
ಜಯರಾಮಾಚಾರಿ
ಶನಿವಾರದ ಬೆಳಗ್ಗೆ ಬನಶಂಕರಿಯ ಎಸ್ಸೇಲ್ವಿ ಹೋಟೆಲ್ ಬಳಿ ಕನ್ನಡದ ಪುಸ್ತಕ ಕಂಡೊಡನೆ ಆ ತಾಯಿಯ ಕಣ್ಣಲ್ಲೊಂದು ಮಿಂಚಿತ್ತು ಮಗನ ಕೈ ಹಿಡಿದೇ ನಮ್ಮ ಬಳಿ ಬಂದರು, ನಾವು ಎಂದಿನಂತೆ ನಾವೇ ಬರೆದಿರೋದು ಅಂತ ಹೇಳಿದ ಮೇಲಂತೂ ಅವರಿಗೆ ಖುಷಿ ‘ಯಾವುದು ತಗೊಳ್ಳಿ?’ ಎಂದು ಕೇಳಿದರು, ನಿಂತ ನಾವು ಮೂವರಿಂದ ಬಂದ ಉತ್ತರ ಒಂದೇ ‘ಯಾವ ಪುಸ್ತಕ ತೆಗೆದುಕೊಂಡರು ಖುಷಿ’ ಅವರು ನಕ್ಕು ಒಂದು ಪುಸ್ತಕ ಕೈಯಲ್ಲಿ ಹಿಡಿದರು, ‘ನಿಮಗೆ ಸಪೋರ್ಟ್ ಮಾಡಕ್ಕೆ ತಗೋತಾ ಇದ್ದೀನಿ’ ಎಂದರು, ಕೈ ಹಿಡಿದ ಮಗ ಫೋನ್ ಪೆ ಮಾಡಿದ ಅವರು ನಕ್ಕು ಒಳ್ಳೆಯದಾಗಲಿ ಎಂದು ಹೇಳಿ ಹೋದರು ಅವರ ಕೈಯಲ್ಲಿ ಕನ್ನಡದ ಪುಸ್ತಕವಿತ್ತು.
ಬಸವನಗುಡಿಯ ಕೃಷ್ಣರಾವ್ ಪಾರ್ಕಲ್ಲಿ ನಮ್ಮನ್ನು ನಮ್ಮ ಪುಸ್ತಕಗಳನ್ನು ಬಾ ಗುರು ಬುಕ್ ತಗೋ ಬ್ಯಾನರ್ ನೋಡಿ ಆ ವ್ಯಕ್ತಿ ಬಂದು ನಿಂತರು, ಎತ್ತರದ ಅಳು, ಭಯಂಕರ ಫಿಟ್ ಇರುವ ವ್ಯಕ್ತಿ, ನಮ್ಮ ಪ್ರಯತ್ನ ನೋಡಿ ಎಲ್ಲರ ಒಂದೊಂದು ಪುಸ್ತಕ ತೆಗೆದುಕೊಂಡರು, ‘ಇದು ನಿಜವಾದ ಕನ್ನಡ ಚಳುವಳಿ ಕಣ್ರೀ’ ಎಂದು ತಮ್ಮ ಜೀವಿತಾವಧಿಯಲ್ಲಿ ಕಂಡ ಕನ್ನಡ, ಕನ್ನಡದ ಚಳುವಳಿ ಎಲ್ಲ ಹೇಳುತ್ತಾ ಸದ್ಯದ ಕನ್ನಡದ ಸ್ಥಿತಿ ಮಾತಾಡುತ್ತ ಅವರ ಧ್ವನಿ ಗದ್ಗದಿತವಾಗಿ ಹೋಯಿತು, ತಮ್ಮ ಅಳುವನ್ನ ಕಂಟ್ರೋಲ್ ಮಾಡಿಕೊಂಡು ನಮಗೆ ಶುಭ ಹಾರೈಸಿ ಜೋರು ನಡಿಗೆಯಲ್ಲಿ ಹೊರಟು ಹೋದರು.

ಮಂತ್ರಿ ಮಾಲ್ ಬಳಿ ನಾವು ಇದ್ದಾಗ, ಯಾವುದೊ ಕೆಲಸಕ್ಕೆ ಅರ್ಜೆಂಟ್ ಹೋಗುತ್ತಿದ್ದ ಹುಡುಗ ನಮ್ಮ ಟೇಬಲ್ ತಗುಲಿಸಿದ, ಅಂಚಿನಲ್ಲಿದ್ದ ನನ್ನವ್ವನ ಬಯೋಗ್ರಫಿ ಪುಸ್ತಕ ಕೆಳಕ್ಕೆ ಬಿತ್ತು, ಸಾರಿ ಎಂದು ಪುಸ್ತಕ ಕಣ್ಣಿಗೆ ಹೊತ್ತಿಕೊಂಡು ವಾಪಾಸ್ ಇಡುವಾಗ ನಾವೇ ಬರೆದದ್ದು ಎಂದು ಹೇಳಿದೆವು, ಅವನಿಗೆ ಅದೇನು ಅನಿಸಿತೋ ಪುಸ್ತಕ ಕೊಂಡುಕೊಂಡು ಜನಜಂಗುಳಿಯಲ್ಲಿ ಮರೆಯಾದ
ಇಂಗ್ಲೀಷ್ ಪುಸ್ತಕ ಮಾರ್ತೀರ? ಎಂದು ಕೇಳಿಕೊಂಡು ಬಂದ ಯುವತಿಯರಿಗೆ ವಿಕ್ರಂ ತಮ್ಮ ಕವಿತಾ ಸಂಕಲನದ ನಾವಿಬ್ಬರೇ ಗುಬ್ಬಿ ಅಲ್ಲಿಯೇ ವಾಚಿಸಿ ಅದರ ಅರ್ಥ ಹೇಳಿದರು, ಅದನ್ನು ಕೇಳಿಸಿಕೊಂಡ ಅವರು ಪುಸ್ತಕ ತೆಗೆದುಕೊಂಡು ನಕ್ಕು ಫೋಟೋ ತೆಗೆಸಿಕೊಂಡು ಹೋದರು.
ವಿಜಯನಗರದಲ್ಲಿ ನಮ್ಮ ಬಳಿ ಎಸ್ಸೆ ಪ್ರಬಂಧದ ಪುಸ್ತಕ ಇದ್ದೀಯ ಎಂದು ಕೇಳಿ ಬಂದ ತಾಯಿಯೊಬ್ಬರು ತಮ್ಮ ಮಗುವಿಗೆ ಪ್ರಬಂಧದ ಪುಸ್ತಕ ಕೊಡಿಸುವ ಆಸೆ ವ್ಯಕ್ತ ಪಡಿಸಿದರು, ಅವರಿಗೆ ವಿಕ್ರಂ ನನ್ನವ್ವನ ಬಯೋಗ್ರಫಿ ತೋರಿಸಿ ಇದು ಒಳ್ಳೆ ಪುಸ್ತಕ ಎಂದರು, ಅವರು ಪುಸ್ತಕ ನೋಡಿ ತೆಗೆದುಕೊಂಡರು, ಇನ್ನೊಂದು ಪುಸ್ತಕ ತೆಗೆದುಕೊಳ್ಳಬೇಕು ಅನಿಸಿದರೂ ಅವರ ಬಳಿ ದುಡ್ಡೇ ಇರಲಿಲ್ಲ, ಅವರ ಕಣ್ಣಲ್ಲಿ ಇನ್ನೊಂದು ಪುಸ್ತಕ ತೆಗೆದುಕೊಳ್ಳುವ ಹಸಿವಿತ್ತು, ಸ್ವಲ್ಪ ದೂರ ಹೋದಾಗ ವಿಕ್ರಂ ಅವರಿಗೆ ತಮ್ಮ ಪುಸ್ತಕವನ್ನ ಫ್ರೀ ಆಗಿ ಕೊಟ್ಟರು, ನಾನು ದೂರದಿಂದ ನೋಡ್ತಿದ್ದೆ.
ಮಲ್ಲೇಶ್ವರಂ ಬಳಿ ಒಂದು ಸ್ಕೂಲಿಗೆ ಹೋಗುವ ವಯಸ್ಸಿನ ಹುಡುಗಿ ಒಬ್ಬಳು ಅಂಕಲ್ ಮುಂದಿನ ವಾರವೂ ಇಲ್ಲೇ ಇರ್ತೀರ ಎಂದು ಕೇಳಿದಳು, ಅವಳಿಗೆ ಪುಸ್ತಕ ತೆಗೆದುಕೊಳ್ಳುವ ಅಸೆ ಇತ್ತು, ನಾವು ಇಲ್ಲ ಎಂದಾಗ ಅವಳ ಮುಖ್ದಲ್ಲಿ ಬೇಜಾರು, ‘ಅಯ್ಯೋ ನನ್ ಹತ್ರ ದುಡ್ಡಿಲ್ಲ ಅಂಕಲ್’ ಎಂದಳು ಅವಳಿಗೆ ಎರಡು ಪುಸ್ತಕ ಕೊಟ್ಟು ದುಡ್ಡು ಸಿಕ್ಕಾಗ ಕಳಿಸಿಕೊಡು ಎಂದು ಕಳಿಸಿದೆವು. ಆಕೆ ಖುಷಿಯಿಂದ ಪುಸ್ತಕ ನೋಡುತ್ತಾ ಹೊರಟಳು.
ನಾಗಪುರದಿಂದ ಇಲ್ಲಿ ಬಂದು ಎರಡು ವರ್ಷದಲ್ಲೇ ಕನ್ನಡ ಮಾತಾಡುವುದನ್ನು ಕಲಿತ ಆ ಯುವಕ ರಂಗಶಂಕರದ ಎದುರು ನಮ್ಮನ್ನ ನೋಡಿ ಎಲ್ಲರ ಪುಸ್ತಕ ತೆಗೆದುಕೊಂಡು ಸ್ನೇಹಿತರಿಗೆ ಗಿಫ್ಟ್ ಕೊಡುವೆ ಎಂದ.
ಈ ತರದ ಸುಮಾರು ಅನುಭವಗಳು ನಮಗೆ ದಕ್ಕಿದ್ದು ಬಾ ಗುರು ಬುಕ್ ತಗೋ ಅಭಿಯಾನದಿಂದ, ಇನ್ನೂ ಭಾವುಕಗೊಳಿಸಿದ ಕ್ಷಣಗಳಿವೆ, ಅವನ್ನೆಲ್ಲ ಬರೆದು ದಾಖಲಿಸಿದರೆ ಅದರ ಘಮ ಡೈಲ್ಯೂಟ್ ಆದರೆ ಎಂಬ ಭಯ, ಅದನ್ನೆಲ್ಲಾ ಹಾಗೆ ಎದೆಯಲ್ಲಿ ಇಟ್ಟುಕೊಂಡೆ ಇದನೆಲ್ಲ ಬರೆದೆ, ಆಗಂತ ನಮಗೆ ಕೆಟ್ಟ ಅನುಭವಗಳು ಆಗಿಲ್ಲ ಅಂತ ಇಲ್ಲ.
ರಾಮೇಶ್ವರಂ ಕಾಫಿ ಶಾಪ್ ಹತ್ರ ಒಂದು ಗಂಟೆ ನಿಂತಾಗ ಒಬ್ಬರು ಕೂಡ ನಮ್ಮ ಕಡೆ ತಿರುಗಿ ನೋಡಲಿಲ್ಲ, ಚರ್ಚ್ ಸ್ಟ್ರೀಟ್ ಲಿ ನಿಂತಾಗ ಅಲ್ಲಿನ ಬೀದಿ ವ್ಯಾಪಾರಿಗಳು ಓಡಿಸಲು ಟ್ರೈ ಮಾಡುದ್ರು (ಆಮೇಲೆ ಫ್ರೆಂಡ್ ಆಗಿಬಿಟ್ರು ಅದು ಬೇರೆ ಮಾತು) ಎಸ್ಸೇಲ್ವಿ ಕಾಫಿ ಬಾರ್ ಬಳಿ ಬಿಗ್ ಬಾಸ್ ಗೆ ಹೋಗಿ ಬಂದು ಧರ್ಮದ ಬಗ್ಗೆ ಕನ್ನಡ ಬಗ್ಗೆ ಪುಂಗಿ ಓದಿದವನೊಬ್ಬ ಕಾರಿನಲ್ಲಿ ಬಂದ, ಅವನ ಹತ್ರ ಹೋಗಿ ವಿಕ್ರಂ ನಮ್ಮ ಪ್ರಯತ್ನ ತಿಳಿಸಿದರು, ಅವನು ಕಾರಿಂದ ಇಳಿದು ನಮ್ಮ ಪುಸ್ತಕ ನೋಡಿ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು ಸಿನಿಮಾಗೆ ಬರೆಯೋ ಹಾಗಿದ್ರೆ ಹೇಳೋ ತುಂಬಾ ಇದೆ ಎಂದು ಹೇಳಿ, ಮತ್ತೆ ಕಾರ್ ಹತ್ತಿ ಕೂತ. ಇನ್ನೂ ಎಷ್ಟೋ ಕಹಿ ಅನುಭವಗಳು ಕೂಡ ಆಗಿವೆ.

ಆದರೆ ಒಂದು ನಮ್ಮ ಗಮನಕ್ಕೆ ಬಂದಿದ್ದು ಕನ್ನಡ ಕನ್ನಡ ಪುಸ್ತಕ ಪ್ರೇಮ ಇರುವ ಸಾಮಾನ್ಯ ಮಂದಿಗೆ ಅಪರೂಪಕ್ಕೆ ಓದುವ ಕನ್ನಡ ಪುಸ್ತಕದಿಂದ ದೂರ ಇರುವರಿಗೆ ನಮ್ಮ ಈ ಪ್ರಯತ್ನ ನೋಡಿ ಖುಷಿ, ಅವರ ಮಾತಿನಲ್ಲಿ ಆ ಖುಷಿ ಎದ್ದು ಕಾಣುತ್ತೆ. ಅವರು ಪುಸ್ತಕ ಮಳಿಗೆಗೆ ಹೋಗುತ್ತಿದ್ದರೋ ಇಲ್ವೋ ನಮ್ಮನ್ನು ನೋಡಿ ನಾವೇ ಬರೆದದ್ದು ಎಂದು ಕೇಳಿ ಆಶ್ಚರ್ಯವಾಗಿ ಲೇಖಕ ಯಾರು ಸಬ್ಜೆಕ್ಟ್ ಏನು ಬೆಲೆ ಎಷ್ಟು ಕೂಡ ನೋಡದೆ ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ, ಕೆಲವರು ನಾನು ಓದೋಲ್ಲ ಆದರೆ ಮನೆಯಲ್ಲಿ ಕೊಡ್ತೀನಿ ಅಂದವರಿದ್ದಾರೆ, ನೀವು ಹೇಗೆ ಬರೀತೀರಿ ಯಾಕ್ ಬರೀತೀರಿ ಎಂದು ಕುತೂಹಲದಲ್ಲಿ ಕೇಳಿದವರಿದ್ದಾರೆ, ಓದು ಬರಹ ಕನ್ನಡ ಪುಸ್ತಕ ಅವರಿಗೆ ಎದೆಗೆ ತಾಕಿರುವ ವಿಷಯ.
ಹಾಗೆ ನೋಡಿದರೆ ಕನ್ನಡ ಸಾಹಿತ್ಯದಿಂದ ಸ್ವಲ್ಪ ದೂರವಿರುವ, ಅಪರೂಪಕ್ಕೆ ಪುಸ್ತಕ ಓದುವ, ಕನ್ನಡದ ಒಲವಿರುವ ಸಾಮಾನ್ಯ ಮಂದಿಯೇ ನಮ್ಮ ಪ್ರಯತ್ನ ಯಶಸ್ವಿ ಮಾಡಿರೋದು, ಅವರೆಲ್ಲ ಹೊಸ ಓದುಗರೇ. ಹೆಚ್ಚಾಗಿ ಕನ್ನಡ ಕನ್ನಡ ಪುಸ್ತಕದ ಬಗ್ಗೆ ನಿಷ್ಕಲ್ಮಶ ಪ್ರೀತಿ ಇಟ್ಟುಕೊಂಡಿರೋರೆ. ನಾವು ಹೀಗೆ ಬೀದಿಗೆ ಬಾರದೆ ಇದ್ದರೆ ಅಂತಹ ಸ್ವಚ್ಛ ನಿಷ್ಕಲ್ಮಶ ಕನ್ನಡ ಪ್ರೇಮಿಗಳನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತ ಇದ್ವಿ.
ಹಾಗೆ ನೋಡಿದರೆ ನಮಗೆ ಬೀದಿಯಲ್ಲಿ ಸಿಕ್ಕ ಖುಷಿ ಆದ ಮಾರಾಟ ಕನ್ನಡದ ಬಗ್ಗೆ ಸಾಹಿತ್ಯದ ಬಗ್ಗೆ ದೊಡ್ಡ ದೊಡ್ಡ ಮಾತನಾಡುವರ ಜಾಗದಲ್ಲಿ ಆಗಿಲ್ಲ, ಅಯ್ಯೋ ಮನೇಲಿ ತುಂಬಾ ಪುಸ್ತಕ ಇದೆ, ನಿಮ್ ಹತ್ರ ಅವರ ಬುಕ್ ಇಲ್ವಾ ಇವರ ಬುಕ್ ಇಲ್ವಾ ಎಂದು ಕೇಳಿ ಹಾಗೆ ಸುಮ್ಮನೆ ನೋಡಿ ಹೊರಟವರ ಸಂಖ್ಯೆ ಜಾಸ್ತಿ ಇದೆ, ಕಲಾಗ್ರಾಮ ಕಲಾಸೌಧದಲ್ಲಿ ನಾವು ಹತ್ತು ಗಂಟೆ ನಿಂತರೂ ಹತ್ತು ಪುಸ್ತಕ ಮಾರಲು ಆಗಲಿಲ್ಲ.
ಸಿಹಿ ಕಹಿ, ಮಾರಾಟ ಇವೆಲ್ಲವ್ವನ್ನು ಮೀರಿ ನಮ್ಮ ಪುಸ್ತಕಗಳನ್ನು ನೋಡಿ ಯಾರೋ ಖುಷಿ ಪಡುತ್ತಾರಲ್ಲ, ಕನ್ನಡ ಎಂಬ ಒಂದು ತಂತು ನಮ್ಮನ್ನ ನಮ್ಮ ಪುಸ್ತಕಗಳನ್ನ ಮುಟ್ಟಿ ತೆಗೆದುಕೊಂಡು ತಾವು ಓದಿಯೋ ಇಲ್ಲ ಯಾರಿಗೋ ಕೊಡುತ್ತಾರಲ್ಲ ಅದೆಲ್ಲ ಮೀರಿ ‘ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಒಳ್ಳೇದಾಗ್ಲಿ’ ಎಂದು ಯಾವ ವಿಷವಿಲ್ಲದೆ ಹರಸಿ ಹೋಗುತ್ತಾರಲ್ಲ ಅದಕ್ಕಿಂತ ಬೇರೇನೂ ಬೇಕು. ಕೆಲವರು ನಮ್ಮ ಪ್ರಯತ್ನ ಮೆಚ್ಚಿ ಫೇಸ್ಬುಕಲ್ಲಿ ನೋಡಿ ಅಷ್ಟು ಪುಸ್ತಕಗಳನ್ನು ಪೋಸ್ಟ್ ಮಾಡಿಸಿಕೊಂಡಿದ್ದಾರೆ.
ನಮ್ಮ ಈ ಅಭಿಯಾನವನ್ನ ನೋಡಿ ಕನ್ನಡದ ಎಲ್ಲ ಪುಸ್ತಕ ಮಾರಿ ಎಂದವರಿದ್ದಾರೆ. ಖಂಡಿತ ಬರೆದವರೇ ಬಂದು ನಿಂತರೆ ಅವರಿಗೆ ಸ್ವಾಗತ. ಬೇರೆ ಪುಸ್ತಕ ಕೇಳಿದವರಿಗೆ ಕನ್ನಡದ ಪುಸ್ತಕದ ಅಂಗಡಿಗಳ ನಂಬರ್ ಕೊಟ್ಟು ಅಲ್ಲಿ ಸಿಗುತ್ತೆ ಎಂದು ಹೇಳುತ್ತೇವೆ.
ಬೆಳ್ ಬೆಳಗ್ಗೆ ಬಾ ಗುರು ಬುಕ್ ತಗೋ ಅಭಿಯಾನದಲ್ಲಿ ಪುಸ್ತಕ ತೆಗೆದುಕೊಂಡವರು ಒಬ್ಬರು ಪುಸ್ತಕ ಚೆನ್ನಾಗಿದೆ, ನೀವು ಬೀದೀಲಿ ನಿಲ್ಲದೆ ಇದ್ರೆ ನಾನು ನಿಮ್ ಪುಸ್ತಕ ಓದ್ತಾ ಇದ್ದಿದು ಡೌಟ್ ಎಂದು ಹೇಳಿದಾಗ ಇದೆಲ್ಲ ನೆನಪಾಯಿತು
0 ಪ್ರತಿಕ್ರಿಯೆಗಳು