ಗೌರಿ ಚಂದ್ರಕೇಸರಿ
ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು ಹೊಳೆಯಂತೆ ಹರಿಯುವ ಯೌವನದಲ್ಲೋ, ಬರೆಯುವ ಹುಕಿ ಬಂದು ಬಿಡುತ್ತದೆ. ಓದುವ ಗೀಳಿಗೆ ಬಿದ್ದವರು ಭಾವನೆಗಳನ್ನೆಂದೂ ಬಂಧಿಸಿಡಲಾರರು. ಕೈಗೆ ಸಿಕ್ಕ ಚೂರು ಪಾರು ಕಾಗದದಲ್ಲೋ, ತಮ್ಮ ದಿನಚರಿಯ ಒಡಲಿನಲ್ಲೋ ಒಂದೆರಡು ಸಾಲುಗಳನ್ನು ಗೀಚಿ ಹಗುರಾಗುತ್ತಾರೆ. ಬರೆಯುವ ಗೀಳಿಗೆ ಕಾರಣಗಳನ್ನು ಹುಡುಕುತ್ತ ಹೊರಟರೆ ಒಬ್ಬೊಬ್ಬರದೂ ಒಂದೊಂದು ಅನುಭವ.
ಮನಸ್ಸು ಹಕ್ಕಿಯಾಗಿ ಹಾರುವಾಗಲೋ, ಹೃದಯ ಘಾಸಿಗೊಂಡಾಗಲೋ, ಹತಾಶೆಯ ಕಾರ್ಮೋಡ ಕವಿದಾಗಲೋ, ಜೀವನದ ಯಾವುದೋ ಒಂದು ಘಟ್ಟದಲ್ಲಿ ಪ್ರೀತಿ ಮೊಳಕೆಯೊಡೆದಾಗಲೋ ಕಾವ್ಯ ಕನ್ನಿಕೆ ಧುತ್ತೆಂದು ಅವತರಿಸಿ ಬಿಡುತ್ತಾಳೆ. ಅಂತರಂಗದ ಅನುರಣವನ್ನು ಅಕ್ಷರ ರೂಪಕ್ಕೆ ಇಳಿಸುವವರೆಗೂ ಅದೇನೋ ಒಂದು ಬಗೆಯ ತುಡಿತ. ಆಗ ಅಕ್ಷರಗಳೆಂಬ ರಂಗು ರಂಗಿನ ರಂಗೋಲಿ ಭಾವ ಭಿತ್ತಿಯಲ್ಲಿ ಮೂಡ ತೊಡಗುತ್ತವೆ.
ಬರವಣಿಗೆ ಎಂಬುದು ಮದಿರೆಯಂತೆ. ಇದರ ನಶೆ ತಗುಲಿದರೆ ಕಲ್ಪನೆಗಳ ಸ್ಫುರಣೆಯಾಗತೊಡಗುತ್ತದೆ. ಹೆಣ್ಣೊಬ್ಬಳು ಕಣ್ಣು ಬಿಡಲಿರುವ ತನ್ನ ಕಂದನಿಗಾಗಿ ಹೆಣೆಯುವ ಹೆಣಿಗೆಯಲ್ಲಿ ಕಳೆದು ಹೋದ ಹಾಗೆ. ಸಾಹಿತಿಯೊಬ್ಬರು ಹೇಳುವ ಹಾಗೆ ಬರಹವೆಂಬುದು ಹೆಣ್ಣೊಬ್ಬಳು ಹೊತ್ತ ಬಸುರಿನಂತೆ. ಬಸಿರು ಕಳೆದು ಮುದ್ದಾದ ಕಂದನನ್ನು ನೋಡುವಾಗಿನ ಅನುಭೂತಿ ಕಾವ್ಯವೊಂದರ ಹುಟ್ಟಿನಿಂದ ಆಗುತ್ತದೆ. ಅದು ಒಡಲಲ್ಲಿರುವವರೆಗೂ ಒಂದು ತೆರನಾದ ಉದ್ವೇಗ. ಮಧುರವಾದ ನೋವು. ಹೃದಯ ಗರ್ಭದಲ್ಲಡಗಿದ ಭಾವಗಳಿಗೆ ರೂಪವೊಂದನ್ನು ಕೊಟ್ಟು ನಿರಾಕಾರವಾಗಿದ್ದ ಕಥೆಯೊಂದಕ್ಕೆ ಜೀವ ತುಂಬಿ ಸಾಕಾರಗೊಳಿಸಿದಾಗಿನ ಘಳಿಗೆಯಂತೆ. ಎಷ್ಟೋ ದಿನದ ಭಾರವನ್ನು ಇಳಿಸಿದಂತೆ.
ಬುದ್ಧಿ ಬಲಿತಾಗಿನಿಂದ ತಾನು ಕಂಡುಂಡ, ಕೇಳಿದ, ಅನುಭವಿಸಿದ ಹತ್ತು ಹಲವಾರು ವಿಷಯಗಳು ಗರ್ಭದೊಳಗಿನ ಕಂದನ ಒದೆತದಂತೆ ಸದಾ ಕಾಡತೊಡಗುತ್ತವೆ. ತಮ್ಮನ್ನು ಬರೆಯಿಸಿಕೊಳ್ಳಲು ದುಂಬಾಲು ಬೀಳುತ್ತವೆ. ಸಿಕ್ಕ ಎಳೆಯೊಂದನ್ನೇ ಹಿಡಿದು ಎಲ್ಲೆಲ್ಲೋ ಸುತ್ತಿ ಸುಳಿದು ಬಂದಂತೆ, ನೇಕಾರನೊಬ್ಬ ನೇಯುವ ಸುಂದರ ಸೀರೆಯಂತೆ ಸಾವಿರಾರು ಅಕ್ಷರಗಳೆಂಬ ಎಳೆಗಳನ್ನು ಒಗ್ಗೂಡಿಸಿ, ಅಲ್ಲಲ್ಲಿ ಹೂ ಬಳ್ಳಿಗಳನ್ನು ಮೂಡಿಸಿದಂತೆ ಬರವಣಿಗೆ.
ನಿತ್ಯದ ಆಗು ಹೋಗುಗಳಲ್ಲಿ ಬರವಣಿಗೆಗೆ ಒದಗಿ ಬರುವ ವಿಷಯಗಳು ನೂರಾರು. ಅದಕ್ಕೆ ಕೇಳುವ ಕಿವಿ, ನೋಡುವ ಒಳಗಣ್ಣು, ವಿಶಿಷ್ಟ ಚಿಂತನೆ ಇದ್ದಲ್ಲಿ ಬರೆಯುವ ಲಹರಿ ತಡವಿಲ್ಲದಂತೆ ಹರಿದು ಬರುತ್ತದೆ. ಬರೆಯಿಸಿಕೊಂಡ ವಿಷಯ ಆಗ ತಾನೇ ಭುವಿಗೆ ಬಿದ್ದ ಹಸುಳೆಯಂತೆ. ಅದಕ್ಕೊಂದು ಚೆಂದದ ಹೆಸರು ಕೊಟ್ಟು ಮತ್ತೆ ಮತ್ತೆ ಓದಿ ಮನವನ್ನು ತುಂಬಿಕೊಂಡಾಗ ಅದೆಂತಹದ್ದೋ ಸಾರ್ಥಕ ಭಾವ. ಅದನ್ನೋದಿ ಯಾರಾದರೂ ಮೆಚ್ಚುಗೆ ಸೂಚಿಸಿದಾಗ ಧನ್ಯತೆಯ ಅನುಭಾವ.
ಬರವಣಿಗೆ ಎಂಬುದು ಮಗು ಹುಟ್ಟುವ ಮೊದಲೇ ಹೆಣ್ಣೊಬ್ಬಳು ಕಾಣುವ ಕಲ್ಪನಾಲೋಕ. ತುಂಬಾ ಚೆನ್ನಾಗಿದೆ.
THANK you sir
ಬರಹಗಾರರ ಭಾವನೆಗಳ ಭಂಡಾರವನ್ನು ಹೃದಯದ ಒಳಹೊಕ್ಕು ಒಳಗಣ್ಣು ತೆರೆದು ನೋಡಿದ ಇಣುಕುನೋಟ ಅಕ್ಷರಗಳ ಉಯ್ಯಾಲೆ ಯಾಟ ಕೈ ಬೀಸಿ ಕರೆದಂತೆ ನನಗೆ ಭಾಸ ಸುಮಧುರ ಸಂಗೀತ ಸ್ವರಗಳಂತೆ ಅಕ್ಷರಗಳ ವಯ್ಯಾರದ ಒನಪು ನಿಮ್ಮ ಕಾವ್ಯಕುಸುಮದ ಕಂಪು ಕೊಡುವುದು ಮೈ ಮನಸಿಗೆ ತಂಪು