ಬೇಂದ್ರೆಯವರ ಜೊತೆ ವಸಂತ ದಿವಾಣಜಿ

ಬೇಂದ್ರೆಯವರ ಸಂಪರ್ಕಕ್ಕೆ ಬಂದ ವಸಂತ ದಿವಾಣಜಿ :

ನಿರೂಪಣೆ: ಪ್ರಹ್ಲಾದ ದಿವಾಣಜಿ

ವಸಂತ ಅನಂತ ದಿವಾಣಜಿಯವರ ಹುಟ್ಟು ಹಬ್ಬದ ನೆನಪಿಗೆ (ಫೆಬ್ರುವರಿ ೧೫ ೧೯೩೦)

ಸೊಲ್ಲಾಪುರದ ನೀಲನಗರದ ಚಾಳೊಂದರಲ್ಲಿ ಬೇಂದ್ರೆಯವರು ವಾಸಿಸುತ್ತಿದ್ದರು. ೧೯೪೪ರ ಫೆಬ್ರುವರಿ ತಿಂಗಳ ಮಧ್ಯಾನ್ಹ ಅವರ ಮನೆಗೆ ಮಧ್ಯ ವಯಸ್ಸಿನ ಒಬ್ಬರು ಹದಿನಾಲ್ಕು ವರುಷದ ಹುಡುಗನನ್ನು ಕರೆದುಕೊಂಡು ಬಂದರು. ಹಿರಿಯರು ಧೋತರ, ಕೋಟು, ಗಾಂಧಿ ಟೊಪ್ಪಿಗೆಯನ್ನು ಧರಿಸಿದ್ದರು. ಜೊತೆಯಲ್ಲಿ ಕರೆದುಕೊಂಡು ಬಂದ ಹುಡುಗನ ವೇಷವೋ ನಗು ಬರುವಂತಿತ್ತು. ಹುಡುಗನ ಅಳತೆಗೆ ಮೀರಿದ ಧೋತರ, ಅಂಗಿ, ತಲೆಗೊಂದು ರುಮಾಲು. ಬಹಳ ಸಂಕೋಚದಿAದ ಹೊರಗಿನ ಕೋಣೆಯಲ್ಲಿ ಬೇಂದ್ರೆಯವರ ಕರೆಗೆ ಕಾಯುತ್ತಾ ಕುಳಿತರು. ಅವರನ್ನು ತುಂಬಾ ಕಾಯಿಸಲಾರದೇ ಬೇಂದ್ರೆಯವರು ಕರೆಕಳುಹಿಸಿದರು. ಹುಡುಗನ ವೇಷ ನೋಡಿ ಬೇಂದ್ರೆಯವರ ಮುಖದ ಮೇಲೆ ಮುಗುಳು ನಗೆ.

“ಬರ‍್ರಿ ಬರ‍್ರೀ ನಿಮ್ಮ ಪರಿಚಯ ಆಗಲಿಲ್ಲ?”

“ಏನಿಲ್ಲ ಹೀಂಗ… ಸುಮ್ಮನ ನಿಮ್ಮನ್ನು ನೋಡ್ಬೇಕಂತ ನನ್ನ ಮಗ ಹಟ ಹಿಡಿದ ಅದಕ ಧೈರ್ಯ ಮಾಡಿ ಕರಕೊಂಡು ಬಂದೆ” ಎಂದರು ಆ ಹಿರಿಯರು. ಬೇಂದ್ರೆಯವರು ಹುಡುಗನನ್ನ ನಖ ಶಿಖಾಂತ ನೋಡಿ ನಗತಾ “ಯಾಕೋ ತಮ್ಮಾ ಎಲ್ಲಾ ಬಿಟ್ಟ ನನ್ನ್ ನೋಡ್ಲಿಕ್ ಬಂದೀ? ಹುಡುಗರು ತಾವಾಗಿ ಕೇಳಿ ಬರೂದು ಅಪರೂಪ. ನಿನಗ್ಯಾಕೆ ಈ ಹುರುಪಾ?” ಎಂದರು.

“ನೀವು ಬರೆದ ಕವಿತಾ ನನಗ ಭಾಳ ಸೇರತಾವ್ರೀ. ಊರು ಬಿಟ್ಟು ಸೊಲ್ಲಾಪುರಕ ಹೋಗೋದೆಂದ ಕೂಡ್ಲೇ ಭಾಳ ಸಂತೋಷ ಆಯತ್ರೀ. ನಿಮ್ಮನ್ನ್ ನೋಡ್ಲೀಕ ಸಿಗ್ತದಾ ಅಂತ ಅದಕ್ ಬಂದೇವ್ರೀ” ಹುಡುಗನ ಅಪರೂಪದ ಆಸಕ್ತಿ ನೋಡಿ ಬೇಂದ್ರೆಯವರಿಗೆ ಆಶ್ಚರ್ಯ.

“ಹೌದಾ? ನಿಮ್ ಊರು ? ಏನು ಹೆಸರು?”

“ಊರು, ದೇವರಗೆಣ್ಣೂರ್ರೀ.. ಹೆಸರು ವಸಂತ”

“ವಸಂತಾ, ಬರೀ ನನ್ನ ಹೆಸರೊಂದೇ ಗೊತ್ತದನೋ ಅಥವಾ ನನ್ನ್ ಕವಿತಾನಾರೂ ಏನಾರ ಓದಿಯೋ?

“ಕವಿತಾ ಬಾಯಿಪಾಠ ಅವಾರೀ”

“ಹಂಗಾರೆ ಅನ್ನಪಾ ಕೇಳೂಣೂ”

ಹುಡುಗನ ಕವಿತಾ ಜ್ಞಾನ ಬಹುಶಃ ‘ಪಾತರಗಿತ್ತಿ ಪಕ್ಕ’ಕ್ಕಿಂತ

ಮುಂದ ಬೆಳೆದಿರಲಿಕ್ಕಿಲ್ಲ ಎನಿಸಿತು ಬೇಂದ್ರೆಯವರಿಗೆ. ಸ್ಪಷ್ಟ ಶುದ್ಧ ಉಚ್ಚಾರ, ಕಾವ್ಯ ವಾಚನದ ರೀತಿ ಬೇಂದ್ರೆಯವರಿಗೆ ಹುಡುಗನ ಬಗ್ಗೆ ಆಸಕ್ತಿ ಹುಟ್ಟಿಸಿತು. ‘ಸಖೀಗೀತ’ ಕೇಳಿದ ಮೇಲಂತೂ ಆಶ್ಚರ್ಯವಾಯಿತು.

“ವಸಂತ ಈಗ ನೀನು ಬಂದದ್ದು ಗೊತ್ತಾಯಿತು. ಆದ್ರ ಹೀಂಗ್ ಯಾಕೆ ಅರಿವೀ ಹಾಕ್ಕೋಂಡಾನ ಇವ? ಕರಡೀ ಕುಣಿಸ್ಲಾಕೆ ಹುಡುಗನ್ನ ಕರಕೊಂಡು ಹೊಂಟೀರೇನು?” ಎಂದು ವಸಂತನ ತಂದೆಯವರಿಗೆ ನಗುತ್ತಾ ಕೇಳಿದರು. ತಂದೆಯವರು ಇದ್ದುದನ್ನು ಹೇಳಿದರು.

“ಮುಲ್ಕಿ ಪರೀಕ್ಷೆ ಮುಗಿಸ್ಯಾನ್ರೀ, ನಾವು ಊರ ಬಿಡಬೇಕಾತು. ಆರ್ಥಿಕ ಸ್ಥಿತಿ ಅಷ್ಟಕ್ಕಷ್ಟೇ, ಮಿಲ್‌ನಾಗ ಕ್ಲಾರ್ಕ್ ಇದ್ದೀನಿ. ಐದು ಮಕ್ಕಳು, ಇವನೇ ಹಿರಿಯಂವಾ, ೨೮ ರೂಪಾಯಿ ಸಂಬಳದ ಸಂಸಾರ. ಇವನಿಗೆ ಕನ್ನಡ ಸಾಲಿ ಮಾಸ್ತರಾಂತ ಒಂದು ನೌಕರಿ ಸಿಕ್ಕರಾ ಸಹಾಯ ಆಗ್ತದಾ..”

ಬೇಂದ್ರೆಯವರಿಗೆ ಕಲ್ಪನೆಗೆ ಬಂದಿತು. “ಹುಡುಗ ಚುರುಕಾಗಿದ್ದಾನ. ಶಿಕ್ಷಣ ನಿಲ್ಲೂದು ಬ್ಯಾಡಾ, ಮೊದಲು ಅವನ ಅಳತೀಗೆ ತಕ್ಕ ಅಂಗಿ ಚೊಣ್ಣ ಕೊಡಿಸ್ರೀ.. ಈ ವರ್ಷ ಹಾಳಾಗ್ಬಾರದು”

“ಸಾಲಿ ಫೀ ಕೊಡ್ಲೀಕ ಆಗೂದಿಲ್ಲ ಆದ್ರ ನಿಮ್ಮ್ಮಿಂದ ಆರ್ಥಿಕ ಸಹಾಯ ಕೇಳಲಿಕ್ಕ ಬಂದಿಲ್ಲ. ಏನಾರೆ ನೌಕರಿ ಸಿಕ್ಕರಾ.. ಇವನಿಗೆ?” ಎಂದು ಸಂಕೋಚದಿಂದ ಹೇಳಿದರು ತಂದೆ.

ಬೇಂದ್ರೆಯವರು ಅವರನ್ನು ತಡೆದು, “ಫೀಸಿನದು ಏನಾರೆ ವಿಚಾರ ಮಾಡೂಣು” ಎಂದು ನೆರೆಯಲ್ಲೇ ಇದ್ದ ಅಣ್ಣಪ್ಪ ಕಾಡದಿ ಹೈಸ್ಕೂಲ್ ಹೆಡ್ ಮಾಸ್ತರ್ ಎಲಜಾ ಅವರನ್ನು ಕರೆಸಿಕೊಂಡರು.

“ಅಣ್ಣಾ ಹೇಳಿ ಕಳಿಸಿದ್ದರೀ?”

“ಹೂಂ..ಎಲಜಾ ಇವರು ದಿವಾಣಜಿ ಅಂತ ಹೇಳಿ. ಇವನು ಇವರ ಮಗ ವಸಂತ ಹುಡುಗ್ ಚುರುಕಿದ್ದಾನ. ಹೀಂಗೀAಗ ಅದಾ..ಅವನಿಗೆ ನಿಮ್ಮ ಹೈಸ್ಕೂಲನ್ಯಾಗ ಅಡ್ಮಿಷನ್ ಕೊಡಬೇಕು ನೋಡ್ರಿ”

“ಅಣ್ಣಾ ಫೆಬ್ರುವರಿ ಮುಗೀತಾ ಬಂತು ಏಪ್ರಿಲ್‌ದಾಗೆ ಪರೀಕ್ಷೆ. ಫೆಬ್ರುವರಿಯಾಗೆ ಕೂಡೋ ಹಂಗಿಲ್ಲ.”

“ಎಲಜಾ..ನನಗಾ ಅದೆಲ್ಲಾ ಗೊತ್ತಿಲ್ಲೋ. ರೂಲ್ ನೀನು ನೋಡ್ಕೋ. ಹುಡುಗನಿಗೆ ವರ್ಷ ಹಾಳಾಗ್ಬಾರದು. ನಾಳೆ ಬರ‍್ತಾನ ಸ್ಕೂಲಿಗೆ, ಅಡ್ಮಿಷನ್ ಮಾಡಿಸು. ಇನ್ನೊಂದು ಮಾತು ಅವರಿಗೆ ಹಣ ಕಟ್ಟಲಿಕ್ಕೆ ಆಗಲಿಕ್ಕಿಲ್ಲ. ನಾವಿಬ್ಬರೂ ಕೊಡೋಣು ಈ ವರುಷ. ಮುಂದಿನ ವರುಷ ನೋಡೋಣಂತ”

“ಆಗಲೀ ಅಣ್ಣಾ ನಿಮ್ಮ ಮಾತು ಮೀರೋದಿಲ್ಲ”

“ಆಯ್ತು ಬರ್ರೀ, ವಸಂತ ನನ್ನ ಮನೀ ಬಾಗಿಲು ನಿನಗ ಯಾವಾಗ್ಲೂ ತೆರದರ‍್ತಾವ”

ಹುಡುಗನ ಅಡ್ಮಿಷನ್ ಆಯಿತು. ವರುಷ ಮುಗಿಯಿತು. ಅಂದಿನಿAದ ಪ್ರಾರಂಭವಾಯಿತು ವಸಂತನ ಬದುಕಿನಲ್ಲಿ ಹೊಸಬಗೆಯ ಶಿಕ್ಷಣ- ಹನ್ನೆರೆಡು ವರುಷ ಅವ್ಯಾಹತವಾಗಿ ಬೇಂದ್ರೆಯವರ ಸಾನಿಧ್ಯದಲ್ಲಿ. ಮುಂದೆಯೂ ಅವರಿರುವವರೆಗೆ (೧೯೮೧) ನಡೆಯಿತು.

ಶಾಲೆ ಫೆಬ್ರುವರಿಯಲ್ಲಿ ಪ್ರಾರಂಭವಾಯಿತು. ಅಂದಿನಿAದ ಬೆಳಿಗ್ಗೆ ಎದ್ದು ಬೇಂದ್ರೆಯವರ ಮನೆ, ಅಲ್ಲಿನಿಂದ ಶಾಲೆ ಮತ್ತೆ ಸಂಜೆ ಶಾಲೆ ಬಿಟ್ಟ ಕೂಡಲೇ ಬೇಂದ್ರೆಯವರ ಮನೆ ಆನಂತರ ತಡವಾಗಿ ರಾತ್ರಿ ಮನೆ ಸೇರುವುದು ಹೀಗೆ ನಡೆಯಿತು ವಸಂತನ ದಿನಚರಿ. ರಸ್ತೆಯಲ್ಲಿ ಗಂಟೆ ಗಟ್ಟಲೆ ಇಬ್ಬರೂ ಮಾತನಾಡುತ್ತಾ ಹೋಗುತ್ತಿದ್ದರು. ಕೆಲವೊಮ್ಮೆ ಮಳೆ ಬಂದಾಗಲೂ ಛತ್ರಿ ಬಗಲಲ್ಲೆ ಇದ್ದರೂ ಅದನ್ನು ತೆರೆಯಲು ಮರೆತು ನೆನೆದುಕೊಂಡೇ ಹೋಗುತ್ತಿದ್ದರು. “ಛತ್ರಿ ತೆರೆಯೋದ ಮರ್ತೇವಲ್ಲ” ಎಂದು ಆಮೇಲೆ ಇಬ್ಬರಿಗೂ ಜ್ಞಾನೋದಯವಾಗುತ್ತಿತ್ತು. ಮಾತಿನಲ್ಲಿ ಅಷ್ಟು ಮಗ್ನ, ಸಣ್ಣ ಹುಡುಗನ ಮೇಲೆ ಅಷ್ಟು ಪ್ರೀತಿ!! “ನಡಕೋತ ನಡಕೋತ ವಸಂತಣ್ಣ ಸಾಲೀ ಕಡೆಗೆ ತಿರುಗಿದರೆ, ಬೇಂದ್ರೆಯವರು ದಯಾನಂದ ಕಾಲೇಜಿನ ಕಡೆಗೆ…..

ಬೇಂದ್ರೆಯವರ ಮಕ್ಕಳಾದ ಪಂಡಿತ, ವಾಮನ, ಮಂಗಳ ಅವರೊಂದಿಗೆ ವಸಂತನೂ ಮನೆಯ ಮಗನಾದ. ಬೇಂದ್ರೆ ದಂಪತಿ, ಅಣ್ಣ ಮತ್ತು ಆಯಿಯಾದರು. “ವಸಂತ ಬಂದ್ನಾ? ಅವನ್ನ ಅಡಗಿ ಮನೀಯೊಳಗ ಬರ್ಬೇಡ ಅಂತ ಹೇಳು” ಎಂದು ಒಳಗಿನಿಂದ ಆಯಿ ಚೀರುತ್ತಿದ್ದರು. ಯಾಕೆಂದರೆ ಅಡುಗೆ ಮನೆಯಲ್ಲೇ ಇದ್ದ ಬಚ್ಚಲೊಳಗೆ ಇಳಿದು ವಸಂತಣ್ಣ, ಆಯಿ ಕೂಡ ಮಾತಾಡ್ಕೋತಾ ತುಂಬಿ ಇಟ್ಟಿದ್ದ ನೀರನ್ನೆಲ್ಲಾ ಖಾಲಿ ಮಾಡ್ತಿದ್ದ. ಆಯಿ ಕೂಡ ಅಷ್ಟು ಮಾತು!”……

ಈ ಸಣ್ಣ ವಯಸ್ಸಿಗೇ ಬೇಂದ್ರೆಯವರ ವ್ಯಕ್ತಿತ್ವ ವಸಂತಣ್ಣನ ಮೇಲೆ ಮಾಡಿದ ಪ್ರಭಾವ ಅಷ್ಟಿಷ್ಟಲ್ಲ. “ಅನಿರ್ಬಂಧವಾಗಿ ಬೆಳೆ” ಎಂದು ಬೇಂದ್ರೆಯವರು ಹರಸಿದ್ದನ್ನು ಅಣ್ಣ ಯಾವಾಗಲೂ ಹೇಳುತ್ತಿದ್ದರು.

ಗಿರಿಜಾ ಶಾಸ್ತ್ರಿ ಅವರ ಆತ್ಮೀಯ ಲೇಖನ ಈ ಹಿಂದೆ ‘ಅವಧಿ’ಯಲ್ಲಿ ಪ್ರಕಟವಾಗಿದ್ದು ಅದನ್ನು ಓದಲು ಇಲ್ಲಿ ಕ್ಲಿಕ್ಕಿಸಿ 

‍ಲೇಖಕರು avadhi

February 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ತುಂಬಾ ಚಿನ್ನಾದ ಬರಹ. ಖುಷಿಯಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: