ಬಿದಲೋಟಿ ರಂಗನಾಥ್
ಉಗಾದಿ ಬಂತೆಂದರೆ
ಸರೀಕರು ಉಡುವ ಸೀರೆಯಲ್ಲಿ
ಅಮ್ಮನ ಮನಸು ಬೆಯ್ಯುತಿತ್ತು
ಹೊಟ್ಟೆ ಉರಿಯಿಂದಲ್ಲ
ಅಸಾಹಕತೆಯ ತೊಡರಿನಿಂದ
ಕೂಲಿ ಕರೆಯದ ದಿನಗಳಲ್ಲಿ ಬರುವ ಉಗಾದಿ
ಗೇಣು ಗೇಣಿಮಾಡದ ಅಪ್ಪನ ಬದುಕು
ತಿಂಗಳ ಮುಂಚಿನಿಂದಲೂ
ಹೊಂಗೆ ಕಾಯಿ ಬೇವಿನ ಬೀಜದ ಮೊರೆ ಹೋಗಿ
ಬಯಲು ಹಳ್ಳಕೊಳ್ಳವಲೆದು
ಸೇರು ಸೆಟಾಕು ಅಮ್ಮನ ಮಡಿಲು ತುಂಬಿ
ಕೂಡಿಟ್ಟ ಕೈಯಲ್ಲಿ ಮಕ್ಕಳ ಗುಳಿಬಿದ್ದ ಕಣ್ಣಿನ ಚಿತ್ರ
ಬೇಳೆ ಬೆಲ್ಲವ ಕೊಂಡು
ಜಾವಕ್ಕೆ ಬೇಯ್ಯುವ ಬೇಳೆಯಲಿ
ಬೆವರು ಬಿದ್ದು ಉರಿಯುವ ಸೌದೆ
ಸುಣ್ಣ ಕದರಿನಿಂದ ಅಲಂಕಾರ ಉಟ್ಟ ಜಂತೆ ಮನೆ
ಗವಾಕ್ಷಿಯಿಂದ ಹೊಗೆ ಮಾರಿಯರ
ಮುಖ ಬೆಂದು ಮೋಡವಾಗುವ ಪರಿಗೆ
ಹಬ್ಬವಾಗುವ ಕನಸಿನ ರೆಕ್ಕೆ ಬಲಿಯುತ್ತಿದ್ದವು

ಸಂತೆ ಅಂಗಿ
ನಿಕ್ಕರುಗಳ ತಂದು ಮಕ್ಕಳಿಗೆ ತೊಡಿಸುವಾಗ
ಉಗಾದಿಯ ಸಂಭ್ರಮಕ್ಕೊಂದು ಮೆರಗು!
ಅಪ್ಪನೂ ತೊಡುತ್ತಿದ್ದ ಬೆಲ್ಟ್ ನಿಕ್ಕರು
ಜೋಳಂಗಿ ಅಜ್ಜಿ ಬಾಳೇಕಾಯಿ ಜಿಲ್ಲರೆ
ಬಸಿದು ಬರಿದಾಗಿ…
ಅಮ್ಮನಿಗೂ ಒಂದು ಸೀರೆಯ ಕನಸು
ಆದರೆ
ಕಾಸಿಲ್ಲದ ದುಡ್ಡಿನ ಚೀಲ ಮುದುರಿ ಬಿದ್ದು
ಕಡೆಯುತಿತ್ತು
ತವರಿನಲಿ ಅಪ್ಪ ಕೊಡಿಸುತ್ತಿದ್ದ ಲಂಗ ದಾವಣಿ
ಕಣ್ಣ ಕನ್ನಡಿಯ ಚಿತ್ರದಲಿ ಸಮ್ಯಮದ ಚಿತ್ತ
ಒಂದೊಂದು ಮರಕ್ಕೂ
ಹೊಸ ಹುಟ್ಟು ಯೌವನ ಬರುವಂತೆ
ಈಗಲೂ ಅಮ್ಮನಿಗೆ ಕಣ್ಣ ಕನಸು
ಮಗ ತರುವ ಸೀರೆಯಲಿ
ಹೋದ ದಿನಗಳ ಹೆಬ್ಬೆಟ್ಟಿಲ್ಲ
ಸಿಹಿ ಕನಸುಗಳಲಿ ತೇಲುವ
ರುಜುಗಳ ಮೇರವಣಿಗೆ…
ಆದರೆ
ಸುಕ್ಕು ಗೆರೆಗಳ ನಡುವೆ
ಅಮ್ಮ ಉಡುವ ಕನಸಿನ ಸೀರೆ
ಚುಕ್ಕಿಗಳ ಬಾಸಿ ಬಾಸಿ ಮಡಿಲ ತುಂಬುತ್ತಿದೆ
Very touching….
ಈ ಕವನ ಓದಿ ಅಳು ಬಂತು