ್ತ ಮಾರ್ಗದರ್ಶನವನ್ನೇ ಒದಗಿಸಿತು. ಅವರು ಪ್ರಾಂಶುಪಾಲರಾಗಿದ್ದಾಗಲೇ ವಿಶ್ವವಿದ್ಯಾನಿಲಯವು ನನಗೆ ಡಾ. ಶಿವರಾಮ ಕಾರಂತ ಪೀಠದ ಅಧ್ಯಕ್ಷತೆಯ ಜವಾಬ್ದಾರಿಯನ್ನು ನೀಡಿತು. ಅದರಡಿಯಲ್ಲಿ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಯಿತು.

ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದ ಪ್ರಾಂಶುಪಾಲರ ಕಾರ್ಯೋತ್ಸಾಹವನ್ನು ಕಂಡು ನಾನು ‘ನಮಗೆ ವಯಸ್ಸಾಯ್ತು ಪ್ರಿನ್ಸಿಪಾಲರೇ ನಿಮ್ಮಷ್ಟ ವೇಗವಾಗಿ ಓಡಲಾರೆವು’ ಎಂದು ಮೆಚ್ಚುಗೆಯಿಂದ ತಮಾಶೆ ಮಾಡುವದೂ ಇತ್ತು. ತಮಾಶೆಯನ್ನು ಆಸ್ವಾದಿಸುವ ಮೇಲಧಿಕಾರಿಗಳು ಸಿಕ್ಕಾಗ ನಮ್ಮ ಉದ್ಯೋಗದ ಸ್ಥಳ ಇನ್ನಷ್ಟು ಪ್ರಿಯವಾಗದಿದ್ದೀತೆ? ಉದಯಕುಮಾರರ ಸಹಕಾರದಿಂದ ಈ ವರ್ಷಗಳಲ್ಲಿ ಕೆಲವು ಉನ್ನತ ಸಾಹಿತಿಗಳನ್ನು, ಕಲಾವಿದರನ್ನೂ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ಅವಕಾಶ ನನಗೆ ಪ್ರಾಪ್ತವಾಯಿತು.

ಕಾಲೇಜಿನ ಎದುರಿರುವ ಮರಗಳಡಿಯಲ್ಲಿ ಬಯಲು ವೇದಿಕೆಯೊಂದನ್ನು ನಿರ್ಮಿಸಿ ವಿದ್ಯಾರ್ಥಿ ಕವಿಗೋಷ್ಠಿಯ ಮೂಲಕ ಉದ್ಘಾಟಿಸಿದ್ದು, ಆಂಗ್ಲ ಪ್ರಾಧ್ಯಾಪಕಿ ಗೆಳತಿ ರಾಜಲಕ್ಷ್ಮಿ ಹಾಗೂ ವಿದ್ಯಾರ್ಥಿಗಳ ಜತೆ ಸೇರಿ ‘ಬನಸಿರಿ’ ಬಯಲು-ವೇದಿಕೆ ನಿರ್ಮಿಸಿದ್ದು ನನ್ನ ವೃತ್ತಿ ಜೀವನದ ಅಮೂಲ್ಯ ಕ್ಷಣ. ಕಾಲೇಜಿನ ಎದುರು ಭಾಗದಲ್ಲಿ ಇರುವ ಮರಗಳಡಿಯ ವಿಶಾಲ ಪ್ರದೇಶವನ್ನು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸ್ವಚ್ಚಗೊಳಿಸಿ ವರ್ಲಿ ಆರ್ಟ್ ಚಿತ್ತಾರಗಳಿಂದ ಸುಂದರಗೊಳಿಸಿ, ಹಳ್ಳಿಯ ಪ್ರತಿಕೃತಿಯನ್ನು ರಚಿಸಿ ತಂದು ಜೋಡಿಸಿ ಬಯಲು ವೇದಿಕೆ ‘ಬನಸಿರಿ’ಯನ್ನು ಸಿದ್ಧಪಡಿಸಿದ್ದರು. ಮಂಗಳೂರಿನಲ್ಲಿ ಇದ್ದ ಚುಟುಕು ಕವಿ ಮಿತ್ರ ಡುಂಡಿರಾಜರನ್ನು ಮತ್ತು ಮಂಗಳೂರು ಜಿಲ್ಲಾ ನ್ಯಾಯಾಧೀಶರನ್ನು ಆಹ್ವಾನಿಸಿ ಕವಿಗೋಷ್ಠಿಯ ಮೂಲಕ ಬಯಲು ವೇದಿಕೆಯ ಉದ್ಘಾಟನೆ ಮಾಡಿದೆವು.

ನಮ್ಮ ಕಾಲೇಜಿನ ಕೆಂಪುಬಣ್ಣದ ವಾಸ್ತುವಿಗೆ ಮಾರುಹೋದ ಅನೇಕ ಸಿನಿಮಾ ನಿರ್ದೇಶಕರು ಚಿತ್ರೀಕರಣಕ್ಕೆ ಅವಕಾಶ ಕೋರಿ ಬರತೊಡಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧವಾದ ‘ಒಂದು ಮೊಟ್ಟೆಯ ಕಥೆ’ ಪೂರ್ಣ ಚಿತ್ರೀಕರಣಗೊಂಡಿದ್ದು ನಮ್ಮ ಈ ಕಾಲೇಜಿನ ಆವರಣದಲ್ಲಿಯೇ. ತೆಲುಗು ಮತ್ತು ಹಿಂದಿ ಸಿನಿಮಾಗಳೂ ಚಿತ್ರೀಕರಣಕ್ಕೆ ಅವಕಾಶ ಪಡೆದಾಗ ನಾವು ಅಧ್ಯಾಪಕರು ಆಕ್ಷೇಪ ವ್ಯಕ್ತಪಡಿಸಬೇಕಾಯ್ತು.

ಶೂಟಿಂಗ್ ನಡೆದಾಗ ನಮ್ಮ ವಿದ್ಯಾರ್ಥಿಗಳು ಕ್ಲಾಸಿಗೆ ಚಕ್ಕರ್ ಹಾಕಿ ಅವರ ಹಿಂದೆ ಸುತ್ತುವುದು, ಗುಂಪುಗಟ್ಟಿ ನಿಂತು ಚಿತ್ರೀಕರಣ ನೋಡುವುದು ಇವೆಲ್ಲ ಕಾಲೇಜು ಆವರಣದೊಳಗೆ ಅಶಿಸ್ತಿನ ಬೀಜ ಬಿತ್ತುತ್ತಿವೆ ಎಂಬುದು ನಮ್ಮ ಒಕ್ಕೊರಲ ಅಭಿಪ್ರಾಯವಾಗಿತ್ತು. ಈಗ ಚಿತ್ರೀಕರಣ ಹೇಗೂ ನಿಂತಿದೆ.. ಕಾಲೇಜಿನ ರವೀಂದ್ರ ಕಲಾಭವನಗಳಂಥ ಅದ್ಭುತವಾದ ವಾಸ್ತುಶಿಲ್ಪದ ಸಭಾಭವನಗಳು ನವೀಕರಣಗೊಂಡು ನಳನಳಿಸುತ್ತಿವೆ.               

ಇಂಥ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುವಾಗ, ಏನೇನೋ ಸಾಹಸಕ್ಕೆ ಕೈ ಹಾಕುವಾಗ ಸಾಕಷ್ಟು ಅಳುಕಿದ್ದರೂ, ಏನೋ ಕಾಣದ ಶಕ್ತಿಯೊಂದು ಬಂದು ನೆರವೀಯುವ ರೀತಿಯಲ್ಲಿ ಎಲ್ಲವೂ ಸಾಂಗವಾಗಿ ಯಶಸ್ವಿಯಾಗಿಬಿಡುವದು ನಮ್ಮೀ ಕಾಲೇಜಿನ ವೈಶಿಷ್ಟ್ಯ. ದಕ್ಷಿಣ ಕನ್ನಡದಲ್ಲಿ ಕಾಲೇಜೇ ಇಲ್ಲದಾಗ ಹತ್ತಾರು ಒಳ್ಳೆಯಮನಸ್ಸುಗಳು ಮುಂದೆ ಬಂದು ದೇಣಿಗೆ ಎತ್ತಿ ಕಟ್ಟಿದ ಈ ಕಾಲೇಜಿನಲ್ಲಿ ಆ ಪುಣ್ಯಜೀವಿಗಳ ಆಶೀರ್ವಾದವೇ ವಿಶೇಷ ಶಕ್ತಿಯಿಂದ ಕೂಡಿದ ಆವರಣವೊಂದನ್ನು ನಿರ್ಮಿಸಿರಬೇಕು. ಮತ್ತು ಸದಾಕಾಲ ಆ ಪುಣ್ಯಾತ್ಮರ ಅಗೋಚರ ಶಕ್ತಿ ಅಲ್ಲೇ ನೆಲೆಸಿದ್ದು ಕಾಲೇಜಿಗೆ ಒಳಿತನ್ನು ಬಯಸುತ್ತಿವೆಯೇನೋ ಎಂದು ಭಾಸವಾಗುವಂತೆ ಇಲ್ಲಿಯ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ.         

ಇಲ್ಲಿ ಬಡವರು ಬಂದು ಬಲ್ಲಿದರಾಗಿದ್ದಾರೆ. (ಹತ್ತು ಪೈಸೆಗೂ ತತ್ವಾರವಾಗಿದ್ದ ದಯಾನಂದ ಪೈ ಎಂಬ ಬಡ ಹುಡುಗ ಇಂದು ಯಶಸ್ವಿ ಉದ್ಯಮಿಯಾಗಿದ್ದು ನಮ್ಮ ಕಾಲೇಜಿನ ಸಂಜೆ ಕಾಲೇಜಿಗೆಂದೇ  ಒಂದು ಪ್ರತ್ಯೇಕ ಕಟ್ಟಡವನ್ನು ನಿರ್ಮಾಣ ಮಾಡಿದ್ದಲ್ಲದೆ ಮಂಗಳೂರಿನ ಅನೇಕ ಕಾಲೇಜುಗಳಿಗೆ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ.) ಹಳ್ಳಿಯ ಮೂಲೆಯಿಂದ ಬಂದ ಕೃಷಿಕರ ಮಕ್ಕಳು ಯಶಸ್ವೀ ಉದ್ದಿಮೆದಾರರಾಗಿದ್ದಾರೆ. ಊರಿಗೇ ಹೆಸರು ತಂದ ಧುರೀಣರಾಗಿದ್ದಾರೆ. ನಾನು ಏನೂ ಅಲ್ಲ ಎಂಬ ಕೀಳರಿಮೆಯಿಂದ ಬಂದ ಹುಡುಗಿಯರೆಷ್ಟೋ ಜನ ಆತ್ಮವಿಶ್ವಾಸದಿಂದ ಜಿಗಿದಾಡಿಕೊಂಡು ಹೊರ ಹೋಗಿದ್ದಾರೆ. 

ಅಬಾಧಿತವಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ೨೦೧೭ರ ಮೇ ತಿಂಗಳಲ್ಲಿ ನಾನು ನಿವೃತ್ತಳಾದೆ. ಸಹೋದ್ಯೋಗಿ ಸ್ನೇಹಿತರು ಚಿನ್ನದುಂಗುರ ತೊಡಿಸಿ ಬೀಳ್ಕೊಟ್ಟರು. ಬಂಗಾರದಂಥ ನೆನಪುಗಳ ಸಮೇತ ಹೊರಬಂದೆ. ಸಾರ್ಥಕ ನೆನಪುಗಳ ತಂಪಿನ ಕಂಪು ಬೀರುವ ಈ ಕೆಂಪುಕೋಟೆ ನನ್ನೊಳಗಿನೊಳಗನ್ನು ಸದಾ ಬೆಳಗುತ್ತ ತುಂಬಿಕೊಂಡಿರುತ್ತದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: