ಹೊರಗಷ್ಟೇ ಆಕರ್ಷಿಸುವ ‘ಬ್ರಾಹ್ಮಿನ್ ಕೆಫೆ’
ಎಚ್.ಆರ್. ರಮೇಶ
ಕತೆಗೆ ‘ಕಥನ’ ಮತ್ತು ಸಾವಯವವಾಗಿ ಒಡಮೂಡುವ ಬಿಗಿ ‘ನಿರೂಪಣೆ’ ಇಲ್ಲದಿದ್ದರೆ ಕತೆಯ ಬಂಧ ಸಡಿಲಗೊಂಡು ಹಳ್ಳ ಹಿಡಿದಂತೆ. ಮತ್ತು ಕಲ್ಪನೆಯ ಸೋಪಜ್ಞತೆಯ ಜೊತೆ ಅಂತರ್ಗತವಾಗಿ ಸೇರಿಕೊಂಡಿರುವ ಸಾಮಾಜಿಕ ಬದ್ಧತೆಗಳು ಬೆರೆತು ಕತೆಯ ಕ್ಯಾನ್‍ವಾಸನ್ನು ಬೆಳೆಸದಿದ್ದರೆ ಕತೆಯೊಳಗಿನ ಪಾತ್ರಗಳು ಬದುಕಿನ ಸತ್ಯಗಳಿಗೆ ಮುಖಾಮುಖಿಯಾಗದೆ, ಸಂಕೀರ್ಣವಾಗಿ ನಿಲ್ಲದೆ ಪೇಲವ ಅನ್ನಿಸುತ್ತವೆ. ಕತೆಯೊಳಗೆ ಕಥನವಿಲ್ಲದಿದ್ದರಂತೂ ಕೇವಲ ಒಂದು ಆರ್ಡಿನರಿ ಘಟನೆಯಾಗಿ ಕಾಲದ ಸುಂಟರಗಾಳಿಯಲ್ಲಿ ಸಿಕ್ಕಿ, ಒದ್ದಾಡಿ ನಿಲ್ಲದೆ ಹಾರಿಹೋಗುತ್ತದೆ.
ಅಗಾಧ ಆಕಾಶದಲ್ಲಿ ಕ್ಷಣದ ಮಿಂಚಂತೆ ಬದುಕಿನ ನಿರಂತರತೆಯೂ ಕತೆಯಲ್ಲಿ ಕ್ಷಣ ನಿಲ್ಲಬೇಕು. ಸದ್ಯದ ತೀವ್ರತೆಯನ್ನು ಛೇಧಿಸಿ ಹೊರಬರದಿದ್ದರೆ ಕಾಲದ ಪರೀಕ್ಷೆಯಲ್ಲಿ ಪಾಸಾಗಿ ಅನಂತತೆಯತ್ತ ಮುಖಮಾಡುವ ಚೈತನ್ಯವಾದರೂ ಎಲ್ಲಿ ಸಿಗುತ್ತದೆ. ಇದು ಕತೆಗಾರನ/ಳ ಸಂಕಟ, ತಳಮಳ. ಮುಂದಿನದು ಕತೆಯ ಸಾರ್ಥಕತೆ. ಇದಕ್ಕೆ ಒಂದಾ ಎರಡಾ: ಭಾಷೆ, ಅಭಿವ್ಯಕ್ತಿ, ಲೋಕಜ್ಞಾನ, ಅನೇಕ ಆಯಾಮಗಳ ನಿರೂಪಣೆ, ಘಟನೆ, ಸನ್ನಿವೇಶ-ಸಂದರ್ಭಗಳನ್ನು ಕತೆಯಾಗಿ ರೂಪಾಂತರಗೊಳಿಸುವ ಲೋಕದ ದೃಷ್ಟಿಯಲ್ಲೇ ಸಿಗುವ ಅಲೌಕಿಕ ಮಾಂತ್ರಕತೆ, ಬದುಕಿನ ಸತ್ಯಗಳ ಕಾಣುವ ಛಾತಿ. ಅಯ್ಯೋ ಬಿಡಿ ಅದು ಮಾತಿಗೆ ಸಿಗದ ಅವ್ಯಕ್ತ ಭಾವ.
ಕತೆಗೆ ಸ್ಪಷ್ಟತೆ ಎಷ್ಟು ಮುಖ್ಯವೋ ಸಂಕೀರ್ಣತೆಯೂ ಅಷ್ಟೇ ಮುಖ್ಯ. ಕತೆಯಲ್ಲಿಯೇ ಮೂಡಿ ಹೊಮ್ಮುವ ಪಿಸುಧ್ವನಿಗಳು ಕತೆಯ ಹೊರಗಿನ ಸದ್ದುಗಳು ಸಂಗತಿಗಳು ಒಂದಕ್ಕೊಂದು ಸಂಧಿಸಿ ಮತ್ತು ಬದುಕಿನ ಸಂಕೀರ್ಣತೆಯ ಪದರವನ್ನು ಬಿಡಿಸಬೇಕು. ‘ವಸ್ತು’ವನ್ನು ಮುಂಚೆಯೇ ನಿರ್ಧರಿಸಿಕೊಂಡು ಹೊರಟರೆ ಅದು ಸಂತೆಗೆ ಎರಡು ಮೊಳ ಎಣೆದಂತೆಯೇ ಸರಿ.
ಕಾರ್ಪೆಂಟರ್ ಅವರ ಹೊಸ ಕಥಾಸಂಕಲನ ‘ಬ್ರಾಹ್ಮಿನ ಕೆಫೆ’ ಕಥಾಸಂಕಲನದ ಕತೆಗಳು ಮೇಲಿನ ಮಾತುಗಳನ್ನು ಆಡುವಂತೆ ಮಾಡಿದವು.
ಇದರ ಹೊರಪದರು ಹಾಗೂ ಅದರ ಮೇಲಿನ ಚಿತ್ರ ಮತ್ತು ವಿನ್ಯಾಸ ಗಮನ ಸೆಳೆಯುತ್ತವೆ. ಒಂಥರ ಅಸಂಪ್ರದಾಯಕ ಶೈಲಿಯಿಂದ ಮತ್ತು ಅಭಿವ್ಯಕ್ತಿಯಿಂದಾಗಿ ಸೆಳೆಯುತ್ತ ವ್ಯಂಗ್ಯದ ನೋಟವನ್ನು ಖುಲ್ಲಂಖುಲ್ಲ ನೇರವಾಗಿ ಹೊರ ಸೂಸುತ್ತವೆ. ಇದು ಒಳಗಿನ ಕತೆಗಳು ಏನನ್ನು ಹೇಳಬಹುದು ಎಂಬುದನ್ನು ಸಲೀಸಲಾಗಿ ಊಹಿಸಲು ಸಾಧ್ಯವಾಗುವಂತಿದೆ. ಆ ಆಕರ್ಷಣೆಯ ಮೋಹಕ್ಕೆ ಒಳಗಾಗಿ ಒಳ ಹೊಕ್ಕರೆ ಒಂಥರ ನಿರಾಸೆ, ಭ್ರಮನಿರಸನ.
ಇಲ್ಲಿನ ಬಹಳಷ್ಟು ಕತೆಗಳು ಕಥನ ಮತ್ತು ನಿರೂಪಣೆಗೆ ಸಿಕ್ಕದೆ ಕೇವಲ ಸಂಭಾಷಣೆಯನ್ನಷ್ಟೇ ನೆಚ್ಚಿಕೊಂಡು ಸಾಗುತ್ತವೆ. ಒಮ್ಮೊಮ್ಮೆ ಪಾತ್ರಗಳು ವಿಷಯಗಳನ್ನು ಆಯ್ದುಕೊಂಡು ಡಿಬೇಟ್ ಮಾಡುತ್ತಿವೆಯೇನೋ ಅನ್ನಿಸುತ್ತದೆ. ವಸ್ತು-ವಿಷಯಗಳು ವರ್ತಮಾನದವು. ಹಾಗಾಗಿ ಸಮಕಾಲೀನತೆ ಸಲೀಸಾಗಿ ದಕ್ಕಿದೆ. ಆದರೆ ಕತೆಗಳ ಪಾತ್ರಗಳು ‘ಫ್ಲ್ಯಾಟ್’ ಆಗಿ ತಮ್ಮ ಒಳತುಮುಲಗಳಲ್ಲಿ ಸಿಕ್ಕಿ ಒದ್ದಾಡುತ್ತ ಸನ್ನಿವೇಶಗಳನ್ನು ಎದುರಿಸುವಲ್ಲಿ ಎದೆಗಾರಿಕೆಯನ್ನು ತೋರಿಸುವುದಿಲ್ಲ. ಭಾಷೆಯ ರೂಪಕ ಶಕ್ತಿಯನ್ನು ನಿರೂಪಕ ಬೇಡಬೇಕಿತ್ತು. ಅದು ದಕ್ಕಿದ್ದಿದ್ದರೆ ಕತೆಗಳ ಕತೆ ಬೇರೆಯದೇ ಆಗುತ್ತಿತ್ತು ಖಂಡಿತವಾಗಿಯೂ. ಉಪ್ಪಿನ ಹದ ಗೊತ್ತಾಗದ ಕೈಗಳು ಎಂಥಹ ಪದಾರ್ಥವನ್ನಾದರೂ ರುಚಿಗೆಡುವಂತೆ ಮಾಡಬಲ್ಲವು. ಉಪ್ಪಿನ ಹದ ಗೊತ್ತಿರುವಂತಹ ಮೆಟಾಫರ್‍ಗಳು ಸಿಗಬೇಕಲ್ಲ. ಅನುಭವ, ಬದುಕಿನ ಸೂಕ್ಷ್ಮ ಗ್ರಹಿಕೆ, ಭಾಷೆಯ ಮೇಲಿನ ಹಿಡಿತ ಬೇಕು. ಇದು ಎಲ್ಲರಿಗೂ ಗೊತ್ತಿರುವುದೇ. ಆದರೆ ಅದೇನು ಪುಗುಸಟ್ಟೆ ಪುನುಗಲ್ಲ. ಇದು ಸಿಕ್ಕಿದ್ದಿದ್ದರೆ ಈ ಕತೆಗಳು ಸಾದತ್ ಹಸನ್ ಮಾಂಟೋ, ಕಾಫ್ಕ ಅಥವಾ ಕಮು ಇಲ್ಲ ಲಂಕೇಶರ ಕತೆಗಳ ಪಕ್ಕದಲ್ಲಿ ಸಲೀಸಾಗಿ ಕಾಲಮೇಲೆ ಕಾಲು ಹಾಕಿಕೊಂಡು ಕೂತುಕೊಳ್ಳುತ್ತಿದ್ದವು.
ಕೊನೆಗೂ ಇಷ್ಟವಾಗುವುದು ಮತ್ತು ಮನಸ್ಸನ್ನು ಸೆಳೆಯುವುದು ಹೊರ ಮೈಯೇ. ಒಳಗಿನ ಕತೆಗಳಲ್ಲಿ ನಿಗಿ ನಿಗಿ ಕೆಂಡದಂತ ವಸ್ತುಗಳಿದ್ದರೂ ಅವು ಎದೆಯನ್ನು ಮೀಟದೆ, ಗ್ರಹಿಕೆಯನ್ನು ಡಿಸ್ಟರ್ಬ್ ಮಾಡದೆ, ಸಂವೇದನೆಯನ್ನು ಅಲುಗಾಡಿಸದೆ ನಿರಾಸೆ ಹುಟ್ಟಿಸುತ್ತವೆ. ಒಂದೆರಡು ಕತೆಗಳು ‘ಖಂಡವಿದೆಕೋ ಮಾಂಸವಿದೆಕೋ’, ‘ಅಟ್ರಾಸಿಟಿ’ ಮತ್ತು ‘ಬ್ರಾಹ್ಮಿನ ಕೆಫೆ’ ಯಂತಹ ಕತೆಗಳು ಒಂದು ತೆರನಾದಂತಹ ಪ್ರಭೆಯನ್ನು ಸೂಸಿ ಮತ್ತೆ ಮಂಕಾಗುತ್ತವೆ. ನಿಭಾಯಿಸಿರುವ ರೀತಿಯಿಂದಾಗಿ ಜಾಳು ಜಾಳು ಅನ್ನಿಸಿ ನೆನಪಿನಲ್ಲಿ ಉಳಿಯುವ ಸಾಫಲ್ಯತೆಯನ್ನು ಕಾಣುವ ಅದೃಷ್ಟದಿಂದ ವಂಚಿತವಾಗುತ್ತವೆ. ಮತ್ತು ನಮಗೂ ಒಳ್ಳೆಯ ಕತೆಗಳು ಮಿಸ್ ಆದವಲ್ಲ ಎಂಬ ನೋವು ನಿರಾಸೆ ಮೂಡುತ್ತದೆ. ಕತೆ ತನ್ನ ನಿರೂಪಣಾ ಅವಧಿಯಲ್ಲಿ ಘಟಿಸಬೇಕು ಮತ್ತು, ಸ್ಪಷ್ಟವಾದಷ್ಟೂ ತನ್ನ ಸಂಕೀರ್ಣತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಆದರೆ ಇಲ್ಲಿಯ ಕತೆಗಳಲ್ಲಿ ಸ್ಪಷ್ಟತೆ ಇದ್ದರೂ ಯಾಕೋ ಅರಿವಿನ ಒಳಗಡೆ ಬಂದು ಆವರಿಸಿಕೊಳ್ಳುವುದಿಲ್ಲ.
ವಸ್ತುನಿಷ್ಠ ವಿಮರ್ಶೆ