ಬೀಚಿ ಶೈಲಿಯಲ್ಲಿ ‘ತಿಂಮನ ತಲೆ’

ಬೀಚಿಯವರ ಶೈಲಿಯಲ್ಲಿ
ಅಣಕು ಬರಹ ರಚನೆ : ಎನ್.ರಾಮನಾಥ್

‘ತಿಂಮಾ…’
‘ಬುದ್ಧೀ…?’
ತಿಂಮನೇ ಹಾಗೆ. ಯಾರಲ್ಲಿ ಯಾವುದಿಲ್ಲವೋ ಅದನ್ನು ಗುರುತಿಸಿ ಹಾಗೆಯೇ ಕರೆಯುತ್ತಾನೆ. ಹಿಂದೆ ಅವನಿಗೆ ಮಾಲಿಕರಾಗಿದ್ದ ಮಹಾನ್ ಆಲಸಿಯನ್ನು ‘ದಣೀ…’ ಎಂದು ಕೂಗುತ್ತಿದ್ದನಂತೆ. ಅವರು ದಣಿಯಲಿಲ್ಲ, ನನಗೆ….
‘ಗೋದಾವರಿ ಗೊತ್ತೇನೋ?’
‘ನನಗೆ ಗೊತ್ತಿಲ್ದೇಯೇನು…. ಶ್ವೇತಾಂಬರಿಯ ತಂಗಿ ಕನಕಾಂಬರಿಯ ಚಿಕ್ಕ ತಂಗಿ’
‘ಅವಳಲ್ಲವೋ…. ನದಿ’
‘ಗೊತ್ತು. ನೋಡಿದೀನಿ. ಸಂಧ್ಯಾವಂದನೆ ಪುಸ್ತಕದಲ್ಲಿ’
‘ಸಂಧ್ಯಾವಂದನೆ ಪುಸ್ತಕದಲ್ಲಿ ನದಿ ಇದೆಯಾ?’
‘ಹೂಂ ಬುದ್ಧೀ….’
‘ಎಲ್ಬರತ್ತೋ?’
‘ಗೋದಾವರ್ಯಾಃ ದಕ್ಷಿಣೇ ತೀರೇ ಅಸ್ಮಿನ್ ವರ್ತಮಾನೇ….’
‘ಹೂಂ. ಅದರದೇ ವರ್ತಮಾನ. ಆ ನದಿಯ ಪಕ್ಕದಲ್ಲಿ ಅರಳಿಮರ ಇತ್ತಂತೆ. ಮರದಲ್ಲಿ ಗಿಣಿಗಳು ಗೂಡು ಕಟ್ಟಿಕೊಂಡಿದ್ದವಂತೆ’
‘ಹಾವುಗಳು ಬಂದು ಹಾವ್ ಡೂ ಯೂ ಡೂ ಅಂದವಂತೇನು?’


‘ಸುಮ್ಮನೆ ಕಥೆ ಕೇಳೋ….’
‘ಹೂಂ’
‘ಬಹಳ ದಿನ ವಾಸ ಮಾಡಿದ್ದವಂತೆ’
‘ಆಗಿನ್ನೂ ರೆಂಟ್ ಕಂಟ್ರೋಲ್ ಇರಲಿಲ್ಲವಲ್ಲ ಬುದ್ಧೀ…’ ಕಾಸು ಕೊಟ್ಟರೂ ಮೌನವಾಗಿರಲಾರನವ.
‘ಸುಮ್ಮನೆ ಕೇಳೋ. ಒಂದು ದಿನ ಜೋರು ಮಳೆ ಬಂತಂತೆ’
‘ಪುಣ್ಯವಂತರಿದ್ದರು ಬಂತು. ಈಗ ನೀವಿದ್ದೀರಿ….’ ಕಣ್ಣು ಅಗಲ ಮಾಡಿದೆ. ತಿಂಮ ಮುಖ ಅತ್ತ ತಿರುಗಿಸಿ ಮುಸಿಮುಸಿ ನಕ್ಕ.
‘ಮಳೆ ಬಂದಾಗ ನದೀ ತೀರದ ಎಲ್ಲ ಕಪಿಗಳೂ ಬಂದು ಮರದ ಬುಡದಲ್ಲಿ ಆಶ್ರಯ ಪಡೆದವಂತೆ’
‘ಓ! ಆಗಲೇ ಆಶ್ರಯ ಯೋಜನೆ ಜಾರಿಗೆ ಬಂದಿದ್ದಿರಬೇಕು’ ನುಡಿದು ನಾಲಿಗೆ ಕಚ್ಚಿಕೊಂಡ ತಿಂಮ.
‘ಗಿಣಿಗಳು ಮತ್ತು ಇತರ ಪಕ್ಷಿಗಳು ‘ದೇವರು ನಿಮಗೆ ಕೈಕಾಲು ಕೊಟ್ಟಿದ್ದಾನೆ. ಎಲ್ಲಾದರೂ ಮನೆಗಳನ್ನು ಕಟ್ಟಿಕೊಳ್ಳಿ’ ಎಂದವಂತೆ’
‘ಗಿಣಿ-ಪಕ್ಷಿಗಳು ತಪ್ಪು ಮಾಡಿದವು ಬುದ್ಧೀ…’
‘ಹೇಗೋ ತಿಂಮಾ?’
‘ಕಪಿಗಳಿಗೆ ಕೈಕಾಲುಗಳ ಜೊತೆಗೆ ಮಂಗಬುದ್ಧಿಯೂ ಇತ್ತು ಬುದ್ಧೀ’
‘ಆದರೇನು?’
‘ಅವು ಅದೇ ಮರವನ್ನು ಕಡಿದು ಗೇಟೆಡ್ ಕಮ್ಯುನಿಟಿ ಮಾಡಿಕೊಂಡವು. ಬುದ್ಧೀ….’
‘ಏನೋ ತಿಂಮಾ?’
‘ಹ್ಹ! ಏನಿಲ್ಲ ಬಿಡಿ’
‘ಹೇಳೋ ತಿಂಮಾ’
‘ನಿಮಗೆ ಹೇಳುವಂಥದ್ದಲ್ಲ’
‘ಇರಲಿ ಹೇಳೋ’
‘ಬುಧ್ಯಿಲ್ದೋನ್ಗೆ ಬುದ್ಧಿಮಾತಂದ್ರೆ ಬುಡಕ್ಕೇ ಬಡಿಗೆಪೆಟ್ಟು ಬುದ್ಧೀ…’
‘ನನ್ನನ್ನ ಬುಧ್ಯಿಲ್ದೋನು ಅಂದ್ಹೇನೋ ತಿಂಮಾ?
‘ತಿಳ್ಕೊಳೋವ್ರಿಗೆ ಹೇಳೋ ಅಗತ್ಯ ಇಲ್ಲ ಬಿಡಿ…’
ಮೀಸೆಯಲ್ಲೇ ನಗುತ್ತಾ ಹೊರ ಸಾಗಿದ ತಿಂಮ.

‍ಲೇಖಕರು avadhi

October 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

2 ಪ್ರತಿಕ್ರಿಯೆಗಳು

  1. Shyamala Madhav

    ನುಡಿಸಿರಿಯಲ್ಲಿ, ರಾಮನಾಥ್. ಖುಶಿಯಾಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: