ಭರವಸೆಯ ಕತೆಗಾರನೊಬ್ಬನ ಪ್ರವೇಶ..

ಒಂದು ಕೃತಿ ಎಷ್ಟುಮುದ್ದಾಗಿರಬೇಕು ಎನ್ನುವುದಕ್ಕೆ ಉದಾಹರಣೆಯಂತಿದೆ ‘ಕಾರೇಹಣ್ಣು’

ಮಧುಸೂಧನ್ ವೈ ಎನ್ ಅವರ ಕಥಾ ಸಂಕಲನ ‘ಈ ಹೊತ್ತಿಗೆ’ ಹಮ್ಮಿಕೊಂಡಿದ್ದ ಮೊದಲ ಕಥಾ ಸಂಕಲನ ಹಸ್ತಪ್ರತಿ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಕೃತಿ. ಪಲ್ಲವ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ

ಈ ಸಂಕಲನದ ಬಗ್ಗೆ ಕವಯತ್ರಿ ಮಮತಾ ಅರಸೀಕೆರೆ ಹಾಗೂ ಚಿತ್ರ ನಿರ್ದೇಶಕ ಬಿ ಎಂ ಗಿರಿರಾಜ್ ಬರೆದ ಮಾತುಗಳು ಇಲ್ಲಿವೆ-

ಈ ಪುಸ್ತಕದ ಬಗ್ಗೆ ಈ ಮೊದಲೇ ಬರೆಯಬೇಕಿತ್ತು.

ಮಧುಸೂದನ್ ಐ.ಟಿ. ಉದ್ಯೋಗದಲ್ಲಿರೊ ಹುಡುಗ . ಕವಿ ಹಾಗೂ ಕತೆಗಾರ.

ವಿಪರೀತ ಸಂಕೋಚ . ಆದರೆ ಆ ಸಂಕೋಚ ಇವರ ಕತೆಗಳಲ್ಲಿ ಕಾಣದು . ಹತ್ತು ಕತೆಗಳನ್ನೊಳಗೊಂಡಿರೋ ” ಕಾರೇಹಣ್ಣು” ಕತಾ ಸಂಕಲನ ” “”ಈ ಹೊತ್ತಿಗೆ ಕತಾ ಪುರಸ್ಕಾರ””ವನ್ನೂ ಪಡೆದಿದೆ . ಬಹಳ ಒಳ್ಳೆಯ ಕತೆಗಳು ಈ ಪುಸ್ತಕದಲ್ಲಿದೆ . ರಾಜ್ಯದ ಹಲವು ಪತ್ರಿಕೆಗಳಲ್ಲಿ ಕತೆಗಳು ಪ್ರಕಟವಾಗಿವೆ

ಮಧು ಕತೆಯ ಬಗ್ಗೆ ಬರೆಯೋಕೂ ಕಾರಣಗಳಿವೆ . ಅವರಿಗೆ ಪ್ರಕಾಶಕರ ಸಮಸ್ಯೆ ಎದುರಾದಾಗ ಸಂಪರ್ಕಿಸಿದ್ದು ನನ್ನನ್ನು . ಪಲ್ಲವ ವೆಂಕಟೇಶ್ ರಿಗೆ ಮನವಿ ಮಾಡಿಕೊಂಡಾಗ ಒಂದೇ ತಿಂಗಳಲ್ಲಿ ಎಲ್ಲವನ್ನೂ ಸಜ್ಜುಗೊಳಿಸಿ ಅಚ್ಚುಕಟ್ಟಾಗಿ ಪುಸ್ತಕವನ್ನ ಪ್ರಿಂಟ್ ಹಾಕಿಯೇ ಬಿಟ್ಟರು . ಡಿ ಕೆ ರಮೇಶರ ಸುಂದರವಾದ ಕವರ್ ಪೇಜ್ ವಿನ್ಯಾಸ ಇದಕ್ಕಿದೆ.

ಶ್ರೀ ಗಿರಿರಾಜ್ ರ ಬಹಳ ಚಂದದ ಬೆನ್ನುಡಿ , ಸುನಂದ ಮೇಡಂ ರ ಅಕ್ಕರೆಯ ಮುನ್ನುಡಿ ಈ ಸಂಕಲನಕ್ಕಿದೆ . ಪುಸ್ತಕವನ್ನ ಕೈಗೆತ್ತಿಕೊಂಡಾಗ ಅದೆಷ್ಟು ಆನಂದವಾಯ್ತೆಂದರೆ ಮನ ಪ್ರಫುಲ್ಲವಾಯ್ತು.

ಕತೆಗಳಂತೂ ಬಹಳ ಫ್ರೆಷ್ ಆಗಿವೆ . ಮಧು ಕತೆಗಳೆಂದರೆ ಇಷ್ಟವಾಗುವಷ್ಟು ಹೊಸತನವಿದೆ . ತೀರ್ಪುಗಾರರಾಗಿದ್ದ ಅಮರೇಶ ನುಗಡೋಣಿಯವರಂತೂ ಆ ದಿನ ಈ ಕತೆಗಳನ್ನು ಇಷ್ಟಪಟ್ಟು ತಾವೂ ಕೂಡ ವಿಶೇಷವಾಗಿ ” ಒಂದಿಷ್ಟು ಹಣವನ್ನೂ ” ಕೊಡುಗೆಯಾಗಿ ಮೆಚ್ಚುಗೆ ರೂಪದಲ್ಲಿ ಕೊಟ್ಟದ್ದು ಅಚ್ಚರಿಯಾಯಿತು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಭರವಸೆಯ ಕತೆಗಾರನೊಬ್ಬನ ಪ್ರವೇಶವಾಗಿದೆ . ಓದುಗರು , ವಿಮರ್ಶಕರು , ಸ್ನೇಹಿತರು ಬರಹಗಾರರು ಪ್ರೋತ್ಸಾಹಿಸಬೇಕಷ್ಟೇ ..

-ಮಮತಾ ಅರಸೀಕೆರೆ

ಕಥನಕ್ರಮದಲ್ಲಿ ಉದ್ರೇಕಿಸಿ ಹೇಳೋದು, ಉದಾರವಾಗಿ ಹೇಳೋದು, ವಿಧುರನಾಗಿ ನಿರೂಪಿಸೋದು ಹೀಗೆ ಹಲವಾರು ತಂತ್ರಗಳಿವೆ. ಇಲ್ಲಿನ ಕಥನಗಳು ವಿಧುರ ನಿರೂಪಣೆಯಲ್ಲಿವೆ. ಆದರೂ, ಕಥೆಗಾರ ಇದನ್ನ ತಂತ್ರದಂತೆ ಬಳಸಿಲ್ಲ ಎಂಬುದು ಗಮನಾರ್ಹ. ಇದೊಂದು ತಂತ್ರ ಅನ್ನುವ ಅರಿವೂ ಕಥೆಗಾರನಿಗೆ ಇರಲಾರದು ಅನ್ನುವುದು ನನ್ನ ಅನಿಸಿಕೆ.

ಮಧು ಅವರ ಕಥೆಗಳಲ್ಲಿ ಘಟನೆಯಿಂದ ಹೊರಗುಳಿದು ಅದನ್ನ ಹೀಗ್ಹೀಗಾಯ್ತು ಅಂತ ಹೇಳಲು ಮಾತ್ರ ಬಯಸುತ್ತಾರೆ.

ನಿರ್ದೇಶಕ ಓಜು, ಕೆನ್ ಲೊರೊಚ್ ರಂತಹ ನಿರೂಪಣೆ ಶೈಲಿಯಂತೆ ಭಾವನೆಯನ್ನ ವೈಭವೀಕರಿಸದೆ, ಹಾಗೆ ಮಾಡುವುದರಿಂದ clinical ಆಗಿ ನೋಡುವ ಶಕ್ತಿಯನ್ನು ಕಳೆದುಕೊಳ್ಳಬಹುದು ಅನ್ನುವ ಎಚ್ಚರದಿಂದ ಇಲ್ಲಿ ಬರವಣಿಗೆ ಮಂದ್ರದಲ್ಲೆ ಗುನುಗುತ್ತಿದೆ.

ಸಣ್ಣಕಥೆಗಳಲ್ಲಿ ಏನೋ ಹೇಳಿ ನಮ್ಮ ಯೋಚನಾ ಮತ್ತು ಕಲ್ಪನಾಲಹರಿಯನ್ನ ಬೇರೆ ಕಡೆಗೆ Distract ಮಾಡಿ ಕೊನೆಗೆ, ಎಷ್ಟೋ ಸಲ ಕೊನೇ ಲೈನಲ್ಲಿ, ಒಂದು twist ಕೊಟ್ಟು ನಮಗೆ ಮಳ್ಳ ಮಾಡುವ ಇಲ್ಲೆಲ್ಲೂ ಅಂತಹ ನಾನೆಷ್ಟು ಬುದ್ಧಿವಂತ ಗೊತ್ತಾ ಅನ್ನುವ ಅಹಂ ಪ್ರವರ್ಧನೆಗೆ ಹೋಗದೆ, ‘ಹೀಗೊಂದು ಕೆಟ್ಟ ಘಟನೆಗೆ ಸಾಕ್ಷಿಯಾಗಿದ್ದೀನಿ, ಅದನ್ನ ನಿಮಗೆ ಹೇಳ್ತಿನಿ. ಹಾಗೆ ಹೇಳೋದರಿಂದ ನಾನು ಹಗುರ ಆಗಬಹುದು’ ಅನ್ನುವ ಆರ್ದ್ರತೆಯಿಂದ ಕಥೆ ನಿರೂಪಿಸಿದ್ದಾರೆ.

ಎಲ್ಲ ಕಥೆಗಳ ಆಳದಲ್ಲಿ ಹೆಚ್ಚಿನ conscious middle class ಜೀವಗಳಲ್ಲಿ, ಅದರಲ್ಲೂ ಗಂಡಸರಲ್ಲಿ ಇರುವ ಒಂಟಿತನ ನಿಚ್ಛಳವಾಗಿ ಕಾಣುತ್ತದೆ. ಇವು ನಿಮಗೆ ರಂಜನೆ ಆಗಲಿ ಅನ್ನುವುದಕ್ಕಿಂತ ಈ ರಂಜನೆಗಳಿಗೆಲ್ಲ ಏನಾದರೂ ಅರ್ಥ ಇದೆಯೆ ಅಂತೆಲ್ಲ ಜಿಜ್ಞಾಸೆ ನಡೆಸುವ ಪಾತ್ರಗಳು ಎಲ್ಲ ಕಥೆಗಳಲ್ಲೂ ಇಣುಕುತ್ತವೆ.

ಇಲ್ಲಿನ ಹತ್ತೂ ಕಥೆಗಳಲ್ಲಿ ಕಥೆಗಾರ ನನಗೆ ನಿಮಗಿಂತ ಹೆಚ್ಚು ಗೊತ್ತು, ಕೇಳಿ ಅನ್ನೋ ದಾರ್ಷ್ಟ್ಯ ಎಲ್ಲೂ ಇಲ್ಲ. ಬದಲಿಗೆ ಹೀಗೆಲ್ಲ ಆಯ್ತು ನಂಗೇನೂ ಅರ್ಥ ಆಗಿಲ್ಲ ಅನ್ನುವ ಗೊಂದಲದಲ್ಲೇ ತನ್ನ ವಿವಶತೆ ವಿನಯ ಎರಡೂ ತೋರಿಸಿದ್ದಾರೆ.

-ಬಿ ಎಂ ಗಿರಿರಾಜ್

‍ಲೇಖಕರು avadhi

April 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Lalitha Siddabasavaiah

    ಕಾರೇಹಣ್ಣು – ನಾನೂ ಓದಿದೆ. ‘ ಈ ಹೊತ್ತಿಗೆ‌ ‘ ಒಂದೊಳ್ಳೆಯ‌‌ ಕತೆಗಾರನನ್ನು‌ ಗುರುತಿಸಿದೆ. ಮಧುಸೂದನ್ ಕತೆಗಳಿಗೆ ವಿಶೇಷ ಶಿಫಾರಸು ಬೇಡವೇ ಬೇಡ. ಕತೆಗಳೇ ಕತೆಗೆ ಶಿಫಾರಸಿನ ಹಾಗಿವೆ.

    ನಮ್ಮ ಜಿಲ್ಲೆಯ ಹುಡುಗ. ಅಪ್ಪಟ ತುಮಕೂರಿನ ಪದಪುಂಜಗಳು ಕತೆಗಳಲ್ಲಿ ಇಟ್ಟಾಡಿವೆ. ಕಾರೇಹಣ್ಣು, ತಂಗಡಿ ಹುವ್ವ, ಜಾಲಾರದುವ್ವ, ತುಂಬೆಹುವ್ವ, ಹೊಂಗೆಮರ, ನೆಲಗಡ್ಲೆಕಾಯಿ, ರಾಗಿ ಇವೆಲ್ಲಾ ನಮ್ಮ ಜಿಲ್ಲೆಯ ಅದರಲ್ಲೂ ಶಿರಾ ಮಧುಗಿರಿ ಕೊರಟಗೆರೆ ವಿಭಾಗದ ಮಹಾ ಲಾಂಛನಗಳು.

    ಮಧುಸೂದನ್ ಇವನ್ನೂ ಮೀರಿಸುವ ಕತೆಗಳನ್ನು ಕೊಟ್ಟು‌ ಇಡೀ‌ ಕನ್ನಡ ಕಥಾಲೋಕ ತುಮಕೂರಿನ ಕಡೆ ತಿರುಗಿ ನೋಡುವಂತೆ ಮಾಡುವುದು ಖಚಿತ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: