ಕಿರಣ ವಲ್ಲೇಪುರೆ ಓದಿದ ‘ಚಾಂದಬೀ ಸರಕಾರ’ ಕಾದಂಬರಿ…

ಕಿರಣ ವಲ್ಲೇಪುರೆ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರ ಆರನೆಯ ಕಾದಂಬರಿ ‘ಚಾಂದಬೀ ಸರಕಾರ ಇತ್ತೀಚಿಗೆ ಬಿಡುಗಡೆಯಾಗಿದೆ. ಇದಕ್ಕೂ ಮೊದಲು ಕಂಬಾರರು ‘ಕರಿಮಾಯಿ’, ‘ಸಿಂಗಾರೆವ್ವ ಮತ್ತು ಅರಮನೆ’, ‘ಜಿ.ಕೆ ಮಾಸ್ತರ್ ಪ್ರಣಯ ಪ್ರಸಂಗ’, ‘ಶಿಖರಸೂರ್ಯ’ ಮತ್ತು ‘ಶಿವನ ಡಂಗುರ’ ಕಾದಂಬರಿಗಳನ್ನು ರಚಿಸಿದ್ದಾರೆ. ಕನ್ನಡದ ನವ್ಯ ಸಾಹಿತ್ಯ ಸಂದರ್ಭದಲ್ಲಿ ಸಾಹಿತ್ಯ ಕೃತಿಗಳ ರಚನೆಯಲ್ಲಿ ತೊಡಗಿದ ಕಂಬಾರರು ನವ್ಯತೆಯನ್ನು ಮೀರಿ ತಮ್ಮದೆಯಾದ ವೈಶಿಷ್ಟತೆಯೊಂದಿಗೆ ಸೃಜನಶೀಲ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.

ಚಾಂದಬೀ ಈ ಕಾದಂಬರಿಯ ಕಥಾನಾಯಕಿ. ಒಬ್ಬ ದೇವದಾಸಿಯ ಮಗಳಾಗಿ ಹುಟ್ಟಿ, ಶ್ರೀಕೃಷ್ಣ ಪಾರಿಜಾತ ಬಯಲಾಟದ ಕಲಾವಿದೆಯಾಗಿ ಬೆಳೆದು, ಶಿವಾಪುರದ ಬಲದೇವ ನಾಯಕನ ರಾಣಿಯಾಗಿ ಹಳ್ಳಿಯಲ್ಲಿ ಹೆಣ್ಣುಮಕ್ಕಳ ಶಾಲೆಯನ್ನು ಆರಂಭಿಸಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುವ ಕಥೆಯನ್ನು ಈ ಕಾದಂಬರಿ ಒಳಗೊಂಡಿದೆ.

ಶಿವಾಪುರ ಎಂಬ ಊರು. ಆ ಊರಿನ ನಾಯಕ ಬಲದೇವನ ಪರಿಚಯದೊಂದಿಗೆ ಇಲ್ಲಿನ ಕಥೆ ಆರಂಭವಾಗುತ್ತದೆ. ಶಿವಾಪುರ ಎನ್ನುವುದು ಭಾರತದ ಯಾವುದಾದರೂ ಒಂದು ಹಳ್ಳಿಯ ಸಂಕೇತವಾಗಿದ್ದು, ಭಾರತದ ನಕಾಶೆಯಲ್ಲಿ ಹುಡುಕಿದರೂ ಸಿಗಲಾರದ ಕಂಬಾರರ ಕಲ್ಪನೆಯ ಊರಾಗಿದೆ.

ಬಲದೇವ ನಾಯಕನ ಹೆಂಡತಿ ಕಾವೇರಮ್ಮ ಬಹಳ ವರ್ಷಗಳ ನಂತರ ಗಂಡು ಮಗುವಿಗೆ ಜನ್ಮ ನೀಡಿ, ಆ ಮಗುವಿಗೆ ಕೃಷ್ಣ ಎಂದು ನಾಮಕರಣ ಮಾಡಿ ಸಾಯುತ್ತಾಳೆ. ಕಾವೇರಮ್ಮಳ ತಂದೆ ಅಯ್ಯಾ ಸರಕಾರನು ತನ್ನ ಎರಡನೆಯ ಮಗಳು ಸೀತಾಲಕ್ಷಿö್ಮಯನ್ನು ಮದುವೆಯಾಗುವಂತೆ ಹೇಳಿದಾಗ ಬಲದೇವ ನಾಯಕ ಅದನ್ನು ನಿರಾಕರಿಸುವನು. ಮುಂದೆ ಶ್ರೀಕೃಷ್ಣ ಪಾರಿಜಾತ ಬಯಲಾಟ ಕಲಾವಿದೆಯಾದ ಚಾಂದಬೀಯ ಕಲೆಗೆ ಮನಸೋತು ಅವಳ ಪೋಷಕರಾದ ದೇಶಪಾಂಡೆ ದಂಪತಿಗಳ ಆಶೀರ್ವಾದದೊಂದಿಗೆ ಅವಳನ್ನು ಮದುವೆಯಾಗುತ್ತಾನೆ. ಆವಾಗ ಅಯ್ಯಾ ಸರಕಾರನಿಗೆ ಈ ಬಲದೇವ ನಾಯಕ ತನ್ನ ಎರಡನೆಯ ಮಗಳನ್ನು ಮದುವೆಯಾಗದೆ ಈ ನಾಚವಾಲಿಯನ್ನು ಮದುವೆಯಾದನಲ್ಲಾ ಎಂದು ಆತನ ಮೇಲೆ ದ್ವೇಷ ಭಾವನೆ ಹುಟ್ಟಿಕೊಳ್ಳುತ್ತದೆ.

ಚಾಂದಬೀಯ ಮೂಲ ಹೆಸರು ಶೀಲವಂತಿ. ಇವಳು ದೇವದಾಸಿ ನಿಂಬೆವ್ವನ ಮಗಳು. ಇವಳು ಗುರುದಕ್ಷೀಣೆಯ ರೂಪದಲ್ಲಿ ಆಗಾಖಾನ್‌ನನ್ನು ಮದುವೆಯಾಗಿ ಚಾಂದಬೀಯಾಗುತ್ತಾಳೆ. ಅಲ್ಲಿ ಆಗಾಖಾನ್‌ನ ಮೊದಲ ಹೆಂಡತಿಯ ಕುತಂತ್ರದಿಂದ ಇವಳ ಗರ್ಭಪಾತವಾಗುತ್ತದೆ. ಇದಕ್ಕೆ ಬೇಸತ್ತು ಚಾಂದಬೀ ಆಗಾಖಾನ್‌ನ ಮನೆ ತೋರೆದು ತನ್ನನ್ನು ಮಗಳಂತೆ ಕಾಣುವ ದೇಶಪಾಂಡೆ ದಂಪತಿಗಳ ಮನೆಯಲ್ಲಿ ಇರುವಳು. ಒಬ್ಬ ಕಲಾವಿದೆಯಾಗಿ ಖ್ಯಾತಿಯನ್ನು ಪಡೆಯುವಳು. ಮುಂದೆ ಬಲದೇವ ನಾಯಕನನ್ನು ಮದುವೆಯಾಗಿ ಶಿವಾಪುರದವರಿಗೆ ಚಾಂದಬೀ ಸರಕಾರ ಆಗುವಳು. ಬಲದೇವ ನಾಯಕನ ಮೊದಲ ಹೆಂಡತಿಯ ಮಗ ಕೃಷ್ಣನನ್ನೆ ತನ್ನ ಮಗನೆಂದು ಸ್ವಿಕರಿಸಿ ಮಾತೃಹೃದಯತೆಯನ್ನು ಮೆರೆಯುವಳು. ಹಳ್ಳಿಯ ಬಡವರಿಗೆ ಬೆಂಬಲವಾಗಿ ನಿಂತು ಆದರ್ಶವನ್ನು ಮೆರೆಯುವಳು.

ಕಾದಂಬರಿಯಲ್ಲಿ ಚಾಂದಬೀ ಪಾತ್ರಕ್ಕೆ ಪ್ರತಿಯಾಗಿ ಚಿತ್ರಿತವಾದ ಪಾತ್ರ ಬಡ್ಡಿ ಬಂಗಾರಮ್ಮ. ಇವಳು ಹಳ್ಳಿಯಲ್ಲಿ ಬಾರ್‌ಗಳನ್ನು ತೆರೆಯುವಳು. ಅಲ್ಲಿ ಜನರಿಗೆ ಉದರಿಯಾಗಿ ಮದ್ಯಪಾನ ನೀಡಿ ನಂತರದಲ್ಲಿ ಸೂಲಿಗೆ ಮಾಡುತ್ತಿದ್ದಳು. ತನ್ನ ವ್ಯಾಪಾರದ ರಕ್ಷಣೆಗಾಗಿ ಕಲ್ಕಿದಳವನ್ನು ಇಟ್ಟುಕೊಂಡಿರುವಳು. ಇದರ ಹಿಂದೆ ಅಯ್ಯಾ ಸರಕಾರನಿದ್ದು ಅದರ ಲಾಭವನ್ನು ಪಡೆಯುತ್ತಿದ್ದನು. ಇಲ್ಲಿ ಹಳ್ಳಿಯ ಜನ ಮದ್ಯಪಾನದ ಚಟಕ್ಕೆ ಒಳಗಾಗಿ ತಮ್ಮ ಹಣವನ್ನು, ತಾವು ಬೆಳೆದ ಬೆಳೆಯನ್ನು, ತಮ್ಮ ಹೋಲಗಳನ್ನು ಕಳೆದುಕೊಳ್ಳತೊಡಗಿದರು. ಇದರಿಂದ ತಮ್ಮ ಸಂಸಾರಿಕ ಜೀವನದಲ್ಲಿ ಬಹಳದೊಡ್ಡ ನಷ್ಟ ಅನುಭವಿಸುತ್ತಿದ್ದ ಮಹಿಳೆಯರು ಇದನ್ನು ತೀವ್ರವಾಗಿ ವಿರೋಧಿಸುವರು.

ಚಾಂದಬೀ ಹಳ್ಳಿಯಲ್ಲಿನ ಬಾರುಗಳನ್ನು ಮುಚ್ಚಿಹಾಕಿ, ಅಲ್ಲಿನ ವಾಡೆಯಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ಸ್ಥಾಪಿಸುವ ಪ್ರಯತ್ನದಲ್ಲಿ ತೊಡಗುವಳು. ಆವಾಗ ಬಾರ್‌ಗಳ ರೂವಾರಿಗಳಾದ ಅಯ್ಯಾ ಸರಕಾರ್ ಮತ್ತು ಬಡ್ಡಿ ಬಂಗಾರಮ್ಮರಿಂದ ಅನೇಕ ತೊಂದರೆಗಳಿಗೆ ಒಳಗಾಗುವಳು. ನಾಚವಾಲಿ ಎಂಬ ಮೂದಲಿಕೆಗೆ ಮತ್ತು ಸಭೆಯಲ್ಲಿ ಅವಮಾನಕ್ಕೆ ಒಳಗಾಗುವಳು. ಅಯ್ಯಾ ಸರಕಾರ್ ಮೋಸದಿಂದ ಬಲದೇವ ನಾಯಕನಿಗೆ ಊಟದಲ್ಲಿ ವಿಷವನ್ನು ಹಾಕುವನು. ಇಲ್ಲಿ ಬಲದೇವ ನಾಯಕ ತನ್ನ ಮಗ ಕೃಷ್ಣನ ವೈದ್ಯ ವಿದ್ಯೆಯಿಂದ ಬದುಕುಳಿವನು.

ಚಾಂದಬೀ ಶಿವಾಪುರದಲ್ಲಿ ತನ್ನ ಗಂಡ ಬಲದೇವ ನಾಯಕನ ಹಾಗೂ ಹಳ್ಳಿಯ ಜನರ ಬೆಂಬಲದೊಂದಿಗೆ ಮತ್ತು ಬೆಳಗಾವಿಯ ಡಿ.ಸಿ. ಶ್ರೀ ಘಾಟೆ, ಅಧ್ಯಾಪಕಿ ಡಾ. ಕುಸುಮಾ ವಾಡೆಕರ್ ಅವರ ಸಹಕಾರದಿಂದ ಹಳ್ಳಿಯಲ್ಲಿನ ಬಾರ್‌ಗಳನ್ನು ಮುಚ್ಚಿಸಿ, ವಾಡೆಯಲ್ಲಿ ಹೆಣ್ಣು ಮಕ್ಕಳ ಶಾಲೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತಾಳೆ.

ಕಾದಂಬರಿಯ ಕೊನೆಯಲ್ಲಿ ಬಡ್ಡಿ ಬಂಗಾರಮ್ಮ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾಳೆ. ಅಯ್ಯಾ ಸರಕಾರ ಸಿಡಿಲು ಬಡಿದು ಸಾಯುತ್ತಾನೆ. ಚಾಂದಬೀ ಊರಿನ ತಾಯಿಯಾಗಿ ಹೆಚ್ಚು ಕಾಲ ಬಾಳಲಿ ಎಂಬ ಆಶಯದೊಂದಿಗೆ ಕಾದಂಬರಿ ಅಂತ್ಯವಾಗುತ್ತದೆ.

ಹೀಗೆ ದುಷ್ಟ ಶಕ್ತಿಗಳು ತಮ್ಮ ಲಾಭಕ್ಕಾಗಿ ಸಮಾಜಕ್ಕೆ ಎಷ್ಟೇ ಕೆಡುಕನ್ನು ಮಾಡಿದರೂ, ಎಷ್ಟೇ ಕೆಡನ್ನು ಬಯಸಿದರೂ ಕೊನೆಗೆ ದುಷ್ಟಶಕ್ತಿಗಳು ನಾಶವಾಗಿ ಒಳ್ಳೆಯ ವಿಚಾರಗಳು, ಒಳ್ಳೆಯ ಮನಸ್ಸುಗಳು ಗೆಲ್ಲುವುದನ್ನು ಈ ಕಾದಂಬರಿ ಚಿತ್ರಿಸುತ್ತದೆ. ಜೊತೆಗೆ ಮಹಿಳಾ ಸಬಲೀಕರಣದ ಆಶಯವನ್ನು ಈ ಕಾದಂಬರಿ ಹೊಂದಿದೆ.

ಈ ಕೃತಿಯಲ್ಲಿ ಕಂಬಾರರು ಜಾನಪದ ಲೋಕದ ಮೂಲಕ ಆಧುನಿಕತೆಯನ್ನು ಪರೀಕ್ಷಿಸುವ ಪ್ರಯತ್ನವನ್ನು ಮಾಡಿದ್ದಾರೆ. ಸಾಮಾನ್ಯವಾಗಿ ಕಂಬಾರರ ಬರಹಗಳಲ್ಲಿ ಜಾನಪದ ಪ್ರಜ್ಞೆ ಇದ್ದೇ ಇರುತ್ತದೆ. ಈ ಕೃತಿಯಲ್ಲಿಯೂ ಸಂಪಿಗೆ ಮರ, ಕಾಡಮಾಯಿ ದೇವಿ ಮುಂತಾದ ಜಾನಪದ ಕಥೆ ಇದೆ, ಜೊಗತಿಯರು ಹಾಡುವ ಜಾನಪದ ಹಾಡು ಇದೆ ಮತ್ತು ಶ್ರೀಕೃಷ್ಣ ಪಾರಿಜಾತ ಬಯಲಾಟ ಎಂಬ ಜಾನಪದ ಆಟವೂ ಇದೆ. ಒಟ್ಟಿನಲ್ಲಿ ಜಾನಪದ ಲೋಕದ ಮೂಲಕ ದೇಶಿಯತೆಯ ಶ್ರೇಷ್ಟತೆಯನ್ನು ಈ ಕಾದಂಬರಿ ಸಾರುತ್ತದೆ.

‍ಲೇಖಕರು Admin

November 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: