‘ಬಹುರೂಪಿ’ಯ ಪ್ರಕಟಣೆ ಡಾ ಮಿರ್ಜಾ ಬಷೀರ್ ಅವರ ‘ಗಂಗೆ ಬಾರೆ ಗೌರಿ ಬಾರೆ’ ಕೃತಿಗೆ ಈ ಸಾಲಿನ ಪ್ರತಿಷ್ಟಿತ ‘ಅಮ್ಮ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ.
ವೃತ್ತಿಯಿಂದ ಪಶುವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಡಾ ಮಿರ್ಜಾ ಅವರು ತಮ್ಮ ವೃತ್ತಿಜೀವನದ ಮನಕಲಕುವ ಕಥೆಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಈ ಕೃತಿ ‘ಅವಧಿ’ಯಲ್ಲಿ ಅಂಕಣವಾಗಿ ಪ್ರಕಟವಾಗಿತ್ತು.
ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೂರು ಬಾರಿ ಬಹುಮಾನ ಪಡೆದ ಹೆಗ್ಗಳಿಕೆ ಇವರದ್ದು. ಇದುವರೆಗೆ ಮೂರು ಕಥಾ ಸಂಕಲನಗಳು
ಬಟ್ಟೆ ಇಲ್ಲದ ಊರಿನಲ್ಲಿ, ಜಿನ್ನಿ, ಹಾರುವ ಹಕ್ಕಿ ಮತ್ತು ಇರುವೆ ಪ್ರಕಟಗೊಂಡಿವೆ.
‘ಜಿನ್ನಿ’ ಕಥಾ ಸಂಕಲನಕ್ಕೆ ಲಂಕೇಶ್ ಪ್ರಶಸ್ತಿ ಮತ್ತು ಸಾಂಬಶಿವಯ್ಯ ಸಾಹಿತ್ಯ ಟ್ರಸ್ಟ್ ಪುಸ್ತಕ ಬಹುಮಾನ. ‘ಹಾರುವ ಹಕ್ಕಿ ಮತ್ತು ಇರುವೆ’ ಕಥಾ ಸಂಕಲನಕ್ಕೆ ಸ್ವಾಭಿಮಾನಿ ಕರ್ನಾಟಕ ಬೆಂಗಳೂರು ಇವರ ಪುಸ್ತಕ ಪ್ರಶಸ್ತಿ ಮತ್ತು ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಸಂದಿವೆ.

‘ಗಂಗೆ ಬಾರೆ ಗೌರಿ ಬಾರೆ’ ಕೃತಿಗೆ ಮಿರ್ಜಾ ಬಾಷೀರ ಅವರು ಬರೆದ ಮಾತನ್ನು ಇಲ್ಲಿ ನೀಡುತ್ತಿದ್ದೇವೆ-
1981ರಿಂದ 2015ರವರೆಗೆ 35 ವರ್ಷಗಳ ಕಾಲ ನಾನು ಪಶುವೈದ್ಯ ವೃತ್ತಿಯಲ್ಲಿ ಮುಳುಗಿ ಹೋಗಿದ್ದೆ. ಆ 35
ವರ್ಷಗಳೆಂಬುವು ಕಣ್ಣು ಮಿಟುಕಿಸುವುದರಲ್ಲಿ ಉರುಳಿ ಹೋಗಿದ್ದವು. ಯಾಕೆಂದರೆ ಆ ವೃತ್ತಿಯು ನನಗೆ ಕೇವಲ ಸರಕಾರಿ
ಕೆಲಸವಾಗಿರದೆ, ಜೀವನೋಪಾಯವಾಗಿರದೆ, ಕಾಲ ನೂಕುವ ನೆಪವಾಗಿರದೆ, ಮನೋಲ್ಲಾಸದ ಮನೋವಿಕಾಸದ
ಆಟವಾಗಿತ್ತು. ಎಂದೂ ಮುಗಿಯದ ಪಾಠವಾಗಿತ್ತು.
ಬುದ್ಧನು ಹೇಳುವ ಕರುಣೆಯಾಗಿತ್ತು. ಬಸವಣ್ಣ ಹೇಳುವ ದಯೆಯ ಧರ್ಮವಾಗಿತ್ತು. ಜಾತ್ಯತೀತ ಗುಣದ ಗಣಿಯಾಗಿತ್ತು.
ಬಡವ ಶ್ರೀಮಂತ ಎಂಬುವ ಭೇದ ಮೀರಿದುದಾಗಿತ್ತು. ಕುವೆಂಪು ಹೇಳುವ ‘ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ
ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ’ ಎಂಬುದನ್ನು ಶ್ರುತಪಡಿಸುವಂತಿತ್ತು. ಅದು ಮನುಜಮತವೂ ವಿಶ್ವಪಥವೂ
ಐಕ್ಯಗೊಂಡ ಬಿಂದುವಾಗಿತ್ತು. ಆ ವೃತ್ತಿಯೇ ನನ್ನ ಉಸಿರಾಗಿತ್ತು ನಾಡಿಮಿಡಿತವಾಗಿತ್ತು ಅಧ್ಯಾತ್ಮವಾಗಿತ್ತು ಧ್ಯಾನವಾಗಿತ್ತು.
ವೃತ್ತಿಯಲ್ಲಿ ನನಗಾದ ಕೆಲವು ಅನುಭವಗಳು ಇಲ್ಲಿವೆ. ಇವುಗಳನ್ನು ಟಿಪ್ಪಣಿಗಳಂತೆಯೂ, ಪ್ರಬಂಧಗಳಂತೆಯೂ,
ಕಥೆಗಳಂತೆಯೂ ಓದಿಕೊಳ್ಳಬಹುದು. ಇವು ನನ್ನ ಆತ್ಮಕಥಾನಕದ ತುಣುಕುಗಳೂ ಹೌದು.
ಇಲ್ಲಿನ ಕೆಲವು ಲೇಖನಗಳನ್ನು ಸಿದ್ಧಪಡಿಸುವಲ್ಲಿ ತಾಂತ್ರಿಕ ಸಲಹೆಗಳನ್ನು ನೀಡಿದ ಪ್ರೊ. ಎ ಮುರಳೀಧರ, ಪ್ರೊ. ಎಚ್ ಎ
ಉಪೇಂದ್ರ, ಡಾ. ಪಿ ಗಿರಿಧರ್ ಮತ್ತು ಡಾ. ಟಿ ಎಸ್ ಮಂಜು ಇವರಿಗೆ ವಂದಿಸುತ್ತೇನೆ.
ಲೇಖನಗಳನ್ನು ಮೆಚ್ಚಿ ‘ಸಂಗಾತ’ ಪತ್ರಿಕೆಯಲ್ಲಿ ಪ್ರಕಟಿಸಿದ ಟಿ ಎಸ್ ಗೊರವರ ಮತ್ತು ‘ಅಗ್ರಿಕಲ್ಚರ್ ಇಂಡಿಯ’
ವೆಬ್‍ಸೈಟಿನ ಕುಮಾರ ರೈತ ಇವರಿಗೆ ಕೃತಜ್ಞ. ಇಲ್ಲಿನ ಬರಹಗಳನ್ನು ಮೆಚ್ಚಿ ತಮ್ಮ ‘ಅವಧಿ’ ಅಂತರ್ಜಾಲ ಪತ್ರಿಕೆಯಲ್ಲಿ
ಸರಣಿಯಾಗಿ ಪ್ರಕಟಿಸಿದ್ದಲ್ಲದೆ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವ ಜಿ ಎನ್ ಮೋಹನ್ ಅವರ ಪ್ರೀತಿಗೆ ಸಾವಿರ ನಮನ.
ಬರಹಗಳನ್ನು ಡಿಟಿಪಿ ಮಾಡಿಕೊಟ್ಟ ತುಮಕೂರಿನ ಬಾಳೇಶ್ವರ ಡಿಟಿಪಿ ಸೆಂಟರಿನ ಡಿ ಪಿ ಮಂಜುನಾಥ್ ಇವರಿಗೆ
ಆಭಾರಿಯಾಗಿದ್ದೇನೆ. ಪುಸ್ತಕಕ್ಕಾಗಿ ಫೋಟೋವನ್ನು ತೆಗೆದ ಕ್ಯಾತ್ಸಂದ್ರದ ಮನು ಚಕ್ರವರ್ತಿಯವರಿಗೆ ನಾನು ಕೃತಜ್ಞ.
ಡಾ. ಮಿರ್ಜಾ ಬಷೀರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
Dr. ಮಿರ್ಜಾ ಬಷೀರ್ ಅವರಿಗೆ ಅಭಿಂದನೆಗಳು. ಪಶುವೈದ್ಯರ ಅನುಭವಗಳು ಅಪಾರ, ಅವುಗಳನ್ನು ಓದುಗರಿಗೆ ಉಣಬಡಿಸಿದ ನಿಮಗೆ ಧನ್ಯವಾದಗ
ಹೃದಯ ಪೂರ್ವಕ ಅಭಿನಂದನೆಗಳು ಸಾಹಿತ್ಯ ಲೋಕದ ನನ್ನ ಆತ್ಮೀರಾದ.ಡಾ.ಮಿರ್ಜಾಬಷೀರ್ ಸಾಹೇಬರಿಗೆ. ಇಂತಹ ಸ್ನೇಹಿತರನ್ನು ಹೊಂದಿರುವ ನಾವೇ ಧನ್ಯರು. ಮಾನವೀಯ ಮೌಲ್ಯಗಳನ್ನು ಎಷ್ಟು ರೂಪಗಳಲ್ಲಿ ವಿವರಣೆ ನೀಡಿರುವಿರಿ ನನಗೆ ಹೃದಯ ಕಣ್ಗುಗಳು ತುಂಬಿ ಹರಿಯತೊಡಗಿದವು. ನಿಮ್ಮ ವೃತ್ತಿಜೀವನದ ಅನುಭವವಗಳಿಗೆ ಹಾಗೂ ನಿಮ್ಮ ಅಭಿಪ್ರಾಯಗಳಿಗೆ ಅನಂತಾನಂತ ನಮನಗಳು.