ಬ್ಯಾರಿ ಲಿಪಿಗೆ ಸಂಬಂಧಿಸಿ ನಾನು ಕೇಳಿದ ಹತ್ತು ಪ್ರಶ್ನೆಗಳಿಗೆ ಹಿರಿಯ ಪತ್ರಕರ್ತರು, ಕನ್ನಡದ ಕತೆಗಾರರು, ಬ್ಯಾರಿ ಸಾಹಿತ್ಯ ಸಂಸ್ಕೃತಿಗೆ ಅಪಾರ ಕೆಲಸ ಮಾಡಿದ ಬಿ.ಎಂ. ಹನೀಫ್ ಉತ್ತರಿಸಿದ್ದಾರೆ. ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತಿದ್ದೇನೆ. ಉತ್ತರ ಕೆಳಗಿನಂತೆ ಇದೆ.
–ಬಿ.ಎಂ.ಬಶೀರ್
ಬಿ.ಎಂ. ಬಶೀರ್ ಪ್ರಶ್ನೆಗೆ ಹನೀಫ್ ಉತ್ತರಗಳು
1. ಬ್ಯಾರಿ ಲಿಪಿ ಸಂಶೋಧನೆಯೇ ? ಸೃಷ್ಟಿಯೇ ?
ಇದು ಸಂಶೋಧನೆಯಲ್ಲ, ತಯಾರಿಕೆ. (ಸೃಷ್ಟಿಯೂ ಅಲ್ಲ.)
2. ಬ್ಯಾರಿ ಲಿಪಿ ಸೃಷ್ಟಿಸಿದಾತ ಬ್ಯಾರಿಯೆ ? ಆತನಿಗೆ ಬ್ಯಾರಿ ಭಾಷೆಯ ಸ್ವರ ವಿನ್ಯಾಸಗಳ ಅರಿವಿದೆಯೇ ?
ಬ್ಯಾರಿ ಅಲ್ಲ. ಆತನಿಗೆ ಬ್ಯಾರಿ ಭಾಷೆಯ ಸ್ವರ ವಿನ್ಯಾಸಗಳ ಅರಿವಿದ್ದಂತೆ ಕಾಣುವುದಿಲ್ಲ.
3. ಬ್ಯಾರಿ ಲಿಪಿ ಸೃಷ್ಟಿಸಿದಾತ ಭಾಷಾ ವಿಜ್ಞಾನಿಯೇ ? ಆತನಿಗೆ ಭಾಷೆಯ ಕುರಿತಂತೆ ಈ ಹಿಂದೆ ಅಧ್ಯಯನಗಳನ್ನು ನಡೆಸಿದ ಹಿನ್ನೆಲೆಯಿದೆಯೇ ?
ಭಾಷಾ ವಿಜ್ಞಾನಿ ಅಲ್ಲ. ಶಾಸ್ತ್ರೀಯ ಅಧ್ಯಯನ ನಡೆಸಿದಂತೆ ಕಾಣುತ್ತಿಲ್ಲ.
4. ಬ್ಯಾರಿ ಭಾಷೆಯ ಕುರಿತಂತೆ ಹಲವು ಹಿರಿಯರು ಬರೆದಿದ್ದಾರೆ. ಸಂಶೋಧನೆ ನಡೆಸಿದ್ದಾರೆ. ಆ ಹಿರಿಯರು ಈ ಲಿಪಿ ರಚನೆಯಲ್ಲಿ ಪಾಲ್ಗೊಂಡಿದ್ದಾರೆಯೇ?
ಈ ಹಿಂದೆ 9/10 ನೇ ಶತಮಾನದಲ್ಲಿ ಬಳಸುತ್ತಿದ್ದರು ಎನ್ನಲಾದ ಬ್ಯಾರಿ ಲಿಪಿಯ (ಇದರ ಬಗ್ಗೆಯೂ ಭಿನ್ನಮತಗಳಿವೆ) ಕುರಿತು ಸಂಶೋಧನೆ ನಡೆಸಿದ ಹಿರಿಯರು ಈ ಹೊಸ ಲಿಪಿಯ ತಯಾರಿಕೆಯಲ್ಲಿ ಪಾಲ್ಗೊಂಡಿಲ್ಲ.
5. ಬ್ಯಾರಿಗಳಲ್ಲಿ ಬಹುತೇಕ ಮುಸ್ಲಿಮ್ ಹುಡುಗರು ಈಗಾಗಲೇ ನಾಲ್ಕು ಲಿಪಿಗಳನ್ನು ಅನಿವಾರ್ಯವಾಗಿ ಕಲಿಯುವ ಒತ್ತಡದಲ್ಲಿದ್ದ್ದಾರೆ. ಶಾಲೆಯಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲಿಷ್. ಮದರಸದಲ್ಲಿ ಅರೇಬಿಕ್. ಇದೀಗ ಇನ್ನೊಂದು ಲಿಪಿಯನ್ನು ಅವರ ಮೇಲೆ ಹೇರುವುದು ತರವೇ ?
ಇನ್ನೊಂದು ಲಿಪಿಯನ್ನು ಬ್ಯಾರಿ ಮಕ್ಕಳ ಮೇಲೆ ಹೇರುವುದು ಥರವಲ್ಲ.
6. ಬ್ಯಾರಿ ಹುಡುಗರು ಅಗತ್ಯ ಬಿದ್ದಾಗ ಕನ್ನಡ ಲಿಪಿಯನ್ನೇ ಬಳಸುವುದರಿಂದ ಅವರಿಗೆ ನಾಡ ಭಾಷೆಯ ಕುರಿತಂತೆ ಪ್ರಜ್ಞೆ ಬೆಳೆಯುತ್ತದೆ. ಆದರೆ ಈ ಹೊಸ ಲಿಪಿಯ ಜೊತೆಗೆ ಬ್ಯಾರಿಗಳು ಭಾವನಾತ್ಮಕ ಸಂಬಂಧ ಹೊಂದಲು ಹೇಗೆ ಸಾಧ್ಯ ?
ಹೊಸ ಲಿಪಿಯ ಜೊತೆಗೆ ಬ್ಯಾರಿಗಳು ಭಾವನಾತ್ಮಕ ಸಂಬಂಧ ಹೊಂದಲು ಸಾಧ್ಯವಿಲ್ಲ. ಏಕೆಂದರೆ ಇದು ಬ್ಯಾರಿಗಳು ಭಾವನಾತ್ಮಕ ಸಂಬಂಧ ಹೊಂದಿರುವ ಕನ್ನಡ ಮತ್ತು ಅರೆಬಿಕ್ ನ ಜಾಯಮಾನಕ್ಕೆ ಹೊಂದುವುದಿಲ್ಲ.
7. ಬ್ಯಾರಿ ಭಾಷೆ ಉಳಿದಿರುವುದು ಮನೆಯ ತಾಯಂದಿರಿಂದ. ಅವರೇ ಬ್ಯಾರಿ ಭಾಷೆಯ ಶಿಕ್ಷಕರು. ಅವರು ಮನೆಯಲ್ಲಿ ಬ್ಯಾರಿಯ ಬದಲಿಗೆ ಇಂಗ್ಲಿಷ್ ಮಾತನಾಡಿದರೆ ಭಾಷೆಯೇ ಉಳಿಯುವುದಿಲ್ಲ. ಕನ್ನಡ ಲಿಪಿಯೇ ಗಂಡಾಂತರದಲ್ಲಿದೆ. ಇನ್ನು ಯಾವುದೇ ರೀತಿಯಲ್ಲಿ ಬದುಕಿಗೆ ಅನುಕೂಲ ಮಾಡಿ ಕೊಡದ, ಬ್ಯಾರಿ ಭಾಷೆಯೊಂದಿಗೆ ಯಾವ ಸಂಬಂಧವೂ ಇಲ್ಲದ, ಈ ಲಿಪಿಯನ್ನು ಯಾಕೆ ಕಲಿಯಬೇಕು?
ಕಲಿಯಬೇಡಿ. ಇದು ನಮ್ಮ ಪುರುಸೊತ್ತಿನಲ್ಲಿ ನಮ್ಮ ಖುಷಿಗೆ ನಾವು ಮಾಡಿರುವ ಲಿಪಿ.
8. ಈ ಲಿಪಿಯನ್ನು ಕಲಿಸಲು ಅಕಾಡೆಮಿ ಶಿಕ್ಷಕರನ್ನು ನೇಮಕ ಮಾಡುತ್ತದೆಯೇ ?
ಸರಕಾರ ಹೆಚ್ಚುವರಿ ಅನುದಾನ ಕೊಟ್ಟರೆ ಶಿಕ್ಷಕರನ್ನು ನೇಮಿಸಬಹುದು. ಆ ಶಿಕ್ಷಕರಿಗೆ ತರಬೇತಿ ನೀಡಲು ಟಿಸಿಎಚ್ ಕೋರ್ಸ್ ಗಳನ್ನು ತೆರೆಯಬಹುದು.
9. ಯಾವುದೇ ಲಿಪಿಯನ್ನು ಒಂದು ಭಾಷೆಯ ಅಧಿಕೃತ ಲಿಪಿ ಎನ್ನುವುದನ್ನು ಘೋಷಿಸುವ ಮುನ್ನ ಪ್ರಾಯೋಗಿಕವಾಗಿ ಅದರಲ್ಲಿ ಒಂದು ಪುಸ್ತಕವನ್ನು ಕೈ ಬರಹದಲ್ಲಿ ಬರೆಯ ಬೇಕು. ಅಂತಹ ಪ್ರಯೋಗ ನಡೆದಿದೆಯೇ?
ಇಲ್ಲ, ಅಂತಹ ಕೈಬರಹದ ಪುಸ್ತಕ ಬಂದಿಲ್ಲ. ಹಾಗೆ ಮಾಡಬೇಕು ಎನ್ನುವುದು ನಮಗೆ ಗೊತ್ತಿರಲಿಲ್ಲ.
10. ಕಟ್ಟ ಕಡೆಯ ಪ್ರಶ್ನೆ …. ಈ ಬ್ಯಾರಿ ಭಾಷೆ ಸೃಷ್ಟಿ ಕರ್ತನಿಗೆ ಕೊಟ್ಟ ಗೌರವ ಧನ ಎಷ್ಟು ? ಈ ಲಿಪಿಗಾಗಿ ಮಾಡಿದ ಖರ್ಚು ವೆಚ್ಚಗಳು ಎಷ್ಟು ?
¢€¢£€√π÷ו|`~¶
(ಇದನ್ನು ನಾನು ಸ್ವಂತ ಕಂಡುಹಿಡಿದ ಬ್ಯಾರಿ ಲಿಪಿಯಲ್ಲಿ ಬರೆದಿದ್ದೇನೆ. ಸಂಶೋಧನೆ ಮಾಡಿ ಓದಿಕೊಳ್ಳಿ.)
ಈ ಲಿಪಿ ಕಂಡುಹಿಡಿದ ಸಮಿತಿಯ ಸದಸ್ಯರಿಗೆ ಗೊತ್ತಿಲ್ಲದ ಕೆಲವು ಸಂಗತಿಗಳಿವೆ. ಅವನ್ನು ಕೆಳಗೆ ನಮೂದಿಸಿದ್ದೇನೆ:
ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಲು ಯಾವುದೇ ಭಾಷೆಗೆ ಲಿಪಿಯ ಅಗತ್ಯವಿಲ್ಲ. ಈಗ ಎಂಟನೇ ಪರಿಚ್ಛೇದದಲ್ಲಿರುವ ಹಿಂದಿ, ಬೊಡೊ ಸಹಿತ ಹಲವು ಭಾಷೆಗಳಿಗೆ ಸ್ವಂತ ಲಿಪಿ ಇಲ್ಲ.
ಈ ಸಮಿತಿಯ ಸದಸ್ಯರೊಬ್ಬರು ವಿಡಿಯೊದಲ್ಲಿ ಹೇಳಿದ ಹಾಗೆ ಬ್ಯಾರಿ ಭಾಷೆ 1500 ವರ್ಷಗಳ ಹಿಂದಿನದ್ದು ಅಲ್ಲ.
ಈ ಸಮಿತಿಯ ಇನ್ನೊಬ್ಬ ಸದಸ್ಯರು ವಿಡಿಯೋದಲ್ಲಿ ಹೇಳಿದ ಹಾಗೆ ಬ್ಯಾರಿ ಭಾಷೆ ಮಾತನಾಡುವವರ ಸಂಖ್ಯೆ 24 ಲಕ್ಷ ಅಲ್ಲ.
ಕನ್ನಡ ಲಿಪಿಯನ್ನು ಅಸ್ಪ್ರಶ್ಯಗೊಳಿಸುವ ಮೂಲಕ ಕನ್ನಡದ ಜೊತೆಗಿರುವ ಬ್ಯಾರಿಗಳ ಹೃದಯ ಸಂಬಂಧವನ್ನು ಕಿತ್ತು ಹಾಕಲು ಯಾರಿಗೂ ಸಾಧ್ಯವಿಲ್ಲ.
0 Comments