ರಮೇಶ ಗಬ್ಬೂರ್
ರಾಗಸಂಯೋಜಿಸಿ ತಾವೇ ನುಡಿಸುತ್ತಾ ಹಾಡುವ ಹಾಡುಗಾರ, ಮುನ್ನೂರಕ್ಕೂ ಹೆಚ್ಚು ಹೋರಾಟದ ಹಾಡು ಹಾಗೂ ಅರಿವಿನ ಹಾಡುಗಳನ್ನು ಬರೆದಿದ್ದಾರೆ. ಎರಡು ಗಜಲ್ ಸಂಕಲನ ಪ್ರಕಟವಾಗಿದ್ದು, ʻಗರೀಬ್ ಗಜಲ್ʼ ಮೊದಲ ಸಂಕಲನ ಗುಲ್ಬರ್ಗ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ.ಇದೂವರೆಗೆ ಏಳು ಕೃತಿಗಳನ್ನು ಪ್ರಕಟಿಸಿದ್ದಾರೆ.
ಸಾವನ್ನು ಗೆಲ್ಲುವ ತಾಲೀಮು ಮಾಡಬೇಡ ಪ್ರಯೋಗಾಲಯದ ಪರಿಕರಗಳಿಗೂ ಸಾವಿನ ಭಯ ಬಿಟ್ಟಿಲ್ಲ
ನನ್ನ ಸಿದಿಗೆಯ ಮುಟ್ಟುತ್ತಿಲ್ಲವೆಂದು ದೂರಬೇಡ ಹೆಣದ ಮೇಲಿನ ಬಟ್ಟೆಗೂ ಸಾವಿನ ಭಯ ಬಿಟ್ಟಿಲ್ಲ
ದೇಹವನ್ನು ಹುರಿಗೊಳಿಸಿ ಸುಕ್ಕುಗಳ ಅಳಿಸುವ ಲಯಬದ್ಧವಾದ ವ್ಯಾಯಾಮಗಳೇಕೆ ಮಾತಾಡುತ್ತಿಲ್ಲ..
ಸಾವನ್ನು ಮುಂದೂಡುವವೆಂದು ತಿಳಿಯಬೇಡ ರೋಗ ಪರೀಕ್ಷೆಯ ಮಾರುಕಟ್ಟೆಗೂ ಸಾವಿನ ಭಯ ಬಿಟ್ಟಿಲ್ಲ..
ಉಷಾ ಕಾಲದಲ್ಲಿ ಮಾಡುವ ಉಸಿರಿನ ವಿವಿಧ ಕಸರತ್ತುಗಳ ಪ್ರಾಣಾಯಾಮ-ಧ್ಯಾನಗಳೇಕೆ ಮಾತಾಡುತ್ತಿಲ್ಲ..
ದೇಹದಂಡನೆಯ ವರಸೆಗಳಿಗೆ ಮಾರು ಹೋಗಬೇಡ ಲಾಭಕೋರ ಉಪಾಯದ ಗಂಟಲಿಗೂ ಸಾವಿನ ಭಯ ಬಿಟ್ಟಿಲ್ಲ..
ಕೈತೊಳೆಯಲು ಕಲಿಸಿದ ಕಾಲದ ಸಂಶಯಕ್ಕೆ ವರ್ತಮಾನದ ಅಂಗಳದಿ ನಿಂತೇಕೆ ಮಾತನಾಡುತ್ತಿಲ್ಲ..
ಸಾವಿನ ವಾಹಕರಾರೆಂದು ಗುದ್ದಾಟ ಮಾಡಬೇಡ ಸತ್ತವರು ಬಿಟ್ಟುಹೋದ ನೆನಪಿಗೂ ಸಾವಿನ ಭಯವಿಲ್ಲ..
ಹಸಿವಿನಿಂದ ಸಾಯಲು ಸಜ್ಜಾದ ಭಕ್ತಿಯ ದಾಸ್ತಾನು ಮಾಡಿದ ಸೋಂಕಿನ ಗರ್ಭಗುಡಿಯೇಕೆ ಮಾತನಾಡುತ್ತಿಲ್ಲ..
ಅನ್ನ ಭದ್ರವಾಗಿದೆ ಎಂದುಕೊಳ್ಳಬೇಡ ನಂಬಿಕೆಯ ಪೆಟ್ಟಿಗೆಗಳಿಗೆ ಬಿದ್ದ ಬೀಗಮುದ್ರೆಗೂ ಸಾವಿನ ಭಯ ಬಿಟ್ಟಿಲ್ಲ..
ಮಣ್ಣಾಗುವವರ ಜೊತೆ ಮಣ್ಣಾಗುವ ಪಾಳಿ ಬರಬಹುದು ಜೊತೆ ಕಳೆದ ನೆನಪುಗಳೇಕೆ ಮಾತನಾಡುತ್ತಿಲ್ಲ..
ನಾನು ನೀನು ಶಾಶ್ವತವಾಗಿ ಉಳಿಯುವೆವೆನಬೇಡ ಹಸಿದೀತೆಂದು ಉಣ್ಣುವ ತುತ್ತಿಗೂ ಸಾವಿನ ಬಿಟ್ಟಿಲ್ಲ..
ರಾಡಿಗೊಂಡ ಇಸಂಗಳ ಕೈತೊಳೆಯುವ ಬೆಳಕಿನ ಕಥನಗಳಿದ್ದರೂ ಆ ಸಾವಿನ ಬೆಳಕೇಕೆ ಮಾತನಾಡುತ್ತಿಲ್ಲ..
ಭವ ರೋಗಕ್ಕೆ ಮದ್ದರಿವ ಚಿಂತೆಬೇಡ ಗರಬಡಿದ ರೋಗನಿರೋಧಕಕ್ಕೂ ಸಾವಿನ ಭಯ ಬಿಟ್ಟಿಲ್ಲ..
ಸ್ಮಶಾನದ ದಾರಿಯಲ್ಲಿ ರೋಗದ ಜೊತೆ ಯುದ್ಧ ಮಾಡಿ ಸತ್ತ ಸೈನಿಕನ ಶವಪೆಟ್ಟಿಗೆ ಏಕೆ ಮಾತನಾಡುತ್ತಿಲ್ಲ..
ಸಾಮಾಜಿಕ ಅಂತರ ಸೋಂಕಿನ ಲಕ್ಷಣವಲ್ಲ ಎನಬೇಡ ‘ರಮೇಶ’ ಹೂಳಲು ಜಾಗ ಕೊಡದ ಬೃಂದಾವನಕ್ಕೂ ಸಾವಿನ ಭಯ ಬಿಟ್ಟಿಲ್ಲ
ಧನ್ಯವಾದಗಳು ಇಂದಿನ ಸಂಪಾದಕರಾದ ಮೈಪಾಲ್ ರೆಡ್ಡಿ ಮುನ್ನೂರ್ ಇವರಿಗೆ ಮತ್ತು ನನ್ನ ಪ್ರೀತಿಯ ಅವಧಿ….
ಸತ್ವಪೂರ್ಣ ಗಜಲ್ ಆಯ್ಕೆ ಮಾಡಿದ್ದು ಸಂತೋಷ ಆಯ್ತು