ಭವ್ಯ ಕಬ್ಬಳಿ
ಅದೆಷ್ಟು ಸೋತಿರಬಹುದು?! ನಾವು
ಯಾರಿಗಾಗಿಯೂ,
ಕಣ್ಣ ಹನಿಯೊಂದನ್ನು
ಹಡೆಯಲಾರದೆ
ಎದೆಯ ದನಿಯೊಂದನ್ನು
ಮಿಡಿಯಲಾರದೆ
ಬೆಳಕ ಹಂಚಲು ಸೂರ್ಯನಾಗಲಿ
ತಂಪು ಸಾರಲು ಚಂದ್ರನಾಗಲಿ
ಮಾತನಾಡದಿದ್ದರೂ-
ಮಾತು ತಪ್ಪುವುದಿಲ್ಲ
ಗೂಡು ಕಟ್ಟುವ ಹಕ್ಕಿಯಾಗಲಿ
ಗುಟುಕು ಹೊತ್ತ ಸಣ್ಣ ಹುಳುವಾಗಲಿ
ಬದುಕು ಹೋರಾಟವೆನ್ನುವುದ-
ಸಾರಿ ಹೇಳುವುದಿಲ್ಲ
ಅದೆಷ್ಟು ಗೆದ್ದಿರಬಹುದು?! ನಾವು
ಮಾತು ಕೊಟ್ಟು
ಮನುಷ್ಯನಾಗಿಯೇ
ಉಳಿಯುವಲ್ಲಿ
ಮೌನ ತೊಟ್ಟೂ
ಮಹಾತ್ಮನಾಗುವಲ್ಲಿ
ಸ್ವಾತಂತ್ರ್ಯ,
ಸೋಲು ಗೆಲುವುಗಳ
ಲೆಕ್ಕ ಮೀರಿದ ಅರಿವಿನ ಪ್ರಜ್ಞೆ
ಎಂಬ ಪ್ರಜ್ಞೆ ಹರಡಿಸಿದ
ಮಹಾತ್ಮನೊಬ್ಬ
ಶಾಂತಿ ತೊಟ್ಟು
ಎದೆಯಲ್ಲಿ ನೆಲೆಸದೆ
ಕಣ್ಣ ಹನಿಯಾಗಲೀ
ಎದೆಯ ದನಿಯಾಗಲೀ
ಸಲೀಸಾಗಿ ದಕ್ಕುವುದಿಲ್ಲ
ಇಲ್ಲಿ ಯಾರೂ ಮಹಾತ್ಮರಲ್ಲ,
ಮಹಾತ್ಮನಾಗುವುದೆಂದರೇ
ಮನುಷ್ಯನಾಗುವುದು
ಹೀಗೊಬ್ಬ ಮಹಾತ್ಮ…
ನಮ್ಮ ನಿಮ್ಮೊಳಗೆ ಸದಾ ಜೀವಂತ
0 ಪ್ರತಿಕ್ರಿಯೆಗಳು