ಗಿರೀಶ್ ಕುಮಾರ್ ಎಚ್ ಆರ್ (ಸತ್ಯರಂಗಸುತ)
……
ಸಾಗುತ್ತಿದೆ ಬಂಡಿ ಅದರಷ್ಟಕ್ಕೆ, ಆದರಿಚ್ಛೆಗೆ
ಇಳಿಜಾರು ಕಂಡಲ್ಲಿ ವೇಗವಾಗಿ
ದಿಬ್ಬದಲ್ಲಿ ತುಸು ಮೆಲ್ಲಗೆ,
ಹಲವೊಮ್ಮೆ ಅನಿಸಿದೆ
ನಾನಂದುಕೊಂಡ ಜಾಡಿನತ್ತ ಹೊರಳುತ್ತಿಲ್ಲ!
ಆದರೇನು? ತೊಂದರೆಯಿಲ್ಲ
ಸರಾಗವಾಗಿಯೇ ಚಲಿಸುತ್ತಿದೆ
ಎಂದುಕೊಳ್ಳುತ್ತಲೇ ಹೊಯ್ದಾಟದಾರಂಭ
ಒಮ್ಮೊಮ್ಮೆ ಸ್ಥಬ್ದಗೊಂಡಂತೆ,
ಈ ಹಾದಿ ದುರ್ಗಮವೇ! ಬಲ್ಲೆನು-
ಆದರೇನು?
ಹಿಮ್ಮರಳಲು ಮಾಡುವ ಯತ್ನವೆಲ್ಲವೂ ವ್ಯರ್ಥ,
ಏಕೆಂದರಿದು ಒಮ್ಮುಖ ಮಾರ್ಗ
ಅಷ್ಟರ ನಡುವೆ ನಾನೇ ಆಯ್ದುಕೊಂಡದ್ದು
ಆರಂಭವಷ್ಟೇ ಗೊತ್ತು ಅಂತ್ಯ ಅರಿತವರಿಲ್ಲ!
ಅದಷ್ಟು ಸರಳವಲ್ಲ,
ಯಾರೋ ಕೆತ್ತಿದ ನಕ್ಷೆ ಈ ದಾರಿಗಳು
ಒಂದೆಡೆ ಕಲಸು ಮೇಲೋಗರ-
ಮಗದೊಂದೆಡೆ ನೇರಾನೇರ
ಯಾರಿಗೆ ಗೊತ್ತಿದರ ಮಾಯೆ?
ಒಂಥರಾ ಚಕ್ರವ್ಯೂಹವಿದ್ದಂತೆ,
ಆಚೀಚೆ ಇಣುಕಿ ಹೊಸದಾರಿಯ ಅರಸಿದೆ
ಉಹೂಂ, ಅಲ್ಲಿಗಿಳಿಯಲು ಸುತರಾಂ ಒಲ್ಲೆ!
ಹೊಸ ಕಂದಕಕ್ಕಿಂತ ಹಳೇ ಗುಂಡಿಯೇ ವಾಸಿ
ಷರಾ ಬರೆದಿದೆ ಜಡ್ಡಿಡಿದ ಮನಸ್ಸು,
ಆ ಗಾಲಿಗಳೋ ಒಂದೇ ದಿಕ್ಕಿನತ್ತ ಉರುಳುರುಳಿ
ಅದೊಂದೇ ಕಡೆ ಸವೆದು ಚಪ್ಪಟೆಯಾಗಿವೆ,
ಇನ್ನಿವಕ್ಕೆ ಉಳಿಗಾಲವಿಲ್ಲೆಂದು ಬಗೆದು,
ಎತ್ತುಗಳ ಕೊರಳ ಬದಲಿಸಿದೆ
ಗಾಡಿಯ ಹಾದಿಯನ್ನು ತಿರುಚಿದೆ
ಅಲ್ಲಿಗೇ ಬಂದು ಕೂಡಿತ್ತು ಮತ್ತೆ!
ಅದೇನೇ ಮಾಡಿದರೂ ಹಳೆಯದ್ದೇ ಪುರಾಣ
ನೀರೊಳಗೆ ಅತ್ತಂತಾಯಿತು
ನನ್ನೆಲ್ಲ ಪರಿಶ್ರಮ,
ಮರದ ನೆರಳಲ್ಲೊಮ್ಮೆ ಕಣ್ಣು ಮುಚ್ಚಲು
ಯಾರೋ ಕಿವಿಯಲ್ಲಿ ಉಸುರಿದಂತಾಯ್ತು,
ಸತ್ಯದರ್ಶನವೇ ಅಂದುಕೊಳ್ಳಿ
ಮೇಲೊಂದು ಕೈ , ಗಾಡಿಯ ಹಿಡಿದಿದೆ-
ಅದನ್ನು ಮರೆತು ಸುಮ್ಮನೆ ನಾನು
ಐಸ ಐಸ ಟುರ್ ಎಂದು ಅರಚುತ್ತಿದ್ದೇನೆ
ಹಳ್ಳ ದಿಣ್ಣೆಗಳ ಹತ್ತಿಳಿದು ಬಳಲಿದ್ದೇನೆ,
ಗಾಡಿ ನಮ್ಮದೇ ದಾರಿಯೂ ನಮ್ಮದೇ-
ಚಾಲಕರು ನಾವೇ ಪಯಣಿಗರೂ ನಾವೇ!
ನಡೆಸುವವ ಮಾತ್ರ ಅವನು!
ಅವನೆಂದರೆ,
ದೇವರೋ, ನೀವ್ ಕೇಳಬಹುದು-
ನಂಗೊತ್ತಿಲ್ಲ
ವಿಧಿಯೋ,ನೀವ್ ಅನ್ನಬಹುದು-
ನಾ ತಿಳಿದಿಲ್ಲ
ಶ್ರದ್ಧೆಯೋ, ಇದಕ್ಕುತ್ತರ-
ನನಗೆ ಹೊಳೆದಿಲ್ಲ
ಅಂತಃಶಕ್ತಿಯೋ, ನನಗಷ್ಟು-
ಜ್ಞಾನವಿಲ್ಲ
ಭ್ರಮೆಯೋ, ನನಗಿನ್ನೂ-
ಸ್ಪಷ್ಟತೆಯಿಲ್ಲ
ಕೂಡಿ ಕಳೆದು ಗುಣಿಸಿ ಭಾಗಿಸಿದೆ
ಸಣ್ಣ ಸುಳಿವು ದಕ್ಕಲಿಲ್ಲ!
ಇನ್ನೂ ” ಅವನ ” ಹುಡುಕಾಟದಲ್ಲೇ,
ನೀವೇನಾದರೂ ಬಲ್ಲಿರಾ ಅವನನ್ನು?…
0 ಪ್ರತಿಕ್ರಿಯೆಗಳು