ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

2

ಇಂಗ್ಲೆಂಡ್ ಒಂದು ಕಲ್ಯಾಣ ರಾಜ್ಯ

ಟೆಲಿಫೋನ್ ಒಂದು ಲಕ್ಷುರಿ ಎಂದುಕೊಳ್ಳುತ್ತಿದ್ದ ಕಾಲದಲ್ಲಿಯೇ ಇಂಡಿಯಾವನ್ನು ಬಿಟ್ಟವರು ನಾವು. ಒಂದೊಂದು ಟೆಲಿಫೋನ್  ಸಂಪರ್ಕವನ್ನು ಪಡೆದು ಕೊಳ್ಳುವಾಗಲೂ ಆಕಾಶ ಭೂಮಿ ಒಂದಾಗುವಷ್ಟು ಕಷ್ಟ ಪಟ್ಟಿದ್ದ ನಮಗೆ ಇಂಗ್ಲೆಂಡಿನ ಟೆಲಿಫೋನ್ ಸಂಪರ್ಕ ವ್ಯವಸ್ಥೆ ಒಂದು ಅತ್ಯಾಶ್ಚರ್ಯ! ಪ್ರತಿಯೊಂದು ಮನೆಯವರೆಗೂ ಟೆಲಿಫೋನ್ ಲೈನ್ ಮನೆ ಕಟ್ಟುವಾಗಲೇ ಬಂದಿರುತ್ತದೆ. ನೀವು ಮಾಡಬೇಕಿದ್ದುದೆಂದರೆ ಆ ಮನೆಗೆ ನೀವು ಹೊಕ್ಕದ್ದನ್ನು ಡಿಪಾರ್ಟ್‍ಮೆಂಟಿನವರಿಗೆ ಹೇಳಬೇಕಷ್ಟೆ – ಪಕ್ಕದ ಮನೆಯವರ ಟೆಲಿಫೋನನ್ನು ಬಳಸಿಕೊಂಡು. ಕೂಡಲೇ ನಂಬರ ಸಿಕ್ಕ ನಿಮ್ಮ ಟೆಲಿಫೋನು ಮಾರನೆಯ ದಿನ ಬೆಳಗ್ಗೆಯಿಂದ ಕೆಲಸ ಮಾಡಲಾರಂಭಿಸಿರುತ್ತದೆ.

ನೀವೆಲ್ಲಾದರೂ ಬೆಳಗ್ಗೆಯೇ ಫೋನು ಮಾಡಿ ಹೇಳಿದರೆ ಅಂದಿನ ಸಂಜೆಯೇ ನಿಮ್ಮ ಟೆಲಿಫೋನು ರೆಡಿ. ಯಾರ ಮೂಲಕ ಹೋದರೆ ಕೆಲಸವಾಗುತ್ತದೆ. ಯಾರನ್ನು ಹಿಡಿದರೆ ಆ ಕೆಲಸ ಶೀಘ್ರವಾಗಿ ಮುಗಿಯುತ್ತದೆ ಮತ್ತು ಟೆಲಿಫೋನ್ ಡಿಪಾರ್ಟ್ ಮೆಂಟಿನ ಯಾವ ಅಧಿಕಾರಿಯ ನೆಂಟರ ಪರಿಚಯದವರು ನಮ್ಮ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರೆಂದು ಹುಡುಕುವುದರಲ್ಲಿಯೇ ತಿಂಗಳುಗಳನ್ನು ಕಳೆದು ಕೊನೆಗೂ ಲೈನ್ ಮ್ಯಾನ್‍ನಿಂದ ಹಿಡಿದು ಅವನ ಮೇಲಿನ ಆಫೀಸರ್ ವರೆಗೆ ಪ್ರತಿಯೊಬ್ಬರಿಗೂ ಅವರವರ ಮಟ್ಟಕ್ಕನುಗುಣವಾಗಿ ಕೈಬಿಚ್ಚಿ ಕೊಟ್ಟಿದ್ದ ನಮಗೆ ಇದಕ್ಕಿಂತ ಆಶ್ಚರ್ಯ ಬೇರೆ ಏನಿದೆ.

ಆದರೆ ಮೊನ್ನೆ ಮೊನ್ನೆ ನಮ್ಮದೇ ದೇಶದ ಭಾಗವಾದ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಲ್ಲಿ ಟೆಲಿಫೋನಿನವರು ‘ನೀವು ಫೋನ್ ಮಾಡಿ ಹೇಳಿದ ಮಾರನೇ ದಿನವೇ ನಮ್ಮ ಡಿಪಾರ್ಟ್ ಮೆಂಟಿನವರು ಟೆಲಿಫೋನ್ ಉಪಕರಣದೊಂದಿಗೆ ನಿಮ್ಮ ಮನೆ ಮುಂದೆ ಹಾಜರ್’ ಎಂದು ಪತ್ರಿಕಾ ಹೇಳಿಕೆಯೊಂದನ್ನು ಕೊಟ್ಟಾಗ ‘ನಾನೇನು ಇಂಡಿಯಾದಲ್ಲಿದ್ದೇನೆಯೇ ಇಲ್ಲ ಇಂಗ್ಲಂಡಿಗೇ ಮರಳಿಬಿಟ್ಟಿದ್ದೇನೆಯೇ’ ಎಂದು ಸಂಶಯ ಹುಟ್ಟಿದ್ದಂತೂ ಹೌದು. ಆದರೆ ಪ್ರಕಟಣೆಯ ಕೊನೆಯ ವಾಕ್ಯ `ಬೇರೆ ಎಲ್ಲ ಅನುಕೂಲತೆಗಳಿದ್ದರೆ ಮಾತ್ರ’ ಎಂಬುದು ಮಾತ್ರ ‘ನೀನಿನ್ನೂ ಇಂಡಿಯಾದಲ್ಲಿಯೇ ಇದ್ದೀಯ’ ಎಂದು ನೆನಪು ಮಾಡಿ ಕೊಟ್ಟಿತ್ತು. ಅಸಲು ವಿಷಯವೇನೆಂದರೆ ಇಂದಿನವರೆಗೂ ಆ ‘ಬೇರೆ ಎಲ್ಲ ಅನುಕೂಲತೆಗಳು’ ಮಾತ್ರ ಇಂಡಿಯದಲ್ಲೆಲ್ಲೂ ಲಭ್ಯವಾಗದೆ ಇರುವುದು. ಇಂಗ್ಲೆಂಡಿನಿಂದ ವಾಪಾಸು ಬಂದ ನಂತರ ಬೆಂಗಳೂರಿನಲ್ಲಿ ಒಂದು ಟೆಲಿಫೋನ್ ಕನೆಕ್ಷನ್ನಿಗಾಗಿ ಒದ್ದಾಡುತ್ತಿದ್ದಾಗಲೆಲ್ಲ ನಾವಿನ್ನೂ ಯಾವ ಯುಗದಲ್ಲಿದ್ದೇವೆ ಎನ್ನಿಸಿದ್ದಿತ್ತು.

ಇಂಗ್ಲೆಂಡ್ ಒಂದು ವೆಲ್ ಫೇರ್ ಸ್ಟೇಟ್. ನಾಗರೀಕ ಸೌಕರ್ಯಗಳನ್ನು ಒದಗಿಸಿಕೊಡುವುದು ತಮ್ಮ ಆದ್ಯ ಕರ್ತವ್ಯ ಎಂಬುದನ್ನು ಆಳರಸರು ಮನದಟ್ಟು ಮಾಡಿಕೊಂಡಿದ್ದಾರೆ ಮತ್ತು ಹಾಗೆ ತಮ್ಮ ಕರ್ತವ್ಯವನ್ನು ನಿಭಾಯಿಸುವುದರಲ್ಲಿ ಹೆಮ್ಮೆ ಪಡುತ್ತಾರೆ. ಅಲ್ಲಿ ದೇಶದ ಯಾವುದೇ ಮೂಲೆಯಲ್ಲಿ ನೀವು ಮನೆ ಕಟ್ಟಿಕೊಂಡರೂ ಆ ಮನೆಯ ಗೃಹ ಪ್ರವೇಶಕ್ಕೆ ನೀವು ತಯಾರಾದಾಗ ನಿಮ್ಮ ಮನೆಯವರೆಗೆ ಮೋಟಾರು ಹೋಗುವಂತಹ ರಸ್ತೆ, ನಿಮ್ಮ ಮನೆಗೆ ಟೆಲಿಫೋನು, ಗ್ಯಾಸ್(ಇಡೀ ಇಂಗ್ಲೆಂಡಿನಲ್ಲಿ ಅಡಿಗೆ ಅನಿಲ ಪೈಪಿನ ಮೂಲಕವೇ ಸರಬರಾಜಾಗುವುದು) ಮತ್ತು ವಿದ್ಯುತ್ ಸಂಪರ್ಕಗಳು ತಯಾರಾಗಿರುತ್ತವೆ. ಬೇರೆ ಬೇರೆ ಕೊಳಾಯಿಗಳಲ್ಲಿ ಬರುವ ಕುಡಿಯುವ ಮತ್ತು ತೊಳೆಯುವ ನೀರಿನ ಸಂಪರ್ಕವೂ ಸಿದ್ಧ. ಇಲ್ಲಿಯ ವರೆಗೆ ಈ ಅನುಕೂಲತೆಗಳನ್ನು ಒದಗಿಸುವಲ್ಲಿ ಸರಕಾರ ಒಮ್ಮೆಯೂ ತಪ್ಪಿದ್ದಿಲ್ಲ.

ನೀರು, ಗ್ಯಾಸು ಮತ್ತು ವಿದ್ಯುತ್ ಶಕ್ತಿಗಳ ಸರಬರಾಜು ಖಾಸಗಿಯವರ ಸ್ವತ್ತಾಗಿದ್ದರೂ ಅವರ ನಿಗದಿತ ಪ್ರದೇಶದಲ್ಲಿ ಗ್ರಾಹಕನಿಗೆ ಈ ಅನುಕೂಲಗಳನ್ನು ಕಡ್ಡಾಯವಾಗಿ ಒದಗಿಸಲೇಬೇಕು. ಆರ್ಥಿಕವಾಗಿ ಇಂತಹದೊಂದು ಸಂಪರ್ಕ ಅಸಾಧುವಾದುದು ಎಂದು ಜವಾಬ್ದಾರಿಯಿಂದ ನುಣಚಿಕೊಳ್ಳುವ ಹಾಗಿಲ್ಲ. ಖಾಸಗಿಯವರಾದರೂ ಅವರ ಸಾರ್ವಜನಿಕ ಕಾಳಜಿಯ ಬಗ್ಗೆ ಒಂದು ಉದಾಹರಣೆ. ನಲ್ಲಿಯ ನೀರು ಅಶುದ್ಧವಾಗಿರುವುದು ಬಿಡಿ. ನಮ್ಮಲ್ಲಿ ಶೀಷೆಗಳಲ್ಲಿ ತುಂಬಿ ಹಾಲಿನ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರುವ ನೀರಿನಲ್ಲೂ ಕಲ್ಮಶ ತುಂಬಿದ್ದರೂ ನಮಗದು ವಿಶೇಷವೆನಿಸದು. ಅಷ್ಟು ಸಹನೆ ನಮಗೆ. ನಲ್ಲಿಯ ನೀರಂತೂ – ಬಂದರೆ ಅದೇ ಹಬ್ಬ ನಮಗೆ.

ತೊಟ್ಟಿಕ್ಕುವ ನೀರನ್ನೇ ಅಮೃತದ ಬಿಂದುವೇನೋ ಎನ್ನುವಂತೆ ಸಂಗ್ರಹಿಸುವ ನಮಗೆ ಆ ನೀರಿನಲ್ಲಿ ಎರೆಹುಳುಗಳೋ ಸತ್ತ ಇಲಿಗಳೋ ಬಂದರೆ ವಿಶೇಷವೇನೂ ಅನ್ನಿಸುವುದಿಲ್ಲ. ಯಾರಾದರೂ ಆ ಬಗ್ಗೆ ಉಸಿರೆತ್ತಿದರೂ `ಛೆ!ಪಾಪ! ಎಲ್ಲೋ ಒಮ್ಮೆ ಹಾಗಾಗುತ್ತದೆ ಬಿಡಿ’ ಎಂದು ಸಮಾಧಾನಪಡಿಸುವ ನಾಗರೀಕ ಹಕ್ಕುಗಳ ಗಂಧ ಗಾಳಿಯೂ ಇಲ್ಲದ ಸ್ವಯಂ ಘೋಷಿತ ಹೀರೋಗಳಿಗಂತು ನಮ್ಮಲ್ಲಿ ಕೊರತೆಯಿಲ್ಲ ಬಿಡಿ. ಒಮ್ಮೆಯಂತೂ ಒಂದು ಊರಿನ ನಲ್ಲಿಯ ನೀರಿನಲ್ಲಿ ಹುಳು ಬಂತೆಂದು ಜನ ದೂರಿದರೆ ಆ ಊರಿನ ಮುನಿಸಿಪಾಲ್ಟಿಯ ಅಧ್ಯಕ್ಷ ಹೇಳಿದ್ದನಂತೆ `ನಾನಾದ್ದರಿಂದ ಹುಳುವಷ್ಟೇ ಬಂತು. ಇನ್ಯಾರಾದರೂ ಆಗಿದ್ದರೆ ಹಾವುಗಳೇ ಬರುತ್ತಿದ್ದುವು’ ಎಂದು. ಹೂಂಗುಟ್ಟುವ ಹೊಗಳು ಭಟರಿರುವ ವರೆಗೆ ಏನು ಹೇಳಿದರೂ ನಡೆಯುತ್ತದೆ ನಮ್ಮ ದೇಶದಲ್ಲಿ.

ಅದೇ ಇಂಗ್ಲೆಂಡಿನಲ್ಲಿ ಸುಮಾರು ಹದಿಮೂರು ಲಕ್ಷ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಂಪನಿಯ ಸರಬರಾಜು ವ್ಯವಸ್ಥೆಯಲ್ಲಿ ಎಲ್ಲಿಯೋ ಬಿರುಕುಂಟಾಗಿ ಕಲುಷಿತವಾದ ನೀರನ್ನು ಸೇವಿಸಿದ ಮನೆಯೊಂದರಲ್ಲಿ ಒಬ್ಬರಿಗೆ ಹೊಟ್ಟೆ ನೋವು ಬಂದಿತೆಂದು ಗೊತ್ತಾದ ಕೂಡಲೇ ಇಡೀ ಹದಿಮೂರು ಲಕ್ಷ ಮನೆಗಳಿಗೆ `ನಮ್ಮ ಸರಬರಾಜು ವ್ಯವಸ್ಥೆಯಲ್ಲಿ ತೊಂದರೆಯುಂಟಾಗಿದೆ. ಅದನ್ನು ಸರಿಪಡಿಸುವ ಕಾರ್ಯವನ್ನು ಈಗಾಗಲೇ ಕೈಗೆತ್ತಿಕೊಂಡಿದ್ದೇವೆ. ಮತ್ತು ಕುಡಿಯುವ ನೀರಿಗೇನೂ ತೊಂದರೆಯಿಲ್ಲ. ಆದರೂ ದಯವಿಟ್ಟು ನಾವು ಹೇಳುವವರೆಗೆ ನೀರನ್ನು ಕುದಿಸಿ ಕುಡಿಯಿರಿ.’ ಎನ್ನುವ ಸಂದೇಶ ಪತ್ರವನ್ನು ತೀವ್ರ ಕ್ಷಮಾಯಾಚನೆಯೊಂದಿಗೆ ಮನೆ ಮನೆಗೆ ಹಂಚಿದ್ದರು.

ನಲ್ಲಿಯಲ್ಲಿ ಸರಬರಾಜಾಗುವ ನೀರು ನೂರಕ್ಕೆ ನೂರರಷ್ಟು ಶುದ್ಧ. ಸೋಂಕಿನ ಕ್ರಿಮಿಗಳು ಬಿಡಿ, ಖನಿಜಾಂಶಗಳೂ ಮಿತಿಗಿಂತ ಹೆಚ್ಚಿಲ್ಲದಂತೆ ಜಾಗ್ರತೆ ವಹಿಸುತ್ತಾರೆ. ಅಂತಹದರಲ್ಲಿ ನೀರಿನಲ್ಲಿ ಸೋಂಕಿನ ಅಂಶವಿದೆಯೆಂದಾದರೆ! ಇಂತಹ ಒಂದು ಕಳಂಕ ನೀರು ಸರಬರಾಜು ಮಾಡುವ ಸಂಸ್ಥೆಗೇ  ಅಪಮಾನ. ಮತ್ತೆ ಒಂದೇ ವಾರದಲ್ಲಿ ಇನ್ನೊಂದು ಪತ್ರ.

‘ಈಗ ಸರಬರಾಜು ವ್ಯವಸ್ಥೆಯಲ್ಲಿನ ಕೊರತೆಯನ್ನು ಹೋಗಲಾಡಿಸಿದ್ದೆವೆ. ನಿಮ್ಮ ಕುಡಿಯು ನೀರು ನೂರಕ್ಕೆ ನೂರರಷ್ಟು ಕ್ಷೇಮ. ಇನ್ನು ಮೇಲೆ ನೀರನ್ನು ಕುಡಿಯುವ ಮುನ್ನ ಕುದಿಸುವ ಅವಶ್ಯಕತೆಯಿಲ್ಲ’ ಎನ್ನುವ ಪತ್ರದ ಜತೆಯಲ್ಲಿಯೇ ‘ನಿಮಗೆ  ಈ ಎಲ್ಲ ದಿನಗಳಲ್ಲಿ ನೀರು ಕಾಯಿಸಲು ತಗುಲಿದ ವಿದ್ಯುತ್ ಬಿಲ್ಲಿನ ಬಗ್ಗೆ ಈ ನಮ್ಮ ಕಿರು ಕಾಣಿಕೆ’ ಎನ್ನುವ ನಿವೇದನೆಯೊಂದಿಗೆ ಹತ್ತು   ಪೌಂಡುಗಳ(ಭಾರತೀಯ ರೂಪಾಯಿ ಐದು ನೂರಾ ಐವತ್ತು) ಚಕ್ಕನ್ನು ಕಳುಹಿಸಿದ್ದರು ಎಲ್ಲ ಹದಿಮೂರು ಲಕ್ಷ ಮನೆಗಳಿಗೂ. ನಿಮಗಾದ  ತೊಂದರೆಗಾಗಿ ವಿಷಾದ ವ್ಯಕ್ತ ಪಡಿಸುವುದರ ಜತೆಗೆ ಇನ್ನು ಮುಂದೆಂದೂ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎನ್ನುವ ಆಶ್ವಾಸನೆ.   ಅದು ಇಂಗ್ಲೆಂಡು-ಕಲ್ಯಾಣ ರಾಜ್ಯ.

ಅದರಲ್ಲಿಯೂ `ಹತ್ತು ಪೌಂಡಿನ ಚಕ್ಕನ್ನು ತೆಗೆದುಕೊಳ್ಳಲು ನಾವೇನು ಭಿಕ್ಷುಕರೇ? ನಮಗಾದ ವಿದ್ಯುತ್ ಖರ್ಚು ಮತ್ತು ನಮಗಾದ ಮಾನಸಿಕ ನೋವಿನ ಬೆಲೆ ಇದಕ್ಕಿಂತ ಬಹಳ ಹೆಚ್ಚು.’ ಎಂದು ಕಂಪೆನಿಯ ಮೇಲೆ ಕೋರ್ಟಿನಲ್ಲಿ ದಾವಾ ಹಾಕಿದವರೂ ಇದ್ದಾರೆ. ಇದಂತೂ ಪ್ರಜಾ ಪ್ರಭುತ್ವ ಕೊಟ್ಟ ಸ್ವಾತಂತ್ರ್ಯ ಮತ್ತು ಸಾಮಾಜಿಕ ಪ್ರಜ್ನೆಯ ಅತಿರೇಕ! ಅದು ಇಂಗ್ಲೆಂಡು!

ಅಲ್ಲಿ ಮನೆ ಮನೆಗೆ ರಸ್ತೆಯನ್ನು ಮಾಡಿಸುವುದು ಸರಕಾರ ತನ್ನ ಕರ್ತವ್ಯವೆಂದು ಭಾವಿಸಿ ಮಾಡುತ್ತದೆ ಎಂದೆ. ಹಾಗೆಯೇ ಒಮ್ಮೆ ಮಾಡಿದ ರಸ್ತೆಗಳನ್ನು ಮೈಂಟೈನ್ ಮಾಡುವುದನ್ನೂ ಕೂಡ. ಯಾವುದೇ ರಸ್ತೆಯಲ್ಲಿ ಯಾವುದೇ ಸಮಯದಲ್ಲಿ ಬೇಕೆಂದರೂ ಗುಂಡಿಗಳು ಸಿಗಲಿಕ್ಕಿಲ್ಲ. ಇತ್ತೀಚೆಗೆ ಹೈದ್ರಾಬಾದು ಕರ್ನಾಟಕದ ರಸ್ತೆಗಳಲ್ಲಿ-ಕ್ಷಮಿಸಿ-ರಸ್ತೆಯೆನ್ನುವ ಹೆಸರಿನ ಜಾಗಗಳಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಬೆನ್ನು ಕೈ ಕಾಲುಗಳ ಮೂಳೆಗಳಿಗೆ ತೀರ ನೋವಾಗಿ `ಯಾರಪ್ಪ ಈ ಊರಲ್ಲಿ ಮನುಷ್ಯರೇ ಇಲ್ಲವೇ? ವರ್ಷ ವರ್ಷ ಈ ಭಾಗದ ಅಭಿವೃದ್ಧಿಗೆಂದು ಬರುವ ಕೋಟಿ ಗಟ್ಟಲೆ ಹಣ ಏನಾಗುತ್ತದೆ ಎಲ್ಲಿಗೆ ಹೋಗುತ್ತದೆ ಎಂದು ಕೇಳುವವರು ಯಾರೂ ಇಲ್ಲವೆ? ಎಂದು ಸ್ವಲ್ಪ ಗಟ್ಟಿಯಾಗಿಯೇ ಹೇಳಿದಾಗ ಪಕ್ಕದಲ್ಲಿಯೇ ಕುಳಿತಿದ್ದ ಇನ್ನೂ ಪೂರ್ತಿಯಾಗಿ ಪರಿಚಯವಾಗಬೇಕಿದ್ದ ಸಹೋದ್ಯೋಗಿ ಹೇಳಿದ್ದ `ಸಾರ್ ನೀವು ಬೆಂಗಳೂರು ಮಂಗಳೂರು ಕಡೆಯವರು.

ಕ್ಷೇಮವಾಗಿ ನಿಮ್ಮ ಊರಿಗೆ ವಾಪಾಸು ಮರಳಬೇಕೆಂದಿದ್ದರೆ ಬಾಯಿ ಮುಚ್ಚಿಕೊಂಡು ತೆಪ್ಪಗೆ ಕುಳಿತುಕೊಳ್ಳುವುದೇ ವಾಸಿ’ ಎಂದು ತೀರ ತಗ್ಗಿದ ದನಿಯಲ್ಲಿ ಹೇಳಿ ನನ್ನ ಬೆನ್ನಿನಲ್ಲಿ ಚಳಕು ಹರಿಯುವಂತೆ ಮಾಡಿದ್ದ. ಇದು ಇಂಡಿಯಾ. ಯಾವ ಮೂಲೆಯಲ್ಲಿ ಮನೆ ಮಾಡಿಕೊಂಡವರಿಗೂ ರಸ್ತೆ ಸೌಲಭ್ಯ ಒದಗಿಸುವ ಇಂಗ್ಲೆಂಡ್ ಎಲ್ಲಿ. ಎಲ್ಲದರಲ್ಲಿ ಅವರನ್ನು ಅನುಕರಿಸಿ ನಾವೂ ಅವರಂತಾದೆವು ಎಂದು ಬೆನ್ನು ಚಪ್ಪರಿಸಿಕೊಂಡು ಹೆಮ್ಮೆಯಿಂದ ಬೀಗಿ ಸರ್ವ ತಂತ್ರ ಸ್ವತಂತ್ರ ದೇಶವೆನ್ನಿಸಿಕೊಂಡು ಅಂತಹ ರಸ್ತೆಗಳ ಮೂಲಕವೇ ಜನರನ್ನು ಶಿಕ್ಷಿಸುವ ಇಂಡಿಯಾವೆಲ್ಲಿ?

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Avadhi

December 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. vivek

    Sir.. had you written this article in 1999, it would have been great. Now India has changed so much – whatever you get in USA or UK, same level of service you get in India. Sometimes even better. Your writing style is really Good. 25 years ago, very few people were going abroad so if someone goes even to Dubai it will be a great news. Not any more. Everybody and their uncle has visitied one or more foreign countries.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: