‘ಬೆಂಗ್ಳೂರ್ನಾಗೂ ಬೇಂದ್ರೆ’ ಫೋಟೋ ಆಲ್ಬಂ

ಮೌನೇಶ ಕನಸುಗಾರ 

ಹದಾ ಒಳಗ ಇಲ್ದ ತಮ್ಮಾ
ಪದಾ ಹೊರಗ ಬರೋದಿಲ್ಲ
ಕದಾ ತೆರೆಯೋದಿಲ್ಲ ಅಂತಃಕರಣ

ಇಂತಹದೊಂದು ಬೇಂದ್ರೆ ಕವಿತೆಯಿಂದ ಕಮಲ ಮೇಡಂ ಮಾತು ಶುರುಮಾಡಿ ಹೆಂಗರಳು ಇದ್ದರೆ ಮಾತ್ರ ಅಂತಃಕರಣ ಇರಲು ಸಾಧ್ಯ ಅನ್ನುವಲ್ಲಿಗೆ ಅಡಿಗರು ಬೇಂದ್ರೆ ಅವರಿಗೆ ಯುಗದ ವಾಣಿ ಎಂದದ್ದು ತಪ್ಪಲ್ಲ ಅನ್ನಿಸಿಬಿಡುವಷ್ಟು ನಮ್ಮನ್ನು ಬೇಂದ್ರೆ ರುಚಿಗೆ ಎದೆ ತೆರೆದುಕೊಳ್ಳುತ್ತದೆ! ಇಳಿದು ಬಾ ತಾಯೆ ಇಳಿದು ಬಾ ಇಂತಹದೊಂದು ದೊಡ್ಡ ಅಂತಃಕರಣದ ಹಾಡು ಕಮಲ ಮೇಡಂ ವಾಚಿಸುತ್ತಿದ್ದರೆ ಮೈಯ ನವಿರುಬಟ್ಟೆ ಸೆಟೆದು ನಿಂತು ಕಿವಿ ಧ್ವನಿಗೆ ಆತುಕೊಂಡಿದ್ದವು! ಅಂತಃಕರಣ ಇರೋದು ಹೆಣ್ಣಿನಲ್ಲಿ , ಆ ಹೆಣ್ಣಿನ ಮೂಲಕ ಗುರುತಿಸಿಕೊಂಡಿರುವ ಮೊದಲ ಕವಿ ಬೇಂದ್ರೆ ಅಂದಾಗ ಥಟ್ ಅಂತ ಆಶ್ಚರ್ಯ! ಹೌದಲ್ಲವೆ ಅಂಬಿಕಾತನಯದತ್ತ! ಈ ಹೆಂಗರಳು ಕಲ್ಪನೆ ಬಂದದ್ದೆ ಅರ್ಧನಾರೀಶ್ವರದಿಂದ! ಸಮಸಖಿಯಾಗಬೇಕೆ ಅಲ್ಲವಾ? ತಾಯಿ ಅನ್ನೋದು ಕಾವ್ಯದ ಮೂಲ ಸೆಲೆ ಇರೋದೇನೆ ಮಾತೃತ್ವದ ಶಕ್ತಿಯಲ್ಲಿ ಅಂತ ಬೇಂದ್ರೆ ತುಂಬಾ ನಂಬಿದವರು!

ನಿಂತ ನೆಲವೆಂದು ಕಡಿಲಾಕ , ಬಡಿಲಾಕ ,
ಒಡಿಲಾಕ ಒಡವಿ ಅಲ್ಲ ಮಗನೆ , ಉಸಿರಿದ್ದ ಒಡಲು!

ಹೀಗೆ ಬೇಂದ್ರೆ ಅವರು ಎಲ್ಲವನ್ನೂ ಜೀವ ತುಂಬಿ ಒಲವ ಸುರಿದು ನೋಡುತ್ತಿದ್ದರಿಂದ ಅಂತಃಕರಣ ಎನ್ನುವುದು ಹುಟ್ಟಾ ಬೆನ್ನಿಗಂಟಿ ಬಂದ ಸಾವಿನಷ್ಟೆ ಜೊತೆಯಾಗಿತ್ತೇನೊ ಅನ್ನಿಸಿಬಿಡುತ್ತದೆ! ಬೇಂದ್ರೆ ಅವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದು ನಾನು ಎನ್ನುವ ಕವಿತೆಯಲ್ಲಿ ಅದರೊಳಗೂ ತಾವು ಯಾರ ಮಗ ಎನ್ನುವದನ್ನು ಅದ್ಭುತವಾಗಿ ಸ್ಪಷ್ಟಪಡಿಸುತ್ತಾರೆ! ವಿಶ್ವಮಾತೆ , ಭೂಮಿತಾಯಿ , ಭಾರತ ಮಾತೆ ,ಕನ್ನಡತಾಯಿ , ಜನ್ಮ ಕೊಟ್ಟ ಅಂಬಿಕೆ ಹೀಗೆ ಐದೂ ಜನರನ್ನು ನೆನೆಯುವ ಬೇಂದ್ರೆ ಅಲ್ಲಿ ತನಗಿದ್ದ ಒಲವಿನ ಹೆಂಗರಳು ಬಿಚ್ಚಿದ್ದಾರೆ!

ಬೇಂದ್ರೆ…

ಬಾಲ್ಯದಲ್ಲಿದ್ದಾಗ ಅಚಾನಕ್ಕಾಗಿ ಹಳ್ಳದಲ್ಲಿ ಮುಳುಗುವಾಗ ತಾಯಿ ಅಂಬಿಕೆ ಕಚ್ಚೆ ಕಟ್ಟಿಕೊಂಡು ನೀರಿಗೆ ಹಾರಿ ಮಗುವನ್ನು ಉಳಿಸಿಕೊಳ್ಳುವ ಅಂತಃಕರಣದ ಘಟನೆಗೆ ಪೂರಕವಾದ ಸಾಲುಗಳನ್ನು ಬೆಂದ್ರೆ ಅವರು ಈ ರೀತಿಯಲ್ಲಿ ಬರೆಯುತ್ತಾರೆ. “ ಪಾತಾಳ ಕಂಡರೇನು , ಆ ತಾಯಿ ಬಿಡುವಳೇನು? ” ತಾಯಿ – ಹೆಂಡತಿ – ಮಗಳು – ಹೆಣ್ಣು ಎಲ್ಲವೂ ಒಂದೆ ಎಲ್ಲರಲ್ಲೂ ಅಂತಃಕರಣ – ಒಲವಿದೆ. ಹೆಣ್ಣು ಬೇರೆ ಅಲ್ಲ ತಾಯಿ ಬೇರೆ ಅಲ್ಲ ಎನ್ನುವುದನ್ನು ತುಂಬಾ ಅರ್ಥಪೂರ್ಣವಾಗಿ ಬೇಂದ್ರೆ ತಿಳಿಸಿಕೊಟ್ಟಿದ್ದಾರೆ!

ಹಾಸಾದ ಮಿಂಚಿನಿಂದ
ಬಿಸಿದ್ದ ಸೆರಗಿನಿಂದ
ಸೆಳೆದಂತೆ ಎರಡು ನೂಲು
ಉಳಿದಾವ ನಾಕು ಸಾಲು

ಕವಿತೆ ಎಲ್ಲೆಲ್ಲಿ ಹೇಗೆ ಹುಟ್ಟುತ್ತೆ.! ಅಲ್ಲವಾ ಆಶ್ಚರ್ಯ ಅನಿಸುವಷ್ಟು ಅದ್ಭುತ ಅಪರೂಪದ ಭಾವ ಬೇಂದ್ರೆ! ಹೀಗೆ ಒಂದೊಂದು ಕವಿತೆಯು ಒಂದೊಂದು ಸಾಲು ಸಹ ತಾಯಿಯ ಎದೆಯ ಶುದ್ಧ ಹಾಲಿನಷ್ಟೆ ಅಂತಃಕರಣ ಒಲವು ತುಂಬಿ ಉಣಬಡಿಸಿದ ಬೇಂದ್ರೆ ಅವರ ಈ ಸಾಲುಗಳನ್ನು ಮನದಟ್ಟಾಗುವಂತೆ ಕಮಲ ಮೇಡಂ ತಿಳಿಸಿಕೊಟ್ಟರು!

ಅಂತಃಕರಣ ಏನು ಅಂತ ಗೊತ್ತಾದ್ರೆ ಮಾತ್ರ ಒಲವು ಗೊತ್ತಾಗುತ್ತೆ! ಒಲವೆ ನಮ್ಮ ಜೀವನವನ್ನು ಪೋಷಿಸುವಂತದ್ದು! ಒಲವಿನ ಒಂದು ಕಿಡಿ ಹೊತ್ಕೊಂಡ್ರೆ ಇಡೀ ಜೀವಮಾನಕ್ಕೆ ಇಂಧನ ಅದು! ಅಂತ ಮೇಡಂ ಹೇಳುವಾಗ ಎದೆಯ ಮೂಲೆಯೊಳಗದೆಂತದೊ ರೋಮಾಂಚನ! ಹಾಡು ಹೃದಯದಲ್ಲಿ ಹುಟ್ಟಬೇಕಂದ್ರ ಒಲವಿನ ಒಲವನು ಒಟ್ಟಬೇಕು! ಎಷ್ಟು ಚೆಂದ ಹೇಳಿದಿರಲಾ ರಾಮ್ ಸನ್ ಬೇಂದ್ರೆ! ಕೊಡುವುದೇನು ಕೊಂಬುದೇನು? ಒಲವು , ಸ್ನೇಹ , ಪ್ರೀತಿ ಹೀಗೆ ಹೇಳುವ ಬೇಂದ್ರೆ ಇಡೀ ಭಾರತೀಯ ಕಾವ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಹೆಂಡತಿಯನ್ನು ಸಮಾನ ನೆಲೆಗೆ ತಂದು ನಿಲ್ಲಿಸಿದವರು!

ಬಾನಿಂದ ಬಾನಿಗೆ
ಹಾಡಿನ ತಾನೊಂದು
ಸಖಿ ಸಖೀ ಸಖಿ ಎಂದು ಕೂಗುತಿದೆ…!

ಬೇಂದ್ರೆ ಅವರ ಈ ಸಖಿ ಸಖೀ ಸಖಿ ಅನ್ನುವಂತ ಸಾಲನ್ನು ಕಮಲ ಮೇಡಂ ಹೇಳುತ್ತಿದ್ದರೆ. ನಿಜಕ್ಕು ಮೈಯಲ್ಲಾ ಕಿವಿಯಾಗಿ ಎದೆಯೆಲ್ಲಾ ಇಡಿಯಾಗಿ ಹಿಡಿ ಮಾಡಿ ಕೇಳಬೇಕೆನ್ನುವಷ್ಟು ಕುತೂಹಲ!

ನಾದಕ್ಕೆ ಹೊಸನಾದ, ವಾದದಲೆ ವಿನೋದ ಮತ್ತು ಕೆಸರ ತಾಗದ ತಾವರೆಯಲ್ಲಿ ತಂಗಿ ನೋಡು ಎನ್ನುವಂತ ಸಾಲುಗಳನ್ನು ಕಮಲ ಮೇಡಂ ಬೇಂದ್ರೆ ಅವರಿಗೇನೆ ಜುಗಲ್ ಬಂಧಿ ಅಂತ ಬರೆದದ್ದು ಅಧರಗಳ ಮೇಲೆ ಬೆರಳಿಟ್ಟು ಹಣೆಯ ಪಟ್ಟಿಯೆಡೆಗೆ ಹುಬ್ಬೇರಿಸಿ ನಿಬ್ಬೆರಗಾಗಿ ನೋಡುವಂತೆ ಮಾಡಿದ್ದು ತಪ್ಪಲ್ಲ!

ಇನ್ನುಳಿದಂತೆ ಕಾರ್ಯಕ್ರಮದೊಳಗೆ ಬೇಂದ್ರೆ ಕವಿತೆಗಳ ಹಾಡು, ಓದು, ಚರ್ಚೆ ಅವರ ಬದುಕು ಬರಹ ಎಲ್ಲವನ್ನು ಇಡಿಯಾಗಿ ಎದೆಯುಡಿತುಂಬಿತು! ಮಧ್ಯದೊಲ್ಲೊಂದು ಟೀ ಬ್ರೆಕ್ ಗೆ ಗಂಟಲು ಸರಿ ಮಾಡಿಕೊಂಡು ಹಾಡಿಗೆ ಕೊರಳ ಧ್ವನಿ ಸುರಿದ ಎಲ್ಲರಿಗೂ ಧನ್ಯ! ಇಡೀ ಸಖೀಗೀತವನ್ನು ಮತ್ತೆ ಮತ್ತೆ ಬೇರೆ ಆಯಾಮಗಳಲ್ಲಿ ಓದುವ ಕುತೂಹಲ ಹೆಚ್ಚಿಸಿದ್ದು ಈ ಸರತಿಯ ಸರಣಿ ಸಂಚಿಕೆ! ಜೊತೆಯಾದ ಎಂಬತ್ತಕ್ಕೂ ಹೆಚ್ಚಿನ ಜನರಿಗೂ ಇದಕ್ಕೆ ಮೂಲ ಸೆಲೆಯಾದ ರಾಜಕುಮಾರ ಮಡಿವಾಳರ ಅವರಿಗೂ ಜೊತೆಯಾಗಿ ಕೈ ಜೋಡಿಸಿದ ವಿವೇಕ ಅವರಿಗೂ ತುಂಬಾ ನೀಟಾಗಿ ನಿರೂಪಣೆಯನ್ನು ನಿಭಾಯಿಸಿಕೊಟ್ಟ ಸುಮಾ ರಮೇಶ ಅವರಿಗೂ ಚೆಂದದ ಫೋಟೊ ಹಿಡಿದುಕೊಟ್ಟ ವೆಂಕಟೇಶ ಮೂರ್ತಿ ಅವರಿಗೂ ಚಹಾ – ಕಾಫಿ – ಹಾಲು – ಬಿಸ್ಕತ್ – ಕೂರಲು ಹಾಸಿಗೆ ಎಲ್ಲವನ್ನೂ ತಂದ ಗೆಳೆಯರೆಲ್ಲರಿಗೂ ನನ್ನಿ…

ಅದೊಂದು ಹಸಿರ ಹಾಸಿನಲಿ ಹಸಿರ ಹೊದಿಕೆಯಲಿ ಬೇಂದ್ರೇ

ಹಸಿವಿನ ಮನಸುಗಳ ಸಮಾಗಮ.

ವಿಶಾಲ ಆರಾಧ್ಯ ಹಾಗೂ‌ ತಂಗಿ ಮಹಾದೇವಿ ಅವರಿಂದ ತಿಳಿದಿತ್ತು

ಮೌನೇಶ ಕನಸುಗಾರ ಮೂಲಕ ಇಂದು #ಬೆಂಗ್ಳೂರ‌್ನಾಗೂ

#ಬೇಂದ್ರೆ ಕಾರ‌್ಯಕ್ರಮ ಎಂದರೂ ಸರಿಯಾದೀತೋ‌ ಅಥವಾ

ಸಾಧನಕೇರಿಯ ಸಮ್ಮೋಹಕ್ಕೊಳಗಾದವರ ಸಮ್ಮೇಳನವೋ

ಅಂದತ್ತನ ಅಕ್ಷಾರಾಧಕರ ಅನುಬಂಧ ಎನ್ನ ಬಹುದೋ..

ಐತಿಹಾಸಿಕ ಕಬ್ಬನ್ ಉದ್ಯಾನದ ಹುಲ್ಲುಹಾಸಿನ ಮೇಲೆ..

ಬೇಂದ್ರೆಯವರ ಮನಸಿನಷ್ಟೇ ಹಸುರಿನ ಹುಲ್ಲಿನ ಮೇಲೆ

ಕುಳಿತ ಗಾನಗಾರುಡಿಗನ ಸಾಹಿತ್ಯದಲ್ಲಿ ಒಲವು

ಮತ್ತು ಅಂತಃಕರಣ ವಿಷಯವಾಗಿ ಹೃದಯಗಳೊಡನೆ..

ಮಿಡಿತವಾದವರು ಹಾಗೂ ಮಾತಾಡಿದವರು…ಶ್ರೀಮತಿ

ಕಮಲ ನಂತರ ….ಅವರ ಗಾರುಡಿಗತನದಲ್ಲಿ ಮಿಂದ

ಜನಮಾನಸ ಬೇಂದ್ರೆ ಬರಹ ಒಲವು ಅಂತಃಕರಣದಲ್ಲಿ

ಮುಳುಗು ಹಾಕಿದ್ದರು…ಹಲವರ ಗಾಯನ ಅಪ್ಪಮಕ್ಕಳ

ಗೀತೆ,‌ಅಕ್ಕ ತಂಗಿಯರ ಜೊತೆಗಾನ ಕುಣಿಯೋಣು ಬಾರಾ

ಹಾಡಿಗಂತೂ ಹಸಿರೇ ನರ‌್ತಿಸುತ್ತಿತ್ತು…ಅಷ್ಟು‌ಸೊಗಸಾಗಿತ್ತು

ಮೈಸೂರು,ಮಂಡ್ಯ, ಧಾರವಾಡ ದೂರ ದೂರ ಎಲ್ಲವೂ

ಅಜ್ಜನಿಗಾಗಿ ಹತ್ತಿರವಾಗಲು‌ ಬಂದಿದ್ದರು…ವಿರಾಮದಲ್ಲಿ

ಕಾಫಿ,ಚಹಾ ,ಹಾಲಿನ ಜೊತೆ ಇಬ್ಬೇಯಿ (ಬಿಸ್ಕೆಟ್) ಸಹ ನೀಡಿ

ಋಣ ಹೊರಿಸಿ ಎದೆ ಭಾರವಾಗಿತ್ತು…ಮತ್ತೆ ಹಾಡು ,

ಕೊನೆಗೆ ಚಿತ್ರಾಂಕಣ…ಒಟ್ಟಾರೆ ಅದ್ಭುತ ಅನುಭವ.

ಧನ್ಯವಾದ ಎಲ್ಲರಿಗೂ..

ಮತ್ತೆ ೭ ನೆಯ ಹೆಜ್ಜೆಗೆ ನೀವೂ ಗೆಜ್ಜೆ ಕಟ್ಟಲು ಬನ್ನಿ.

-ರೇಣುಕಾ ವೈಕುಂಠಯ್ಯ 

‍ಲೇಖಕರು avadhi

February 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: