ಬಿ ಶ್ರೀಪಾದ ಭಟ್
ಮೂವತ್ತರ ದಶಕದ ಕೊನೆಯ ಬಾಗದಲ್ಲಿ ’ಫ್ರಾಂಕೋನಿಸ್ಟ್’ಗಳು ಸ್ಪೇನ್ ನ ಎಡಪಂಥೀಯ ’ರಿಪಬ್ಲಿಕನ್’ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬರುತ್ತಾರೆ.
ಈ ಯುದ್ಧವು ಸ್ಪೇನ್ ಕುಟುಂಬಗಳನ್ನು ಚಿದ್ರಗೊಳಿಸಿರುತ್ತದೆ. ಬದುಕು ಬೀದಿಪಾಲಾಗಿರುತ್ತದೆ.
ಈ ಹಿನ್ನೆಲೆಯನ್ನು ಕತೆಯ ಎಳೆಯಾಗಿಟ್ಟುಕೊಂಡು ವಿಕ್ಟರ್ ಎರಿಕ್ ನಿರ್ದೇಶಿಸಿದ 1973 ರಲ್ಲಿ ಬಿಡುಗಡೆಯಾದ ಸ್ಪೇನ್ ಸಿನಿಮಾ ’ದ ಸ್ಪಿರಿಟ್ ಆಫ್ ಬೀಹೈವ್” (The Spirit of the Beehive) ಇಂದು ಮತ್ತೆ ಮತ್ತೆ ಕಾಡುತ್ತದೆ. ಆಗ ಸ್ಪೇನ್ ನಲ್ಲಿ ಫ್ರಾಂಕ್ ಸರ್ವಾಧಿಕಾರವಿರುತ್ತದೆ. ಆದರೆ ನಿರ್ದೇಶಕ ಎರಿಕ್ ಪೆಡಂಭೂತವನ್ನು ರೂಪಕವಾಗಿ ತಂದು ಸೆನ್ಸಾರ್ ಸಮಸ್ಯೆಯಿಂದ ಪಾರಾಗುತ್ತಾನೆ. ಸರ್ವಾಧಿಕಾರದ ವಿರುದ್ಧ ಮೆಟಫರ್ ಆಗಿ ಮಾತನಾಡುತ್ತಲೇ ಬಾಲಕಿಯ ಕಲ್ಪನಾ ಲೋಕದಲ್ಲಿ ದೃಶ್ಯವನ್ನು ಕಾವ್ಯಾತ್ಮಕವಾಗಿ ಚಿತ್ರಿಸುತ್ತಾನೆ.
ಸಿನಿಮಾ ವ್ಯಾಕರಣದಲ್ಲಿ ಹಿಡಿತ ಸಾಧಿಸಿದರೆ ಅನುಕರಣೀಯವಾಗಿ ನಿರೂಪಿಸಬಹುದು ಎಂಬುದಕ್ಕೆ ಈ ಸಿನಿಮಾ ಉದಾಹರಣೆ.
ಇಡೀ ಸಿನಿಮಾದ ಕೇಂದ್ರ ಬಿಂದು 6 ವರ್ಷದ ಬಾಲಕಿ “ಅನಾ”. ಆಕೆಯನ್ನು ಕೇಂದ್ರವಾಗಿಟ್ಟುಕೊಂಡ ಎರಿಕ್ ಬದುಕಿನ ಒಳತೋಟಿಗಳು, ಕಷ್ಟಗಳು, ದುಷ್ಟತನ ಹಾಗೂ ಅದನ್ನು ಕೇವಲ ಮುಗ್ಧತೆ ಹಾಗೂ ಫ್ಯಾಂಟಸಿಯಿಂದ, ಭಾವತೀವ್ರತೆಯಿಂದ ಸಹನೀಯಗೊಳಿಸಬಹುದೇ ಎಂದು ಕೇಳುತ್ತಾ ಹೋಗುತ್ತಾನೆ. ಅಲ್ಲಿ ಪುಟ್ಟ ಬಾಲಕಿ ಅನಾ 1931ರ ದೆವ್ವದ ಸಿನಿಮಾ Frankenstein” ನೋಡಿ ಅಲ್ಲಿನ ಪೆಡಂಬೂತವು ಮಗುವನ್ನು ಸಾಯಿಸುವುದನ್ನು ಕಂಡು ತನ್ನ ಅಕ್ಕ ಇಸ್ಬೆನ್ ಳನ್ನು ’ ‘ಯಾಕೆ ಪೆಡಂಬೂತ ಮಗುವನ್ನು ಸಾಯಿಸುತ್ತದೆ’ ಎಂದು ಮುಗ್ಧವಾಗಿ ಕೇಳುತ್ತಾಳೆ ಮತ್ತು ಮುಂದುವರೆದು ’ ಯಾಕೆ ಜನ ಪೆಡಂಬೂತವನ್ನು ಸಾಯಿಸುತ್ತಾರೆ’ ಎಂದು ಕೇಳುತ್ತಾಳೆ.
ಕಥನ ಕಟ್ಟುವುದಕ್ಕೆ ಒಂದು ಮಾದರಿಯಾಗಿರುವ ಇದು ಸ್ಪೇನ್ ನ ಅತ್ಯುತ್ತಮ ಹೊಸ ಅಲೆ ಸಿನಿಮಾಗಳಲ್ಲಿ ಒಂದು.
0 ಪ್ರತಿಕ್ರಿಯೆಗಳು