ಎನ್ ಶೈಲಜಾ ಹಾಸನ
ಬಸ್ಸು ನಿಲ್ದಾಣ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರ ಜೀವನದಲ್ಲೂ ಈ ಬಸ್ಸು ನಿಲ್ದಾಣ ಅನಿವಾರ್ಯವಾಗಿರುತ್ತದೆ.ಯಾವುದೇ ಊರಿಗೆ ಹೋಗಬೇಕು ಅಂದ್ರೂ ನಾವು ಬಸ್ಸನ್ನು ಅವಲಂಬಿಸಲೇ ಬೇಕು ಅಲ್ಲವೇ. ಈಗೆಲ್ಲ ಮನೆಗೊಂದು ಕಾರಿರುತ್ತೆ. ಎಲ್ಲಿಗೆ ಹೋದ್ರೂ ಕಾರಿನಲ್ಲಿಯೇ ಅಂದುಕೊ೦ಡರೂ, ದೂರದ ಪ್ರಯಾಣ ಹೋಗುವಾಗಲಾದರು ಬಸ್ಸನ್ನೇ ಆಶ್ರಯಿಸ ಬೇಕಾಗುತ್ತದೆ. ಆದರೆ ಹಿಂದೆಲ್ಲ ನಾವಂತು ಬಸ್ಸನ್ನು ಬಿಟ್ಟರೆ ಬೇರೆ ಯಾವುದರಲ್ಲೂ ಪ್ರಯಾಣದ ಕನಸು ಕಾಣುವಂತಿರಲಿಲ್ಲ. ನಮ್ಮ ತಂದೆಗೆ ಸರ್ಕಾರಿ ಕೆಲಸ ನಾಲ್ಕು ವರ್ಷಕ್ಕೊಮ್ಮೆ ಗಂಟು ಮೂಟೆ ಕಟ್ಟಲೇ ಬೇಕಿತ್ತು. ಹಾಗಾಗಿ ಬಸ್ಸಿನಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿತ್ತು.
ಅದರಲ್ಲೂ ನಮ್ಮುರಿನ ಬಸ್ಸು ನಿಲ್ದಾಣ ಅಂದರೆ ಈಗೀನ ಹಳೆ ಬಸ್ಸು ನಿಲ್ದಾಣವನ್ನು ನಾನು ನನ್ನ ಬದುಕಿನಲ್ಲಿ ಮರೆಯುವಂತೆಯೇ ಇಲ್ಲಾ. ತಾಲ್ಲೂಕು ಕೇಂದ್ರದಲ್ಲಿದ್ದ ನಾವು ತಿಂಗಳಿಗೊಮ್ಮೆ ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದೆವು. ಹಾಗೆ ಬರಲು ಕಾರಣಗಳು ಹಲವಾರಿದ್ದವು. ಜನವರಿ ತಿಂಗಳಲ್ಲಾದರೆ ಆವತ್ತಿನ ದನಗಳ ಜಾತ್ರೆ ಮತ್ತು ಎಗ್ಸಿಮಿಷನ್‌ಗೆಂದು, ಸರ್ಕಸ್ ಬಂದಿದೆ ಎಂದು ತಿಳಿದ ಕೂಡಲೆ ಸರ್ಕಸ್ ನೋಡಲು , ಹೊಸ ಚಲನ ಚಿತ್ರಗಳು ಬಿಡುಗಡೆಯಾಗಿದ್ರೆ ಅವುಗಳನ್ನು ನೋಡಲು, ಕೆಲವೊಮ್ಮೆ ಅನಾರೋಗ್ಯ ಕಾಡಿದಾಗ, ಹಬ್ಬಗಳಿಗೆ ಬಟ್ಟೆ ಕೊಳ್ಳಲು ಹೀಗೆ ಜಿಲ್ಲಾ ಕೇಂದ್ರಕ್ಕೆ ಬರಲು ನೂರಾರು ಕಾರಣಗಳಿರುತ್ತಿದ್ದವು. ಹಾಗೆಲ್ಲ ಬರುವಗ ಹೋಗುವಾಗ ಅಂದಿನ ಬಸ್ಸು ನಿಲ್ದಾಣ ನಮಗೆ ಮುದನೀಡುತ್ತಿತ್ತು. ಎಷ್ಟು ದೊಡ್ಡ ಬಸ್ಸು ನಿಲ್ದಾಣ ಅದು, ಅದನ್ನು ನೋಡಲೆ ರೋಮಾಂಚನವಾಗುತ್ತಿತ್ತು.
ಬಸ್ಸು ಇಳಿಯುವಾಗ ನಮ್ಮ ಠೀವಿ ನೋಡಬೇಕು. ವಿಮಾನದಿಂದ ಇಳಿಯುತ್ತಿದ್ದೆವೇನೊ ಅನ್ನುವ ಬಿಂಕ ಬಿನ್ನಾಣ. ಬಂದ ಕೆಲಸ ಮುಗಿಸಿ ಸಂಜೆ ಮತ್ತೆ ಅದೇ ನಿಲ್ದಾಣಕ್ಕೆ ಆಗಮನ. ನಿಲ್ದಾಣದ ತುಂಬಾ ಜನಗಳೋ ಜನಗಳು, ಬಸ್ಸು ಹಿಡಿಯಲು ಓಡುವ ಜನ, ಅವರ ಜೊತೆ ಪೈಪೋಟಿ ನಡೆಸಿ ಬಸ್ಸು ನಿಲ್ಲುವ ಮೊದಲೆ ಟವಲ್ಲೊ, ಬ್ಯಾಗನ್ನೊ ಹಾಕಿ ಸೀಟ್ ರಿಸರ್ವ್ ಮಾಡುವ ಧಾವಂತ. ಮಕ್ಕಳನ್ನು ಎಳೆದುಕೊಂಡು ಬಸ್ಸು ಹತ್ತುವ ಅಮ್ಮ, ಅವರ ಹಿಂದೆ ನಮ್ಮನು ಓಡಿಸಿ ಕೊಂಡು ಬಸ್ಸು ಹತ್ತುವ ಅಪ್ಪ. ಸೀಟು ಸಿಕ್ಕಿದ ಕೂಡಲೆ ಹುಸ್ಸೆಂದು ಕುಳಿತು ಬಸ್ಸು ಹೊರಡುವ ತನಕ ನಿಲ್ದಾಣದ ಕಿಟಕಿಯಿಂಲೇ ಕೌತುಕದಿಂದ ಸುತ್ತಾ ಮುತ್ತಾ ನೋಡುತ್ತಾ ಮೈ ಮರೆಯುತ್ತಿದ್ದೆವು. ಆ ನೆನಪು ಇಂದಿಗೂ ಮಧುರವಾಗಿದೆ. ಹಾಗೆ ಬಸ್ಸು ನಿಲ್ದಾಣದಲ್ಲಿ ಅನೇಕ ಕೆಟ್ಟ ಅನುಭವಗಳು, ಮುಜುಗರದ ವಿಚಾರಗಳೂ ನಡೆದಿವೆ.

ಒಮ್ಮೆ ಅಮ್ಮ ನೆಂಟರೊಬ್ಬರ ಮಗಳ ಆರತಿ ಇತ್ತೆಂದು ಹೊಸ ಸೀರೆ, ಅರತಿಗೆ ಬೇಕಾದ ಒಂದಷ್ಟು ಸಾಮಾನುಗಳನ್ನು ಒಂದು ಬ್ಯಾಗಿನಲ್ಲಿ ಇರಿಸಿಕೊಂಡು ಬಟ್ಟೆ ಬರೆಗಳನ್ನು ಮತ್ತೊಂದು ಬ್ಯಾಗಿನಲ್ಲಿ ತುಂಬಿಕೊ೦ಡು ಊರಿಗೆ ಹೋಗಲು ಬಸ್ಸು ನಿಲ್ದಾಣಕ್ಕೆ ಬಂದಿದ್ದರು.ಜೊತೆಗೆ ನಾನೂ ಇದ್ದೆ.ನಾವು ಹೋಗ ಬೇಕಾದ ಬಸ್ಸು ಬಂದಿತು. ತುಂಬಾ ರಶ್ಶು ಇತ್ತು. ನನಗೂ ಅಮ್ಮನಿಗೂ ಹತ್ತೊಕೆ ಕಷ್ಟ ಅಂತ ಗೊತ್ತಾಗಿ ಅಮ್ಮ ಕಿಟಕಿಯೊಳಗೆ ನಮ್ಮ ಬ್ಯಾಗ್‌ನ್ನು ಸೀಟಿಗೆ ಹಾಕಿ ಸೀಟನ್ನು ರಿಸರ್ವವೇಷನ್ ಮಾಡಿ ನಂತರ ನಿಧಾನವಾಗಿ ಬಸ್ಸು ಹತ್ತಿ ಹೋದರೆ ನಾವು ಇಟ್ಟಿದ್ದ ಬ್ಯಾಗೂ ಇಲ್ಲ, ನಮ್ಮ ಸೀಟೂ ಇಲ್ಲಾ. ಆ ಸೀಟಲಿ ಕುಳಿತವರು ನಮಗೆ ಗೊತ್ತಿಲ್ಲ. ಸೀಟು ಖಾಲಿ ಇತ್ತು ಅಂತ ಅಂದು ಬಿಟ್ಟರು. ನಿರಾಶರಾಗಿ ಅಲ್ಲೆಲ್ಲ ಹುಡುಕಿದರೂ ನಮ್ಮ ಬ್ಯಾಗ್ ಸಿಗಲಿಲ್ಲ. ಅಷ್ಟು ಬೇಗ ಕಳ್ಳರು ತಮ್ಮ ಕೈ ಚಳಕ ತೋರಿಸಿ ಬಿಟ್ಟಿದ್ದರು. ಅದ್ಯಾವ ಮಾಯದಲ್ಲಿ ನಮ್ಮ ಬ್ಯಾಗನ್ನು ಬಸ್ಸಿನಿಂದ ತೆಗೆದುಕೊಂಡು ಹೊರ ಹೋದರೊ ತಿಳಿಯಲಿಲ್ಲ. ಅಲ್ಲಿದ್ದವರೆಲ್ಲ ತಲೆಗೊಂದು ಮಾತಾಡಿದರು. ಅಷ್ಟು ಗೊತ್ತಾಗಲ್ವಾ ಟವಲ್ಲೊ, ಕರ್ಚಿಪ್ಪೊ ಹಾಕದೊ ಬಿಟ್ಟು ಹೊಸ ಬಟ್ಟೆ ಇರೊ ಬ್ಯಾಗೆ ಹಾಕ್ತಾರಾ, ಆ ಕಳ್ಳ ಎಷ್ಟು ಬುದ್ದಿವಂತ, ಆ ಬ್ಯಾಗಲಿ ಹೊಸ ಸೀರೆ ಇದೆ ಅಂತ ಕಂಡು ಹಿಡಿದು ಲಪಟಾಯಿಸಿದ್ದಾನೆ, ಅಂತ ಒಬ್ಬರೆಂದರೆ, ಮತ್ತೊಬ್ಬರು, ಅಲ್ಲವನು ಅದು ಹೇಗೆ ಹೊರಗೆ ತೆಗೆದುಕೊಂಡು ಹೋದ,ಇಷ್ಟೊಂದು ಜನರ ನಡುವೆ ಅದು ಹೇಗೆ ಬಸ್ಸಿಂದ ಇಳಿದು ಹೋಗಿಬಿಟ್ಟ ಅಂತ ಕಳ್ಳನ ಕೈ ಚಳಕದ ಬಗ್ಗೆ ಮೆಚ್ಚುಗೆ ಮಾತಾಡುತ್ತಿದ್ದರೆ, ನಾವು ಹೊಸ ಸೀರೆ, ಸಾಮಾನುಗಳು ಎಲ್ಲವನ್ನು ಕಳೆದುಕೊಂಡು ಪೆಚ್ಚಾಗಿ ನಿಂತುಕೊ೦ಡೆ ಪ್ರಯಾಣ ಮಾಡಿದೆವು. ಪುಣ್ಯಕ್ಕೆ ನಮ್ಮ ಬಟ್ಟೆ ಬರೆ ಇನ್ನೊಂದು ಬ್ಯಾಗಿನಲ್ಲಿ ಇದ್ದುದರಿಂದ ಬಚಾವಾಗಿದ್ದೆವು. ಇದೊಂದು ದೊಡ್ಡ ಪಾಠವಾಗಿತ್ತು. ಇನ್ನೆಂದು ಬಸ್ಸಿನಲ್ಲಿ ಸೀಟು ರಿಸರ್ವ ಮಾಡಲು ನಮ್ಮ ಬ್ಯಾಗ್ ಇಡಬಾರದೆಂದು ಅಂದೇ ಅಮ್ಮಾ ನಾನು ಪ್ರಮಾಣ ಮಾಡಿದೆವು.ನೆಂಟರ ಊರಿಗೆ ಹೋದ ಮೇಲೆ ಆರತಿ ಹುಡುಗಿಗೆ ಅಮ್ಮ ಇದ್ದಬದ್ದ ದುಡ್ಡೆಲ್ಲ ಸೇರಿಸಿ ಕವರಿಗೆ ಹಾಕಿ ಕೊಟ್ಟಿದ್ದಳು.
ಕೆಲವು ದಿನಗಳ ನಂತರ ಅಪ್ಪನಿಗೆ ಜಿಲ್ಲಾ ಕೇಂದ್ರಕ್ಕೆ ವರ್ಗವಾಗಿ ನಗರದಲ್ಲಿ ಖಾಯಂ ಆಗಿ ಉಳಿಯುವಂತಾಯಿತು. ಹೈಸ್ಕೂಲು ಮುಗಿಯುವ ತನಕ ಬಸ್ಸಿನ ಓಡಾಟ ಇರಲಿಲ್ಲ. ಕಾಲೇಜು ಸೇರಿದ ಮೇಲೆ ಕಾಲೇಜಿಗೆ ಹೋಗಲು ಪ್ರತಿ ದಿನ ಬಸ್ಸು ನಿಲ್ದಾಣದ ಮುಂದೆಯೇ ಹಾದು ಹೋಗ ಬೇಕಿತ್ತು. ಆಗೆಲ್ಲಾ ಆಪ್ಯಾಯಮಾನವಾಗಿ ಅದನ್ನು ನೋಡಿಕೊಂಡೇ ಕಾಲೇಜು ಸೇರುತ್ತಿದ್ದದ್ದು. ಅದನ್ನು ಕಂಡರೆ ಅದೇನೊ ಅಭಿಮಾನ. ನಮ್ಮ ಬಣ್ಣ ಬಣ್ಣದ ಕನಸುಗಳನ್ನು ಅರಳಿಸುವಲ್ಲಿ ಅದು ಸಹಾಯ ಹಸ್ತ ನೀಡುತ್ತಿದೆಯೇನೊ ಅನ್ನುವ ಗೆಳತಿಯರ ಮಾತುಗಳಿಗೆ ಸಮ್ಮತಿ ಸೂಚಿಸುತ್ತಾ ಬಸ್ಸಿನಿಂದಿಳಿಯುವ ಅವರನ್ನು ಕಾಯುತ್ತಾ ನಿಲ್ಲುತ್ತಿದ್ದದ್ದು ಅದೇ ಬಸ್ಸು ನಿಲ್ದಾಣದಲ್ಲಿ. ಮುಂದೆ ಶಿಕ್ಷಣ ಮುಗಿಸಿ ಸರ್ಕಾರಿ ನೌಕರಿ ದೊರೆತಾಗ ದಿನನಿತ್ಯವೂ ಅದೇ ಬಸ್ಸು ನಿಲ್ದಾಣಕ್ಕೆ ಬಂದು ಬಸ್ಸು ಹತ್ತುವ ಸಂಭ್ರಮ. ನಿಲ್ದಾಣಕ್ಕೆ ಬರುವುದೇ ಒಂದು ಖುಷಿ. ಮದುವೆಯಾಯ್ತು ಸಂಸಾರ ಶುರುವಾಯ್ತು. ನಮ್ಮದೆ ಆದಪ್ರತ್ಯೇಕ ಗೂಡು ಮಾಡಿಕೊಂಡೆವು.
ನಾನು ನನ್ನ ಪತಿ ಇಬ್ಬರೂ ಸರ್ಕಾರಿ ಉದ್ಯೋಗಿಗಳಾಗಿದ್ದು, ಬೇರೆ ಬೇರೆ ಊರುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಮತ್ತೆ ಅದೇ ಬಸ್ಸು ನಿಲ್ದಾಣಕ್ಕೆ ಬರಬೇಕಾಗಿತ್ತು. ಇಬ್ಬರೂ ಒಟ್ಟಿಗೆ ಮನೆಯಿಂದ ಹೊರಟು ಬಸ್ಸು ನಿಲ್ದಾಣಕ್ಕೆ ಬಂದು ಬಸ್ಸು ಹತ್ತುತ್ತಿದ್ದೆವು. ಸಂಜೆ ಮಾತ್ರ ನಾನು ಬೇಗ ಬರುತ್ತಿದ್ದೆ. ಅವರು ಬರುವುದು ತಡವಾಗುತ್ತಿತ್ತು. ನಾನು ಅವರು ಬರುವವರೆಗೂ ಬಸ್ಸು ನಿಲ್ದಾಣದಲ್ಲೆ ಕುಳಿತು ಕಾಯುತ್ತಾ ಕುಳಿತಿರುತ್ತಿದ್ದೆ,ಅವರು ಬಂದ ನಂತರ ಒಟ್ಟಿಗೆ ಮನೆಗೆ ಹೋಗುತ್ತಿದ್ದೆವು. ಹಾಗೆ ಕಾಯುವಾಗ ನನಗೆ ಹಲವಾರು ಅನುಭವಗಳು ಅಗ ತೊಡಗಿದವು. ನಾನು ಕುಳಿತ ಕಡೆ ಕೆಲವರು ಜನ ಸುಳಿದಾಡುತ್ತಿದ್ದರು. ನನ್ನ ಹತ್ತಿರ ಬಂದು ಸುಮ್ಮನೆ ಕೆಮ್ಮುವುದು, ಕ್ಯಾಕರಿಸುವುದು ಹೀಗೆ ನಾನ ರೀತಿ ಚೇಷ್ಟೆ ಮಾಡುತ್ತಿದ್ದರು. ಅದು ಏಕೆ ಅಂತ ನನಗೆ ಅರ್ಥವೇ ಆಗುತ್ತಿರಲಿಲ್ಲ. ನಮ್ಮ ಯಜಮಾನರು ಬರುವ ತನಕ ನನ್ನ ಪಾಡಿಗೆ ನಾನು ಪುಸ್ತಕ ಓದುತ್ತ ಕುಳಿತಿರುತ್ತಿದ್ದೆ.

ಒಮ್ಮೆಯಂತೂ ಒಬ್ಬಾತ ನನ್ನ ಕಾಲು ತುಳಿದು ಅಷ್ಟು ದೂರ ಹೋಗಿ ನಿಂತು ಹಿಂತಿರುಗಿ ನನ್ನ ಕಡೆ ನೋಡಿ ಬಾ ಎನ್ನುತ್ತಿದ್ದಾನೆ. ನನಗೆ ಗಾಭರಿಯಾಗಿ ತಲೆ ತಗ್ಗಿಸಿಕೊಂಡು ಬಿಟ್ಟೆ. ತಲೆ ಎತ್ತಿ ನೋಡಲೆ ಭಯವಾಗುತ್ತಿತ್ತು. ನಮ್ಮನೆಯವರು ಬಂದ ಕೂಡಲೆ ಅಲ್ಲಿಂದ ಹೊರಟು ಬಿಟ್ಟೆ. ನಂತರ ಗೆಳತಿಯರಿಗೆ ಈ ಅನುಭವ ಹೇಳಿದ ಮೇಲೆ ಗೊತ್ತಾಯಿತು. ಸಂಜೆ ಅದ ಮೇಲೆ ಅಲ್ಲಿ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಯೇ ಬೇರೆ, ನೀನು ಇನ್ನು ಮೇಲೆ ಅಲ್ಲಿ ಹೆಚ್ಚು ಹೊತ್ತು ಇರಬೇಡ,ಬಸ್ಸಿಳಿದು ಹೊರಟು ಬಿಡು ಅಂದ ಮೇಲೆ ನಾನು ನನ್ನ ಪಾಡಿಗೆ ನಮ್ಮನೆಯವರಿಗೆ ಕಾಯದೆ ಮನೆಗೆ ಬಂದು ಬಿಡುತ್ತಿದ್ದೆ. ಇಂತಹ ಹಲವಾರು ಘಟನೆಗಳಿಗೆ ಸಾಕ್ಷಿಯಾಗಿ ನಮ್ಮ ಬಸ್ಸು ನಿಲ್ದಾಣ ನಿಂತಿದೆ.
ಮನೆ ಕಟ್ಟುವಾಗಲೂ ಬಸ್ಸು ನಿಲ್ದಾಣಕ್ಕೆ ಹತ್ತಿರವಾಗುವಂತಿರ ಬೇಕು ಅಂತನೇ ಆದಷ್ಟು ನೋಡಿ ಸೈಟ್ ತೆಗೆದುಕೊಂಡು ಮನೆ ಕಟ್ಟಿ ವಾಸ ಶುರು ಮಾಡಿದ್ದಾಯಿತು. ಬಸ್ಸು ನಿಲ್ದಾಣದಿಂದ ನಡೆದುಕೊಂಡೇ ಬರ ಬಹುದಿತ್ತು. ಆದರೆ ನಗರ ಕಾಣುತ್ತಿರುವಂತೆಯೇ ಬೆಳೆದು ಬಿಟ್ಟಿತು. ಈಗಿರುವ ಬಸ್ಸು ನಿಲ್ದಾಣ ಚಿಕ್ಕದು ಅನ್ನೊ ಕೂಗು ಎದ್ದು ನಾವು ನೋಡು ನೋಡುತ್ತಿರುವಂತೆಯೇ ನೆಲಸಮವಾದಾಗ ಮನದೊಳಗೆ ಅವ್ಯಕ್ತ ಸಂಕಟ ಕಾಡಿದ್ದು ನಿಜಾ.
ಮುಚ್ಚಿದ ಆ ನಿಲ್ದಾಣ ಇವತ್ತಿಗೂ ನನ್ನನ್ನು ಕಾಡಿ, ಅಲ್ಲಿನ ಸವಿ ನೆನಪು ಮನಸ್ಸನ್ನು ಪುಳಕಗೊಳಿಸಿ ಮುದ ನೀಡುತ್ತದೆ. ಮುಚ್ಚಿದ್ದ ಹಳೇ ಬಸ್ಸು ನಿಲ್ದಾಣ ಈಗ ಸಿಟಿಬಸ್ಸು ನಿಲ್ಲುವ ಜಾಗ ಅಗಿದೆ. ಈಗಿರುವ ಹೊಸ ಬಸ್ಸು ನಿಲ್ದಾಣವನ್ನು ಅದು ಇರುವ ದೂರವನ್ನು ನೆನೆದು ಪ್ರತಿ ದಿನ ಶಾಪ ಹಾಕುತ್ತಲೇ ಹಳೆ ಬಸ್ಸು ನಿಲ್ದಾಣದ ಅನುಕೂಲವನ್ನು ನೆನಸಿಕೊಳ್ಳುತ್ತಾ ಇರುವ ಭಾಗ್ಯ ನಮ್ಮದಾಗಿದೆ.
0 Comments