ಬಷೀರ್ ಬಿ ಎಂ
ಬ್ಯಾರಿ ಆಕಾಡೆಮಿಗೆ ನನ್ನ ಪ್ರಶ್ನೆಗಳು ….
1. ಬ್ಯಾರಿ ಲಿಪಿ ಸಂಶೋಧನೆಯೇ ? ಸೃಷ್ಟಿಯೇ ?
2. ಬ್ಯಾರಿ ಲಿಪಿ ಸೃಷ್ಟಿಸಿದಾತ ಬ್ಯಾರಿಯೆ ? ಆತನಿಗೆ ಬ್ಯಾರಿ ಭಾಷೆಯ ಸ್ವರ ವಿನ್ಯಾಸಗಳ ಅರಿವಿದೆಯೇ ?
3. ಬ್ಯಾರಿ ಲಿಪಿ ಸೃಷ್ಟಿಸಿದಾತ ಭಾಷಾ ವಿಜ್ಞಾನಿಯೇ ? ಆತನಿಗೆ ಭಾಷೆಯ ಕುರಿತಂತೆ ಈ ಹಿಂದೆ ಅಧ್ಯಯನಗಳನ್ನು ನಡೆಸಿದ ಹಿನ್ನೆಲೆಯಿದೆಯೇ ?
4. ಬ್ಯಾರಿ ಭಾಷೆಯ ಕುರಿತಂತೆ ಹಲವು ಹಿರಿಯರು ಬರೆದಿದ್ದಾರೆ. ಸಂಶೋಧನೆ ನಡೆಸಿದ್ದಾರೆ. ಆ ಹಿರಿಯರು ಈ ಲಿಪಿ ರಚನೆಯಲ್ಲಿ ಪಾಲುಗೊಂಡಿದ್ದಾರೆಯೇ?
5. ಬ್ಯಾರಿಗಳಲ್ಲಿ ಬಹುತೇಕ ಮುಸ್ಲಿಮ್ ಹುಡುಗರು ಈಗಾಗಲೇ ನಾಲ್ಕು ಲಿಪಿಗಳನ್ನು ಅನಿವಾರ್ಯವಾಗಿ ಕಲಿಯುವ ಒತ್ತಡದಲ್ಲಿದ್ದ್ದಾರೆ. ಶಾಲೆಯಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲಿಷ್. ಮದರಸದಲ್ಲಿ ಅರೇಬಿಕ್. ಇದೀಗ ಇನ್ನೊಂದು ಲಿಪಿಯನ್ನು ಅವರ ಮೇಲೆ ಹೇರುವುದು ತರವೇ ?
6. ಬ್ಯಾರಿ ಹುಡುಗರು ಅಗತ್ಯ ಬಿದ್ದಾಗ ಕನ್ನಡ ಲಿಪಿಯನ್ನೇ ಬಳಸುವುದರಿಂದ ಅವರಿಗೆ ನಾಡ ಭಾಷೆಯ ಕುರಿತಂತೆ ಪ್ರಜ್ಞೆ ಬೆಳೆಯುತ್ತದೆ. ಆದರೆ ಈ ಹೊಸ ಲಿಪಿಯ ಜೊತೆಗೆ ಬ್ಯಾರಿಗಳು ಭಾವನಾತ್ಮಕ ಸಂಬಂಧ ಹೊಂದಲು ಹೇಗೆ ಸಾಧ್ಯ ?
7. ಬ್ಯಾರಿ ಭಾಷೆ ಉಳಿದಿರುವುದು ಮನೆಯ ತಾಯಂದಿರಿಂದ. ಅವರೇ ಬ್ಯಾರಿ ಭಾಷೆಯ ಶಿಕ್ಷಕರು. ಅವರು ಮನೆಯಲ್ಲಿ ಬ್ಯಾರಿಯ ಬದಲಿಗೆ ಇಂಗ್ಲಿಷ್ ಮಾತನಾಡಿದರೆ ಭಾಷೆಯೇ ಉಳಿಯುವುದಿಲ್ಲ. ಕನ್ನಡ ಲಿಪಿಯೇ ಗಂಡಾಂತರದಲ್ಲಿದೆ. ಇನ್ನು ಯಾವುದೇ ರೀತಿಯಲ್ಲಿ ಬದುಕಿಗೆ ಅನುಕೂಲ ಮಾಡಿ ಕೊಡದ, ಬ್ಯಾರಿ ಭಾಷೆಯೊಂದಿಗೆ ಯಾವ ಸಂಬಂಧವೂ ಇಲ್ಲದ, ಈ ಲಿಪಿಯನ್ನು ಯಾಕೆ ಕಲಿಯಬೇಕು?
8. ಈ ಲಿಪಿಯನ್ನು ಕಲಿಸಲು ಅಕಾಡೆಮಿ ಶಿಕ್ಷಕರನ್ನು ನೇಮಕ ಮಾಡುತ್ತದೆಯೇ ?
9. ಯಾವುದೇ ಲಿಪಿಯನ್ನು ಒಂದು ಭಾಷೆಯ ಅಧಿಕೃತ ಲಿಪಿ ಎನ್ನುವುದನ್ನು ಘೋಷಿಸುವ ಮುನ್ನ ಪ್ರಾಯೋಗಿಕವಾಗಿ ಅದರಲ್ಲಿ ಒಂದು ಪುಸ್ತಕವನ್ನು ಕೈ ಬರಹದಲ್ಲಿ ಬರೆಯ ಬೇಕು. ಅಂತಹ ಪ್ರಯೋಗ ನಡೆದಿದೆಯೇ?
10. ಕಟ್ಟ ಕಡೆಯ ಪ್ರಶ್ನೆ …. ಈ ಬ್ಯಾರಿ ಭಾಷೆ ಸೃಷ್ಟಿ ಕರ್ತನಿಗೆ ಕೊಟ್ಟ ಗೌರವ ಧನ ಎಷ್ಟು ? ಈ ಲಿಪಿಗಾಗಿ ಮಾಡಿದ ಖರ್ಚು ವೆಚ್ಚಗಳು ಎಷ್ಟು ?
ಇಷ್ಟವಾಯಿತು.