ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಖ್ಯಾತ ವಿದ್ವಾಂಸ ಡಾ. ಬಿ.ಎ.ವಿವೇಕ ರೈ ಅವರಿಗೆ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡುವ ಶ್ರೀಮತಿ ಟಿ. ವಿಮಲಾ ವಿ. ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಆಯ್ಕೆ ಸಮಿತಿಯು ೨೦೨೨ನೇ ಸಾಲಿನ ಪ್ರಶಸ್ತಿಗೆ ನಿವೃತ್ತ ಕುಲಪತಿ, ಕನ್ನಡ ಮತ್ತು ತುಳು ಸಂಶೋಧಕ, ಜಾಗತಿಕ ಜಾನಪದ ತಜ್ಞ, ಪ್ರಾಚೀನ ಕನ್ನಡ ಕಾವ್ಯಗಳ ಇಂಗ್ಲಿಷ್ ಅನುವಾದಕ, ಅಂಕಣಕಾರ, ಡಾ. ಬಿ. ಎ ವಿವೇಕ ರೈ ಅವರನ್ನು ಅಯ್ಕೆ ಮಾಡಿರುವುದಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪ್ರಶಸ್ತಿಯನ್ನು ಶ್ರೀ ಟಿ.ವಿ ಮೋಹನ್‌ದಾಸ್ ಪೈ ಅವರು ಸ್ಥಾಪಿಸಿದ್ದು ಪ್ರಶಸ್ತಿಯು ೧.೦೦ ಲಕ್ಷ ರೂ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಪುಣಚ ಗ್ರಾಮದಲ್ಲಿ ೧೯೪೬ರಲ್ಲಿ ಜನಿಸಿದ ಡಾ. ಬಿ.ಎ ವಿವೇಕ ರೈ ಅವರು ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ. ಮೈಸೂರು ವಿ.ವಿಯಿಂದ ಜಾನಪದ ವಿಷಯದಲ್ಲಿ ಪಿ.ಎಚ್ ಡಿ ಪದವಿ ಪಡೆದ ಮೊದಲಿಗರು ಡಾ. ರೈ ಅವರು. ಮಂಗಳೂರು ಸ್ನಾತಕೋತ್ತರ ಕೇಂದ್ರ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಸುಮಾರು ೩೪ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ೧೮ ವರ್ಷಗಳ ಕಾಲ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿ ಮತ್ತು ಕರ್ನಾಟಕ ರಾಜ್ಯದ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಜರ್ಮನಿಯ ವ್ಯೂತ್ಸ್ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಯುರೋಪಿಯನ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯ ಮತ್ತು ಸಂಸ್ಕ್ರತಿಯನ್ನು ಬೋಧಿಸಿದವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ಕನ್ನಡದಲ್ಲಿ ಇವರು ೨೪ ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ. ೧೮ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಕರಾಗಿ ಹೊರತಂದಿದ್ದಾರೆ. ತುಳುವಿನಲ್ಲಿ ಇವರ ೨ ಕೃತಿಗಳು ಪ್ರಕಟವಾಗಿವೆ. ಇಂಗ್ಲಿಷಿನಲ್ಲಿ ಇತರರೊಂದಿಗೆ ೬ ಕೃತಿಗಳನ್ನು ರಚಿಸಿದ್ದಾರೆ.
ಅವರ ತುಳು ಕೃತಿಗಳು: ‘ತುಳು ಬರವು ಸರವು’, ವಚನ : ಶರಣರ (೨೫೦೦ ಕನ್ನಡ ವಚನಗಳ ತುಳು ಅನುವಾದ) ಮುಖ್ಯವಾದವು.
ಕನ್ನಡ ಪುಸ್ತಕಗಳು
ಅನ್ವಯಿಕ ಜಾನಪದ, ಭಾರತೀಯ ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು, ಸ್ಲಾವೊಮೀರ್ ಮ್ರೋಜೆಕ್ ಕತೆಗಳು,
ನೆತ್ತರ ಮದುವೆ (ಫೆಡರಿಕೊ ಗಾರ್ಸಿಯ ಲೊರ್ಕ), ಅಕ್ಕರಮನೆ, ಅರಿವು ಸಾಮಾನ್ಯವೆ, ಗಿಳಿಸೂವೆ, ಕನ್ನಡ ನುಡಿ ನಡೆಯ ಬರಹಗಳು ಮೊದಲಾದ ೨೪ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ.

A Handbook of Kannada prosody ಅವರ ಸ್ವತಂತ್ರ ಕೃತಿ
ಸಂಪಾದಿತ ಪುಸ್ತಕಗಳು:
ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು, ಕಡೆಂಗೋಡ್ಲು ಸಾಹಿತ್ಯ, ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯ, ಯಕ್ಷಗಾನ ಪ್ರಸಂಗ ಸಂಪುಟ, ಪೊನ್ನ ಕಂಠಿ, ತುಳು ಸಾಹಿತ್ಯ ಚರಿತ್ರೆ, ಮಂಗಳೂರು ದರ್ಶನ ಮೊದಲಾದ ೧೮ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಪಾದಿಸಿದ್ದಾರೆ.
ಜರ್ಮನ್ ಭಾಷೆಗೆ ಅನುವಾದ
ಡಾ. ರೈ ಅವರು ಡಾ. ಕತ್ರಿನ್ ಬಿಂದರ್ ಜೊತೆಗೆ ತೇಜಸ್ವಿ ಅವರ ಕರ್ವಾಲೊ ಕಾದಂಬರಿಯನ್ನು ಜರ್ಮನ್ ಭಾಷೆಗೆ ಅನುವಾದಿಸಿದ್ದಾರೆ.
ಇಂಗ್ಲಿಷ್ ಪುಸ್ತಕಗಳು (Edited)
Siri Epic as performed by Gopala Naika (2 Vol), Classical Kannada poetry and Prose –A. Reader (with C.N. Ramachandran), Oral Traditions in South India – Essays on Tulu Oral Epics, Medieval Kannada Literature : A Reader ‹(with C.N. Ramachandran) and other Four books.
ಪ್ರಶಸ್ತಿ-ಪುರಸ್ಕಾರಗಳು:
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ (೧೯೯೬), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೯), ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೨೦೦೨), ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ (೨೦೦೩), ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ (೨೦೧೩), ಮಂಗಳೂರು ವಿ.ವಿ ಗೌರವ ಡಾಕ್ಟರೇಟ್, ಮಣಿಪಾಲ ವಿ.ವಿ ಹೊಸ ವರ್ಷದ ಪ್ರಶಸ್ತಿ (೨೦೧೭) ಮುಖ್ಯವಾದವು.
0 ಪ್ರತಿಕ್ರಿಯೆಗಳು