‘ಬಂಡಾಯದ ಬಂಡೆ ಮೇಲೆ ಬಿಸಿಗೊಂಡ’ ಕವಿತೆಗಳು

ಬಿದಲೋಟಿ ರಂಗನಾಥ್
ವಿಶಾಲ್ ಮ್ಯಾಸರ್ ಇತ್ತಿನ ಯುವ ಕವಿಗಳ ಸಾಲಿನಲ್ಲಿ ಸದ್ದುಮಾಡುತ್ತಿರುವ ಹೆಸರು. ಈ ಹುಡುಗನಿಗೆ ಕಾವ್ಯವೆಂದರೆ ಅದೇನೋ ಅದಮ್ಯ ಪ್ರೀತಿ ವ್ಯಾಮೋಹ. ತನ್ನ ನಡುವೆ ಬದುಕುತ್ತಿರುವ ಶೋಷಿತ ಚಿತ್ರಣಗಳನ್ನು ಬಂಡಾಯದ ಮೂಲಕ ಹೊರ ಹಾಕಲು ಕಾವ್ಯದ ಮೂಲಕ ಪಣ ತೊಟ್ಟಂತಿರುವ ಈ ಯುವ ಕವಿ ಮೊನ್ನೆತಾನೆ ಅವರ ಮೊದಲ ಸಂಕಲನ “ಬಟ್ಟೆಗಂಟಿದ ಬೆಂಕಿ” ಬಿಡುಗಡೆ ಮಾಡುವ ಮುಖೇನ ಕಾವ್ಯಜಗತ್ತನ್ನು ಪ್ರವೇಶಿಸಿದ್ದಾರೆ. ಅವರಿಗೆ ಅಭಿನಂದನೆಗಳು.
ಇನ್ನು ಇವರ ಕವನ ಸಂಕಲನ ಕುರಿತು ಬರೆಯುವುದಾದರೇ, ಒಟ್ಟು ಈ ಸಂಕಲನದಲ್ಲಿ 40 ಕವಿತೆಗಳಿವೆ.ನಾಡಿನ ಹಿರಿಯ ಸಾಹಿತಿಗಳಾದ ನಾಡೋಜ ಬರಗೂರು ರಾಮಚಂದ್ರಪ್ಪನವರ ಅರ್ಥಪೂರ್ಣ ಮುನ್ನುಡಿ ಬರೆಯುವುದರೊಂದಿಗೆ ಮುಂದೆ ಕಾವ್ಯರೂಪುಗೊಳ್ಳುವ ಶಶೀರದ ಬಗ್ಗೆ ಕವಿಗೆ ಕಿವಿಮಾತನ್ನು ಹೇಳುವ ಮೂಲಕ ಬೆನ್ನುತಟ್ಟಿದ್ದಾರೆ ವಿಶಾಲ್ ನ ಗುರುಗಳಾದ ಪಿ .ಆರ್ ವೆಂಕಟೇಶ್ ರವರು ಚಂದದ ಬೆನ್ನುಡಿ ಬರೆಯುವ ಮೂಲಕ ಶಿಷ್ಯನನ್ನು ಹರಸಿದ್ದಾರೆ.

ನಾನು ಬಳ್ಳಾರಿಗೆ ಸಂಗಂ ವಿಶ್ವ ಕವಿ ಸಮ್ಮೇಳನಕ್ಕೆಂದು ಹೋಗಿದ್ದಾಗ ನಾನು ಅದೇ ತಾನೇ ಸಂಕಲನ ಕವಿಯ ಕೈ ಸೇರಿದಾಗ ಮೊದಲ ಮಗು ಜನಿಸಿದ ಸಂಭ್ರಮ ಕವಿಯ ಹಾಗೂ ವೆಂಕಟೇಶ್ ರವರ ಮುಖದಲ್ಲಿ ಇತ್ತು. ಈ ಕವಿ ಮೊದಲು ಅವರ ಗುರುಗಳಾದ ವೆಂಕಟೇಶ್ ಅವರಿಗೆ ಕೊಟ್ಟು ಎರಡನೆಯದಾಗಿ “ರಂಗಣ್ಣ ಇದು ನಿಮಗೆ.ಎನ್ನುತ್ತ ಸಂಕಲನ ಕೈಗಿಟ್ಟು ಅಣ್ಣ ಸಂಕಲನ ಕುರಿತು ಬರೆಯಬೇಕೆಂದು ಪ್ರೀತಿಯ ತಾಕೀತು ಮಾಡಿದ.ಅವನ ಪ್ರೀತಿಗೆ ಸೋಲಲೇ ಬೇಕಾದ ಅನಿವಾರ್ಯತೆ ಒದಗಿ ಬಂತು.
ಈ ಸಂಕಲನ ಮೊದಲ ಕವಿತೆಯಲ್ಲಿ ಧರ್ಮ ಧರ್ಮಗಳ ನಡುವಿನ, ಒಳಕದನವನ್ನು ಕವಿತೆಯ ಮೂಲಕ ಹೇಳುತ್ತ, ಒಂದಷ್ಟು ಚಿಂತನೆಗೆ ಬೀಳುವ಼ತೆ ಮಾಡುತ್ತದೆ. ಪ್ರೇಮ ಕವಿತೆ ಬರೆಯುವ ವಯಸ್ಸಿನಲ್ಲಿ ಇಂತಹ ಕವಿತೆ ಬರೆದಿದ್ದಾರಲ್ಲ ಎಂದು ಅಚ್ಚರಿಯಾಗುತ್ತದೆ. ಹೌದು ಕವಿ ಯಾವಾಗಲು ಸಮಾಜದಲ್ಲಿ ನಡೆಯುವ ಸಮಸ್ಯೆಗಳಿಗೆ ಕಿವಿಯಾಗುವ ಮೂಲಕ ಪ್ರತಿಭಟಿಸಬೇಕು. ಇಂತಹ ದಾರಿಯಲ್ಲಿ ಈ ಯುವ ಕವಿಯು ನಡೆಯುತ್ತಾನೆಂಬ ನಂಬಿಕೆ ಈ ಸಂಕಲನ ಮೂಡಿಸುತ್ತದೆ.
“ಆಜಾನ್ ಕೂಗು
ಕಿವಿ ಅಲೆಗೆ ಬೀಳುತ್ತಿದ್ದಂತೆ
ಸೆರಗು ಹೊದೆವ ಅವ್ವ ಕಾಣೆಯಾಗಿದ್ದಾಳೆ
ನನ್ನವರ ಶವಯಾತ್ರೆಗೆ ಹೆಗಲು ಕೊಡುತ್ತಿದ್ದ
ಕರೀಂ ಸಾಬ್ ಗುರುತೇ ಇಲ್ಲ
ದಮನಿತರ ಸೋಗೆ ಬಿಲದಲ್ಲಿ* *ಕ್ಯಾಂಡಲ್ ಬೆಳಗಿದ
ಪೀಟರ್ ಇಂದು ನಾಪತ್ತೆ
ಇವರೆಲ್ಲ ಎಲ್ಲಾದರೂ ಕಂಡರೆ ದಯಮಾಡಿ ಹೇಳಿ”
(ಕಾಣೆಯಾಗಿದ್ದಾರೆ ಕಂಡರೆ ಹೆಳಿ ಬಿಡಿ)
ಈಗೆ ಕೇಳುವ ಕವಿಯ ಮಾತಿಗೆ ಕಿವಿ ಕೊಡುವ ಮನಸುಗಳು ಬೇಕು. ಧರ್ಮ ಧರ್ಮಗಳ ನಡುವೆ ಕಂದಕ ತೋಡುವ ಕೈಗಳು, ವ್ಯವಸ್ತೆ ನಮ್ಮ ಕಣ್ಣ ಮುಂದೆ ಇರುವಾಗ, ಅದೇಗೆ ನಮ್ಮ ಮಾನವ ಧರ್ಮದ ಫಸಲು ಎದೆಯೊಳಗಿಳಿಯುತ್ತದೋ ಗೊತ್ತಿಲ್ಲ.
ನಾನಗಲೇ ಹೆಳಿದೆ ಈ ಕವಿ ಕಾವ್ಯವನ್ನು ಅಪರಿಮಿತವಾಗಿ ಪ್ರೀತಿಸುವ ಕವಿಯೆಂದು ಅದರ ಇಂಬಾಗಿ ಇವರ ಕವಿತೆಯನ್ನೇ ನೋಡಿ
“ಕಾವ್ಯವನ್ನು ಪ್ರೀತಿಸಿದಷ್ಟು
ನಿನ್ನೆಂದು ಪ್ರೀತಿಸಲಿಲ್ಲ ಹುಡುಗಿ
ಆದರೂ ನಮ್ಮಿಬ್ಬರ ಕೊನೆಯ ಮಾತು…..?
ಇಂದು ಕವಿತೆಯಾಗಿದೆ
ಮೂಸೆಯಲ್ಲಿ ಮೌನ ನಿಗಿಕೊಂಡವಾಗಿದೆ
ಜಳಕ್ಕೆ ನೀರೊಡೆದಿದೆ
ಬೆವರು ಉಪ್ಪು ನೀರು ನಿನ್ನ ನೆನಪಷ್ಟು ಸಿಹಿಯಲ್ಲ ನನ್ನ ಮಾತಿನಷ್ಟು ಸಪ್ಪೆಯೂ ಅಲ್ಲ
ಕಣ್ಣ ತುಂಬ ಕಪ್ಪು ಮೋಡ (ನಿಶಾಚರಿಯಾಗಲಾರೆ)
ಬಡತನ, ಹಸಿವು ಅವಮಾನ ಶೋಷಣೆ ಅನುಭವಿಸಿದವನಲ್ಲಿ ಪ್ರೇಮ ಅರಳಿದರೂ ಕೊನೆಕಾಲ ಉಳಿಯಲಾಗದು. ನಾನಿರುವುದೇ ಹೀಗೆ ಎಂಬ ನಿಷ್ಠೂರತೆಯಲ್ಲಿ ಮಣೆಹಾಕಿಕೊಂಡು ಕೂರುವುದು ಕಡಿಮೆಯೆ. ಇಂತಹ ಸನ್ನಿವೇಶವನ್ನು ಕಾವ್ಯದ ಮೂಲಕ ವಿಶಾಲ್ ನೈಜತೆಯನ್ನು ಬಿಚ್ಚಿಡುವ ಮೂಲಕ ನಿರಾಭರಣನಾಗಿರುವುದು ಅವರ ಮುಂದಿನ ಕಾವ್ಯದ ದಿಕ್ಸೂಚಿಯಾಗಿದೆ ಎಂದೆಳಬಹುದು.
“ಬೆಟ್ಟಗುಡ್ಡಗಳು
ಕವಲು ದಾರಿಗಳು
ಕೂಗಿ ಹೇಳಿ ನಾವು
ಆದಿವಾಸಿಗಳೆಂದು”
“ದುಡಿದ ಕೈಗಳೇ
ಬಿಗಿದ ಬಾಯಿಗಳು
ಗಂಜಲು ಬಳವೆ ಗಟ್ಟಿ ದೇಹಗಳೆ
ಹಸಿದ ಹೊಟ್ಟೆಗಳು
ಬಾಯಿಬಿಟ್ಟು ಹೇಳಿ
ಮೂಲನಿವಾಸಿಗಳಿಂದ
ಈ ಕವಿತೆಯಲ್ಲಿ ಒಂದಷ್ಟುಲಯ ಕೆಟ್ಟರು ದನಿಯಿದೆ.ಎದೆಗಾರಿಕೆ ಇದೆ.ತನ್ನತನದ ಅಪ್ಪುಗೆ ಇದೆ.
ಇದರಿಂದ ಕವಿ ಸಿದ್ದಲಿಂಗಯ್ಯನವರ ಕವಿತೆಗಳ ಓದನ್ನು ನೆನಪಿಸುತ್ತದೆ.ಹೌದು ಈಗಿನ ಯುವ ಕವಿಗಳಲ್ಲಿ ಒಂದು ದಿಟ್ಟತನ ನೇರವಂತಿಕೆಯ ಅವಶ್ಯಕತೆ ನಿಜಕ್ಕೂ ಬೇಕಾಗಿದೆ.ಅರಿವಾಗದ ಕಿವಿ ಮನಸುಗಳಿಗೆ ಅರ್ಥ ಮಾಡಿಸಬೇಕಾಗಿದೆ.ದನಿ ಹೊದ ಮನಸುಗಳಿಗೆ ದನಿಯಾಗಬೇಕಿದೆ.ಈ ಕವಿತೆಯಲ್ಲಿ ವಯೋಸಹಜ ಸಿಟ್ಟು ಸೆಡವು ಕೊಂಚ ಹೆಚ್ಚಿಗೆ ಇದೆ.ಈಗಿನ ವ್ಯವಸ್ತೆಯ ವಿರುದ್ಧ ತಿರುಗಿಬೀಳುವ ದಾಟಿ ನಿಜಕ್ಕೂ ಬೆಚ್ಚಿ ಬೀಳಿಸುತ್ತದೆ.ಇಷ್ಟು ಶತಮಾನ ಕಳೆದರೂ ಬದಲಾಗದ ಸಮಾಜದ ಎದುರು ಎದೆ ಸೆಟೆದು ನಿಲ್ಲುವ ಕವಿತೆ ಸರಳವಾದರೂ ಒಂದು ನಿಲುವಿದೆ.
ಕರೋನದ ಎರಡನೇ ಅಲೆ ಬದುಕನ್ನೇ ಬಸವಳಿಸಿತ್ತು.ವೆಂಟಿಲೇಟರ್ ಸಿಗದೆ ಸುಮಾರು ಜನ ಜೀವತೆತ್ತರು. ಸುಡಲಾಗದೆ ಹೂಳಲು ಜಾಗವಿಲ್ಲದೆ ಕೆಲವೊಂದು ಶವಗಳನ್ನು ನಿಷ್ಕಲ್ಮಶವಾಗಿ ಹರಿಯುತ್ತಿದ್ದ ನದಿ ನೀರಿಗೆ ತೇಲಿ ಬಿಟ್ಟ ಸನ್ನಿವೇಶ ಕುರಿತ ಕವಿತೆ ಮನಕಲಕುವಂತಿದೆ.
ಈಗಿನ ದುರಾಡಳಿತ ಸರ್ಕಾರದ ವಿರುದ್ಧ ದನಿ ಎತ್ತುವ ಕವಿಗೆ ಒಂದು ಜವಬ್ಧಾರಿಯುತವಾದ ಬಂಡಾಯದ ನಡೆ ನಿಜಕ್ಕೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಆಹ್ವಾನಿಸುತ್ತದೆ.
ಉಣ್ಣುವ ಅನ್ನಕ್ಕೆ,ಬಿತ್ತುವ ನೇಗಿಲಿಗೆ,
ದುಡಿಯುವ ಕೈಗಳಿಗೆ
ದಾಖಲೆಯ ಕೇಳುವ ದೊರೆ
ಬೆನ್ನೆಲುಬ್ ಎದೆಯಲ್ಲಿ ಕಿಚ್ಚು ಹತ್ತಿದರೆ ನೀರೆರಚುವ ಕೇಳದಿರೆ ನೆತ್ತಿಗೆ ಮೊಳೆ ಹೊಡೆಯುವಮೂಕರು, ಬ್ರೆಡ್ಡಲ್ಲಿ, ಗಾಳಿಯಲ್ಲಿ ಮನುಷ್ಯನ ಕದಿಯುವ ಖದಿಮರು
ಕೇಳಿದರೆ ಬರೀ ದೇವರ ತೋರಿಸುವವರ ಕೈಗೆ
ದೇಶ ಕೊಟ್ಟು ಕುಂತಿದ್ದೇವೆ ಸಖಿ(ಕನಸು ಕಾಣುವ ಹೊತ್ತಲ್ಲ)
ಮನುಷ್ಯ ಕುಲಂ ತಾನೊಂದೇ ಒಲಂ ಎಂಬಂತೆ ಬದುಕುವ ಮನುಷ್ಯರ ನಡುವೆ ಇಬ್ಬಗೆಯ ನೀತೆಯನ್ನು ತರುವಲ್ಲಿ ಕುತಂತ್ರ ನಡೆಯ ವಿರುದ್ದ ಪ್ರತಿಭಟಿಸುವಲ್ಲಿ ಈ ಕವಿತೆ ಗೆದ್ದಿದೆ.ವೈಚಾರಿಕತೆಯ ನಿಲುವನ್ನು ಬಿತ್ತಿ ಧರ್ಮದ ಅಫೀಮು ಏರಿಸಿಕೊಂಡ ಸರ್ಕಾರ ದೇವರು ಪೂಜೆಯೆಂಬ ಮೌಢ್ಯದ ದವಡೆ ತಳ್ಳುವ ಸಂಘಿಗಳ ವಿರುದ್ಧ ನಡೆ ನಿಜಕ್ಕೂ ಚಿಂತನೆಗೀಡು ಮಾಡುತ್ತದೆ.
ದೇವದಾಸಿ ಪದ್ದತಿಯಿಂದ ತನ್ನ ಅಜ್ಜಿ ಹಾಗೂ ಹೆಣ್ಣು ಕುಲವೇ ಅನುಭವಿಸಿದ ನೋವನ್ನು ಕಣ್ಣಿಗೆ ಕಟ್ಟಿದ ರೀತಿಯಲ್ಲಿ ಚಿತ್ರಿಸಿರುವ ಕವನ “ಅವಳು ” ತನ್ನ ಕುಟುಂಬದ ಸದಸ್ಯೆಯೊಬ್ಬಳು ದೇವರ ಹೆಸರಲ್ಲಿ ದಾಸಿಯಾಗಿ ಬಲವಂತವಾಗಿ ಸೆರಗು ಹಾಸುವ ಅನ್ನಿಷ್ಟಕ್ಕೆ ತಳ್ಳಿದ ಸಮಾಜದ ವಿರುದ್ಧ ಬಾಲಕನಿಗೆ ಸಂಕಟ, ಬೆಳೆದ ಹಿರಿಯವನಾದ ಮೇಲೆ ಅಜ್ಜಿಯ ಅನುಭವದ ಮೂಸೆಯಲ್ಲಿ ಉಂಡ ವಾಸಿಯಾಗದ ಗಾಯ, ಬೆಳೆದ ಹುಡುಗನ ಕಣ್ಣು ಪ್ರತಿಭಟಿಸುವ ಜವಬ್ಧಾರಿ ಈ ಕವನದಲ್ಲಿ ಮೂಡಿದರು ದೇವದಾಸಿಯೊಬ್ಬ ತಾನು ಮೈ ಮಾರಿದ ಕಾಸದಲ್ಲಿ ಕುಟುಂಬದ ಜವಬ್ಧಾರಿ ಹೊತ್ತು ಯಜಮಾನಿಕೆಯಲ್ಲೇ ದೀಪವಾಗಿ ಉರಿದು ಹೋಗಿದ್ದು ಕಣ್ಣಂಚಲ್ಲಿ ನೀರುಕ್ಕಿಸುತ್ತದೆ.
“ಇವಳ ಬದುಕು
ಪುರುಷನ ಎದೆಯನ್ನು ಹಣ್ಣಾಗಿಸುತ್ತೆ “
ಎನ್ನುತ್ತಾರೆ ವಿಶಾಲ್.ಚಿಂತನೀಯ ಸಾಲುಗಳು
ಮತ್ತು ಚರ್ಚಿಸಿ ಆತ್ಮಾವಲೋಕನಕ್ಕೆ ಒಡ್ಡುತ ಕತ್ತಲೆಯಲ್ಲಿ ಬೆಳಕನ್ನು ಹುಡಕಬೇಕಾದ ಅನಿವಾರ್ಯತೆಗೆ ನಿಲ್ಲಿಸುತ್ತದೆ
ಇನ್ನೊಂದು ಕವಿತೆ “ನಮ್ಮಪ್ಪ ಖರೆನ ಕವಿತೆ” ಈ ಕವಿತೆಯಲ್ಲಿ ಮೂಡಿರುವ ಅಂತರಾಳದ ತಾಯಿಯ ಭಾವಗಳು ಓದುಗನನ್ನು ಹಿಡಿದು ನಿಲ್ಲಿಸುತ್ತದೆ.ಬಡತನದ ಬಡಬಾಗ್ನಿಯಲ್ಲಿ ತೆರುಪಾದ ತನ್ನ ಗಂಡನ ಬದುಕನ್ನು ಮಗನಲ್ಲಿ ನೋಡ ಬಯಸುವ ತಾಯಿ ಕರುಳು ಮಮತೆಯ ದಾರಿಯನ್ನು ತೆರೆದು ತೋರಿಸುತ್ತದೆ.ತಂದೆಯ ಹಾದಿಯಲ್ಲಿ ಸಕಾರಗೊಳ್ಳದ ಕನಸುಗಳನ್ನು ಮಗನಲ್ಲಿ ಕಾಣುವ ಹೆಬ್ಬಯಕೆ ನಿಜಕ್ಕೂ ಸತ್ಯದ ಕಾಣ್ಕೆಯೇ ಸರಿ.ಅವ್ವನ ಒಡುಕು ಬದುಕಿಗೆ ಮಗನು ಇಂಬಾಗಿ ನಿಲ್ಲುವ ಅಭಿಲಾಷೆ ಪ್ರತಿತಾಯಿ ಹೃದಯ ಆಶಯವೂ ಕೂಡ.
“ಅವ್ವ ಹೇಳಿದ್ದು ‘ನೀನ್ ಥೇಟ್ ನಿಮ್ ಅಪ್ಪನ್ ಹಂಗ’
ಕಿವಿಗೆ ಬಿದ್ದೇಟಿಗೆ ಮುರುಕು ಕನ್ನಡಿ ಮುಂದ ನಿಂತು ಹುಡುತ್ತಿದ್ದೆ. ಕಾಣಲೇ ಇಲ್ಲ.
ಕಂಡಿದ್ದು ಅವ್ವನ ಒಡಕು ಬದುಕು ಮಾತ್ರ”
ಇಲ್ಲೊಂದು ಎದೆಯಾಳದ ಪಿಸುದನಿ.ಕೇಳಿಸಿಕೊಳ್ಳದ ದಾರಿಯ ಮೇಲೆ ನಿಲುವು ಗನ್ನಡಿ ಬದುಕಿನ ಚಿತ್ತಾರ ಬಿಡಿಸಿದೆ
ಈ ಸಂಕಲನದ ಶಕ್ತ ಮತ್ತು ಉತ್ತಮ ಸಾಲಿನಲ್ಲಿ ನಿಲ್ಲಬಹುದಾದ ವಿಶಾಲ್ ನ ಕಾವ್ಯ ಶಕ್ತಿಯನ್ನು ಅನಾವರಣಗೊಳಿಸುವ ಕವಿತೆ “ಆಕೆ- ಅವ್ವ”
“ಮಯ್ಯ ತುಂಬಾ
ಕನ್ನಡಿಯ ಸೀರೆ ಉಟ್ಟು
ತಿಂಗಳನ ಚುಕ್ಕೆಗಳ
ಬೆಳದಿಂಗಳ ಸೆರಗಲ್ಲಿ ತೋರಿಸುತ್ತದೆ..
ನಾಭಿ ಕೆಳಗೆ ಸೂರ್ಯನ ಬಚ್ಚಿಟ್ಟು..
ಬೆಚ್ಚಗಿಡುತ್ತಾಳೆ ಅವನನ್ನು
ಅನುದಿನದ ಆಟಕ್ಕೆ ಕೊರಳ ದೇವರೊಂದೇ ಸಾಕ್ಷಿ..
ಆಕೆ ಈಗ ಅವ್ವ
ದಿನವೂ ಮಯ್ಯ ಮುರಿದು
ಕುಡುಗೋಲು ಹಿಡಿದು
ಜಗದ ಕಳೆ ಕಿತ್ತು,
ಬಿಸಿಲು ಎರವಲು ತರುತ್ತಾಳೆ..
ರಾತ್ರಿ
ಕುದಿಯುವ ಹೆಸರಿಗಷ್ಟುಬಿಸಿಲು ಬಸಿದು ಹೊಟ್ಟೆ ತುಂಬಿಸುತ್ತಾಳೆ,
ಉಳಿದಷ್ಟನ್ನು ರಟ್ಟೆಯ ತಿಂಬಡಿ ಬಚ್ಚಿಟ್ಟು..
ತನ್ನದೇ ಚಿಗುರುಗಳ ಅವುಡುಗಚ್ಚಿಗೊಂಡು ಪ್ರೀತಿ ಹಚ್ಚಡವ ಹೊದಿಸಿ, ಬೆನ್ನ ತಟ್ಟುತ್ತಾಳೆ ಅವ್ವ.”
ಈ ಕವಿತೆ ಸಂಕಲನದಲ್ಲಿ ಕಾಡುವ ಕವಿತೆ ಎಂದೇಳಬಹುದು ಬಳಸಿರುವ ರೂಪಕಗಳು ಲಯ ಶಿಲ್ಪ ಕವಿತೆಯನ್ನು ಗೆಲ್ಲಿಸಿದೆ.ಓದುಗನಿಗೆ ಕವಿತೆ ಅಂದ್ರೆ ಇದು ಕಣಯ್ಯ ಅನ್ನಿಸುವಷ್ಟು ಚನ್ನಾಗಿದೆ
“ನೋಡು ನೋಡು ನನ್ನ ಜನರು
ಗಂಗಾಳ ಬಡೆಯುತ್ತಿಹರು
ಹಸಿವಿಗಾಗಿ ಅಲ್ಲವೋ
ದೊರೆಯ ಹುಚ್ಚು ಮಾತಿಗೆ
ಕೊಂದುಕೊಂಡುಸಾಯುತಿಹರು”
ಧರ್ಮ ಎದೆಯಮೇಲೆ ಹೂವಾಗಲಿಲ್ಲವೋ
ಬರಿಯ ರಾಜಕೀಯವೋ”(ಬರಿ ರಾಜಕೀಯವೋ)*

ಹಸಿವು ಹತಾಶೆ ಸಂಕಟದ ನೋವಿಗೆ ತಟ್ಟೆ ಬಡಿಯದ ಜನ ತನ್ನ ದೊರೆಯ ಹೇಳಿದ ಮಾತಿಗೆ ತಟ್ಟೆ ಬಡಿದಿದ್ದನ್ನು ವ್ಯಂಗ್ಯವಾಗಿ ಹೇಳುತ್ತ ಅರಿವಿನ ಕಿಡಿ ಬೆಳಕನು ಹೊತ್ತಿಸುತ್ತಾರೆ. ಕವಿಗಿರುವ ಸಾಮಾಜಿಕ ಪ್ರಜ್ಞೆಯನ್ನು, ಬಂಡಾಯದ ಬಂಡೆ ಮೇಲೆ ಕಾಯಿಸಿ ಬರೆದಂತಿದೆ.
“ಕೊನೆಗೆ ಮತ್ತೆ ಯುದ್ಧವೆಂದರೆ ಹೀಗೆ
ಅದೆಷ್ಟು ಉಂಡರು ತೀರದ ಹಸಿವು
ಯುದ್ಧಕ್ಕೆ ಇರುವುದು ಹೊಟ್ಟೆಯಷ್ಟೇ ಹೃದಯವಿದ್ದರೆಬಂದೂಕಿನ ತುದಿಯಲ್ಲಿ ಹೂ ಬಿರಿಯುತಿತ್ತು. ಕೈ ಕಾಲು ಇದ್ದಿದ್ದರೆ ಭೂಮಿ ಬಿಟ್ಟು ತೊಲಗುತ್ತಿತ್ತುಜೀವವಿದ್ದಿದ್ದರೆ ಬದುಕು ಕಟ್ಟಿಕೊಡುತಿತ್ತು”(ಯುದ್ದವೆಂದರೆ ಹೀಗೆ)
ಇದು ಈ ಸಂಕಲನ ಮತ್ತೊಂದು ಉತ್ತಮ ಕವಿತೆ. ಯುದ್ಧ ಮಾಡುವುರಿಂದ ಪ್ರಯೋಜನವಿಲ್ಲ ಪ್ರೀತಿಯನ್ನು ಹೃದಯಗಳಿಗೆ ತಾಕಿಸುವ ಮೂಲಕ ಬಾಂಧವ್ಯಗಳನ್ನು ಗಟ್ಟಿಗೊಳಿಸಿಕೊಳ್ಳಿ.ಎಲ್ಲವೂ ನೆಪಮಾತ್ರ ಕೊನೆಗುಳಿಯುವುದು ನೆನಪು ಮಾತ್ರ. ಸಣ್ಣ ವಯಸ್ಸಿಗೆ ಮತ್ತೊಬ್ಬರಿಗೆ ಹೇಳುವಷ್ಟು ಚನ್ನಾಗಿ ಬರೆಯುವ ಈ ಯುವ ಕವಿ ಮುಂದೆ ಇನ್ನು ಚನ್ನಾಗಿ ಬರೆಯುತ್ತಾನೆ.ಎಂಬ ನಂಬಿಕೆ ವಿಶ್ವಾಸ ಮೂಡಿಸುತ್ತಾನೆ.
ಈ ಸಂಕಲನದ, ನಾಟಿಸುತ್ತೇವೆ ನೇಗಿಲನ್ನು, ಗೋಡೆ, ಸಿಹಿ ಕನಸು, ದೇಶ ಪ್ರೇಮಿಗಳು, ಕತ್ತರಿ, ಕನ್ನಡಿ, ಕೂದಲೂ ನೀನು,ನಾನೊಂದು ರೂಪಕ,ನಾನು ಇದ್ದಿಲು, ಚುಕ್ಕೆ-ಚೂರಿ,ಬಟ್ಟೆಗಂಟಿದ ಬೆಂಕಿ,ಕೊಳಗೇರಿಯ ಕಂದ, ನನ್ನಪ್ಪ ಖರೇನ ಕವಿತೆ, ನಡುವು-ನಗ್ನ ಸತ್ಯ.ಕವಿ
ಮುಂದೆ ಉತ್ತಮ ಕವಿತೆಗಳನ್ನು ಬರೆಯಬಹುದಾದ ಬೆಳಕನ್ನು ಬೀರುತ್ತವೆ.
ಕಾವ್ಯ ಯಾವಾಗಲೂ ಧ್ಯಾನಸ್ಥ ಸ್ತಿತಿಯಲ್ಲಿ ಕಾಡಿ ಮಾಗಿ ಸಹಜ ಹೆರಿಗೆ ಆಗಬೇಕು.ಇಲ್ಲಿ ಕೆಲವು ಕವಿತೆಗಳು ಬಂಧ ಕೆಡಿಸಿಕೊಂಡು ಹೋಗುತ್ತಾ ಹೋಗುತ್ತ ಬೇರೆ ದಾರಿ ಹಿಡಿಯುತ್ತವೆ. ಕೆಲವು ಅವಸರಕ್ಕೆ ಬರೆದಂತೆ ಗೋಚರಿಸಿ ಢಾಳಾಗುತ್ತವೆ.
ಇದನ್ನು ಮೀರಿ ಪಟ್ಟಿಡಿದು ಧ್ಯಾನಿಸಿ ಬರೆದರೆ ಉತ್ತಮ ಕವಿತೆಯಾಗುತ್ತದೆ ಎಂಬ ಅರಿವು ಇದೆ ಎಂದು ಈ ಸಂಕಲನದ ಉತ್ತಮ ಕವಿತೆಗಳನ್ನು ನೋಡಿದಾಗ ಅನ್ನಿಸುತ್ತದೆ.ಮೊದಲ ಸಂಕಲನವಾದ್ದರಿಂದ ರಿಯಾಯಿತಿಯನ್ನು ಬೇಡುತ್ತದೆ ಏನೇ ಆಗಲಿ ತಾನುಂಡ ನೋವು ತಾನು ವಾಸಿಸುವ ಪರಿಸರ ತನ್ನ ಜನಾಂಗದ ಮೇಲೆ ಕವಿಗಿರುವ ಕಾಳಜಿ, ವೈಚಾರಿಕತೆಯ ನಿಲುವು ಇವನ್ನೆಲ್ಲಾ ನೋಡಿದಾಗ ಸಣ್ಣ ಪುಟ್ಟ ತಪ್ಪುಗಳನ್ನು ಕೊಡವಿಕೊಂಡು ಹೇಳುವ ಶಕ್ತಿ ಈ ಕವಿಗೆ ಇದ್ದೆ ಇದೆ.
ಮೊದಲ ಸಂಕಲನದಲ್ಲಿಯೇ ಸಂಚಲನ ಮೂಡಿಸುವ ಕೆಲವು ಕವಿತೆಗಗಳನ್ನು ನೋಡಿದಾಗ ಮುಂದೆ ಉತ್ತಮ ಕವಿಯಾಗುವುದರಲ್ಲಿ ಸಂಶಯವಿಲ್ಲ. ಇವರಿಂದ ಇನ್ನು ಕಾವ್ಯದ ಮೊನಚು ಹರಿತವಾಗಲಿ ಎಂದು ಆಶಿಸುತ್ತೇನೆ.
0 ಪ್ರತಿಕ್ರಿಯೆಗಳು