ಕುಸುಮಾ ಆಯರಹಳ್ಳಿ
ಮೇಲೆ ಹೋದರೆ ಸ್ವರ್ಗ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಆ ದಾರಿಯಂತೂ ಸ್ವರ್ಗದ ದಾರಿಯೇ. ಚಾಮುಂಡಿ ಬೆಟ್ಟದ ಹೆಚ್ಚು ಜನರು ಓಡಾಡದ ಹಿಂದಿನ ರಸ್ತೆ. ಮೈಸೂರಿನಿಂದ ನಮ್ಮೂರಿಗೆ ಹೋಗಲು ಆ ದಾರಿ ಹಾದೇ ಬರಬೇಕು. ಮೈಸೂರಿನ ಅರಿವು ಶಾಲೆಗೆ ಹೋಗುವ ಮಗನ ವ್ಯಾನು ಬೆಟ್ಟದ ಬುಡದ ಹೊಸಹುಂಡಿಯವರೆಗೂ ಬರುತ್ತದೆ. ಅಲ್ಲಿಂದ 9 ಕಿಲೋಮೀಟರ್ ದೂರದಲ್ಲಿರುವ ನಮ್ಮ ತೋಟಕ್ಕೆ ಅವನನ್ನು ಕರೆದುಕೊಂಡು ಬರಬೇಕು.
ನಮ್ಮೂರಿನ, ಪಕ್ಕದೂರಿನ ಯಾರಾದರೂ ಒಮ್ಮೊಮ್ಮೆ ಸಿಗುವುದುಂಟು, ಯಾರೂ ಸಿಗದಿದ್ದಾಗ ನಾನೇ ಹೋಗುವುದು. ಹಾಗೆ ಅವನನ್ನು ಕರೆದುಕೊಂಡು ಬರುವಾಗಲೋ, ಸಿಟಿಗೆ ಹೋಗಿ ಬರುವಾಗಲೋ ಆ ಸ್ವರ್ಗದ ದಾರಿಯಲ್ಲಿ ಒಂದೆರಡು ಕಿಲೋಮೀಟರು ಮೇಲೆ ಹೋಗಿ ಕೂತು ಬರುವುದು ರೂಢಿ. ಅದರಲ್ಲೂ ಸಂಜೆಯ ಹೊಂಬಣ್ಣದ ಸಮಯವಾದರಂತೂ ಅದು ಈ ಭೂಲೋಕದಲ್ಲಿಯೇ ಇರುವ ಬೇರೆಯ ಲೋಕ.
ಇವತ್ತೇನಾಯ್ತಪಾ ಅಂದ್ರೆ.. ನಾಕು ಗಂಟೆಗೆ ನಾ ಅಲ್ಲಿದ್ದೆ. ವ್ಯಾನು ಬರಲು ಸಮಯವಿತ್ತು. ಸಂಜೆಯ ಹೊಂಬಣ್ಣ ಸುರಿಯುತ್ತಿತ್ತು. ಸ್ವರ್ಗದ ದಾರಿ ಕರೆಯಿತು. ಹೋಗದೇ ಇರೋಕಾಗತ್ತಾ ಹೇಳಿ ಮತ್ತೆ. ಹೋದೆ. ಇವತ್ತು ಇನ್ನೂ ಒಂದೆರಡು ಕಿಲೋಮೀಟರ್ ಮುಂದೆಯೇ ಹೋದೆ. ಈ ಹಾಳಾದ ಫೇಸ್ಬುಕ್ಕು ನಮ್ಮನ್ನು ಎಷ್ಟು ಹಾಳುಮಾಡಿ ಬಿಸಾಕಿದೆ ಅಂದ್ರೆ ಸುಮ್ಮನೇ ಕಣ್ಣಲ್ಲಿ ನೋಡಿ, ಎದೆಗಿಳಿಸಿಕೊಳ್ಳಬೇಕಾದ ಆ ರಮ್ಯವೂ ಆಧ್ಯಾತ್ಮಿಕವೂ ಆದ ಸ್ಥಿತಿಯಲ್ಲೂ ‘ಒಂದ್ ಪೋಟೋ ತಗದು ಪೇಸ್ಬುಕ್ಕಲ್ ಹಾಕದ್ರೆಂಗೆ?’ ಅಂತ ಯೋಚಿಸಿತ್ತು ಮನಸ್ಸು. ಚಿರತೆಯೋ, ಕೆಟ್ಟಮನುಷ್ಯರೋ ಬಂದರೆ ತಕ್ಷಣ ಓಡಲು ಗಾಡಿ ಸ್ಟಾರ್ಟ್ನಲ್ಲಿಟ್ಟುಕೊಂಡೇ ನಿಂತು ನೋಡುವ ನಾನು, ಈ ಹಾಳಾದ ಫೋಟೋ ಸಲುವಾಗಿ ಗಾಡಿ ಆಫ್ ಮಾಡಿ, ಕೆಳಗಿಳಿದೆ. ಅಷ್ಟರಲ್ಲಿ ಒಂದು ಬಿಳೀಕಾರು ತನ್ನಷ್ಟಕ್ಕೆ ಬರುತ್ತಿದ್ದುದು ನನ್ನನ್ನು ನೋಡಿ ನಿಧಾನವಾಯಿತು.

ಸುತ್ತಮುತ್ತ ಯಾರಂದರೆ ಯಾರೂ ಇಲ್ಲ. ಆ ಕಾರೊಳಗೆ ನಾಕೈದು ಜನ ಲೋಫರ್ ಗಳಿದ್ದರೆ? ಈಗ ನಾನು ತಕ್ಷಣ ನಾನು ಮಾಡಬಹುದು? ಹಾಗೆ ಯೋಚಿಸುತ್ತಾ ಹಣೆಯಲ್ಲಿ ಬೆವರಾಡುವ ಹೊತ್ತಿಗೆ ಕಾರು ಹತ್ತಿರ ಬಂದು ನಿಂತೇಬಿಟ್ಟಿತ್ತು. ನಿಜವಾಗಿಯೂ ಅದರೊಳಗೆ ನಾಕೈದು ಹುಡುಗರಿದ್ದರು. ಒಬ್ಬ ಇಣುಕಿ “ಯಾಕ್ ಮೇಡಂ, ಏನಾದ್ರೂ ಪ್ರಾಬ್ಲಮ್ಮಾ.. ಹೆಲ್ಪ್ ಬೇಕಾ?’ ಅಂದ. ನಾನು ಏನೂ ಇಲ್ಲ ಅಂದೆ. “ಶ್ಯೂರ್?..” ಅಂದ “ಹುಂ” ಅಂದೆ. ಅವರು “ಸರಿ ಮೇಡಂ, ಹುಷಾರು, ಬೈ” ಅಂದು ಸಾಧ್ಯವಾದಷ್ಟೂ ನಿಧಾನವಾಗಿ ತಿರುವಿನವರೆಗೂ ತಿರುಗಿ ನೋಡಿ ರಕ್ಷಣೆ ಕೊಟ್ಟು ಹೋದರು. ಮುಂದಿನ ಇಪ್ಪತ್ತು ನಿಮಿಷದಲ್ಲಿ ಇನ್ಯಾವುದೋ ಟೂ ವೀಲರು, ಇನ್ನೊಂದು ಭಕ್ತರ ತುಂಬಿದ ಬಸ್ಸು ಬಂತಷ್ಟೆ.
ಫೋಟೋ ತೆಗೆಯುತ್ತಿದ್ದೆ. “ಮಳ್ಳೇ..ನಿನ್ನ ಕ್ಯಾಮೆರಾ ನನ್ನ ಸೌಂದರ್ಯವನ್ನು ಹಿಡಿಯಬಲ್ಲುದೇ?” ಅಂತ ರಸ್ತೆಯೂ, ಅಕ್ಕಪಕ್ಕದ ಮರಗಳೂ ನನ್ನನ್ನು ಆಡಿಕೊಂಡು ಕಿಸಕಿಸಾಂತ ನಕ್ಕಂಗಾಯ್ತು. ಆದರೂ ಬಿಡದೇ ಫೊಟೋ ತೆಗೆಯುವ ಜಿದ್ದಿಗೆ ಬಿದ್ದೆ. ಅಷ್ಟರಲ್ಲಿ ಇನ್ನೊಂದು ಕಾರು. ಅದೂ ನಿಧಾನವಾಯ್ತು. ಆದರೆ ಮುಂದೆ ಕೂತಿದ್ದವರು ಹಿರಿಯರಾಗಿದ್ದರು. ಹಾಗಾಗಿ ಸ್ವಲ್ಪ ಧೈರ್ಯ ಬಂತು. ಕುಟುಂಬದವರನ್ನೆಲ್ಲ ಕರೆದುಕೊಂಡು ತಾಯಿಯ ದರ್ಶನಕ್ಕೆ ಹೊರಟಿದ್ದ ಅವರು, ಕಿಟಕಿಯಿಂದ ಮುಖ ತೂರಿಸಿ “ಇಲ್ಲೆಲ್ಲ ಒಬ್ಳೇ ನಿಂತ್ಕಂಡ್ ಫೋಟೋ ಗೀಟ ತೆಗೀಬೇಡವ್ವಾ.. ರೇಪ್ ಗೀಪ್ ಆಯ್ತವೆ. ಮನೆಗೋಗು” ಅಂದರು. ಅವರ ಭಾಷೆ ತೀರಾ ಒರಟಾಗಿತ್ತು. ಆದರೆ ಕಾಳಜಿ ಪ್ರಾಮಾಣಿಕವಾದುದೇ ಆಗಿತ್ತು. ಅದೇ ಸಮಯಕ್ಕೆ ಬಂದ ಇನ್ನೊಂದು ಕಾರಿಂದ ಯಾರೋ “ಹೇಳಿ ಸಾರ್ ಸರ್ಯಾಗ್ ಬುದ್ದಿ ಹೇಳಿ” ಅಂತ ಒಂದು ಮಾತೆಸೆದು ಹೋದರು.
ಸಂಜೆ ನಿಜಕ್ಕೂ ಸೊಗಸಾಗಿತ್ತು. ನೋಡಲು ಕಣ್ಣಿತ್ತು ಮನಸ್ಸಿತ್ತು ಆದರೆ… ಇನ್ಯಾರೋ ಬಂದು ಇನ್ನೇನೋ ಬುದ್ದಿಮಾತು ಹೇಳುವುದನ್ನು ಕೇಳಲು ನಿಜಕ್ಕೂ ಕಿರಿಕಿರಿಯಾಗಿತ್ತು.
ಇದನ್ನೋದುತ್ತಿರುವ ನೀವು ತಕ್ಕಮಟ್ಟಿಗೆ ಒಳ್ಳೆಯವರಾಗಿದ್ದರೆ ಖಂಡಿತಾ ನಿಮಗೂ ಅವರ ಬುದ್ದಿಮಾತುಗಳಲ್ಲಿ ತಪ್ಪಿಲ್ಲ ಅನಿಸಿರುತ್ತದೆ. ನಾನೂ ಅವರನ್ನು ದೂರುತ್ತಿಲ್ಲ. ಇಲ್ಲಿ ಎರಡು ತರದ ಜನರಿದ್ದಾರೆ. ಹೀಗೆ ಕಾಳಜಿ ಮಾಡುವ ನಿರುಪದ್ರವಿಗಳು ಮತ್ತು ಹೇಯ ಎಸಗುವ ನಿಕೃಷ್ಟ ಮನುಷ್ಯರು. ಕಾಳಜಿ, ಕ್ರೌರ್ಯ ಎರಡೂ ಎರಡು ತುದಿಗಳು. ನನಗೆ ಆ ಜಾಗದಲ್ಲಿ ಬೇಕಾದ್ದು ಎರಡೂ ಆಗಿರಲಿಲ್ಲ. ನನ್ನದೇ ಜಾಗದಲ್ಲಿ ಒಬ್ಬ ಹುಡುಗ ನಿಂತಿದ್ದರೆ? ಗಾಡಿ ಸೈಡಿಗೆ ಹಾಕಿ ಅಡ್ಡಡ್ಡ, ಉದ್ದುದ್ದ ರಸ್ತೆ ಮೇಲೆ ಮಲಗಿ ಫೋಟೋ ತೆಗೆದುಕೊಂಡಿದ್ದರೂ ಯಾರೇನೂ ಹೇಳದೇ ಹೋಗುತ್ತಿದ್ದರು. ಅಲ್ಲಿ ಕರಣೆಯೂ ಇರುತ್ತಿರಲಿಲ್ಲ ಕ್ರೌರ್ಯವೂ.

ಅವರವರ ಪಾಡಿಗೆ ಅವರವರ ದಾರಿ ನೋಡ್ಕಂಡ್ ಹೋಗುತ್ತಾ, ಅವನನ್ನು ಅವನ ಪಾಡಿಗೆ ಬಿಡುತ್ತಿದ್ದರು. ನನ್ನನ್ನೇಕೆ ನನ್ನ ಪಾಡಿಗೆ ಬಿಡುವುದಿಲ್ಲ ನೀವು? ಇವಳಿಗೆ ರಕ್ಷಣೆ ಕೊಡಬೇಕು ಅಂತಲೋ, ಅಯ್ಯೋ ಪಾಪ ಅಂತಲೋ ಅನಿಸುವುದು ಕೂಡ ನನ್ನ ಪಾಡಿಗೆ, ನನ್ನ ಹಾಡಿಗೆ ನನ್ನನ್ನು ಬಿಡದ ಹಗ್ಗಗಳು. ಜೋಗಿ ತಮ್ಮ ಪುಚ್ಚೆ ಕಾದಂಬರಿಯಲ್ಲಿ ಬರೆದ “ಒಂಟಿಯಾಗಿ ಬದುಕುವುದು ಕೂಡ ಒಂದು ಘನತೆ” ಎಂಬ ಸಾಲೊಂದು ಕಾಡುತ್ತಲೇ ಇದೆ. ಬೆಟ್ಟದ ದಾರಿಯಲ್ಲಿ ಒಬ್ಬಳೇ ಹೋಗಬೇಕು ಘನತೆಯಿಂದ ಅನಿಸುತ್ತದೆ. ನನ್ನ ಆ ಘನತೆಯನ್ನು ಅತ್ಯಾಚಾರವೆಂಬ ಕ್ರೌರ್ಯವೂ.. ಕಾಳಜಿಯ, ಎಚ್ಚರದ ಮಾತುಗಳೂ ಒಟ್ಟೊಟ್ಟಿಗೇ ಕಿತ್ತುಕೊಳ್ಳುತ್ತವೆ ಅನಿಸುತ್ತದೆ.
ಇದನ್ನೋದಿ, “ಹೋಗೋಗು, ಅನುಭವ್ಸು ಹೋಗು. ಆಗ್ ಗೊತ್ತಾಗತ್ತೆ” ಅನ್ನಬಹುದು ನನ್ನ ಗಂಡನೂ ಅವನಂತವರೂ. ಹ್ಞಾಂ..ಹೌದು. ಖಂಡಿತಾ ಅನುಭವಿಸಬೇಕು. ಬೆಟ್ಟದ ಸಂಜೆಯ ಸೊಬಗನ್ನು, ಅಲ್ಲಿ ಸಿಕ್ಕುವ ಕಡು ಏಕಾಂತವನ್ನು, ಅದರ ಪರಮಸುಖವನ್ನು, ಭಾಷೆಯಲ್ಲಿ ಹೇಳಲು ಬಾರದ ಹೊಸದೊಂದು ಅನುಭೂತಿಯನ್ನು. ಆದರೆ ಯಾಕೆ ಅನುಭವಿಸಬೇಕು ಕ್ರೌರ್ಯವನ್ನು, ಕಾಳಜಿಯ ಕಿರಿಕಿರಿಯನ್ನೂ? ಯಾವ ತಪ್ಪಿಗೆ?
ಚಂದ ಬರದೀಯವಾ