ಬಿ ಎ ವಿವೇಕ ರೈ ಕಂಡಂತೆ ‘ಶಬ್ದ ಸೂರೆ’

ಡಾ. ಬಿ. ಎ. ವಿವೇಕ ರೈ 

ಡಾ.ಯು.ಮಹೇಶ್ವರಿ ಅವರು ಕಾಸರಗೋಡು ಕನ್ನಡನಾಡಿನ ಹಿರಿಯ ಕವಯಿತ್ರಿಯಾಗಿ, ವಿಮರ್ಶಕಿಯಾಗಿ, ಸಂಶೋಧಕಿಯಾಗಿ, ಕನ್ನಡ ಪ್ರಾಧ್ಯಾಪಕಿಯಾಗಿ ಕನ್ನಡದ ಕಾಯಕವನ್ನು ಕಳೆದ ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿದ ಕಾಲಾವಧಿಯಲ್ಲಿ ಮಾಡುತ್ತಾ ಬಂದವರು. ಕರ್ನಾಟಕದ ಕರಾವಳಿಯಲ್ಲಿ ನಡೆಯುತ್ತಿದ್ದ ಕವಿಗೋಷ್ಠಿಗಳಲ್ಲಿ ಮಹೇಶ್ವರಿ ಅವರ ಕವನವಾಚನವನ್ನು ಬಹಳ ದೀರ್ಘಕಾಲದಿಂದ ಆಲಿಸುತ್ತಾ ಬಂದವನು ನಾನು. ಕೇರಳರಾಜ್ಯದಲ್ಲಿ ಕನ್ನಡದ ಶಕ್ತಿಕೇಂದ್ರವಾದ ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಆ ವಿಭಾಗದ ವಿದ್ವತ್ ಪರಂಪರೆಯನ್ನು ಮುಂದುವರಿಸಿಕೊಂಡು ಬಂದು ಆ ಭಾಗದ ಸಾವಿರಾರು ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿದ ಪ್ರಾಧ್ಯಾಪಕರಲ್ಲಿ ಡಾ.ಮಹೇಶ್ವರಿ ಅವರಿಗೆ ಕೂಡಾ ವಿಶಿಷ್ಟ ಸ್ಥಾನವಿದೆ ಎನ್ನುವುದನ್ನು ಆ ವಿಭಾಗಕ್ಕೆ ಸಾಕಷ್ಟು ಬಾರಿ ಭೇಟಿಕೊಟ್ಟ ನಾನು ಮನಗಂಡಿದ್ದೇನೆ. ತನ್ನ ಅಧ್ಯಾಪನದ ನಿವೃತ್ತಿಯ ಬಳಿಕವೂ ಅವರು ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಕೇಂದ್ರದ ನಿರ್ದೇಶಕಿಯಾಗಿ ಕನ್ನಡ ಸಂಶೋಧನೆಯ ಸಂಸ್ಕೃತಿಯನ್ನು ಬೆಳೆಸಿದ್ದಾರೆ. 

ಸಾಹಿತ್ಯದ ಮಾನದಂಡದಲ್ಲಿ ಪರಿಗಣಿಸುವುದಾದರೆ ಮಹೇಶ್ವರಿ ಅವರು ಮೊದಲ ಪಂಕ್ತಿಯಲ್ಲಿ ಕಾಣಿಸುವ ಕವಯಿತ್ರಿ. ಅವರ ‘ಮುಗಿಲ ಹಕ್ಕಿ’, ‘ಧರೆಯು  ಗರುವದಿ ಮೆರೆಯಲಿ’ ಬಹಳ ಮಹತ್ವದ ಕವನಸಂಕಲನಗಳು. ಅವರ ಕವಿತ್ವದ ಸೂಕ್ಷ್ಮ ಗ್ರಹಿಕೆಯ ಗುಣವು ಅವರ ವಿಮರ್ಶೆಯ ಬರಹಗಳಲ್ಲಿ ಹಾಸುಹೊಕ್ಕಾಗಿದ. ‘ಇದು ಮಾನುಷಿಯ ಓದು’, ‘ಮಧುರವೇ ಕಾರಣ’ ವಿಮರ್ಶಾ ಸಂಕಲನಗಳು ಅಂತಹ ನಿದರ್ಶನದ ಎರಡು ಮಾದರಿಗಳು. ತನ್ನ ಮೇಲೆ ಪ್ರಭಾವ ಬೀರಿದ ಹಿರಿಯ ಕವಿಗಳಾದ ಕಯ್ಯಾರ ಕಿಞ್ಞಣ್ಣ  ರೈ ಮತ್ತು ಕೆ.ವಿ.ತಿರುಮಲೇಶರ ಬಗ್ಗೆ ವ್ಯಕ್ತಿಚಿತ್ರದ ಕೃತಿಗಳನ್ನು ಅವರು ರಚಿಸಿದ್ದಾರೆ. ಅವರ ಡಾಕ್ಟರೇಟ್ ನಿಬಂಧ -‘ಕನ್ನಡದ ಮೊದಲ ಕಾದಂಬರಿಗಳು -ಒಂದು ಸ್ತ್ರೀವಾದಿ ಅಧ್ಯಯನ’ ಅವರ ಸೂಕ್ಷ್ಮ ಒಳನೋಟಗಳುಳ್ಳ ಅಧ್ಯಯನಾತ್ಮಕ ಕೃತಿ. 

ಡಾ. ಮಹೇಶ್ವರಿ ಅವರ ಈ ವಿಮರ್ಶಾಸಂಕಲನ ‘ ಶಬ್ದಸೂರೆ’ಯಲ್ಲಿ ೩೩ ಬರಹಗಳಿವೆ. ಇವುಗಳಲ್ಲಿ ಸುಮಾರು ಮೂರನೇ ಎರಡರಷ್ಟು  ಭಾಗದಲ್ಲಿ ಕನ್ನಡದ ಸಾಹಿತಿಗಳ ಕಾವ್ಯ ಕತೆ ಕಾದಂಬರಿಗಳ ಅಧ್ಯಯನಾತ್ಮಕ ವಿಮರ್ಶೆಯ ಲೇಖನಗಳು ಇವೆ. ಕುವೆಂಪು, ಕಡೆಂಗೋಡ್ಲು ಶಂಕರ ಭಟ್ಟ, ಚೆನ್ನವೀರ ಕಣವಿ, ಲಲಿತಾ  ಸಿದ್ಧಬಸವಯ್ಯ, ಎಚ್ ಎಸ್ ವೆಂಕಟೇಶಮೂರ್ತಿ, ವೈದೇಹಿ ಅವರಂತಹ ಆಧುನಿಕ ಕವಿಗಳ ಕಾವ್ಯಗಳ ಅವಲೋಕನಗಳ ಜೊತೆಗೆ ಪ್ರಾಚೀನ ಕವಿಗಳಾದ ಕುಮಾರವ್ಯಾಸ ಮತ್ತು ಕನಕದಾಸರ ಕಾವ್ಯಗಳ ವಿವೇಚನೆಯನ್ನು ಮಾಡಿದ್ದಾರೆ. ಮಹೇಶ್ವರಿ ಅವರ ಈ ವಿಮರ್ಶಾ ಸಂಕಲನ ‘ಶಬ್ದಸೂರೆ’ಯಲ್ಲಿ ಹೊಸಗನ್ನಡದ ಕಥನ ಲೇಖಕರ ಕತೆಗಳು ಮತ್ತು ವಿಶಿಷ್ಟ ಕಾದಂಬರಿಗಳು ವಿವರವಾದ ಚರ್ಚೆಗೆ ಒಳಗಾಗಿವೆ. ಲೇಖಕಿಯರಾದ ವೈದೇಹಿ, ಗಂಗಾ ಪಾದೇಕಲ್, ಲಕ್ಷ್ಮಿ ಕುಂಜತ್ತೂರು ಇವರ ಕತೆ ಕಾದಂಬರಿಗಳನ್ನು ಒಳಗೊಂಡ ಕಥನ ಸಾಹಿತ್ಯದ ತಲಸ್ಪರ್ಶಿ ಓದು ಇಲ್ಲಿ ದೊರೆಯುತ್ತದೆ. ಪುರುಷ ಲೇಖಕರ ನಿರ್ದಿಷ್ಟ ಕಾದಂಬರಿಗಳನ್ನು ಆರಿಸಿಕೊಂಡು ಅವುಗಳ ಗುಣಾವಗುಣಗಳ ತುಲನೆಯನ್ನು ಮಹೇಶ್ವರಿ ಮಾಡಿದ್ದಾರೆ. ಎಸ್ ಎಲ್ ಭೈರಪ್ಪನವರ ‘ಉತ್ತರಕಾಂಡ’, ನಾ ಮೊಗಸಾಲೆ ಅವರ ‘ಮುಖಾಂತರ’ ಮತ್ತು ‘ಧಾತು’, ವಿವೇಕ ಶಾನುಭಾಗರ ‘ಊರುಭಂಗ’, ರಾಘವೇಂದ್ರ ಪಾಟೀಲರ ‘ಗೈರ ಸಮಜೂತಿ’, ಕೆ ಟಿ ಗಟ್ಟಿ ಅವರ ‘ಅನಂತರ’ ಕಾದಂಬರಿಗಳನ್ನು ಕುರಿತು ಮಹೇಶ್ವರಿ ಅವರು ಮಾಡಿದ ಕೃತಿನಿಷ್ಠ ವಿಮರ್ಶೆಯ ಬರಹಗಳು ಈ ಸಂಕಲನದ ಒಂದು ಪ್ರಮುಖ ಅವಯವವಾಗಿ ನಿಲ್ಲುತ್ತವೆ. 

‘ಶಬ್ದ ಸೂರೆ’ಯಲ್ಲಿ ಸಾಹಿತ್ಯಸಂಬಂಧಿಯಾಗಿ ಇರುವ ಇತರ ಲೇಖನಗಳು : ಜಿ . ವೆಂಕಟಸುಬ್ಬಯ್ಯ ನವರ ‘ಗತಿಪ್ರಜ್ಞೆ’ ಎಂಬ ಸಂಪ್ರಬಂಧಗಳ ಸಂಕಲನದ ಸಮೀಕ್ಷೆ, ‘ಕಾರಂತರ ಪತ್ರಸಾಹಿತ್ಯ ‘ಕೃತಿಯ ಅವಲೋಕನ, ‘ಮಾಸ್ತಿಯವರ ವಿಮರ್ಶೆ ‘ಯನ್ನು ಕುರಿತ ವೈಧಾನಿಕ ಸಾಂಸ್ಕೃತಿಕ ವಿವರಣೆಯ ಬರಹ . ಇವುಗಳ ಜೊತೆಗೆ ಸಮೀಕ್ಷೆಯ ಹೆಸರಲ್ಲಿ ಒಂದು ಕಾಲಘಟ್ಟದ ಲೇಖಕಿಯರ ಕೃತಿಗಳ ಕುರಿತು ಬರೆದ ಲೇಖನ ‘ಸ್ವಾತಂತ್ರ್ಯೋತ್ತರ ಲೇಖಕಿಯರ ಸೃಜನಶೀಲತೆಯ ಇತಿಮಿತಿಗಳು’ ಇದನ್ನು ಗಮನಿಸಬೇಕು. ಲೇಖಕಿಯಾಗಿ ಮಹೇಶ್ವರಿ ಅವರು ತಮ್ಮ  ಸಮಕಾಲೀನ ಲೇಖಕಿಯರ ಇತಿಮಿತಿಗಳನ್ನು ಗುರುತಿಸುವ ನಿಜವಾದ ವಿಮರ್ಶೆಯನ್ನು ಮಾಡುವ ಧೈರ್ಯಮಾಡಿದ ಕಾರಣವೇ ಅವರ ಉಳಿದ ಬರಹಗಳ ಬಗ್ಗೆ ನಾವು ತೀವ್ರ ಆಸಕ್ತಿಯನ್ನು ತಾಳಲು ಸಾಧ್ಯವಾಗಿದೆ. ಈ ಲೇಖನದ ಜೊತೆಗೆ ಈ ಸಂಕಲನದ ‘ಕಾರಂತರ ಕಾದಂಬರಿಗಳ ಸ್ತ್ರೀಪಾತ್ರಗಳು – ಹೊಂದಾಣಿಕೆ ಮತ್ತು ಪ್ರತಿಭಟನೆಯ ನೆಲೆಗಳು’ ಬರಹವನ್ನು ಮುಖಾಮುಖಿಯಾಗಿ ಇಟ್ಟು   ನೋಡಬೇಕು. ಒಬ್ಬ ಪುರುಷ ಲೇಖಕರಾಗಿಯೂ ಕಾರಂತರು ಹೆಣ್ಣಿನ ಮನದಾಳದ ಭಾವನೆಗಳನ್ನು ಚಿತ್ರಿಸಿದ ಬಹುರೂಪಗಳ ಅನಾವರಣವು  ಇಲ್ಲಿ ದೊರೆಯುತ್ತದೆ. ಜೊತೆಗೆಯೇ ಕಾರಂತರ ಕೆಲವು ಕಾದಂಬರಿಗಳ ಸ್ತ್ರೀಪಾತ್ರಗಳ ಬಗ್ಗೆ ತಮ್ಮ ಅತೃಪ್ತಿಯುನ್ನು ಪ್ರಕಟಿಸಲು ಮಹೇಶ್ವರಿ ಹಿಂಜರಿಯುವುದಿಲ್ಲ. 

‘ಮಹಿಳಾ ಸಶಕ್ತೀಕರಣ’ ಎನ್ನುವ ವಿಶಿಷ್ಟ ಬರಹವೊಂದು ಈ ಸಂಕಲನದಲ್ಲಿದೆ. ಮಹೇಶ್ವರಿ ಅವರ ‘ಶಬ್ದಸೂರೆ’ ಸಂಕಲನದ ವಿಮರ್ಶಾಬರಹಗಳಲ್ಲಿ, ಅದು ಕಾವ್ಯ ಕತೆ ಕಾದಂಬರಿ ಆಗಿರಲಿ, ಅದು ಲೇಖಕಿಯರ ಅಥವಾ ಲೇಖಕರ ರಚನೆ ಆಗಿರಲಿ, ಅಂತರ್ಗತವಾಗಿರುವ ಒಂದು ಸೂಕ್ಷ್ಮ ಸಂವೇದನೆ ಎಂದರೆ ಅದು ಸ್ತ್ರೀಪರ ನೋಟ. ಲಲಿತಾ ಸಿದ್ಧಬಸವಯ್ಯ, ವೈದೇಹಿ, ಎಚ್ ಎಸ್ವಿ, ಕುವೆಂಪು, ಕಡೆಂಗೋಡ್ಲು ಅವರ  ಕಾವ್ಯಗಳನ್ನು ಬಗೆಯುವಾಗಲೂ  ಹೆಣ್ಣಿನ ಅಂತರಾಳದ ಜೊತೆಗೆ ಇವರು ಸಂವಾದಮಾಡುವ ಪರಿಯನ್ನು ಗಮನಿಸಬಹುದು. ವೈದೇಹಿಯವರ ಕಥನಸಾಹಿತ್ಯ, ಕಾರಂತರ ಕಾದಂಬರಿಗಳು  ಸಹಿತ ಪುರುಷ ಕಾದಂಬರಿಕಾರರ ಕೃತಿವಿಮರ್ಶೆಯಲ್ಲೂ ಸ್ತ್ರೀಪಾತ್ರಗಳ ರಚನೆ ಮತ್ತು ಕ್ರಿಯೆಗಳ ಚರ್ಚೆಗೆ ಸಾಕಷ್ಟು ಅವಕಾಶವನ್ನು ಮಹೇಶ್ವರಿ ಕಲ್ಪಿಸಿಕೊಳ್ಳುತ್ತಾರೆ. ಸ್ತ್ರೀವಾದಿ ಅಧ್ಯಯನದ ಲೇಬಲ್ ಇಲ್ಲದೆ ಸಮಗ್ರ ಕೃತಿವಿಮರ್ಶೆಯಲ್ಲಿ ಲೇಖಕಿ /ಲೇಖಕರು ಹೆಣ್ಣನ್ನು ಪರಿಕಲ್ಪಿಸಿಕೊಂಡ ಬಗೆಗಳನ್ನು ತಮ್ಮ ಬರಹಗಳಲ್ಲಿ ದಾಖಲಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಸಿದ್ಧಮಾದರಿಯಾಗಿ ರೂಪುಗೊಂಡ ಮತ್ತು ವಿಭಿನ್ನ ವಿನ್ಯಾಸಗಳನ್ನು ಕಟ್ಟಿಕೊಟ್ಟ ಸಂರಚನೆಗಳನ್ನು ತಮ್ಮ ವಿಮರ್ಶಾಬರಹಗಳಲ್ಲಿ ಚರ್ಚಿಸುತ್ತಾರೆ. 

ಮಹೇಶ್ವರಿ ಅವರ ‘ಶಬ್ದಸೂರೆ’ ವಿಮರ್ಶಾಸಂಕಲನದ ಇನ್ನೊಂದು ಧನಾತ್ಮಕ ಅಂಶವೆಂದರೆ -ಸಾಹಿತ್ಯಕೃತಿಗಳನ್ನು ಕುರಿತ ಅವರ ಸಾವಯವ ಸಮಗ್ರೀಕರಣದ ಓದು . ಕಾವ್ಯಸಂಕಲನದ ಕವನಗಳನ್ನಾಗಲಿ, ಕಥಾಸಂಕಲನದ ಕತೆಗಳನ್ನಾಗಲಿ, ಲೇಖಕಿ /ಲೇಖಕರ ಒಂದು ಕಾದಂಬರಿಯನ್ನಾಗಲಿ ವಿವೇಚಿಸುವಾಗ ಅದರ ಸಮಗ್ರ ಓದುವಿಕೆಯ ಅನುಭವವು ಅವರ ಬರಹಗಳಲ್ಲಿ ಪ್ರತಿಧ್ವನಿಸುತ್ತದೆ. ಬಿಡಿಬಿಡಿಯಾಗಿ ಕವನಗಳನ್ನು ಅಥವಾ ಕತೆಗಳನ್ನು ಅವುಗಳ ಪೂರ್ಣ ಗ್ರಹಿಕೆಯ ಮೂಲಕವೇ ತಮ್ಮ ನಿಲುವುಗಳನ್ನು ಅವರು ಪ್ರಕಟಿಸುತ್ತಾರೆ. ಅಲ್ಲಿ ಎಲ್ಲಿಯೂ ಬೀಸುಹೇಳಿಕೆಗಳು ಕಾಣಿಸುವುದಿಲ್ಲ. ಇವತ್ತಿನ ದಿನಗಳಲ್ಲಿ ಕೃತಿನಿಷ್ಠ ವಿಮರ್ಶೆ ಬಹಳ ಕಡಮೆಯಾಗಿರುವಾಗ  ಮಹೇಶ್ವರಿ ಅವರ ಇಲ್ಲಿನ ಬರಹಗಳಿಗೆ ವಿಶಿಷ್ಟ ಸಾಹಿತ್ಯಕ ಮೌಲ್ಯವಿದೆ. ಲೇಖಕ /ಲೇಖಕಿಯರ ಕೇವಲ ಹೆಸರಿನ ಬಲದಲ್ಲಿ ಅವರ ಕೃತಿಗಳನ್ನು ಇಲ್ಲಿ ಮೇಲ್ಮೈಯಿಂದ ನೋಡಿಲ್ಲ . ಗಂಗಾ ಪಾದೇಕಲ್ ಮತ್ತು ಲಕ್ಷ್ಮಿ ಕುಂಜತ್ತೂರು ಅವರ ಕತೆ ಮತ್ತು ಕಾದಂಬರಿಗಳ ಅಧ್ಯಯನವು ಬಹಳ ಮುಖ್ಯವಾಗುತ್ತದೆ .ಏಕೆಂದರೆ ಕನ್ನಡವಿಮರ್ಶೆಯಲ್ಲಿ ಅವರ ಕತೆ ಕಾದಂಬರಿಗಳ ವಿಸ್ತೃತ ಅಧ್ಯಯನ ಹೆಚ್ಚು ಕಾಣಿಸಿಕೊಂಡಿಲ್ಲ. ಸಾಹಿತ್ಯಕೃತಿಗಳ ಸಮಗ್ರ ಹಾಗೂ ಸೂಕ್ಷ್ಮ ಅಧ್ಯಯನ ಮಾಡದೆ ಕೇವಲ ಸಾಮಾಜಿಕ ಅಥವಾ ಸಾಂಸ್ಕೃತಿಕ ಹೇಳಿಕೆಗಳಲ್ಲೇ ಸಾಹಿತ್ಯಕೃತಿಗಳನ್ನು ನೋಡಬಾರದು ಎನ್ನುವ ದೃಷ್ಟಿಕೋನಕ್ಕೆ ಪೂರಕವಾಗಿ ಈ ಸಂಕಲನದ ಅನೇಕ ಲೇಖನಗಳು ವಿಶ್ಲೇಷಣೆ ಮತ್ತು ವಿವರಣೆಗಳನ್ನು ಒಟ್ಟಿಗೆ ಕೊಂಡೊಯ್ಯುತ್ತವೆ. 

ಮಹೇಶ್ವರಿ ಅವರ ‘ಶಬ್ದಸೂರೆ’ ಸಂಕಲನದಲ್ಲಿ ಜಾನಪದ ಮತ್ತು  ಸಾಂಸ್ಕೃತಿಕ ಅಧ್ಯಯನಕ್ಕೆ  ಸಂಬಂಧಪಟ್ಟ ಕೆಲವು ಬರಹಗಳಿವೆ .ಪ್ರಾದೇಶಿಕ ಅಧ್ಯಯನದ ಅನೇಕ ಒಳನೋಟಗಳನ್ನು ಈ ಬರಹಗಳಲ್ಲಿ ಕಾಣಬಹುದು .  ಸ್ಥಳೀಯ ಇತಿಹಾಸ -ಜಾನಪದ ಆಕರ, ಕನ್ನಡ ತುಳು ಸಾಹಿತ್ಯ -ಪ್ರಸ್ತುತ ಸ್ಥಿತಿಗತಿ, ಯಕ್ಷಗಾನ -ಸ್ತ್ರೀಪಾತ್ರಗಳು , ಕಾಸರಗೋಡಿನಲ್ಲಿ ಕನ್ನಡ ಭಾಷೆ ,ತಳಂಗೆರೆ ಶಾಸನ -ಹೊಸನೋಟ : ಇವು ಆ ವರ್ಗಕ್ಕೆ ಸೇರುತ್ತವೆ. ಇಲ್ಲಿನ ಲೇಖನಗಳಲ್ಲಿ ಸಂಶೋಧನೆಯ ತಳಹದಿಯಲ್ಲಿ ಪ್ರಾದೇಶಿಕ ಸಂಸ್ಕೃತಿಯ ನೆಲೆಗಳಾದ ಭಾಷೆ, ಸಾಹಿತ್ಯ, ಯಕ್ಷಗಾನ, ಶಾಸನಗಳನ್ನು ಮರುಅಧ್ಯಯನಕ್ಕೆ ಒಳಗುಮಾಡಲಾಗಿದೆ. ‘ಕನ್ನಡದಲ್ಲಿ ಪ್ರಾದೇಶಿಕ ಕಾದಂಬರಿಗಳು’ ಎಂಬ ಲೇಖನವು ಸಾಂಸ್ಕೃತಿಕ ಅಧ್ಯಯನ ಮತ್ತು ಸಾಹಿತ್ಯವಿಮರ್ಶೆಗಳ ಬೆಸುಗೆಯಾಗಿದೆ. ಬಹಳ ದೀರ್ಘ ಕಾಲ ಸ್ನಾತಕೋತ್ತರ ತರಗತಿಗಳಿಗೆ ಪ್ರಾಧ್ಯಾಪಕಿಯಾಗಿ ಪಾಠ ಮಡಿದ ಡಾ. ಮಹೇಶ್ವರಿ ಅವರು ಉನ್ನತಶಿಕ್ಷಣದಲ್ಲಿ ಕನ್ನಡಬೋಧನೆಯ ಬಗ್ಗೆ ಬರೆದ ಬರಹವು ಅನುಭವಜನ್ಯವಾಗಿದೆ. ಬದಲಾದ ಸನ್ನಿವೇಶದಲ್ಲಿ ಕನ್ನಡಬೋಧನೆಯ ಸವಾಲುಗಳನ್ನು ಅವರು ಗುರುತಿಸಿದ್ದಾರೆ. ‘ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಮಾನವೀಯ ಸಂಬಂಧಗಳು’ ಲೇಖನವನ್ನು ಇದರ ಜೊತೆಗೆ ಇಟ್ಟುಕೊಂಡೇ ಓದಬೇಕು. ಸಾಹಿತ್ಯ, ಕಲೆಗಳಂತಹ ಮಾನವಿಕ ಅಧ್ಯಯನವು ಮಾನವೀಯ ಸಂಬಂಧಗಳನ್ನು ಬೆಸೆಯಲು ಶಿಕ್ಷಣ ವ್ಯವಸ್ಥೆಯಲ್ಲಿ ಹೇಗೆ ಅನುಸಂಧಾನಗೊಳ್ಳಬೇಕು ಎನ್ನುವುದನ್ನು ಕುರಿತು ಚಿಂತನೆಮಾಡಲು ಈ ಬರಹವು ಪ್ರೇರಣೆಯನ್ನು ಕೊಡುತ್ತದೆ. 

ಈ ಸಂಕಲನದಲ್ಲಿ ಸೇರ್ಪಡೆ ಆಗಿರುವ ಬರಹಗಳು ಅನೇಕವು ಡಾ.ಮಹೇಶ್ವರಿ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದು ಪ್ರಕಟಿಸಿದವು. ಕೆಲವು ವಿಚಾರಸಂಕಿರಣಗಳಲ್ಲಿ ಸಮ್ಮೇಳನಗಳಲ್ಲಿ ಮಂಡಿತವಾದವು. ಹಾಗಾಗಿಯೇ ಇಲ್ಲಿನ ಲೇಖನಗಳ ಸಂರಚನೆಯಲ್ಲಿ ಭಿನ್ನತೆಯನ್ನು ಕಾಣಬಹುದು . ಲೇಖನಗಳ ದೀರ್ಘತೆ ಮತ್ತು ಹ್ರಸ್ವಗುಣದ ತಾರತಮ್ಯವನ್ನು ಗಮನಿಸಬಹುದು. ಕೆಲವೊಂದು ಬರಹಗಳನ್ನು ಇನ್ನಷ್ಟು ವಿಸ್ತರಿಸಬಹುದಿತ್ತು ಅನ್ನಿಸಬಹುದು. ಲೇಖನಗಳನ್ನು ವಿಷಯವಾರು ವರ್ಗಿಕರಿಸಬಹುದಿತ್ತು ಎನ್ನಬಹುದು. ವಿಮರ್ಶೆಯ ಮತ್ತು ಪ್ರಾದೇಶಿಕ ಅಧ್ಯಯನದ ಬರಹಗಳನ್ನು ಪ್ರತ್ಯೇಕವಾಗಿ ತರಬಹುದಿತ್ತು ಎನ್ನುವ ಅಭಿಪ್ರಾಯ ಹೊಂದಬಹುದು. ಇಂತಹ ಸಂಕೀರ್ಣಬರಹಗಳ ಸಂಕಲನದ ಬಗ್ಗೆ ಈ ಬಗೆಯ ಅಭಿಪ್ರಾಯಗಳು ಹೊಮ್ಮುವುದು ಸರ್ವೇಸಾಮಾನ್ಯ. ಡಾ.ಮಹೇಶ್ವರಿ ಅವರು ವೃತ್ತಿಯಾಗಿ ಆಯ್ಕೆಮಾಡಿಕೊಂಡದ್ದು ಮತ್ತು ಸಂತೋಷಪಟ್ಟು ದುಡಿದದ್ದು ಕನ್ನಡ ಸಾಹಿತ್ಯ ಸಂಸ್ಕೃತಿಯ ಅಧ್ಯಾಪಕಿಯಾಗಿ. ಕನ್ನಡ ಅಧ್ಯಾಪಕರಿಗೆ ಸಮಗ್ರ ಕನ್ನಡವೇ ಅವರ ವಿಶ್ವ. ಅದು ಭಾಷೆ ಸಾಹಿತ್ಯ ಸಂಸ್ಕೃತಿ ಎಲ್ಲವನ್ನೂ ಒಳಗೊಂಡ ಮಾತಿನ ಮತ್ತು ಬರಹದ ಜಗತ್ತು. ಆದ್ದರಿಂದಲೇ ಈ ಸಂಕಲನಕ್ಕೆ’ಶಬ್ದಸೂರೆ’ ಎಂಬ ಹೆಸರು ಚೆನ್ನಾಗಿ ಒಪ್ಪುತ್ತದೆ. ಸಾಹಿತ್ಯ ಆಸಕ್ತರು ತಮಗೆ ಬೇಕಾದವುಗಳನ್ನು ಈ ರಾಶಿಯಿಂದ ಹುಡುಕಾಡಿ ಸೂರೆಮಾಡಬಹುದು.

ಅಧ್ಯಾಪನ ವೃತ್ತಿಯ ನಿವೃತ್ತಿಯ ಬಳಿಕ ಕನ್ನಡ ಸಾಹಿತ್ಯದ ಬರವಣಿಗೆಯನ್ನು ಮಾಡುವವರ ಸಂಖ್ಯೆ ಈಗ ಇಳಿಮುಖವಾಗುತ್ತಾ ಬರುತ್ತಿದೆ. ನಮ್ಮ ಹಿರಿಯ ತಲೆಮಾರಿನ ಕನ್ನಡ ಸಾಹಿತಿಗಳು ತಮ್ಮ ಬದುಕಿನ ಕೊನೆಯ ದಿನಗಳ ವರೆಗೂ ಸಾಹಿತ್ಯ ರಚನೆಯ ಕೆಲಸ ಮಾಡುತ್ತಿದ್ದರು. ಆದರೆ ಈಗ ಅಂತಹ ಪ್ರವೃತ್ತಿ ಕಡಮೆಯಾಗಿದೆ. ಡಾ. ಮಹೇಶ್ವರಿ ಅವರು ಈ ಅಪವಾದಕ್ಕೆ ಹೊರತಾಗಿದ್ದಾರೆ. ಅವರು ಓದು ಬರಹದ ಆಸಕ್ತಿಗೆ ನಿವೃತ್ತಿ ಪ್ರಾಪ್ತವಾಗಿಲ್ಲ. ಇನ್ನೊಂದು ಅನನ್ಯತೆ ಎಂದರೆ ಸುಮಾರು ೬೫ ವರ್ಷಗಳ ಹಿಂದೆ ಕೇರಳರಾಜ್ಯಕ್ಕೆ ಸೇರಿದ ಕನ್ನಡದ ನೆಲ ಕಾಸರಗೋಡಿನಲ್ಲಿ ಹಳೆಯ ತಲೆಮಾರಿನ ಕನ್ನಡ ಸಾಹಿತಿಗಳು ಹೆಚ್ಚು ಮಂದಿ ಉಳಿದಿಲ್ಲ. ಬಹಳ ಮಂದಿ ನಿಧನರಾಗಿದ್ದಾರೆ, ಕೆಲವರು ತಮ್ಮ ವೈಯಕ್ತಿಕ ಕಾರಣಗಳಿಂದ  ಬೇರೆ ಊರುಗಳಲ್ಲಿ ಹೋಗಿ ನೆಲಸಿದ್ದಾರೆ. ಈಗ ಕಾಸರಗೋಡು ಸೀಮೆಯಲ್ಲಿ ಉಳಿದುಕೊಂಡು ಕನ್ನಡಸಾಹಿತ್ಯ ನಿರ್ಮಾಣದ ಕೆಲಸವನ್ನು ಮುಂದುವರಿಸಿಕೊಂಡು ಬರುತ್ತಿರುವ  ಮೂಲಕ ಕನ್ನಡವನ್ನು ಉಳಿಸುವ ಕಾಯಕವನ್ನು ಮಾಡುತ್ತಿರುವ   ಹಿರಿಯ ಲೇಖಕಿಯಾಗಿ ಕೂಡಾ ಡಾ. ಯು. ಮಹೇಶ್ವರಿ ಅವರು ಕನ್ನಡಿಗರ ಪ್ರೀತಿವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ.  ಅವರ ಸಾಹಿತ್ಯ ಪಯಣದ ೩೩ ಹೆಜ್ಜೆಗಳ ಈ ‘ಶಬ್ದ ಸೂರೆ’ ಸಂಕಲನಕ್ಕೆ ಮುನ್ನುಡಿಯ ಹೆಸರಲ್ಲಿ ಶುಭವನ್ನು ಕೋರಲು ನಾನು  ಅಭಿಮಾನಪಡುತ್ತೇನೆ. 

‍ಲೇಖಕರು avadhi

March 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: