ಮೈಸೂರಿನ ಕಲಾಸುರುಚಿ ತಂಡ ಶಿವರಾಮ ಕಾರಂತರ ‘ಅಳಿದ ಮೇಲೆ’ ನಾಟಕವನ್ನು ಅಭಿನಯಿಸಿತು.
ಈ ನಾಟಕದ ಕುರಿತು ಎಚ್ ನಿವೇದಿತಾ ಬರೆದ ಬರಹ ಇಲ್ಲಿದೆ.
**
ಕಾರಂತರ ಕಾದಂಬರಿಗಳು ಸುಲಭವಾಗಿ ಅರ್ಥವಾಗುವಂತವಲ್ಲ. ಹಲವು ಆಯಾಮಗಳ ಅವರ ಕಾದಂಬರಿಗಳು ಸದಾ ಮರು ಓದಿಗೆ ಆಗ್ರಹಿಸುವಂಥವು. ಬದುಕು ಹೇಗೆ ಹಲವು ಮಜಲುಗಳನ್ನು ಒಳಗೊಂಡಿರುತ್ತದೋ, ಕಾರಂತರ ಕಾದಂಬರಿಗಳೂ ಹಾಗೆಯೇ. ಬದುಕಿನಲ್ಲಿ ನಾವು ಮಾಗಿದಂತೆ ಅವು ಹೊಸ ಹೊಸ ದರ್ಶನಗಳನ್ನು ಮಾಡಿಸುತ್ತವೆ. ಜೀವನ ನಮಗೆ ಕಲಿಸುವ ಪಾಠ, ಅದು ನಮ್ಮ ಮುಂದೆ ತೋರಿಸುವ ವಿಶ್ವರೂಪ, ಕೊಡುವ ಪೆಟ್ಟುಗಳು, ಕಲಿಸುವ ಪಾಠ, ಸೂಕ್ಷ್ಮ ವಿಚಾರಗಳ ಅನಾವರಣವನ್ನು ಬದುಕು ತಣ್ಣಗೆ ಮುಂದಿಡುವ ಪರಿ, ನಿಗೂಢತೆ, ಸಂತಸಮಯ ಮುಖ, ಮುಗ್ಧ ಮಗ್ಗುಲು, ಗೋಜಲು ಗೋಜಲಾದ ಎಳೆ ಇವೆಲ್ಲವನ್ನೂ ಕಾರಂತರ ಕಾದಂಬರಿಗಳು ನಮ್ಮ ಮುಂದಿಟ್ಟು ನಮ್ಮನ್ನು ಬದುಕಿಗೆ ಅದರ ವೈವಿಧ್ಯತೆಗೆ ಮುಖಾಮುಖಿ ಮಾಡಿಸುತ್ತವೆ.
ಮೈಸೂರಿನ ಕಲಾಸುರುಚಿ ರಂಗಕ್ಕೆ ಅಳವಡಿಸಿ, ಇದೇ ಫೆಬ್ರುವರಿ ೧೭ರಂದು ಕಿರಿರಂಗಮಂದಿರದಲ್ಲಿ ಅಭಿನಯಿಸಿದ ಶಿವರಾಮ ಕಾರಂತರ ʻಅಳಿದ ಮೇಲೆʼ ೧೯೬೯ರಲ್ಲಿ ಪ್ರಕಟವಾದ ಕಾದಂಬರಿ. ಈ ಕಾದಂಬರಿಯಲ್ಲಿ ಕಾರಂತರೇ ನಿರೂಪಕರಾಗಿ ಬರುತ್ತಾರೆ. ʻಬೆಟ್ಟದ ಜೀವʼ ಕಾದಂಬರಿಯ ಹಾಗೆ. ಜೀವನ ಅಚಾನಕ್ಕಾಗಿ ಯಾರನ್ನೋ ನಮ್ಮ ಬದುಕಿನ ಅಂಗಳದಲ್ಲಿ ಹಾಕಿಬಿಡುತ್ತದೆ. ಅವರ ಪ್ರಸ್ತುತತೆ ಬಗ್ಗೆ ಅದು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗೆಯೇ ಇಲ್ಲಿ ನಿರೂಪಕ ಕಾರಂತರಿಗೆ ಯಶವಂತರ ಪರಿಚಯ ರೈಲಿನಲ್ಲಾಗುತ್ತದೆ. ಒಂದು ಅತ್ಯಂತ ಸಹೃದಯ ಮುಖಾಮುಖಿ ಅಷ್ಟಕ್ಕೇ ಮುಗಿದು ಹೋಗದೆ, ಮುಂದುವರೆಯುತ್ತದೆ. ಕಾರಂತರು ಮತ್ತು ಯಶವಂತರ ನಡುವೆ ಉಂಟಾದ ಸಂಬಂಧ ಯಶವಂತರ ಸಾವಿನೊಂದಿಗೆ ಅಂತ್ಯವಾಗದೆ, ಅದರಾಚೆಗೂ ವಿಸ್ತರಿಸುವುದೇ ಅವರ ಸಂಬಂಧದ ವೈಶಿಷ್ಟ್ಯ. ಕಾರಂತರಿಗೆ ವಿಶ್ವಾಸಪೂರ್ಣ ಜವಾಬ್ದಾರಿ ವಹಿಸುವ ಯಶವಂತರು ಐಹಿಕವಾಗಿ ಇಲ್ಲವಾಗುತ್ತಾರಾದರೂ ಉದ್ದಕ್ಕೂ ಕಾರಂತರಿಗೆ ಜೀವನ ದರ್ಶನ ಮಾಡಿಸುತ್ತಾ ಸಾಗುತ್ತಾರೆ.
ಉತ್ತರ ಕನ್ನಡದ ಒಂದು ಗ್ರಾಮದಲ್ಲಿ ಜನಿಸಿದ ಯಶವಂತರು ದಾಯಾದಿ ಮತ್ಸರದ ನಡುವಿನಲ್ಲೇ ಬೆಳೆದು ದೊಡ್ಡವರಾಗಿ ಓದಿ ಬರೆದು ಮದುವೆಯೂ ಆಗಿ, ತಮ್ಮ ಅತೀವ ಉದಾರತೆಯಿಂದ ದಿವಾಳಿಯಾಗಿ ಕುಮಟೆ ಸೇರಿದವರು. ಆದರೂ ಧೃತಿಗೆಡದೆ, ಅಕ್ಷರಶಃ ಆಳಾಗಿ ದುಡಿದು, ನಂತರ ಅರಸನಂತೆ ಬಾಳಿದರಾದರೂ, ನೆಮ್ಮದಿಯಿಂದಲ್ಲ. ಕಟ್ಟಿಕೊಂಡ ಹೆಂಡತಿಯ ಭಾವರಾಹಿತ್ಯ ಐಹಿಕ ವಾಂಛೆ ಅವರನ್ನು ನಿರ್ಮಲ ಪ್ರೇಮಕ್ಕೆ ತಹತಹಿಸುವಂತೆ ಮಾಡಿ ಹೊಸ ಸಂಬಂಧವನ್ನು ಅವರೊಂದಿಗೆ ಬೆಸೆಯುವಂತೆ ಮಾಡಿರುತ್ತದೆ. ಮೊದಲೇ ಇದ್ದ ಸಮಸ್ಯೆಗಳು, ಈ ಬಾಹ್ಯ ಸಂಬಂಧದಿಂದ ಉಲ್ಬಣಿಸಿ, ಜೀವನದಲ್ಲಿ ಭ್ರಮನಿರಸನಗೊಂಡ ಯಶವಂತರು ಬಾಂಬೆಗೆ ಹೊರಟುಹೋಗುತ್ತಾರೆ. ಹೋಗುವ ಮುಂಚೆ ಯಾರಿಗೂ ಯಾವ ಕೊರತೆಯೂ ಕಾಡದಂತೆ ವ್ಯವಸ್ಥೆ ಮಾಡಿರುತ್ತಾರಾದರೂ ಅವರ ಅನುಪಸ್ಥಿತಿ ಅವರನ್ನು ಬಹಳ ಮಂದಿ ದ್ವೇಷಿಸುವಂತೆ ಮಾಡಿರುತ್ತದೆ.
ಅವರಿಂದ ಏನನ್ನೂ ಬಯಸದೆ, ಶುದ್ಧ ಅಂತಃಕರಣದಿಂದ ನೋಡಿಕೊಂಡ ಅವರ ಉಪಪತ್ನಿ, ಏನನ್ನೂ ಬಯಸದೆ ಅವರನ್ನು ಬೀಳ್ಕೊಟ್ಟು ಕುಮಟೆಯನ್ನು ಬಿಟ್ಟುಬಿಡುತ್ತಾಳೆ. ಸಂಕಷ್ಟದಲ್ಲಿಯೇ ಜೀವನ ಸವೆಸಿ ಇದ್ದ ಇಬ್ಬರು ಮಕ್ಕಳನ್ನು ದಡಮುಟ್ಟಿಸಿ ಕಣ್ಣುಮುಚ್ಚುತ್ತಾಳೆ. ಎರಡೂ ಸಂಬಂಧದ ಮಕ್ಕಳ ಭಾವನೆಗಳು ಮಿಶ್ರ. ಈ ನಡುವೆ, ತಾವು ಗಳಿಸಿದ ಹಣದ ವಿನಿಯೋಗದ ಜವಾಬ್ದಾರಿಯನ್ನು ಕಾರಂತರಿಗೆ ವಹಿಸಿ ಸಾಯುತ್ತಾರೆ ಯಶವಂತರು. ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಕಾರಂತರ ಮುಖಾಮುಖಿ ಯಶವಂತರ ಎಲ್ಲ ಸಂಬಂಧಿಗಳೊಡನೆ ಆಗುತ್ತದೆ.
ಯಶವಂತರನ್ನು ಸಾಕಿದ ಪಾರ್ವತಮ್ಮ, ತಮ್ಮನೆಂಬ ಅಕ್ಕರೆಯನ್ನು ಇನ್ನೂ ಉಳಿಸಿಕೊಂಡು ಅವನ ಸಾವಿಗೆ ಬಿಕ್ಕುವ ಮೂಕಾಂಬು, ಮಾವನ ಸದ್ಗುಣಗಳನ್ನು ಗೌರವಿಸುವ ಮಂಜಯ್ಯ,, ದಾಯಾದಿಯನ್ನು ಮರೆತೇ ಬಿಟ್ಟಿರುವ ಶಂಕರ ಹೆಗ್ಗಡೆ, ಚಿಕ್ಕಪ್ಪನ ಭಾವನೆಗಳ ಗಂಭೀರತೆಯ ಅರಿವೇ ಇಲ್ಲದೆ ಮನಿಯಾರ್ಡರ್ ಹಣ ಕಬಳಿಸುವ ಶಂಭು, ಅಪ್ಪನೆಂಬ ಗೌರವ ಪ್ರೀತಿಯನ್ನು ಉಳಿಸಿಕೊಂಡು ಅವನ ಒಂದು ಫೋಟೋಗಾಗಿ ಹಂಬಲಿಸುವ ಇಂದುಮತಿ ಅವಳ ಅಣ್ಣ ಶೀನಿ, ಯಶವಂತರ ಬೌದ್ಧಿಕತೆಯ ಪರಿಚಯ ಮಾಡಿಸುವ ವಿಷ್ಣುಪಂತರು, ಗಂಡ ಮಾಡಿದ ʻದ್ರೋಹʼ ವನ್ನು ನೆನೆದು ಇನ್ನೂ ಕುದಿಯುತ್ತಿರುವ ಪತ್ನಿ ಕಮಲಮ್ಮ ಮತ್ತು ಗತಿಸಿದ ತಂದೆಯ ಹಣಕ್ಕಾಗಿ ಕೋರ್ಟಿನ ಮೆಟ್ಟಿಲೇರಲು ತಯಾರಾಗಿರುವ ಹಿರಿ ಮಗ.
ಇವರೆಲ್ಲರನ್ನೂ ಬೇರೆ ಬೇರೆ ಸಂದರ್ಭದಲ್ಲಿ ಭೇಟಿಯಾಗುವ ಕಾರಂತರಿಗೆ, ಮನುಷ್ಯ ಅಳಿದ ಮೇಲೆಯೂ ವಿವಿಧ ಜನರ ಮನದಲ್ಲಿ ಹೇಗೆಲ್ಲಾ ರೂಪುಗೊಂಡಿರುತ್ತಾನೆ ಎಂಬ ಸತ್ಯದ ಅರಿವಾಗುತ್ತದೆ. ಸತ್ತ ಮನುಷ್ಯನ ಜೊತೆಗೇ ಅವನ ಗುಣಾವಗುಣಗಳು ನಶಿಸಿ ಹೋಗಿ ಅವನು ಭೌತಿಕ ಆರೋಪ ಪ್ರತ್ಯಾರೋಪಗಳಿಗೆ ಅತೀತನಾಗುತ್ತಾನೆ ಎಂಬ ವೇದಾಂತದ ಮಾತು ಎಷ್ಟು ಪೊಳ್ಳು ಎಂಬ ಅರಿವಾಗುತ್ತದೆ. ಇದೇ ಭಾವ ವೀಕ್ಷಿಸುವವರಿಗೂ ಆಗುತ್ತದೆ. ಜೀವನದ ನಿಜಮುಖ ಇದೇ ಎಂಬ ಜ್ಞಾನೋದಯವಾದಂತಾಗುತ್ತದೆ.
ಕ್ಲಿಷ್ಟವಾದ ಕಾರಂತರ ಕಾದಂಬರಿಗಳನ್ನು ಸೀಮಿತ ಅವಧಿಯ ನಾಟಕರೂಪಕ್ಕೆ ಒಗ್ಗಿಸುವುದು ಸುಲಭವಾದ ಮಾತಲ್ಲ. ಅವರ ಬರಹದ ಹರಹು ವಿಶಾಲ. ಅಲ್ಲಿ ಬರುವ ವಿಚಾರಗಳೂ ಅಷ್ಟೇ. ಹಿಂದೆಯೂ ಕಾರಂತರ ʻಬೆಟ್ಟದ ಜೀವʼ, ʻಮೂಕಜ್ಜಿಯ ಕನಸುಗಳುʼ ಮತ್ತು ʻಚೋಮನ ದುಡಿʼ ಕಾದಂಬರಿಗಳ ರಂಗರೂಪಗಳು ಬಂದಿವೆ. ಅವರೆಲ್ಲರಿಗೂ ಎದುರಾಗಿದ್ದಿರಬಹುದಾದ ಸವಾಲೇ ಶಶಿಧರ ಡೋಂಗ್ರೆ ಅವರಿಗೆ ಎದುರಾಗಿದೆ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸಿ, ಕಾದಂಬರಿಯ ಸತ್ವದ ಸಮೇತ ಅದನ್ನು ರಂಗಕ್ಕೆ ಅಳವಡಿಸಿದ್ದಾರೆ. ಅವರು ಅಭಿನಂದನಾರ್ಹರು.
ಪಾತ್ರಗಳ ನಿರ್ವಹಣೆ ಮಾಡಿರುವ ಪ್ರತಿಯೊಬ್ಬ ನಟ ನಟಿಯರು, ಪಾತ್ರಗಳು ಅನುಭವಿಸುವ ಎಲ್ಲ ರಸಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕಾರಂತರ ಪಾತ್ರಧಾರಿ ಹೇಮಂತ್ ರ ಸಮತೋಲಿತ ಅಭಿನಯ ಇಷ್ಟವಾಗುತ್ತದೆ. ಸತ್ತೇ ಹೋಗಿದ್ದನೆಂದು ಭಾವಿಸಿದ್ದ ತಮ್ಮನ ಸಾವಿನ ಸುದ್ಧಿಯನ್ನು ಕೇಳಿ ಅವನನ್ನು ನೆನೆದು ರೋಧಿಸುವ ಮೂಕಾಂಬು ಪಾತ್ರಧಾರಿ ವಿಜಯಲಕ್ಷ್ಮಿ. ಎಂ ಎಲ್ಲರಿಗೂ ಆಪ್ತವೆನಿಸಿದರು. ಇಂದುಮತಿ ಪಾತ್ರಧಾರಿ ಪವಿತ್ರ ಫಣಿ, ಪಾತ್ರದ ತೂಕವನ್ನರಿತು ಅಭಿನಯಿಸಿದ್ದು ಎಲ್ಲರಿಗೂ ಮೆಚ್ಚುಗೆಯಾಯಿತು. ಯಶವಂತರಾಗಿ ಹಿರಿಯ ನಟ ದ್ವಾರಾಕಾನಾಥ್ ಅವರ ಅಭಿನಯ ಉತ್ಕೃಷ್ಟ ಮಟ್ಟದ್ದು. ಗಂಭೀರವಾದ ಈ ನಾಟಕದಲ್ಲಿ ತಂಗಾಳಿಯಂತೆ ಸುಳಿದು ಕಿರುನಗೆ ಮೂಡಿಸಿ, ʻಅಯ್ಯೋ ಮುದ್ದೇʼ ಎಂದೆನಿಸುವಂತೆ ಮಾಡಿದ್ದು ಮೊಮ್ಮಗ ಯಶವಂತ ಪಾತ್ರಧಾರಿ ಪಿಯೂಶ್ ಬಾಲಾಜಿ.
ನಾಟಕವನ್ನು ನೋಡಿದವರಲ್ಲಿ ಈ ಎಲ್ಲ ಭಾವಗಳು, ಪಾತ್ರಗಳು, ಕೃತಿ ಹೇಳ ಬಯಸುವ ವಿಚಾರಗಳು, ಮಾಡಿಸ ಬಯಸುವ ದರ್ಶನ, ಎಲ್ಲವನ್ನೂ ಹದವರಿತು ರಂಗದ ಮೇಲೆ ತಂದು, ನಾಟಕವನ್ನು, ಭಾವಸೆಲೆಯುಕ್ಕಿಸಿ ಚಿಂತನೆಗೆ ಹಚ್ಚುವಂತೆ ಮಾಡುವಲ್ಲಿ ನಿರ್ದೇಶಕರಾದ ಪ್ರೊ.ಎಚ್.ಎಸ್.ಉಮೇಶ್ ಅವರ ಪಾತ್ರ ಅಗಾಧ. ಎಲ್ಲವನ್ನೂ ಅಚ್ಚುಕಟ್ಟಾಗಿ ರಂಗದ ಮೇಲೆ ತಂದ ಶ್ರೇಯಸ್ಸು ಉಮೇಶ್ ಅವರಿಗೆ ಸಲ್ಲಬೇಕು. ಶಿವರಾಮ ಕಾರಂತರ ʻಅಳಿದ ಮೇಲೆʼ ಕೃತಿಯನ್ನು ಯಶಸ್ವಿಯಾಗಿ ರಂಗದ ಮೇಲೆ ತಂದ ಮೈಸೂರಿನ ಕಲಾಸುರುಚಿ ತಂಡಕ್ಕೆ ಅಭಿನಂದನೆಗಳು.
0 ಪ್ರತಿಕ್ರಿಯೆಗಳು