ಸಚಿನ್ ತೀರ್ಥಹಳ್ಳಿ
**
ಖ್ಯಾತ ಸಾಹಿತಿ ಜೋಗಿ ಅವರ ಹೊಸ ಕೃತಿ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.
‘ಸಾವಣ್ಣ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತು ಕಥೆಗಾರ ಸಚಿನ್ ತೀರ್ಥಹಳ್ಳಿ ಬರೆದ ಬರಹ ಇಲ್ಲಿದೆ.
**
“ನಾವು ಯಾವತ್ತೋ ಬರೆದು ಯಾರಿಗೂ ತೋರಿಸದೆ ಹರಿದ ನಮ್ಮ ಡೈರಿಯ ಪುಟಗಳಂತೆ..“
ಕೇವಲ ಅಸಂಗತತೆ ಮತ್ತು ಅನಿಶ್ಚಿತತೆಗಳ ನಡುವೆ ಹೊಯ್ದಾಡುವ ಮನುಷ್ಯನ ಬದುಕಿನಲ್ಲಿ ಅರ್ಥಪೂರ್ಣವಾದದ್ದು ಏನಾದರೂ ಘಟಿಸುತ್ತದೆ ಅಂದರೆ ಬಹುಶಃ ಅದು ಪ್ರೀತಿ ಮಾತ್ರ. ಬಾಲ್ಯದ ಬೆರಗು ಮುಂದುವರಿದು ಜಗತ್ತೆಲ್ಲ ಸುಂದರವಾಗಿ ಕಾಣಿಸುವ, ಮನುಷ್ಯರೆಲ್ಲರೂ ಒಳ್ಳೆಯವರು ಅಂತನ್ನಿಸುವ ಕಾಲದಲ್ಲಿ ಪ್ರೀತಿ ಎಲ್ಲರ ಬಾಗಿಲೂ ಬಡಿಯುತ್ತದೆ. ನಿನ್ನೆ ನಾಳೆಗಳ ಚಿಂತೆಯಿಲ್ಲದೆ ಮನಸ್ಸು ವರ್ತಮಾನದಲ್ಲಿ ನೆಲೆ ನಿಂತು ಬದುಕು ನಿಜಕ್ಕೂ ಸುಂದರ ಅನ್ನಿಸುವ ಕ್ಷಣಗಳಲ್ಲೇ ಅದು ಬಂದಷ್ಟೆ ವೇಗವಾಗಿ ಮಾಯವಾಗುತ್ತದೆ. ಯಾವ ಹವಾಮಾನ ವೈಪರೀತ್ಯವೂ ಸಂಭವಿಸದೆ ಬೇಸಗೆಯ ಸಂಜೆ ಸುರಿದು ನಿಂತ ಮಳೆಯಂತೆ. ಕೊನೆಗೆ ಉಳಿಯುವುದು ಒಂದು ಕ್ಷಣದ ಬೆರಗು ಜೀವನಪೂರ್ತಿ ಆವರಿಸಿಕೊಳ್ಳುವುದು ಯಾಕೆ ಎನ್ನುವ ಪ್ರಶ್ನೆ ಮಾತ್ರ. ಇದೊಂದು ಪ್ರಶ್ನೆಗೆ ಉತ್ತರ ಸಿಗದೆ ಮನಸ್ಸು ವಿನಾಕಾರಣ ದುಃಖದ ಮಡುವಿನಲ್ಲಿ ಬಿದ್ದು ಒದ್ದಾಡುವಾಗ ಭಗ್ನಪ್ರೇಮ ತೀವ್ರವಾಗಿ ಎಲ್ಲರನ್ನೂ ಕಾಡುತ್ತದೆ.
ಮೀನಿಂಗ್ ಫುಲ್ ಅನ್ನಿಸಿದ ಒಂದು ಸಂಗತಿಯೂ ಮತ್ತದೇ ಜೀವನದ ಅಸಂಗತತೆಯೊಳಗೆ ಸೇರಿಹೋಗುವುದನ್ನು ಅಸಹಾಯಕರಾಗಿ ನೋಡುವ ಭಗ್ನಪ್ರೇಮಿಗಳು ಈ ಜಗತ್ತಿಗೇ ಸೇರಿದವರಲ್ಲವೆಂಬಂತೆ ಕೆಲ ಕಾಲ ಬದುಕುತ್ತಾರೆ. ತೀರಾ ಬುದ್ಧಿವಂತರು ಭಗ್ನಪ್ರೇಮದ ಸುಳಿಯಿಂದ ಬೇಗ ಬಚಾವಾಗುತ್ತಾರೆ. ದಡ್ಡರನ್ನು ಭಗ್ನಪ್ರೇಮ ಕುರುಹೇ ಸಿಗದಂತೆ ಸುಟ್ಟಿರುತ್ತದೆ. ಇವೆರೆಡರ ಮಧ್ಯೆ ಇರುವ ಕೆಲವರು ಭಗ್ನಪ್ರೇಮದ ಜೊತೆಗೆ ಲವ್ ಆ್ಯಂಡ್ ಹೇಟ್ ಸಂಬಂಧವನ್ನು ಕಡೆಯವರೆಗೂ ಕಾಪಾಡಿಕೊಂಡು ಹೋಗುತ್ತಾರೆ. ಹೀಗೆ ಪ್ರೀತಿಯ ಜೊತೆ ಗುದ್ದಾಡುವ, ಉತ್ತರಗಳಿಲ್ಲದ ಪ್ರಶ್ನೆಗಳನ್ನು ಬೇಕಂತಲೇ ಕೇಳಿಕೊಳ್ಳುವ, ವಿನಾಕಾರಣ ನೋಯುವ, ಅವಳ ನೆನಪಾದಾಗ ಮೃದುವಾಗುವ ಪರಶುರಾಮನ ಪಾತ್ರವೊಂದನ್ನು ಈ ಕೃತಿಯಲ್ಲಿ ಜೋಗಿಯವರು ಚಿತ್ರಿಸಿದ್ದಾರೆ. ಸತ್ತು ಹೋಗಿರುವ ಸಾಧ್ಯತೆಯಿಲ್ಲದ, ಬದುಕಿರುವ ಕುರುಹೂ ಇಲ್ಲದ ಪ್ರೇಮವೊಂದರ ಧ್ಯಾನದಲ್ಲಿರುವ ಆತನ ಡೈರಿಯ ಪುಟಗಳನ್ನು ಓದುತ್ತಾ ಮಧ್ಯೆ ಮಧ್ಯೆ ನಾವು ಯಾವತ್ತೋ ಬರೆದು ಯಾರಿಗೂ ತೋರಿಸದೆ ಹರಿದ ನಮ್ಮ ಡೈರಿಯ ಪುಟಗಳು ಸಿಕ್ಕಂತೆನೆಸಿ ಕೊಂಚ ಗಾಬರಿಯೂ ಆಗುತ್ತದೆ.
ನಾವು ತುಂಬಾ ಸಂತೋಷವಾಗಿದ್ದ ಬದುಕಿನ ದಿನಗಳಿಗೆ ಮತ್ತೆ ಮತ್ತೆ ಹೋಗಬೇಕು ಎಂದು ಹಂಬಲಿಸುತ್ತಿರುತ್ತೇವೆ. ಆ ಸಂತೋಷದ ಮರು ಅನುಭೂತಿಗಾಗಿ ಹಾತೊರೆಯುತ್ತೇವೆ. ಈ ಲಾಂಗಿಂಗ್ ಫಾರ್ ರಿಪಿಟಿಟಿವ್‌ನೆಸ್ಸಿಗೆ ಕಾರಣ , ನಾವು ಸಂತೋಷವಾಗಿದ್ದ ದಿನಗಳಲ್ಲಿ ನಾವು ಪ್ರೀತಿಸಿದವರು ನಮ್ಮೊಂದಿಗಿರುತ್ತಾರೆ. ಆದರೆ ಹಾಗೆ ಹಂಬಲಿಸುವ ಪ್ರತಿ ಕ್ಷಣವೂ ಭಗ್ನಪ್ರೇಮ ನಮ್ಮನ್ನು ನೋಯಿಸುತ್ತದೆ. ಮನಸ್ಸನ್ನು ಭೂತದಲ್ಲಿ ನೆಲೆ ನಿಲ್ಲಿಸಿ ವರ್ತಮಾನದಲ್ಲಿ ನಮ್ಮನ್ನು ನೋಯಿಸುವ ಭಗ್ನಪ್ರೇಮದ ಪಟ್ಟುಗಳನ್ನು ಸಹಿಸುವುದಕ್ಕೆ ನಮಗೆ ಯಾವ ತರಬೇತಿಯೂ ಇರುವುದಿಲ್ಲ. ಹೆಚ್ಚಿನ ಸಾರಿ ನಾವು ತೀರಾ ಅನ್-ಪ್ರಿಪೇರ್ಡ್ ಆಗಿದ್ದಾಗಲೇ ಪ್ರೀತಿ ನಮ್ಮನ್ನು ಹುಡುಕಿಕೊಂಡು ಬಂದಿರುತ್ತದೆ. ಯುದ್ಧವನ್ನೇ ಮಾಡಲು ಗೊತ್ತಿಲ್ಲದವರನ್ನು ಚಕ್ರವ್ಯೂಹದ ಒಳಗೆ ನುಗ್ಗಿಸಿ ಇನ್‌ಸ್ಟಾಲ್‌ಮೆಂಟಿನಲ್ಲಿ ಕೊಲ್ಲಲು ಹವಣಿಸುವ ಭಗ್ನಪ್ರೇಮದ ಬಿಸಿಯನ್ನು ಎದುರಿಸುವ ಧೈರ್ಯವನ್ನು ಕಾಲವೇ ಕರಣಿಸಬೇಕು.
ಈ ಕೃತಿಯ ನಾಯಕ ಪರಶುರಾಮ ಕೂಡ ಇಂತಹದೇ ಒಂದು ಚಕ್ರವ್ಯೂಹದಲ್ಲಿದ್ದಾನೆ. ಅಲ್ಲಿಂದ ಕೇಳಿಸುವ ಅವನ ಹಳಹಳಿಕೆಗಳು, ಜ್ಞಾನೋದಯದ ಮಾತುಗಳು ನಮಗೂ ನಮ್ಮ ಹಳೆಯ ಗಾಯಗಳನ್ನು ನೆನಪಿಸುತ್ತವೆ. ಗಾಯ ಇನ್ನೂ ಮಾಗುವ ಹಂತದಲ್ಲಿದ್ದರೆ ಕೊಂಚ ನೋವನ್ನಂತೂ ಕಡಿಮೆ ಮಾಡುತ್ತದೆ. ತೀವ್ರವಾದ ಪ್ರೀತಿಯಲ್ಲಿರುವ ಮನುಷ್ಯನಷ್ಟು ರೋಗಗ್ರಸ್ತ ಸಂಗತಿ ಜಗತ್ತಿನಲ್ಲಿ ಮತ್ತೊಂದಿಲ್ಲ ಎನ್ನುವ ಪ್ರಸಿದ್ಧ ಮಾತೊಂದಿದೆ. ಇದು ಭಾಗಶಃ ಸತ್ಯ ಕೂಡ. ಮನೋರೋಗಗಳು ವಂಶಾವಳಿಗಳ ಮೂಲಕ ಜನರೇಷನ್ನುಗಳನ್ನು ದಾಟಿ ಹೋಗುತ್ತದೆ ಎಂದು ವಿಜ್ಞಾನ ಹೇಳುತ್ತದೆ.ನಾವು ಈ ಜನ್ಮದಲ್ಲಿ ಅನುಭವಿಸುವ ಭಗ್ನಪ್ರೇಮಕ್ಕೂ ಜನ್ಮಾಂತರದ ನಂಟಿರಬಹುದೇ ಎಂದು ಅನುಮಾನ ಪಡುವ, ಅದರತ್ತ ಅನ್ವೇಷಣೆಯಲ್ಲಿ ತೊಡಗುವ ಭಾಗವೊಂದು ಈ ಕೃತಿಯಲ್ಲಿ ಸೊಗಸಾದ ಹಿನ್ನೆಲೆಯೊಂದಿಗೆ ಚಿತ್ರಿತವಾಗಿದೆ. ಒಂದು ಕ್ಲೋಜ್ಹರ್ ಸಿಗದೆ ಅಪೂರ್ಣತೆಯಲ್ಲಿ ನಲುಗುವ ಪರಶುರಾಮನ ದುಃಖಕ್ಕೊಂದು ಪರಿಪೂರ್ಣತೆಯನ್ನು ಕೃತಿಯ ಆ ಭಾಗ ಕೊಡುತ್ತದೆ. ಅಚಾನಕ್ಕಾಗಿ ಎದುರಾಗುವ ತಿರುವಿನಂತೆ ಅಲ್ಲಿನ ಪಾತ್ರಗಳು ಮೊದಮೊದಲು ಅಪರಿಚಿತವೆನಿಸಿದರೂ ಕೊನೆಯಲ್ಲಿ ಆಪ್ತವಾಗುತ್ತವೆ.
ಪ್ರತಿಯೊಂದು ಭಗ್ನಪ್ರೇಮದ ಕತೆಗಳೂ ಯೂನಿಕ್, ಒಬ್ಬರ ಕತೆ ಮತ್ತೊಬ್ಬರ ರೀತಿ ಇರುವುದಿಲ್ಲ, ಒಬ್ಬೊಬ್ಬರ ನೋವಿನ ತೀವ್ರತೆಯೂ ಒಂದೊಂದು ಪ್ರಮಾಣದಲ್ಲಿರುತ್ತದೆ. ತೀರಾ ಮೆಕ್ಯಾನಿಕಲ್ ಆಗಿ ಬದುಕುವ ಜಗತ್ತಿಗೆ ಭಗ್ನಪ್ರೇಮಿಗಳು ಯಾವತ್ತಿಗೂ ಅರ್ಥವಾಗಲ್ಲ. ಒಬ್ಬ ಭಗ್ನಪ್ರೇಮಿಯ ನೋವನ್ನು ಇನ್ನೊಬ್ಬ ಭಗ್ನಪ್ರೇಮಿ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಅಂತಹದೇ ಒಬ್ಬ ಭಗ್ನಪ್ರೇಮಿಯ ಖಾಸಗಿ ನೋವಿನ ಡೈರಿಯ ಪುಟಗಳನ್ನು ಜೋಗಿಯವರು ಇಲ್ಲಿ ಕತೆಯೊಂದರ ಮೂಲಕ ತೆರೆದಿಡುತ್ತಾ ಹೋಗಿದ್ದಾರೆ. ಇದನ್ನು ಓದಿ ನವಪ್ರೇಮಿಗಳು ಈಗಿಂದಲೇ ಎಚ್ಚರ ವಹಿಸಬಹುದು. ಉಳಿದವರು ಪ್ರೀತಿಯಲ್ಲಿ ಯಾಮಾರಿದವರು ನಾವೊಬ್ಬರೇ ಅಲ್ಲ, ನಮ್ಮಂತೆ ಸುಮಾರು ಜನರಿದ್ದಾರೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಜೋಗಿಯವರು ಈ ಕೃತಿಗೆ ‘ಭಗ್ನಪ್ರೇಮಿಯ ಅಪೂರ್ಣ ಡೈರಿ’ ಎಂಬ ಸರಿಯಾದ ಶೀರ್ಷಿಕೆಯನ್ನೇ ಇಟ್ಟಿದ್ದಾರೆ. ಭಗ್ನಪ್ರೇಮಿಗಳ ಕಣ್ಣೀರು ಯಾವತ್ತೂ ಬತ್ತುವುದಿಲ್ಲ, ಅವರ ಡೈರಿಯ ಪುಟಗಳು ಯಾವತ್ತಿಗೂ ಮುಗಿಯುವುದಿಲ್ಲ. ಅವಳ ನಗುವಿನ ನೆನಪೊಂದು ಸಾಕು ಎರಡು ಹನಿ ಮತ್ತೆ ಜಿನುಗುತ್ತವೆ. ಪುಟಗಳು ಮತ್ತೆ ತುಂಬಿಕೊಳ್ಳುತ್ತವೆ.
**
ಜೋಗಿ ಅವರ ಈ ಕಾದಂಬರಿಯ ಆಯ್ದ ಭಾಗ ಇಲ್ಲಿದೆ.
“ನಿರ್ಮೋಹವೇ ಸ್ವರ್ಗ..“
ಪ್ರೇಮದ ಅರ್ಥ ನನಗೆ ಗೊತ್ತಿಲ್ಲ. ಇವತ್ತಿಗೂ ಗೊತ್ತಿಲ್ಲ. ಭಗ್ನಪ್ರೇಮ ಗೊತ್ತು. ಯಾವಾಗ ಪ್ರೀತಿಯೊಂದು ಮುರಿದು ಬೀಳುತ್ತದೆ ಅಂತ ಹೇಳಬಲ್ಲೆ. ನನಗಿದು ಮೊದಲೇ ಗೊತ್ತಿದ್ದರೆ ನಾನು ಪ್ರೀತಿಸುತ್ತಲೇ ಇರಲಿಲ್ಲ. ಸಾಯುತ್ತೇವೆ ಅಂತ ಮೊದಲೇ ಗೊತ್ತಾದರೆ ಯಾರು ತಾನೇ ಹುಟ್ಟುತ್ತಾರೆ. ಎಲ್ಲವೂ ಗೊತ್ತಿಲ್ಲದೇ ಆಗಿಹೋಗುತ್ತದೆ. ಮತ್ತೊಬ್ಬ ಸೋತು ಒರಗಿದಾಗ ಅದು ಅವನ ದೌರ್ಬಲ್ಯ ಅಂದುಕೊಂಡು ನಾವು ಮುಂದೆ ಹೋಗುತ್ತಾ ಇರುತ್ತೇವೆ. ಕಳ್ಳ ಉಸುಕಿನಲ್ಲಿ ನಾವೆಂದೂ ಸಿಕ್ಕಿಬೀಳುವವರೇ ಅಲ್ಲ ಅನ್ನುವಂತೆ ಜಿಗಿದು ಓಡಲು ನೋಡುತ್ತೇವೆ. ಗುರುತ್ವಾಕರ್ಷಣ ಬಲ ಯಾರನ್ನೂ ಬಿಡುವುದಿಲ್ಲ ಅನ್ನುವುದನ್ನು ಮರೆಯುತ್ತೇವೆ. ಕರ್ಮ ಅಟ್ಟಿಸಿಕೊಂಡು ಬರುತ್ತದೆ ಅನ್ನುತ್ತಾರಲ್ಲ. ನಾನು ಅದನ್ನು ನಂಬುವುದಿಲ್ಲ. ಪ್ರೇಮ ಮಾತ್ರ ಬೆನ್ನು ಹತ್ತುತ್ತದೆ. ಪ್ರಾರಬ್ಧದಂತೆ ಕಾಡುತ್ತದೆ. ಬಿಡಿಸಿಕೊಂಡಷ್ಟು ಕೈಗೆ ಅಂಟುತ್ತದೆ. ಹೆಬ್ಬಾವಿನಂತೆ ನಮ್ಮನ್ನು ಸುತ್ತುಹಾಕಿ ಸ್ವಲ್ಪ ಸ್ವಲ್ಪವೇ ನುಂಗುತ್ತಾ ಹೋಗುತ್ತದೆ. ನಮಗೇನಾಗುತ್ತದೆ ಅಂತ ನಮಗೇ ಗೊತ್ತಾಗುತ್ತಿರುವುದಿಲ್ಲ.
ಹೀಗಾಗುತ್ತಿದೆ ಅಂತ ಯಾರಿಗಾದರೂ ಹೇಳಿದರೆ ಅವರು ನಂಬುವುದಿಲ್ಲ. ಈ ಜಗತ್ತಿನ ತುಂಬ ಮೋಸಗಾರರೇ ಇದ್ದಾರೆ. ಪ್ರೇಮದ ಬಗ್ಗೆ ಏನೇನೂ ಗೊತ್ತಿಲ್ಲದಂತೆ ನಟಿಸುತ್ತಾರೆ. ಮರೆಯಲು ಯತ್ನಿಸು ಅಂತ ಸಲಹೆ ಕೊಡುತ್ತಾರೆ. ಅವರ ಎದೆಯಲ್ಲಿ ಇನ್ನೂ ಕೆಂಡದಂತೆ ಇರುವ ಪ್ರೇಮದ ಸ್ಮರಣೆಯನ್ನು ಮುಚ್ಚಿಟ್ಟುಬಿಡುತ್ತಾರೆ. ಅಂಥವರನ್ನು ನಂಬಿ ನಾನೂ ಅನೇಕ ಸಲ ಪ್ರೇಮದಿಂದ ಪಾರಾಗಲು ನೋಡಿದೆ. ಅದರಿಂದ ನೀಗಿಕೊಳ್ಳಬಹುದು ಅಂದುಕೊಂಡೆ. ಕೊನೆಗೊಂದು ದಿನ ಅರ್ಥವಾಯಿತು. ನಾನು ವ್ಯರ್ಥಪ್ರಯತ್ನದಲ್ಲಿ ತೊಡಗಿದ್ದೇನೆ. ಯಾವುದರಿಂದ ಬಿಡುಗಡೆ ಇಲ್ಲವೋ ಅದರಿಂದ ಪಾರಾಗಲು ಯತ್ನಿಸುತ್ತಿದ್ದೇನೆ. ಪ್ರೇಮದಿಂದ ಪಾರಾಗುವ ಒಂದೇ ಒಂದು ಮಾರ್ಗವೆಂದರೆ ಪ್ರೇಮದಲ್ಲೇ ಮುಳುಗಿಹೋಗುವುದು. ಸೆಳೆತದಿಂದ ಬಚಾವಾಗಲು ನದಿಯೊಳಗೆ ಮುಳುಗುತ್ತಾರಂತೆ, ಹಾಗೆ! ನಾನು ರೈಲಿನಲ್ಲಿ ನೋಡಿದ ಅಂಗಾಲು ಈಗಲೂ ಕಣ್ಮುಂದೆ ಸುಳಿಯುತ್ತದೆ. ಅವಳ ಮುಖದ ನಿರ್ಲಿಪ್ತ ಮುದ್ರೆ ಕೂಡ ನೆನಪಾಗುತ್ತದೆ. ಅವಳ ಪ್ರೇಮ ಅಂಗಾಲಿನಲ್ಲಿತ್ತೇ, ನಿದ್ದೆಯಲ್ಲಿ ಅದ್ದಿದ ಅವಳ ಕಣ್ಣುಗಳಲ್ಲಿತ್ತೇ? ನಾನು ಮೋಹಿಸಿದ್ದು ಅವಳ ಅಂಗಾಲನ್ನು ಮಾತ್ರ. ಅದನ್ನು ಅವಳು ಕತ್ತರಿಸಿಕೊಟ್ಟಿದ್ದರೆ ನನ್ನ ವಾಂಛೆ ತೀರುತ್ತಿತ್ತೇ?
ಏಳು ವರ್ಷದ ಹುಡುಗನನ್ನು ಇಷ್ಟೆಲ್ಲ ಪ್ರಶ್ನೆಗಳು ಕಾಡಲಿಲ್ಲ. ಈಗ ನೆನಪಿಸಿಕೊಂಡರೆ ನಾನು ಆ ವಯಸ್ಸಿನಲ್ಲೇ ಎಷ್ಟೊಂದು ತೀವ್ರವಾಗಿ ಪ್ರೀತಿಸುತ್ತಿದ್ದೆ ಅಂತ ಹೆದರಿಕೆಯಾಗುತ್ತದೆ. ನಾನು ಸ್ವಲ್ಪ ದಿನಗಳ ಕಾಲ ನಿರ್ಮೋಹವನ್ನು ಅಭ್ಯಾಸ ಮಾಡಿದೆ. ಯಾವುದರ ಕುರಿತೂ ವ್ಯಾಮೋಹ ಇಟ್ಟುಕೊಳ್ಳಲಿಲ್ಲ. ಪ್ರೇಮವೆಂಬುದು ಕೇವಲ ಮರುಸೃಷ್ಟಿಗೆಂದೇ ಪ್ರಕೃತಿ ಹೆಣೆದ ಮಾಯಾಜಾಲ. ಅದಕ್ಕೂ ಮನಸ್ಸಿಗೂ ಸಂಬಂಧವಿಲ್ಲ. ಇಡೀ ಜನ್ಮ ಹೆಣ್ಣನ್ನೇ ತೋರಿಸದೇ ಒಬ್ಬನನ್ನು ಬಂಧಿಸಿಟ್ಟರೆ ಅವನಿಗೆ ಪ್ರೇಮ ಹುಟ್ಟುವುದೇ ಇಲ್ಲ. ಪ್ರೇಮವೆಂಬ ಭಾವನೆ ಇದೆಯೆಂಬುದೂ ಗೊತ್ತಾಗುವುದಿಲ್ಲ. ಆದ್ದರಿಂದ ಪ್ರೇಮ ಹುಸಿ, ಅದು ಕಾಮಕ್ಕೆ ಸಜ್ಜನರು ಕೊಟ್ಟ ಮತ್ತೊಂದು ಹೆಸರು ಅಂತ ನಾನು ಸಿಟ್ಟಿನಿಂದ ವಾದಿಸಿದ್ದೆ. ಅದು ಸುಳ್ಳೆಂದು ಗೊತ್ತಿದ್ದರೂ ಅದನ್ನೇ ಪಟ್ಟುಹಿಡಿದು ಸಾಧಿಸಿದ್ದೆ. ಕ್ರಮೇಣ ಯಾವುದೂ ಉಪಯೋಗಕ್ಕೆ ಬರುವುದಿಲ್ಲ ಅಂತ ಗೊತ್ತಾಯಿತು. ಒಡೆಯುವುದು ಅಂದರೆ ಪ್ರೇಮ ಭಗ್ನಗೊಳ್ಳುವುದಲ್ಲ. ಕಾಲ ಮತ್ತು ದೇಶ ಒಡೆದುಹೋಗುವುದು. ನಾನು ಬೇರೊಂದು ಕಾಲದಲ್ಲಿ, ಬೇರೊಂದು ದೇಶದಲ್ಲಿ ಬದುಕುವುದು, ಅವಳು ಕೂಡ ಅವಳದೇ ಕಾಲ ದೇಶದಲ್ಲಿ ಜೀವಿಸುತ್ತಿರುವುದು. ಒಬ್ಬರನ್ನೊಬ್ಬರು ನೋಡದೇ ಹೋದರೂ ಶಾಪವಿಮೋಚನೆ ಆಗುತ್ತಿದ್ದ ಹಾಗೆ ನಾವು ಮತ್ತೆ ಒಂದಾಗುತ್ತೇವೆ. ಮತ್ತೆ ಬೇರಾಗಲೆಂದೇ ಸೇರುತ್ತೇವೆ, ಸೇರಲೆಂದೇ ಮತ್ತೆ ಬೇರಾಗುತ್ತೇವೆ. ನಾನು ಹೀಗೆಲ್ಲ ಯೋಚಿಸುತ್ತಿದ್ದೆ.
ನನ್ನೊಳಗೆ ಆಗುತ್ತಿದ್ದ ಉತ್ಪಾತಗಳನ್ನು ಯಾರ ಹತ್ತಿರವಾದರೂ ಹೇಳಿಕೊಳ್ಳಬೇಕಿತ್ತು. ಭಗ್ನಪ್ರೇಮಿಯ ಅಳಲನ್ನು ಕೇಳಿಸಿಕೊಳ್ಳಲು ಯಾರೂ ಸಿಗುವುದಿಲ್ಲ. ಅದನ್ನೆಲ್ಲ ಬಿಟ್ಟು ಮುಂದೆ ನಡಿ, ಬದುಕಿನಲ್ಲಿ ಬೇಕಾದಷ್ಟು ಅವಕಾಶಗಳಿವೆ. ಪ್ರೀತಿ ನದಿಯ ಹಾಗೆ ಹರಿಯುತ್ತಲೇ ಇರುತ್ತದೆ. ನೀನು ಎಲ್ಲಿ ಬೇಕಿದ್ದರೂ ಅದರೊಳಗೆ ಇಳಿಯಬಹುದು ಅಂತ ಅಧ್ಯಾತ್ಮದ ಮಾತಾಡುತ್ತಾರೆ. ಪ್ರೇಮದ ಪರಮಶತ್ರು ಅಧ್ಯಾತ್ಮ. ಬದುಕಿನ ಶತ್ರುವೂ ಅದೇ. ಈ ಜಗತ್ತಿನಲ್ಲಿ ನಾವು ಪ್ರೇಮಿಸುತ್ತಾ, ಒದ್ದಾಡುತ್ತಾ, ಯಾತನೆಪಡುತ್ತಾ, ನೋಯುತ್ತಾ, ಗಾಯ ಮಾಡಿಕೊಳ್ಳುತ್ತಾ, ಗಾಯ ಒಣಗುವುದನ್ನೇ ಕಾಯುತ್ತಾ ಜೀವಿಸಲು ಹೆಣಗಾಡುತ್ತಿದ್ದರೆ, ಇದೆಲ್ಲ ಮಾಯೆ ಅಂತ ತತ್ವಜ್ಞಾನಿ ಹೇಳುತ್ತಾನೆ. ಅಂಥವರನ್ನು ಪ್ರೇಮಿಗಳು ದೂರವಿಡಬೇಕು. ತೀವ್ರವಾಗಿ ಜೀವಿಸುವ ಆಸೆಯುಳ್ಳವರು ಅಂಥವರ ಹತ್ತಿರಕ್ಕೂ ಹೋಗಬಾರದು. ತತ್ವಜ್ಞಾನಿ ಮತ್ತು ನೀತಿವಂತರು ಬದುಕಿನ ರುಚಿಯನ್ನೇ ಹಾಳುಮಾಡುತ್ತಾರೆ. ಟ್ರಾಫಿಕ್ ಪೊಲೀಸನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಾರು ಓಡಿಸಬಾರದು. ಆತನಿಗೆ ನಿಯಮ ಮುಖ್ಯ, ನಮಗೆ ಪಯಣದ ಸುಖ ಮುಖ್ಯ. ಅವನಿಗೆ ಅದು ಅರ್ಥವೇ ಆಗುವುದಿಲ್ಲ.
ಮಂದಿ ಯಾಕೆ ಅಧ್ಯಾತ್ಮದ ಮೊರೆ ಹೋಗುತ್ತಾರೆ ಅಂತ ನಾನು ಅನೇಕ ಸಲ ಯೋಚಿಸಿದ್ದೇನೆ. ಅವರಿಗೆ ಈ ಬದುಕಿನಲ್ಲಿ ಬಯಸಿದ್ದು ಸಿಕ್ಕಿರುವುದಿಲ್ಲ. ಅದು ಸಿಗದೇ ಇರುವುದಕ್ಕೆ ತಾನು ಕಾರಣ ಅಲ್ಲ ಅನ್ನುವುದನ್ನು ಸಾಬೀತುಮಾಡುವ ಆಸೆ ಅವರಿಗೆ. ಹೀಗಾಗಿ ಎಲ್ಲ ವಿಧಿಲೀಲೆ ಅನ್ನುತ್ತಾರೆ. ಈ ಜನ್ಮ ಸಾಕು ಅಂದುಬಿಡುತ್ತಾರೆ. ಮುಂದಿನ ಜನ್ಮದಲ್ಲಿ ಬೇಕಾದ್ದನ್ನು ಪಡೆಯಬಹುದು ಅನ್ನುವ ಆಸೆಯಿಂದ ವಿರಕ್ತರಂತೆ ಇದ್ದುಬಿಡುತ್ತಾರೆ. ಒಂದು ವೇಳೆ ಅವರಿಗೆ ಇದೇ ಜೀವನದಲ್ಲಿ ಹಿಂದಕ್ಕೆ ಹೋಗಿ, ಒಮ್ಮೆ ಜೀವಿಸಿದ ದಿನಗಳನ್ನು ಮತ್ತೊಮ್ಮೆ ಬದುಕುವುದಕ್ಕೆ ಅವಕಾಶ ಇದ್ದಿದ್ದರೂ ಅವರು ಬದಲಾಗುತ್ತಿರಲಿಲ್ಲ. ನಾವು ಮತ್ತೊಂದು ಅವಕಾಶ ಸಿಕ್ಕರೂ ಮೊದಲನೇ ಸಲ ಮಾಡಿದ್ದನ್ನೇ ಮಾಡುತ್ತೇವೆ. ಪ್ರೇಮದಲ್ಲೂ ಅಷ್ಟೇ, ಒಂಚೂರು ಹಿಂದಕ್ಕೆ ಹೋಗುವುದು ಸಾಧ್ಯವಿದ್ದರೆ, ಪ್ರೇಮ ಮುರಿಯದಂತೆ ನೋಡಿಕೊಳ್ಳುತ್ತಿದ್ದೆ ಅಂತ ಯಾರಾದರೂ ಹೇಳಿದರೆ ನಂಬಬೇಡಿ.
ಸರಿಪಡಿಸಿಕೊಳ್ಳುವ ಆಶೆಯಿದ್ದರೆ ಮುಂದೆಯೂ ಸರಿಪಡಿಸಿಕೊಳ್ಳಬಹುದು. ಆದರೆ ಕೆಲವು ಜೀವಗಳು ತೊರೆದು ಹೋಗಲೆಂದೇ ಹತ್ತಿರ ಬಂದಿರುತ್ತವೆ. ಒಡೆಯಲೆಂದೇ ಕಟ್ಟಿದ ಸೇತುವೆಗಳು ಅವು. ಕೆಲವು ಮಳೆಗೆ ಒಡೆಯುತ್ತವೆ. ಕೆಲವು ಬಿಸಿಲಿಗೂ ಪುಡಿಪುಡಿಯಾಗುತ್ತವೆ. ಒಡೆದು ಹೋದ ಮೇಲೆ ಕಟ್ಟಿದವನನ್ನು ಆಕ್ಷೇಪಿಸುವುದರಿಂದ ಉಪಯೋಗವಿಲ್ಲ. ನೂರು ಅಶ್ವಮೇಧ ಯಾಗ ಮಾಡಿದರೆ ಸ್ವರ್ಗದ ಒಡೆತನ ಸಿಗುತ್ತದಂತೆ. ಪ್ರೇಮವನ್ನು ಪಡೆಯಲಿಕ್ಕೆ ಯಾವ ಯಜ್ಞಯಾಗವೂ ಇಲ್ಲ. ಪ್ರೀತಿಸುವುದೊಂದೇ ದಾರಿ. ಪ್ರೀತಿಸುವುದು ಸುಲಭ ಅಂತ ನೀವೇನಾದರೂ ಅಂದುಕೊಂಡಿದ್ದರೆ ಅದಕ್ಕೆ ನನ್ನ ವಿರೋಧವಿದೆ. ನೀವು ತುಂಬ ಇಷ್ಟಪಡುವ ಯಾರನ್ನಾದರೂ ಪ್ರೀತಿಸಿ, ನಾನು ಮನಸಾರೆ ಪ್ರೀತಿಸಿದ್ದೇನೆ ಅಂತ ಬಂದು ಹೇಳಿ. ಆಗ ನಾನೂ ಒಪ್ಪಿಕೊಳ್ಳುತ್ತೇನೆ. ಏನೇ ಆದರೂ ನೀವು ನನ್ನಂತೆ ಪ್ರೀತಿಸಲಾರಿರಿ. ನನ್ನ ಹಾಗೆ ಪ್ರೀತಿಯನ್ನು ಒಡೆದುಕೊಳ್ಳಲಾರಿರಿ. ಮರ ಎತ್ತರ ಬೆಳೆದಷ್ಟೂ ಬಲವಾಗಿ ನೆಲಕ್ಕೆ ಅಪ್ಪಳಿಸುತ್ತದೆ.
0 Comments