ಶ್ರೀದೇವಿಯವರ ಈ ವಾರದ ಆಯ್ಕೆ 'ಅರ್ಧನಾರೀಶ್ವರ'..


ಕೆಲವು ವರ್ಷಗಳ ಹಿಂದಿನ ಮಾತು.
ನನ್ನ ಅಜ್ಜನ ಅಂದರೆ ತಂದೆಯವರ ಚಿಕ್ಕಪ್ಪನ ವೈಕುಂಠ ಸಮಾರಾಧನೆ ನಡೆಯುತ್ತಿತ್ತು.
ಭಾರತ- ಪಾಕಿಸ್ತಾನ ಕ್ರಿಕೆಟ್ ನೋಡುತ್ತ ಮಲಗಿದವರು ಭಾರತ ಗೆದ್ದಿತು ಎನ್ನುತ್ತ ಅಲ್ಲೇ ಕಣ್ಣು ಮುಚ್ಚಿದ್ದರು. ಹದಿನಾಲ್ಕನೆಯ ದಿನದ ಕೆಲಸಗಳೆಲ್ಲ ಮುಗಿದ ಮೇಲೆ ಅವರ ಸೊಸೆ ಎಲ್ಲರ ಕೈಗೆ ಹೂವಿನ ಪ್ರಸಾದ ಕೊಡುತ್ತ ಬಂದರು. ಅದ್ಯಾಕೋ ಇಡೀ ಹೂ ಮಾಲೆ ನನ್ನ ಕೈಗೆ ಬಂತು, ಅದನ್ನು ವಾಪಸ್ ತೆಗೆದುಕೊಳ್ಳಬೇಕೆಂದುಕೊಂಡವರು ‘ನೀನು ಪ್ರೀತಿಯ ಮೊಮ್ಮಗಳಲ್ವಾ? ನಿನ್ನ ಸಮಾನಕ್ಕೆ ಯಾವ ಮೊಮ್ಮಕ್ಕಳನ್ನೂ ಪ್ರೀತಿಸ್ತಿರಲಿಲ್ಲ. ಅದಕ್ಕೇ ಇಡೀ ಹೂ ಮಾಲೆ ನಿನ್ನ ಕೈಗೆ ಬಂತು’ ಎನ್ನುತ್ತ ಬೇರೆ ಹೂ ಮಾಲೆ ತಂದರು.
ಯಾಕೋ ತೀರಿಕೊಂಡ ಅಜ್ಜನ ನೆನಪಿಗೆ ಕಣ್ಣ ತುಂಬಾ ನೀರು. ನಾನು ಚಿಕ್ಕವಳಿದ್ದಾಗಿನಿಂದಲೂ ನನ್ನೆಲ್ಲ ಕುತೂಹಲಗಳಿಗೆ ಉತ್ತರ ಕೊಡುತ್ತಿದ್ದುದು ಇದೇ ಅಜ್ಜ, ಅಂದರೆ ನನ್ನ ತಂದೆಯವರ ಚಿಕ್ಕಪ್ಪ. ಪಕ್ಕದಲ್ಲೇ ಅವರ ಮನೆ ಮಕ್ಕಳು ಇದ್ದರೂ ಅವರು ಇರುತ್ತಿದ್ದುದು ನಮ್ಮ ಮನೆಯಲ್ಲೇ. ನಾನು ತಿಳಿದ ಮಟ್ಟಿಗೆ ಆ ತಂದೆ ಮಕ್ಕಳಲ್ಲಿ ಜಗಳವೇನೂ ಆಗಿರಲಿಲ್ಲ. ಚೆನ್ನಾಗಿಯೇ ಇದ್ದರು. ಆದರೂ ಮಕ್ಕಳ ಜೊತೆಗಿರದೇ ನನ್ನ ಚಿಕ್ಕಪ್ಪನ ಜೊತೆಗಿರುತ್ತಿದ್ದರು.
ಅವರಿದ್ದರೆ ನನಗೆ ಅದೇನೋ ಖುಷಿ. ಎಲ್ಲದಕ್ಕೂ ಒಂದೊಂದು ಘಟನೆಯನ್ನು ಹೇಳುತ್ತ, ಕಾರಣ ನೀಡುತ್ತ ನನ್ನ ಕುತೂಹಲಕ್ಕೆ ಉತ್ತರವಾಗುತ್ತಿದ್ದರು. ನಾನು ಸಿಣ್ಣಪ್ಪ ಎಂದು ಕರೆಯುತ್ತಿದ್ದ ಅವರಿಗೆ ನಾನೆಂದರೆ ಎಲ್ಲಿಲ್ಲದ ಪ್ರೀತಿ.
ನಮ್ಮೂರು ಇರುವುದು ‘ಪರುಶುರಾಮ ಕ್ಷೇತ್ರೇ.. ಗೋಕರ್ಣ ಮಂಡಲೇ’ ಎಂದು ಸ್ತುತಿಸುವಲ್ಲಿ. ಹೀಗಾಗಿ ದೇವಸ್ಥಾನಗಳು ಹೆಚ್ಚು. ಅತ್ತರೊಂದು ದೇವಸ್ಥಾನ, ನಕ್ಕರೆ ಇನ್ನೊಂದು ದೇವಸ್ಥಾನ. ಎಲ್ಲದಕ್ಕೂ ಒಂದೊಂದು ಗುತ್ತುಗಳು. ನಮ್ಮ ಮನೆಯ ಪಕ್ಕದಲ್ಲೇ ಒಂದು ದೇವಸ್ಥಾನವಿದೆ. ಪುಟ್ಟ ದೇಗುಲ ಇದು. ಆದರೆ ಆಕರ್ಷಕವಾದದ್ದು. ಆದರೆ ಯಾರೂ ಆ ದೇವಸ್ಥಾನದ ಹತ್ತಿರ ಹೋಗುತ್ತಿರಲಿಲ್ಲ. ಅದರಲ್ಲೂ ಮಟಮಟ ಮಧ್ಯಾಹ್ನವಾದರಂತೂ ಆ ದೇವಸ್ಥಾನದ ಸಮೀಪ ಹಾದು ಹೋಗಲೂ ಭಯಪಡುತ್ತಿದ್ದರು. ಹೆಂಗಸರು, ಮಕ್ಕಳಂತೂ ಒಬ್ಬರೇ ಆ ಹಾದಿಯಲ್ಲಿ ಓಡಾಡುತ್ತಲೂ ಇರಲಿಲ್ಲ.
ನಾನಾಗ ಎರಡೋ ಮೂರನೆಯ ತರಗತಿ ಇದ್ದಿರಬಹುದು. ಒಂದು ದಿನ ನನ್ನ ಅಜ್ಜ ದೇಗುಲದ ಗರ್ಭಗುಡಿಯ ಬಾಗಿಲು ತೆರೆದು ಒಳಹೋಗಿ ದೇವರ ಶಿಲೆಯ ಮೇಲಿದ್ದ ಹೂ ತರಲು ಹೇಳಿದರು. ನಾನೋ ತೀರಾ ಹುಂಬತನದವಳು. ಏನನ್ನೂ ಯೋಚಿಸದೇ ಸೀದಾ ಒಳ ಹೋಗಿ ಹೂವು ತಂದೆ. ಆಗೆಲ್ಲ ಈಗಿನ ಹಾಗೆ ದೇವರು ಓಡಿಹೋದಾನು ಎಂಬಂತೆ ಬಾಗಿಲು ಹಾಕಿ ಬೀಗ ಜಡಿಯುತ್ತಿರಲಿಲ್ಲ. ಯಾರು, ಯಾವಾಗ ಬೇಕಾದರೂ ಬಾಗಿಲು ತೆರೆದು ದರ್ಶನ ಪಡೆಯಬಹುದಾಗಿದ್ದ ಕಾಲ ಅದು. ಇನ್ನೇನು ಹೂ ಹಿಡಿದು ಹೊರಬರಬೇಕು ಎನ್ನುವಷ್ಟರಲ್ಲಿ ಅಲ್ಲೇ ನಿಲ್ಲು ಎಂದವರೇ ದೇವರ ಶಿಲೆಯ ಅಕ್ಕ ಪಕ್ಕದಲ್ಲಿರುವ ಕಿರು ಮೂರ್ತಿಗಳ ಮೇಲಿನ ಹೂವನ್ನೂ ತರಲು ಹೇಳಿದರು. ಹಿಂದೆಮುಂದೆ ನೋಡದೇ ಅಲ್ಲಿಯ ಹೂಗಳನ್ನೂ ಎತ್ತಿಕೊಂಡು ಹೊರಬಂದೆ.
‘ಇದು ನಿನ್ನ ಹಕ್ಕು. ನೀನೇ ಅದನ್ನು ಮುಡಿಯಬೇಕು’ಅಂದಿದ್ದರು. ನನಗೋ ಈ ದೇವಾಲಯದ ಹೂವಿನಲ್ಲೇನು ಹಕ್ಕು ಸ್ಥಾಪನೆ ಎಂಬುದು ಅರ್ಥ ಆಗಲಿಲ್ಲ. ಅದರಲ್ಲೂ ಮುಖ್ಯ ಶಿಲೆಯ ಪಕ್ಕದ ಕಿರು ಮೂರ್ತಿಗಳ ಹೂವನ್ನು ಯಾರಿಗೂ ಕೊಡಲು ಬಿಡುತ್ತಿರಲಿಲ್ಲ. ಅದ್ಯಾಕೆ ಎಂಬ ನನ್ನ ಕುತೂಹಲಕ್ಕೆ ಅವರ ಬಳಿ ಒಂದು ಕಥೆ ಇತ್ತು.
ಎಷ್ಟೋ ತಲೆಮಾರುಗಳ ಹಿಂದೆ ಇಬ್ಬರು ಹುಡುಗಿಯರು ಆ ದೇವಸ್ಥಾನದ ಆವಾರದಲ್ಲಿ ಆಟ ಆಡುತ್ತಿದ್ದವರು ಹಠಾತ್ತಾಗಿ ಅದೃಶ್ಯರಾಗಿಬಿಟ್ಟಿದ್ದರಂತೆ. ಹುಡುಕುವಷ್ಟನ್ನೆಲ್ಲ ಹುಡುಕಿ, ಕೊನೆಗೆ ಆ ಮಕ್ಕಳ ಅಪ್ಪ ಅಮ್ಮ ದೇವಸ್ಥಾನದ ಬಾಗಿಲು ಕಟ್ಟಿ ಪ್ರಶ್ನಿಸಲಾಗಿ ‘ನಾನೇ ಆ ಮಕ್ಕಳನ್ನು ತೆಗೆದು ಕೊಂಡಿರುವುದಾಗಿಯೂ, ಅವರಿಬ್ಬರ ಬದಲಾಗಿ ಮತ್ತೆ ಮಕ್ಕಳನ್ನು ಹುಟ್ಟಿಸುವುದಾಗಿಯೂ ದೇವರು ಹೇಳಿತ್ತಂತೆ. ಅದಾದ ನಂತರವೇ ಆ ದೇಗುಲದ ಸಮೀಪ ಬರಲು ಎಲ್ಲರೂ ಹೆದರುತ್ತಿದ್ದುದು ಎಂಬುದು ಅಜ್ಜನ ವಿವರಣೆ.
ಆ ಮಕ್ಕಳೇ ಮುಖ್ಯ ದೇವಶಿಲೆಯ ಪಕ್ಕದ ಕಿರು ಮೂರ್ತಿಗಳೆಂದೂ, ಅವರ ಹೆಸರು ಕನ್ಯಾ ಮತ್ತು ಛಾಯಾ ಎಂದೂ ಮತ್ತು ಆ ಇಬ್ಬರು ಹುಡುಗಿಯರು ನಮ್ಮದೇ ವಂಶದ ಪೂರ್ವಜರಾಗಿದ್ದರಿಂದ ನಾನು ಹೆದರದೇ ಸಲೀಸಾಗಿ ಆ ದೇಗುಲದ ಒಳಗೆ ಹೋಗಬಹುದೆಂದು ಅಜ್ಜ ಯಾವತ್ತೂ ಹೇಳುತ್ತಿದ್ದರು.
ಹೀಗಾಗಿ ಯಾವಾಗ ಊರಿಗೆ ಬಂದರೂ ಆ ದೇಗುಲದ ಗರ್ಭಗುಡಿಗೆ ಹೋಗಿ ಶಿಲೆಯ ಮೇಲಿನ ಹೂ ತೆಗೆದುಕೊಳ್ಳುವುದು ರೂಢಿಯಾಗಿ ಬಿಟ್ಟಿತ್ತು. ಆದರೆ ದೊಡ್ಡವಳಾಗುತ್ತ ಬಂದಂತೆ ದೇವಸ್ಥಾನಕ್ಕೆ ಹೋಗುವುದೇ ಕಡಿಮೆಯಾಗಿ, ಇತ್ತೀಚೆಗೆ ಆ ದೇವಸ್ಥಾನದ ಬಾಗಿಲುಗಳನ್ನೆಲ್ಲ ಬೀಗ ಹಾಕಿ ಭದ್ರಪಡಿಸಿಟ್ಟಿರುವುದರಿಂದ ಆ ರೂಢಿ ನಿಂತು ಹೋಗಿದೆ.
ಆದರೆ ಆಗಿನಿಂದ ಈಗಿನವರೆಗೂ ನನ್ನ ತಲೆಯಲ್ಲಿ ಒಂದೇ ಪ್ರಶ್ನೆ. ಈ ದೇವರುಗಳಿಗೆ ಸಣ್ಣ ಮಕ್ಕಳೇಕೆ ಬೇಕು? ಅಮ್ಮ ಆಗೀಗ ಹೇಳುತ್ತಿದ್ದ ಕೋಳೂರ ಕೊಡಗೂಸು ಕಥೆಯನ್ನು ಕೇಳುವಾಗಲೂ ನನ್ನದು ಅದೇ ಪ್ರಶ್ನೆ. ‘ಮಕ್ಕಳು ಎಂದರೆ ಎಲ್ಲರಿಗೂ ಪ್ರೀತಿ ಅಲ್ವಾ? ದೇವರಿಗೂ ಪ್ರೀತಿ ಇರಬಹುದು’ ಅಮ್ಮ ಸಮಜಾಯಿಶಿ ನೀಡುತ್ತ, ಆ ದೇವಸ್ಥಾನದ ಬಳಿ ಒಬ್ಬಳೇ ಹೋಗದಿರಲು ಅನುನಯಿಸುತ್ತಿದ್ದರೆ, ಅಪ್ಪ ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ತಟಸ್ಥರಾಗಿರುತ್ತಿದ್ದರು.
ನನ್ನ ಆತ್ಮೀಯ ಸ್ನೇಹಿತರೊಬ್ಬರು ತಮ್ಮ ಮೂರನೆ ಮಗುವಿನ ಕುರಿತಾಗಿ ಹೇಳುವಾಗ, ಏನು ಮಾಡೋದು ದೇವರು ಕೊಟ್ಟಿದ್ದು ಎಂದಿದ್ದರು. ಇವರು ತೆಗೆದುಕೊಳ್ಳದ ಮುನ್ನೆಚ್ಚರಿಕೆಗೆ ಪಾಪ ತಟಸ್ಥವಾಗಿ ಕುಳಿತ ದೇವರನ್ನೇಕೆ ಹೊಣೆ ಮಾಡುವುದು ಎಂದುಕೊಂಡಿದ್ದೆ ಆಗಲೂ. ಈ ದೇವರಿಗೆ ಮತ್ತು ಮಕ್ಕಳಿಗೆ ಅದ್ಯಾವ ಸಂಬಂಧ ಅನ್ನೋದನ್ನು ‘ಅರ್ಧನಾರೀಶ್ವರ’ದ ಮೂಲಕ ಪೆರುಮಾಳ್ ಮುರುಗನ್‍ರವರು ವಿವರಿಸುವುದನ್ನು ಕೆ ನಲ್ಲತಂಬಿಯವರು ನನಗಾಗಿಯೇ ಎಂಬಂತೆ ಕನ್ನಡಕ್ಕೆ ಅನುವಾದಿಸಿದ್ದಾರೆ
ಮಾತು ಮಾತಿಗೆ ನಮ್ಮ ಆಚಾರ ವಿಚಾರ ಹೇಳುವ ಸಂಪ್ರದಾಯಸ್ಥರು, ಸನಾತನಿಗಳು ಈ ಕಾದಂಬರಿಯನ್ನು ಬರೆದದ್ದಕ್ಕಾಗಿ ಪೆರುಮಾಳ್ ಮುರುಗನ್‍ರ ವಿರುದ್ಧ ದಂಗೆ ಎದ್ದುದನ್ನು ಪೇಪರ್‍ನಲ್ಲಿ ಓದಿದಾಗ ಈ ಕಾದಂಬರಿಯನ್ನು ಓದಲೇ ಬೇಕೆಂಬ ಉತ್ಕಟ ಆಸೆ. ಒಂದಿಷ್ಟು ದಿನ ಆದ ಮೇಲೆ ಆ ಆಸೆ ಮರೆತು ಹೋಗಿತ್ತು. ಆದರೆ ಕೆ ನಲ್ಲತಂಬಿ ಸರ್ ಪುಸ್ತಕ ಕಳಿಸಿದಾಗಲೇ ಮತ್ತೆ ನೆನಪಾಗಿ ಹುರುಪು ಮೂಡಿದ್ದು.
ಮಕ್ಕಳು ಬೇಕೆಂಬುದು ಬಹಳಷ್ಟು ಹೆಣ್ಣುಗಳ ಸಹಜ ಬಯಕೆ. ಇಲ್ಲಿ ನಾನು ಎಲ್ಲಾ ಹೆಣ್ಣುಗಳ ಅಂತ ಬಳಸುವುದೇ ಇಲ್ಲ. ಯಾಕೆಂದರೆ ಮಗು ಹುಟ್ಟಿದರೆ ತನ್ನ ಕರಿಯರ್‍ಗೆ ತೊಂದರೆ ಎನ್ನುತ್ತ ಮಗು ಬೇಡ ಎನ್ನುವುದಕ್ಕೋಸ್ಕರವೇ ಗಂಡನಿಗೆ ಡಿವೋರ್ಸ ಕೊಟ್ಟವಳೊಬ್ಬಳನ್ನು ನಾನು ತೀರಾ ಹತ್ತಿರದಿಂದ ನೋಡಿದ್ದೇನೆ. ಆದರೂ ಮಕ್ಕಳು ಎಲ್ಲರಿಗೂ ಪ್ರೀತಿ ಎಂಬ ಲೋಕಾರೂಢಿಯ ಮಾತನ್ನು ಸಾರಾಸಗಟಾಗಿ ತಳ್ಳಿ ಹಾಕುವಂತಿಲ್ಲ.
ಇಲ್ಲಿ ಪೊನ್ನ ಕೂಡ ಮದುವೆಯಾಗಿ ಹತ್ತು ವರ್ಷ ಆದರೂ ಮಕ್ಕಳಾಗದ ನೋವಿನಲ್ಲಿ ನೋಯುತ್ತಾಳೆ, ಬೇಯುತ್ತಾಳೆ. ಅವಳ ಬಿಸಿಯುಸಿರು ಅವಳ ಗಂಡ ಕಾಳನನ್ನೂ ಸುಡುತ್ತಿದೆ. ಮಕ್ಕಳಿಲ್ಲ ಎಂಬ ಕಾರಣಕ್ಕೆ ಸಮಾಜದಿಂದ, ಸಂಬಂಧಿಗಳಿಂದ ಪದೇ ಪದೇ ಅವಮಾನಕ್ಕೀಡಾಗುವ ಪೊನ್ನಾ ಕೆಲವೊಮ್ಮೆ ಖಿನ್ನತೆಗೊಳಗಾಗಿ ಹಿಸ್ಟೀರಿಯಾ ಆದವಳಂತೆ ವರ್ತಿಸುವುದು ಅವಳಲ್ಲಿ ಮಗುವಿನ ಕುರಿತಾದ ಅತೀವ ವಾಂಛೆ ಎಂದೇ ಹೇಳಬಹುದು.
ನನಗೆ ಸಂಬಂಧದಲ್ಲಿ ಅಕ್ಕ ಆಗಬೇಕಿದ್ದ ಒಬ್ಬಳು ಮಕ್ಕಳಿಲ್ಲದೇ ಬದುಕೇ ಬೇಡ ಎಂದು ನಿರ್ಧರಿಸಿ ಇನ್ನೇನು ತೀರಾ ಕೆಟ್ಟ ನಿರ್ಧಾರಕ್ಕೆ ಕೈ ಹಾಕಬೇಕೆನ್ನುವ ಸಂದರ್ಭದಲ್ಲೇ ಗರ್ಭಿಣಿ ಎಂದು ತಿಳಿದು ಜಗದ ಖುಷಿಯನ್ನೆಲ್ಲ ಬಾಚಿದಂತಾಡಿದ್ದು ನನಗೆ ನೆನಪಿದೆ. ಹೆಣ್ಣಿಗೆ ಬಂಜೆ ಎನ್ನುವ ಪದ ವಿಧವೆ ಎಂಬ ಪದಕ್ಕಿಂತಲೂ ಹೆಚ್ಚು ನೋವನ್ನು ನೀಡುತ್ತದೆ. ಊರ ಕಾರ್ಯದಲ್ಲಿ, ಸಂತೋಷದಲ್ಲಿ, ಮದುವೆಯಂತಹ ಮಂಗಳ ಕಾರ್ಯದಲ್ಲಿ ಭಾಗವಹಿಸದಂತೆ ಈ ಸಮಾಜ ನಿರ್ಬಂ ದಿಸುವುದನ್ನು ಕಾದಂಬರಿಕಾರರು ತೀರಾ ಸ್ಪಷ್ಟವಾಗಿ, ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಕಾಳಿ ಮತ್ತು ಪೊನ್ನ ಇವರಿಬ್ಬರು ಕಾದಂಬರಿಯ ನಾಯಕ ನಾಯಕಿಯರು. ಅವರ ಅನುರಾಗವನ್ನು ಕಾದಂಬರಿಕಾರ ಎಲ್ಲೂ ಅಶ್ಲೀಲ ಎನ್ನಿಸದಂತೆ, ಆದರೆ ನವಿರು ಭಾವಗಳಿಗೆ ಒಂದಿನಿತೂ ಧಕ್ಕೆಯಾಗದಂತೆ ಚಿತ್ರಿಸಿದ್ದಾರೆ. ತೊಂಡುದೊಡ್ಡಿ ಎಂಬ ಅದ್ಭುತದೊಳಗೆ ಆಕಾಶವನ್ನೇ ಹೊದಿಕೆಯನ್ನಾಗಿಸಿಕೊಂಡು ಸುತ್ತ ದನಕರು, ಆಡು-ಮೇಕೆ, ಕೋಳಿಗಳನ್ನೆಲ್ಲ ಸಾಕ್ಷಿಯಾಗಿರಿಸಿಕೊಂಡು ಪ್ರೇಮಿಸುವುದು ಕಾಳಿಗೆ ಬಲು ಇಷ್ಟ. ಪೊನ್ನಾಳಿಗೂ ಅದು ಇಷ್ಟವೇ. ಹೀಗಾಗಿ ಕದವಿಲ್ಲದ, ಮಾಡಿಲ್ಲದ ಮನೆಯೊಳಗಿನ ಸರಸವೆಂದರೆ ಖುಷಿಯಿಂದ ಬೀಗುವ ಪೊನ್ನಾ ಮಾತು ಮಾತಿಗೂ ಮಕ್ಕಳಾಗದ ತಮ್ಮ ವೈಫಲ್ಯವನ್ನು ಆಡಾಡಿಕೊಂಡು ಬಿಕ್ಕಳಿಸುವುದು, ಬಿಕ್ಕಳಿಸುತ್ತಲೇ ಕಾಳಿಯ ಸಮಾಧಾನಕ್ಕೆ ಕರಗಿ ಜಗತ್ತನ್ನೇ ಮರೆಯುವುದು ಅವರಿಬ್ಬರ ಎಂದಿನ ರೂಢಿ.
ನಮ್ಮ ಸಮಾಜದಲ್ಲಿ ಮಕ್ಕಳಾಗಲಿಲ್ಲ ಎಂದರೆ ಅದೊಂದು ದೊಡ್ಡ ದೋಷ ಎಂದೇ ತೀರ್ಮಾನಿಸಿ ಬಿಡುವುದು ಮತ್ತು ಅದರ ಸಂಪೂರ್ಣ ದೋಷವನ್ನು ಹೆಣ್ಣಿನ ತಲೆಯ ಮೇಲೇ ಹೊರಿಸಿಬಿಡುವುದು ಲಾಗಾಯತ್ತಿನಿಂದಲೂ ಬಂದ ರೂಢಿ. ನನ್ನ ಮದುವೆಯಾಗಿ ಆಗಷ್ಟೇ ನಾಲ್ಕೋ ಐದು ತಿಂಗಳಾಗಿತ್ತು. ಒಂದು ದಿನ ಗದ್ದೆ ಕಟ್ಟಲೆಂದು ಬಂದ ಕೆಲಸದ ಅಜ್ಜಿಯೊಬ್ಬಳು, “ತಂಗಿ ಇನ್ನೂ ಮೀತೆ ಇಂವ್ಯೋ?’ ಎಂದಿದ್ದಳು. ನನಗೆ ಆಕೆ ಏನು ಕೇಳಿದ್ದು ಎಂಬುದೇ ಅರ್ಥವಾಗದೇ ‘ದಿನಾ ಮೀಯುದೇ ಅಲ್ಲಾ? ಎಂದಿದ್ದೆ. ನಂತರ ಅತ್ತೆಗೆ ಇದನ್ನು ಹೇಳಿದಾಗ ಅವರು ಹೊಟ್ಟೆಬಿರಿಯ ನಕ್ಕು ಅದರ ಅರ್ಥ ಹೇಳಿದ್ದರು. ಆಕೆಗೆ ಪ್ರತಿ ದಿನದ ಸ್ನಾನದ ಲೆಕ್ಕ ಬೇಕಾಗಿರಲಿಲ್ಲ. ತಿಂಗಳಿಗೊಮ್ಮೆ ಮಾಡುವ ವಿಶೇಷ ಸ್ನಾನದ ಕುರಿತು ಆಕೆ ಕೇಳಿದ್ದು ಎಂದು ಗೊತ್ತಾದಾಗ ನಾನು ಮನದಲ್ಲೇ ಆಕೆಗಿಷ್ಟು ಬೈದುಕೊಂಡಿದ್ದೆ.
ಹೀಗಿರುವಾಗ ವರ್ಷಾನುಗಟ್ಟಲೆ ಮಕ್ಕಳಾಗದವರಿಗೆಂದೇ ಬಹಳಷ್ಟು ಊರುಗಳಲ್ಲಿ ಇಂದಿಗೂ ಬಾಣಂತಿ ಕಲ್ಲು, ಬಾಣಂತಿ ದೇವಿ ಇರುವುದನ್ನು ಕಾಣುತ್ತೇವೆ. ಅಂತಹ ಕಲ್ಲಿಗೆ, ದೇವಿಗೆ ಹರಕೆ ಒಪ್ಪಿಸುವುದು ಕೂಡ ತಲೆತಲಾಂತರಗಳಿಂದ ನಡೆದು ಬಂದಿದೆ. ಮಕ್ಕಳಾಗುತ್ತದೆ ಎಂದರೆ ಯಾರ್ಯಾರು ಏನೇನು ಹೇಳುತ್ತಾರೋ ಅದನ್ನೆಲ್ಲ ಕಣ್ಣು ಮುಚ್ಚಿ ಮಾಡಿಬಿಡುವ ಹೆಂಗಸರಿಗೆ ಒಂದೇ ಒಂದು ಕ್ಷಣಕ್ಕೂ ದೌರ್ಬಲ್ಯ ತನ್ನದಲ್ಲದೇ ಗಂಡನದ್ದೇ ಇರಬಹುದಲ್ಲವೇ ಎಂಬ ಯೋಚನೆಯೂ ತಲೆಯೊಳಗೆ ಸುಳಿಯುವುದಿಲ್ಲ.
ಆದರೆ ಇಲ್ಲಿ ಮಕ್ಕಳಾಗುವ ಸಾಮರ್ಥ್ಯವಿದ್ದೂ ಮಕ್ಕಳಾಗದ ಮಹಿಳೆಯರಿಗೆ ಅನುಕೂಲವಾಗಲೆಂಬಂತೆ ತಿರುಚ್ಚೆಂಗೋಡು ಜಾತ್ರೆ ನಡೆಯುತ್ತದೆ. ಜಾತ್ರೆಯ ಹದಿನಾಲ್ಕನೆಯ ದಿನದ್ದೇ ವಿಶೇಷ. ಆಗ ಪೊನ್ನಾಳೇ ಹೇಳುವಂತೆ ಪ್ರತಿಯೊಬ್ಬ ಗಂಡಸೂ ದೇವರೇ. ಕಾಳಿಯ ಅಮ್ಮ ಮತ್ತು ಪೊನ್ನಾಳ ಅಮ್ಮ ಇಬ್ಬರೂ ಸೇರಿ ಅಂತಹುದ್ದೊಂದು ಜಾತ್ರೆಗೆ ಪೊನ್ನಾಳನ್ನು ಕಳುಹಿಸಲು ಕಾಳಿಯನ್ನು ಒಪ್ಪಿಸಲು ಪ್ರಯತ್ನ ಪಡುತ್ತಾರೆ.
ಸುಮಾರು ಆರು ತಿಂಗಳ ಹಿಂದೆ ನಾನು ಈ ಪುಸ್ತಕವನ್ನು ಮೊದಲ ಸಲ ಓದಿದಾಗ ಕಾದಂಬರಿಯ ಕೊನೆಯ ಹಂತದಲ್ಲಿ ಕಾಳಿ ಪೊನ್ನಾಳಿಗೆ ಅಲ್ಲಿಗೆ ಹೋಗಲು ಅನುಮತಿ ನೀಡುತ್ತಾನೆ ಮತ್ತು ತನಗಾಗಿ ಎರಡನೇ ಮದುವೆಯ ಪ್ರಸ್ತಾಪವನ್ನು ಸಾರಾಸಗಟಾಗಿ ನಿರಾಕರಿಸಿದ ಕಾಳನಿಗಾಗಿ ಪೊನ್ನಾ ಆ ಪ್ರಸ್ತಾಪನ್ನು ತಿರಸ್ಕರಿಸಿ ಪೂವತ್ತಾ ಮತ್ತು ಸೆಂಗೋಟ್ಟೈಯನ್‍ರ ಮಾದೋರುಬಾಗನ್ ಆಗುತ್ತಾರೆ ಎಂಬ ನಿರೀಕ್ಷೆಯಲ್ಲಿಯೇ ಪುಸ್ತಕ ಓದಿ ಮುಗಿಸಿದ್ದೆ.
ಆದರೆ ಪೊನ್ನಾಳ ಕಣ್ಣೋಟದಿಂದಲೇ ಅವಳ ಮನಸ್ಸನು ಅರಿತು ಬಿಡಬಲ್ಲ, ಕಣ್ಣು ಮುಚ್ಚಿದ್ದರೂ ಅವಳ ಹೆಜ್ಜೆಯ ಸದ್ದಿಗೇ ಅವಳು ಏನು ಕೆಲಸ ಮಾಡುತ್ತಿರಬಹುದೆಂದು ಊಹಿಸಬಲ್ಲ, ಮಿಲನದ ಸಂದರ್ಭದಲ್ಲಿ ಪೊನ್ನಾಳ ಒಂದು ಸಣ್ಣ ಚಲನೆಯನ್ನೂ ಅರ್ಥ ಮಾಡಿಕೊಳ್ಳುವ ಕಾಳ ಮಕ್ಕಳು ಬೇಕೆಂಬ ಅವಳ ಆಸೆಯನ್ನು ಅರ್ಥ ಮಾಡಿಕೊಳ್ಳದ ಟಿಪಿಕಲ್ ಗಂಡನಾಗಿ ಬಿಡುವುದು ನೆತ್ತಿಯ ಮೇಲಿರುವ ಸೂರ್ಯ ಒಮ್ಮೆಲೆ ಧರಾಶಾಹಿಯಾಗಿ ಬಿಡುವಂತೆ ಭಾಸವಾಗುತ್ತದೆ.
ಕಣ್ಣುಮುಚ್ಚಿ ತೆರೆಯುವುದರೊಳಗಾಗಿ ಕಳೆದುಹೋಗಿ ಬಿಡಬಹುದಾದ, ಆದರೆ ತನ್ನೊಡಲನ್ನು ತುಂಬುವ ಸಾಧ್ಯತೆ ಇರುವ ಆ ಹದಿನಾಲ್ಕನೆಯ ದಿನದ ಜಾತ್ರೆಗೆ ‘ನೀನು ಒಪ್ಪಿದರೆ ಹೋಗುವೆ’ ಎಂದ ಪೊನ್ನಾಳ ಮಾತು ಕಾಳಿಗೆ ಕರ್ಣಕಠೋರ. ಆದರೆ ಹದಿಹರೆಯದಲ್ಲೇ, ಇನ್ನೂ ಸರಿಯಾಗಿ ದೊಡ್ಡವನಾಗುವ ಮುನ್ನವೇ ಆ ಜಾತ್ರೆಯಲ್ಲಿ ತಾನೂ ದೇವರೆಂಬ ಫೋಸು ಕೊಟ್ಟು ಮೊದಲ ಪಾಠ ಕಲಿತಿದ್ದು ಎಂಬುದೇ ಆತನಿಗೆ ಮರೆತುಹೋಗಿದೆ.
ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರು ಅವರ ಸ್ನೇಹಿತನೊಬ್ಬನ ಕಥೆಯನ್ನು ಹೇಳಿ ಅಚ್ಚರಿ ಪಡುತ್ತಿದ್ದರು. ದೈಹಿಕ ಸುಖ ಎನ್ನುವುದನ್ನು ಪಡೆಯುವುದಕ್ಕಷ್ಟೇ ಮದುವೆ ಎನ್ನುವುದಾದಲ್ಲಿ, ಒಂದಿಷ್ಟು ದುಡ್ಡು ತುಂಬಿ ಯಾವುದೋ ನಂಬರ್‍ಗೆ ಫೋನಾಯಿಸಿದರೆ ಮಾತಿನಲ್ಲೇ ತೃಪ್ತಿಪಡಿಸಬಲ್ಲ ಹುಡುಗಿಯರು ಸಿಕ್ಕುವಾಗ ಈ ಮದುವೆ ಎಂಬ ಜಂಜಡ, ಹೆಣ್ಣಿನ ದೇಹವೇ ಬೇಕೆಂಬ ವಾಂಛೆ ಮತ್ತು ಅದರಿಂದಾಗುವ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದು ಎಂದರಂತೆ.
ಕಾಳಿಯ ಚಿಕ್ಕಪ್ಪ ಕೂಡ ಇಂತಹುದ್ದೇ ಮನಸ್ಥಿತಿಯವನು. ಕಾಳಿ ಒಂದು ಸಾಂಪ್ರದಾಯಿಕ ಪುರುಷ ಕೇಂದ್ರಿತ ಮನಸ್ಸಿಗೆ ಉದಾಹರಣೆಯಾದರೆ ಕಾಳಿಯ ಚಿಕ್ಕಪ್ಪ ಆಧುನಿಕತೆಯ ಪುರುಷ ಕೇಂದ್ರಿತ ಮನಸ್ಥಿತಿಗೆ ಉದಾಹರಣೆ. ಒಟ್ಟಿನಲ್ಲಿ ಪುರುಷ ಕೇಂದ್ರಿತ ಮನಸ್ಸು ಬದಲಾಗುವುದೇ ಇಲ್ಲ. ಆದರೆ ಪೊನ್ನಾ ಮಾತ್ರ ಆ ರಾತ್ರಿ ಕಳೆದು ಹೋಗುತ್ತಿದ್ದರೂ ತಾನು ನಿರೀಕ್ಷಿಸಿದ ದೇವರಿಗಾಗಿ ಎದುರು ನೋಡುತ್ತ, ಹತ್ತಿರ ಬಂದ ಪ್ರತಿಯೊಬ್ಬನನ್ನೂ ಗಮನಿಸುತ್ತ, ಈತ ದೇವರಲ್ಲ ಎಂದು ನಿರಾಕರಿಸುತ್ತ ಇನ್ನೂ ಹೆಣ್ತನದ ಮುಚ್ಚಟೆಯಲ್ಲೇ ಇದ್ದಾಳೆ.
ಕೆಲವು ದಿನಗಳ ಹಿಂದೆ ಆಕೆಗೆ ಮತ್ತು ಅವಳ ಗಂಡನಿಗೆ ಜೈಲು ಶಿಕ್ಷೆ ವಿಧಿಸಿದ ಸುದ್ದಿ ಪೇಪರ್‍ನಲ್ಲಿ ಬಂದಾಗ ನಿಟ್ಟುಸಿರಿಟ್ಟಿದ್ದೆ. ಮಕ್ಕಳಿಗಾಗಿ ಹಪಹಪಿಸುವ, ಅವಮಾನ ಎದುರಿಸಿ ಖಿನ್ನಳಾಗುವ ಪೊನ್ನಾಳ ಪಾತ್ರವನ್ನು ಓದಿದಾಗಲೆಲ್ಲ ಈ ಘಟನೆ ಮತ್ತೆ ಮತ್ತೆ ಕಣ್ಣೆದುರಿಗೆ ಬರುತ್ತಲೇ ಇತ್ತು. ಆಕೆ ಎರಡನೇ ಮದುವೆಯಾಗಿದ್ದಾಳೆ. ಆದರೆ ಮೊದಲ ಗಂಡನ ಒಂದುವರೆ ವರ್ಷದ ಎಳೆಯ ಮಗುವೊಂದು ಮಡಿಲಲ್ಲಿದೆ. ಆ ಮಗುವಿಗೋ ಅಮ್ಮನ ನಿರಂತರ ಪ್ರೀತಿ ಮತ್ತು ಕಾಳಜಿ ಬೇಕು. ಇತ್ತ ಹೊಸದಾಗಿ ಮದುವೆಯಾದವನಿಗೆ ಕಾಯುವ ಸಹನೆಯಿಲ್ಲ. ಅದಾವುದೋ ಕೆಟ್ಟ ರಾತ್ರಿಯಲ್ಲಿ ಆ ಮಗು ಒಂದೇ ಸಮನೆ ರಚ್ಚೆ ಹಿಡಿದಿದೆ. ಇದು ಸಾಮಾನ್ಯವಾಗಿ ಮಕ್ಕಳು ಚಿಕ್ಕವರಿರುವಾಗ ಪ್ರತಿ ಮನೆಯಲ್ಲೂ ನಡೆಯುವ ಘಟನೆ.
ಆದರೆ ಅಪ್ಪ ಅಮ್ಮ ಮಗುವನ್ನು ಸಮಾಧಾನ ಪಡಿಸಿ ಮಲಗಿಸುತ್ತಾರೆ. ಹಾಗಿಲ್ಲವೆಂದರೆ ಒಂದಿಷ್ಟು ನಿರಾಸೆಯಾದರೂ ಮಗುವಿನ ಕಡೆ ಗಮನಕೊಡುತ್ತಾರೆ. ಆದರೆ ಇಲ್ಲಿರುವುದು ಸ್ವಂತ ತಾಯಿಯಾದರೂ ತಂದೆ ಸ್ವಂತವಲ್ಲ. ತನ್ನ ಸುಖ ಯಾರದ್ದೋ ಮಗುವಿನ ಮಧ್ಯ ಪ್ರವೇಶದಿಂದ ತಪ್ಪಿಹೋಗುವುದನ್ನೂ ಆತ ಸಹಿಸುವುದಿಲ್ಲ. ಹೀಗಾಗಿ ಹೊಸ ಗಂಡನ ಬೇಡಿಕೆಗೆ ಸ್ಪಂದಿಸಿ ಆತನನ್ನು ಅನುನಯಿಸಬೇಕಾದ ತಾಯಿ ಮತ್ತು ಮಲತಂದೆ ಸೇರಿ ಬಾಯಿ ಒತ್ತಿ ಹಿಡಿದು ಮಗುವಿನ ತಲೆಯನ್ನು ಗೋಡೆಗೆ ಅಪ್ಪಳಿಸಿದ್ದಾರೆ.
ಮಗು ಸುಮ್ಮನಾಗಿದೆ. ಹೆದರಿ ಸುಮ್ಮನಾಗಿರಬೇಕೆಂದು ಭಾವಿಸಿದ ಇಬ್ಬರೂ ತಮ್ಮ ಸುಖದಲ್ಲಿ ಮೈಮರೆತು ನಿದ್ದೆ ಮಾಡಿದ್ದಾರೆ. ಮಾರನೆಯ ದಿನ ನೋಡಿದರೆ ಮಗು ಆಗಲೇ ಈ ಲೋಕ ಬಿಟ್ಟು ಹೊರಟು ಹೋಗಿಯಾಗಿತ್ತು. ಬೇಕು ಎಂದಲ್ಲಿ ಸಿಗದ, ಸಾಕಪ್ಪ ಸಿವನೇ ಎಂದು ಬೇಡಿಕೊಂಡರೂ ಮತ್ತೆ ಮತ್ತೆ ಹುಟ್ಟುವ ಮಕ್ಕಳ ಬಗ್ಗೆ ಏನು ಹೇಳಲು ಸಾಧ್ಯ.
ಪಾವತ್ತಾ ಎಂಬ ಮಹಾತಾಯಿ ಹಾಗೂ ಸೆಂಗೋಟ್ಟೈಯನ್ ಸ್ವಾಮಿ ಎಂದರೆ ಅರ್ಧ ಹೆಣ್ಣು ಮತ್ತು ಅರ್ಧ ಗಂಡು. ಹೆಣ್ಣನ್ನು ಹೇಗೆ ಮನಸ್ಸು ಹೃದಯದಲ್ಲಿಟ್ಟುಕೊಳ್ಳಬೇಕೆಂದು ಹೇಳಿದ ಸ್ವಾಮಿ ಸೆಂಗೋಟ್ಟೈಯನ್ ಸ್ವಾಮಿ. ಕಾಳಿ ಕೂಡ ಹಾಗೆಯೇ. ಥೇಟು ಅಮ್ಮೈಯಪ್ಪನ್ ಹಾಗೆ. ಪೊನ್ನಾಳನ್ನು ಹೃದಯದಲ್ಲಿಟ್ಟುಕೊಂಡವನು. ಹೀಗೆ ತನ್ನದೇ ದೇಹದ ಒಂದು ಭಾಗವಾಗಿರುವ ಪೊನ್ನಾ ಒಂದು ರಾತ್ರಿಯ ಮಟ್ಟಿಗಾದರೂ ಪರಪುರುಷನ ಜೊತೆಗಿರುತ್ತಾಳೆ ಎಂಬ ಬೇಸರವೇ ಕಾಳಿಯನ್ನು ಅರ್ಧ ನಾರೀಶ್ವರನ ಬದಲಾಗಿ ಆಹಾ ಪುರುಷಾಕಾರಂ ಎಂಬುದಾಗಿ ಪರಿವರ್ತಿಸಿ ಬಿಡುತ್ತದೆ.
ಒಮ್ಮೆ ಓದಲು ಕೈಗೆತ್ತಿಕೊಂಡರೆ ಮುಂದೇನಾಗುತ್ತೆ ಎಂಬ ತೀವ್ರ ಕುತೂಹಲ ಹುಟ್ಟಿಸಿ ಓದಿಸಿಕೊಂಡು ಹೋಗುವ ಅರ್ಧನಾರೀಶ್ವರದ ಅನುವಾದ ಮತ್ತು ಭಾಷಾ ಬಳಕೆಯೂ ಅಷ್ಟೇ ಸುಂದರವಾಗಿದೆ. ತೀರಾ ಪುಸ್ತಕದ ಭಾಷೆಯಲ್ಲಿ ಬರೆದಿದ್ದರೆ ನೀರಸವಾಗಿ ಬಿಡಬಹುದಾಗಿದ್ದ, ಕೆಲವು ಕಡೆ ಅಶ್ಲೀಲ ಎನ್ನಿಸಿ ಬಿಡಬಹುದಾಗಿದ್ದ ಸಂಭಾಷಣೆಗಳು ವಿವರಣೆಗಳು ಗ್ರಾಮ್ಯತೆಯಿಂದಾಗಿಯೇ ತಮ್ಮ ಅನನ್ಯತೆಯನ್ನು ಕಾಪಾಡಿಕೊಂಡಿದೆ. ಸಂಪ್ರದಾಯದ ಹೆಸರಿನಲ್ಲಿ ಪುಸ್ತಕಕ್ಕೆ ಬಹಿಷ್ಕಾರ ಹಾಕುವ ಮುನ್ನ ಇದನ್ನು ಓದಿದ್ದರೆ ಆಕ್ರೋಶಗೊಳ್ಳುವ ಪ್ರಮೆಯವೇ ಬರುತ್ತಿರಲಿಲ್ಲ.
ಒಮ್ಮೆ ಓದಿ ಬಿಡಿ. ಹೆಣ್ಣು ಗಂಡಿನ ನಿಜವಾದ ಅನುರಾಗದ ನವಿರು ಅನುಭೂತಿಗಾಗಿ.

‍ಲೇಖಕರು Avadhi GK

February 25, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಶ್ರೀನಿವಾಸ ಪ್ರಭು ಅಂಕಣ: ಅನಿರುದ್ಧನ ‘ಜಾಮಿಂಗ್ ಸೆಷನ್ಸ್’ ಮತ್ತು ‘ಸಾಮಿ’..

ಶ್ರೀನಿವಾಸ ಪ್ರಭು ಅಂಕಣ: ಅನಿರುದ್ಧನ ‘ಜಾಮಿಂಗ್ ಸೆಷನ್ಸ್’ ಮತ್ತು ‘ಸಾಮಿ’..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

ಶ್ರೀನಿವಾಸ ಪ್ರಭು ಅಂಕಣ: ಅನಿರುದ್ಧನ ‘ಜಾಮಿಂಗ್ ಸೆಷನ್ಸ್’ ಮತ್ತು ‘ಸಾಮಿ’..

ಶ್ರೀನಿವಾಸ ಪ್ರಭು ಅಂಕಣ: ‘ನೃತ್ಯ ಭೂಷಣ’ ಎಂಬ ಗರಿ ಮುಡಿದ ರಾಧಿಕೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

15 ಪ್ರತಿಕ್ರಿಯೆಗಳು

  1. Lalita N Patil

    ಬಾಲ್ಯದ ನೆನಪುಗಳೊಂದಿಗೆ ಕೊಂಡಿಯಾಗಿರುವ ಲೇಖನ ಮತ್ತೆ ಮತ್ತೆ ಓದಬೇಕೆನಿಸುತ್ತದೆ.

    ಪ್ರತಿಕ್ರಿಯೆ
  2. Mahesh

    “ಮಾದುರೋಬಾಗನ್” …. ಈ ಕೃತಿ ಕನ್ನಡಿಕರಿಸಿದ್ದಕ್ಕಾಗಿ ನಲ್ಲತಂಬಿಯವರಿಗೆ ಧನ್ಯವಾದ ತಿಳಿಸಬೇಕು ……
    ಪುರುಷ ಕೇಂದ್ರೀಕೃತ ಸಮಾಜದೊಳಗೆ ಹೆಣ್ಣಿನ ಸಹಜ ಆಸೆ ಹೇಗೆ ಒಡಮುರಿದುಕೊಳ್ಳುತ್ತಾ ಹೋಗುತ್ತದೆ….ಎಂಬುದನ್ನು ತುಂಬಾ ಚೆನ್ನಾಗಿ ಹೇಳಿದ್ದಾರೆ ..ಪೆರುಮಾಳ್ ಮುರುಗನ್ ಅವರು..
    ಈ ಕೃತಿ ನಿಷೇಧಗೊಂಡಾಗ …. ”ಪೆರುಮಾಳ್ ಎಂಬ ಹೆಸರಿನ ಬರಹಗಾರ ತೀರಿಹೋದ” ಎಂದು ನೋವಿನಿಂದ ಘೋಷಿಸಿಕೊಂಡಿದ್ದರು ಪೆರುಮಾಳ್.
    #ಹೂವು..
    ಮಹಾಸ್ಫೋಟ ಮುಗಿದ ಮೇಲೆ
    ಹೂವೊಂದು ಅರಳುತ್ತದೆ,
    ಅದರ ಕಟುವಾಸನೆ ಮಧುರ ಭಾವ ಹೊಳೆವ ಕಾಂತಿ
    ಸಕಲವನ್ನೂ ತನ್ನದಾಗಿಸಿಕೊಂಡು
    ಎಲ್ಲವನ್ನೂ ಮರುಸ್ಥಾಪಿಸಲಿದೆ ”
    ಈ ಕವನದೊಂದಿಗೆ ಮತ್ತೆ ಮರುಳಿದ ಪೆರುಮಾಳ್ ಅವರ ಈ “ಮಾಧುರೋಬಾಗನ್” ಪುರುಷ ಸಮಾಜ ಓದಿದರೆ ನಿಜಕ್ಕೂ ಅರ್ಧನಾರೀಶ್ವರರಾಗಬಲ್ಲರು…
    ಸುಂದರ ಕೃತಿಯನ್ನು ಮತ್ತೆ ನೆನಪಿಗೆ ತಂದದ್ದಕ್ಕೆ ಧನ್ಯವಾದಗಳು …ಶ್ರೀ ಮೇಡಮ್.

    ಪ್ರತಿಕ್ರಿಯೆ
    • Shreedevi keremane

      ಸರ್ ನಿಜ, ಎಲ್ಲರೂ ಓದಬೇಕಾದ ಪುಸ್ತಕ

      ಪ್ರತಿಕ್ರಿಯೆ
  3. Sunil

    ಒಂದು ಕಥೆಯನ್ನು ಹಗೆ ಓದಬೇಕು ಅನ್ನುವದು ಸಹ ಒಂದು ಕಲೆ ಕಥಗಾರನ ಭಾವನೆ ಕಥೆ ರಚಿಸುವಾಗಿನ ಕಾಲ ಸ್ಥಿತಿ ಎಲ್ಲವೂ ಸಹ ಪ್ರಾಮುಖ್ಯತೆ ಪಡೆಉತ್ತವೆ ಶ್ರೀ ದೇವಿಯವರ ವಿಶೇಷೆತೆ ಅಂದರೆ ಅವರು ಪಾತ್ರವನ್ನು ಅರ್ಥಿಸಿಕೊಂಡು ಪಾತ್ರಗಳ ಭಾವನೆಗೆ ತಮ್ಮ ಅನುಭವದ ಚೌಕಟ್ಟನ್ನು ಕಟ್ಟಿ ಇನ್ನು ಹೆಚ್ಚು ಸುಂದರ ಗೊಳಿಸುತ್ತಾರೆ ತಮ್ಮ ವಿಮರ್ಶೆ ಯಲ್ಲಿಯೇ ಈಡಿ ಕಥೆಯನ್ನು ಓದುಗರ ಮುಂದೆ ಬಿಚ್ಚಿಡುತ್ತಾರೆ ಮತ್ತು ಪುಸ್ತಕ ಓದಲು ಇನ್ನು ಹೆಚ್ಚು ಕುತೂಹಲ ಮುಡಿಸುತ್ತಾರೆ ನಮಗೆ‌ ಗೊತ್ತಾಗದ ಭಾವವನ್ನು ಸರಳವಾಗಿ ಅನಾವರಣಗೊಳಿಸುತ್ತಾರೆ.

    ಪ್ರತಿಕ್ರಿಯೆ
  4. ದೊಡ್ಡಕಲ್ಲಹಳ್ಳಿ ನಾರಾಯಣಪ್ಪ

    ಶ್ರೀ ದೇವಿ ಮೇಡಂ ಅವರ ವಿಚಾರಪೂರ್ಣ ಲೇಖನ ಆಸಕ್ತಿದಾಯಕವಾಗಿದೆ.

    ಪ್ರತಿಕ್ರಿಯೆ
  5. K. Nallathambi

    ನಮಸ್ಕಾರ. ಓದಿದೆ. ನಿಮ್ಮ ಆನೇಕ ಅನುಭವಗಳೊಂದಿಗೆ, ಈ ಪುಸ್ತಕದ ವಿಮರ್ಶೆಯನ್ನು ಮಾಡಿರುವ ಆ ಶೈಲಿ ನನಗೆ ಹೊಸತೆನಿಸಿತು. ಕೊನೆಯ ಪ್ಯಾರಾದಲ್ಲಿ ಪುಸ್ತಕ ಭಾಷೆಯಲ್ಲಿ ಬರೆಯದೆ ಆಡು ಭಾಷೆಯಲ್ಲಿ ಬರೆದಿರುವುದರಿಂದಲೇ ಅನೇಕ ಕಡೆ ಅಶ್ಲೀಲವಾಗುವ ಸಾಧ್ಯತೆಗಳು ತಪ್ಪಿವೆ ಎಂಬುದು ಬಹಳಷ್ಟು ನಿಜ. ಒಂದು ಒಳ್ಳೆಯ ವಿಮರ್ಶೆಗೆ ಧನ್ಯವಾದಗಳು. ಈ ಬರಹವ ಕಾಪಿಡುವೆ. ಥ್ಯಾಂಕ್ಸ್ ಸಿರಿದೇವಿ.

    ಪ್ರತಿಕ್ರಿಯೆ
  6. ಮಹೇಶ್ ಆರ್

    ನಿಜಕ್ಕೂ ಮನ ಕಲಕುವ ಸನ್ನಿವೇಶಗಳು…..
    ಉತ್ತಮವಾದ ಬರಹ.‌‌…
    ಹೊಸ ಗಂಡನ ಬೇಡಿಕೆಗೆ ಸ್ಪಂದಿಸಿ ಆತನನ್ನು ಅನುನಯಿಸಬೇಕಾದ ತಾಯಿ ಮತ್ತು ಮಲತಂದೆ ಸೇರಿ ಬಾಯಿ ಒತ್ತಿ ಹಿಡಿದು ಮಗುವಿನ ತಲೆಯನ್ನು ಗೋಡೆಗೆ ಅಪ್ಪಳಿಸಿದ್ದಾರೆ.
    ಎಂತಹ ವಿಪರ್ಯಾಸ…

    ಪ್ರತಿಕ್ರಿಯೆ
  7. Sreedhar

    ನಿಜಕ್ಕೂ ಭಾವ ಲೋಕಕ್ಕೆ ಕರೆದೊಯ್ಯುವ ವಿಮರ್ಶೆ .ಧನ್ಯವಾದಗಳು .

    ಪ್ರತಿಕ್ರಿಯೆ
  8. ಧನಪಾಲ ನೆಲವಾಗಿಲು

    ಉತ್ತಮವಾದ ಪುಸ್ತಕ ವಿಶ್ಲೇಷಣೆ. ನಿಮ್ಮ ಈ ಕೆಲಸ ಅನುಪಮವಾದುದ್ದು.

    ಪ್ರತಿಕ್ರಿಯೆ
  9. Sujatha lakshmipura

    ಏನು ಹೇಳಲಿ ಶ್ರೀದೇವಿ ಮೇಡಮ್..ಅರ್ಧನಾರೀಶ್ವರ ಕುರಿತ ಪರಿಚಯ ಲೇಖನವೇ ಸೊಗಸಾಗಿದ್ದು..ಎಂದಿನಂತೆ ನಿಮ್ಮ ಅನುಭವಗಳ ಜತೆಗೂಡಿ ಪುಸ್ತಕದ ಸುಳಿದಾಟ,ಅದರ ಕಥಾಹಂದರ,ಓದಿಬಿಡಬೇಕರನಿಸುವಷ್ಟು ಚನ್ನಾಗಿ ಇದೆ.ಕನ್ನಡಕ್ಕೆ ತಂದ ನಲ್ಲತಂಬಿಯವರ ಪ್ರಯತ್ನಕ್ಕೂ ನಿಮಗೂ ವಂದನೆಗಳು…
    ನಿಜ ಕಾಲಬದಲಾದರೂ ಪುರುಷಕೇಂದ್ರಿತ ವಿಚಾರಗಳು ಬದಲಾಗಲ್ಲಾ..ಪೊನ್ನಾಳ ಸಣ್ಣ ಮಿಡುಕಾಟವನ್ನು ಅರಿವ ಕಾಳಿ, ಅವಳ ತಾಯಿತನದ ಬಯಕೆ ಅರಿಯಲಿಲ್ಲ ಎಂಬ ಮಾತು ಕಾಡುವಂತಿದೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This