ಮೂಲ : ಅಮಿರ್ ಓರ್
ಕನ್ನಡಕ್ಕೆ : ಭಾಗ್ಯ ಸಿ ಎಚ್
ಸೂರ್ಯೋದಯಕ್ಕೇ ಮನುಷ್ಯನೊಬ್ಬ ಎದ್ದ, ಕಿಟಕಿಗಳನ್ನು ತೆರೆದ
ಸೂರ್ಯನ ಬೆಳಕಿನ ಕಿರಣ- ಪೂರ್ವದಿಂದ ಪಶ್ಚಿಮಕ್ಕೆ
ಅವನ ಹೃದಯದವರೆಗೂ ತಲುಪಿ ಅವನ ಶೋಕವನ್ನು ಸುಟ್ಟಿತು
ಅವನು; ಈ ಜಗವೆಲ್ಲ ಸುಂದರ – ಎಂದ
ಅಯ್ಯೋ,ನಾನೇಕೆ ಇಷ್ಟು ಖಿನ್ನನಾಗಿದ್ದೆ?
ಯಾವ ಕನಸು ನನ್ನನ್ನು ಹಾದು ಹೋಯಿತು? ತಡಿ ಎಚ್ಚರಾಗುವೆ!
ಈ ಬೆಳಗು ನಾನೊಂದು ಹೊಸ ಜಗವನ್ನು ಸೃಜಿಸುವೆ!
ಎಂದೂ ಇಲ್ಲದ ಒಂದನ್ನು.
ನಾನು ಎದ್ದು ಎಲೆಗಳ ಜಗತ್ತನ್ನು ಹೊಗುವೆ
ಅದರ ಹಚ್ಚ ಹಸಿರು ಹೃದಯವನ್ನು ಮುಟ್ಟುವೆ!
ಚಿಟ್ಟೆಯಂತೆ ಹೂಗಳ ನಡುವೆ ಫಡಫಡಿಸುವೆ
ಬದುಕಿನ ಸಿಹಿ ಮಧುವನ್ನು ಹೀರುವೆ
ಹೆಚ್ಚು ದೂರವೇನಲ್ಲ:

ಅವನು ಸಜ್ಜಾಗಿ ಹತ್ತು ಹೆಜ್ಜೆ ಇಟ್ಟ,
ಗತವನ್ನು ತೊಳೆದು ಸ್ವಚ್ಛಗೊಳಿಸಿದ ಬದುಕು.
ಅವನು ಕೆಂಪಡರುತ್ತಿರುವ ಪೂರ್ವದೆಡೆಗೆ ಹೆಜ್ಜೆಹಾಕಿದ
ಅವನ ಕಣ್ಣುಗಳು ಹಿಗ್ಗಲಿಸಿ ನೋಡಿದವು.
ಹತ್ತು ಹೆಜ್ಜೆ ಹೆಚ್ಚೇನಲ್ಲ: ಅವನಿಗದು
ಆ ಎಡೆಗೆ ಬದುಕಿಗಿಂತ ಸುದೀರ್ಘ:
ಸವಿ ಮಧುವುಣ್ಣುವ ಹೊತ್ತಿನಲಿ, ಅವನ ನಿನ್ನೆಗಳನ್ನು ಯಾರು ಗುರುತಿಸುತ್ತಾರೆ
ಯಾರು ಹತ್ತು ಶಾಶ್ವತ ಕ್ಷಣಗಳನ್ನೆಣಿಸುತ್ತಾರೆ?
ಒಂದಾನೊಂದು ಕಾಲದಲ್ಲಿ ಮನುಷ್ಯನೊಬ್ಬ ಸೂರ್ಯೋದಯಕ್ಕೇ ಎದ್ದ
ಮರೆತ ಸ್ವರ್ಗದೆಡೆ ಚಿಮ್ಮಿದ.
0 Comments