ಬಿದಲೋಟಿ ರಂಗನಾಥ್ ಓದಿದ ‘ದೇವರ ಗೂಳಿ’

ವೈಚಾರಿಕತೆಯ ಕಣ್ಣಲ್ಲಿ ಉಸಿರಾಡುವ ಕವಿತೆಗಳು

ಬಿದಲೋಟಿ ರಂಗನಾಥ್

—-

ಕವಿ ಪಿ ಆರ್ ವೆಂಕಟೇಶ್ ಜಾತಿಮುಕ್ತ ಮನಸ್ಸಿನ ಎಲ್ಲರನ್ನೂ ಅಪ್ಪಿಕೊಳ್ಳುವ ತಣ್ಣಗಿನ ಬಂಡಾಯದ ಮೊನಚನ್ನ ಕಾಯಿಸಿ ಬಡಿಯುವ ಸೂಕ್ಷ್ಮ ಮತಿ.ಅವರು ನಡೆದು ಬಂದ ಬದುಕಿನ ದಾರಿಯುದ್ದಕ್ಕೂ ಕಮ್ಯೂನಿಸ್ಟ್ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಒಂದಷ್ಟು ಕುಕ್ಕುಲಾತಿ ಹಾಗೂ ಜಾತಿ ಏರಿಕೊಂಡು ಬೆಳೆದವರಿಗೆ ಛಾಟಿ ಬೀಸುತ್ತ ಬಂದವರು.ಬಳ್ಳಾರಿಯಲ್ಲಿ ಎಲೆಮರೆಕಾಯಿಯಂತೆ ಇದ್ದು, ಕಾವ್ಯದ ಮೂಲಕ , ಚಳುವಳಿಯ ಮುಖೇನ  ಒಂದಷ್ಟು ಜನರಿಗೆ ಕಣ್ಣು ತೆರೆಸುವ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಅವರು ಇದುವರಿಗೆ ಸುಮಾರು ಮೂರು ಸಂಕಲಗಳನ್ನು ಹೊರತಂದಿದ್ದಾರೆ.ಇವರ ‘ದೇವರ ಗೂಳಿ’ಅತ್ಯಂತ ಪ್ರಭುದ್ದ ಹಾಗೂ ಸೃಜನಶೀಲ ಕವನ ಸಂಕಲನಗಳ ಸಾಲಿನಲ್ಲಿ ಅಗ್ರ ಸ್ಥಾನ ಪಡೆಯುತ್ತದೆ.

“ನನ್ನ ಕವಿತೆ ಅಂಟಿಸುವೆ ಎಲ್ಲರ ಮನೆ ಗೋಡೆಗೆ

ಮಾತಾಡುತ್ತದೆ ಕವಿತೆ

ಸುಡುವ ಹಸಿವಿನೊಂದಿಗೆ/ಅಮಾನುಷ ಜೇಡದೆದುರು ಸೆಟೆದೆದ್ದ ಪೊರಕೆಯೊಂದಿಗೆ/ಚಿಂದಿ ಕನಸುಗಳೊಂದಿಗೆ/

ಪಂಡಿತರಿಗೆ ಬಹಿಷ್ಕೃತ ನನ್ನ ಕಾವ್ಯ/ಕೋಣೆಯೊಳಗಿನ ಕವಿಗೆ ಅಸ್ಪೃಶ್ಯ ನನ್ನ ಕಾವ್ಯ(ಎಲ್ಲರ ಮನೆ ಗೋಡೆಗೆ)

ಎಂದು ಬರೆಯುವ ಕವಿ ಪಿ.ಆರ್ ವೆಂಕಟೇಶ್ ನಿಜದನಿಯ ಕಾವ್ಯದ ದಾರಿಯನ್ನು ಅರಿತವರು.ಕಾವ್ಯದ ಜೀವಂತಿಕೆಯನ್ನು ಕಾಪಿಟ್ಟು ಕಾವ್ಯ ಉಸಿರಾಡಬೇಕಾದ ತಾವನ್ನು ಕಂಡುಕೊಂಡವರು.ಹೌದು ಯಾವಾಗಲೂ ಹಸಿದವರ ,ನೆಲೆ ಇಲ್ಲದವರ ಕರುಳಾಗಬೇಕು ಕಾವ್ಯ.ಬೀದಿಯಲ್ಲಿ ಜೋಳಿಗೆ ಹೊತ್ತು ತೀರುಗುವ ಮೂಲಕ ಒಂದಷ್ಟು ಜನರ ತುಮಲ ದುಗುಡ ದುಮ್ಮಾನಗಳನ್ನು ಹೊತ್ತು ತಂದು ಸಮಾಜ ಮುಖಿಯಾಗಿ ಚಲಿಸುವ ಮೂಲಕ ಕಣ್ಣುತೆರೆಸುವ ಕೆಲಸ ಮಾಡುವ ಅನಿವಾರ್ಯತೆ ಇದೆ.ಕಾವ್ಯವೆಂದರೆ ಮನಸ್ಸಿನ ಭಾವ ಹೊರ ಹಾಕುವಿಕೆ ಒಂದೆ ಅಲ್ಲ.ಇದರಿಂದ ಒಂದಷ್ಟು ಬದಲಾಗ ಬಯಸಿ  ಎಡವುವ ಜನರಿಗೆ ದಿಕ್ಸೂಚಿಯಾಗಬೇಕಾದ ತುರ್ತು ಇದೆ ಎಂದು ಅರಿತವರು.ಯಾವುದೋ ಜೇಡ ನೇಯ್ದ ಗೂಡಿನೊಳಗೆ ಜೀವಿಸುವ ಮುಗ್ದ ಮನಸುಗಳ ಬಿಡುಗಡೆಗಾಗಿ,ಮೌಢ್ಯದಾಚರಣೆ,ಅಸ್ಪೃಶ್ಯತೆ,ಜೀತ ಪದ್ದತಿ ,ಇಂತಹ ಅನಿಷ್ಟಗಳನ್ನು ಕೊಡವಿ ನಿಲ್ಲಬೇಕಾದ ತುರ್ತು ಇದೆ. ಇಲ್ಲದೆ ಹೋದರೆ ಮನೋವಿಕಾಸ ಆಗಲಾರದು.  ಕೋಣೆಯೊಳಗಿನ ಕವಿ ಸಮಾಜ ಕಟ್ಟುವಲ್ಲಿ ದನಿಯಾಗಲಾರ. ಬೀದಿಯ ಕವಿಯಾಗಿ ಅವರ ಕಷ್ಟಗಳನ್ನು ಅರಿತು , ಎಡವುವ ಸಮಾಜವನ್ನು. ಸರ್ಕಾರವನ್ನು ಎಚ್ಚರಿಕೆ ಗಂಟೆ ಬಾರಿಸುತ್ತ, ಸದಾ ಮಿಡಿಯುವಂತಿರಬೇಕು.ಹಸಿವು, ಬಡತನ ,ಶೋಷಣೆ ಇವೆಲ್ಲದವರ ನಾಡಿಮಿಡಿತ ಹಿಡಿಯಬೇಕು ಎನ್ನುವ ಅರ್ಥದಲ್ಲಿ ಬರೆಯುವ ಕವಿಯ ಇಲ್ಲಿನ ಕವಿತೆಗಳು ಹಲವು ಮಜಲುಗಳ ಒಳತೋಟಿಯನ್ನು ಬಿಚ್ಚಿಡುವಲ್ಲಿ ಯಶಸ್ವಿಯಾಗಿವೆ ಎಂದು ಹೆಳಬಹುದು. ನಿಕೃಷ್ಟ ಸಮಾಜದ ಹಲವು ಅನಿಷ್ಟಗಳನ್ನು ಕವಿಯಾದವನು ಗುಡಿಸಬೇಕು ಕವಿಗೆ ಪರಿದಿ ಎಂಬುದಿರುವುದಿಲ್ಲ ಎಲ್ಲವನ್ನು ಅಭಿವ್ಯಕ್ತಿಸುವ ಸೂಕ್ಷ್ಮ ಸಂವೇದನೆಯನ್ನು ಹೊತ್ತು ಕಾವ್ಯದ ಜಾಡಿನಲ್ಲಿ ನಡೆಯಬೇಕು.ಎಂಬುದನ್ನ ಅತ್ಯಂತ ಜಾಣ್ಮಿಯಿಂದಲೇ ಹೆಳುವ ಕವಿ ಬದುಕಿನಲ್ಲು ಅಳವಡಿಸಿಕೊಂಡು ಹಾಗೆ ಜಿವಿಸುತ್ತಿರುವಲ್ಲಿ ಯಶಸ್ವಿಕಂಡವರು ಕವಿ ವೆಂಕಟೇಶ್ ಅವರು.

ನನ್ಧ ಕವಿತೆಯಲ್ಲಿ

ಹೊರೆ ಹೊತ್ತ ಹಮಾಲಿ ರಾಜ್ಯವಾಳುತ್ತಾನೆ/ದೇವದಾಸಿಯರು ದೇವತೆಯಾಗುತ್ತಾರೆ/ದಾರಿಗೆ ಕೊರಳು ಮೂಡಿ ಹಾಡುತ್ತದೆ(ಎಲ್ಲರ ಮನೆ ಗೋಡೆಗೆ)

ಈ ಕವಿತೆ ಸಾಲುಗಳು ಅಖಂಡವನ್ನೇ ಹೊತ್ತು ನಿಂತು ಕತ್ತಲ ದಾರಿಯನ್ನ ಕರಗಿಸಿ ಬೆಳಕನ್ನು ಹಚ್ಚುವ ಕನಸು ಕಂಡಂತಿದ್ದರೂ ಅವರ ಹಂಬಲಿಕೆ, ಭರವಸೆ ಮತ್ತು ಕನಸಿಗೆ ಶರಣು.ದೇವದಾಸಿಯರು ದೇವತೆಯಾಗುತ್ತಾರೆ ಎಂಬ ಕಲ್ಪನೆಯೇ ದೊಡ್ಡದು .ಇದು ನಂಬಿಕೆ ಮತ್ತು  ವೈಚಾರಿಕತೆಯನ್ನು ದೂಡಿ ಮನುಷ್ಯತ್ವವನ್ನು ಅಪ್ಪುವ ಪ್ರಕ್ರಿಯೆ. ನಿಜಕ್ಕೂ ಸವಾಲೇ ಸರಿ.ಪೊರಕೆ ಹಿಡಿದವರಿಗೆ ಅನಿಷ್ಟಗಳನ್ನು ಗುಡಿಸುವ  ಶಕ್ತಿ ಇರುತ್ತದೆ.ಗುಡಿಸುವ ಕ್ರಿಯೆಯೇ ಒಂದು ಚಲನಶೀಲತೆ. ಇಂತಹ ಕನಸುಗಳನ್ನು ಕಟ್ಟುವ ಮೂಲಕ ಕಾವ್ಯದಲ್ಲಿ ಬಹಿಷ್ಕೃತಗೊಂಡ ಚಿಂತನಶೀಲತೆ ನಿಜಕ್ಕೂ ಮೆಂಚುವಂತದ್ದು ಹಾಗೂ ದೂರಾಲೋಚನೆಯಲ್ಲಿ ಹಾದಿಯಲ್ಲಿ ಚಲಿಸುವಂತದ್ದು.

ಗೋಡೆಗಳು ಎಂಬ ಕವಿತೆಯಲ್ಲಿ ಗೋಡೆ ಎಂಬ ಬಯಲ ನಿರಾಕರಿಸುವ ಪ್ರಜ್ಞೆಯನ್ನು ಹಲವು ಆಯಾಮಗಳನ್ನ ಬಿಚ್ಚಿಡುತ್ತದೆ.ಇಂತಹ ಬದಲಾದ ಜನರ ನಡುವೆ ವಿಶಾಲ ಹೃದಯಗಳ ಉಸಿರು ಕಾಡುವಲ್ಲಿ ನೋವಿಗೀಡಾಗುವ ಸನ್ನಿವೇಶಗಳು ನಿಜಕ್ಕೂ ಅರ್ಥಪೂರ್ಣವಾಗಿ ಈ ಕವಿತೆಯ ಮೂಲಕ ಹೇಳುವಲ್ಲಿ ಕವಿ ಯಶಸ್ವಿಯಾಗಿದ್ದಾರೆ.ಗೋಡೆಗಳಿಲ್ಲದ ಬಯಲು ಯಾವುದೇ ಆಸೆ, ಧರ್ಮ, ಜಾತಿಯನ್ನು ಅಪ್ಪಿಕೊಂಡು ನಡೆಯುವುದಿಲ್ಲ ಇದೊಂದು ಅಲ್ಲಮನ ಜೀವಂತಿಕೆಯ ಪ್ರಜ್ಞೆಯನ್ನು ಕವಿಯ ಒಳಮನಸು ಬಯಸುತ್ತಿದೆ.

ಗಾಂಧಿಜೀಯ ಒಳಬೇಗುದಿಯ ಗಂಟನ್ನು ಬಿಚ್ಚಿ ಬಯಲು ಮಾಡುವ *ನೋಟಿನೊಳಗಿನ ಗಾಂಧಿ* ತಳ ಸಮುದಾಯದ ಗುಡಿಸಿಲುಗಳಿಗೆ ಬೆಳಕಾಗಬೇಕಿತ್ತು.ಎಲ್ಲೋ ಒಂದು ಕಡೆ ಗಡಿ ನಿರ್ಮಿಸಿಕೊಂಡು ಸೀಮಿತವಾದ ನಡೆಯಲ್ಲೇ ನಿಂತು ಹೋದರ ? ಪ್ರಶ್ನೆ ಈ ಕವಿತೆ ಓದಿದಾಗ ಅನ್ನಿಸುತ್ತದೆ.ಅವರು ನಡೆವ ಕತ್ತಲ ದಾರಿಗೆ ಬೆಳಕಾಗಬಹುದಿತ್ತು ಎಂಬ ಸಂಶಯ ಹುಟ್ಟಿಸುತ್ತದೆ

ಯಾವುದೋ ಒತ್ಡಡದ ನಡೆಯೂ ಕಾರಣವಿರಬಹುದು.ಗರಿ ಗರಿ ನೋಟಿನೊಳಗೆ ಆತ ಬಂಧಿ ಎನ್ನುವ ವಿಷಾದವೇ ಒಂದಷ್ಟೂ ನಿಟ್ಟುಸಿರು ಬಿಡುವಂತೆ ಮಾಡುತ್ತದೆ ಇದು ನಿರಾಳತೆಯ ನಿಟ್ಟುಸಿರಲ್ಲ ಎಂಬ ಪ್ರಜ್ಞೆ ಇಲ್ಲಿ ಉಸಿರಾಡುತ್ತದೆ.

“ಧರ್ಮವೆಂದರೆ ಗೊತ್ತಿಲ್ಲ ನನಗೆ 

ಹಸಿದ ಹೊಟ್ಟೆಯ ಪ್ರೇತ ಹುಚ್ಚೆದ್ದು ಕುಣಿದಾಗ ಬದುಕಿನೆಚ್ಚರದಲ್ಲಿ ಸೆಟಯುತ್ತದೆ ರಟ್ಟೆ ಕಸುವು 

ನನ್ನಂತೆ ರಾಮ ರಹೀಮ್ ಜೋಸೆಪ್

ನೇಗಿಲಾಗಿ ಚಕವಾಗಿ ಕುಡುಗೋಲಾಗಿ ಯಂತ್ರವಾಗಿ ಕಾಯಕ ಧೀರರಂತೆ ನಿಲ್ಲುತ್ತಾರೆ

 ಚರಿತ್ರೆಯ ಗೊಣಸಾಗಿ “(ಧರ್ಮವೆಂದರೆ)

ಧರ್ಮವೆಂದರೆ ನನಗೆ ಗೊತ್ತಿಲ್ಲ ಎಂಬುದೇ ಕವಿಯೊಳಗಿನ ಸಮ ಸಮಾಜ ನಿರ್ಮಾಣದ ಲೋಕವನ್ನು ನೋಡಲು ಒಳಗಣ್ಣು ತವಕಿಸುತ್ತಿದೆ.ಬಹು ಎತ್ತರದ ಕನಸು ಕಟ್ಟಿಕೊಂಡ ಕವಿಯೊಳಗೆ ಜಾತಿ ಧರ್ಮ ಮೀರಿದ ಸುಪ್ತ ಮನಸು ಬೆಳಕಿಡಿದು ಕುಂತಿದೆ.

ಯಾವುದೇ ನಾಯಕನು ನಡೆವ ಮಾರ್ಗದಲ್ಲಿ ಕಣ್ಣಿಲ್ಲದವರಿಗೆ ಕಣ್ಣಾಗಬೇಕಾದ ಅನಿವಾರ್ಯತೆ ಇದೆ.

ಕಾಲಚಕ್ರದ ಉರುಳುವಿಕೆಯಲ್ಲಿ ರೈತ, ಶ್ರಮಿಕ ವರ್ಗ

ಧರ್ಮದ ಅಮಲೇರಿಸಿಕೊಂಡು ನಡೆಯುವುದಿಲ್ಲ.

ಅವರೊಳಗೊಂದು ನಿಸ್ವಾರ್ಥ ನಡೆಯ ದಾರಿ ಇದೆ.

ಎಂಬುದನ್ನು ಕವಿ ಬಹಳ ಅರ್ಥಪೂರ್ಣವಾಗಿ ಕಟ್ಟಿಕೊಡುತ್ತಾರೆ.ಧರ್ಮ ಮೀರಿದ್ದು ಮನುಷ್ಯತ್ವ.ಧರ್ಮ ಮೀರಿದ ಹುಡುಕಾಟದಲ್ಲಿ ಈ ನೆಲದ ಹಾಡಿಗೆ ಕಿವಿಯಾಗುವ ಹಂಬಲದೊಂದಿಗೆ ತಾನು ತನ್ನ ಬದುಕಿನ ಗೋಜಲನ್ನು ಕಳಚಿ ನಿಲ್ಲುವ ಹೊತ್ತಿಗೆ ನಿರ್ವಾಣವಲ್ಲದೆ ಮತ್ತೇನು ?ಎನ್ನುವ ಪ್ರಶ್ನೆಯು ಕಾಡುತ್ತದೆ.

ವೈಚಾರಿಕತೆಯನ್ನು ಉಸಿರಾಡುವ ಮನುಷ್ಯ ಪ್ರೀತಿ ಯಾವಾಗಲೂ ಧರ್ಮದ ಜಾತಿಯ ಹಂಗನ್ನು ಮೀರಿದ್ದು.ಇದು ಸಮಾಜದ ಎಚ್ಚರದ ಪ್ರಜ್ಞೆ .ಆದರೆ ಒಂದು ಚೌಕಟ್ಟಿನಲ್ಲಿ ಜೀವಿಸುವ ಕೋಮುವಾದ ಅನೇಕ ಬುದ್ಧಿ ಜೀವಿಗಳನ್ನು ಬಲಿತೆಗೆದುಕೊಂಡು ಖಾಲಿ ಇತಿಹಾಸ ಬರೆಯಿತು .ಬದಲಾಗದ ಮೊಂಡು ಸಮಾಜದ ವಿರುದ್ಧ ಈ ಕವಿಯ ಮನಸು ತುಡಿಯುವುದು ಸತ್ಯದ ಅರಿವನ್ನು ತೋರಿಸುವುದೇ ಆಗಿದೆ.*ಹೀಗಾಗುತ್ತಿದೆ ಇಲ್ಲಿ*ಎನ್ನುವ ಕವಿತೆಯು ಸಾಕ್ಷೀಕರಿಸುತ್ತದೆ.ನಿಜವನ್ನು ಹೇಳಲು ಕವಿಗೆ ಧೈರ್ಯ ಮತ್ತು ಎದೆಗಾರಿಕೆ ಬೇಕು.ಇಂತಹದೊಂದು ಬಂಡಾಯದ ಬಿಸಿಯಲ್ಲಿ ಕಮ್ಯೂನಿಸ್ಟ್ ಆಶಯಗಳನ್ನು ಹೊತ್ತ ಕವಿ ಪಿ ಆರ್ ವೆಂಕಟೇಶ್ ಅವರು ಕಾವ್ಯಲೋಕದ ಎಚ್ಚರದ ಕಣ್ಣು ಎಂದರೆ ತಪ್ಪಾಗದು.

“ಬಂಧೂಕಿನ ಬಾಯಲ್ಲಿ ಉಕ್ಕು ಹಕ್ಕಿಯ ಸಿಡಿಲು

ಲಾಂಗು ಮಚ್ಚು ಬಾಯಿ ಒಂದೇ ಆಗಿವೆ ಇಲ್ಲಿ

ದಯೆ ಕೊಂದ ಧರ್ಮದಮಲಿಗೆ

ಕಲಬುರ್ಗಿ ಪಾನ್ಸಾರೆ ಗೌರಿ ದಾಭೋಲ್ಕರ್ ಬಲಿ”

ಕವಿ ಪಿ ಆರ್ ವಿ ಭಾವೋತ್ಕಟತೆಯಲ್ಲಿ ಕವಿತೆ ಬರೆದವರಲ್ಲ. ಆದರೆ ಇವರ ಕವಿತೆಗಳು ಮಾತಾಡಿದರೂ ಮೌಢ್ಯದ,ಮನುಷ್ಯತ್ವದ ಕಣ್ಣುತೆರೆಸುವಲ್ಲಿ ಗೆದ್ದಿವೆ.

ಕರೋನ ಕಾಲ ಜನರನ್ನು ಬಸವಳಿಯುವಂತೆ ಮಾಡಿತು.

ಬಡವನ ಬದುಕು ಬೀದಿಗೆ ಬರಲು ಆಗದ ಸಂಕಟದಲ್ಲಿ ನಾಲ್ಕು ಗೋಡೆಯ ನಡುವೆ ಬರಿದಾಗಿದ್ದು ವಿಪರ್ಯಾಸ.ಆ ಸಂಧರ್ಭದಲ್ಲಿ ದೇಶ ಆಳುವ ದೊರೆಯ ಮೌಢ್ಯ ಬಿತ್ತನೆ ನಗೆ ಪಾಟಿಲಿಗೆ ಹಿಡಾಗುವಂತೆ ಮಾಡಿತು.ಆದರೆ ಕಾದ ನೋವಿನ ಸಲಾಕೆ ಬಗಲಲ್ಲಿದ್ದರೂ ಮುಟ್ಟಿಸಿಕೊಳ್ಳುವವನು ಮುಟ್ಟಿಸಿಕೊಳ್ಳದವನಾಗಿದ್ದು ತಾನು ಭದ್ರಪಡಿಸಿಕೊಂಡ ಅಸ್ಥಿತ್ವವನ್ನು ಅಲುಗಾಡಿಸಿತು.

ದೊರೆಯಾದವನು ಸನ್ಮಾರ್ಗಾ ಸೂಚಿಯಾಗಿರಬೇಕು 

ಆದರೆ ಮುಖವಾಡ ಹೊತ್ತ ದೊರೆಯ ಬಗ್ಗೆ ಕಟುವಾಗೇ ಪ್ರತಿಭಟಿಸುವ ಕವಿತೆ “ಬಂಧಿತ ಖೈದಿ”.

ಪ್ರಭು ಹೇಳಿದ

ಚಪ್ಪಾಳೆ ತಟ್ಟೆಂದು 

ಬದುಕು ರಜೆ ಪಡೆದು ಹಸಿವು ಹಡೆದು 

ಹೊಟ್ಟೆಯ ತಾಳದ ಸದ್ದು 

ನುಂಗಿಯೇ ಬಿಟ್ಟಿತು 

ಚಪ್ಪಾಳೆ ಗುಂಗಿನ ಗುದ್ದು

ಪ್ರಭು ಹೇಳಿದ ದೀಪ ಹಚ್ಚೆಂದು 

ಆತ್ಮದ ಕಣ್ಣಿಗೆ ಕುರುಡು ತೊಡಿಸಿ 

ಹಸಿದ ಕಣ್ಣಿನ ಬೆಂಕಿ ತುಬಕ್ಕನೆ ಉಗಿಯಿತು

ತಟ್ಟನೇ ಹೇಳಿದ ಪ್ರಭು ಮಾಸ್ಕ್ ಧರಿಸಿ 

ತಣ್ಣನೆಯ ಒಲೆ ಬೂದಿ ಹಾರುವಂತೆ

ಪಿ ಆರ್ ಅವರ ಚಿಂತನ ಕ್ರಮವೇ ಒಂದು ವಿಶಿಷ್ಟ ಅನುಭೂತಿ.ವ್ಯಂಗ್ಯದ ನಡುವೆ ಕತ್ತಲ ದಾರಿಯಲ್ಲಿ ಮಿಂಚುಹುಳವೊಂದನ್ನು ಬೊಗಸೆಯಿಂದ ಬಿಡುವ ಕ್ರಮವೇ ಕವಿ ಬಧ್ಧತೆಯಲ್ಲಿ ಜೀವಿಸುವುದನ್ನು ತೋರಿಸುತ್ತದೆ.

“ಬಾಂಗಿನ ಅವಾಜಿನಲ್ಲಿ ಅಲ್ಲಾ ಇರಲಿಲ್ಲ” ಎನ್ನುವ ಕವಿತೆ ನಿಜಕ್ಕೂ ವಿಶಿಷ್ಟವಾಗಿದೆ ಮತ್ತು ಎಷ್ಟೊಂದು ಚಿಂತನೆಯನ್ನು ಒಡಲಲ್ಲಿ ಅಡಗಿಸಿಕೊಂಡಿದೆ.

ಇನ್ನು “ಈ ರಾಮ ಆ ರಾಮನಲ್ಲ” ಎನ್ನುವ ಕವಿತೆ ಚಿಂತನೆರ ಹರಿವನ್ನು ಹೆಚ್ಚಿಸುತ್ತದೆ.

“ಆ ರಾಮನೇ ಬೇರೆ 

ಕಾಡು ಮೇಡನು ಅಲೆದು ಬಳಲಿ ಬಸವಳಿದು

 ಶಬರಿ ಎಂಜಲು ತಿಂದು ಎತ್ತಾದ ರಾಮ 

ಬೆವರ ಕೌದಿಯ ಹೊದ್ದು ಸೀತೆಯೊಡಲನು ಅಪ್ಪಿ

ನೇಗಿಲ ಗೆರೆ ಕೊರೆದ ರಾಗಿ ರಾಮ.

ಗೋರಿ ಕೆಬರುವನಲ್ಲ ಗುಡಿಯೂ ಬೇಕಿಲ್ಲ. 

ರಾಮ ರಾಮ ಜಯ ಸೀತಾರಾಮ ಈಶ್ವರ ಅಲ್ಲಾ ತೇರಿ ನಾಮ್”

ಹೌದು ನಮಗೆ ಬೇಕಿರುವುದು ಮೌಢ್ಯ ಬಿತ್ತುವ ರಾಮನಲ್ಲ.ಬಯಲಲ್ಲಿ ಬಯಲಾಗುವ ಬಂಡೆ ಹನುಮಂತ.ನಿಜತ್ವದ ನೆಲೆಯಲ್ಲಿ ಸಾಗುವ ಒಂದು ಸಂಸ್ಕೃತಿಗೆ ಬೆಳಕಾಗುವ ಆಕಾರವಿಲ್ಲದ, ಬಣ್ಣವಿಲ್ಲದ ಗೋಜಲಿಲ್ಲದ ,ಚೌಕಟ್ಟಿಲ್ಲದ ಕರೆಭಂಟ.

“ನಾನು ಎಂದರೆ ” ಎಂಬ ಕವಿತೆಯಲ್ಲಿ ತನ್ನೊಳಗೆ ತಾನು ಕಳೆದು ಹೋಗುವ ಪರಿಯನ್ನು ಆಧ್ಯಾತ್ಮಿಕ ನೆಲೆಯಲ್ಲಿ ಕಂಡುಕೊಂಡಿದ್ದಾರೆ.” ಗುರುವಿನ ಕರುಣದಿಂದ ಅರಿವಿನೊಳಗರಿವಾಯಿತು ಚಂದ ಮಾಮ ಲೋಕ ಚಂದಮಾಮ,ಅರಿವಿನ ಮರೆವೇ ಒಂದು ಇರುವೆ ನುಂಗಿತ್ತು ಚಂದಮಾಮ ಲೋಕ ಚಂದಮಾಮ.”ಎನ್ನು ತತ್ವಪದದ ಹಾಗೆ ಅರಿಯ ಬೇಕು. ಬದುಕಿನ ಹಲವು ಮಜಲುಗಳ ನಡುವೆ ತನ್ನೊಳಗನ್ನು ಅರಿಯುವುದು ಅಷ್ಟು ಸುಲಭವಲ್ಲ.ತಾನು ತನ್ನೊಳಗಿಲ್ಲದ ಸ್ಥಿತಿ.ಆ ಹಿನ್ನೆಲೆಯಲ್ಲಿ ನಾನು ಯಾರು ಎಂಬ ಶೋಧನೆಯ ದಾರಿಯಲ್ಲಿ ಅಲ್ಲಮನಂತೆ ಹುಡುಕಾಟವಿದೆ.

“ಹೆಸರಿಲ್ಲದ ನನಗೆ ಮನುಷ್ಯ ಎನ್ನುತ್ತಾರೆ 

ಮಣ್ಣ ಕಣ್ಣಿನ ಕರೆಗೆ ಗಿಣ್ಣವಾದವನು 

ಒಳ ಒಳಗೆ ಕೊಳೆತು ಹದಗೊಂಡು 

ಮೊಳೆಕೆಯೊಡೆದು”(ನಾನು ಎಂದರೆ)

ನೆಲ ಮುಡಿದ ಹೆಜ್ಜೆಗಳು

ಮೊಳಕೆಯೊಡೆಯುವ ಮೊದಲೇ ಮಲೆತಿವೆ( ಭೂಮಿ ತಿರುಗುತ್ತಿಲ್ಲ)

ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳು ತಲೆಯೆತ್ತಿರುವ ನೆರಳಲ್ಲಿ ನೆಲಮೂಲ ಸಂಸ್ಕೃತಿಯ ಅವಸಾನದ ಹೆಜ್ಜೆಗಳು ಅಳಿಸುವುದು ಕಾಣುತ್ತಿದೆ.ವಾಸ್ತವದ ವ್ಯವಸ್ಥೆಯ ವಿರುದ್ಧ ತಣ್ಣನೆಯ ಅಕ್ರೋಶ ಕವಿತೆಯಲ್ಲಿ ವಿಷಾದಭರಿತವಾಗಿ ಮೂಡಿದೆ.

ಹೀಗೆ ಕಾವ್ಯ ತನಗರಿವಿಲ್ಲದೆ ಬಂದು ತನ್ನ ಸ್ಥಾನ ಗಟ್ಟಿಗೊಳಿಸಿಕೊಳ್ಳಬೇಕು.ಆ ನಿಟ್ಟಿನಲ್ಲಿ ಅನೇಕ ಕವಿತೆಗಳು ಮಾಗಿ ಬಾಗಿದರೂ ಕೆಲವೊಂದು ಕವಿತೆಗಳನ್ನು ಓದಿದಾಗ ಕವಿಗೆ ಅರಿವಿಲ್ಲದೆ ವಸ್ತುಗಳ ಒಳ ಹೂರಣ ಒಂದೆ ಆಗಿರುವುದು ಗೋಚರಿಸುತ್ತದೆ.ವಿಭಿನ್ನ ವಸ್ತುವಿನ ಸಣ್ಣ ಕೊರತೆಯೊಂದಿಗೆ ಒಂದೇ ತರನಾದ ಕವಿತೆಗಳು ಆನ್ನಿಸಿದ್ದುಂಟು.ಏನೇ ಆದರು “ಯೋಧರಿಲ್ಲದ ನಾಡ ಕಟ್ಟಬೇಕು.ಜನರೇ ಯೋಧರಾಗಬೇಕು “ಎಂಬ ಆವರ ಕವಿತೆ ಸಾಲುಗಳ ಆಶಯ  ಹಲವು ಆಯಾಮಗಳನ್ನು ಹುಟ್ಟು ಹಾಕುತ್ತದೆ. ಚಿಂತನೆಗೀಡುಮಾಡುತ್ತದೆ.ಈ ಸಂಕಲನದ ಕವಿತೆಗಳು ಒಂದಿಲ್ಲ ಒಂದು ಕಾರಣಕ್ಕೆ ಕಾಡುತ್ತವೆ.ಮತ್ತು ಕವಿಗೆ ಕಾವ್ಯದ ದಾರಿ ದಕ್ಕಿದೆ.ಕಿಕ್ಕಿರಿದ ರೂಪಗಳಿಂದ ಪ್ರತಿಮೆಗಳಿಂದ ಕವನ ಸಂಕಲನ ಗೆದ್ದಿದೆ.ಆದರೆ ಚರ್ಚೆಗೆ ಗ್ರಾಸವಾಗದಿದ್ದು ಶೋಚನೀಯ ಸಂಗತಿ.

‍ಲೇಖಕರು avadhi

September 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

ಆರ್ ಎಸ್ ಹಬ್ಬು ** ಕಲಾ ಭಾಗ್ವತ್ ಅವರ ಕೃತಿ 'ಜಾಲಂದರ'. ಈ ಕೃತಿಯನ್ನು ಬೆಂಗಳೂರಿನ 'ಸ್ನೇಹಾ ಎಂಟರ್ ಪ್ರೈಸಸ್' ಪ್ರಕಟಿಸಿದ್ದಾರೆ. ಹಿರಿಯ...

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ಬಿ.ಎ. ವಿವೇಕ ರೈ ** ಮಾಧ್ಯಮ ತಜ್ಞರಾದ ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ ಅವರ ಹೊಸ ಕೃತಿ 'ಪತ್ರಿಕೋದ್ಯಮದ ಪಲ್ಲಟಗಳು'. 'ಬಹುರೂಪಿ' ಈ...

ಒಂದು ವೃತ್ತಿ ಪಯಣ..

ಒಂದು ವೃತ್ತಿ ಪಯಣ..

ಮಧು ವೈ ಎನ್ ** ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ಕೃತಿ 'ಉಳಿದಾವ ನೆನಪು'. 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಮಧು ವೈ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This