ಭವ್ಯ ಕಬ್ಬಳಿ
ಬದುಕನ್ನು
ಪುಟ್ಟ ಮಗುವೊಂದು
ನೋಡುತ್ತಾ ನಗುತ್ತಾ ಕೈಬೀಸಿ ಕರೆಯುವ
ಹಾರುವ ವಿಮಾನದಂತೆ ಕಾಣಬೇಕು,
ಏಕೆಂದರೆ ಬದುಕು, ಮರೆಯಾಗುವುದಾದರೂ…
ಹುಡುಕಿಕೊಳ್ಳಲೇಬೇಕಾದ ಸಂಭ್ರಮ
ಬದುಕನ್ನು
ಗೊತ್ತಿರುವ ಗೊತ್ತಿಲ್ಲದ
ಪ್ರಶ್ನೆಗಳಿಗೆ ಉತ್ತರ ಬರೆಯುವ
ಖಾಲಿ ಹಾಳೆಯಂತೆ ಕಾಣಬೇಕು
ಏಕೆಂದರೆ ಬದುಕು,ಮುಗಿಯುವುದಾದರೂ…
ಎದುರಿಸಲೇಬೇಕಾದ ಅಂಕಗಳಿಲ್ಲದ ಪರೀಕ್ಷೆ

ಬದುಕನ್ನು
ತನ್ನ ಪಾಡಿಗೆ ತಾನು ಅರಳುವ
ಚೆಂದದ ಹೂವಿನಂತೆ ಕಾಣಬೇಕು
ಏಕೆಂದರೆ ಬದುಕು, ಬಾಡುವುದಾದರೂ…
ತಾನು ತನ್ನಂತೆಯೇ ಇದ್ದುಬಿಡುವ
ನಿಸ್ವಾರ್ಥವಿರುವ ಸ್ವಾರ್ಥ
ಬದುಕನ್ನು,
ಯಾರ ಕಿವಿಗೂ ತಲುಪದ
ನಮ್ಮೊಳಗೆಯೇ ಗುನುಗುವ
ಹಾಡಿನಂತೆ ಕಾಣಬೇಕು,
ಏಕೆಂದರೆ ಬದುಕು, ಕೇಳಿಸದಿದ್ದರೂ…
ಸಮಾಧಾನಿಸುವ ಸ್ವಗತ
ಬದುಕು,
ನಮ್ಮನ್ನು ಪ್ರೀತಿಸುವವರು ಕಾಣುವ ಬದುಕಿನಂತಿರಬೇಕು
ಏಕೆಂದರೆ ಬದುಕು, ಬಂಧಿಸಿದ್ದರೂ…
ನಾವು ಒಬ್ಬರಿಗೊಬ್ಬರು
ಕಟ್ಟಿಕೊಡುವ ಬೇಲಿಗಳಿಲ್ಲದ ಪ್ರಪಂಚ
0 ಪ್ರತಿಕ್ರಿಯೆಗಳು