ಬೇಲಿಯನು ಜಿಗಿಯುವ ಚಿಟ್ಟೆಯ ಜಾಡು ಕಾಲಗರ್ಭದಲ್ಲಿರುವ ಕರುಣೆಯ ಹಾಡು

ಸುಧಾ ಆಡುಕಳ

ಇದ್ದಕ್ಕಿದ್ದಂತೆ ಗೆಳೆಯ ಅಪರಿಚಿತನಾದ

ಅವರ ಒಂಟಿತನಕ್ಕೆ ದಾರಿಯೂ ಮರುಗುತ್ತಿದೆ

ಹೌದು, ಅನೇಕ ವರ್ಷಗಳವರೆಗೆ ಒಟ್ಟಾಗಿ ನಡೆದವರು, ಇದ್ದಕ್ಕಿದ್ದಂತೆ ಅವರಿಗೆ ನೇರ ಸಂಬಂಧವೇ ಇರದ  ಅದ್ಯಾವುದೋ ವಿಷಯದ ಬಗ್ಗೆ ಮುನಿಸಿಕೊಂಡು, ಒಬ್ಬರ ಮೇಲೊಬ್ಬರು ಕೆಸರೆರಚಿಕೊಳ್ಳುವ ವಿಚಿತ್ರವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಭಿನ್ನ ಗುರಿಗಳೆಡೆಗೆ ಗಮಿಸುವವರ ಮಾತು ಬಿಡಿ, ಒಂದೇ ಗುರಿಯೆಡೆಗೆ ಸಾಗುವ ಭಿನ್ನ ದಾರಿಯ ಪಥಿಕರು ಕೂಡ ಒಟ್ಟಿಗೆ ಬೆರೆಯದ, ಪರಸ್ಪರ ಸಂವಾದಿಸಲಾಗದ ಸಂದಿಗ್ಧವನ್ನು ತಂದಿಟ್ಟುಕೊಂಡಿದ್ದೇವೆ.

ಅನ್ಯವನ್ನು ಒಳಗೊಳ್ಳುವ ಈ ಮಣ್ಣಿನ ಮೂಲಗುಣ ಇದ್ದಕ್ಕಿದ್ದಂತೆ ಬದಲಾಗಿಹೋಯಿತೆ? ಭೂತಕಾಲದಿಂದ ನೇರವಾಗಿ ಭವಿಷ್ಯಕ್ಕೆ ಜಿಗಿಯುವ ಮತ್ತು ವರ್ತಮಾನವನ್ನು ಕಟ್ಟಿಕೊಳ್ಳಲು ಏನೊಂದು ಸಹಾಯವನ್ನೂ ಮಾಡದೇ, ಕೇವಲ ಕಾಲವನ್ನು ಕಲಕುವ ಸಂಗತಿಗಳು ಸಿಹಿಲೇಪಿತ ವಿಷವೆಂಬುದನ್ನು ಅರಿಯದಾದೆವೇಕೆ? ಇಂತಹ ಕಾಲದಲ್ಲಿ ಸಾಹಿತ್ಯ, ಕಲೆಗಳು ನಿರ್ವಹಿಸಬೇಕಾದ ಹೊಣೆಯೇನು?

‘ಈ ಭಾನುವಾರದ ಅವಧಿಯ ಹೊಣೆ ನಿಮ್ಮದು’

 ಎಂದು ಜಿ. ಎನ್. ಸರ್ ಹೇಳಿದಾಗ ಕಾಡಿದ ಪ್ರಶ್ನೆಗಳಿವು.  ದುರಿತಕಾಲದ ಸೂತಕದಲ್ಲಿ ಬಹುತೇಕ ಪತ್ರಿಕೆಗಳು ಸಾಹಿತ್ಯ  ಪುರವಣಿಗಳನ್ನು ನಿಲ್ಲಿಸಿರುವ ಈ ದಿನಗಳಲ್ಲಿ ಅನೇಕ ಅಚ್ಛರಿಗಳನ್ನು ಹೊತ್ತು ತರುವ ಅವಧಿಯ ‘ಸಂಡೇ ಸ್ಪೆಶಲ್’ ಗೆ ಕಾಯುತ್ತಿದ್ದುದಂತೂ ಸುಳ್ಳಲ್ಲ. ಆದರೆ ಅಂತದೊಂದು ಹೊಣೆ ನನ್ನ ಹೆಗಲಿಗೇರಬಹುದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.

ಆತ್ಮೀಯರನ್ನೆಲ್ಲ ಸದಾಕಾಲ  ಅಚ್ಚರಿಯನ್ನು ನೀಡುತ್ತಲೇ ಬಂದಿರುವ ಮೋಹನ್  ಸರ್ ಹೀಗೊಂದು ಕರೆಮಾಡಿ ನನ್ನನ್ನು ಭಯ ಬೀಳಿಸಿದರು. ಎಷ್ಟೆಂದರೂ ಅದು ಉಡದ ಹಿಡಿತವೆಂದು ಅರಿವಾದ ಮೇಲೆ ಬಿಡಿಸಿಕೊಳ್ಳುವ ಮಾತಿರಲಿಲ್ಲ. ಒಪ್ಪಿಕೊಂಡ ಕ್ಷಣದಿಂದಲೇ ಪ್ರಶ್ನೆಗಳ ಸರಮಾಲೆಗಳು ಕಣ್ಮುಂದೆ ತೆರೆದುಕೊಳ್ಳತೊಡಗಿದವು.

ಹಿಂದಣ ದಾರಿಯನರಿಯದೇ… ಎಂಬ ಶರಣರ ಮಾತಿನಂತೆ ಮತ್ತೆ ಇಣುಕಿದ್ದು ಕಾಲಗರ್ಭಕ್ಕೆ.  ಕಾಲಗರ್ಭದಲ್ಲಿ ಸಿಕ್ಕ ಕಥನಗಳ ಕೆಲವು ತುಣುಕುಗಳು ನಮ್ಮ ಇಂದು ಮತ್ತು ನಾಳೆಗಳಿಗೆ ಖಂಡಿತ ದಾರಿದೀಪವಾಗಬಲ್ಲವು.

ದಾರಿಯೋ ಪೋ ಹೀಗೆ ಹೇಳುತ್ತಾನೆ, “ತನ್ನ ಕಾಲದ ಕುರಿತು ಹೇಳದ ಕಥೆಯಾಗಲೀ, ಕಲೆಯಾಗಲೀ, ನಾಟಕವಾಗಲೀ ಅದು ಸಮಕಾಲೀನವಲ್ಲ.”  “ಕಗ್ಗತ್ತಲ ಕಾಲದಲ್ಲಿಯೂ ಆ ಕಾಲದ ಕುರಿತಾಗಿಯೇ ಹಾಡಬೇಕು” ಎನ್ನುವ ಬ್ರೆಕ್ಟನ ಮಾತು ಕೂಡ  ಇದನ್ನೇ ಹೇಳುತ್ತದೆ. “ಹಾಡುವುದು ಯಾಕೆಂದರೆ ಹಾಡಿಗೆ ಕಮರಿಯ ಮೇಲೆ ಹಾರುವ ಹಕ್ಕಿಯ ಚೈತನ್ಯವಿದೆ” ಎನ್ನುತ್ತಾನೆ ದರವೇಶ್. ಕಾಲಗರ್ಭದ ಕಥನದ ಈ ವಿವೇಕವು ನಮ್ಮನ್ನು ಸರಿದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ.

ಕೊರೊನಾವೆಂಬ ಕಂಡರಿಯದ ರೋಗ ದೇಶದೊಳಗೆ ಕಾಲಿಟ್ಟಾಗ ‘ದೈಹಿಕ ಅಂತರ’ವನ್ನು ಪಾಲಿಸಿ ಎಂಬುದರ ಬದಲಾಗಿ ‘ಸಾಮಾಜಿಕ ಅಂತರವಿರಲಿ’ ಎಂಬ ಮಾತು ಕೇಳಿಬಂದದ್ದು ಆಕಸ್ಮಿಕವೆಂದು ಹೇಗೆ ಹೇಳುವುದು? ನಮ್ಮೊಳಗೆಲ್ಲೋ ಸುಪ್ತವಾಗಿದ್ದ ವ್ರಣವೊಂದು ಅಕ್ಷರರೂಪ ಪಡೆದಂಥ ಕ್ಷಣವದು. ಎಲ್ಲವೂ ಸರಿಯಿದೆಯೆಂಬ ನಮ್ಮ ಭ್ರಮೆಯನ್ನು ಅಂತರ ಪಾಲಿಸಬೇಕಾದ  ದಿನಗಳು ನುಚ್ಚುನೂರಾಗಿಸಿದವು.

ದೈಹಿಕ ಅಂತರವನ್ನು ಕಾಪಾಡಬೇಕೆಂದು ಮನೆಯೊಳಗೆ ಬಂಧಿಯಾಗಿ ಕುಳಿತಾಗ ಸಾಮಾಜಿಕ ಅಂತರ ಸೃಷ್ಟಿಸಿದ ಬಿರುಕುಗಳು ಭೂತದಂತೆ ಹೊರಬಂದು ನರ್ತಿಸತೊಡಗಿದವು.

ಸಾಮಾಜಿಕ ಅಂತರದ ಅರ್ಥವ್ಯಾಪ್ತಿ ಬಹಳ ದೊಡ್ಡದು. ಮುಟ್ಟಬಾರದೆಂಬ ದೈಹಿಕ ಅಂತರದಿಂದ ಹಿಡಿದು ಮುಟ್ಟು ಮೈಲಿಗೆಯೆಂಬಲ್ಲಿವರೆಗೂ ಅದರ ಕಬಂಧ ಬಾಹುಗಳು ಚಾಚಿವೆ. ಶಿಕ್ಷಣ, ವಲಸೆ, ಹಸಿವು, ಅಭದ್ರತೆ, ಏಕಾಂಗಿತನ, ಶೂನ್ಯತೆ……….. ಹೀಗೆ ನೂರಾರು ಮುಳ್ಳುಗಳನ್ನು ತನ್ನ ಮೈತುಂಬ ಪೋಣಿಸಿಕೊಂಡ ತಂತಿಯ ಬೇಲಿಯಾಗಿ ಅದು ನಮ್ಮೆಲ್ಲರನ್ನು ಸುತ್ತುವರೆದಿದೆ.

ಬೇಲಿಯನ್ನು ಹಾರುವ ಚಿಟ್ಟೆಯ ಜಾಡನ್ನು ಹಿಡಿಯದೇ ಒಬ್ಬರನ್ನೊಬ್ಬರು ಒಳಗೊಳ್ಳುವುದಾದರೂ ಹೇಗೆ? ಒಟ್ಟಿಗೆ ಸೇರದೇ ಬೇಲಿಯನ್ನು ಕಿತ್ತೊಗೆಯಲಾದೀತೆ? ಈ ಕಾಲದ ಕಥನ ಇವುಗಳನ್ನೆಲ್ಲ ಒಳಗೊಳ್ಳಬೇಕಾಗಿದೆ.

ಅಂತರವನ್ನು ಮೀರಲು ಕನಸಿದ, ಕನಸಿನ ಸಾಕಾರಕ್ಕೆ ಶ್ರಮಿಸಿದ, ಮೌಢ್ಯತೆಯ ಅಂಧಕಾರವನ್ನು ಮೀರಲಾಗದ ಅಸಹಾಯಕತೆಯ, ಬೇಲಿಗಳಿಲ್ಲದ ಬಯಲ ಬೆರಗನ್ನು ಪರಿಚಯಿಸುವ, ಈಗಷ್ಟೇ ನಡೆದ ಹಸಿಹಸಿ ಕ್ರೌರ್ಯವನ್ನು ಪ್ರತಿಭಟಿಸುವ ಅನೇಕ ಕಥನಗಳನ್ನು ಇಲ್ಲಿ ಹೆಣೆಯಲಾಗಿದೆ.

ಸಹಬಾಳ್ವೆಗಾಗಿ ಹಂಬಲಿಸುವ, ಸಹಜೀವಿಗಳ ಕಷ್ಟಕ್ಕೆ ಮಿಡಿಯುವ, ದೂರವನ್ನೂ ಹತ್ತಿರವಾಗಿಸಿಕೊಳ್ಳಲು ತಹತಹಿಸುವ, ಸಂವಾದದ ಭಿನ್ನ ಸಾಧ್ಯತೆಗಳನ್ನು ತೆರೆದಿಡುವ ಮತ್ತು ಭಿನ್ನವನ್ನೂ ಒಳಗೊಳ್ಳಬೇಕಾದ ಬಗೆಯನ್ನು ತಿಳಿಸುವ  ಅನೇಕ ಬರಹ ಮತ್ತು ಸಂದರ್ಶನಗಳನ್ನು  ಆಯ್ದು  ಪೋಣಿಸಲಾಗಿದೆ. 

ಇದ್ದಕ್ಕಿದ್ದಂತೆ ತನ್ನ ಅಸ್ಮಿತೆಯನ್ನು ಕಳಕೊಂಡು ಸೃಷ್ಟಿಯಾದ ಶೂನ್ಯವನ್ನು ಮೀರುವ ಬಗೆ, ಮನುಷ್ಯಲೋಕದ ಭಾಗವೇ ಆದ ಪ್ರಕೃತಿಯನ್ನು ಗಮನಿಸುವ ಮತ್ತು ಪ್ರೀತಿಸುವ ಬಗ್ಗೆ ತಿಳಿಯದೇ ವಿಶ್ವವ್ಯಾಪಿಯಾಗುವುದಾದರೂ ಹೇಗೆ? ಇವೆಲ್ಲವೂ ನಮ್ಮೊಳಗಿನ ಅಂತರವನ್ನು ಮೀರುವ ಹೆಜ್ಜೆಗಳಾಗಿಯೇ ನನಗೆ ಭಾಸವಾಗುತ್ತಿವೆ.

ಇಂದಿನ ಯುವಜನಾಂಗ ನಮ್ಮ ಕಣ್ಣ ಮುಂದಿನ ಬೆಳಕು.  ಕನಸ ರೆಕ್ಕೆ ಕಟ್ಟಿಕೊಂಡು ಹಾರಲು ಹೊರಟ ಅವರ ಜಾಡನ್ನು ಮತ್ತು ಹಾಡನ್ನು ಕೇಳಿಸಿಕೊಳ್ಳಬೇಕಾದುದು ಇಂದಿನ ತುರ್ತು. ಅಂತರವನ್ನು  ಜಿಗಿಯುವ ಹಾದಿಯಲ್ಲಿನ ಅವರ ಹೆಜ್ಜೆಯ ಗುರುತುಗಳು ಇಲ್ಲಿವೆ. ಅವರ  ಬರಹಗಳು ಭವಿಷ್ಯದ ಬಗ್ಗೆ ಭರವಸೆಯನ್ನು ಮೂಡಿಸುತ್ತವೆ. ಜೊತೆಯಾದುದಕ್ಕೆ ಆ ಎಲ್ಲ ಜೀವಗಳಿಗೆ ಮಣಿಯುವೆ. ಬೇಲಿಗಳಿಲ್ಲದ ಸ್ವಚ್ಚಂದ ಬಯಲೊಂದು ಭವಿಷ್ಯದಲ್ಲಿ ಅವರಿಗೆ ಒದಗಲೆಂದು ಹಾರೈಸುವೆ.

ಈ ಕಾಲಕಥನವನ್ನು ಪೋಣಿಸುವಲ್ಲಿ ನನ್ನೊಂದಿಗೆ ಜೊತೆಯಾದ ಡಾ. ಎಂ. ಜಿ. ಹೆಗಡೆ, ಉದಯ ಗಾಂವಕಾರ, ಅಭಿಲಾಷಾ ಎಸ್, ಗಜಾನನ ಮಹಾಲೆ, ರಮೇಶ ಗುಲ್ವಾಡಿ, ಸಂವರ್ಥ ಸಾಹಿಲ್, ಅಹಲ್ಯಾ ಬಲ್ಲಾಳ್, ಗಣೇಶ ಹೊಸ್ಮನೆ, ಜಾಹಿಧಾ, ಅನುಷ್ ಶೆಟ್ಟಿ, ಕೆ. ಪಿ ಲಕ್ಷ್ಮಣ, ಪ್ರಕಾಶ್ ಶೆಣೈ, ಧೀರಜ್ ಬೆಳ್ಳಾರೆ, ಕಾವ್ಯ ಮನಮನೆ, ಆದಿತ್ಯಪ್ರಸಾದ ಪಾಂಡೇಲು, ಕೀರ್ತಿ ಬೈಂದೂರು, ನಭಾ ಇವರೆಲ್ಲರಿಗೂ ಋಣಿಯಾಗಿದ್ದೇನೆ. ಅವಧಿಯ ಬಳಗಕ್ಕೆ ಧನ್ಯವಾದಗಳು. ಒಪ್ಪಿಸಿಕೊಳ್ಳಿ ಇದು ಈ ಕಾಲದ ಹಾಡು……

                                                

‍ಲೇಖಕರು Avadhi

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. ಲಲಿತಾ ಸಿದ್ಧಬಸವಯ್ಯ

  ಸುಧಾ, ನಿಮ್ಮ ಸಂಪಾದಕತ್ವದ ಈ ಭಾನುವಾರದ ಸಂಚಿಕೆ ಚೆನ್ನಾಗಿ ಬಂದಿದೆ. ಎಲ್ಲಾ ಲೇಖನ, ಸಂದರ್ಶನಗಳನ್ನು ಓದಿದೆ. ಸೊಗಸಾಗಿವೆ.

  ಪ್ರತಿಕ್ರಿಯೆ
 2. Sudha adukala

  ಮೇಡಂ……
  ನಿಜಕ್ಕೂ ಧನ್ಯಳಾದೆ. ಅಂಚಿನ ಕಥನಗಳು ಮತ್ತು ಯುವಮನಸ್ಸುಗಳನ್ನು ಪ್ರಜ್ಞಾಪೂರ್ವಕವಾಗಿ ಆಯ್ದುಕೊಂಡ ನನ್ನ ಪ್ರಯತ್ನ ಧನ್ಯವಾಯಿತು. ತುಂಬಾ ಆಭಾರಿ ನಿಮ್ಮ ಬೆನ್ತಟ್ಟಿಗೆ….
  ಪ್ರಣಾಮಗಳು ಅಮ್ಮಾ

  ಪ್ರತಿಕ್ರಿಯೆ
 3. SUDHA SHIVARAMA HEGDE

  ಓಹ್!
  ಧನ್ಯವಾದಗಳು ಅಮ್ಮಾ.
  ನಿಮ್ಮ ಪ್ರತಿಕ್ರಿಯೆಯೇ ದೊಡ್ಡ ಬೆನ್ತಟ್ಟು
  ಪ್ರಜ್ಞಾಪೂರ್ವಕವಾಗಿ ಹೆಣೆದ ಅಂಚಿನ ಕಥನಗಳು ಮತ್ತು ಯುವ ಮನಸ್ಸುಗಳ ಸಂಚಿಕೆ ಧನ್ಯತೆ ಪಡೆಯಿತು ನಿಮ್ಮ ಪ್ರತಿಕ್ರಿಯೆಯಿಂದ…..
  ಶರಣು

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ SUDHA SHIVARAMA HEGDECancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: