ಗಡಿಗಳಿಲ್ಲ ಪ್ರೇಮದ ನಕಾಶೆಯಲ್ಲಿ
ಟಿ ಎಸ್ ಗೊರವರ
1
ಗಲ್ಲಕ್ಕೆ ಮುತ್ತಿಕ್ಕುವ ಮುಂಗುರುಳು,
ತುಟಿಗೆ ತೊಂಡೆ ಹಣ್ಣಿನ ಬಣ್ಣವಿರಲಿಕ್ಕಿಲ್ಲ
ಹುಣ್ಣಮಿ ಚಂದಿರನ ಬಣ್ಣವೇ ನಿನಗಿರಬೇಕೆಂದು
ದೇವರಾದವನು ಷರಾ ಬರೆದಿಲ್ಲ
ಕಾಲನ ತೆಕ್ಕೆ ಸೇರುತ್ತವೆ ಮಲ್ಲಿಗೆ, ಗುಲಾಬಿ ಉದುರಿ
ಗೆದ್ದಲು ಹಿಡಿಯುವ ದಿನ ಕಾದಿವೆ ರೂಪ, ಲಾವಣ್ಯಕ್ಕೂ
2
ನಿನ್ನೂರ ದಾರಿಯೇ ಗೊತ್ತಿಲ್ಲ ನನಗೆ
ನಿನ್ನ ವಿಳಾಸವೂ
ಇನ್ನು ಬಣ್ಣ, ಚೆಲುವಿನ ಮಾತ್ಯಾಕೆ?
3
ಗಡಿಗಳಿಲ್ಲ ಪ್ರೇಮದ ನಕಾಶೆಯಲ್ಲಿ
ಕವಡೆ ಕಾಸಿನ ಕಿಮ್ಮತ್ತಿಲ್ಲ ಕುಲ, ಗೋತ್ರಗಳಿಗೆ
ಸ್ನೇಹ ಬಯಸಲಿ ಬಿಡು ನಮ್ಮಿಬ್ಬರ ತುಟಿಗಳು
ಜೀವ ಕಳೆಯಲಿ ಉಸಿರಿಗೆ ಉಸಿರು ತಾಗಿಸಿಕೊಂಡು
4
ಆಣೆ, ಪ್ರಮಾಣಗಳ ಪರವಾನಿಗೆ ಬೇಡ ಪ್ರೇಮಕೆ
ಹಾಸಿಗೆಯೇರಿ ಪ್ರೇಮಿಸೋಣ
ಬಯಲೊಳಗೆ ಗಂಧಗಾಳಿಯಾಗಲಿ ಪ್ರೀತಿ
ಗೆಳೆಯ ಗೊರವರನಿಗೀಗ ಒಲವಿನ ಗಳಿಗೆ..
ಪ್ರೇಮದ ಅಭಿವ್ಯಕ್ತಿ ಚೆಂದ…ಅದಕ್ಕೆ ಪ್ರೇಮ ಕುರಿತ ಪದ್ಯಗಳು ವಿಫಲವಾಗಿಲ್ಲ; ಆಗುವುದೂ ಇಲ್ಲ.