ಬೆಂಬಿಡದ ದಾಹ

**

ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು, ನಿದ್ದೆಗಣ್ಣಲ್ಲೇ ಗಡಿಯಾರ ನೋಡಿದೆ ಹನ್ನೆರಡು ಇಪ್ಪತ್ತು. ಕಿಟಕಿಯ ಕರ್ಟೈನ್ ಸರಿಸಿ ನೋಡಿದೆ, ಮೇಲೆ ದಟ್ಟವಾಗಿ ಕವಿದುಕೊಂಡು ಆಮೆ ವೇಗದಲ್ಲಿ ತೇಲುತ್ತಿರುವ ಮೋಡಗಳು, ಜುಲೈ ತಿಂಗಳಿನ ಮೂರನೇ ಶನಿವಾರದ ಮಧ್ಯಾಹ್ನ, ಆಷಾಢದ ನೆಪವಿಲ್ಲದಿದ್ದರೆ ಸುಚಿತ್ರ ಬೆತ್ತಲಾಗಿ ನನ್ನ ತೆಕ್ಕೆಯಲ್ಲಿರುತ್ತಿದ್ದಳು, ಇಡೀ ರೂಮು ತುಂಬಿಕೊಳ್ಳುವ ಅವಳ ಮೈವಾಸನೆ, ಗೋಡೆ ಗೋಡೆ ತಗುಲಿ ಪ್ರತಿಧ್ವನಿಸುವ ಅವಳ ಸಿಹಿ ಮೋನಿಂಗುಗಳು, ಅವಳು ಕೇಳುತ್ತಿದ್ದ ಎದೆ ಮೇಲಿನ ಲವ್ ಬೈಟೂಗಳು. ಅವಳಿಗೆ ಕಾಲ್ ಮಾಡಬೇಕು ಅನಿಸ್ತು. ಈ ಮಧ್ಯಾಹ್ನದಲ್ಲಿ ನಿದ್ದೆ ಹೊಡೆಯುತ್ತಿರುವ ಅವಳ ಮುದ್ದು ಮುಖ ನೆನಪಾಗಿ ಸಂಜೆ ಮಾಡಿದರೆ ಆಯ್ತು ಎಂದು ಎದ್ದೆ. ಅಡುಗೆ ಮನೆ ಹೊಕ್ಕು ಕಿಟಕಿ ತೆಗೆದೇ, ಆಗಲೇ ಮಳೆ ಜಿಣುಗುಟ್ಟುತ್ತಿತ್ತು. ಒಂದು ವಾರದಿಂದ ಸೂರ್ಯನಿಗೆ ರಜೆ, ಬೇಸಿಗೆಗೆ ಬಂದ ಮಕ್ಕಳಂತೆ ಮೋಡಗಳ ಆಟ, ಹೇಳದೆ ಕೇಳದೆ ಬೇರೆ ಬೇರೆ ಸ್ಥರದಲ್ಲಿ ಸುರಿವ ಮಳೆ, ಆಷಾಢದ ಕಾವಿನ ಗಾಳಿ, ಕಾಡುವ ಒಂಟಿತನ.

ಎರಡು ದಿನಗಳ ಹಿಂದೆ ದೀವಾರ್ ಹೋಟೆಲಿನ ರೂಫ್ ಟಾಪಿನಲ್ಲಿ ಕುಡಿದ ಬಡ್ ವೈಸರ್ ಟವರಿನ ಕಿಕ್ಕು ನೆನಪಾಯ್ತು. ಬಿಯರ್ ಕುಡಿಯಬೇಕು ಅನಿಸಲು ಶುರುವಾಯ್ತು. ಒಳಗಿನಿಂದ ಒಮ್ಮೆಗೆ ಮೂಡಿದ ದಾಹ. ಹಾಗೆ ನೋಡಿದರೆ ನನಗೆ ಬಿಯರ್ ಎಂದರೆ ಆಗುತ್ತಿರಲಿಲ್ಲ. ಬಿಯರ್ ಬಿಟ್ಟು ಬೇರೆಲ್ಲ ನಶೆಯ ದ್ರವ್ಯಗಳೆಲ್ಲ ಹೊಟ್ಟೆಯೊಳಗೆ ಸರಾಗವಾಗಿ ಹೋಗಿ ಮೆದುಳಿನ ನರಗಳಿಗೆ ಕಿಕ್ ಕೊಡುತ್ತವೆ. ವಿಸ್ಕಿಯಿಂದ ಕುಡಿಯಲು ಶುರು ಮಾಡಿ, ಬೇರೆಲ್ಲ ಅಲ್ಕೊಹಾಲಿಗೂ ಹೃದಯ ತೆರೆದುಕೊಂಡು ಗಂಟಲಿಗಿಳಿಸಿಕೊಳ್ಳುತ್ತಿದ್ದೆ, ಆದರೆ ಬಿಯರ್ ಮಾತ್ರ ಯಾಕೋ ಆಗುತ್ತಿರಲಿಲ್ಲ, ಅದರ ವಾಸನೆಗೆ ವಾಕರಿಕೆ ಬಂದುಬಿಡುತ್ತಿತ್ತು. ಜೀವನದಲ್ಲಿ ಮೊದಲ ಸಲ ಎರಡು ದಿನಗಳ ಹಿಂದೆ ಕ್ಲೈಂಟ್ ಮೀಟಿಂಗ್ ಗೆ ಎಂದು ಅರ್ಧ ದಿನ ಹಾಳಾಗಿ ತಲೆ ಸಿಡಿಯುವಾಗ ಕ್ಲೈಂಟ್ ಆದ ರಾಗಿಣಿಯೇ ‘ಲೆಟ್ಸ್ ಹಾವ್ ಡ್ರಿಂಕ್ಸ್’ ಎಂದು ದೀವಾರ್ ಟೆರೇಸಿಗೆ ಎಳೆದುಕೊಂಡು ಹೋಗಿದ್ದಳು, ಅವಳಿಗೆ ಬಿಯರ್ ಹೊರತಾಗಿ ಬೇರೆ ದ್ರವ್ಯಗಳು ರುಚಿಸದು, ನನಗೆ ಬಿಯರ್ ಬಿಟ್ಟು ಎಲ್ಲ ದ್ರವ್ಯಗಳು ರುಚಿಸುತ್ತವೆ, ಅವಳಿಗೆ ಬಿಯರ್ ಅನ್ನು ಬಾಟಲಿಯಲ್ಲಿ ಕುಡಿದು ಅಭ್ಯಾಸವಿಲ್ಲ ಏನಿದ್ದರೂ ಮಗ್ಗು, ವಿಸ್ಕಿ ಗ್ಲಾಸುಗಳೇ ಬೇಕು. ತುಂಬಾ ಹೊತ್ತು ಬೇರೆ ಬೇರೆ ಸಾಧ್ಯತೆಗಳನ್ನು ಯೋಚಿಸಿ ಕೊನೆಗೆ ಕುಡಿಯದಿದ್ದರೂ ಪರವಾಗಿಲ್ಲ ಕಂಪನಿ ಕೊಡೋಣವೆಂದು ಸುಮ್ಮನೆ ಕೂತೆ.

ಅವಳು ಬಡ್ ವೈಸರ್ ಡ್ರಾಟ್ ಬಿಯರ್ ಟವರಿನಲ್ಲಿ ತರಿಸಿದಳು, ಬೆಳ್ಳನೆಯ ನೊರೆ ಹೊತ್ತುಕೊಂಡು ಬಂದು ಕೂತಿತ್ತು. ಆ ಟವರಿಗೆ ನಲ್ಲಿ ಬೇರೆ ಇತ್ತು, ವೈಟರ್ ನಲ್ಲಿಯಲ್ಲಿ ನೀರು ಹಿಡಿಯುವಂತೆ ಬಿಯರ್ ಹಿಡಿದು ಇಬ್ಬರಿಗೂ ಕೊಟ್ಟ, ನಾನು ಬೇಡವೆಂದರೂ ಬಿಡಲಿಲ್ಲ ‘ಟ್ರೈ ಮಾಡಿ, ಆಗದೆ ಇದ್ರೆ ಬಿಡಿ’ ಎಂದಳು. ಟ್ರೈ ಮಾಡಲು ಮೊದಲ ಸಿಪ್ ಎತ್ತಿದವನು ನಿಲ್ಲಿಸಿದ್ದೆ ಟವರ್ ಮುಗಿದಾಗ, ನಾಲ್ಕೈದು ಸಲ ಬಗ್ಗಿಸಿಕೊಂಡು ಕುಡಿದು, ಎರಡು ಸಲ ಉಚ್ಚೆ ಮಾಡಿ ಬಂದು ಕುಳಿತಿದ್ದಾಯ್ತು, ತೇಗು ಬೇರೆ, ಆದರೂ ಮೊದಲ ಸಲ ಬಿಯರ್ ನ ರುಚಿ ನಾಲಗೆಗೆ ಸಿಕ್ಕಿತ್ತು. ತೆಳುವಾದ ಕಿಕ್ ತೇಲಿಸಿಕೊಂಡು ಹೋಗುತ್ತಿತ್ತು. ಇಬ್ಬರೂ ತೇಲುಗಣ್ಣಿನಲ್ಲೇ ಬಾಯ್ ಹೇಳಿ ಮನೆಗೆ ಹೊರಟಿದ್ದಾಯ್ತು. ಟವರಿನಲ್ಲಿ ಬಂದು ಕೂತ, ತೆಳು ಹಳದಿಯ, ಬುರ್ರನೆ ನೊರೆಯ, ಒಗರು ಒಗರಿನ ಬಿಯರ್ ಹನಿಗಳು ನಾಲಗೆಗೆ ಬೇಕು ಅನಿಸತೊಡಗಿತು, ಕುಡಿಯದಿದ್ದರೆ ಗತಿ ಇಲ್ಲವೆನ್ನುವಷ್ಟು ದಾಹದ್ದು, ನಾಭೀಯಾಳದಿಂದ ಎದ್ದು ಕುಳಿತು ಕೇಳುತ್ತಿರುವ ದಾಹ.

ಆದರೆ ಒಂಟಿಯಾಗಿ ನಾನೆಂದೂ ಕುಡಿದವನಲ್ಲ, ಒಂಟಿಯಾಗಿ ಕುಡಿದರೆ ನನಗೆ ಭ್ರಮೆಗಳು ಇನ್ನಿಲದ್ದಂತೆ ಕಾಡುತ್ತವೆ, ಕುಡಿದು ಸತ್ತ ಅಪ್ಪ ಬಂದು ಕೆನ್ನೆಗೆ ಬಾರಿಸುವಂತೆ ಭ್ರಮೆಗಳು, ಒಂದು ಸಲ ಒಬ್ಬನೇ ಕುಡಿದು ಕೂತಾಗ ರೂಮಿನ ಬಾಗಿಲನ್ನು ದಬದಬ ತಟ್ಟಿದ್ದ ಅಪ್ಪ, ಸತ್ತು ಫೋಟೋದಲ್ಲಿ ನಗುತ್ತಿದ್ದ ಅಪ್ಪ, ಬಾಗಿಲು ತೆರೆದಾಗ ಹಲ್ಕಡಿದು ಕೋಪದಿಂದ ಕುಣಿಯುತ್ತಿದ್ದ, ಬಾಗಿಲು ತೆರೆದೊಡನೆ ನನ್ನ ತಲೆ ಹಿಡಿದು ದರದರ ಎಳೆದು ರೂಮಿನ ಗೋಡೆಗೆ ನೂಕಿ, ಕೆನ್ನೆ ಕೆನ್ನೆಗೆ ಬಾರಿಸಿದ್ದ, ಕುಡಿದ ಕಿಕ್ ಇಳಿದೆ ಹೋಗಿತ್ತು, ಹಲ್ಕಡಿಯುತ್ತಲೇ ವಾಪಸು ಹೋಗಿದ್ದ, ಖಂಡಿತ ಸತ್ಯವಾದ ಘಟನೆಯಲ್ಲ ಆದರೂ ಆ ದಿನವಾದ ಭ್ರಮೆಗೆ ಮತ್ತೆ ಒಂಟಿಯಾಗಿ ಕುಡಿಯಲು ಭಯವಾಗುತ್ತಿತ್ತು, ಅಪ್ಪನ ಏಟುಗಳು ನರಕಕ್ಕೆ ದಾರಿಗಳು. ಸುಚಿತ್ರ ಇದ್ದಿದ್ರೆ ಇಬ್ಬರು ವೈನ್ ಬದಲು ಬಿಯರ್ ಕುಡಿದು ಹಾಸಿಗೆ ಮೇಲೆ ನಾಗರ ಮಿಲನ ಮಾಡಬಹುದಿತ್ತು, ಅವಳು ನನ್ನ ಮೇಲೆ ಏರಿ ಸುಖವನ್ನು ದೋಚುವ ಅವಳ ಮುಖದಲ್ಲಿನ ಕಿಕ್ಕು ಹೊಟ್ಟೆಯೊಳಗೆ ಇರುವ ಬಿಯರ್ ಕಿಕ್ ಸೇರಿ ಸ್ವರ್ಗದ ಬಾಗಿಲನ್ನು ಸ್ವಲ್ಪ ಸರಿಸಬಹುದಿತ್ತು.

ಪ್ರತಿ ಮಧ್ಯಾಹ್ನ ಅವಳು ಮಲುಗುತ್ತಾಳೆ, ಕಾಲ್ ಮಾಡಬೇಕಿತ್ತು. ಸಂಜೆಯಾಗಲಿ ಕಾಲ್ ಮಾಡಿದರೆ ಆಯ್ತು ಎಂದು ಸುಮ್ಮನಾದೆ. ಸದ್ಯ ಕುಡಿಯಲು ಸಿಗಬಹುದಾದ ಉಳಿದುಕೊಂಡ ಶಾಲೆಯ ಗೆಳೆಯರು, ಕಾಲೇಜಿನ ಗೆಳೆಯರು, ಆಫೀಸಿನ ಗೆಳೆಯರು, ಕಸಿನ್ನುಗಳ ಲಿಸ್ಟ್ ಮಾಡತೊಡಗಿದೆ. ನಾನಾಗಿ ನಾನು ಕುಡಿಯಲು ಯಾರನ್ನು ಕರೆದವನಲ್ಲ. ಈಗ ಸದ್ಯದ ದಾಹಕ್ಕೆ ಕುಡಿಯದಿದ್ದರೆ ಸತ್ತೇ ಹೋಗುವೆ ಎನ್ನುವಷ್ಟು ದಾಹ. ಟೆಸ್ಟೋರಿನ್ ಉಕ್ಕಿ ಎದೆ ಮೇಲೆ ಕುಳಿತು ಡೋಪಮೈನ್ ದಾಹಕ್ಕೆ ದಣಿದು ಸುರತಿ ಇಲ್ಲ ಸ್ವರತಿಯಿಲ್ಲದೆ ಗತಿಯಿಲ್ಲ ಎನ್ನುವಷ್ಟು ಕಾಡುತ್ತಲ್ಲ ಕಾಮ ದಾಹ. ಅಷ್ಟೇ ಗಾಢತೆ ಹೊತ್ತುಕೊಂಡು ನನ್ನ ಪಕ್ಕದಲ್ಲೇ ಹಾಸಿಗೆ ಮೇಲೆ ಕುಳಿತನಂತೆ ಇತ್ತು ಬಿಯರ್ ದಾಹ ಮದುವೆ ಆದಮೇಲೆ ಕ್ಲೋಸ್ ಫ್ರೆಂಡುಗಳೆಲ್ಲ ಆಗಾಗ ಎಣ್ಣೆ ಹಾಕಲು ಕರೆದು ಅವರಿಗೆ ನಾನು ಬೇರೆ ಬೇರೆ ರೀತಿಯ ಸುಳ್ಳುಗಳನ್ನು ಹೇಳಿ ಹಾಸಿಗೆ ಮೇಲೆ ಹೊರಳಾಡುತ್ತಿದ್ದ ಕಾರಣ ಅವರು ನನ್ನ ಕರೆಯೋದೆ ಬಿಟ್ಟುಬಿಟ್ಟಿದ್ದರು, ಎಣ್ಣೆ ಹೊಡೆಯಲೆಂದೇ ಮಾಡಿಕೊಂಡ ವಾಟ್ಸ್ಯಾಪ್ ಗುಂಪಿನಲ್ಲಿ ಅವರು ಸಿಟ್ಟಿಂಗ್ ಹಾಕುವ ದಿನ ಕುಡಿದು ಚಿತ್ ಆದ ಫೋಟೋಗಳು ಕುಣಿತಗಳು ಸುಮ್ಮನೆ ನೋಡುತ್ತಿದ್ದೆ ಹೊರತು ರಿಯಾಕ್ಟ್ ಕೂಡ ಮಾಡಲು ಹೋಗುತ್ತಿರಲಿಲ್ಲ, ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತೆ ಆ ಗ್ರೂಪಿನಲ್ಲಿದ್ದೆ.

ಮೊದಲು ನೆನಪಾಗಿದ್ದೆ ಆಫೀಸಿನ ಆತ್ಮಾರಾಮ. ಆತ್ಮಾರಾಮ ಬಲು ಘಾಟಿನ ವಿಸ್ಕಿ ಅನ್ನು ನೀರು ಕೂಡ ಸೇರಿಸಿಕೊಳ್ಳದೆ, ಮಂಜುಗಡ್ಡೆ ಮಾತ್ರ ಸೇರಿಸಿಕೊಂಡು ನಿಧಾನಕ್ಕೆ ಅಲ್ಲಾಡಿಸುತ್ತ ಕುಡಿಯುತ್ತಾನೆ, “ಕುಡುದ್ರೆ ಹಿಂಗ್ ಕುಡೀಬೇಕು, ಅದ್ ಬಿಟ್ಟು ಒಗರು ಟೇಸ್ಟ್ ಇಷ್ಟ ಆಗೋಲ್ಲ ಘಾಟು ಅಂತ ಡವ್ ಮಾಡಿಕೊಂಡು ಅದಕ್ಕೆ ನೀರು ಕೊಕೊ ಕೋಲಾ ಪೆಪ್ಸಿ ಸೋಡಾ ಏನೇನೋ ಬೆರಿಸಿ ಹಾಳ್ ಮಾಡಿ ಕುಡಿತರಲ್ರೆಲೆ ಥೂ ನಿಮ್ಮ” ಎಂದು ನಮ್ಮ ಕಲಬೆರೆಕೆ ಕುಡಿತವನ್ನು ಬೈಯ್ಯುತ್ತಿದ್ದ, ಅವನ ಮಾತು ಕೇಳಿ ಕೇಳಿ ಸೋಡಾ ಸಾಫ್ಟ್ ಡ್ರಿಂಕ್ಸಿಗೆ ಕೈ ಮುಗಿದು ನೀರು ಮಾತ್ರ ಬೆರೆಸಿ ಕುಡಿಯುವಷ್ಟು ಪ್ರಗತಿ ಸಾಧಿಸಿದ್ದೆ, ಬಿಯರ್ ಗೆ ಏನೂ ಸೇರಿಸುವ ಅವಶ್ಯವೇ ಇಲ್ಲವಲ್ಲ, ಖಂಡಿತ ಬರ್ತಾನೆ ಎಂದು ಕಾಲ್ ಮಾಡಿದೆ, ಪಿಕ್
ಮಾಡಲಿಲ್ಲ, ಮೆಸೇಜು ಹಾಕಿದೆ, ನಾಲ್ಕು ಗಂಟೆ, ಸೋಡಾ ಫ್ಯಾಕ್ಟರಿ ಫಿಕ್ಸ್ ಮಾಡ್ಕೋ ಎಂದಷ್ಟೇ ಮೆಸೇಜು ಮಾಡಿದ್ದ. ನಾಲ್ಕು ಗಂಟೆಗೆ ಇನ್ನೂ ಮೂರು ಗಂಟೆ ಬಾಕಿ. ಒಳಗಿನಿಂದ ಕುದಿಯುತ್ತಿರುವ ಬಿಯರ್ ಹೀರುವ ದಾಹ, ಆತ್ಮಾರಾಮ ಏನಾದರೂ ಕುಡಿದು ಹಾಳಾಗಲಿ, ಬಾರಿಗೆ ಹೋದ
ಕೂಡಲೇ ಮೌಂಟನ್ ಇಲ್ಲ ಟವರ್ ಆರ್ಡರ್ ಮಾಡಿ, ಬಡ್ ವೈಸರಿನ ಒಗರು ಒಗರಿನ ಮಗ್ಗನ್ನು ಬಾಯಿಗೆ ಇಳಿಸಿಕೊಂಡು ಧನ್ಯನಾಗಬೇಕು ಎಂದು ಕನಸು ಕಾಣುತ್ತಲೇ ಹಾಸಿಗೆ ಮೇಲೆ ಕೂತಿದ್ದೆ.

ಮೂರು ಗಂಟೆ ಹೇಗೆ ಕಳೆಯೋದು ಗೊತ್ತಾಗದೆ, ಸಿಂಕಿನಲ್ಲಿದ್ದ ಪಾತ್ರೆಗಳಿಗೆ ವಿಮ್ ಝಳಪನ್ನು ತೋರಿಸಿದೆ, ಫ್ರಿಡ್ಜಿನಲ್ಲಿದ್ದ ಕೊಳೆತು ನಾರುತ್ತಿದ್ದರರೂ ತಣ್ಣಗಿದ್ದ ಹಳೆಯ ಸಾಂಬಾರುಗಳಿಗೆ ಮುಕ್ತಿ ಕಾಣಿಸಿದೆ, ವಾಷಿಂಗ್ ಮಷಿನ್ ಒಳಗೆ ಮತ್ತು ಅಕ್ಕ ಪಕ್ಕ ಅನಾಥವಾಗಿ ಬಿದ್ದಿದ್ದ ಬಟ್ಟೆಗಳನ್ನು ಲೋಡ್ ಮಾಡಿದೆ,ಗಮನ ಬೇರೆ ಕಡೆ ತೊಡಗಿಸಿಕೊಂಡರೂ ಇಡೀ ಮೆದುಳು ಸಂಜೆ ನಾಲ್ಕು ಗಂಟೆಗೆ ಹೀರುವ ಬಿಯರಿನ ಹನಿಗಳನ್ನೇ ಧೇನಿಸುತ್ತಿತ್ತು. ಹಳೆ ಹುಡುಗಿಯಂತೆ ಬಿಯರ್ ಸತಾಯಿಸುತ್ತಿತ್ತು. ಊಟ ಮಾಡಲು ಕೂಡ ಮನಸಾಗಲಿಲ್ಲ, ಕಿತ್ತಳೆ ಹಣ್ಣು ಬಿಡಿಸಿ ತಿನ್ನೋಣ ಅನಿಸಿತು, ಬಿಯರ್ ಹನಿಗಳಿಗೆ ಕಾಯುತ್ತಿದ್ದ ನಾಲಗೆಗೆ ಬೇರೆ ಏನೂ ತಾಕಿಸದೆ ಪವಿತ್ರವಾಗಿ ಇಟ್ಟುಕೊಳ್ಳೋಣ ಎನ್ನುವ ತಿಕ್ಕಲು ಹತ್ತಿಕೊಂಡಿತ್ತು, ನಾಲ್ಕು ಗಂಟೆಗೆ ಇನ್ನು ತೊಂಭತ್ತು ನಿಮಿಷಗಳು, ಮೂರೂವರೆಗೆ ಅಲಾರಾಂ ಇಟ್ಟು ಮಲಗಿಕೊಂಡೆ. ಕನಸಿನಲ್ಲಿ ಕಾರಿನಲ್ಲಿ ಒಂಟಿ ರಸ್ತೆಯಲ್ಲಿ ಹೋಗುತ್ತಿದ್ದೇನೆ, ದೂರದಲ್ಲಿ ಬಿಯರಿನ ಗುಡ್ಡ, ನಾಲಗೆಯಿಂದ ಹರಿಯುತ್ತಿರುವ ಜೊಲ್ಲು, ಆಕ್ಸಿಲೇಟರನ್ನು ಹುಚ್ಚನಂತೆ ಹೊತ್ತಿದೆ, ಕಾರು ನಿಯಂತ್ರಣ ಕಳೆದುಕೊಂಡು ಹೋಗಿ ಗುಡ್ಡಕ್ಕೆ ಬಡಿಯಿತು, ಬಿಯರಿನ ಗುಡ್ಡ ಕುಸಿಯಿತು, ಬಿಯರ್ ಪ್ರವಾಹಕ್ಕೆ ನಾನು ಕಾರು ತೇಲಿಕೊಂಡು ಕೊಚ್ಚಿ ಹೋಗುತ್ತಿದ್ದೆವು.

ಎದ್ದು ಕೂತರೆ, ಮೆಸೇಜಿನ ಸದ್ದು, ತೆಗೆದು ನೋಡಿದರೆ ಆತ್ಮಾರಾಮನ ಮೆಸೇಜು “ಸಾರಿ ಬ್ರೋ ಸ್ವಲ್ಪ ಬೇರೆ ಕೆಲಸ ಇದೆ ಬರಾಕ್ ಆಗ್ತಿಲ್ಲ”, ಆತ್ಮಾರಾಮ ಕೈ ಕೊಟ್ಟ, ಮತ್ತೆ ಒಂದಷ್ಟು ಹಳೆಯ ಹೊಸ ಸ್ನೇಹಿತರಿಗೆ ಬಿಯರ್ ಹೊಡೆಯೋಣ ಎಂದು ಈಮೊಜಿ ಸಮೇತ ಕಳಿಸಿದೆ, ಕೆಲವರು ಜೋಕ್ ಎನ್ನುವಂತೆ ನಕ್ಕಿ ಸುಮ್ಮನಾದರು, ಮಿಕ್ಕವರು ಅಲ್ಲಿದ್ದಿನಿ ಇಲ್ಲಿದ್ದೀನಿ ಇವತ್ತು ಬೇಡ ನಾಳೆ, ಮುಂದಿನ ವಾರ, ಮುಂದಿನ ತಿಂಗಳು ಹೀಗೆ ಹೇಳುತ್ತಾ ಹೋದರು. ಕುಡಿಯಲು ಒಂದು ಗಂಡು ದಿಕ್ಕಿಲ್ಲ ಎಂದು ನೆನಪಾಗಿ ಎದೆ ನೋವಾಯ್ತು, ದುಃಖವೊಂದು ಎದೆ ಮೇಲೆ ಕೂತುಕೊಳ್ತು,
ಇನ್ನೇನೋ ಅಳುವನು ಇದ್ದಾಗ ಆತ್ಮೀಯ ಗೆಳೆಯರು ಮಾಡಿಕೊಂಡ ಎಣ್ಣೆ ಹೊಡೆಯುವ ವಾಟ್ಸ್ಯಾಪ್ ಗ್ರೂಪಿನಲ್ಲಿ “ಇವತ್ತು ರಾತ್ರಿ ಏಳಕ್ಕೆ, ಸಂಕ್ರಾಂತಿ ಬಾರಿನಲ್ಲಿ ಸಿಟ್ಟಿಂಗ್” ಎಂದು ಮೆಸೇಜು, ಅದಕ್ಕೆ ಟಪಟಪ ಎಂದು ಥಂಬ್ಸ್ ಅಪ್ಪಿನ ಈಮೊಜಿ, ಮರಳುಗಾಡಿನಲಿನ ಓಯಸಿಸ್ ತರ ಆ ಮೆಸೇಜು ನನಗೆ ಕಾಣಿಸಿತು. ಆದರೆ ನಾನು ರಿಯಾಕ್ಟ್ ಮಾಡಲು ಆಗುತ್ತಿಲ್ಲ, ಕಳೆದ ಮೂರು ತಿಂಗಳಲ್ಲಿ ಇಂತಹ ಎಷ್ಟೋ ಸಿಟ್ಟಿಂಗುಗಳು ಅಲ್ಲಿ ಆಗಿವೆ, ಎಲ್ಲವನ್ನು ನಿರ್ಲ್ಯಕ್ಷಿಸಿದ ನಾನು ಮಾನ ಮರ್ಯಾದೆ ಬಿಟ್ಟು ಹೇಗೆ ಬರ್ತೀನಿ ಎನ್ನುವ ಮೆಸೇಜು ಹಾಕುವುದು. ಯೋಚಿಸುತ್ತ ಕೂತೆ. ಸುಚಿತ್ರಾಳ ಕಾಲ್ ಬಂತು ಐದು ಮೂವತ್ತೆಂಟಕ್ಕೆ, ಅದು ಇದು ಮಾತಾಯ್ತು, ಅವಳ ಸಕಲೇಶಪುರದಲ್ಲೂ ಜೋರು ಮಳೆ, ಇಲ್ಲಿ ಸೋನೇ ಮಳೆ, ಅವಳು ತುಟಿ ಕಚ್ಚುವೆ ಅಂದಳು, ನಾನು ಬಿಯರ್ ಹೀರುವೆ ಅಂದೆ, ಹಾಗೆ ಮಾತಾಡುತ್ತ ರಾತ್ರಿ ಸಿಟ್ಟಿಂಗ್ ಇದೆ ಹೋಗ್ತಾ ಇದ್ದೀನಿ ಎಂದೇ, ಅವರೆಲ್ಲ ಅವಾಗ ಕರಿದಾಗ ಡವ್ ಮಾಡಿ ಮನೇಲೆ ಇರ್ತಿದ್ದೆ ಎಂದು ನಕ್ಕಳು, ಸಿಟ್ಟು ಬಂದು ಸುಮ್ಮನೆ ಇದ್ದೆ, ಸರಿ ಹೋಗಿ ಬಾ ಎಂದಳು, ಲವ್ ಯು ಎಂದು ಹೇಳದೆ ಫೋನ್ ಇಟ್ಟೆ.

ಮೆಸೇಜು ಹಾಕಲೇಬೇಕಿನಿಲ್ಲ ಹೋಗಿ ಕೂತುಕೊಂಡರೆ ಆಯ್ತು, ಅವರಿಗೂ ಸರ್ಪ್ರೈಸ್ ಎಂದುಕೊಂಡೆ, ಮೂರು ತಿಂಗಳ ಮೇಲೆ ನಾಚಿಕೆ ಬಿಟ್ಟು ಹೋಗಿ ಕೂತರೆ ಅವರು ಅಣಕಿಸುವ ಮಾತುಗಳ ಪೆಟ್ಟು ಗೊತ್ತು, ಕಾಲು ಎಲ್ಯೋದು ಗೊತ್ತು, ಅದೆಲ್ಲ ಆಚೆಗೂ ಸ್ನೇಹವಂತೂ ಇದ್ದೆ ಇದೆ ಎಂದು ಸುಮ್ಮನೆ ಆದೆ, ಆಗಾಗ ಒಂದು ಥಂಬ್ಸ್ ಅಪ್ ಆದರೂ ಒತ್ತಬೇಕು ಅನಿಸಿತು. ಏಳು ನಲವತ್ತಕ್ಕೆ ಜೋಸೆಫ್ ‘ರೀಚ್ ಆದೆ ರೈಟ್ ಕಾರ್ನರ್ ಅದೇ ಪ್ಲೇಸ್’ ಎಂದು ಮೆಸೇಜು ಬಿಟ್ಟ, ನಾನು ಗೂಗಲ್ ಮ್ಯಾಪಿನಲ್ಲಿ ಮೂರು ಕಿಮಿ ದೂರ ಇರುವ ಆ ಬಾರಿನ ಫೋಟೋ ನೋಡುತ್ತಾ ರೈಟ್ ಕಾರ್ನರ್ ಎಲ್ಲಿದೆ ಎಂದು ನೋಡುತ್ತಿದ್ದೆ, ಇನ್ನೊಬ್ಬ ‘ಆನ್ ದಿ ವೇ’ ಎಂದ, ಮತ್ತೊಬ್ಬ ‘ಅರ್ಧ ಗಂಟೆ ಲೇಟು’ ಎಂದ, ಮತ್ತೊಬ್ಬ ‘ಸಿಗರೇಟು ಪ್ಲೀಸ್’ ಎಂದ, ಒಬ್ಬೊಬರು ಮೆಸೇಜು ಹಾಕಿದಾಗಲೂ ಅವರ ಮುಖ, ಮದುವೆ ಮುಂಚೆ ಸಿಟ್ಟಿಂಗುಗಳಲ್ಲಿ ನಕ್ಕ ಮಜಾ ಮಾಡಿದ ಅವರ ಜೊತೆ ಎಣ್ಣೆ ಹೊಡೆದ ಘಟನೆಗಳೆಲ್ಲ ನೆನಪಾಗಿ ಅಳುವೇ ಬಂದುಬಿಡ್ತು. ಎಂಟೂವರೆಗೆ ಹೋಗೋಣ ಎಂದುಕೊಂಡೆ. ಎಂಟಕ್ಕೆಲ್ಲ ಗ್ರೂಪ್ ಸೈಲೆಂಟ್ ಆಯ್ತು, ಮೆಸೇಜು ಹಾಕೋಡೋ, ಹೋಗಿ ಕೂರೋದೋ ಎಂದು ಒದ್ದಾಡುತ್ತ ಕೂತೆ, ಒಂದು ಟೀ ಶರ್ಟ್, ಶಾರ್ಟ್ಸ್ ಒಂದು ಜಾಕೆಟ್ ಹಾಕಿಕೊಂಡು ಸೋಫಾ ಮೇಲೆ
ಕೂತೆ, ನಿಮಿಷಗಳು ರೇಸಿಗೆ ಬಿದ್ದಂತೆ ಓಡುತ್ತಿದ್ದವು, ಬಿಯರ್ ಕುಡಿಯುವ ದಾಹ ಗಂಟಲಿನ ತುದಿಗೆ ಬಂದು ಕೂತಿತ್ತು, ಗ್ರೂಪ್ ಬೇರೆ ಸೈಲೆಂಟ್ ಆಗಿತ್ತು, ಸುಚಿತ್ರ ಬೇರೆ ‘ಹೋದ್ಯ ಎಲ್ಲಿದ್ಯಾ?’ ಎಂದು ಮೆಸೇಜು ಕಳಿಸುತ್ತಿದ್ದಳು, ತಲೆ ಸಿಡಿಯುತ್ತಿತ್ತು. ಹಾಳಾದ ಈಗೋ ಅಡ್ಡ ಬಂದು ಕೂತಿದೆ.

ಒಂಭತ್ತು ಇಪ್ಪತ್ತಾಯ್ತು, ಮಾನ ಮರ್ಯಾದೆ ಹೋದರೆ ಹೋಗಲಿ ಎಂದು ಯುಗಂಧರನಿಗೆ ‘ಇನ್ನೂ ಅರ್ಧ ಗಂಟೆ ಅಲ್ಲೇ ಇದ್ರೆ ನನಗೊಂದು ಸೀಟು ಮತ್ತೆ ಒಂದು ಗ್ಲಾಸ್ ಬಿಯರ್ ರಿಸರ್ವ್ ಮಾಡು ಮಾರಾಯ’ ಎಂದು ಮೆಸೇಜು ಹಾಕಿದೆ, ಕಾಫ್ಕನ “ನ್ಯಾಯದ ಬಾಗಿಲು” ಕತೆಯ ನಾಯಕನಂತೆ ಕ್ಷಣ ಕ್ಷಣ ಕಾಯುತ್ತ ಕೂತೆ, ಕತೆಯಲ್ಲಿನ ದ್ವಾರಪಾಲಕನಂತೆ ನನ್ನ ಸ್ವಾಭಿಮಾನ, ಈಗೋ ಎದ್ದು ನಿಂತಿತ್ತು, ಅರ್ಧ ಗಂಟೆ ಆದರೂ ಯುಗಂಧರನ ರಿಪ್ಲೆ ಇಲ್ಲ, ಸ್ನೇಹಿತರನ್ನು ಇಷ್ಟು ಬೇಗ ಕಳೆದುಕೊಂಡೆ ಎನ್ನುವ ದುಃಖಕ್ಕಿಂತ ಬಿಯರಿನ ಒಂದು ಹನಿ ಸೇರಲಿಲ್ಲವಲ್ಲ ಎನ್ನುವ ಸಂಕಟ, ಬೆಳಗಿನಿಂದ ಏನೂ ತಿನ್ನದೇ ಹೊಟ್ಟೆ ಬೆಂಕಿಯಾಗಿತ್ತು, ಯಾಗಕ್ಕೆ ಬಿಡುವ ಎಣ್ಣೆಯಂತೆ ನನ್ನ ದೇಹಕ್ಕೆ ಬಿಯರ್ ಬೇಕಿತ್ತು. ಹತ್ತೊವರೇ ಆಗಿ ಹೋಯ್ತು, ಇನ್ನೂ ಅಲ್ಲಿ ಹೋಗಿ ಕೂಡ ಪ್ರಯೋಜನ ಇಲ್ಲ, ಹೋಗಿ ಅಲಿ ಕಂಫರ್ಟ್ ಆಗಿ ಕುಡಿಯಲು ಅಸಾಧ್ಯ ಇಷ್ಟು ಹೊತ್ತಿಗೆ ಅವರೆಲ್ಲ ಡಿಂಗ್ ಆಗಿ ನನ್ನ ಮೇಲೆ ರಾಂಗ್ ಆಗುವ ಸಾಧ್ಯತೆಯೇ ಹೆಚ್ಚು. ಅಳು ಉಕ್ಕಿ ಬಂತು ಸುಚಿತ್ರಾಳಿಗೆ ಕಾಲ್ ಮಾಡಿ ಬೆಳಗಿನಿಂದ ಆಗಿದ್ದೆಲ್ಲ ಹೇಳಿದೆ, ಅವಳು ಮೊದಲು ನಕ್ಕಳು ಆಮೇಲೆ ನನ್ನ ಅಳು ನಿಜವೆಂದು ತಿಳಿದು ಸಮಾಧಾನ ಮಾಡಿದಳು, ಪಕ್ಕದಲ್ಲಿ ಬಾರಿದೆಯೆಲ್ಲ ಅಲ್ಲಿ ಹೋಗಿ ತಗೊಂಡ್ ಬಂದು ಕುಡಿ
ಅಂದಳು, ಸಮಾಧಾನ ಮಾಡಿದಳು.

ಅಳು ಒರೆಸಿಕೊಂಡು, ಮಳೆಯಲ್ಲಿ ನೆನೆಯುತ್ತ ಹೋಗಿ ನಾಲ್ಕು ಬಿಯರ್ ಬಾಟಲಿ ಹಿಡಿದುಕೊಂಡು ಮನೆಗೆ ಬಂದೆ, ಓಪನರಲ್ಲಿ ಮುಚ್ಚಳ ತೆಗೆದೇ, ಚಿಮ್ಮಿದ ನೊರೆಯ ಕಂಡು ಖುಷಿಯಿಂದ ಆನಂದಭಾಷ್ಪ ಹರಿದು ಹೋಯ್ತು, ವಿಸ್ಕಿ ಗ್ಲಾಸಿಗೆ ಬಿಯರ್ ಸುರುವಿಕೊಂಡೆ, ಇನ್ನೇನೋ ಬಾಯಿಗಿಡಬೇಕು ದಬದಬ ಬಾಗಿಲು ತಟ್ಟುತ್ತಿದ್ದಾರೆ. ಗ್ಲಾಸ್ ಕೈಯಲ್ಲಿ ಹಿಡುಕೊಂಡೆ, ಬಾಗಿಲು ತೆರೆಯದೆ ಪೀಪ್ ಹೋಲಿನಲ್ಲಿ ಯಾರು ಎಂದು ಇಣುಕಿ ನೋಡಿದೆ, ಹಲ್ಲು ಕಡಿಯುತ್ತ ಅಪ್ಪ ನಿಂತಿದ್ದ, ಕೈಲಿದ್ದ ಗ್ಲಾಸ್ ಕೆಳಕ್ಕೆ ಬಿತ್ತು, ತಲೆ ಸುತ್ತು ಬಂದಂತಾಗಿ ಆಸರೆಗೆ ಬಾಗಿಲು ಹಿಡಿಯಹೋಗುತ್ತಿದ್ದೆ, ಅದು ಸಿಗುತ್ತಲೇ ಇಲ್ಲ.

‍ಲೇಖಕರು Admin MM

July 29, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: